ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಬಂಧಿತನಾಗಿರುವ ಪುತ್ತೂರಿನ ಖಾಸಗಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ ಅವರಿಗೆ ಅ 26 ರಂದು ಪುತ್ತೂರಿನ ನ್ಯಾಯಾಲಯವೂ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಯನ್ನು ಇಂದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರ ಪರ ವಕೀಲರು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಅದನ್ನು ನ್ಯಾಯಾಲಯವೂ ತಿರಸ್ಕರಿಸಿತ್ತು. ಬಳಿಕ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಇದಕ್ಕೆ ಸರಕಾರಿ ಅಭಿಯೋಜಕರಿಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವೂ ನಾಳೆಗೆ ಮುಂದೂಡಿದೆ.
ಇಲ್ಲಿನ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಯ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹಾಗೂ ಅದೇ ವಿದ್ಯಾಸಂಸ್ಥೆಯ ವಸತಿ ನಿಲಯದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ವಾಸ್ತವ್ಯ ಹೂಡಿರುವ ಮಡಿಕೇರಿ ತಾಲೂಕಿನ ಅಪ್ರಾಪ್ತ ವಿದ್ಯಾರ್ಥಿನಿಯೂ ತನಗೆ ಅ.23ರಂದು ಆರೋಪಿಯೂ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದರು. ಅ .25 ರಂದು ರಾತ್ರಿ ಪುತ್ತೂರು ಕ್ಲಬ್ ಬಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಆರೋಪಿಯೂ ಸಂತ್ರಸ್ತ ವಿದ್ಯಾರ್ಥಿನಿಯ ದೈಹಿಕ ಶಿಕ್ಷಕರಾಗಿದ್ದಾರೆ. ಅ 23 ರಂದು ತನಗೆ ಸೊಂಟ ನೋವೆಂದು ವಿದ್ಯಾರ್ಥಿನಿಯೂ ಎಲ್ಯಾಸ್ ಪಿಂಟೋ ರವರಲ್ಲಿ ತಿಳಿಸಿದ್ದು, ಆಗ ಅವರು ಆಕೆಗೆ ವ್ಯಾಯಾಮ ಮಾಡಿಸಿದ್ದು , ಈ ವೇಳೆ ಸೊಂಟ ಮುಟ್ಟಿದರೆಂದು ಆರೋಪ ಕೇಳಿ ಬಂದಿದೆ.
ಈ ಬಳಿಕ ಈ ವಿಚಾರವನ್ನು ವಿದ್ಯಾರ್ಥಿನಿಯೂ ಮಡಿಕೇರಿಯಲ್ಲಿರುವ ತನ್ನ ಪೋಷಕರಿಗೆ ತಿಳಿಸಿದ್ದು , ಅವರು ಈ ಬಗ್ಗೆ ವಿಚಾರಿಸಲು ಅ 25 ರಂದು ಕಾಲೇಜಿಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಆ ಬಳಿಕ ವಿದ್ಯಾರ್ಥಿನಿ ಹಾಗೂ ಪೋಷಕರು ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ