ದೇಶ ವಿದೇಶಗಳ ನೂರಾರು ವೈವಿಧ್ಯಮಯ ಭತ್ತದ ತಳಿಗಳನ್ನು ಸಂಗ್ರಹಿಸುವ, ಸಂರಕ್ಷಿಸುವ ಆ ಮೂಲಕ ಈ ಅಹಾರ ಬೆಳೆಯ ಅತ್ಯಾಪರೂಪದ ತಳಿಗಳನ್ನು ಮುಂದಿನ ಪೀಳಿಗೆಗೂ ಜತನದಿಂದ ಕಾಪಿಡುವ ಕಾಯಕವನ್ನು ಕರ್ನಾಟಕ ಕೇರಳ ಗಡಿ ಭಾಗದ ರೈತರೊಬ್ಬರು ನಿರಂತರವಾಗಿ ಕಳೆದ 12 ವರ್ಷದಿಂದ ಮಾಡುತ್ತಿದ್ದಾರೆ. ಯಾವುದೇ ಪ್ರತಿಪಲಾಪೇಕ್ಷೆಯಿಲ್ಲದೆ ತಪಸ್ಸಿನಂತೆ ಈ ಸತ್ಕಾರ್ಯ ಮಾಡುತ್ತಿರುವ ಕರ್ಮಯೋಗಿ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾ.ಪಂ.ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರು ಬೆಳೇರಿಯ ಕೃಷಿಕ ಸತ್ಯನಾರಾಯಣರವರು.
ಇವರ ಬಳಿ ಸುಮಾರು 650 ವೈವಿಧ್ಯಮಯ, ವಿಶ್ವದ ವಿವಿಧ ಬೌಗೋಳಿಕ ಪರಿಸರದಲ್ಲಿ ಬೆಳೆದ, ನಾನಾ ಗುಣ ವೈಶಿಷ್ಟ್ಯದ, ಭಿನ್ನ ಭಿನ್ನ ಗಾತ್ರ ರುಚಿಯ, ಭತ್ತದ ತಳಿಗಳಿದ್ದು ಅದು ಅವರ ಸಂರಕ್ಷಣೆಯಲ್ಲಿ ಜೋಪಾನವಾಗಿವೆ. ಈ ತಳಿಗಳ ಜೀವ ವೈವಿಧ್ಯವನ್ನು ನೋಡಲು ಆ ಬಗ್ಗೆ ಅಭ್ಯಸಿಸಲು ಕೇರಳ ಹಾಗೂ ಕರ್ನಾಟಕದ ಕೃಷಿ ವಿದ್ಯಾರ್ಥಿಗಳು, ಕೃಷಿಕರು, ಕೃಷಿ ಸಂಶೋಧಕರು ಸತ್ಯನಾರಾಯಣರ ತಳಿ ಪ್ರಯೋಗ ಶಾಲೆಯ ನಿತ್ಯ ಸಂದರ್ಶಕರಾಗಿದ್ದಾರೆ.
ಇಷ್ಟು ಅಗಾಧ ಸಂಖ್ಯೆಯ ತಳಿಗಳನ್ನು ಅವರು ಸಂರಕ್ಷಿಸಿ ಪೋಷಿಸುತ್ತಿರುವುದು ಕೇವಲ 10 ಸೆಂಟ್ಸ್ ಜಾಗದಲ್ಲಿ . ಹೌದು ನೀವು ನಂಬಲೆಬೇಕು ಕೇವಲ 10 ಸೆಂಟ್ಸ್ ಜಾಗದಲ್ಲಿ. ಸತ್ಯನಾರಾಯಣ ಅವರ ಬಳಿ ಐದು ಎಕರೆ ಜಮೀನಿದ್ದು ಆ ಮಣ್ಣು ಭತ್ತದ ಕೃಷಿಗೆ ಯೋಗ್ಯವಾಗಿಲ್ಲ. ಎತ್ತರದ ಸ್ಥಳವಾದ ಕಾರಣ ನೀರಿನ ಕೊರತೆಯೂ ಬಾಧಿಸುತ್ತಿದೆ.ನಾಲ್ಕು ಎಕರೆಯಲ್ಲಿ ಇಪ್ಪತ್ತು ವರ್ಷದ ಮೊದಲು ರಬ್ಬರ್ ನೆಡಲಾಗಿದ್ದು ಟ್ಯಾಪಿಂಗ್ ನಡೆಸಲಾಗುತ್ತಿದೆ. ಅರ್ಧ ಎಕರೆಯಲ್ಲಿ ಅಡಕೆ, ತೆಂಗು, ಉಳಿದ ಜಾಗದಲ್ಲಿ ಮನೆ, ಅಂಗಳ, ಹಟ್ಟಿ, ಕೈತೋಟವಿದೆ. ಕೈ ತೋಟದಲ್ಲಿ ಕಾಳುಮೆಣಸು, ಬಾಳೆ, ವೀಳ್ಯದೆಲೆ ಕೃಷಿ ಮಾಡಲಾಗುತ್ತಿದೆ. ಇನ್ನುಳಿದ ಅಲ್ಪ ಜಾಗದಲ್ಲಿ ಅತ್ಯಂತ ಜಾಣತನದಿಂದ ಜತನದಿಂದ ಮುಂದಿನ ಪೀಳಿಗೆಯ ಅಶಾಕಿರಣವಾಗಿರುವ ವಿವಿಧ ಬಗೆಯ ಭತ್ತದ ಪೈರುಗಳು ನಳನಳಿಸುತ್ತಿವೆ.

ತಳಿ ಸಂರಕ್ಷಣೆ ಹೇಗೆ ?
ಸತ್ಯನಾರಾಯಣ ರವರು ತಳಿ ಸಂರಕ್ಷಣೆಗೆ ಅನುಸರಿಸಿರುವ ಮಾದರಿ ವಿಶಿಷ್ಡವಾಗಿದೆ. ಜೀವನೋಪಾಯಕ್ಕೆ ತಮ್ಮಲ್ಲಿರುವ ಭೂಮಿಯನ್ನು ಬಳಸಿ ಉಳಿದ ಕನಿಷ್ಡ ಜಾಗದಲ್ಲಿಯೇ ನೂರಾರು ಪ್ರಭೇದಗಳು ಬೆಳವಣಿಗೆ ಹೊಂದಬೇಕಾದ ಅಗತ್ಯತೆ ಇರುವುದರಿಂದ ಈ ವಿಶಿಷ್ಟ ವಿಧಾನ ಅವರಿಗೆ ಅನಿವಾರ್ಯವೂ ಆಗಿದೆ.
ಸಣ್ಣ ಕಾಗದದ ಲೋಟದಲ್ಲಿ ಮಣ್ಣು ಗೊಬ್ಬರದ ಮಿಶ್ರಣ ತುಂಬಿ, ಅದರಲ್ಲಿ 10 ರಿಂದ 20 ಭತ್ತದ ಬೀಜಗಳನ್ನು ಊರಲಾಗುತ್ತದೆ. 3-4 ದಿನಗಳಲ್ಲಿ ಮೊಳಕೆಯೊಡೆದಾಗ ಸಸಿಗಳಿಗೆ ನೀರು ಪೂರೈಸಲಾಗುತ್ತಿದೆ. ಹತ್ತು ದಿನದ ಬಳಿಕ ಈ ಸಸಿಗಳನ್ನು ಗೊಬ್ಬರ, ಮಣ್ಣು ತುಂಬಿ ಸಿದ್ಧಪಡಿಸಿದ 12 ಇಂಚು ಎತ್ತರ 8 ಇಂಚು ಅಗಲದ ಗ್ರೋ ಬ್ಯಾಗ್ ಗಳಿಗೆ ವರ್ಗಾಯಿಸಿ ಚೆನ್ನಾಗಿ ಬಿಸಿಲು ಬೀಳುವ ಜಾಗದಲ್ಲಿ ಒತ್ತೊತ್ತಾಗಿ ಜೋಡಿಸುತ್ತಾರೆ.ಸಸಿ ನಾಟಿಯ ವೇಳೆ ಹೆಚ್ಚು ಸಾವಯವ ಗೊಬ್ಬರ ಪೂರೈಸುವುದರಿಂದ, ಮತ್ತೆ ಮೇಲುಗೊಬ್ಬರದ ಅಗತ್ಯವಿಲ್ಲ.ಬದಲಿಗೆ ಒಂದೆರಡು ಸಲ ಜೀವಾಮೃತವನ್ನು ಪೂರೈಸುತ್ತಾರೆ.ಸಸಿ ಬೆಳೆಸುವ ಅವಧಿಯಲ್ಲಿ ಉತ್ತಮ ಮಳೆಯಾದರೆ ಪೈರುಗಳಿಗೆ ನೀರುಣಿಸುವ ಅಗತ್ಯವಿಲ್ಲ.

ನೀರಿನಲ್ಲಿ ಗ್ರೋಬ್ಯಾಗ್ ಮೂಲಕ ತಳಿ ಅಭಿವೃದ್ಧಿ :
ಭತ್ತದ ಪೈರುಗಳು ಸಸಿಯಾಗಿ ಹೂವಾಡುವಾಗ, ಜಮೀನಿನ ಸಮತಟ್ಟಾದ ಭಾಗದಲ್ಲಿ 3 ಮೀಟರ್ ಅಗಲ, 10 ಮೀಟರ್ ಉದ್ದದಷ್ಟು ಜಾಗದಲ್ಲಿ ಟರ್ಪಾಲು ಹಾಸಿ, ಅದರ ಸುತ್ತ 1 ಮೀಟರ್ ಎತ್ತರದ ಬದು ಕಟ್ಟಿ, ತೊಟ್ಟಿ ಯಾಕಾರದ ರಚನೆ ಮಾಡುತ್ತಾರೆ.ಅದರಲ್ಲಿ ಗ್ರೋಬ್ಯಾಗ್ ಅರ್ಧ ಭಾಗ ಮುಳುಗುವಷ್ಟು ನೀರು ತುಂಬಿಸುತ್ತಾರೆ. ತಳಿ ಶುದ್ಧತೆ (ಪರಾಗಸ್ಪರ್ಷವಾಗದಂತೆ) ಕಾಯ್ದುಕೊಳ್ಳುವ ನಿಟ್ಟಿನಲ್ಲಿ ತೆನೆಗಳು ಹೂವಾಡುವ ಹಂತದಲ್ಲಿ, ಭತ್ತದ ಸಸಿಗಳ ನಡುವೆ ಅಂತರವಿರಿಸಲಾಗುತ್ತದೆ. ತೆನೆ ಮೂಡಿದಂತೆ ಗ್ರೋಬ್ಯಾಗ್‌ಗಳನ್ನು ನೀರು ತುಂಬಿಸಿದ ತೊಟ್ಟಿಯಲ್ಲಿ ಇರಿಸಿ ಮೇಲ್ಬಾಗದಿಂದ ಸನ್ ಶೇಡ್ ಅಥವಾ ಸೊಳ್ಳೆಪರದೆ ಹಾಕಲಾಗುತ್ತಿದೆ.ಈ ವಿಧಾನದಿಂದ ಇಲಿ, ಹೆಗ್ಗಣ, ಕೀಟಬಾಧೆ, ಹಕ್ಕಿ, ನವಿಲು, ವನ್ಯ ಜೀವಿಗಳ ಕಾಟದಿಂದ ತೆನೆಗಳನ್ನು ರಕ್ಷಿಸಬಹುದು.ತೊಟ್ಟಿಯ ನೀರಿನಲ್ಲಿ ಸೊಳ್ಳೆ ಸೃಷ್ಟಿಯಾದರೆ ಸಣ್ಣ ಮೀನಿನ ಮರಿಗಳ ಮೂಲಕ ಅದನ್ನು ನಿಯಂತ್ರಿಸುವ ಸತ್ಯನಾರಾಯಣರ ವಿಧಾನ ಕೃಷಿ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಆಸಕ್ತಿ ಕುದುರಿದ್ದು ಹೇಗೆ ?
ಪ್ರಗತಿಪರ ಕೃಷಿಕರಾದ ಅವರು ಅಡಿಕೆ ಪತ್ರಿಕೆ ಹಾಗೂ ಇತರ ಪತ್ರಿಕೆಗಳಲ್ಲಿ ಪ್ರಕಟವಾಗುವ ಕೃಷಿ ಮಾಹಿತಿ, ರೇಡಿಯೋ, ಟಿವಿಯಲ್ಲಿ ಬಿತ್ತರವಾಗುವ ಕೃಷಿ ಪಾಠದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದಾರೆ. ಪ್ರಖ್ಯಾತ ಗಾಂಧಿವಾದಿ, ನೈಜ ರೀತಿಯ ಕೃಷಿಕ ಮತ್ತು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿದ್ದ ದಿ.ಚೆರ್ಕಾಡಿ ರಾಮಚಂದ್ರ ರಾವ್ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಓದಿ ಭತ್ತದ ತಳಿ ಸಂಗ್ರಹ, ಸಂರಕ್ಷಣೆಯ ಹಂಬಲ ಅವರ ಮನದಲ್ಲಿ ಚಿಗುರೊಡೆದಿದೆ.ಲೇಖನದಲ್ಲಿದ್ದ ವಿಳಾಸದಲ್ಲಿ ಅವರನ್ನು ಸಂಪರ್ಕಿಸಿ ಅಂಚೆ ಮೂಲಕ ಒಂದು ಮುಷ್ಟಿ ’ರಾಜಕಯಮೆ’ ದೇಸಿ ತಳಿಯ ಭತ್ತವನ್ನು ಪಡೆದು ಇರುವ ಅಲ್ಪ ಸ್ವಲ್ಪ ಸ್ಥಳದಲ್ಲಿ ನಾಟಿ ಮಾಡಿದ್ದರು.

ಹಳೆಯ ತಳಿಗಳನ್ನು ಬೆಳೆಸಿ ಸಂರಕ್ಷಿಸುತ್ತಿರುವ ಬೀಜ ಸಂರಕ್ಷಕ ಬೆಳ್ತಂಗಡಿ ಮಿತ್ತಬಾಗಿಲು ಅಮೈಯ ಬಿ.ಕೆ.ದೇವರಾವ್ ಮತ್ತು ಪುತ್ರ ಬಿ.ಕೆ.ಪರಮೇಶ್ವರ ರಾವ್ ಅವರಿಂದ ಪ್ರೇರಿತರಾಗಿ ಅವರಿಂದಲೇ ಹಲವಾರು ದೇಸಿ ತಳಿಗಳನ್ನು ಪಡೆದು ಬಿತ್ತನೆ ನಡೆಸಿ ತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದರು.
ದೇಶದ ನಾನಾ ಭಾಗದಿಂದ ತಳಿ ಸಂಗ್ರಹ
ಈ ಬಗ್ಗೆ ಆಸಕ್ತಿ ಇನ್ನಷ್ಟು ವೃದ್ಧಿಸಿ ಕೇರಳದ ಮಲಪ್ಪುರಂ, ಪಟ್ಟಾಂಬಿ, ವಯನಾಡು, ಕುಟ್ಟನಾಡು, ಕರ್ನಾಟಕದ ಬೆಳ್ತಂಗಡಿ, ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರ, ಮೈಸೂರು, ಮಂಡ್ಯ, ದಾವಣಗೆರೆ, ಬೆಳಗಾವಿ, ಓಡಾಡಿ ತಳಿ ಹಲವಾರು ಸಂಗ್ರಹಿಸಿದ್ದಾರೆ.ದೆಹಲಿ ಸೀಡ್ ಬ್ಯಾಂಕ್ ನಿಂದ ಹಲವು ತಳಿಗಳು ಲಭಿಸಿವೆ.ಬೀಜ ಮೇಳಗಳಿಗೆ ಭೇಟಿ ನೀಡುತ್ತಾ ತಳಿ ಸಂಗ್ರಹದ ಅಭಿಯಾನ ನಡೆಸಿದ್ದಾರೆ. ಪ್ರಸ್ತುತ ಇರುವ ಅಲ್ಪ ಜಾಗದಲ್ಲಿ ಸುಮಾರು 650 ದೇಸಿ ಭತ್ತದ ತಳಿಗಳನ್ನು ಬೆಳೆಸಿ ಸಂರಕ್ಷಿಸಿ ಅವುಗಳ ಬೀಜವನ್ನು ಸಂಗ್ರಹಿಸಿಟ್ಟಿದ್ದಾರೆ.

ಪ್ರಮುಖ ತಳಿಗಳು :
ಮೈಸೂರು ರಾಜರ ಪ್ರಿಯ ತಳಿ ರಾಜಮುಡಿ, ಫಿಲಿಪ್ಪೀನ್ಸ್ ನ ‘ಮನಿಲ’, ಉಪ್ಪುನೀರಿನಲ್ಲಿ ಬೆಳೆಯುವ ಕಗ್ಗ, ಬರನಿರೋಧಕ ವೆಳ್ಳತ್ತೆವುನ್, ಪ್ರವಾಹ ಎದುರಿಸಿ ಬೆಳೆಯುವ, ನೀರಿನಲ್ಲೇ 40 ದಿನ ಕಾಲ ಕೊಳೆಯದೆ ಉಳಿಯುವ ನೆರೆಗೂಳಿ, ಪುಟ್ಟ ಭತ್ತ, ಮತ್ತು ಏಡಿಕುಣಿ, 60 ದಿನದಲ್ಲಿ ಕೊಯ್ಲಿಗೆ ಸಿದ್ದವಾಗುವ ಕಷಿಕಾ ಶಾಲಿ, ಎರಡು ಅಕ್ಕಿ ಕಾಳಿನ ಜುಗಲ್, ಅವಲಕ್ಕಿ ತಯಾರಿಗೆ ಬೇಕಾದ ಸ್ವರಟಾ, ನೇರಳೆ ಬಣ್ಣದ ಡಾಂಬಾರ್ ಕಾಳಿ, ಕಾರ್‌ರೆಡ್‌ರೈಸ್, ಕಲಾಬತಿ, ನಜರ್ ಬಾತ್(ಕಲೆ ನಿವಾರಣೆ), ನೇರಳೆ ಬಣ್ಣದ ಅಕ್ಕಿಯ ಮಣಿಪುರ ಭತ್ತ, ಹಸಿರು ಬಣ್ಣದ ಗ್ರೀನ್ ರೈಸ್, ಕಪ್ಪು ಬಣ್ಣದ ಅಸ್ಸಾಂ ಬ್ಲೇಕ್ ರೈಸ್, ಔಷಧೀಯ ಗುಣದ ತಳಿಗಳಾದ ರಕ್ತ ವೃದ್ದಿಸುವ ರಕ್ತಶಾಲಿ, ಕಬ್ಬಿಣದ ಅಂಶ ಹೆಚ್ಚಿಸುವ ಕರಿಗಕಾವಲಿ, ಜ್ವರ ನಿವಾರಿಸುವ ಅರಿಹಕ್ಕಳ ಶಾಲಿ, ಎದೆಹಾಲು ವೃದ್ಧಿಯ ಅಂಬೆಮೊಹರ್, ಸಂದುನೋವು ನಿವಾರಣೆಯ ಬರ್ಮಾಬ್ಲಾಕ್, ಕ್ಯಾನ್ಸರ್ ತಡೆಯುವ ಅತಿಕಾರಿ, ಎಲುಬು ಗಟ್ಟಿಗೊಳಿಸುವ ನವರ, ಸಕ್ಕರೆ ಕಾಯಿಲೆಗೆ ಸಿಂಧೂರ, ಮಧುಶಾಲೆ, ಮೂಲ ವ್ಯಾಧಿ ನಿವಾರಣೆಯ ಕಳಮೆ, ನರರೋಗ ನಿವಾರಣೆಯ ನವರ, ವಿಶೇಷ ಪರಿಮಳದ ಗಂಧಸಾಲೆ, ಗಂಗಡಲೆ, ಜೀರಿಗೆಸಾಲೆ, ಕುಂಕಮಶಾಲಿ, ಬಾಸ್ಮತಿ, ತೆಂಗಿನ ಹೂವಿನಂತೆ ಅರಳುವ ನಾರಿಕೇಳ, ಬೆಂದಾಗ ಬಲಿಯುವ ಎಚ್ಎಂಟಿ, ಕರ್ಕಾಟಕ ಮಾಸದಲ್ಲಿ ಉಣ್ಣುವ ನವರ ಹಾಗೂ ರಾಜಭೋಗ, ಮೈಸೂರು ಮಲ್ಲಿಗೆ, ಜಾಸ್ಮಿನ್, ಕರಿಜೆಡ್ಡು, ಜಿಡ್ಡುಹಳ್ಳಿಗ, ಸುಗ್ಗಿಕಯಮೆ ಮೊದಲಾದ ವೈವಿಧ್ಯಮಯ ಬಹುತೇಕ ಎಲ್ಲಾ ರಾಜ್ಯಗಳ ದೇಸಿ ಹಾಗೂ ವಿದೇಶೀ ತಳಿಗಳನ್ನು ಬೆಳೆಸಿ ಸಂರಕ್ಷಿಸಿದ್ದಾರೆ.

ತೆನೆ ಕೊಯ್ಲು ಮತ್ತು ಬೀಜಗಳ ಸಂಗ್ರಹ :
ಸತ್ಯನಾರಾಯಣ ಅವರು ಬೆಳೆಸಿದ ಹಲವಾರು ತಳಿಗಳು ಬಲಿತು ಕಟಾವಿನ ಹಂತದಲ್ಲಿದೆ.ಬಲಿತ ತೆನೆಗಳನ್ನು ಎಚ್ಚರಿಕೆಯಿಂದ ಕಟಾವು ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ, ಕಾಳು ಬೇರ್ಪಡಿಸಿ ಪೇಪರ್ ಕವರ್‌ನಲ್ಲಿ ಸಂರಕ್ಷಿಸಿಡುತ್ತಾರೆ.ಇದೇ ಕಾಳುಗಳನ್ನೇ ಮುಂದಿನ ಬಿತ್ತನೆಗೆ ಉಪಯೋಗಿಸುತ್ತಾರೆ.ಪ್ರತಿ ಚೀಲದಿಂದ 100 ರಿಂದ 150 ಗ್ರಾಂ ಉತ್ತಮ ಭತ್ತದ ಬೀಜಗಳು ದೊರೆಯುತ್ತವೆ.ಈ ವಿಧಾನದಿಂದ ಕಡಿಮೆ ಸ್ಥಳದಲ್ಲಿ ಹೆಚ್ಚು ತಳಿಗಳನ್ನು ಬೆಳೆಸಬಹುದು ಎನ್ನುತ್ತಾರೆ.
ಬೆಳ್ಳೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್ ಅವರ ಮೂಲಕ ಕೃಷಿ ಸಂಶೋಧಕರು, ಕೃಷಿ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ಪರಿಚಯ ಬೆಳೆಸಿದ ಸತ್ಯನಾರಾಯಣ ಅವರಿಗೆ ಶಿವಮೊಗ್ಗದ ಸಾವಯವ ವಿಶ್ವವಿದ್ಯಾಲಯದ ಡಾ.ಉಲ್ಲಾಸ ಎಂ.ವೈ.ವಿವಿಧ ರಾಜ್ಯಗಳ ಭತ್ತದ ಮೂಲ ತಳಿಗಳನ್ನು ನೀಡಿ ಸಹಕರಿಸುತ್ತಿದ್ದಾರೆ.ಮಂಗಳೂರು ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಡಾ.ಮಲ್ಲಿಕಾರ್ಜುನ ವೈಜ್ಞಾನಿಕ ಮಾಹಿತಿ ನೀಡುತ್ತಿದ್ದಾರೆ.

ಸತ್ಯನಾರಾಯಣರ ಬಗ್ಗೆ ಒಂದಿಷ್ಟು …

ಬೆಳೇರಿಯ ದಿ.ಕುಂಞಿ ರಾಮನ್ ಮಣಿಯಾಣಿ ಮತ್ತು ಜಾನಕಿಯ ದಂಪತಿ ಪುತ್ರ ಸತ್ಯನಾರಾಯಣ ಅವರು ಸಾಹಿತ್ಯ, ಬರಹ, ವ್ಯಂಗ್ಯ ಚಿತ್ರ, ಜೇನು ಸಾಕಣೆ ಮತ್ತು ಗಿಡಗಳ ಕಸಿಕಟ್ಟುವಿಕೆಯಲ್ಲೂ ನಿಪುಣರಾಗಿದ್ದಾರೆ.ಭತ್ತದ ತಳಿ ಸಂರಕ್ಷಣೆಯ ಸರಣಿ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ.ಮಂಗಳೂರು ಆಕಾಶವಾಣಿ ಕೃಷಿರಂಗ ವಿಭಾಗದ ಸರಣಿ ಕಾರ್ಯಕ್ರಮದಲ್ಲಿ ಬಹುಮಾನ ಪಡೆದಿದ್ದಾರೆ.ದಶಕಗಳ ಭತ್ತದ ತಳಿ ಸಂರಕ್ಷಣೆ ಆರ್ಥಿಕ ಲಾಭ ತರದಿದ್ದರೂ ಬೆಲೆಕಟ್ಟಲಾಗದ ಜೀವನದ ಭಾಗವಾಗಿದೆ.ಪತ್ನಿ ಜಯಶ್ರೀ, ಪುತ್ರಿಯರು ನವ್ಯಶ್ರೀ, ಗ್ರೀಷ್ಮ, ಪುತ್ರ ಅಭಿನವ್.

ತಳಿ ಅಭಿವೃದ್ದಿಗೆ ಬೀಜ ನೀಡಲು ಸಿದ್ದ :
ಇಂತಹ ಅಪೂರ್ವ ತಳಿಗಳ ಸಂಗ್ರಹ ತನ್ನ ಬಳಿಯೇ ಇರಬೇಕು ಎನ್ನುವ ಸ್ವಾರ್ಥವೂ ಅವರ ಬಳಿ ಇಲ್ಲ . ತಾನು ಕಷ್ಟಪಟ್ಟು ಸಂಗ್ರಹಿಸಿದನ್ನು ಬೇರೆ ಯಾರದರೂ ಆಸಕ್ತರು ಕೇಳಿದರೆ ಕೊಡಲು ಅವರು ಸಿದ್ದ . ಈ ರೀತಿ ಅವರು ವಯನಾಡು, ಪಟ್ಟಾಂಬಿ, ಪಡನ್ನಕಾಡ್, ಮಂಗಳೂರು ಕೆವಿಕೆ, ಶಿವಮೊಗ್ಗ ಸಾವಯವ ವಿವಿ, ಮೈಸೂರು ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರಗಳಿಗೆ ಭತ್ತದ ತಳಿಗಳನ್ನು ನೀಡಿದ್ದಾರೆ. ಹಂಚುವಷ್ಟು ಬೀಜಗಳ ದಾಸ್ತಾನು ಅವರಲ್ಲಿ ಇಲ್ಲದಿದ್ದರೂ, ತಳಿ ಅಭಿವೃದ್ಧಿಗೆ ಬೇಕಾದ ಮುಷ್ಟಿಯಷ್ಟು ಬೀಜಗಳನ್ನು ನೀಡಲು ಸಿದ್ಧರಿದ್ದಾರೆ.

‘ಅನ್ನದ ಬಟ್ಟಲುಗಳಂತಿದ್ದ ಗದ್ದೆಗಳು ಇಂದು ವಾಣಿಜ್ಯ ಬೆಳೆಗಳತ್ತ ವಾಲುತ್ತಿದೆ.ಕೃಷಿಕರು ಲಾಭದ ಧೃಷ್ಟಿಯಲ್ಲಿ ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.ಇದು ಆಹಾರ ಪದಾರ್ಥಗಳ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತಿದೆ’
-ಸತ್ಯನಾರಾಯಣ ಬೆಳೇರಿ
ಸತ್ಯನಾರಾಯಣ ಅವರ ಮನೆಗೆ ಭೇಟಿ ನೀಡಿ ಅವರ ತಳಿ ಸಂರಕ್ಷಣೆ ಅಭಿಯಾನದ ಅವಲೋಕನ ನಡೆಸಿದ್ದೇನೆ. ನೂರಾರು ತಳಿಗಳ ಬಿತ್ತನೆ ನಡೆಸಿ, ಅದನ್ನು ಸಂರಕ್ಷಿಸಿ, ಆವರ್ತನ ರೀತಿ ಕೊಯ್ಲು ನಡೆಸಿ, ಭತ್ತ ಸಂಗ್ರಹಿಸಿ ಮತ್ತೆ ಬಿತ್ತನೆ ನಡೆಸುವ ಪ್ರಕ್ರಿಯೆ ಅತ್ಯದ್ಭುತ.ಹನ್ನೆರಡು ವರ್ಷಗಳಿಂದ ತಳಿ ಸಂರಕ್ಷಣೆಯ ಪಣ ತೊಟ್ಟಿರುವ ಅವರ ಸಾಹಸ ಹಾಗೂ ತಾಳ್ಮೆಯ ಭಗೀರಥ ಪ್ರಯತ್ನ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗಲಿ’
ವಿಶ್ವನಾಥ ಬೈಲಮೂಲೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,
ಕಿನ್ಯಾ ಗ್ರಾ.ಪಂ.ಮಂಗಳೂರು



