ಪುತ್ತೂರು: ನ 29 : ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರಗಳ ಕಾಲ ನಡೆಯಲಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆ ಸೋಮವಾರ ಬೆಳಿಗ್ಗೆ ಆರಂಭವಾಯಿತು.
ನಾಡಿನ ಹೆಸರಾಂತ ದೈವಜ್ಞ ಜ್ಯೋತಿಷ್ಯ ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ನೇತೃತ್ವದಲ್ಲಿ ದೇವಾಲಯದ ಸಭಾಭವನದಲ್ಲಿ ಪ್ರಶ್ನಾಚಿಂತನೆ ಆರಂಭಗೊಂಡಿದೆ.
ಶ್ರೀ ದೇವಾಲಯಕ್ಕೆ ಆಗಮಿಸಿದ ದೈವಜ್ಞರನ್ನು ರಾಜಗೋಪುರದ ಬಳಿ ಸ್ವಾಗತ ನೀಡಿ ಶ್ರೀ ದೇವಾಲಯಕ್ಕೆ ಕರೆದೊಯ್ಯಲಾಯಿತು. ಶ್ರೀ ದೇವಾಲಯದ ಸತ್ಯ-ಧರ್ಮ ನಡೆಯಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ದೈವಜ್ಞರನ್ನು ಸಭಾಭವನಕ್ಕೆ ಕರೆ ತರಲಾಯಿತು. ಸಭಾಭವನದಲ್ಲಿ ಶ್ರೀ ಗಣಪತಿ ಪೂಜೆಯನ್ನು ನೆರವೇರಿಸಿದ ಬಳಿಕ ಅಷ್ಟಮಂಗಲ ಪ್ರಶ್ನಾ ಚಿಂತನೆಯನ್ನು ಆರಂಭಿಸಲಾಯಿತು. ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ್ ಪ್ರಸಾದ್ ಮುಳಿಯ ದೀಪಪ್ರಜ್ವಲನ ನಡೆಸಿದರು.

ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ದೈವಜ್ಞರಾದ ಡಾ. ವಳಕ್ಕುಂಜ ಮುರಳೀಕೃಷ್ಣ ಭಟ್, ಇ. ಗೋಪಾಲಕೃಷ್ಣ ಭಟ್ ಹಾಗೂ ಸಹ ದೈವಜ್ಞರು ಪಾಲ್ಗೊಂಡಿದ್ದಾರೆ. ಒಂದು ವಾರಗಳ ಕಾಲ ಪ್ರಶ್ನೆ ಮುಂದುವರಿಯಲಿದೆ. ಅಷ್ಟಮಂಗಲ ಚಿಂತನೆಯು ದೈವೀಕ, ಲೌಕಿಕ ಮತ್ತು ಭೌತಿಕ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ.
ಈ ಸಂದರ್ಭ ಶ್ರೀ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಡಾ. ಸುಧಾ ಎಸ್. ರಾವ್, ವೇ.ಮೂ. ವಿ.ಎಸ್. ಭಟ್, ಬಿ. ಐತ್ತಪ್ಪ ನಾಯ್ಕ್, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ್ ರಾವ್, ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ, ಪ್ರಮುಖರಾದ ಕೊಟ್ಟಿಬೆಟ್ಟು ರತ್ನಾಕರ ನಾೈಕ್, ಶ್ರೀಧರ್ ಪಟ್ಲ, ಪುತ್ತೂರು ಪುರಸಭಾ ಮಾಜಿ ಉಪಾಧ್ಯಕ್ಷ ಎಚ್. ಉದಯ್ ಕುಮಾರ್ ಉಪಸ್ಥಿತರಿದ್ದರು.