ಅಗರ್ತಲಾ: ಆಡಳಿತಾರೂಢ ಬಿಜೆಪಿ ತ್ರಿಪುರಾದಲ್ಲಿ ಸತತ ಎರಡನೇ ಅವಧಿಗೆ ಸರ್ಕಾರ ರಚಿಸುವ ಸಾಧ್ಯತೆಯಿದೆ. 60 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ 28 ಸ್ಥಾನಗಳನ್ನು ಗೆದ್ದಿದ್ದು, ಇತರ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈಶಾನ್ಯ ರಾಜ್ಯದ 21 ಸ್ಥಳಗಳಲ್ಲಿ 60 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ.
ಇತ್ತೀಚಿನ ಲಭ್ಯವಾಗಿರುವ ಟ್ರೆಂಡ್ ಮತ್ತು ಫಲಿತಾಂಶಗಳ ಪ್ರಕಟಣೆ ಪ್ರಕಾರ, ಇದೇ ಮೊದಲ ಬಾರಿಗೆ 42 ಸ್ಥಾನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬುಡಕಟ್ಟು ಮೂಲದ ತಿಪ್ರಾ ಮೋತಾ ಪಕ್ಷ (ಟಿಎಂಪಿ) 12 ಸ್ಥಾನಗಳಲ್ಲಿ ವಿಜಯಿಯಾಗಿದ್ದು ಇನ್ನೊಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಮತ್ತು ಸಿಪಿಐ(ಎಂ) 9 ಸ್ಥಾನಗಳಲ್ಲಿ ಗೆದ್ದು 2 ಸ್ಥಾನಗಲಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ 2 ಸ್ಥಾನಗಳಲ್ಲಿ ಗೆದ್ದಿದ್ದು 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ದಕ್ಷಿಣ ತ್ರಿಪುರಾದ ಜೋಲೈಬರಿ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಅಮರಪುರ, ಕಮಲಸಾಗರ, ಮೋಹನಪುರ ಮತ್ತು ಸಂತೀರ್ ಬಜಾರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ತ್ರಿಪುರಾ ಮುಖ್ಯಮಂತ್ರಿ ಮತ್ತು ಬಿಜೆಪಿ ಅಭ್ಯರ್ಥಿ ಮಾಣಿಕ್ ಸಾಹಾ ಅವರು ಟೌನ್ ಬೋರ್ಡೋವಾಲಿ ಕ್ಷೇತ್ರದಲ್ಲಿ, ಉಪಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಚರಿಲಂ ಕ್ಷೇತ್ರದಲ್ಲಿ, ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ಧನ್‌ಪುರ್ ಕ್ಷೇತ್ರದಲ್ಲಿ, ರಾಮಪಾದ ಜಮಾತಿಯಾ ಬಾಗ್ಮಾದಲ್ಲಿ, ಸುಶಾಂತ ಚೌಧರಿ ಅವರು ಮಜ್ಲಿಷ್‌ಪುರ, ರತನ್ ಚಕ್ರವರ್ತಿ ಖಯೇರ್‌ಪುರದಲ್ಲಿ, ರಾಮನಗರದಲ್ಲಿ ಸೂರಜಿತ್ ದತ್ತಾ ಮತ್ತು ಸುರ್ಜ್ಯಮಣಿನಗರದಲ್ಲಿ ರಾಮ್ ಪ್ರಸಾದ್ ಪಾಲ್ ಮುನ್ನಡೆ ಸಾಧಿಸಿದ್ದಾರೆ.
ಪ್ರತಾಪಗಢ, ಬರ್ಜಾಲಾ, ಬಮುಟಿಯಾ, ಬೆಲೋನಿಯಾ, ಹೃಷಮುಖ್, ಸಬ್ರೂಮ್, ಸೋನಾಮುರಾ ಸೇರಿದಂತೆ 11 ಸ್ಥಾನಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಪ್ರಮುಖ ಸಿಪಿಐ(ಎಂ) ಅಭ್ಯರ್ಥಿಗಳಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ (ಸಬ್ರೂಮ್ ಸ್ಥಾನ), ಸುದೀಪ್ ಸರ್ಕಾರ್ (ಬರ್ಜಾಲ), ದೀಪಂಕರ್ ಸೇನ್ (ಬೆಲೋನಿಯಾ), ಶ್ಯಾಮಲ್ ಚಕ್ರವರ್ತಿ (ಸೋನಮುರಾ) ಪ್ರಮುಖರಾಗಿದ್ದಾರೆ.
ಫೆಬ್ರುವರಿ 16 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳೊಂದಿಗೆ ಸೀಟು ಹಂಚಿಕೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷವು ಅಗರ್ತಲಾ, ಬನಮಾಲಿಪುರ ಮತ್ತು ಕೈಲಾಶಹರ್ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಅಗರ್ತಲಾ ಕ್ಷೇತ್ರದಲ್ಲಿ ಸುದೀಪ್ ರಾಯ್ ಬರ್ಮನ್, ಬನಮಾಲಿಪುರ ಕ್ಷೇತ್ರದಲ್ಲಿ ಗೋಪಾಲ್ ಚಂದ್ರ ರಾಯ್ ಮತ್ತು ಕೈಲಾಶಹರ್ ಕ್ಷೇತ್ರದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿರಾಜಿತ್ ಸಿನ್ಹಾ ಮುನ್ನಡೆಯಲ್ಲಿದ್ದಾರೆ.
60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ರಂದು ನಡೆದ ಚುನಾವಣೆಯಲ್ಲಿ 28.14 ಲಕ್ಷ ಮತದಾರರಲ್ಲಿ 89.95 ಪ್ರತಿಶತ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 31 ಮಹಿಳೆಯರು ಸೇರಿದಂತೆ 259 ಅಭ್ಯರ್ಥಿಗಳು ಕಣದಲ್ಲಿದ್ದರು.