ಶಿವಮೊಗ್ಗ: ಮಧ್ಯಪ್ರದೇಶದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹಿಂದೂಗಳು ತಮ್ಮ ಮೇಲೆ ದಾಳಿ ಮಾಡುವವರ ವಿರುದ್ಧ ಬಳಸಲು ಮನೆಯಲ್ಲಿ ಹರಿತವಾದ ಚಾಕುಗಳನ್ನು ಇಟ್ಟುಕೊಳ್ಳಬೇಕೆಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಶಿವಮೊಗ್ಗದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣ ವೇದಿಕೆಯ ಸಮಾವೇಶದಲ್ಲಿ ಅವರು ನೀಡಿದ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಯ ವಿಷಯವಾಗಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಪ್ರಜ್ಞಾ ಠಾಕೂರ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಜ್ಞಾ ಠಾಕೂರ್ ಅವರು ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಕೋಮುಗಲಭೆಗಳನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಎಂದು ಗೋಖಲೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ವಿರುದ್ಧ ತೆಹಸೀನ್ ಪೂನವಾಲಾ ಎಂಬುವವರು ಕೂಡ “ದ್ವೇಷ ಭಾಷಣ”ದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಜ್ಞಾ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅವರು ಶಿವಮೊಗ್ಗ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾಂಗ್ರೆಸ್ ಸಿದ್ದತೆ
ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷಗಳು ಹಿಂದೂಗಳು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕು ಎಂಬ ಅವರ ಹೇಳಿಕೆಗೆ ತೀವ್ರ ಆಕ್ರೋಶ ಹೊರಹಾಕಿವೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದು, ಇದೊಂದು ದ್ವೇಷ ಭಾಷಣದ ಪ್ರಕರಣ. ಆಕೆಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಅವರು ಮಂಗಳವಾರ ಹೇಳಿದ್ದಾರೆ. ಕರ್ನಾಟಕದ ಪೊಲೀಸರು ದ್ವೇಷ ಭಾಷಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲವಾದ್ದರಿಂದ ರ್ಟಿಗೆ ಹೋಗುವುದಾಗಿ ತಿಳಿಸಿದ್ದಾರೆ. ದ್ವೇಷದ ಭಾಷಣ ಮಾಡುವವರ ವಿರುದ್ಧ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು
ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದೇನು ?
ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ್ದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ತಮ್ಮ ಮೇಲೆ ಹಲ್ಲೆ ಮಾಡುವವರಿಗೆ ತಕ್ಕ ಉತ್ತರ ನೀಡುವ ಹಕ್ಕು ಹಿಂದೂಗಳಿಗೆ ಕೂಡ ಇದೆ. ಹಿಂದೂಗಳು ಪ್ರತಿಯೊಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿರುವುದರಿಂದ ತಮ್ಮ ಮನೆಗಳಲ್ಲಿ ಚಾಕುಗಳನ್ನು ಹರಿತಗೊಳಿಸಿ ಇಟ್ಟುಕೊಳ್ಳುವಂತೆ ಕರೆ ನೀಡಿದ್ದರು.
ನಿಮ್ಮ ಮನೆಗಳಲ್ಲಿ ಆಯುಧಗಳನ್ನು ಇಟ್ಟುಕೊಳ್ಳಿ. ಏನಿಲ್ಲವೆಂದರೂ ತರಕಾರಿಗಳನ್ನು ಕತ್ತರಿಸಲು ಬಳಸುತ್ತಿದ್ದ ಚಾಕುಗಳಾದರೂ ಹರಿತವಾಗಿರಲಿ. ಯಾವಾಗ ಯಾವ ಪರಿಸ್ಥಿತಿ ಬರುತ್ತದೋ ಗೊತ್ತಿಲ್ಲ. ಎಲ್ಲರಿಗೂ ಆತ್ಮರಕ್ಷಣೆಯ ಹಕ್ಕಿದೆ. ನಮ್ಮ ಮನೆಗೆ ಯಾರಾದರೂ ನುಸುಳಿದರೆ ಅವರಿಗೆ ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು ಎಂದು ಹೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
‘ತಮ್ಮ ಮೇಲೆ ಮತ್ತು ಅವರ ಘನತೆಯ ಮೇಲೆ ದಾಳಿ ಮಾಡುವವರಿಗೆ ಪ್ರತಿಕ್ರಿಯಿಸುವ ಹಕ್ಕು ಹಿಂದೂಗಳಿಗೆ ಇದೆ. ಅವರು ಜಿಹಾದ್ ಸಂಪ್ರದಾಯವನ್ನು ಹೊಂದಿದ್ದಾರೆ ಮತ್ತು ಏನೂ ಇಲ್ಲದಿದ್ದರೆ, ಲವ್ ಜಿಹಾದ್ ಮಾಡುತ್ತಾರೆ. ಪ್ರೀತಿಸಿದರೂ ಅದರಲ್ಲಿ ಜಿಹಾದ್ ಮಾಡುತ್ತಾರೆ. ನಾವು (ಹಿಂದೂಗಳು) ಕೂಡ ಪ್ರೀತಿಸುತ್ತೇವೆ. ದೇವರನ್ನೂ ಪ್ರೀತಿಸುತ್ತೇವೆ… ಸನ್ಯಾಸಿ ತನ್ನ ದೇವರನ್ನು ಪ್ರೀತಿಸುತ್ತಾನೆ’ ಎಂದು ಅವರು ಹೇಳಿದರು.
ನಮ್ಮ ಮಕ್ಕಳಿಗೆ ಹಿಂದೂ ಸಂಸ್ಕೃತಿ ಕಲಿಸಿ
ಒಬ್ಬ ಸನ್ಯಾಸಿಯು ದೇವರಿಂದ ರಚಿಸಲ್ಪಟ್ಟ ಈ ಜಗತ್ತಿನಲ್ಲಿ ಎಲ್ಲಾ ದಬ್ಬಾಳಿಕೆಗಾರರನ್ನು ಮತ್ತು ಪಾಪಿಗಳನ್ನು ಕೊನೆಗೊಳಿಸಿ. ಇಲ್ಲದಿದ್ದರೆ ಪ್ರೀತಿಯ ನಿಜವಾದ ವ್ಯಾಖ್ಯಾನವು ಉಳಿಯುವುದಿಲ್ಲ. ಲವ್ ಜಿಹಾದ್‌ನಲ್ಲಿ ಭಾಗಿಯಾಗಿರುವವರಿಗೆ ಇದೇ ರೀತಿ ಉತ್ತರಿಸಿ. ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿ, ಅವರಿಗೆ ಸರಿಯಾದ ಮೌಲ್ಯಗಳನ್ನು ಕಲಿಸಿ ಎಂದು ಮಧ್ಯಪ್ರದೇಶದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. ಆಕೆಯ ಭಾಷಣದ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿವಮೊಗ್ಗದ ಭಜರಂಗದಳ ಕಾರ್ಯಕರ್ತ ಹರ್ಷ ಸೇರಿದಂತೆ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಉಲ್ಲೇಖಿಸಿದ ಅವರು, ‘ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಯಾರಾದರೂ ನಮ್ಮ ಮನೆಗೆ ನುಗ್ಗಿ ನಮ್ಮ ಮೇಲೆ ದಾಳಿ ಮಾಡಿದರೆ, ಪ್ರತೀಕಾರ ತೀರಿಸಿಕೊಳ್ಳುವುದು ನಮ್ಮ ಕರ್ತವ್ಯ’ ಎಂದರು.
‘ನಿಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗಳಿಗೆ ಕಳುಹಿಸಿದರೆ, ನೀವು ವೃದ್ಧಾಶ್ರಮಕ್ಕೆ ಹೋಗುತ್ತೀರಿ. ನಿಮ್ಮ ಮಕ್ಕಳು ನಿಮ್ಮವರಾಗುವುದಿಲ್ಲ ಏಕೆಂದರೆ ಅವರು ಸ್ವಾರ್ಥಿಗಳಾಗುತ್ತಾರೆ. ಈ ದೇಶ ನಮ್ಮದು, ಈ ಸಂಸ್ಕೃತಿ ನಮ್ಮದು ಮತ್ತು ಹಿಂದುತ್ವ ನಮ್ಮದು ಎಂಬುದನ್ನು ಅರಿತುಕೊಳ್ಳುವಂತೆ ನಿಮ್ಮ ಮಕ್ಕಳಿಗೆ ಮನೆಯಲ್ಲಿಯೇ ಸಂಸ್ಕೃತಿಯನ್ನು ಕಲಿಸಿ. ನಿಮ್ಮ ಮನೆಯಲ್ಲಿ ಪೂಜೆಗಳನ್ನು ಮಾಡಿ, ಧರ್ಮ ಮತ್ತು ಶಾಸ್ತ್ರದ ಬಗ್ಗೆ ಓದಿ, ಮತ್ತು ನಿಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ತಿಳಿಯುವಂತೆ ಕಲಿಸಿ’ ಎಂದು ಅವರು ಹೇಳಿದರು.
ಜನಸಂಖ್ಯೆ ನಿಯಂತ್ರಣದ ಅಗತ್ಯವನ್ನು ಒತ್ತಿ ಹೇಳಿದ ಅವರು, ‘ಹಿಂದೂ ರಾಷ್ಟ್ರ’ ನಿರ್ಮಾಣವಾದರೆ ಜನರು ಸಂತೋಷಪಡುತ್ತಾರೆ ಎಂದು ಹೇಳಿದರು.
ನಂತರ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹರ್ಷನ ಕುಟುಂಬದ ಬೆನ್ನಿಗೆ ಪ್ರತಿಯೊಬ್ಬ ಹಿಂದುವೂ ನಿಂತಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ‘ಹುತಾತ್ಮರ ಕುಟುಂಬಗಳು ಒಬ್ಬಂಟಿಯಾಗಿಲ್ಲ. ಅವರ ನೈತಿಕ ಸ್ಥೈರ್ಯ ಹೆಚ್ಚಿಸಲು ಇಲ್ಲಿಗೆ ಬಂದಿದ್ದೇನೆ. ಭಯೋತ್ಪಾದಕರಿಗೆ ಸರ್ಕಾರ ಶಿಕ್ಷೆ ನೀಡುತ್ತದೆ’ ಎಂದು ಅವರು ಹೇಳಿದರು.