ಭಾರತದ ಅತಿ ಹಿರಿಯ ಹಾಗೂ ಸರಿ ಸುಮಾರು 65 ವರ್ಷಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗುತ್ತಿದೆ. 2014ರಲ್ಲಿ ಮೋದಿ ನೇತ್ರತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್ಸಿನ ಗ್ರಾಫ್ ಕೆಳಮುಖವಾಗಿ ಸಾಗಲು ಆರಂಭೀಸಿತ್ತು. ಕಳೆದೆರರಡು ಲೋಕಸಭೆ ಚುನಾವಣೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಅಲಂಕರಿಸಲು ಬೇಕಾದಷ್ಟು ಸಂಸತ್ ಸದಸ್ಯರನ್ನು ಗೆಲ್ಲಿಸಿ ಕೊಂಡು ಬರಲು ಪಕ್ಷ ವಿಫಲವಾಗಿತ್ತು. ಅಲ್ಲದೇ ಹಲವು ರಾಜ್ಯಗಳಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು.
2018ರ ಅಂತ್ಯದಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಗೆದ್ದದ್ದೆ ಕೊನೆ, ಬಳಿಕ ಒಂದೇ ಒಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಗೆಲ್ಲಲು ಕೂಡ ಪಕ್ಷ ವಿಫಲವಾಗಿತ್ತು. ಸರಿ ಸುಮಾರು 4 ವರ್ಷಗಳ ಬಳಿಕ ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಅಧಿಕಾರ ಪಡೆದು ಗೆಲುವಿನ ಅಜ್ಞಾತವಾಸದಿಂದ ಹೊರ ಬಂದಿತ್ತು. ಆದರೇ ಮತ್ತೆ ಈಶಾನ್ಯ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಮಕಾಡೆ ಮಲಗಿದೆ.
ಪಕ್ಷವನ್ನು ಹೀನಾಯ ಸ್ಥಿತಿಯಿಂದ ಮೇಲಕ್ಕೆತ್ತಲು ಹಲವು ದಶಕಗಳ ಬಳಿಕ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ಹೊಸ ಸಾರಥಿಯನ್ನು ಅದು ಆಯ್ಕೆ ಮಾಡಿತ್ತು. ಇದರ ಮಧ್ಯೆ ಮಾಜಿ ಅಧ್ಯಕ್ಷ , ನೆಹರು ಕುಟುಂಬದ ಕುಡಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ನಡೆಸಿತ್ತು. ಸುಮಾರು 3800 ಕಿಮೀ ಉದ್ದದ ಪಾದಯಾತ್ರೆಯು ಪಕ್ಷದ ಅದೃಷ್ಟವನ್ನು ಬದಲಿಸಲು ಸಾಧ್ಯವಾಗಿಲ್ಲ .
ಭಾರತ್ ಜೋಡೊ ಪಾದಾಯಾತ್ರೆ ಬಳಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಒಂದಷ್ಟು ಲಾಭ ವಾಗಬಹುದು ಎಂದು ಹೇಳಲಾಗಿತ್ತು. ಆದರೆ ಗುರುವಾರ ಪ್ರಕಟಗೊಂಡ 3 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇದನ್ನು ಹುಸಿಗೊಳಿಸಿದೆ. ಮೇಘಾಲಯದಲ್ಲಿ 5 ಸ್ಥಾನ ಹಾಗೂ ತ್ರಿಪುರದಲ್ಲಿ 2 ಸ್ಥಾನಗಳನ್ನು ಗೆದ್ದಿರುವಕಾಂಗ್ರೆಸ್,ನಾಗಾಲ್ಯಾಂಡ್‌ನಲ್ಲಿ ಖಾತೆ ತೆರೆಯಲು ವಿಫಲವಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಒಟ್ಟು 180 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 7 ಸ್ಥಾನಗಳಲ್ಲಿ ಮಾತ್ರ ಜಯಗಳಿಸುವ ಮೂಲಕ ಸೋಲಿನ ಯಾತ್ರೆ ಮುಂದುವರೆಸಿದೆ. ತ್ರಿಪುರದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆರಿದರೇ, ನಾಗಲ್ಯಾಂಡ್ ನಲ್ಲಿ ಬಿಜೆಪಿ ಮತ್ತು ಎನ್ ಡಿಪಿಪಿ ಮೈತ್ರಿಕೂಟ ನಿರಾಯಾಸವಾಗಿ ಅಧಿಕಾರದ ಗದ್ದುಗೆ ಏರಿದೆ. ಮೇಘಾಲಯದಲ್ಲಿ ಎನ್ ಪಿಪಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದು, ಬಹುಮತಕ್ಕೆ ಒಂದಷ್ಟು ಸೀಟು ಕೊರತೆ ಬಿದ್ದಿದೆ. ಬಿಜೆಪಿ ಹಾಗೂ ಪಕ್ಷೇತರರ ಜತೆ ಸೇರಿ ಅದು ಸರಕಾರ ರಚಿಸುವ ಸಾಧ್ಯತೆ ಇದೆ.
ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ, ಕ್ರಿಶ್ಚಿಯನ್ ಸಮುದಾಯದ ಬಾಹುಳ್ಯವಿರುವ ಈಶಾನ್ಯ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಳ್ಳುವತ್ತ ಸಾಗಿದೆ .