ರಾಷ್ಟ್ರೀಯ
Visa-ಪಾಕ್, ಅಫ್ಘಾನ್, ಬಾಂಗ್ಲದಿಂದ ಧಾರ್ಮಿಕ ಕಿರುಕುಳ ಇನ್ನಿತರ ಕಾರಣದಿಂದ ಬಂದ ಮುಸ್ಲಿಂಮೇತರ ನಿರಾಶ್ರಿತರಿಗೆ ವೀಸಾ ಕಡ್ಡಾಯ: ಕೇಂದ್ರ ಸರ್ಕಾರ ನೂತನ ವಲಸೆ ನೀತಿ
ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳ ಅಥವಾ ಅದರ ಭೀತಿಯಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳ ನಿರಾಶ್ರಿತರು ದೇಶದಲ್ಲಿ ವಾಸ್ತವ್ಯ ಮುಂದುವರಿಸಲು ಸೂಕ್ತ ವೀಸಾ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.
ಹೊಸದಿಲ್ಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳ ಅಥವಾ ಅದರ ಭೀತಿಯಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳ ನಿರಾಶ್ರಿತರು ದೇಶದಲ್ಲಿ ವಾಸ್ತವ್ಯ ಮುಂದುವರಿಸಲು ಸೂಕ್ತ ವೀಸಾ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ.
2025ರ ವಲಸೆ ಮತ್ತು ವಿದೇಶೀಯರ ವಿನಾಯಿತಿ ಆದೇಶಕ್ಕೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿ ತಂದಿದ್ದು, ಸಂಬಂಧಿತ ದಾಖಲೆಗಳ ಅವಧಿ ಮುಗಿಯುವವರೆಗೆ ಈ ನಿಯಮಗಳು ಅನ್ವಯವಾಗಲಿವೆ.
ಯಾರಿಗೆ ಅನ್ವಯವಾಗಲಿದೆ ಹೊಸ ನಿಯಮ?
2024ರ ಡಿಸೆಂಬರ್ 31ರೊಳಗೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಧಾರ್ಮಿಕ ಕಿರುಕುಳ ಅಥವಾ ಅದರ ಭೀತಿಯಿಂದ ಭಾರತಕ್ಕೆ ಆಗಮಿಸಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯದವರಿಗೆ ಈ ನಿಯಮ ಅನ್ವಯವಾಗಲಿದೆ. ಇವರು ಭಾರತದಲ್ಲಿ ವಾಸ್ತವ್ಯ ಮುಂದುವರಿಸಲು ಸೂಕ್ತ ವೀಸಾ ಹೊಂದಿರಬೇಕಾಗುತ್ತದೆ.
ಆದರೆ, ದೀರ್ಘಕಾಲದಿಂದ ಭಾರತದಲ್ಲಿ ನೆಲೆಸಿರುವ ಕಾರಣ ವಿದೇಶಿ ಪಾಸ್ಪೋರ್ಟ್ ನವೀಕರಣದ ಸಮಸ್ಯೆ ಎದುರಿಸುತ್ತಿರುವ ನಿರ್ದಿಷ್ಟ ವರ್ಗದ ಪಾಕಿಸ್ತಾನಿ ಪ್ರಜೆಗಳಿಗೆ ವಿನಾಯಿತಿ ನೀಡಲಾಗಿದೆ.
ಯಾರಿಗೆ ವಿನಾಯಿತಿ ನೀಡಲಾಗಿದೆ?
- ಭಾರತದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ 2009ರ ಡಿಸೆಂಬರ್ 31ಕ್ಕಿಂತ ಮೊದಲು ಮಾನ್ಯ ಪಾಸ್ಪೋರ್ಟ್ನೊಂದಿಗೆ ಭಾರತಕ್ಕೆ ಬಂದಿದ್ದು, ಪಾಕಿಸ್ತಾನದ ಗುರುತಿನ ದಾಖಲೆಗಳ ಸಮಸ್ಯೆಯಿಂದ ಪಾಸ್ಪೋರ್ಟ್ ನವೀಕರಿಸಲು ಸಾಧ್ಯವಾಗದ ನಿರ್ದಿಷ್ಟ ವರ್ಗದ ಪಾಕಿಸ್ತಾನಿ ಪ್ರಜೆಗಳಿಗೆ ವಿನಾಯಿತಿ ನೀಡಲಾಗಿದೆ.
- ದೇಶ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದ ಮೂಲತಃ ಭಾರತೀಯ ಪ್ರಜೆಯಾಗಿದ್ದ ಮುಸ್ಲಿಂ ಪುರುಷರು ನಿರ್ದಿಷ್ಟ ಷರತ್ತುಗಳಡಿ 2009ರ ಡಿಸೆಂಬರ್ 31ರೊಳಗೆ ಕೇರಳಕ್ಕೆ ಮರಳಿದ್ದರೆ ಅವರಿಗೂ ವಿನಾಯಿತಿ ಅನ್ವಯವಾಗಲಿದೆ.
- ಮಲೇಷ್ಯಾ ಅಥವಾ ಸಿಂಗಾಪುರದ ಪೌರತ್ವ ಪಡೆದಿದ್ದರೂ ತಮ್ಮ ಪಾಸ್ಪೋರ್ಟ್ ನವೀಕರಿಸಲು ಸಾಧ್ಯವಾಗದ ನಿರ್ದಿಷ್ಟ ಭಾರತೀಯ ಮೂಲದ ವ್ಯಕ್ತಿಗಳಿಗೂ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದೆ.
ಟಿಬೆಟ್, ನೇಪಾಳ ಮತ್ತು ಭೂತಾನ್ ಪ್ರಜೆಗಳಿಗೂ ಪ್ರತ್ಯೇಕ ನಿಯಮ
1959ರಿಂದ 2003ರ ಮೇ 30ರ ನಡುವೆ ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನೀಡಿದ್ದ ಅನುಮತಿ ಪತ್ರಗಳೊಂದಿಗೆ ಭಾರತ ಪ್ರವೇಶಿಸಿರುವ ಟಿಬೆಟ್ ನಾಗರಿಕರಿಗೆ ಪಾಸ್ಪೋರ್ಟ್ ಹಾಗೂ ವೀಸಾದಿಂದ ವಿನಾಯಿತಿ ನೀಡಲಾಗಿದೆ. ಭಾರತ-ನೇಪಾಳ ಗಡಿಯಲ್ಲಿರುವ ಗೊತ್ತುಪಡಿಸಿದ ವಲಸೆ ತಪಾಸಣಾ ಕೇಂದ್ರಗಳ ಮೂಲಕ ವಿಶೇಷ ಪ್ರವೇಶ ಅನುಮತಿ ಪತ್ರ ಹೊಂದಿರುವವರಿಗೂ ಸಂಬಂಧಿತ ವಿನಾಯಿತಿಗಳು ಅನ್ವಯವಾಗಲಿವೆ. ಆದರೆ, ಸ್ಥಳೀಯ ಪ್ರಾಧಿಕಾರಗಳಿಂದ ನೋಂದಣಿ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿದೆ.
ಇನ್ನು ನೇಪಾಳ ಮತ್ತು ಭೂತಾನ್ ಪ್ರಜೆಗಳು ಸಾಮಾನ್ಯವಾಗಿ ಭಾರತಕ್ಕೆ ಪ್ರಯಾಣಿಸಲು ಪಾಸ್ಪೋರ್ಟ್ ಹೊಂದುವ ಅಗತ್ಯವಿಲ್ಲ. ಆದರೆ, ಚೀನಾ, ಮಕಾವು, ಹಾಂಕಾಂಗ್ ಅಥವಾ ಪಾಕಿಸ್ತಾನಕ್ಕೆ ಪ್ರಯಾಣಿಸಿ ಭಾರತಕ್ಕೆ ಮರಳುವಾಗ ಅಥವಾ ಅಲ್ಲಿಂದ ಭಾರತಕ್ಕೆ ಬರುವಾಗ ಪಾಸ್ಪೋರ್ಟ್ ಹಾಗೂ ವೀಸಾ ಹಾಜರುಪಡಿಸಬೇಕಾಗುತ್ತದೆ.
ರಾಷ್ಟ್ರೀಯ
Rahul Agarwal-ಮಡಚಿಕೊಳ್ಳುವ ವಿನ್ಯಾಸದ ‘ಪಾಲಿಗಾನ್ಸ್’ ಚಮಚ: ‘ಶಾರ್ಕ್ ಟ್ಯಾಂಕ್’ನಲ್ಲಿ ₹2.9 ಕೋಟಿ ಹೂಡಿಕೆ ಪಡೆದ ಭಾರತೀಯ ಉದ್ಯಮಿ ರಾಹುಲ್ ಅಗರ್ವಾಲ್
ಅಡುಗೆ ಮನೆಯಲ್ಲಿ ವಿವಿಧ ಪದಾರ್ಥಗಳನ್ನು ಅಳೆಯಲು ಬೇರೆ ಬೇರೆ ಅಳತೆಯ ಚಮಚಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಸಮಸ್ಯೆಗೆ ಭಾರತೀಯ ಮೂಲದ ಉದ್ಯಮಿ ರಾಹುಲ್ ಅಗರ್ವಾಲ್ ವಿನೂತನ ಪರಿಹಾರ ಕಂಡುಕೊಂಡಿದ್ದಾರೆ. ಆರು ವಿಭಿನ್ನ ಅಳತೆಗಳಲ್ಲಿ ಬಳಸಬಹುದಾದ, ಮಡಚಿಕೊಳ್ಳುವ ವಿನ್ಯಾಸದ ‘ಪಾಲಿಗಾನ್ಸ್’ (Polygons) ಚಮಚವನ್ನು ರೂಪಿಸಿರುವ ಅವರು, ಅಮೆರಿಕದ ಜನಪ್ರಿಯ ಹೂಡಿಕೆ ಕಾರ್ಯಕ್ರಮ ‘ಶಾರ್ಕ್ ಟ್ಯಾಂಕ್ ಯುಎಸ್ಎ’ಯಲ್ಲೂ ಗಮನ ಸೆಳೆದಿದ್ದಾರೆ.
ಅಡುಗೆ ಮನೆಯಲ್ಲಿ ವಿವಿಧ ಪದಾರ್ಥಗಳನ್ನು ಅಳೆಯಲು ಬೇರೆ ಬೇರೆ ಅಳತೆಯ ಚಮಚಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ಸಮಸ್ಯೆಗೆ ಭಾರತೀಯ ಮೂಲದ ಉದ್ಯಮಿ ರಾಹುಲ್ ಅಗರ್ವಾಲ್ ವಿನೂತನ ಪರಿಹಾರ ಕಂಡುಕೊಂಡಿದ್ದಾರೆ. ಆರು ವಿಭಿನ್ನ ಅಳತೆಗಳಲ್ಲಿ ಬಳಸಬಹುದಾದ, ಮಡಚಿಕೊಳ್ಳುವ ವಿನ್ಯಾಸದ ‘ಪಾಲಿಗಾನ್ಸ್’ (Polygons) ಚಮಚವನ್ನು ರೂಪಿಸಿರುವ ಅವರು, ಅಮೆರಿಕದ ಜನಪ್ರಿಯ ಹೂಡಿಕೆ ಕಾರ್ಯಕ್ರಮ ‘ಶಾರ್ಕ್ ಟ್ಯಾಂಕ್ ಯುಎಸ್ಎ’ಯಲ್ಲೂ ಗಮನ ಸೆಳೆದಿದ್ದಾರೆ.
ಅಹಮದಾಬಾದ್ನ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (NID)ನ ಹಳೆಯ ವಿದ್ಯಾರ್ಥಿಯಾಗಿರುವ ರಾಹುಲ್ ಅಗರ್ವಾಲ್, ‘ಪಾಲಿಗಾನ್ಸ್ ಡಿಸೈನ್’ ಸಂಸ್ಥೆಯ ಸಂಸ್ಥಾಪಕರು. ಜಪಾನಿನ ಸಾಂಪ್ರದಾಯಿಕ ಕಾಗದ ಮಡಚುವ ಕಲೆ ‘ಒರಿಗಾಮಿ’ಯಿಂದ ಪ್ರೇರಣೆ ಪಡೆದು ಅವರು ಈ ವಿಶಿಷ್ಟ ಅಡುಗೆ ಪರಿಕರವನ್ನು ವಿನ್ಯಾಸಗೊಳಿಸಿದ್ದಾರೆ.
ಎರಡೇ ಚಮಚಗಳಲ್ಲಿ ಆರು ಅಳತೆಗಳು!
ಈ ವಿನೂತನ ಉತ್ಪನ್ನದಲ್ಲಿ ಒಂದು ದೊಡ್ಡ ಚಮಚ ಮತ್ತು ಒಂದು ಸಣ್ಣ ಚಮಚವಿದ್ದು, ಇವುಗಳನ್ನು ಮಡಚುವ ಮೂಲಕ ಒಟ್ಟು ಆರು ಅಳತೆಗಳಿಗೆ ಹೊಂದಿಸಬಹುದು.
ದೊಡ್ಡ ಚಮಚ: ಅರ್ಧ ಟೇಬಲ್ಸ್ಪೂನ್, ಒಂದು ಟೇಬಲ್ಸ್ಪೂನ್ ಮತ್ತು ಎರಡು ಟೇಬಲ್ಸ್ಪೂನ್ ಅಳತೆಗಳು.
ಸಣ್ಣ ಚಮಚ: ಕಾಲು ಟೀಸ್ಪೂನ್, ಅರ್ಧ ಟೀಸ್ಪೂನ್ ಮತ್ತು ಒಂದು ಟೀಸ್ಪೂನ್ ಅಳತೆಗಳು.
ದ್ರವ ಹಾಗೂ ಒಣ ಪದಾರ್ಥಗಳನ್ನು ಅಳೆಯಲು ಈ ಚಮಚಗಳನ್ನು ಬಳಸಬಹುದು. ಬಳಸದಿರುವಾಗ ಇವುಗಳನ್ನು ಸಂಪೂರ್ಣವಾಗಿ ಚಪ್ಪಟೆಯಾಗಿ ಮಡಚಿಡಬಹುದಾಗಿರುವುದರಿಂದ ಅಡುಗೆ ಮನೆಯಲ್ಲಿ ಜಾಗ ಉಳಿತಾಯವಾಗುತ್ತದೆ. ಜೊತೆಗೆ, ಬಳಕೆ ಮತ್ತು ಸಂಗ್ರಹಣೆಯೂ ಸುಲಭವಾಗುತ್ತದೆ.
ಆಹಾರ ಸುರಕ್ಷತೆಗೆ ಸೂಕ್ತವಾದ ಥರ್ಮೋಪ್ಲಾಸ್ಟಿಕ್, ಸಿಲಿಕಾನ್ ಮತ್ತು ಸಣ್ಣ ಆಯಸ್ಕಾಂತಗಳನ್ನು ಬಳಸಿ ಈ ಚಮಚಗಳನ್ನು ತಯಾರಿಸಲಾಗಿದೆ.
‘ಶಾರ್ಕ್ ಟ್ಯಾಂಕ್’ನಲ್ಲಿ ಹೂಡಿಕೆದಾರರ ಮೆಚ್ಚುಗೆ
ಅಮೆರಿಕದ ಜನಪ್ರಿಯ ಉದ್ಯಮಶೀಲತೆ ಆಧಾರಿತ ಕಾರ್ಯಕ್ರಮ ‘ಶಾರ್ಕ್ ಟ್ಯಾಂಕ್ ಯುಎಸ್ಎ’ಯ 18ನೇ ಸೀಸನ್ನ ನಾಲ್ಕನೇ ಸಂಚಿಕೆಯಲ್ಲಿ ರಾಹುಲ್ ಅಗರ್ವಾಲ್ ತಮ್ಮ ಉತ್ಪನ್ನವನ್ನು ಪರಿಚಯಿಸಿದ್ದಾರೆ. ಇದರ ವಿನ್ಯಾಸದಿಂದ ಪ್ರಭಾವಿತರಾದ ಹೂಡಿಕೆದಾರರಾದ ಲೋರಿ ಗ್ರೆನರ್ ಮತ್ತು ಮಿಂಡಿ ಕಾಲಿಂಗ್, ಈ ಆವಿಷ್ಕಾರವನ್ನು ಬುದ್ಧಿವಂತಿಕೆಯ ವಿನ್ಯಾಸ ಎಂದು ಮೆಚ್ಚಿಕೊಂಡಿದ್ದಾರೆ.
ರಾಹುಲ್ ಅವರು ತಮ್ಮ ಕಂಪನಿಯ ಶೇ. 8ರಷ್ಟು ಈಕ್ವಿಟಿ ಮತ್ತು ಶೇ. 2ರಷ್ಟು ಹೆಚ್ಚುವರಿ ಷೇರುಗಳನ್ನು ನೀಡುವ ಮೂಲಕ 3.5 ಲಕ್ಷ ಡಾಲರ್ (ಸುಮಾರು ₹2.9 ಕೋಟಿ) ಹೂಡಿಕೆ ಪಡೆಯುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಒಪ್ಪಂದದ ಬಳಿಕ ‘ಪಾಲಿಗಾನ್ಸ್ ಡಿಸೈನ್’ ಕಂಪನಿಯ ಮೌಲ್ಯ ಸುಮಾರು ₹29 ಕೋಟಿಗೆ ತಲುಪಿದೆ ಎಂದು ವರದಿಯಾಗಿದೆ.
ಅಡುಗೆ ಮನೆಯಲ್ಲಿ ಜಾಗ ಉಳಿಸುವುದರ ಜೊತೆಗೆ ಹಲವು ಅಳತೆಯ ಚಮಚಗಳ ಅಗತ್ಯವನ್ನು ಕಡಿಮೆ ಮಾಡುವ ಈ ಆವಿಷ್ಕಾರ, ಸರಳ ವಿನ್ಯಾಸದ ಮೂಲಕ ದೈನಂದಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ ಗಮನ ಸೆಳೆದಿದೆ.
ರಾಷ್ಟ್ರೀಯ
Cancer-ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಶೇ.70ರಷ್ಟು ಇಳಿಕೆ ಸಾಧ್ಯತೆ..! MRP ಮೇಲಿನ ಲಾಭಾಂಶ ಮಿತಿಗೆ ಕೇಂದ್ರ ಚಿಂತನೆ
ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಬೆಲೆ ನಿಯಂತ್ರಣದ ನಿಗದಿತ ಪಟ್ಟಿಗೆ ಸೇರದ ಕ್ಯಾನ್ಸರ್ ನಿರೋಧಕ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೇಲಿನ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಈ ಕ್ರಮ ಜಾರಿಯಾದರೆ ಕೆಲವು ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೊಸದಿಲ್ಲಿ: ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಬೆಲೆ ನಿಯಂತ್ರಣದ ನಿಗದಿತ ಪಟ್ಟಿಗೆ ಸೇರದ ಕ್ಯಾನ್ಸರ್ ನಿರೋಧಕ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ಪಿ) ಮೇಲಿನ ಲಾಭಾಂಶವನ್ನು ಶೇ.30ಕ್ಕೆ ಮಿತಿಗೊಳಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಈ ಕ್ರಮ ಜಾರಿಯಾದರೆ ಕೆಲವು ಔಷಧಿಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬ್ರಾಂಡೆಡ್, ಜೆನೆರಿಕ್ ಔಷಧಿಗಳಿಗೂ ಅನ್ವಯ
ಬೆಲೆ ನಿಯಂತ್ರಣದ ನಿಗದಿತ ಪಟ್ಟಿಗೆ ಸೇರದ (ನಾನ್-ಶೆಡ್ಯೂಲ್ಡ್) ಕ್ಯಾನ್ಸರ್ ಔಷಧಿಗಳಿಗೆ ಈ ಮಿತಿಯನ್ನು ಅನ್ವಯಿಸುವ ಪ್ರಸ್ತಾವನೆ ಸರಕಾರದ ಮುಂದಿದೆ. ಬ್ರಾಂಡೆಡ್, ಜೆನೆರಿಕ್, ದೇಶೀಯವಾಗಿ ತಯಾರಿಸಿದ ಹಾಗೂ ಆಮದು ಮಾಡಿಕೊಳ್ಳುವ ಕ್ಯಾನ್ಸರ್ ಔಷಧಿಗಳೂ ಇದರ ವ್ಯಾಪ್ತಿಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಜೀವರಕ್ಷಕ ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿ, ಸಾಮಾನ್ಯ ಜನರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಪ್ರಸ್ತಾವಿತ ಬೆಲೆ ನಿಯಂತ್ರಣ ಜಾರಿಯಾದರೆ ಕ್ಯಾನ್ಸರ್ ಔಷಧಿಗಳ ಗರಿಷ್ಠ ಮಾರಾಟ ದರದಲ್ಲಿ ಶೇ.70ರಷ್ಟು ಇಳಿಕೆಯಾಗಬಹುದು ಎಂಬ ಅಂದಾಜು ವ್ಯಕ್ತವಾಗಿದೆ. ಇದರಿಂದ ಗ್ರಾಹಕರಿಗೆ ಒಟ್ಟಾರೆ ಸುಮಾರು ₹2,500 ಕೋಟಿ ಉಳಿತಾಯವಾಗುವ ನಿರೀಕ್ಷೆಯಿದೆ.
ಅಂತಿಮ ನಿರ್ಧಾರದ ನಿರೀಕ್ಷೆ
ಕ್ಯಾನ್ಸರ್ ಔಷಧಿಗಳ ಮಾರಾಟದ ಮೇಲಿನ ಲಾಭಾಂಶಕ್ಕೆ ಮಿತಿ ವಿಧಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಕುರಿತು ಪರಿಶೀಲನೆ ನಡೆಸಲು ಕ್ಯಾನ್ಸರ್ ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.
ಮುಂದಿನ ದಿನಗಳಲ್ಲಿ ಈ ಬೆಲೆ ನಿಯಂತ್ರಣ ಕ್ರಮವನ್ನು ಇನ್ನಷ್ಟು ಕ್ಯಾನ್ಸರ್ ಔಷಧಿಗಳು ಹಾಗೂ ಇತರ ಔಷಧಿಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆ ಜಾರಿಯಾದರೆ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರೋಗಿಗಳ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗಬಹುದು. ಆದರೆ ಬೆಲೆ ಇಳಿಕೆಯ ಪ್ರಮಾಣ ಹಾಗೂ ಕ್ರಮ ಜಾರಿಯಾಗುವ ದಿನಾಂಕದ ಕುರಿತು ಅಧಿಕೃತ ಘೋಷಣೆ ಹೊರಬಿದ್ದ ಬಳಿಕವೇ ಸ್ಪಷ್ಟ ಚಿತ್ರಣ ದೊರೆಯಲಿದೆ.
ಕ್ರೀಡೆ
India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ
ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್ಗೆ 255 ರನ್ಗಳ ಭರ್ಜರಿ ಜೊತೆಯಾಟವಾಡಿದರು.
ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.
ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.
ಒಂದೇ ಇನ್ನಿಂಗ್ಸ್ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಮೂವರು ಬ್ಯಾಟರ್ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.
ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್ನಲ್ಲಿ ಮೂವರು ಬ್ಯಾಟರ್ಗಳು ಶತಕ ಸಿಡಿಸಿದ್ದರು.
ವೆಸ್ಟ್ ಇಂಡೀಸ್ಗೆ ಒಂದೇ ಇನ್ನಿಂಗ್ಸ್ನಲ್ಲಿ ಮೂವರು ಬ್ಯಾಟರ್ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.
ಇದರೊಂದಿಗೆ ಒಂದೇ ಇನ್ನಿಂಗ್ಸ್ನಲ್ಲಿ ಮೂವರು ಬ್ಯಾಟರ್ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.
















