ಅಪರಾಧ
NMC ಹೆಲ್ತ್ಕೇರ್ ಬಹುಕೋಟಿ ವಂಚನೆ ಪ್ರಕರಣ: ಬಿ.ಆರ್. ಶೆಟ್ಟಿ, ಪ್ರಶಾಂತ್ ಮಂಗಾಟ್ಗೆ ಕೋರ್ಟ್ ಶಾಕ್; 5.397 ಬಿಲಿಯನ್ ಡಾಲರ್ ಹೊಣೆಗಾರಿಕೆ ನಿಗದಿ..!
ಬಹುಕೋಟಿ ಹಣಕಾಸು ವಂಚನೆಯಿಂದ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ NMC ಹೆಲ್ತ್ಕೇರ್ ಪ್ರಕರಣದಲ್ಲಿ ಸಂಸ್ಥಾಪಕ ಬಿ.ಆರ್. ಶೆಟ್ಟಿ ಮತ್ತು ಕಂಪೆನಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಪ್ರಶಾಂತ್ ಮಂಗಾಟ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಪೆನಿಯಲ್ಲಿ ನಡೆದ ಬೃಹತ್ ಹಣಕಾಸು ವಂಚನೆಯಲ್ಲಿ ಇಬ್ಬರೂ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದರು ಎಂದು ಅಬುಧಾಬಿ ಗ್ಲೋಬಲ್ ಮಾರ್ಕೆಟ್ (ADGM) ನ್ಯಾಯಾಲಯ ತೀರ್ಪು ನೀಡಿದೆ.
ಅಬುಧಾಬಿ: ಬಹುಕೋಟಿ ಹಣಕಾಸು ವಂಚನೆಯಿಂದ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ NMC ಹೆಲ್ತ್ಕೇರ್ ಪ್ರಕರಣದಲ್ಲಿ ಸಂಸ್ಥಾಪಕ ಬಿ.ಆರ್. ಶೆಟ್ಟಿ ಮತ್ತು ಕಂಪೆನಿಯ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಪ್ರಶಾಂತ್ ಮಂಗಾಟ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಂಪೆನಿಯಲ್ಲಿ ನಡೆದ ಬೃಹತ್ ಹಣಕಾಸು ವಂಚನೆಯಲ್ಲಿ ಇಬ್ಬರೂ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದರು ಎಂದು ಅಬುಧಾಬಿ ಗ್ಲೋಬಲ್ ಮಾರ್ಕೆಟ್ (ADGM) ನ್ಯಾಯಾಲಯ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಇಬ್ಬರ ಹಣಕಾಸಿನ ಹೊಣೆಗಾರಿಕೆಯನ್ನು ನಿರ್ಧರಿಸಲು 5.397 ಬಿಲಿಯನ್ ಡಾಲರ್ (ಸುಮಾರು 19.82 ಬಿಲಿಯನ್ ದಿರ್ಹಮ್) ಮೊತ್ತವನ್ನು ಆರಂಭಿಕ ಆಧಾರವಾಗಿ ಗುರುತಿಸಲಾಗಿದೆ. ಆದರೆ, ಇಬ್ಬರೂ ಪ್ರತ್ಯೇಕವಾಗಿ ಪಾವತಿಸಬೇಕಾದ ಅಂತಿಮ ಮೊತ್ತವನ್ನು ಇನ್ನೂ ನಿರ್ಧರಿಸಿಲ್ಲ ಎಂದು Gulf News ವರದಿ ಮಾಡಿದೆ.
ನವೆಂಬರ್ 5ರಂದು ನ್ಯಾಯಮೂರ್ತಿ ಸರ್ ಆಂಡ್ರ್ಯೂ ಸ್ಮಿತ್ ನೀಡಿದ ತೀರ್ಪಿನಲ್ಲಿ, ಶೆಟ್ಟಿ ಮತ್ತು ಮಂಗಾಟ್ ಇಬ್ಬರೂ ವಂಚನೆಯ ಮೂಲಕ ನಡೆಸಲಾಗುತ್ತಿದ್ದ ವ್ಯವಹಾರಗಳಲ್ಲಿ ಭಾಗಿಯಾಗಿದ್ದರು ಎಂದು ಸ್ಪಷ್ಟಪಡಿಸಲಾಗಿದೆ.
NMC ಹೆಲ್ತ್ಕೇರ್, NMC ಹೋಲ್ಡಿಂಗ್ ಹಾಗೂ ಅವುಗಳ ಜಂಟಿ ಆಡಳಿತಾಧಿಕಾರಿಗಳು ದಾಖಲಿಸಿದ್ದ ದಿವಾಳಿತನ ಮತ್ತು ಯುಎಇ ನಾಗರಿಕ ಹಕ್ಕುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಈ ತೀರ್ಪು ಹೊರಬಿದ್ದಿದೆ. ಇದೇ ವೇಳೆ, ಮಂಗಾಟ್ ವಿರುದ್ಧ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ (ADCB) ದಾಖಲಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿಯೂ ಬ್ಯಾಂಕ್ ಪರವಾಗಿ ನ್ಯಾಯಾಲಯ ತೀರ್ಪು ನೀಡಿದೆ.
ಶೆಟ್ಟಿ ವೈಯಕ್ತಿಕ ಖಾತೆಗಳಿಗೆ ಹರಿದು ಬಂದಿತ್ತು 2.6 ಬಿಲಿಯನ್ ದಿರ್ಹಮ್..!
NMC ಕಂಪೆನಿಯ ಖಾತೆಗಳಿಂದ ಬಿ.ಆರ್. ಶೆಟ್ಟಿ ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಒಟ್ಟು 4.183 ಬಿಲಿಯನ್ ದಿರ್ಹಮ್ ವರ್ಗಾವಣೆಯಾಗಿರುವುದಕ್ಕೆ ಲೆಕ್ಕಪತ್ರ ದಾಖಲೆಗಳು ಸಾಕ್ಷಿಯಾಗಿವೆ ಎಂದು ನ್ಯಾಯಾಲಯ ತಿಳಿಸಿದೆ.
ಈ ಸಂಬಂಧ 500ಕ್ಕೂ ಹೆಚ್ಚು ಹಣ ವರ್ಗಾವಣೆಗಳ ವಿವರಗಳನ್ನು ಹಕ್ಕುದಾರರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇವುಗಳಲ್ಲಿ ಬಹುತೇಕ ವರ್ಗಾವಣೆಗಳು ಬ್ಯಾಂಕ್ ಆಫ್ ಬರೋಡಾದಲ್ಲಿದ್ದ NMC ಗ್ರೂಪ್ ಖಾತೆಗಳಿಂದ ಶೆಟ್ಟಿ ಅವರ ಮೂರು ವೈಯಕ್ತಿಕ ಖಾತೆಗಳಿಗೆ ನಡೆದಿದ್ದವು.
ವರ್ಗಾವಣೆಯಾದ ಹಣದ ಒಂದು ಭಾಗವನ್ನು ಮತ್ತೆ NMCಗೆ ಹಿಂದಿರುಗಿಸಲಾಗಿತ್ತು. ಇದನ್ನು ಕಡಿತಗೊಳಿಸಿದ ಬಳಿಕ ಶೆಟ್ಟಿ ಅವರ ಖಾತೆಗಳಿಗೆ ವರ್ಗಾವಣೆಯಾಗಿದ್ದ ನಿವ್ವಳ ಮೊತ್ತ 2.6 ಬಿಲಿಯನ್ ದಿರ್ಹಮ್ ಎಂದು ನ್ಯಾಯಾಲಯ ಗುರುತಿಸಿದೆ.
ಕಂಪೆನಿಯ ಹಣವನ್ನು ಬಳಸಿಕೊಂಡು ಶೆಟ್ಟಿ ವೈಯಕ್ತಿಕ ಆಸ್ತಿಗಳು ಮತ್ತು ಹೂಡಿಕೆಗಳನ್ನು ಮಾಡಿದ್ದರು ಎಂಬುದನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ಟ್ರಾವೆಲೆಕ್ಸ್ನಲ್ಲಿನ ಹೂಡಿಕೆ, ಖಾಸಗಿ ವಿಮಾನದಲ್ಲಿನ ಪಾಲು, ದುಬೈ ಹಿಲ್ಸ್ನಲ್ಲಿನ ಆಸ್ತಿಗಳು ಹಾಗೂ ಅಮೆರಿಕದ ವೋಮಿಂಗ್ನಲ್ಲಿನ ತೈಲ ಹೂಡಿಕೆಗಳು ಇದರಲ್ಲಿ ಸೇರಿವೆ.
2014ರ ಜುಲೈನಲ್ಲಿ ಶೆಟ್ಟಿ ಮತ್ತು ಪುತನ್ ಎನ್.ಸಿ. ಮೆನನ್ ಅವರು ಗಲ್ಫ್ಸ್ಟ್ರೀಮ್ G450 ಮಾದರಿಯ ಖಾಸಗಿ ವಿಮಾನವನ್ನು ಸಮಾನ ಪಾಲುದಾರಿಕೆಯ ಒಪ್ಪಂದದಡಿ ಖರೀದಿಸಿದ್ದರು. ಇತರ ಸ್ವಾಧೀನಗಳಿಗೂ NNMC ಸಂಸ್ಥೆಯನ್ನು ಬಳಸಲಾಗಿತ್ತು. ಈ ಸಂಸ್ಥೆಯಲ್ಲಿ ಶೆಟ್ಟಿ ಏಕೈಕ ಷೇರುದಾರರಾಗಿದ್ದರೆ, ಶೆಟ್ಟಿ ಮತ್ತು ಮಂಗಾಟ್ ನಿರ್ದೇಶಕರಾಗಿದ್ದರು.
3.888 ಬಿಲಿಯನ್ ಡಾಲರ್ ಸಾಲ ಮರೆಮಾಚಿದ್ದ NMC..!
NMCಯ ಹಣಕಾಸು ಅಕ್ರಮಗಳ ಮತ್ತೊಂದು ಪ್ರಮುಖ ಅಂಶವೆಂದರೆ ಕಂಪೆನಿಯ ನೈಜ ಸಾಲದ ವಿವರಗಳನ್ನು ಮರೆಮಾಚಿರುವುದು. 2018ರ ಡಿಸೆಂಬರ್ 31ರ ವೇಳೆಗೆ ಕಂಪೆನಿ ಬಹಿರಂಗಪಡಿಸದೆ ಉಳಿಸಿದ್ದ ಸಾಲದ ಮೊತ್ತ ಬರೋಬ್ಬರಿ 3.888 ಬಿಲಿಯನ್ ಡಾಲರ್ ಆಗಿತ್ತು. ಇದೇ ಅವಧಿಯಲ್ಲಿ ಅಧಿಕೃತವಾಗಿ ವರದಿ ಮಾಡಿದ್ದ ಸಾಲದ ಮೊತ್ತ ಕೇವಲ 1.993 ಬಿಲಿಯನ್ ಡಾಲರ್ ಆಗಿತ್ತು.
2012ರಿಂದ 2019ರ ಜೂನ್ 30ರವರೆಗಿನ ಅವಧಿಯಲ್ಲಿ ಕಂಪೆನಿಯ ಒಟ್ಟು ಸಾಲ ಹಾಗೂ ಬಹಿರಂಗಪಡಿಸದ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿತ್ತು ಎಂದು ನ್ಯಾಯಾಲಯ ಕಂಡುಕೊಂಡಿದೆ.
ಆಂತರಿಕ ಲೆಕ್ಕಪತ್ರಗಳಲ್ಲಿ ನೈಜ ಸಾಲದ ವಿವರಗಳನ್ನು ದಾಖಲಿಸಲಾಗಿದ್ದರೂ, ದಾಖಲೆಗಳನ್ನು ತಿರುಚುವ ಮೂಲಕ ಲೆಕ್ಕಪರಿಶೋಧನಾ ಸಂಸ್ಥೆ ಅರ್ನ್ಸ್ಟ್ ಆ್ಯಂಡ್ ಯಂಗ್ (EY)ಗೂ ಈ ಮಾಹಿತಿ ತಿಳಿಯದಂತೆ ಮಾಡಲಾಗಿತ್ತು.
ನೈಜವಾಗಿ ಯಾವುದೇ ಸರಕು ಅಥವಾ ಸೇವೆಗಳನ್ನು ಪೂರೈಸದ ಸಂಸ್ಥೆಗಳ ಹೆಸರಿನಲ್ಲಿ ನಕಲಿ ವಹಿವಾಟುಗಳನ್ನು ಸೃಷ್ಟಿಸಿ ಹಣಕಾಸು ಪಡೆಯುವ ವ್ಯವಸ್ಥೆಯನ್ನೂ ಬಳಸಲಾಗಿತ್ತು. ಕಂಪೆನಿಯ ಲೆಕ್ಕಪತ್ರ ವ್ಯವಸ್ಥೆಗಳನ್ನು ನವೀಕರಿಸಿದ ಸಂದರ್ಭದಲ್ಲಿಯೂ ಎರಡು ಪ್ರತ್ಯೇಕ ಲೆಕ್ಕಪತ್ರಗಳನ್ನು ನಿರ್ವಹಿಸುವ ಮೂಲಕ ವಂಚನೆಯನ್ನು ಮುಂದುವರಿಸಲಾಗಿತ್ತು ಎಂದು ನ್ಯಾಯಾಲಯ ತಿಳಿಸಿದೆ.
ಶೆಟ್ಟಿ, ಮಂಗಾಟ್ ಪರಸ್ಪರ ಆರೋಪ; ಇಬ್ಬರ ವಾದ ತಿರಸ್ಕರಿಸಿದ ಕೋರ್ಟ್
ವಂಚನೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ. ಮಂಗಾಟ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳ ದುಷ್ಕೃತ್ಯಕ್ಕೆ ತಾನೇ ಬಲಿಯಾಗಿದ್ದೆ ಎಂದು ಬಿ.ಆರ್. ಶೆಟ್ಟಿ ನ್ಯಾಯಾಲಯದಲ್ಲಿ ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ, ಶೆಟ್ಟಿ ತಮ್ಮ ವೈಯಕ್ತಿಕ ಲಾಭಕ್ಕಾಗಿ ವಂಚನೆ ನಡೆಸಿದ್ದರು ಎಂದು ಮಂಗಾಟ್ ಆರೋಪಿಸಿದ್ದರು. ಕಂಪೆನಿಯ ಹಣಕಾಸು ವ್ಯವಹಾರಗಳ ಮೇಲೆ ತನಗೆ ಯಾವುದೇ ನಿಯಂತ್ರಣವಿರಲಿಲ್ಲ ಮತ್ತು ಪ್ರಮುಖ ಷೇರುದಾರರ ಅಧೀನದಲ್ಲಿ ತಾನು ಕೆಲಸ ಮಾಡುತ್ತಿದ್ದೆ ಎಂದೂ ವಾದಿಸಿದ್ದರು.
ಆದರೆ, ಇಬ್ಬರ ವಾದಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ. ಇಬ್ಬರೂ ವಂಚನೆಯಲ್ಲಿ ಅಪ್ರಾಮಾಣಿಕವಾಗಿ ಭಾಗಿಯಾಗಿದ್ದರು ಎಂದು ತೀರ್ಮಾನಿಸಿದೆ.
ಕಂಪೆನಿಯ CEO ಆಗಿದ್ದ ಮಂಗಾಟ್ ಅವರು ಹಣಕಾಸು ವ್ಯವಹಾರಗಳ ಮೇಲೆ ತನಗೆ ನಿಯಂತ್ರಣವಿರಲಿಲ್ಲ ಎಂದು ಹೇಳಿರುವುದನ್ನು ನ್ಯಾಯಮೂರ್ತಿ ಸ್ಮಿತ್ ಪ್ರಶ್ನಿಸಿದ್ದಾರೆ. FTSE 100 ಕಂಪೆನಿಯ CEO ಆಗಿದ್ದ ವ್ಯಕ್ತಿಯೊಬ್ಬರು ಇಂತಹ ವಾದ ಮಂಡಿಸುವುದು ಅಸಂಭವನೀಯವಾಗಿದ್ದು, ಅದು ಲಭ್ಯವಿರುವ ಸಾಕ್ಷ್ಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
NMCಯ ಪ್ರಮುಖ ನಿರ್ಧಾರಗಳನ್ನು ಮಂಗಾಟ್ ಅವರೇ ತೆಗೆದುಕೊಳ್ಳುತ್ತಿದ್ದರು. ಕಂಪೆನಿಯ ಹಣಕಾಸು ಮತ್ತು ಖಜಾನೆ ವ್ಯವಹಾರಗಳ ನಿರ್ವಹಣೆಯೂ ಅವರ ಜವಾಬ್ದಾರಿಯಾಗಿತ್ತು ಎಂದು ನ್ಯಾಯಾಲಯ ಹೇಳಿದೆ.
ಕಂಪೆನಿಯ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಶೆಟ್ಟಿ ಮತ್ತು ಇತರರಿಗೆ ನೆರವಾಗಿದ್ದಲ್ಲದೆ, EYಯಿಂದ ಸಾಲದ ವಿವರಗಳನ್ನು ಮರೆಮಾಚುವ ಪ್ರಕ್ರಿಯೆಯಲ್ಲಿಯೂ ಮಂಗಾಟ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಮಂಗಾಟ್ ವಿರುದ್ಧ ADCBಗೆ 1.022 ಬಿಲಿಯನ್ ಡಾಲರ್ ವಸೂಲಿಗೆ ಅವಕಾಶ
ಮಂಗಾಟ್ ವಿರುದ್ಧ ಅಬುಧಾಬಿ ಕಮರ್ಷಿಯಲ್ ಬ್ಯಾಂಕ್ (ADCB) ದಾಖಲಿಸಿದ್ದ ಪ್ರತ್ಯೇಕ ಪ್ರಕರಣದಲ್ಲಿಯೂ ನ್ಯಾಯಾಲಯ ಬ್ಯಾಂಕ್ ಪರವಾಗಿ ತೀರ್ಪು ನೀಡಿದೆ.
ಮಂಗಾಟ್ ಅವರಿಂದ ಸುಮಾರು 1.022 ಬಿಲಿಯನ್ ಡಾಲರ್ ಬಾಕಿ ಹೊಣೆಗಾರಿಕೆ ಹಾಗೂ 168.989 ಮಿಲಿಯನ್ ಡಾಲರ್ ನಷ್ಟವಾದ ಲಾಭವನ್ನು ವಸೂಲಿ ಮಾಡಲು ಬ್ಯಾಂಕ್ ಅರ್ಹವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಆದರೆ, ಮಂಗಾಟ್ ಸಮರ್ಥಿಸಿಕೊಳ್ಳಬಹುದಾದ ಹೊಂದಾಣಿಕೆಗಳಿಗೆ ಅವಕಾಶವಿದ್ದು, ಬ್ಯಾಂಕ್ ಈಗಾಗಲೇ ವಸೂಲಿ ಮಾಡಿರುವ ಮೊತ್ತವನ್ನು ಒಟ್ಟು ಬಾಕಿಯಿಂದ ಕಡಿತಗೊಳಿಸಬೇಕಾಗಿದೆ.
ಬ್ಯಾಂಕ್ ಆಫ್ ಬರೋಡಾ ಪ್ರಕರಣ ಇತ್ಯರ್ಥ
NMC ಆಡಳಿತಾಧಿಕಾರಿಗಳು ದಾಖಲಿಸಿದ್ದ ಪ್ರಕರಣದಲ್ಲಿ ಬ್ಯಾಂಕ್ ಆಫ್ ಬರೋಡಾ ಕೂಡ ಆರಂಭದಲ್ಲಿ ಪ್ರತಿವಾದಿಯಾಗಿತ್ತು. ಆದರೆ, ವಿಚಾರಣೆಯ ಅಂತಿಮ ಹಂತದಲ್ಲಿ ಬ್ಯಾಂಕ್ ಹಕ್ಕುದಾರರೊಂದಿಗೆ ಒಪ್ಪಂದ ಮಾಡಿಕೊಂಡು ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿತ್ತು. ಹೀಗಾಗಿ ಬ್ಯಾಂಕ್ ವಿರುದ್ಧದ ದೂರುಗಳನ್ನು ಹಕ್ಕುದಾರರು ಹಿಂಪಡೆದಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
NMCಯ ನೈಜ ಹಣಕಾಸಿನ ಸ್ಥಿತಿಯನ್ನು ಮರೆಮಾಚುವ ಬದಲಾಗಿ ಕಂಪೆನಿಯ ಹೊಣೆಗಾರಿಕೆಗಳನ್ನು ಮರುಪಾವತಿಸಲು ಶೆಟ್ಟಿ ಮತ್ತು ಬ್ಯಾಂಕ್ ಆಫ್ ಬರೋಡಾದ ಆಗಿನ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್. ಜಯಕುಮಾರ್ ಒಪ್ಪಿಕೊಂಡಿದ್ದರೇ ಎಂಬುದರ ಕುರಿತು ತೀರ್ಮಾನಿಸಲು ನ್ಯಾಯಾಧೀಶರು ನಿರಾಕರಿಸಿದ್ದಾರೆ.
1975ರಲ್ಲಿ ಆರಂಭವಾಗಿತ್ತು NMC ಸಂಸ್ಥೆ
ಬಿ.ಆರ್. ಶೆಟ್ಟಿ ಅವರು 1975ರಲ್ಲಿ ಅಬುಧಾಬಿಯಲ್ಲಿ ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸುವ ಮೂಲಕ NMC ಸಂಸ್ಥೆಗೆ ಚಾಲನೆ ನೀಡಿದ್ದರು. ನಂತರ ಅದು ದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾಗಿ ಬೆಳೆದಿತ್ತು. 2012ರಲ್ಲಿ ಕಂಪೆನಿಯ ಮಾತೃಸಂಸ್ಥೆ ಲಂಡನ್ ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿತ್ತು.
ಆದರೆ, ಹಣಕಾಸಿನ ಅಕ್ರಮಗಳು ಬಹಿರಂಗವಾದ ಹಿನ್ನೆಲೆಯಲ್ಲಿ 2020ರ ಏಪ್ರಿಲ್ 9ರಂದು ಇಂಗ್ಲೆಂಡ್ನ ಹೈಕೋರ್ಟ್ ಆದೇಶದ ಮೇರೆಗೆ ಕಂಪೆನಿ ಆಡಳಿತಾಧಿಕಾರಿಗಳ ನಿಯಂತ್ರಣಕ್ಕೆ ಒಳಪಟ್ಟಿತ್ತು. ಅದೇ ವರ್ಷದ ಸೆಪ್ಟೆಂಬರ್ನಲ್ಲಿ NMC ಹೆಲ್ತ್ಕೇರ್, NMC ಹೋಲ್ಡಿಂಗ್ ಮತ್ತು ಸಮೂಹದ 34 ಕಂಪೆನಿಗಳು ADGM ಆಡಳಿತ ಪ್ರಕ್ರಿಯೆಗೆ ಒಳಪಟ್ಟಿದ್ದವು.
ಅಂತಿಮ ಹೊಣೆಗಾರಿಕೆ ಮೊತ್ತಕ್ಕೆ ಇನ್ನೂ ಕಾಯಬೇಕು
2012ರ ಏಪ್ರಿಲ್ 30ರಿಂದ 2020ರ ಏಪ್ರಿಲ್ 9ರವರೆಗಿನ ಅವಧಿಯಲ್ಲಿ ಶೆಟ್ಟಿ ಮತ್ತು ಮಂಗಾಟ್ ಇಬ್ಬರೂ ವಂಚನೆಯ ವ್ಯವಹಾರಗಳಲ್ಲಿ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದರು ಎಂದು ನ್ಯಾಯಾಲಯ ತೀರ್ಮಾನಿಸಿದೆ.
ಆದರೆ, 5.397 ಬಿಲಿಯನ್ ಡಾಲರ್ ಮೊತ್ತವು ಹಣಕಾಸಿನ ಹೊಣೆಗಾರಿಕೆ ನಿರ್ಧರಿಸುವ ಆರಂಭಿಕ ಆಧಾರ ಮಾತ್ರವಾಗಿದೆ. ಇಬ್ಬರೂ ಪ್ರತ್ಯೇಕವಾಗಿ ಪಾವತಿಸಬೇಕಾದ ಅಂತಿಮ ಮೊತ್ತವನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುತ್ತದೆ.
ಇದರೊಂದಿಗೆ ಶಾಸನಬದ್ಧ ಬಡ್ಡಿ, ನ್ಯಾಯಾಲಯದ ವೆಚ್ಚಗಳು ಹಾಗೂ ಇತರ ಬಾಕಿ ವಿಷಯಗಳನ್ನೂ ಪರಿಶೀಲಿಸಲಾಗುತ್ತದೆ. ಒಂದೇ ನಷ್ಟಕ್ಕೆ ನಾಗರಿಕ ಮತ್ತು ದಿವಾಳಿತನಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣಗಳ ಮೂಲಕ ಎರಡು ಬಾರಿ ಹಣ ವಸೂಲಿ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಬಂಧನೆಯನ್ನೂ ತೀರ್ಪು ಒಳಗೊಂಡಿದೆ.
ಅಪರಾಧ
Puttur-ಪುತ್ತೂರು: ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಪೋಕ್ಸೋ ಆರೋಪಿಗೆ ಜಾಮೀನು
ಮದುವೆಯಾಗುವುದಾಗಿ ನಂಬಿಸಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಪೋಕ್ಸೋ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ 14 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಪೋಕ್ಸೋ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಹೃತಿಕ್ ರೋಷನ್ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2025ರ ಫೆಬ್ರವರಿ 2 ಮತ್ತು ಜೂನ್ 16ರಂದು ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಸಂತ್ರಸ್ತ ಬಾಲಕಿ ಟೈಲರ್ ಅಂಗಡಿಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿಗೆ ಪರಿಚಯವಾಗಿತ್ತು ಎನ್ನಲಾಗಿದೆ. ಬಳಿಕ ಆಕೆಯನ್ನು ಕರೆದೊಯ್ದು ಶಾಲೆಯೊಂದರ ಮೆಟ್ಟಿಲಿನ ಬಳಿ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಜೂನ್ 16ರಂದು ಗುಡ್ಡ ಪ್ರದೇಶವೊಂದರಲ್ಲಿ ಮತ್ತೊಮ್ಮೆ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಅಪರಾಧ
Kanyana-ಕನ್ಯಾನದಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಪತ್ತೆ: ಲಾರಿ ವಶಕ್ಕೆ
ಪರವಾನಿಗೆ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ಸಾಗಿಸುತ್ತಿದ್ದ ಲಾರಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ಕನ್ಯಾನ ಗ್ರಾಮದ ಬೈರಿಕಟ್ಟೆಯಲ್ಲಿ ನಡೆದಿದೆ.
ಬಂಟ್ವಾಳ: ಪರವಾನಿಗೆ ಹಾಗೂ ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಕೆಂಪು ಲ್ಯಾಟರೈಟ್ ಮಣ್ಣು ಸಾಗಿಸುತ್ತಿದ್ದ ಲಾರಿಯನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದ ಘಟನೆ ಕನ್ಯಾನ ಗ್ರಾಮದ ಬೈರಿಕಟ್ಟೆಯಲ್ಲಿ ನಡೆದಿದೆ.
ಸಾರ್ವಜನಿಕ ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ KA-21-C-4608 ನೋಂದಣಿ ಸಂಖ್ಯೆಯ ಲಾರಿ ರಸ್ತೆಯಲ್ಲಿ ನಿಂತಿರುವುದು ಕಂಡುಬಂದಿದೆ.
ಲಾರಿ ಚಾಲಕ ಹಾಸನ ಜಿಲ್ಲೆಯ ಸಕಲೇಶಪುರದ ಇರ್ಫಾನ್ ಪಾಷಾ (40) ಅವರನ್ನು ವಿಚಾರಿಸಿದಾಗ, ಲಾರಿ ದುರಸ್ತಿಗೀಡಾಗಿರುವುದಾಗಿ ತಿಳಿಸಿದ್ದಾರೆ. ಬಳಿಕ ಲಾರಿಯಲ್ಲಿದ್ದ ಮಣ್ಣಿನ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, ಯಾವುದೇ ಪರವಾನಿಗೆ ಇಲ್ಲದೆ ಕೆಂಪು ಲ್ಯಾಟರೈಟ್ ಮಣ್ಣು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಈ ಸಂಬಂಧ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಬಿಎನ್ಎಸ್ 2023ರ ಕಲಂ 303(2), ಎಂಎಂಡಿಆರ್ ಕಾಯ್ದೆ 1957ರ ಕಲಂ 4(1), 4(1ಎ), 21 ಹಾಗೂ ಕರ್ನಾಟಕ ಸಣ್ಣ ಖನಿಜ ರಿಯಾಯಿತಿ ನಿಯಮಾವಳಿ 1994ರ ಕಲಂ 3 ಮತ್ತು 44ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.
ಅಪರಾಧ
Mangalore-ಮಂಗಳೂರು: ಎಲೆಕ್ಟ್ರಿಷಿಯನ್ಗೆ ಹಲ್ಲೆ, ಹಣ ಸುಲಿಗೆ ಆರೋಪ: ಪಾಂಡೇಶ್ವರ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಕೇಸ್
ಎಲೆಕ್ಟ್ರಿಷಿಯನ್ ಒಬ್ಬರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು, ನ.6: ಎಲೆಕ್ಟ್ರಿಷಿಯನ್ ಒಬ್ಬರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವಿಟ್ಲದ ಮುಳ್ಳೂರು ಮೂಲದವರಾದ, ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ಶಿವನಗರದಲ್ಲಿ ವಾಸವಾಗಿರುವ ರವಿರಾಜ್ (39) ಅವರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ. ಪಾಂಡೇಶ್ವರ ಠಾಣೆಯ ಶಿವರಾಜ್, ಹೊಯ್ಸಳ ವಾಹನದ ಚಾಲಕ ಹೀರಣ್ಣ ಬೆನ್ನಿ ಹಾಗೂ ಇನ್ನೋರ್ವ ಸಿಬ್ಬಂದಿ ಉಮಾನಾಥ ಆರೋಪಿಗಳಾಗಿದ್ದಾರೆ. ಈ ಪೈಕಿ ಶಿವರಾಜ್ ಮತ್ತು ಹೀರಣ್ಣ ಬೆನ್ನಿಯನ್ನು ಬಂಧಿಸಲಾಗಿದೆ.
ವಾಕಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಹಲ್ಲೆ ಆರೋಪ
ದೂರಿನ ಪ್ರಕಾರ, ಅಕ್ಟೋಬರ್ 25ರಂದು ರಾತ್ರಿ ಸುಮಾರು 10 ಗಂಟೆಗೆ ನೆಹರು ಮೈದಾನದಲ್ಲಿ ವಾಕಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ರವಿರಾಜ್ ಅವರನ್ನು ಆರ್ಟಿಒ ಕಚೇರಿ ಮುಂಭಾಗದ ಮೈದಾನದ ಗೇಟ್ ಬಳಿ ಹೊಯ್ಸಳ ವಾಹನದಲ್ಲಿ ಬಂದ ಹೀರಣ್ಣ ಬೆನ್ನಿ ಮತ್ತು ಶಿವರಾಜ್ ತಡೆದು ನಿಲ್ಲಿಸಿದ್ದಾರೆ.
ಈ ವೇಳೆ ಶಿವರಾಜ್ ಬೆತ್ತದಿಂದ ರವಿರಾಜ್ ಅವರ ಭುಜ ಮತ್ತು ಕಾಲಿಗೆ ಹೊಡೆದು, ಅವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ಮೊಬೈಲ್ ಕವರ್ನಲ್ಲಿದ್ದ 300 ರೂ. ತೆಗೆದುಕೊಂಡು ಅವಾಚ್ಯವಾಗಿ ನಿಂದಿಸಿ, ಮತ್ತೆ ಕಂಡರೆ ಜೈಲಿಗೆ ಹಾಕುವುದಾಗಿ ಬೆದರಿಕೆ ಹಾಕಿ ತೆರಳಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎರಡನೇ ಬಾರಿ ತಡೆದು 2 ಸಾವಿರ ರೂ. ಪಡೆದ ಆರೋಪ
ಅಕ್ಟೋಬರ್ 27ರಂದು ರಾತ್ರಿ ಸುಮಾರು 9.30ರ ವೇಳೆಗೆ ಅದೇ ಸ್ಥಳದಲ್ಲಿ ತೆರಳುತ್ತಿದ್ದ ರವಿರಾಜ್ ಅವರನ್ನು ಹೊಯ್ಸಳ ವಾಹನದಲ್ಲಿ ಬಂದ ಹೀರಣ್ಣ ಬೆನ್ನಿ ಮತ್ತು ಶಿವರಾಜ್ ಮತ್ತೆ ತಡೆದಿದ್ದಾರೆ. ಬಲವಂತವಾಗಿ ಮೊಬೈಲ್ ಕಸಿದುಕೊಂಡು, ಅದರ ಕವರ್ನಲ್ಲಿದ್ದ ಎರಡು ಎಟಿಎಂ ಕಾರ್ಡ್ಗಳು, 1,000 ರೂ. ನಗದು ಹಾಗೂ ದ್ವಿಚಕ್ರ ವಾಹನದ ಕೀಯನ್ನು ತೆಗೆದುಕೊಂಡು, ಅಲ್ಲಿಯೇ ಕಾಯುವಂತೆ ಹೇಳಿ ತೆರಳಿದ್ದಾರೆ ಎನ್ನಲಾಗಿದೆ.
ರಾತ್ರಿ 11.30ರ ಸುಮಾರಿಗೆ ವಾಪಸ್ ಬಂದ ಆರೋಪಿಗಳು ರವಿರಾಜ್ ಅವರನ್ನು ಹೊಯ್ಸಳ ವಾಹನದಲ್ಲಿ ಕುಳ್ಳಿರಿಸಿ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ತನ್ನ ಬಳಿ ಹಣವಿಲ್ಲ, ಎಟಿಎಂ ಕಾರ್ಡ್ ಮಾತ್ರ ಇದೆ ಎಂದು ತಿಳಿಸಿದಾಗ ಮೊಬೈಲ್ ಪಾಸ್ವರ್ಡ್ ಪಡೆದು ಬ್ಯಾಂಕ್ ಖಾತೆಯಲ್ಲಿದ್ದ ಹಣ ಪರಿಶೀಲಿಸಿದ್ದಾರೆ. ಖಾತೆಯಲ್ಲಿ 5 ಸಾವಿರ ರೂ. ಇರುವುದನ್ನು ಕಂಡು 2 ಸಾವಿರ ರೂ. ನೀಡುವಂತೆ ಒತ್ತಾಯಿಸಿ, ಹಣ ನೀಡದಿದ್ದರೆ ಜೈಲಿಗೆ ಹಾಕುವುದಾಗಿ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬ್ಯಾಂಕ್ ಸಾಲದ ಕಂತು ಪಾವತಿಸಲು ಹಣ ಬೇಕೆಂದು ರವಿರಾಜ್ ಹೇಳಿದರೂ ಕೇಳದೆ, ಮಂಗಳಾದೇವಿ ಬಳಿಯ ಎಟಿಎಂಗೆ ಕರೆದುಕೊಂಡು ಹೋಗಿ ಹಣ ಡ್ರಾ ಮಾಡುವಂತೆ ಒತ್ತಾಯಿಸಿದ್ದಾರೆ. ಅದರಂತೆ ರವಿರಾಜ್ 1,000 ರೂ. ಡ್ರಾ ಮಾಡಿ, ಮೊಬೈಲ್ ಕವರ್ನಲ್ಲಿದ್ದ ಮತ್ತೊಂದು 1,000 ರೂ. ಸೇರಿಸಿ ಒಟ್ಟು 2 ಸಾವಿರ ರೂ. ನೀಡಿದ್ದಾರೆ. ಬಳಿಕ ಮೊಬೈಲ್, ಇನ್ನೊಂದು ಎಟಿಎಂ ಕಾರ್ಡ್ ಹಾಗೂ ವಾಹನದ ಕೀಯನ್ನು ಹಿಂದಿರುಗಿಸಿ ಸಿಬ್ಬಂದಿ ತೆರಳಿದ್ದಾರೆ ಎಂದು ಆರೋಪಿಸಲಾಗಿದೆ.
ನ. 4ರಂದು ಮತ್ತೆ ಕಿರುಕುಳ ನೀಡಿದ ಆರೋಪ
ನವೆಂಬರ್ 4ರಂದು ರಾತ್ರಿ ಕೆಲಸ ಮುಗಿಸಿ ನೆಹರು ಮೈದಾನದಲ್ಲಿ ವಾಕಿಂಗ್ ಮಾಡಿದ ಬಳಿಕ ಹೊರಗೆ ನಿಂತಿದ್ದ ರವಿರಾಜ್ ಅವರನ್ನು ರಾತ್ರಿ 9.15ರ ಸುಮಾರಿಗೆ ಹೊಯ್ಸಳ ವಾಹನದಲ್ಲಿ ಬಂದ ಶಿವರಾಜ್ ಮತ್ತು ಉಮಾನಾಥ ಕರೆಸಿಕೊಂಡಿದ್ದಾರೆ. ಅವರ ಮೊಬೈಲ್ ಹಾಗೂ ದ್ವಿಚಕ್ರ ವಾಹನದ ಕೀಯನ್ನು ಪಡೆದು ವಾಹನದಲ್ಲಿ ಕುಳ್ಳಿರಿಸಿಕೊಂಡ ಶಿವರಾಜ್, ದಂಡ ಕಟ್ಟಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.
ಹಣವಿಲ್ಲದಿದ್ದಾಗ ದಂಡ ಏಕೆ ಕಟ್ಟಬೇಕು ಎಂದು ರವಿರಾಜ್ ಪ್ರಶ್ನಿಸಿದಾಗ, ಪಾಂಡೇಶ್ವರದ ಮಾಲ್ವರೆಗೆ ಕರೆದೊಯ್ದು ವಾಪಸ್ ಕರೆತಂದು ಮೊಬೈಲ್ ನೀಡಿದ್ದಾರೆ. ಬಳಿಕ ರವಿರಾಜ್ ಅವರ ಮೊಬೈಲ್ ಸಂಖ್ಯೆ ಪಡೆದು, ಮರುದಿನ ಬೆಳಗ್ಗೆ 10 ಗಂಟೆಗೆ ಠಾಣೆಗೆ ಬರುವಂತೆ ಸೂಚಿಸಿ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಶಿವರಾಜ್ ವಾಪಸ್ ಬಂದು ಹಣ ನೀಡಿದರೆ ವಾಹನ ಹಿಂದಿರುಗಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ರವಿರಾಜ್ ಮರುದಿನ ಠಾಣೆಗೆ ಬರುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದಾರೆ. ಅದೇ ರಾತ್ರಿ ಸಿಬ್ಬಂದಿ ಉಮಾನಾಥ ಕರೆ ಮಾಡಿ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಘಟನೆಯ ಬಗ್ಗೆ ರವಿರಾಜ್ ತಮ್ಮ ಮ್ಯಾನೇಜರ್ಗೆ ಮಾಹಿತಿ ನೀಡಿದ್ದು, ಅವರ ಸಲಹೆಯಂತೆ ದೂರು ನೀಡಿದ್ದಾರೆ.
-
ಕ್ರೈಂ21 hours ago7 ಮಂದಿಯ ಕೊಲೆ : ಶಿರಾಡಿ ಘಾಟ್ ನಲ್ಲಿ ಕೊನೆಯ ಎರಡು ಶವ ಪತ್ತೆ..! ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ..!
-
ಸುಳ್ಯ23 hours ago
ಕಾಣಿಯೂರು : ಚಾರ್ವಕದ ಕೋಳಿ ಅಂಕದಲ್ಲಿ ಹಣದ ಪಣ; ಪೊಲೀಸರ ದಾಳಿಗೆ ಜೂಜಾಟಗಾರರ ಪಲಾಯನ!; ಓರ್ವನ ಬಂಧನ
-
ಬಿಗ್ ನ್ಯೂಸ್15 hours agoBantwal-ಬಂಟ್ವಾಳ: ಫ್ಲೈಓವರ್ನಿಂದ ಸರ್ವೀಸ್ ರಸ್ತೆಗೆ ಉರುಳಿದ ಬುಲೆಟ್; ಸವಾರನಿಗೆ ಗಂಭೀರ ಗಾಯ
-
ಮಂಗಳೂರು18 hours agoMangalore-ರಾತ್ರೋರಾತ್ರಿ ಸುಟ್ಟು ಕರಕಲಾದ ಕಾರು; ಹರೇಕಳದಲ್ಲಿ ನಿಗೂಢ ಘಟನೆಯ ಸುತ್ತ ಹಲವು ಅನುಮಾನ..!
-
ಕಾರ್ಯಕ್ರಮಗಳು15 hours agoBolwar-ಬೊಳುವಾರಿನಲ್ಲಿ 32ನೇ ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರ ಉದ್ಘಾಟನೆ
-
ಅಂತರ ರಾಜ್ಯ21 hours agoSupreme Court-48 ಗಂಟೆ ನ್ಯಾಯಾಂಗ ಬಂಧನದಲ್ಲಿದ್ದರೆ ಸರ್ಕಾರಿ ನೌಕರ ಅಮಾನತು; ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ
-
ಸ್ಥಳೀಯ13 hours agoBeltangadi-ಪಟಾಕಿ ಮೇಲೆ ಕಾಲಿಟ್ಟ ಯುವಕ – ಪಾದ ಛಿದ್ರ..!
-
ಮಂಗಳೂರು21 hours agoMangalore-ಮಂಗಳೂರು: ಅತ್ತಾವರದ ಹೋಟೆಲ್ ಇಹಾಮ್ ಪ್ಯಾರಡೈಸ್ನಲ್ಲಿ ಬೆಂಕಿ ಅವಘಡ
















