ಅಪರಾಧ
Vitla-ವಿಟ್ಲ: ಅಕ್ರಮ ಜಾನುವಾರು ಸಾಗಾಟ: ಪಿಕಪ್ ವಾಹನ ವಶಕ್ಕೆ, ನಾಲ್ವರ ವಿರುದ್ಧ ಕೇಸ್
ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನ.10ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ .ಪಿ. ಅಬ್ದುಲ್ಲಾ, ಸುಬ್ರಹ್ಮಣ್ಯ, ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಟ್ಲ: ಯಾವುದೇ ಪರವಾನಗಿ ಪಡೆಯದೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದ ಘಟನೆ ನ.10ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಪಾದೆಕಲ್ಲು ಎಂಬಲ್ಲಿ ನಡೆದಿದೆ.
ವಿಟ್ಲ ಪೊಲೀಸರು ಪಾದೆಕಲ್ಲು ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ಮಾರ್ಗವಾಗಿ ಬಂದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ವಾಹನದ ಚಾಲಕ ಬಂಟ್ವಾಳ ತಾಲೂಕಿನ ಕರೋಪಾಡಿ ನಿವಾಸಿ ಒ.ಪಿ. ಅಬ್ದುಲ್ಲಾ ಹಾಗೂ ವಾಹನದಲ್ಲಿದ್ದ ಸುಬ್ರಹ್ಮಣ್ಯ ಅವರನ್ನು ವಿಚಾರಿಸಿದಾಗ, ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಗಿ ಪಡೆದಿರಲಿಲ್ಲ ಎಂಬುದು ತಿಳಿದುಬಂದಿದೆ.
ಇದೇ ವೇಳೆ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದ್ದ ಉಷಾ ಎಸ್. ಶೆಟ್ಟಿ ಹಾಗೂ ಗುರುತೇಜ ಅವರ ಸೂಚನೆಯ ಮೇರೆಗೆ ಜಾನುವಾರುಗಳನ್ನು ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ
Hejamadi-ಹೆಜಮಾಡಿ: ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ: ಪಿಕ್‌ಅಪ್, ಕಾರು ಸಹಿತ ನಾಲ್ವರು ಅರೆಸ್ಟ್
ಗೋವಾದಿಂದ ಯಾವುದೇ ಪರವಾನಗಿ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬುಧವಾರ (ನ. 11) ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯ ಸಾಗಾಟಕ್ಕೆ ಬಳಸಿದ್ದ ಪಿಕ್‌ಅಪ್ ವಾಹನ ಹಾಗೂ ಎಸ್ಕಾರ್ಟ್ ಮಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪಡುಬಿದ್ರಿ: ಗೋವಾದಿಂದ ಯಾವುದೇ ಪರವಾನಗಿ ಇಲ್ಲದೆ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಬುಧವಾರ (ನ. 11) ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿ ಟೋಲ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮದ್ಯ ಸಾಗಾಟಕ್ಕೆ ಬಳಸಿದ್ದ ಪಿಕ್‌ಅಪ್ ವಾಹನ ಹಾಗೂ ಎಸ್ಕಾರ್ಟ್ ಮಾಡುತ್ತಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕಾರವಾರದ ವಿನಯ್ (47), ಗಜಾನನ ಮಹಾಬಲೇಶ್ವರ ನಾಯ್ಕ (45), ಸುಜಿತ್ ತಾಳೆಕೆರೆ (25) ಮತ್ತು ಲಾರೆನ್ಸ್ ಥಾಮಸ್ ಮೆಂಡೋನ್ಸ್ (49) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 2,583 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹14.35 ಲಕ್ಷವಾಗಿದೆ. ಮದ್ಯ ಸಾಗಾಟಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ಮಹೀಂದ್ರಾ ಪಿಕ್‌ಅಪ್ ವಾಹನ ಹಾಗೂ ₹3 ಲಕ್ಷ ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಸೇರಿದಂತೆ ಒಟ್ಟು ₹22.35 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಙ್ಕತ್ ಆಲಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಹೆಜಮಾಡಿ ಟೋಲ್ ಬಳಿ ದಾಳಿ ನಡೆಸಲಾಯಿತು. ಈ ವೇಳೆ ಮದ್ಯ ಸಾಗಾಟ ಮಾಡುತ್ತಿದ್ದ ವಾಹನ ಮತ್ತು ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಕಾರನ್ನು ತಡೆದು ಪರಿಶೀಲಿಸಿದಾಗ ಅಕ್ರಮ ಮದ್ಯ ಸಾಗಾಟ ಬೆಳಕಿಗೆ ಬಂದಿದೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರಂತೆ ಅಬಕಾರಿ ಕಾಯ್ದೆಯ ಕಲಂ 32, 34, 38(ಎ) ಹಾಗೂ ಬಿಎನ್‌ಎಸ್ ಕಲಂ 336(4)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿ ವಿನಯ್ ವಿರುದ್ಧ ಈ ಹಿಂದೆಯೂ ಕಾರವಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಅಙ್ಕತ್ ಆಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪಡುಬಿದ್ರಿ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಅಪರಾಧ
ಪುತ್ತೂರು ಮೆಸ್ಕಾಂ ಭ್ರಷ್ಟಚಾರದ ಕೂಪ- ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ಆರೋಪ! ; ‘ಜನರಿಗೆ ಬೇಕಿರುವುದು ಬ್ಯಾನರ್‌ಗಳಲ್ಲ, ನೈಜ ಅಭಿವೃದ್ಧಿ’ – ಅಶೋಕ್ ರೈಗೆ ಬೂಡಿಯಾರ್ ತಿರುಗೇಟು

ಪುತ್ತೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮೂರೂವರೆ ವರ್ಷದ ಆಡಳಿತ ಜನವಿರೋಧಿ, ರೈತವಿರೋಧಿ ಹಾಗೂ ಭ್ರಷ್ಟಾಚಾರದಿಂದ ಕೂಡಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಪುತ್ತೂರಿನಲ್ಲೂ ಅಭಿವೃದ್ಧಿಯ ಹೆಸರಿನಲ್ಲಿ ಪ್ರಚಾರ ನಡೆಯುತ್ತಿದೆಯೇ ಹೊರತು ಜನರಿಗೆ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ ಎಂದು ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ಬೂಡಿಯಾರ್ ರಾಜ್ಯ ಸರ್ಕಾರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಎಂಬ ಘೋಷಣೆಯಡಿ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆ ಮತ್ತು ಪಾದಯಾತ್ರೆಗಳ ಉದ್ದೇಶವನ್ನು ವಿವರಿಸುವ ಜೊತೆಗೆ ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳ ವಿರುದ್ಧ ಆರೋಪಗಳ ಸುರಿಮಳೆಗೈದರು.
ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದ ಸರ್ಕಾರ, ಜನರಿಗೆ ಕೊಟ್ಟಿದ್ದೇನು?
ಮೂರೂವರೆ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಕ ಅನುದಾನ ನೀಡಲು ವಿಫಲವಾಗಿದೆ. ಮೂರು ಬಾರಿ ಬಸ್ ಪ್ರಯಾಣ ದರ ಏರಿಕೆ ಮಾಡಿರುವ ಸರ್ಕಾರ, ಒಂದು ಕಡೆ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದರೆ ಮತ್ತೊಂದೆಡೆ ಜನರ ಮೇಲೆ ದರ ಏರಿಕೆಯ ಹೊರೆ ಹಾಕಿದೆ. ಸಾರಿಗೆ ಸಂಸ್ಥೆಗಳಲ್ಲಿ ಬಸ್ ದುರಸ್ತಿ ಹಾಗೂ ಡೀಸೆಲ್ ಖರೀದಿಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
ಹಾಲಿನ ದರ ಹೆಚ್ಚಳದ ವಿಚಾರದಲ್ಲೂ ರೈತರಿಗೆ ನ್ಯಾಯ ಸಿಕ್ಕಿಲ್ಲ. ಹಾಲಿನ ದರ ಹೆಚ್ಚಳದ ಮೊತ್ತದಲ್ಲಿ ಒಂದು ರೂಪಾಯಿಯನ್ನು ಕೆಎಂಎಫ್‌ಗೆ ಮೀಸಲಿಡಲಾಗಿದೆ. ಲಾಭದಲ್ಲಿರುವ ಸಂಸ್ಥೆಗೆ ಹಣ ನೀಡುವ ಬದಲು ರೈತರಿಗೆ ಹೆಚ್ಚುವರಿ ಹಣ ನೀಡಬೇಕಿತ್ತು. ರೈತರಿಗೆ ಕನಿಷ್ಠ ₹10ರಿಂದ ₹12ರಷ್ಟು ಹೆಚ್ಚುವರಿ ಲಾಭ ಸಿಗುವಂತೆ ಮಾಡಿದ್ದರೆ ನಾವು ಸ್ವಾಗತಿಸುತ್ತಿದ್ದೆವು ಎಂದರು.
ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆ ನಡೆಸುವ ಕೆಡಿಪಿ ಸಭೆ ಪುತ್ತೂರಿನಲ್ಲಿ ಮೂರು ತಿಂಗಳಿಗೊಮ್ಮೆ ನಡೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಇಲಾಖೆಗಳ ಕಾರ್ಯವೈಖರಿ ಹಾಗೂ ಅಭಿವೃದ್ಧಿ ಬಗ್ಗೆ ಮಾಹಿತಿಯಿಲ್ಲದಂತಾಗಿದೆ ಎಂದು ಆರೋಪಿಸಿದರು
ಪುತ್ತೂರು ಮೆಸ್ಕಾಂ ಟೆಂಡರ್‌ನಲ್ಲಿ ಅಧಿಕಾರಿಯೊಬ್ಬರ ಪತ್ನಿಯ ಹೆಸರಿನಲ್ಲೂ ಕಾಮಗಾರಿ !
ಪುತ್ತೂರು ಮೆಸ್ಕಾಂ ಇಲಾಖೆಯಲ್ಲಿನ ಟೆಂಡರ್ ಪ್ರಕ್ರಿಯೆ ಬಗ್ಗೆ ಗಂಭೀರ ಆರೋಪ ಮಾಡಿದ ಬೂಡಿಯಾರ್, ₹5 ಲಕ್ಷದೊಳಗಿನ ಟೆಂಡರ್‌ಗಳನ್ನು ಕೇವಲ ನಾಲ್ಕು ಜನರ ಸುತ್ತ ಸೀಮಿತಗೊಳಿಸಲಾಗಿದೆ. ಇದರಲ್ಲಿ ಅಧಿಕಾರಿಯೊಬ್ಬರ ಪತ್ನಿಯ ಹೆಸರಿನಲ್ಲೂ ಕಾಮಗಾರಿ ನೀಡಿರುವುದನ್ನು ಗಮನಿಸಿದ್ದೇವೆ. ಈ ಕುರಿತು ಈಗಾಗಲೇ ಮಾಧ್ಯಮಗಳಲ್ಲೂ ವರದಿಯಾಗಿದೆ. ಮೆಸ್ಕಾಂ ಇಲಾಖೆ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು.
ಕಂದಾಯ ಇಲಾಖೆಯಲ್ಲೂ ಭ್ರಷ್ಟಾಚಾರದ ಆರೋಪಗಳಿದ್ದು, ಪ್ಲಾಟಿಂಗ್ ಪ್ರಕ್ರಿಯೆ ಸ್ಥಗಿತಗೊಂಡಿದೆ. ಜನಸಾಮಾನ್ಯರ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತದ ವಿರುದ್ಧವೂ ಗಂಭೀರ ಆರೋಪ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಆರೋಪಗಳನ್ನೂ ಅವರು ಪ್ರಸ್ತಾಪಿಸಿದರು. ದೇವಸ್ಥಾನದ ಸಂರಕ್ಷಣಾ ವೇದಿಕೆಯವರು ಆಡಳಿತದಲ್ಲಿನ ಲೋಪದೋಷಗಳ ಕುರಿತು ಧಾರ್ಮಿಕ ಇಲಾಖೆಗೆ ದಾಖಲೆ ಸಮೇತ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಪರಿಶೀಲನೆಯ ಬಳಿಕ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿ ಬೇರೊಬ್ಬರನ್ನು ನೇಮಿಸಿದರೂ, ಹೊಸ ಅಧಿಕಾರಿ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡದ ಪರಿಸ್ಥಿತಿ ಇದೆ ಎಂದು ಆರೋಪಿಸಿದರು.
ದೇವಸ್ಥಾನದ ಆಡಳಿತವನ್ನು ಪ್ರಶ್ನಿಸುವ ಭಕ್ತರಿಗೆ ‘ನೀವು ದೇವಸ್ಥಾನಕ್ಕೆ ಒಂದು ರೂಪಾಯಿಯನ್ನೂ ನೀಡದವರು, ಪ್ರಶ್ನಿಸಲು ನೀವ್ಯಾರು?’ ಎಂಬ ರೀತಿಯಲ್ಲಿ ಮಾತನಾಡಿರುವುದು ದರ್ಪದ ಪರಮಾವಧಿ. ಭಕ್ತರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರನ್ನು ಅವಮಾನಿಸುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಶೋಕ್ ರೈ ಅಭಿವೃದ್ಧಿಯ ಹೆಸರಿನಲ್ಲಿ ಬ್ಯಾನರ್ ರಾಜಕೀಯ ಮಾಡುತ್ತಿದ್ದಾರೆಯೇ?
ಪುತ್ತೂರು ಶಾಸಕರ ಕಾರ್ಯವೈಖರಿಯನ್ನೂ ನೇರವಾಗಿ ಟೀಕಿಸಿದ ಬೂಡಿಯಾರ್, ಕಾಮಗಾರಿ ಆರಂಭಿಸುವ ಮೊದಲೇ ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಅಭಿವೃದ್ಧಿಯ ಪ್ರಚಾರ ಪಡೆಯುವ ಪ್ರವೃತ್ತಿ ಸರಿಯಲ್ಲ ಎಂದರು.
“ಕೆಲಸ ಪೂರ್ಣಗೊಳಿಸಿದ ಬಳಿಕ ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಜನರಿಗೆ ತೋರಿಸಿ. ಕಾಮಗಾರಿ ಆರಂಭಿಸುವುದಕ್ಕೂ ಮೂರು ತಿಂಗಳು ಮೊದಲೇ ಬ್ಯಾನರ್ ಹಾಕುವುದರಿಂದ ಅಭಿವೃದ್ಧಿಯಾಗುವುದಿಲ್ಲ. ಜನರಿಗೆ ಬೇಕಾಗಿರುವುದು ಬ್ಯಾನರ್‌ಗಳಲ್ಲ, ನೈಜ ಅಭಿವೃದ್ಧಿ” ಎಂದು ಕುಟುಕಿದರು.
ಶಾಸಕರೆಂದರೆ ಎರಡು ಲಕ್ಷಕ್ಕೂ ಅಧಿಕ ಜನರ ಪ್ರತಿನಿಧಿ. ಅಧಿಕಾರ ಎಂಬುದು ಜನರ ಮೇಲೆ ಚಲಾಯಿಸುವ ಹಕ್ಕಲ್ಲ, ಜನಸೇವೆ ಮಾಡುವ ಸೌಭಾಗ್ಯ. ರಾಜಕೀಯ ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಜವಾಬ್ದಾರಿಯುತ ಪದಾಧಿಕಾರಿಗಳನ್ನು ಏಕವಚನದಲ್ಲಿ ಮಾತನಾಡುವುದು ಶಾಸಕರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಚುನಾವಣೆ ನಡೆಸಲು ಸರ್ಕಾರಕ್ಕೆ ಧೈರ್ಯವಿಲ್ಲವೇ?
ಗ್ರಾಮ ಪಂಚಾಯಿತಿ, ನಗರಸಭೆ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸದೆ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳ ಮೂಲಕವೇ ಆಡಳಿತ ನಡೆಸಲಾಗುತ್ತಿದೆ. ಭೂ ನ್ಯಾಯಮಂಡಳಿ ಸಭೆಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆಯೇ ದುರ್ಬಲವಾಗಿದೆ. ಆದಷ್ಟು ಬೇಗ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿ ಜನಪ್ರತಿನಿಧಿಗಳಿಗೆ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.
‘ಬಿಜೆಪಿ ಮೌನವಾಗಿದೆ ಎಂದು ಭಾವಿಸಬೇಡಿ’
ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮೌನವಾಗಿ ಕುಳಿತಿದ್ದಾರೆ ಎಂದು ಯಾರೂ ಭಾವಿಸಬಾರದು. ಸರ್ಕಾರದ ವೈಫಲ್ಯಗಳು ಹಾಗೂ ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ರಾಜ್ಯಾದ್ಯಂತ ನಡೆಯುತ್ತಿರುವ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತಾಲೂಕು ಹಾಗೂ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಪುತ್ತೂರಿನಲ್ಲೂ ಬಿಜೆಪಿ ಮತ್ತೆ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿರೂಪಾಕ್ಷ ಮಚ್ಚಿಮಲೆ, ನಿತಿಶ್ ಶಾಂತಿವನ, ಹರಿಪ್ರಸಾದ್, ನಿರಂಜನ್ ಉಪಸ್ಥಿತರಿದ್ದರು.
ಅಂತರ ರಾಜ್ಯ
Jammu and Kashmir-ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರರ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖ್ರಾನ್ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಶಿಬಿರದ ಸಮೀಪ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅಖ್ರಾನ್ ಪ್ರದೇಶದಲ್ಲಿರುವ ಸಿಆರ್‌ಪಿಎಫ್ ಶಿಬಿರದ ಸಮೀಪ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಸಮೀಪದ ಅಖ್ರಾನ್‌ನಲ್ಲಿ ನ.11ರ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೋಟಾರ್‌ಸೈಕಲ್‌ನಲ್ಲಿ ಬಂದ ಅಪರಿಚಿತ ದಾಳಿಕೋರರು ಭದ್ರತಾ ತಪಾಸಣಾ ಕೇಂದ್ರದ ಬಳಿ ಕರ್ತವ್ಯದಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಮಧ್ಯಾಹ್ನ ಸುಮಾರು 2.15ರ ವೇಳೆಗೆ ದಾಳಿ ನಡೆದಿದ್ದು, ಗುಂಡಿನ ದಾಳಿ ನಡೆಸಿದ ಬಳಿಕ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಇಬ್ಬರು ಸಿಬ್ಬಂದಿಯನ್ನು ತಕ್ಷಣವೇ ಅನಂತನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಆರ್‌ಪಿಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ದಾಳಿಕೋರರ ಪತ್ತೆಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸಿವೆ. ಘಟನಾ ಪ್ರದೇಶವನ್ನು ಸುತ್ತುವರಿದು ಕಾರ್ಡನ್ ಆ್ಯಂಡ್ ಸರ್ಚ್ ಕಾರ್ಯಾಚರಣೆ ಆರಂಭಿಸಲಾಗಿದೆ.
ದಾಳಿ ನಡೆದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೂಡ ಕುಲ್ಗಾಮ್‌ನಲ್ಲಿದ್ದರು. ಆದರೆ ದಾಳಿ ನಡೆದ ಸ್ಥಳದಿಂದ ಅವರು ಸಾಕಷ್ಟು ದೂರದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಬಳಿಕ ಸಿಆರ್‌ಪಿಎಫ್ ಶಿಬಿರದ ಸುತ್ತ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಶಸ್ತ್ರಸಜ್ಜಿತ ವಾಹನಗಳೊಂದಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೈರನ್ ಮೊಳಗಿಸಿ, ಧ್ವನಿವರ್ಧಕಗಳ ಮೂಲಕ ಸ್ಥಳೀಯರು ಮನೆಯೊಳಗೆ ಇರುವಂತೆ ಸೂಚನೆ ನೀಡಲಾಗಿದೆ.
ಇದಕ್ಕೂ ಮೊದಲು ಕಳೆದ ತಿಂಗಳು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಅಲರಮೆಡ್ಗು ಶಿಬಿರದಲ್ಲಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವ ವೇಳೆ ಐಇಡಿ ಸ್ಫೋಟಗೊಂಡು ನಾಲ್ವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
-
ನಿಧನ ವಾರ್ತೆ21 hours agoAccident-ಸುಳ್ಯ: ಕಾರು ರಿವರ್ಸ್ ತೆಗೆಯುವಾಗ ಅವಘಡ: ಮಗನ ಕಾರಿನಡಿಗೆ ಸಿಲುಕಿ ತಾಯಿ ಮೃತ್ಯು
-
ಬಿಗ್ ನ್ಯೂಸ್19 hours agoSheikh Hasina-ಮರಣದಂಡನೆ ಎದುರಿಸುವುದೇ ಶೇಖ್ ಹಸೀನಾಗೆ ಉಳಿದಿರುವ ಆಯ್ಕೆ ಎಂದ ಬಾಂಗ್ಲಾ ಪ್ರಾಸಿಕ್ಯೂಟರ್
-
ಶಿಕ್ಷಣ20 hours agoVivekananda Law College-ವಿವೇಕಾನಂದ ಕಾನೂನು ಕಾಲೇಜಿನ ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ವಿಶ್ವಾಸ್ ಶೆಣೈ, ಸಂಚಾಲಕರಾಗಿ ಮಹೇಶ್ ಕಜೆ, ಕೋಶಾಧಿಕಾರಿಯಾಗಿ ಸುರೇಶ್ ರೈ ಪಡ್ಡಂಬೈಲು ಆಯ್ಕೆ
-
ಶಿಕ್ಷಣ22 hours agoPuttur-ಪುತ್ತೂರು: ಕರ್ನಾಟಕ ಅಂಡರ್-23 ಮಹಿಳಾ ಕ್ರಿಕೆಟ್ ತಂಡಕ್ಕೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಅನಘಾ ಆಯ್ಕೆ
-
ಶಿಕ್ಷಣ21 hours agoMedha – 2027-ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ “ಮೇಧಾ – 2027” – ಉಚಿತ ಶಿಕ್ಷಣ ಯೋಜನೆ ; ಡಿ.6ರಂದು ಪ್ರವೇಶ ಪರೀಕ್ಷೆ
-
ಶಿಕ್ಷಣ19 hours agoVivekananda-ಜ್ಞಾನಸೇತು :2026:, “ಸೈನ್ಸ್ ಫಾರ್ ಪೀಸ್” ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ.
-
ಅಪರಾಧ4 hours ago
ಪುತ್ತೂರು ಮೆಸ್ಕಾಂ ಭ್ರಷ್ಟಚಾರದ ಕೂಪ- ಅಧಿಕಾರಿಯ ಪತ್ನಿಯ ಹೆಸರಿನಲ್ಲೂ ಕಾಮಗಾರಿ ಆರೋಪ! ; ‘ಜನರಿಗೆ ಬೇಕಿರುವುದು ಬ್ಯಾನರ್‌ಗಳಲ್ಲ, ನೈಜ ಅಭಿವೃದ್ಧಿ’ – ಅಶೋಕ್ ರೈಗೆ ಬೂಡಿಯಾರ್ ತಿರುಗೇಟು
-
ಅಂತರ ರಾಜ್ಯ3 hours agoMDMA-ಬಾಳೆಗೊನೆಗಳಲ್ಲಿ MDMA ಸಾಗಾಟ: ಅತ್ಯುತ್ತಮ ಯುವ ಕೃಷಿಕ ಪ್ರಶಸ್ತಿ ವಿಜೇತ ಅರೆಸ್ಟ್..!
















