ರಾಜಕೀಯ
Hemanath Shetty-ಶಾಸಕರ ವಿರುದ್ಧ ಬಿಜೆಪಿ ಸುಳ್ಳು ಪ್ರಚಾರ ನಿಲ್ಲಿಸದಿದ್ದರೆ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ ಹೋರಾಟ – ಹೇಮನಾಥ ಶೆಟ್ಟಿ
ಶಾಸಕ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಬಿಜೆಪಿ ಪುತ್ತೂರಿಗೆ ಬಾಡಿಗೆ ಭಾಷಣಕಾರರನ್ನು ಕರೆಸಿ ಶಾಸಕರ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ. ಇಂತಹ ಅಪಪ್ರಚಾರವನ್ನು ನಿಲ್ಲಿಸದಿದ್ದರೆ ಕಾಂಗ್ರೆಸ್ ವತಿಯಿಂದ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಎಚ್ಚರಿಕೆ ನೀಡಿದ್ದಾರೆ.
ಪುತ್ತೂರು, ನ. 6: ಶಾಸಕ ಅಶೋಕ್ ಕುಮಾರ್ ರೈ ಅವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಬಿಜೆಪಿ ಪುತ್ತೂರಿಗೆ ಬಾಡಿಗೆ ಭಾಷಣಕಾರರನ್ನು ಕರೆಸಿ ಶಾಸಕರ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ. ಇಂತಹ ಅಪಪ್ರಚಾರವನ್ನು ನಿಲ್ಲಿಸದಿದ್ದರೆ ಕಾಂಗ್ರೆಸ್ ವತಿಯಿಂದ ಗ್ರಾಮ ಗ್ರಾಮಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾರ್ಯಗಳು ನಡೆಯುತ್ತಿವೆ. ಅಭಿವೃದ್ಧಿ ಕಾರ್ಯಗಳಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಅಭಿವೃದ್ಧಿಯನ್ನು ಸಹಿಸದ ಕೆಲವರು ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿರುವ ಭಕ್ತರು ಹಾಗೂ ದಾನಿಗಳು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲವಾಗಿ ಕೋಟ್ಯಂತರ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹಾಗೂ ರಾಜ್ಯ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಬಿಜೆಪಿ ಶಾಸಕರ ವಿರುದ್ಧ ಕೀಳುಮಟ್ಟದ ಪದಪ್ರಯೋಗ ಮಾಡುತ್ತಿದೆ. ಅಭಿವೃದ್ಧಿ ಕಾರ್ಯಗಳ ಕುರಿತು ನೈಜ ವಿಚಾರಗಳನ್ನು ತಿಳಿದುಕೊಂಡು ಮಾತನಾಡಬೇಕು ಎಂದು ಎಚ್ಚರಿಸಿದರು.
ರಾಜಕೀಯ
Aishwarya Hegde-ಸಿಎಂ ಮುಂದೆಯೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ..!
ಬೆಂಗಳೂರಿನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಅವರು ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಅವರು ರಾಜ್ಯದ ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಮುಕ್ತವಾಗಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದ್ದಾರೆ.
ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಮುಖರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆಗೆ ಸರ್ಕಾರ ಕೈಗೊಳ್ಳಬೇಕಾದ ಹಲವು ಮಹತ್ವದ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಶಿಕ್ಷಕರ ಕಾರ್ಯವೈಖರಿ, ಉತ್ತರದಾಯಿತ್ವ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳ ಕೊರತೆಯ ಬಗ್ಗೆ ಗಮನ ಸೆಳೆದಿದ್ದಾರೆ.
ಐಶ್ವರ್ಯಾ ಹೆಗ್ಡೆ ನೀಡಿದ ಪ್ರಮುಖ ಸಲಹೆಗಳೇನು?
- ಶಿಕ್ಷಕರ ದಕ್ಷತೆ ಮತ್ತು ಸಂವಹನ ಕೌಶಲ್ಯ ಸುಧಾರಣೆ:
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆಯ ಕೊರತೆಗಿಂತಲೂ ಇರುವ ಶಿಕ್ಷಕರಲ್ಲಿ ದಕ್ಷತೆ ಹಾಗೂ ಸಂವಹನ ಕೌಶಲ್ಯದ ಕೊರತೆ ಹೆಚ್ಚು ಕಾಡುತ್ತಿದೆ. ಶಿಕ್ಷಕರಿಗೆ ಸೂಕ್ತ ಸಂವಹನ ತರಬೇತಿ ನೀಡುವ ಮೂಲಕ ಈ ಸಮಸ್ಯೆ ನಿವಾರಿಸಬೇಕು ಎಂದು ಸಲಹೆ ನೀಡಿದ್ದಾರೆ. - ಶಿಕ್ಷಕರಲ್ಲಿ ಉತ್ತರದಾಯಿತ್ವ ಹೆಚ್ಚಬೇಕು:
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಲಕ್ಷಕ್ಕೂ ಅಧಿಕ ವೇತನ ನೀಡುತ್ತಿದ್ದರೂ, ಕೆಲವರು ಐದು ದಿನಗಳ ಕಾಲವೂ ಸರಿಯಾಗಿ ಶಾಲೆಗೆ ಹಾಜರಾಗುತ್ತಿರಲಿಲ್ಲ ಎಂಬುದನ್ನು ತಮ್ಮದೇ ಶಾಲೆಯೊಂದರ ಉದಾಹರಣೆಯೊಂದಿಗೆ ಪ್ರಸ್ತಾಪಿಸಿದ್ದಾರೆ. ಶಿಕ್ಷಕರ ಹಾಜರಾತಿ ಹಾಗೂ ಕಾರ್ಯವೈಖರಿಯ ಮೇಲೆ ಪರಿಣಾಮಕಾರಿ ಮೇಲ್ವಿಚಾರಣೆ ಇರಬೇಕು. ಸರ್ಕಾರ ಒದಗಿಸುವ ಸಂಪನ್ಮೂಲಗಳು ಸಮರ್ಪಕವಾಗಿ ಬಳಕೆಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ. - ಕನಿಷ್ಠ ಮೂರು ವರ್ಷ ಒಂದೇ ಶಾಲೆಯಲ್ಲಿ ಸೇವೆ:
ಶಿಕ್ಷಕರ ಪದೇಪದೇ ವರ್ಗಾವಣೆಯಾಗುವುದನ್ನು ನಿಯಂತ್ರಿಸಬೇಕು. ಪ್ರತಿಯೊಬ್ಬ ಶಿಕ್ಷಕರೂ ಕನಿಷ್ಠ ಮೂರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ನಿಯಮ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. - ಪಾಠದ ಜೊತೆಗೆ ಕ್ರೀಡೆಗೂ ಆದ್ಯತೆ:
ಸರ್ಕಾರಿ ಶಾಲೆಗಳು ಕೇವಲ ಪಾಠ ಮತ್ತು ಮಧ್ಯಾಹ್ನದ ಬಿಸಿಯೂಟಕ್ಕೆ ಸೀಮಿತವಾಗಬಾರದು. ಮಕ್ಕಳಿಗೆ ಆಟೋಟ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಸಮಾನ ಆದ್ಯತೆ ನೀಡಬೇಕು. ಆಗ ಮಕ್ಕಳು ಶಾಲೆಯನ್ನು ಇಷ್ಟಪಟ್ಟು ಬರುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. - ಗ್ರಾಮೀಣ ಶಾಲೆಗಳಿಗೆ ಸಾರಿಗೆ ವ್ಯವಸ್ಥೆ:
ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳು ಸುಲಭವಾಗಿ ತಲುಪಲು ಸೂಕ್ತ ಸಾರಿಗೆ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ. - ಶಾಲಾ ಅವಧಿಯಲ್ಲಿ ಸ್ಥಳೀಯ ಅಗತ್ಯಕ್ಕೆ ತಕ್ಕ ನಮ್ಯತೆ:
ಸ್ಥಳೀಯ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಅನುಗುಣವಾಗಿ ಸರ್ಕಾರಿ ಶಾಲೆಗಳ ಕಾರ್ಯನಿರ್ವಹಣೆಯ ಅವಧಿಯಲ್ಲಿ ಅಗತ್ಯ ಬದಲಾವಣೆಗಳಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ. - ಮೂಲಸೌಕರ್ಯ ಮತ್ತು ನೈರ್ಮಲ್ಯಕ್ಕೆ ಆದ್ಯತೆ:
ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ಕೊರತೆಯನ್ನು ಶೀಘ್ರ ನಿವಾರಿಸಬೇಕು. ಮಕ್ಕಳಿಗೆ ಸ್ವಚ್ಛ ಹಾಗೂ ಉತ್ತಮ ಕಲಿಕಾ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಗಳ ಸ್ಥಿತಿಗೆ ಸಿಎಂ ಕೂಡ ಬೇಸರ
ಐಶ್ವರ್ಯಾ ಹೆಗ್ಡೆ ಅವರ ಸಲಹೆಗಳಿಗೆ ಕಾರ್ಯಕ್ರಮದ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ 1.5 ಲಕ್ಷ ರೂ.ವರೆಗೂ ವೇತನ ನೀಡುತ್ತಿದ್ದರೂ ನಿರೀಕ್ಷಿತ ಮಟ್ಟದ ಶಿಕ್ಷಣದ ಗುಣಮಟ್ಟ ಸಿಗುತ್ತಿಲ್ಲ ಎಂಬ ಬಗ್ಗೆ ತಮಗೂ ಬೇಸರವಿದೆ ಎಂದು ಒಪ್ಪಿಕೊಂಡಿದ್ದಾರೆ.
ರಾಜಕೀಯ
Ashok Rai-ಅಶೋಕ್ ರೈ ಮನವಿಗೆ ಸಿಎಂ ಸ್ಪಂದನೆ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹5 ಕೋಟಿ ಅನುದಾನ: ಜಿಲ್ಲೆಯ 7 ಮಠಗಳಿಗೆ ತಲಾ ₹1 ಕೋಟಿ ಬಿಡುಗಡೆಗೆ ಆದೇಶ
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹5 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಏಳು ಮಠಗಳ ಜೀರ್ಣೋದ್ಧಾರ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಲಾ ₹1 ಕೋಟಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ₹5 ಕೋಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಏಳು ಮಠಗಳ ಜೀರ್ಣೋದ್ಧಾರ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಲಾ ₹1 ಕೋಟಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ.
ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುದಾನ ಬಿಡುಗಡೆಗೆ ಆದೇಶಿಸಿದ್ದಾರೆ. ಸೆಪ್ಟೆಂಬರ್ 10ರಂದು ಮಂಗಳೂರಿನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಈ ಅನುದಾನಕ್ಕೆ ಅನುಮೋದನೆ ದೊರೆತಿದ್ದು, ಇದೀಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗೆ ₹5 ಕೋಟಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ‘ಎ’ ವರ್ಗದ ದೇವಸ್ಥಾನವಾಗಿದ್ದು, ವಾರ್ಷಿಕವಾಗಿ ಸುಮಾರು ₹8.88 ಕೋಟಿ ಆದಾಯ ಹೊಂದಿದೆ. ದೇವಸ್ಥಾನಕ್ಕೆ 34.82 ಎಕರೆ ಭೂಮಿಯಿದ್ದು, ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವವನ್ನು ಹೊಂದಿದೆ. ಜಿಲ್ಲೆಯ ವಿವಿಧ ಭಾಗಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಭಕ್ತಾದಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ದೇವಸ್ಥಾನದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಪರಿಶೀಲನೆಯಲ್ಲಿದೆ. ಈಗಾಗಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು 2026-27ನೇ ಸಾಲಿನಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಧಾರ್ಮಿಕ ದತ್ತಿ ಇಲಾಖೆಯ ಮೂಲಕ ₹5 ಕೋಟಿ ಬಿಡುಗಡೆಗೆ ಆದೇಶಿಸಿದ್ದಾರೆ.
ಈ ಸಂಬಂಧ ಕಂದಾಯ ಇಲಾಖೆಯ (ಧಾರ್ಮಿಕ ದತ್ತಿ) ಅಧೀನ ಕಾರ್ಯದರ್ಶಿ ಮಾಲಾ ಎಸ್. ಅವರು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತರಿಗೆ ಆದೇಶ ಹೊರಡಿಸಿದ್ದಾರೆ. ಇದರಿಂದ ಪುತ್ತೂರು ಸೀಮಾಧಿಪತಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ನಿರೀಕ್ಷೆಯಿದೆ.
ಜಿಲ್ಲೆಯ ಏಳು ಮಠಗಳಿಗೆ ತಲಾ ₹1 ಕೋಟಿ
ಶಾಸಕ ಅಶೋಕ್ ಕುಮಾರ್ ರೈ ಅವರ ಕೋರಿಕೆಯಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ನಾಲ್ಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಏಳು ಮಠಗಳ ಜೀರ್ಣೋದ್ಧಾರ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಲಾ ₹1 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಆದೇಶಿಸಿದೆ.
ಅನುದಾನ ಪಡೆಯಲಿರುವ ಮಠಗಳು ಮತ್ತು ಧಾರ್ಮಿಕ ಕೇಂದ್ರಗಳು:
ಒಡಿಯೂರು ಮಠ
ಶ್ರೀಧಾಮ ಮಾಣಿಲ ಮಠ
ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರ
ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ
ಉಳ್ಳಾಲ ಪಿಲಿಚಾಮುಂಡಿ ದೈವಸ್ಥಾನ, ಕೊಂಡಾನ ಕೋಟೆಕಾರು
ಶ್ರೀರಾಮ ಕ್ಷೇತ್ರ ಕನ್ಯಾಡಿ
ಕೇಮಾರು ಮಠ ಶ್ರೀ ಸಾಂದೀಪನಿ ಸಾಧನಾಶ್ರಮ
ಜಿಲ್ಲೆಯ ಮಠಗಳು ಪ್ರತಿನಿತ್ಯದ ಪೂಜಾ ಕೈಂಕರ್ಯಗಳ ಜತೆಗೆ ವಾರ್ಷಿಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿವಿಧ ಸೇವಾ ಕಾರ್ಯಗಳ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ. ಸಾವಿರಾರು ಭಕ್ತರು ಈ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಅವರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುದಾನದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮನವಿಯ ಕುರಿತು ಚರ್ಚೆ ನಡೆದು ಅನುಮೋದನೆ ದೊರೆತಿತ್ತು. ಇದೀಗ ಕಂದಾಯ ಇಲಾಖೆಯ ಮೂಲಕ ಅನುದಾನ ಬಿಡುಗಡೆಗೆ ಅಧಿಕೃತ ಆದೇಶ ಹೊರಬಿದ್ದಿದೆ.
6 ಮಸೀದಿ, 3 ಚರ್ಚ್‌ಗಳಿಗೂ ತಲಾ ₹1 ಕೋಟಿ
ದೇವಸ್ಥಾನ ಮತ್ತು ಮಠಗಳ ಅಭಿವೃದ್ಧಿಗೆ ಮಾತ್ರವಲ್ಲದೆ, ಜಿಲ್ಲೆಯ ಆರು ಮಸೀದಿಗಳು ಹಾಗೂ ಮೂರು ಚರ್ಚ್‌ಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳಿಗಾಗಿ ತಲಾ ₹1 ಕೋಟಿ ಅನುದಾನ ಬಿಡುಗಡೆಗೂ ಆದೇಶವಾಗಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ₹5 ಕೋಟಿ ಹಾಗೂ ಏಳು ಮಠಗಳು, ಆರು ಮಸೀದಿಗಳು ಮತ್ತು ಮೂರು ಚರ್ಚ್‌ಗಳಿಗೆ ತಲಾ ₹1 ಕೋಟಿ ಸೇರಿ ಒಟ್ಟು ₹21 ಕೋಟಿ ಅನುದಾನ ಬಿಡುಗಡೆಗೆ ಸರ್ಕಾರ ಆದೇಶಿಸಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
‘ಯಾವುದೇ ಸ್ವಾಮೀಜಿಗಳು ಅನುದಾನ ಕೇಳಿಲ್ಲ, ನಾನೇ ಸ್ವಇಚ್ಛೆಯಿಂದ ಮನವಿ ಮಾಡಿದ್ದೆ’
ಈ ಕುರಿತು ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, “ನಮ್ಮ ಆಚಾರ-ವಿಚಾರ, ಸಂಸ್ಕೃತಿ ಮತ್ತು ಸಂಸ್ಕಾರದ ಜೊತೆಗೆ ಧರ್ಮಬೋಧನೆಯ ಮೂಲಕ ಸ್ವಸ್ಥ ಹಾಗೂ ಸಶಕ್ತ ಸಮಾಜ ನಿರ್ಮಾಣ ಮಾಡುವ ಕಾರ್ಯದಲ್ಲಿ ನಾಡಿನ ಮಠ-ಮಂದಿರಗಳು ಹಲವು ವರ್ಷಗಳಿಂದ ಯಾವುದೇ ನಿರೀಕ್ಷೆಯಿಲ್ಲದೆ ತೊಡಗಿಸಿಕೊಂಡಿವೆ. ಆದರೆ ಇಷ್ಟರವರೆಗೆ ಮಠ-ಮಂದಿರಗಳಿಗೆ ಯಾರೊಬ್ಬರೂ ನಯಾಪೈಸೆ ಅನುದಾನ ನೀಡಿಲ್ಲ.
ಬಿಜೆಪಿಯವರು ಮಠ-ಮಂದಿರಗಳ ಪರ ಇರುವುದಾಗಿ ತೋರಿಸಿಕೊಳ್ಳುತ್ತಾರೆ. ಆದರೆ ಅವರ ಸರ್ಕಾರದ ಅವಧಿಯಲ್ಲೂ ಮಠ-ಮಂದಿರಗಳಿಗೆ ಯಾವುದೇ ಅನುದಾನ ನೀಡಿಲ್ಲ. ಯಾವುದೇ ಸ್ವಾಮೀಜಿಗಳು ಅನುದಾನ ಕೇಳಿರಲಿಲ್ಲ. ಆದರೂ ಅವರು ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿ, ಅನುದಾನ ನೀಡುವಂತೆ ನಾನೇ ಸ್ವಇಚ್ಛೆಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನನ್ನ ಮನವಿಗೆ ಸ್ಪಂದಿಸಿದ್ದು, ಇದೀಗ ಅನುದಾನ ಬಿಡುಗಡೆಗೆ ಆದೇಶವಾಗಿದೆ. ನಮ್ಮದು ನಕಲಿ ಹಿಂದುತ್ವವಲ್ಲ, ನೈಜ ಹಿಂದುತ್ವ” ಎಂದು ಹೇಳಿದರು.
— ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು
ಅಂತರ ರಾಜ್ಯ
Jnanesh Kumar-ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ಗೆ ಸಂಕಷ್ಟ: ಲಂಚ ಆರೋಪದ ತನಿಖೆಗೆ ಕೇರಳ ಸರಕಾರ ಅನುಮತಿ
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇರಳ ಸರಕಾರವು ಜಾಗ್ರತ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ವಿಎಸಿಬಿ) ಅನುಮತಿ ನೀಡಿದೆ. 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವಧಿಗೆ ಸಂಬಂಧಿಸಿದಂತೆ ಈ ತನಿಖೆಗೆ ಅನುಮತಿ ನೀಡಲಾಗಿದೆ.
ತಿರುವನಂತಪುರ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇರಳ ಸರಕಾರವು ಜಾಗ್ರತ ಮತ್ತು ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ (ವಿಎಸಿಬಿ) ಅನುಮತಿ ನೀಡಿದೆ. 2006ರಲ್ಲಿ ಕೇರಳದ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವಧಿಗೆ ಸಂಬಂಧಿಸಿದಂತೆ ಈ ತನಿಖೆಗೆ ಅನುಮತಿ ನೀಡಲಾಗಿದೆ.
ಕೇರಳ ಕೇಡರ್‌ನ 1988ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್ ವಿರುದ್ಧ ಕೇರಳ ರಾಜ್ಯ ಸಾರಿಗೆ ಯೋಜನೆಯ (ಕೆಎಸ್‌ಟಿಪಿ) ಮಾಜಿ ಗುತ್ತಿಗೆದಾರ ಸಾಜನ್ ವಿ.ಒ. ಅವರು ಹೊಸದಾಗಿ ಲಂಚದ ದೂರು ಸಲ್ಲಿಸಿದ್ದಾರೆ.
ಕಾನೂನು ಸಲಹೆ ಪಡೆದ ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆಯ ಕಲಂ 17ಎ ಅಡಿಯಲ್ಲಿ ಪ್ರಾಥಮಿಕ ತನಿಖೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಆರೋಪಗಳು ಗಂಭೀರವಾಗಿದ್ದು, ವಿವರವಾದ ತನಿಖೆಯ ಅಗತ್ಯವಿದೆ. ಎಫ್‌ಐಆರ್ ದಾಖಲಿಸಬೇಕೇ ಅಥವಾ ಬೇಡವೇ ಎಂಬುದನ್ನು ವಿಎಸಿಬಿ ನಿರ್ದೇಶಕರು ನಿರ್ಧರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಾಜನ್ ಅವರ ಆರೋಪದ ಪ್ರಕಾರ, 2006ರಲ್ಲಿ ಕೆಎಸ್‌ಟಿಪಿ ಯೋಜನೆಯಡಿ ಎಂ.ಸಿ. ರಸ್ತೆಯ ಮೇಲ್ದರ್ಜೆಗೇರಿಸುವ ಕಾಮಗಾರಿಯ ಉಪಗುತ್ತಿಗೆಯನ್ನು ಅವರು ವಹಿಸಿಕೊಂಡಿದ್ದರು. ಈ ಕಾಮಗಾರಿಗೆ ಸಂಬಂಧಿಸಿದ 14 ಕೋಟಿ ರೂ. ಮೊತ್ತದ ಬಿಲ್‌ಗಳನ್ನು ಮಂಜೂರು ಮಾಡಲು ಜ್ಞಾನೇಶ್ ಕುಮಾರ್ ಅವರು ಭಾರತ-ಮಲೇಶಿಯಾ ಜಂಟಿ ಉದ್ಯಮ ಸಂಸ್ಥೆಯಾದ ಪಿಎಟಿಐ-ಬಿಇಎಲ್‌ನ ಮುಖ್ಯ ಯೋಜನಾಧಿಕಾರಿ ಲೀ ಸೀ ಬೀನ್ ಅವರಿಂದ 2 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಬಿಲ್‌ಗಳ ಪಾವತಿ ತಡೆಹಿಡಿಯಲ್ಪಟ್ಟಿದ್ದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಲೀ ಸೀ ಬೀನ್ ಅವರು 2006ರ ನವೆಂಬರ್ 11ರಂದು ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಪತ್ನಿ ಹಾಗೂ ಮೇಲಧಿಕಾರಿಗೆ ಬರೆದಿದ್ದ ಆತ್ಮಹತ್ಯಾ ಟಿಪ್ಪಣಿಯಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಿದ್ದರು ಎಂದು ಸಾಜನ್ ಆರೋಪಿಸಿದ್ದಾರೆ.
ಈ ಹಿಂದೆ ಈ ಆರೋಪ ಕೇಳಿಬಂದಾಗ ಜ್ಞಾನೇಶ್ ಕುಮಾರ್ ಅವರನ್ನು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿ ತನಿಖೆಗೆ ಆದೇಶಿಸಲಾಗಿತ್ತು. ಆದರೆ, ಅವರನ್ನು ಆರೋಪಮುಕ್ತರನ್ನಾಗಿ ಮಾಡಲು ತನಿಖೆಯನ್ನು ದಾರಿ ತಪ್ಪಿಸಲಾಗಿತ್ತು ಎಂಬುದು ಸಾಜನ್ ಅವರ ಮತ್ತೊಂದು ಆರೋಪವಾಗಿದೆ.
ಪ್ರಸ್ತುತ ನಡೆಯಲಿರುವ ತನಿಖೆಗೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಎಲ್ಲ ಸಾಕ್ಷ್ಯಾಧಾರಗಳನ್ನು ಒದಗಿಸಲು ಸಿದ್ಧವಿರುವುದಾಗಿ ಸಾಜನ್ ತಿಳಿಸಿದ್ದಾರೆ. ಇದೀಗ ಕೇರಳ ಸರಕಾರದ ಅನುಮತಿಯೊಂದಿಗೆ ವಿಎಸಿಬಿ ತನಿಖೆ ಆರಂಭಿಸಲು ಸಜ್ಜಾಗಿದೆ.
-
ನಿಧನ ವಾರ್ತೆ9 hours ago
ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ
-
ನಿಧನ ವಾರ್ತೆ14 hours agoSuicide-ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!
-
ಅಪರಾಧ17 hours ago
ಪುತ್ತೂರು : ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
-
ರಾಜಕೀಯ15 hours agoAishwarya Hegde-ಸಿಎಂ ಮುಂದೆಯೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ..!
-
ಸ್ಥಳೀಯ14 hours agoAddahole-ಅಡ್ಡಹೊಳೆಯಲ್ಲಿ ಕಾರಿನ ಮೇಲೆ ಮಗುಚಿಬಿದ್ದ ಕಂಟೈನರ್ ಲಾರಿ: ದಂಪತಿ, ಮಕ್ಕಳು ಪವಾಡಸದೃಶ ಪಾರು..!
-
ಉಡುಪಿ14 hours agoAnil Kumar-ಬಾಳೆಕುದ್ರು ಶ್ರೀಗಳು ಪರಾರಿಯಾಗಿಲ್ಲ, ವಿಗ್ರಹಗಳೂ ಕಳವಾಗಿಲ್ಲ: ಆಡಳಿತಾಧಿಕಾರಿ ಅನಿಲ್ ಕುಮಾರ್ ಸ್ಪಷ್ಟನೆ
-
ಬಿಗ್ ನ್ಯೂಸ್14 hours agoChatGPT- ಪತ್ನಿಗೆ ಹತ್ಯೆ ಸಂಚು ರೂಪಿಸಲು ಸಲಹೆ ನೀಡಿದ ಆರೋಪ: ಚಾಟ್ಜಿಪಿಟಿ ವಿರುದ್ಧ ಪತಿ ಕಾನೂನು ದಾವೆ..!
-
ಅಂತರ ರಾಜ್ಯ14 hours agoArrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್ಟೇಕರ್ ಅರೆಸ್ಟ್..!
















