ಬೆಂಗಳೂರು: ವಿರೋಧ ಪಕ್ಷ ಕಾಂಗ್ರೆಸ್ ನ 40% ಕಮಿಷನ್ ಬೆನ್ನಲ್ಲೇ ಟೆಂಡರ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿ 40 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಟ್ರಾಪ್ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ (MLA Son Arrest). ಮಾಡಾಳ್ ವಿರೂಪಾಕ್ಷಪ್ಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ.
ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್‌ಗಾಗಿ KSDL ಅಧ್ಯಕ್ಷರ ಪರವಾಗಿ ಹಣ ಸ್ವೀಕರಿಸುವಾಗ ಪ್ರಶಾಂತ್ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ವರದಿಯ ಪ್ರಕಾರ 81 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, 40 ಲಕ್ಷ ರೂಪಾಯಿ ಪಡೆದುಕೊಳ್ಳುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್(ಕೆಎಸ್‌ಡಿಎಲ್) ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್‌ಗಾಗಿ ಕೆಎಸ್‌ಡಿಎಲ್ ಅಧ್ಯಕ್ಷರ ( ಮಾಡಾಳು ವಿರೂಪಾಕ್ಷಪ್ಪ) ಪರವಾಗಿ ಗುತ್ತಿಗೆದಾರರೊಬ್ಬರಿಗೆ 81ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಬಳಿಕ 40 ಲಕ್ಷ ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿ ಪ್ರಶಾಂತ್ ಮಾಡಾಳು ಅವರನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಬಳಿಕ ಕಚೇರಿ ಪರಿಶೀಲನೆ ವೇಳೆ ಒಟ್ಟು 1.62 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಮನೆಯಲ್ಲಿ ಪರಿಶೀಲಿಸಿದಾಗ 6 ಕೋಟಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹಣದ ಕಂತೆ ಕಂಡು ದಾಳಿ ಮಾಡಿದ ಅಧಿಕಾರಿಗಳಿಗೆ ಅಚ್ಚರಿಯಾಗಿದೆ. ಹಣವನ್ನು ಎಣಿಕೆ ಮಾಡುವ ದೃಶ್ಯ ವೈರಲ್ ಆಗಿದೆ.
ಕಾರ್ಯಾಚರಣೆ ಹೇಗಿತ್ತು? ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿರುವ ಪ್ರಶಾಂತ್, ಕೆಎಸ್‌ಡಿಎಲ್‌ನ ಕಚ್ಚಾ ವಸ್ತುಗಳ ಪೂರೈಕೆ ಮಾಡಲು ಟೆಂಟರ್ ನೀಡಲು ಗುತ್ತಿಗೆದಾರರೊಬ್ಬರಿಗೆ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿರುವ ತಮ್ಮ ತಂದೆ ಮಾಡಾಳು ವಿರೂಪಾಕ್ಷಪ್ಪ ಅವರ ಪರವಾಗಿ 81 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟು 40 ಲಕ್ಷ ರೂ.ಲಂಚವನ್ನು ನಗದು ರೂಪದಲ್ಲಿ ಪಡೆಯಲು ಮುಂದಾಗಿದ್ದರು. ಲಂಚ ನೀಡಲು ಇಚ್ಛಿಸದ ಗುತ್ತಿಗೆದಾರ ಈ ಸಂಬಂಧ ಲೋಕಾಯುಕ್ತ ಬೆಂಗಳೂರು ನಗರ ಘಟಕದ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತದ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ 40 ಲಕ್ಷ ನಗದು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಟ್ರಾಪ್ ಕಾರ್ಯಾಚರಣೆ ವೇಳೆ ಐವರು ಬಲೆಗೆ ಬಿದ್ದಿದ್ದು ಸಿಕ್ಕಿರುವ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಶ್ಯಪ್ ಕಂಪನಿಯ ಮೂವರೊಂದಿಗೆ 40 ಲಕ್ಷ ರೂ. ತಂದಿದ್ದರು. ಸದ್ಯ ಪ್ರಶಾಂತ್, ಆತನ ಅಕೌಟೆಂಟ್ ಹಾಗೂ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದು, ಐವರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಶಾಸಕರ ಮನೆಯ ಮೇಲೆಯೂ ದಾಳಿ..! ಇತ್ತ ಪುತ್ರ ಪ್ರಶಾಂತ್ ಅವರ ಬಂಧನವಾಗುತ್ತಿದಂತೆ ಅತ್ತ ಡಾಲರ್ಸ್ ಕಾಲನಿಯಲ್ಲಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮನೆಯ ಮೇಲೆಯೂ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ದಾಳಿಯ ವೇಳೆ ಒಟ್ಟು 1.62 ಕೋಟಿ ರೂ. ಸಿಕ್ಕಿದೆ. ಪ್ರಶಾಂತ್ ಅವರು 40 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಟ್ರ್ಯಾಪ್ ಮಾಡಿದ 40 ಲಕ್ಷ ರೂ. ನಗದು ಹಾಗೂ ಕಚೇರಿ ಪರಿಶೀಲನೆ ವೇಳೆ ಒಟ್ಟು 1.62 ಕೋಟಿ ನಗದು ಪತ್ತೆಯಾಗಿದೆ. ಈ ಸಂಬಂಧ ಹಲವು ಸ್ಥಳಗಳ ಮೇಲೆ ಮಾಡಲಾಗುತ್ತಿದೆ. ಕಚೇರಿಯಲ್ಲಿ ಸಿಕ್ಕಿರುವ ಹಣದ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಐಜಿ ಸುಬ್ರಮಣ್ಯರಾವ್ ಹೇಳಿದ್ದಾರೆ.