ಚೆನ್ನೈ: ಅ 20: ಪೌರ ಕಾರ್ಮಿಕ ಮಹಿಳೆಯೊಬ್ಬರು ಕಸದ ತೊಟ್ಟಿಯಲ್ಲಿ ಸಿಕ್ಕ 100 ಗ್ರಾಂ ತೂಕದ ₹7.5 ಲಕ್ಷ ಮೌಲ್ಯದ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದ ಘಟನೆ ತಮಿಳುನಾಡಿನಿಂದ ವರದಿಯಾಗಿದೆ. ಇಲ್ಲಿನ ತಿರುವೊಟ್ಟಿಯುರ್ ಬೀದಿಯಲ್ಲಿ ಕಸ ವಿಂಗಡನೆ ಮಾಡುವ ಕೆಲಸ ಮಾಡುವ ಮೇರಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ ಮಹಿಳೆ.
ಈಕೆ ತನ್ನ ನಿತ್ಯದ ಕಾಯಕದಂತೆ ತಿರುವೊಟ್ಟಿಯುರ್ ಬೀದಿಯಲ್ಲಿ ಕಸ ಬೇರ್ಪಡಿಸುತ್ತಿದ್ದ ಸಂದರ್ಭದಲ್ಲಿ ಚೀಲವೊಂದು ಸಿಕ್ಕಿದ್ದು ಅದನ್ನು ವಿಂಗಡಿಸಿದ ಕಸದ ರಾಶಿಗೆ ಬೀಸಾಡಿದಾಗ ಲೋಹ ಬಿದ್ದ ಶಭ್ದ ಉಂಟಾಗಿದೆ . ನಾಣ್ಯಕ್ಕೆ ಹಾಕಿದ ರಾಪರ್ ಅನ್ನು ತೆರೆದು ನೋಡಿದಾಗ ಅದು ಚಿನ್ನದ ನಾಣ್ಯ ಎಂದು ತಿಳಿದು ಬಂದಿದೆ. ಕೂಡಲೇ ಮೇರಿ ತನ್ನ ಮೇಲ್ವಿಚಾರಕ ಸೆಂತಮಿಜಾನ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ನಾಣ್ಯವನ್ನು ಸತ್ಯಂಗಡು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಏತನ್ಮಧ್ಯೆ ತಿರುವೊಟ್ಟಿಯುರ್ನ ಗಣೇಶ್ ರಾಮನ್ ಅವರು ತಮ್ಮ ಮನೆಯಲ್ಲಿ 100 ಗ್ರಾಂ ಚಿನ್ನದ ನಾಣ್ಯ ನಾಪತ್ತೆಯಾಗಿದೆ ಎಂದು ಪೋಲಿಸರಿಗೆ ದೂರು ನೀಡಿದ್ದರು. ಚಿನ್ನದ ನಾಣ್ಯವನ್ನು ಚಿಕ್ಕ ಚೀಲದಲ್ಲಿ ಸುತ್ತಿ ತನ್ನ ಹಾಸಿಗೆಯ ಕೆಳಗೆ ಇಟ್ಟುಕೊಂಡಿದ್ದೆ. ಈ ಮಾಹಿತಿ ಅರಿಯದ ನನ್ನ ಪತ್ನಿ ಆ ಚೀಲವನ್ನು ಕಸದ ಬುಟ್ಟಿಗೆ ಎಸೆದಿರುವುದಾಗಿ ಪೊಲೀಸರ ಬಳಿ ಹೇಳಿದ್ದರು.

ಅದೇ ವೇಳೆ ಮೇರಿಯವರು ಚಿನ್ನದ ನಾಣ್ಯವನ್ನು ಠಾಣೆಗೆ ಒಪ್ಪಿಸಿದ್ದು , ಪೊಲೀಸರು ಘಟನೆಯನ್ನು ವಿವರವಾಗಿ ಅರ್ಥ ಮಾಡಿಕೊಳ್ಳಲು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಜತೆಗೆ, ಮೇರಿ ಹಾಗೂ ಮನೆ ಮಾಲೀಕರನ್ನು ಠಾಣೆಗೆ ಕರೆಸಿ ಮಾಲೀಕರಿಗೆ ನಾಣ್ಯವನ್ನು ಹಿಂತಿರುಗಿಸಿದ್ದಾರೆ. ಜತೆಗೆ, ಮೇರಿಯವರ ಪ್ರಾಮಾಣಿಕತೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
