ಕತಾರ್ : 36 ವರ್ಷದ ಬಳಿಕ ವಿಶ್ವಕಪ್ ಗೆಲುವಿನೊಂದಿಗೆ ವೃತ್ತಿಬದುಕಿಗೆ ವಿದಾಯ ಹೇಳುವ ಕನಸನ್ನು ಅರ್ಜೆಂಟೀನಾದ ದಿಗ್ಗಜ ಲಿಯೊನೆಲ್ ಮೆಸ್ಸಿ ನನಸನ್ನಾಗಿಸಿಕೊಂಡಿದ್ದಾರೆ. ತಾವು ವಿಶ್ವ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂಬುದನ್ನು ಮತ್ತೊಮ್ಮೆ ಅಚ್ಚತ್ತಿ ಹೇಳಿದ ಅರ್ಜೆಂಟೀನಾದ ನಾಯಕ, ಫ್ರಾನ್ಸ್ ವಿರುದ್ಧದ ರೋಚಕ ಫೈನಲ್‌ನಲ್ಲಿ ಗೆಲುವಿನ ರೂವಾರಿಯಾದರು. ಫುಟ್ಬಾಲ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ರೋಚಕ ಪೆನಾಲ್ಟಿ ಶೂಟ್‌ನಲ್ಲಿ ಒತ್ತಡ ಮೆಟ್ಟಿನಿಂತ ಮೆಸ್ಸಿ ಬಳಗ 4-2 ಅಂತರದಲ್ಲಿ 2018ರ ಚಾಂಪಿಯನ್ಸ್ ಫ್ರಾನ್ಸ್ ತಂಡದ ಸದ್ದಡಗಿಸಿ 2022ರ ಸಾಲಿನ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ (FIFA WORLD CUP) ಟ್ರೋಫಿ ಎತ್ತಿಹಿಡಿಯಿತು.
ಅಡಿಡಾಸ್ ಚಿನ್ನದ ಬಾಲ್ ಲಿಯನಲ್ ಮೆಸ್ಸಿ ಗೆ, ಅಡಿಡಾಸ್ ಚಿನ್ನದ ಬೂಟ್ ಕಿಲಿಯನ್ ಎಂಬಾಪೆ ಗೆದ್ದಿದ್ದಾರೆ . ಅಡಿಡಾಸ್ ಚಿನ್ನದ ಗ್ಲೌಸ್ ನ್ನು ಎಮಿಲಿಯನ್ ಮರ್ಟಿನೆಝ್ ಗೆ ಹಾಗೂ ಯಂಗ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ನ್ನು ಎನ್ಝೋ ಫೆರ್ನಾಂಡಿಸ್ ಪಡೆದಿದ್ದಾರೆ.


ಬಹುಮಾನ ಹಣ ಎಷ್ಟು ಗೊತ್ತಾ..?
ಮೊದಲ ಬಹುಮಾನ ಪಡೆದ ಅರ್ಜೆಂಟೀನಾ ತಂಡ 42 ಮಿಲಿಯನ್ ಡಾಲರ್ ಅಂದರೆ 347 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ದ್ವಿತೀಯ ಪಡೆದ ಪ್ರಾನ್ಸ್ 30 ಮಿಲಿಯನ್ ಡಾಲರ್ ಅಂದರೆ 247 ಕೋಟಿ ರೂಪಾಯಿ ಬಹುಮಾನದ ಮೊತ್ತ ಪಡೆಯಲಿದ್ದಾರೆ. 3 ನೇ ಸ್ಥಾನಕ್ಕೆ 220 ಕೋಟಿ ಹಾಗೂ ನಾಲ್ಕನೇ 204 ಕೋಟಿ ಬಹುಮಾನ ಮೊತ್ತವಿದೆ.
5 ರಿಂದ 8 ನೇ ಸ್ಥಾನಕ್ಕೆ 138 ಕೋಟಿ , 9-16 ನೇ ಸ್ಥಾನದವರೆಗೆ 106 ಕೋಟಿ ರೂಪಾಯಿ ಹಣ ಪಡೆದರೆ 17 ನೇ ಸ್ಥಾನದಿಂದ 32 ನೇ ಸ್ಥಾನದವರೆಗೆ 74 ಕೋಟಿ ರೂಪಾಯಿ ಹಣ ಪಡೆಯಲಿದ್ದಾರೆ.
ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ:
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ವಿಶ್ವದ ಅತ್ಯಂತ ದುಬಾರಿ ಕ್ರೀಡೆಯಾದ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಕತರ್‌ನ ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್‌ಗೆ ಮುನ್ನ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ದೀಪಿಕಾರೊಂದಿಗೆ ಸ್ಪೇನ್‌ನ ಮಾಜಿ ಗೋಲ್‌ಕೀಪರ್ ಮತ್ತು ನಾಯಕ ಇಕರ್ ಕ್ಯಾಸಿಲಾಸ್ ಇದ್ದರು. ಇದು ಭಾರತೀಯರಿಗೆ ಸಂದ ಮೊದಲ ಗೌರವ ಎನ್ನಲಾಗಿದೆ.
ಮೇ, 2022 ರಲ್ಲಿ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ದೀಪಿಕಾ, ಫೈನಲ್‌ನ ವಿಜೇತರಿಗೆ ನೀಡಲಾಗುವ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ.


ನಟ ಶಾರುಖ್ ಖಾನ್ ಗೆ ಫುಟ್ಬಾಲ್ ಫೈನಲ್ ಪಂದ್ಯಾಟದ ಸ್ಟುಡಿಯೋದಲ್ಲಿ ಅವಕಾಶ ಸಿಕ್ಕಿದೆ.
‘ಪಠಾಣ್’ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ಈ ಮೂಲಕ ಸಿಕ್ಕಿದೆ ಎನ್ನಲಾಗುತ್ತಿದೆ. ಈಗಾಗಲೇ ಬಲಪಂಥೀಯ ವಿರೋಧ ಕಟ್ಟಿಕೊಂಡ ಈ ಸಿನಿಮಾಕ್ಕೆ ವಿಶ್ವ ಶ್ರೇಷ್ಠ ವೇದಿಕೆಯಲ್ಲಿ ಪ್ರಚಾರ ಸಿಕ್ಕಿರುವ ಬಗ್ಗೆ ಭಾರತದಲ್ಲಿ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ. ಕೆಲವರು ಬಲಪಂಥೀಯರ ಕಾಲೇಲೆದಿದ್ದಾರೆ.

ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್ಅನ್ನು ಮಣಿಸಿತು. ಸೋಲಿನಿಂದ ನಿರಾಶೆಗೊಳಾಗದ ಆಟಗಾರ ಕೆಲಿಯನ್ ಎಂಬಪ್ಪೆ ಅವರನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಅಂಗಳಕ್ಕೆ ತೆರಳಿ ಸಮಾಧಾನಪಡಿಸಿದರು.
ಪಂದ್ಯದ ಮೊದಲಾರ್ಧದಲ್ಲೇ ಮೆಸ್ಸಿ ಮ್ಯಾಜಿಕ್‌ನೊಂದಿಗೆ 2-0 ಅಂತರದ ಮುನ್ನಡೆ ಪಡೆದಿದ್ದ ಅರ್ಜೆಂಟೀನಾ ಜಯ ದಾಖಲಿಸುವ ಹಾಟ್ ಫೇವರಿಟ್ ಆಗಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಎಲ್ಲ ಲೆಕ್ಕಾಚಾರಗಳು ಬುಡಮೇಲಾಗಿತ್ತು. ಫ್ರಾನ್ಸ್ ಪರ ಏಕಾಂಗಿ ಹೋರಾಟ ನಡೆಸಿದ್ದ ಸ್ಟಾರ್ ಆಟಗಾರ ಕಿಲಿಯನ್ ಎಂಬಾಪೆ 2 ನಿಮಿಷಗಳಲ್ಲಿ ಬ್ಯಾಕ್-ಟು-ಬ್ಯಾಕ್ ಗೋಲ್ ಬಾರಿಸಿ ಪೂರ್ಣ ಸಮಯದ ಅಂತ್ಯಕ್ಕೆ 2-2ರ ಸಮಬಲ ತಂದರು.
ನಿಗದಿತ 90 ನಿಮಷಗಳ ಅಂತ್ಯಕ್ಕೆ ಸ್ಕೋರ್ 2-2ರ ಸಮಬಲ ಕಂಡ ಪರಿಣಾಮ ಆಟ ಹೆಚ್ಚುವರಿ 30 ನಿಮಿಷಗಳ ಆಟಕ್ಕೆ ಕಾಲಿಟ್ಟಿತು. ಇಲ್ಲಿ ಹೆಚ್ಚು ಆಕ್ರಮಣಕಾರಿ ಆಟವಾಡಿ ಗೋಲ್ ಗಳಿಕೆಗೆ ಸತತ ಪ್ರಯತ್ನ ನಡೆಸಿದ ಅರ್ಜೆಂಟೀನಾ ಪರ ಮತ್ತೆ ಮಿಂಚಿದ ಮೆಸ್ಸಿ 108ನೇ ನಿಮಿಷದಲ್ಲಿ ಗೋಲ್ ಗಳಿಸಿದರು. ಆದರೆ, ಅದರ ಬೆನ್ನಲ್ಲೇ ಡಿಫೆನ್ಸ್‌ನಲ್ಲಿ ಮಾಡಿಕೊಂಡ ಎಡವಟ್ಟಿನ ಕಾರಣ 118ನೇ ನಿಮಿಷದಲ್ಲಿ ಎದುರಾಳಿಗೆ ಪೆನಾಲ್ಟಿ ಸ್ಪಾಟ್ ಕಿಕ್ ಬಿಟ್ಟುಕೊಟ್ಟು ಬೆಪ್ಪಾಯಿತು. ಇದರ ಲಾಭ ಪಡೆದ ಕಿಲಿಯನ್ ಎಂಬಾಪೆ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸಿ 3-3ರ ಸಮಬಲ ತಂದರು. ಇದು ವಿಶ್ವಕಪ್ ಫೈನಲ್ ಒಂದರಲ್ಲಿ ಮೂಡಿಬಂದ ಮೊದಲ ಹ್ಯಾಟ್ರಿಕ್ ಗೋಲಾಗಿದೆ. ಹೆಚ್ಚುವರಿ ಸಮಯದ ಕೊನೇ 2 ನಿಮಿಷಗಳಲ್ಲಿ ಎರಡೂ ತಂಡಗಳಿಗೆ ಗೋಲ್ ಗಳಿಕೆಯ ಅವಕಾಶ ಸಿಕ್ಕಿತ್ತಾದರೂ ಕೂದಲೆಳೆ ಅಂತರದಲ್ಲಿ ಅದೃಷ್ಟ ಕೈತಪ್ಪಿ ಹೋಯಿತು. ಫಲಿತಾಂಶಕ್ಕಾಗಿ ಪಂದ್ಯ ಪೆನಾಲ್ಟಿ ಶೂಟ್‌ಔಟ್ ಕಡೆಗೆ ಮುಖಮಾಡಿತು.

ಪೆನಾಲ್ಟಿ ಶೂಟ್‌ನಲ್ಲೂ ತಮ್ಮ ಏಕಾಗ್ರತೆ ಕಾಯ್ದುಕೊಂಡ ಎಂಬಾಪೆ ಫ್ರಾನ್ಸ್‌ಗೆ 1-0 ಅಂತರದ ಮುನ್ನಡೆ ಕೊಟ್ಟರು. ಬಳಿಕ ಬಂದ ಮೆಸ್ಸಿ 1-1 ಅಂತರದ ಸಮಬಲ ತಂದರು. ಆದರೆ ಫ್ರಾನ್ಸ್ ಪರ 2ನೇ ಮತ್ತು 3ನೇ ಪ್ರಯತ್ನದಲ್ಲಿ ಕಿಂಗ್‌ಸ್ಲೀ ಕೊಮನ್ ಮತ್ತು ಅರುಲೆನ್ ತೊಮೆನಿ ಚೆಂಡನ್ನು ಗೋಲ್ ಪೆಟ್ಟಿಗೆ ಸೇರಿಸಲು ವಿಫಲವಾದರೆ, ನಾಲ್ಕನೇ ಪ್ರಯತ್ನದಲ್ಲಿ ರಾಂಡಲ್ ಕೊಲೊ ಗಳಿಸಿದ ಗೋಲ್ ಸೋಲಿನ ಅಂತರ ತಗ್ಗಿಸುವುದಕ್ಕಷ್ಟೇ ಸೀಮಿತವಾಯಿತು. ಅರ್ಜೆಂಟೀನಾ ಪರ 2ನೇ, 3ನೇ ಮತ್ತು 4ನೇ ಪ್ರಯತ್ನಗಳಲ್ಲಿ ಪಾಲೊ ಡಿಬಾಲ, ಲಿಯನಾರ್ಡೊ ಪರೇಡಸ್ ಮತ್ತು ಗೊನ್ಸಾಲೊ ಮೌಟಿಯೆಲ್ ಗೋಲ್ ಗಳಿಸುವ ಮೂಲಕ ಇತಿಹಾಸದ ಪುಟದಲ್ಲಿ ತಮ್ಮ ಹೆಸರುಗಳನ್ನು ಅಚ್ಚಳಿಯದಂತೆ ಒತ್ತಿಬಿಟ್ಟರು.

1986ರಲ್ಲಿ ಡಿಯೇಗೊ ಮರಡೊನಾ ಸಾರಥ್ಯದಲ್ಲಿ ಕೊನೆಯ ಬಾರಿ ವಿಶ್ವ ಕಪ್ ಗೆದ್ದಿದ್ದ ಅರ್ಜೆಂಟೀನಾ ತಂಡ ಇದೀಗ ಲಿಯೋನೆಲ್ ಮೆಸ್ಸಿ ಸಾರಥ್ಯದಲ್ಲಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿದು, ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. 2014ರಲ್ಲೂ ಮೆಸ್ಸಿ ಸಾರಥ್ಯದಲ್ಲಿ ಅರ್ಜೆಂಟೀನಾ ಫೈನಲ್ ತಲುಪಿತ್ತಾದರೂ ಜರ್ಮನಿ ವಿರುದ್ಧದ ಫೈನಲ್‌ನಲ್ಲಿ ಮುಗ್ಗರಿಸಿತ್ತು. 1978ರಲ್ಲಿ ಅರ್ಜೆಂಟೀನಾ ತನ್ನ ಮೊದಲ ವಿಶ್ವಕಪ್ ಗೆದ್ದಿತ್ತು.
2022ರ ಸಾಲಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ಎದುರು ಮುಗ್ಗರಿಸಿದ ಅರ್ಜೆಂಟೀನಾ ತಂಡ ನಂತರದ ಎಲ್ಲ ಪಂದ್ಯಗಳನ್ನು ಗೆದ್ದು ವಿಶ್ವ ಚಾಂಪಿಯನ್ಸ್ ಎನಿಸಿದೆ.