ಮಂಗಳೂರು, ನ.26: ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಇಬ್ಬರನ್ನು ಬಂಧಿಸಿದ್ದಾರೆ. ಮಂಗಳೂರು ನಗರದ ಕಾವೂರು ಕಟ್ಟೆ ಪರಿಸರದಲ್ಲಿ ಬಾಡಿಗೆಗೆ ಮನೆ ಪಡೆದು ಚರ್ಮದ ದಂಧೆಯಲ್ಲಿ ಈ ಇಬ್ಬರು ತೊಡಗಿಕೊಂಡಿದ್ದರು.
ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿ ಹಾಗೂ ಇತರ ಕಡೆಗಳಲ್ಲಿನ ಯುವತಿಯರನ್ನು ಹಾಗೂ ಮಹಿಳೆಯರನ್ನು ಮಾನವ ಕಳ್ಳಸಾಗಾಟ ಮೂಲಕ ಮಂಗಳೂರಿಗೆ ಕರೆಯಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಾರೆಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಒಬ್ಬಾಕೆಯನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ದಲ್ಲಾಳಿಗಳಾದ ಅಬ್ದುಲ್ ಹಫೀಸ್, ರಮ್ಲಾತ್ ಎಂಬವರು ಬಂಧಿತರು.
ದಸ್ತಗಿರಿ ಮಾಡಿದ ಆರೋಪಿಗಳಿಂದ ರೂ. 10,060/- ನಗದು, 3 ಮೊಬೈಲ್ ಫೋನುಗಳು ಮತ್ತು ಸ್ಕಾರ್ಪಿಯೋ ಕಾರು ಹೀಗೆ ಒಟ್ಟು ರೂ. 3,25,560/- ಮೊತ್ತದ ಸೊತ್ತನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.