ಬೀಜಿಂಗ್ : ಅ 26 : ಚೀನಾದ ವಾಯವ್ಯ ಭಾಗದ ಗನ್ಸು ಪ್ರಾಂತ್ಯದ ರಾಜಧಾನಿ ಲಾಂಝೌ ನಗರದಲ್ಲಿ ಮಂಗಳವಾರ ಲಾಕ್‌ಡೌನ್ ಘೋಷಣೆಯಾಗಿದ್ದು, ಇಲ್ಲಿನ 40 ಲಕ್ಷ ಜನರು ಮನೆಯೊಳಗೆಯೇ ಇರುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಅಲ್ಲಿನ ಸರಕಾರ ಹೊರಡಿಸಿದೆ.
ಅಕ್ಟೋಬರ್ 17ರಿಂದೀಚೆಗೆ ಚೀನಾದಲ್ಲಿ 198 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ ರೂಪಾಂತರದಿಂದಲೇ ಈ ಸೋಂಕು ಹರಡಿತ್ತು. ಈ ಪೈಕಿ ಲಾಂಝೌ ನಗರದಲ್ಲಿ ಗರಿಷ್ಠ ಅಂದರೆ 39 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ನಗರದಲ್ಲಿ ಇದೀಗ ಲಾಕ್‌ಡೌನ್ ಘೋಷಿಸಲಾಗಿದೆ.
ಈ ನಗರದಲ್ಲಿ ಜನರ ಓಡಾಟಕ್ಕೆ ಈಗ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಇಲ್ಲಿ ಟ್ಯಾಕ್ಸಿ ಮತ್ತು ಬಸ್ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಅಗತ್ಯದ ವಸ್ತುಗಳು ಮತ್ತು ವೈದ್ಯಕೀಯ ಸೌಲಭ್ಯ ಮಾತ್ರ ನಗರದಲ್ಲಿ ಈಗ ಸಿಗುತ್ತಿವೆ.
ಬಹುತೇಕ ದೇಶೀಯ ಪ್ರವಾಸಿಗರಿಂದಲೇ ಕೊರೊನಾ ಸೋಂಕು ಹರಡಿದೆ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ದೇಶದ ದಕ್ಷಿಣ ಭಾಗಕ್ಕಿಂತ ಉತ್ತರ ಭಾಗದಲ್ಲೇ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ.

2019 ರ ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್ ನಗರದಲ್ಲಿ ಕೊರೊನಾ ಸೋಂಕು ಮೊದಲ ಬಾರಿ ಪತ್ತೆಯಾಗಿತ್ತು .ಬಳಿಕ ಇದು ವಿಶ್ವದ ನಾನಾ ಭಾಗಗಳಿಗೆ ಪಸರಿಸಿ ಅಲ್ಲಿನ ಸಾಮಾಜಿಕ – ಅರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿತ್ತು . ಲಕ್ಷಾಂತರ ಸಾವುನೋವುಗಳ ಜತೆಗೆ ಪ್ರಪಂಚದ ಬಹುತೇಕ ಎಲ್ಲ ದೇಶಗಳು ಕನಿಷ್ಟ ಒಂದೆರಡು ತಿಂಗಳಾದರೂ ಲಾಕ್ ಡೌನ್ ಹೇರಿತ್ತು