ವಿಟ್ಲ: ಪುಣಚ ಗ್ರಾಮದ ದೇವಿನಗರ – ಕಲ್ಲಾಜೆ – ಅಜೇರು ಮಧ್ಯ ಹಾದು ಹೋಗುವ ರಸ್ತೆಯ ಮಡ್ಯಾರಬೆಟ್ಟು ತೋಡಿಗೆ ಹಾಕಿದ ಸಿಮೆಂಟ್ ಪೈಪ್ ಮಳೆಗಾಲದಲ್ಲಿ ಕೊಚ್ಚಿ ಹೋಗಿ ಹಲವು ಮನೆಗಳಿಗೆ ಸೂಕ್ತ ರಸ್ತೆ ಸಂಪರ್ಕ ಇಲ್ಲದಂತಾಗಿ 6ತಿಂಗಳು ಸಂದಿವೆ. ಆದರೇ ಅಡಳಿತಶಾಹಿ ಮುಗುಮ್ಮಾಗಿ ಕೂತಿದ್ದು, ಈ ಕಡೆ ಗಮನ ಹರಿಸುತ್ತಿಲ್ಲವೇಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಡಳಿತ ವ್ಯವಸ್ಥೆ ಕೂಡಲೇ ಸರಿ ಮಾಡದಿದ್ದರೇ ಮುಂದಿನ ವಿಧಾನಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ
ಮಡ್ಯಾರಬೆಟ್ಟು ಸೇತುವೆ ಕುಸಿತದಿಂದ ಮಡ್ಯಾರುಬೆಟ್ಟು, ಆಜೇರು, ಮಲ್ಯ, ಅನವುಗುಡ್ಡೆ ಭಾಗದ ಸುಮಾರು 60ಕ್ಕೂ ಅಧಿಕ ಮನೆಗಳಿಗೆ ಸರಿಯಾದ ರಸ್ತೆ ಸಂಪರ್ಕ ಇಲ್ಲದಂತಾಗಿದೆ. ಸರಕಾರಿ ಶಾಲೆ, ಅಂಗನವಾಡಿ, ಭಜನಾಮಂದಿರ ಸಂಪರ್ಕಿಸುವ ರಸ್ತೆ ಇದಾಗಿದ್ದು, ಸುಮಾರು 40 ಪರಿಶಿಷ್ಟ ಪಂಗಡದವರ ಮನೆಗಳಿಗೂ ಇದೆ ಸಂಪರ್ಕ ರಸ್ತೆಯಾಗಿದೆ.
ಸದ್ಯ ಸ್ಥಳೀಯ ನಿವಾಸಿಗಳು ಅನವುಗುಡ್ಡೆ – ಸಾರ್ಯ – ಬುಳ್ಳೆರಿಕಟ್ಟೆ ರಸ್ತೆಯ ಅಥವಾ ಅನವುಗುಡ್ಡೆ – ಗೋವಿಂದ ಮೂಲೆ – ತೋರಣಕಟ್ಟೆ ರಸ್ತೆಯನ್ನು ಬಳಸಿ ಸುತ್ತಿಕೊಂಡು ಪುಣಚ ಪೇಟೆಗೆ ಬರಬೇಕಾಗಿದೆ. ಸೇತುವೆ ನಿರ್ಮಾಣ ಮಾಡಿಕೊಡುವಂತೆ ಜಿಲ್ಲಾಡಳಿತ, ಸ್ಥಳೀಯ ಪಂಚಾಯಿತಿ ಸೇರಿ ಪುತ್ತೂರು ಶಾಸಕರಿಗೆ ಮನವಿಯನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸ್ಥಳೀಯರ ಮಾತು ಕೇಳದೆ ಅವೈಜ್ಞಾನಿಕ ಕಾಮಗಾರಿ!
2013-14ನೇ ಸಾಲಿನಲ್ಲಿ 3ಲಕ್ಷ ಜಿಲ್ಲಾ ಪಂಚಾಯಿತಿ ಅನುದಾನ ಮತ್ತು 5 ಲಕ್ಷ ಸಂಸದರ ನಿಧಿಯ ಅನುದಾನದಲ್ಲಿ 4 ಅಡಿಯ 2ಸಾಲು ಸಿಮೆಂಟ್ ಪೈಪ್ ಗಳನ್ನು ಹಾಕಿ, ಎರಡು ಬದಿಗೆ ಕಗ್ಗಲ್ಲಿನ ತಡೆಗೋಡೆ ಕಟ್ಟಿ ಮಧ್ಯಕ್ಕೆ ಮಣ್ಣು ತುಂಬಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ಭಾಗದಲ್ಲಿ ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಕನಿಷ್ಠ 6ಅಡಿ ಪೈಪ್ ಆದರೂ ಅಳವಡಿಸಬೇಕೆಂಬ ಸ್ಥಳೀಯರ ಬೇಡಿಕೆಯನ್ನೂ ನಿರ್ಲಕ್ಷ್ಯಿಸಿ ಅವೈಜ್ಞಾನಿಕ ಕಾಮಗಾರಿಯನ್ನು ನಡೆಸಲಾಗಿತ್ತು.
ಗುದ್ದಲಿಪೂಜೆ ಆದರೂ ಸೇತುವೆ ಆಗಿಲ್ಲ!
ಕಿರಿದಾದ ಪೈಪ್ ಅಳವಡಿಕೆಯಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ಅಕ್ಕಪಕ್ಕದ ತೋಟಗಳಲ್ಲಿ ನೀರು ತುಂಬಿ ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 2019ರ ಮಾರ್ಚ್ ನಲ್ಲಿ ನೂತನ ಸೇತುವೆಯ ನಿರ್ಮಾಣಕ್ಕಾಗಿ ಗುದ್ದಲಿಪೂಜೆ ಮಾಡಲಾಗಿತ್ತು. ಆದರೆ ಸುಮಾರು ನಾಲ್ಕು ವರ್ಷವಾಗುತ್ತಾ ಬಂದರೂ ಸೇತುವೆ ಮಾತ್ರ ನಿರ್ಮಾಣವಾಗಿರಲಿಲ್ಲ.
ಚುನಾವಣಾ ಬಹಿಷ್ಕಾರದ ಎಚ್ಚರಿಕೆ!
ಸೇತುವೆ ನಿರ್ಮಾಣದ ವಿಚಾರದಲ್ಲಿ ಅಧಿಕಾರಿಗಳಿಂದಾಗಲೀ, ಜನಪ್ರತಿನಿಧಿಗಳಿಂದಾಗಲೀ ಯಾವುದೇ ಸ್ಪಂದನೆ ಇದುವರೆಗೆ ದೊರೆತಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತು ವ್ಯವಸ್ಥೆಯನ್ನು ಕಲ್ಪಿಸದೇ ಹೋದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗುಬೇಕಾಗುತ್ತದೆ. ಜತೆಗೆ ಮುಂಬರುವ ಎಲ್ಲಾ ಚುನಾವಣೆಯನ್ನು ಬಹಿಷ್ಕಾರಿಸುವ ಸೂಚನೆಯನ್ನು ಸ್ಥಳೀಯ ನಿವಾಸಿಗಳು ನೀಡಿದ್ದಾರೆ.


