ವಿಜಯಪುರ : ರಾಜ್ಯ ಬಿಜೆಪಿ ನಾಯಕರೊಳಗಿನ (Karnataka BJP) ಕಚ್ಚಾಟ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದವರೆಗೆ ಬಂದು ನಿಂತಿದೆ . ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷೇತರ ಅಭ್ಯರ್ಥಿಗಳಿಗೆ ಒಂದು ರೂಪಾಯಿ ಹಣವನ್ನೂ ನೀಡಿಲ್ಲ ಎಂದು ಸಚಿವ ನಿರಾಣಿ ಹಾಗೂ ವಿಜಯೇಂದ್ರ ಧರ್ಮಸ್ಥಳದಲ್ಲಿ ಮಂಜುನಾಥಸ್ವಾಮಿ ಸನ್ನಿಧಾನದಲ್ಲಿ ಆಣೆ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ಸಿಡಿ ಪ್ಯಾಕ್ಟರಿ ಇದೆ ಒಂದು ಬಿಜೆಪಿಯಲ್ಲಿ ಮತ್ತೊಂದು ಕಾಂಗ್ರೇಸ್ ನಲ್ಲಿದೆ ಎಂದು ಟಾಂಗ್ ನೀಡಿದರು. ವಿಧಾನಸಭೆ ಚುನಾಚಣೆಯಲ್ಲಿ ನನಗೆ ಟಿಕೆಟ್ ಕೊಡಿಸಲು, ಸೋಲಿಸಲು ನಿರಾಣಿ ಯಾರು ಎಂದು ಹರಿಹಾಯ್ದು, ಪಾಲಿಕೆ ಚುನಾವಣೆಯಲ್ಲಿ ನೀವು ಯಾರಿಗೆ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದು ಗೊತ್ತು, ಈ ವಿಚಾರ ಚುನಾವಣಾ ವೀಕ್ಷಕರಿಗೆ, ಕೇಂದ್ರದ ನಾಯಕರಿಗೂ ತಿಳಿದಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗಾಗಿ ಪಕ್ಷದಿಂದಾಗಲಿ, ನಿರಾಣಿ ಹಾಗೂ ವಿಜಯೇಂದ್ರ ಹಣ ನೀಡಿಲ್ಲ, ನಾವು ಹಣ ಪಡೆದಿಲ್ಲ. ನಗರದ ಮತದಾರರು ನಮ್ಮ ಅಭ್ಯರ್ಥಿಗಳಿಗೆ ಹಣ ಪಡೆಯದೇ ಅಭಿವೃದ್ಧಿಗಾಗಿ ಮತ ಹಾಕಿ ಗೆಲ್ಲಿಸಿದ್ದಾರೆ ಎಂದರು.
ಬರುವ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ವಿಜಯೇಂದ್ರ, ನಿರಾಣಿ, ಸತೀಶ ಜಾರಕಿಹೊಳಿ ಸೇರಿದಂತೆ ಹಲವರಿಂದ ದೊಡ್ಡ ಮಟ್ಟದ ಹಣ ವಿಜಯಪುರಕ್ಕೆ ಹರಿದು ಬರಲಿದೆ. ಆದರೆ ಅದನ್ನೆಲ್ಲ ಪಡೆದು ನಮ್ಮ ಜನ ನನಗೆ ಮತಹಾಕಲಿದ್ದಾರೆ ಎಂದು ಯತ್ನಾಳ್ ಹೇಳಿದರು.
ನಿರಾಣಿ ಕೇಳಿ ವಿಜಯಪುರ ಕ್ಷೇತ್ರದ ಜನರು ಮತ ಹಾಕುತ್ತಾರಾ, ನಿರಾಣಿ ನನ್ನನ್ನು ಸೋಲಿಸುವ ಮಾತಿರಲಿ, ಮೊದಲು ನಿರಾಣಿ ಬಿಳಗಿ ಕ್ಷೇತ್ರದಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.
ಇಷ್ಟಕ್ಕೂ ನನಗೆ ಟಿಕೆಟ್ ಕೊಡಿಸುವ ಮಾತಿರಲಿ, ನಿರಾಣಿ ಕುಟುಂಬದಲ್ಲಿ ಎಷ್ಟು ಜನ ಅಣ್ಣತಮ್ಮಂದಿರು ಚುನಾವಣೆಗೆ ನಿಲ್ಲುತ್ತಾರೆ ಎಂದು ಹೇಳಲಿ. ಕಾಂಗ್ರೆಸ್, ಜೆಡಿಎಸ್ ಪಕ್ಷದಿಂದ ಎಷ್ಟು ಜನ ನಿಲ್ಲುತ್ತಾರೆ ಎಂದು ಸ್ಪಷ್ಟಪಡಿಸಲಿ. ನನ್ನ ಮನೆಯಲ್ಲಿ ನಾನೊಬ್ಬನೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದರು.