ಬಿಗ್ ನ್ಯೂಸ್
ChatGPT- ಪತ್ನಿಗೆ ಹತ್ಯೆ ಸಂಚು ರೂಪಿಸಲು ಸಲಹೆ ನೀಡಿದ ಆರೋಪ: ಚಾಟ್‌ಜಿಪಿಟಿ ವಿರುದ್ಧ ಪತಿ ಕಾನೂನು ದಾವೆ..!
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಹತ್ಯೆ ಮಾಡುವಂತೆ ಪರಿತ್ಯಕ್ತ ಪತ್ನಿಗೆ ಸಲಹೆ ನೀಡಿದೆ ಎಂದು ಆರೋಪಿಸಿ ಅಮೆರಿಕದ ನಾರ್ತ್ ಕೆರೊಲಿನಾ ಮೂಲದ ಜೇಮ್ಸ್ ಗೇಟ್ಸ್ ಎಂಬವರು ಎಐ ಆಧಾರಿತ ಚಾಟ್‌ಬಾಟ್ ಚಾಟ್‌ಜಿಪಿಟಿ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.
ವಾಷಿಂಗ್ಟನ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಹತ್ಯೆ ಮಾಡುವಂತೆ ಪರಿತ್ಯಕ್ತ ಪತ್ನಿಗೆ ಸಲಹೆ ನೀಡಿದೆ ಎಂದು ಆರೋಪಿಸಿ ಅಮೆರಿಕದ ನಾರ್ತ್ ಕೆರೊಲಿನಾ ಮೂಲದ ಜೇಮ್ಸ್ ಗೇಟ್ಸ್ ಎಂಬವರು ಎಐ ಆಧಾರಿತ ಚಾಟ್‌ಬಾಟ್ ಚಾಟ್‌ಜಿಪಿಟಿ ವಿರುದ್ಧ ಕಾನೂನು ದಾವೆ ಹೂಡಿದ್ದಾರೆ.
2025ರಲ್ಲಿ ತಮಗೆ ನಿಗೂಢ ಕಾಯಿಲೆ ಕಾಣಿಸಿಕೊಂಡಿತ್ತು. ವೈದ್ಯರಿಂದಲೂ ಕಾಯಿಲೆಯ ಕಾರಣ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಪತ್ನಿಯ ಪರ್ಸ್‌ನಲ್ಲಿ ಆಕೆ ಬರೆದಿಟ್ಟಿದ್ದ ಚೀಟಿಯೊಂದು ಸಿಕ್ಕಿತ್ತು ಎಂದು ಜೇಮ್ಸ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಊಟದಲ್ಲಿ ಕಣಗಿಲೆ ಗಿಡದ ರಸ ಬೆರೆಸುವುದು ಸೇರಿದಂತೆ ಪತಿಯನ್ನು ಹತ್ಯೆ ಮಾಡುವ ವಿವಿಧ ವಿಧಾನಗಳ ಬಗ್ಗೆ ಆ ಚೀಟಿಯಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಆಯ್ಕೆಗಳನ್ನು ಚಾಟ್‌ಜಿಪಿಟಿ ನೀಡಿದ ಸಲಹೆಯ ಮೇರೆಗೆ ಸಿದ್ಧಪಡಿಸಲಾಗಿದೆ ಎಂದು ಜೇಮ್ಸ್ ಆರೋಪಿಸಿದ್ದಾರೆ.
ಚಾಟ್‌ಜಿಪಿಟಿಯ ಸಲಹೆಯಿಂದಾಗಿ ತನ್ನ ಜೀವಕ್ಕೆ ಅಪಾಯ ಉಂಟಾಗಿದೆ ಎಂದು ಆರೋಪಿಸಿರುವ ಅವರು, ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಬಿಗ್ ನ್ಯೂಸ್
Puttur-ಎಸ್‌ಐಆರ್ ವಿರುದ್ಧ ನ. 9ರಂದು ಪುತ್ತೂರಿನಲ್ಲಿ ತಿರಂಗಾ ಯಾತ್ರೆ ಹಾಗೂ ಪ್ರತಿಭಟನಾ ಸಭೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ, ‘ಮತ ಉಳಿಸಿ–ಪ್ರಜಾಪ್ರಭುತ್ವ ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 9ರಂದು ಪುತ್ತೂರಿನಲ್ಲಿ ತಿರಂಗಾ ಯಾತ್ರೆ ಹಾಗೂ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ತಿಳಿಸಿದ್ದಾರೆ.
ಪುತ್ತೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ, ‘ಮತ ಉಳಿಸಿ–ಪ್ರಜಾಪ್ರಭುತ್ವ ರಕ್ಷಿಸಿ’ ಎಂಬ ಘೋಷವಾಕ್ಯದೊಂದಿಗೆ ನವೆಂಬರ್ 9ರಂದು ಪುತ್ತೂರಿನಲ್ಲಿ ತಿರಂಗಾ ಯಾತ್ರೆ ಹಾಗೂ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ತಿಳಿಸಿದ್ದಾರೆ.
ರೈತ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜನಾಧಿಕಾರ ಆಂದೋಲನ ವೇದಿಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನ. 9ರಂದು ಬೆಳಗ್ಗೆ 10.30ಕ್ಕೆ ಗಾಂಧಿ ಕಟ್ಟೆಯಲ್ಲಿ ಸಾರ್ವಜನಿಕರು ಒಟ್ಟುಗೂಡಲಿದ್ದಾರೆ. ಬಳಿಕ ಗಾಂಧೀಜಿಯವರ ಪುತ್ಥಳಿಗೆ ಹಾರಾರ್ಪಣೆ ಮಾಡಿ, ರಾಷ್ಟ್ರಧ್ವಜ ಹಿಡಿದು ಅಮರ್ ಜವಾನ್ ಜ್ಯೋತಿ ಸ್ಮಾರಕದವರೆಗೆ ತಿರಂಗಾ ಯಾತ್ರೆ ನಡೆಯಲಿದೆ. ನಂತರ ಬೃಹತ್ ಪ್ರತಿಭಟನಾ ಸಭೆ ಆಯೋಜಿಸಲಾಗಿದ್ದು, ಮಂಗಳೂರಿನ ಎಂ.ಜಿ. ಹೆಗ್ಡೆ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು
ಎಸ್‌ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಮುಂದಿನ ಚುನಾವಣೆಗಳನ್ನು ಹಿಂದಿನ ಮತದಾರರ ಪಟ್ಟಿಯ ಆಧಾರದಲ್ಲೇ ನಡೆಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದೇಶದ್ರೋಹದ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಲಾಗುವುದು ಎಂದು ಅಮಳ ರಾಮಚಂದ್ರ ಹೇಳಿದರು.
ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಿ ಮರುಚುನಾವಣೆ ನಡೆಸಬೇಕು ಹಾಗೂ ಅವರ ಅಧಿಕಾರಾವಧಿಯಲ್ಲಿ ಚುನಾವಣಾ ಆಯೋಗ ಕೈಗೊಂಡ ನಿರ್ಧಾರಗಳು ಮತ್ತು ಪ್ರಕ್ರಿಯೆಗಳನ್ನು ಮರುಪರಿಶೀಲಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗುವುದು ಎಂದರು.
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿ ನಿಷ್ಪಕ್ಷಪಾತವಾಗಿರಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ಜೀವನಪರ್ಯಂತ ಕಾನೂನು ಕ್ರಮದಿಂದ ರಕ್ಷಣೆ ಒದಗಿಸುವ 2023ರ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂಬುದು ಪ್ರತಿಭಟನೆಯ ಇತರ ಬೇಡಿಕೆಗಳಾಗಿವೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೂಪೇಶ್ ರೈ ಅಲಿಮಾರು, ಸುಲೇಮಾನ್ ಕಲ್ಲರ್ಪೆ, ಬಾತಿಶಾ ಅಳಿಕೆಮಜಲು ಹಾಗೂ ರಾಮಣ್ಣ ವಿಟ್ಲ ಉಪಸ್ಥಿತರಿದ್ದರು.
ಅಂತರ ರಾಜ್ಯ
Arrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್‌ಟೇಕರ್ ಅರೆಸ್ಟ್..!
ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಅಗ್ರವಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದು ರೈಲಿನಲ್ಲಿ ಪರಾರಿಯಾಗಿದ್ದ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿಯನ್ನು ಮಧ್ಯಪ್ರದೇಶ ಪೊಲೀಸರು ಒಂದು ತಿಂಗಳ ಬಳಿಕ ಬಂಧಿಸಿದ್ದಾರೆ.
ಭೋಪಾಲ್: ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಅಗ್ರವಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದು ರೈಲಿನಲ್ಲಿ ಪರಾರಿಯಾಗಿದ್ದ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿಯನ್ನು ಮಧ್ಯಪ್ರದೇಶ ಪೊಲೀಸರು ಒಂದು ತಿಂಗಳ ಬಳಿಕ ಬಂಧಿಸಿದ್ದಾರೆ. 27 ವರ್ಷದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬರೋಬ್ಬರಿ 9 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಮಧ್ಯಪ್ರದೇಶ ಕೇಡರ್‌ನ 1982ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ 70 ವರ್ಷದ ರಾಕೇಶ್ ಅಗ್ರವಾಲ್ ಅವರು ಸೆಪ್ಟೆಂಬರ್ 30ರಂದು ಭೋಪಾಲ್‌ನ ಸೂರಜ್ ನಗರದ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದರು. ದುಷ್ಕರ್ಮಿ ಹರಿತವಾದ ಆಯುಧದಿಂದ ಕತ್ತು ಸೀಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿ ಪರಾರಿಯಾಗಿದ್ದ. ರಾತ್ರಿ 2.30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಆತ, ಬೆಳಗಿನ ಜಾವ 4.12ಕ್ಕೆ ಭೋಪಾಲ್ ರೈಲು ನಿಲ್ದಾಣದಿಂದ ಕೇರಳ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ. ಈ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾದಲ್ಲಿ ಸಿಕ್ಕ ಸುಳಿವು, ಪೊಲೀಸರ ಕಾರ್ಯಾಚರಣೆ
ರೈಲಿನಲ್ಲಿ ಪರಾರಿಯಾಗಿದ್ದ ವಾಲ್ಮೀಕಿ ಗ್ವಾಲಿಯರ್, ಆಗ್ರಾ, ಮಥುರಾ ಹಾಗೂ ವೃಂದಾವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಓಡಾಡಿದ್ದ. ಈತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ ಕೊನೆಗೆ ಆಗ್ರಾದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಆಗ್ರಾ-ಮಥುರಾ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆದರೆ, ಮಂಗಳವಾರ ಬೆಳಗ್ಗೆ ಮುಘಾಲಿಯಾ ಛಾಪ್ ಬಳಿ ಆರೋಪಿಯನ್ನು ಭೋಪಾಲ್‌ಗೆ ಕರೆತರುತ್ತಿದ್ದ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರ ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈದಿದ್ದಕ್ಕೆ ಕೊಲೆ ಮಾಡಿದ್ದೆ ಎಂದ ಆರೋಪಿ!
ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ತನ್ನನ್ನು ಬೈದು, ಕೆಟ್ಟದಾಗಿ ನಡೆಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
9 ರಾಜ್ಯಗಳಲ್ಲಿ ಪೊಲೀಸರ ಶೋಧ
ಆರೋಪಿಯನ್ನು ಪತ್ತೆಹಚ್ಚಲು ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಚಂಡೀಗಢ, ಪಂಜಾಬ್, ದೆಹಲಿ, ಉತ್ತರಾಖಂಡ ಹಾಗೂ ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯ ಸಂಬಂಧಿಕರು ಹಾಗೂ ಪರಿಚಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.
ಆರೋಪಿಗೆ ಪೊಲೀಸರ ಸುಳಿವು ಸಿಗದಂತೆ ತನಿಖಾಧಿಕಾರಿಗಳು ವೇಷ ಬದಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಕೆಲವರು ಬೀದಿ ವ್ಯಾಪಾರಿಗಳಂತೆ, ಇನ್ನು ಕೆಲವರು ಕೂಲಿ ಕಾರ್ಮಿಕರು ಹಾಗೂ ಇತರ ಕೆಲಸಗಾರರಂತೆ ನಟಿಸಿ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ರೈಲು ನಿಲ್ದಾಣ, ಬಸ್ ನಿಲ್ದಾಣ, ದೇವಾಲಯಗಳು ಹಾಗೂ ಆಶ್ರಯ ತಾಣಗಳಲ್ಲೂ ಹುಡುಕಾಟ ನಡೆಸಿದ್ದರು.
ಹಿಂದಿನ ಕೆಲಸದ ಸ್ಥಳಗಳಲ್ಲೂ ಗಂಭೀರ ಆರೋಪ
ವರುಣ್ ವಾಲ್ಮೀಕಿ ಈ ಹಿಂದೆ ಜೈಪುರ, ಗ್ವಾಲಿಯರ್ ಹಾಗೂ ನೈನಿತಾಲ್‌ನಲ್ಲಿರುವ ಮನೆ ಆರೈಕೆ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ. ಈತ ಕೆಲಸ ಮಾಡುತ್ತಿದ್ದ ಕೆಲವು ಕಡೆಗಳಲ್ಲಿ ಆತನ ನಡವಳಿಕೆ ಬಗ್ಗೆ ದೂರುಗಳು ಕೇಳಿಬಂದಿದ್ದವು. ವೃದ್ಧ ರೋಗಿಯೊಬ್ಬರನ್ನು ಹಾನಿಗೊಳಿಸಲು ಯತ್ನಿಸಿದ್ದ ಆರೋಪವೂ ಆತನ ಮೇಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನೈನಿತಾಲ್‌ನಲ್ಲಿ 2025ರ ಡಿಸೆಂಬರ್‌ನಿಂದ 2026ರ ಫೆಬ್ರವರಿವರೆಗೆ 92 ವರ್ಷದ ನಿವೃತ್ತ ವ್ಯಕ್ತಿಯೊಬ್ಬರ ಆರೈಕೆದಾರನಾಗಿ ಕೆಲಸ ಮಾಡಿದ್ದ. ಈ ಅವಧಿಯಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.
ಒಮ್ಮೆ ವೃದ್ಧ ವ್ಯಕ್ತಿಯ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ನೆರೆಹೊರೆಯವರು ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಘಟನೆಯ ಬಳಿಕ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.
ಇನ್ನು 2026ರ ಆಗಸ್ಟ್‌ನಲ್ಲಿ ಗ್ವಾಲಿಯರ್‌ನ ಹೋಮ್ ನರ್ಸಿಂಗ್ ಏಜೆನ್ಸಿಗೆ ಸೇರಿದ ಮೊಬೈಲ್ ಫೋನ್ ಕಳ್ಳತನ ಮಾಡಿದ ಆರೋಪವೂ ಆತನ ಮೇಲಿದೆ. ಆದರೆ, ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ಜೈಪುರದಲ್ಲೂ 2026ರ ಜೂನ್‌ನಲ್ಲಿ ಆರೈಕೆದಾರನಾಗಿ ಕೆಲಸಕ್ಕೆ ಸೇರಿದ್ದ ವಾಲ್ಮೀಕಿಯನ್ನು ನಡವಳಿಕೆ ಕುರಿತ ದೂರುಗಳ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿತ್ತು.
ಮನೆಯ ಕೆಲಸಗಾರನಿಂದ ಕೊಲೆ ಪ್ರಕರಣ ಬೆಳಕಿಗೆ
ಸೆಪ್ಟೆಂಬರ್ 30ರಂದು ಭೋಪಾಲ್‌ನ ಸೂರಜ್ ನಗರದ ಪಾನ್ ಘಾಟ್ ಮ್ಯಾರೇಜ್ ಗಾರ್ಡನ್ ಸಮೀಪದ ನಿವಾಸದಲ್ಲಿ ರಾಕೇಶ್ ಅಗ್ರವಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆಯ ಮೇಲೆ ಗಂಭೀರ ಗಾಯಗಳಿದ್ದವು. ಮನೆಯ ಕೆಲಸಗಾರ ಅಮರ್ ಸಿಂಗ್ ಪಾಲಿವಾಲ್ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ
Anil Kumar-ಬಾಳೆಕುದ್ರು ಶ್ರೀಗಳು ಪರಾರಿಯಾಗಿಲ್ಲ, ವಿಗ್ರಹಗಳೂ ಕಳವಾಗಿಲ್ಲ: ಆಡಳಿತಾಧಿಕಾರಿ ಅನಿಲ್ ಕುಮಾರ್ ಸ್ಪಷ್ಟನೆ
ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಬಾಳೆಕುದ್ರು ಮಠದ ಶ್ರೀಗಳು ಮಠ ಬಿಟ್ಟು ಪರಾರಿಯಾಗಿದ್ದಾರೆ ಹಾಗೂ ಮಠದ ಆರು ಪ್ರಾಚೀನ ವಿಗ್ರಹಗಳು ನಾಪತ್ತೆಯಾಗಿದ್ದು, ಅವುಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪಗಳನ್ನು ಮಠದ ಆಡಳಿತಾಧಿಕಾರಿ ಎ. ಅನಿಲ್ ಕುಮಾರ್ ತಳ್ಳಿಹಾಕಿದ್ದಾರೆ.
ಉಡುಪಿ: ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಬಾಳೆಕುದ್ರು ಮಠದ ಶ್ರೀಗಳು ಮಠ ಬಿಟ್ಟು ಪರಾರಿಯಾಗಿದ್ದಾರೆ ಹಾಗೂ ಮಠದ ಆರು ಪ್ರಾಚೀನ ವಿಗ್ರಹಗಳು ನಾಪತ್ತೆಯಾಗಿದ್ದು, ಅವುಗಳನ್ನು ಮಾರಾಟ ಮಾಡಲಾಗಿದೆ ಎಂಬ ಆರೋಪಗಳನ್ನು ಮಠದ ಆಡಳಿತಾಧಿಕಾರಿ ಎ. ಅನಿಲ್ ಕುಮಾರ್ ತಳ್ಳಿಹಾಕಿದ್ದಾರೆ.
ಈ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿರುವ ಅವರು, ಮಠದ ಎಲ್ಲಾ ವಿಗ್ರಹಗಳು ಶ್ರೀಗಳ ಬಳಿಯೇ ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅನಿಲ್ ಕುಮಾರ್, ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು ಕಾನೂನು ಪ್ರಕ್ರಿಯೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಮಠ ಬಿಟ್ಟು ಓಡಿಹೋಗಿದ್ದಾರೆ ಅಥವಾ ಮಠಕ್ಕೆ ಬೀಗ ಹಾಕಲಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಆರು ಪ್ರಾಚೀನ ವಿಗ್ರಹಗಳ ಮಾರಾಟ ಆರೋಪ ಹಸಿ ಸುಳ್ಳು
ಮಠದ ಹಳೆಯ ಭಕ್ತರೊಬ್ಬರು ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶ್ರೀ ವಾಸುದೇವ ಸದಾಶಿವಾಶ್ರಮ, ಆಡಳಿತಾಧಿಕಾರಿ ಅನಿಲ್ ಕುಮಾರ್, ಸಿಬ್ಬಂದಿ ಜಯಲಕ್ಷ್ಮೀ ಹಾಗೂ ಪುರೋಹಿತ ಶ್ರೇಯಸ್ ಅವರು ಮಠದ ಹಳೆಯ ವಿಗ್ರಹಗಳನ್ನು ಕಳವು ಮಾಡಿ ಬೆಂಗಳೂರಿನ ಪ್ರಸಿದ್ಧ ‘ಐಡಲ್ಸ್’ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಆದರೆ, ಈ ಆರೋಪಗಳು ಸಂಪೂರ್ಣ ಸುಳ್ಳು. ಯಾವುದೇ ವಿಗ್ರಹಗಳನ್ನು ಕಳವು ಮಾಡಿಲ್ಲ ಅಥವಾ ಮಾರಾಟ ಮಾಡಿಲ್ಲ. ಎಲ್ಲಾ ವಿಗ್ರಹಗಳು ಶ್ರೀಗಳ ಬಳಿಯೇ ಭದ್ರವಾಗಿವೆ ಎಂದು ಅನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಠದಲ್ಲಿ ಪೂಜಾ ಕೈಂಕರ್ಯಗಳು ನಿರಂತರ
ಶ್ರೀಗಳು ಬೆಂಗಳೂರಿಗೆ ತೆರಳಿರುವುದರಿಂದ ಮಠದಲ್ಲಿ ಪೂಜಾ ಕಾರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ. ಪೂಜೆಗೆ ಚ್ಯುತಿ ಬಾರದಂತೆ ಮಠದಲ್ಲಿ ಓರ್ವ ಪುರೋಹಿತರನ್ನು ನೇಮಿಸಲಾಗಿದ್ದು, ಧಾರ್ಮಿಕ ಕೈಂಕರ್ಯಗಳು ಎಂದಿನಂತೆ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಶ್ರೀಗಳು ಕಾನೂನು ತಜ್ಞರನ್ನು ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಎದುರಿಸುವ ಉದ್ದೇಶದಿಂದ ನಾವೆಲ್ಲರೂ ಇಲ್ಲಿಗೆ ಆಗಮಿಸಿದ್ದೇವೆ. ನಾವು ಯಾವುದೇ ಅನಾಚಾರ ಅಥವಾ ಅಪಚಾರ ಎಸಗಿಲ್ಲ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಭಕ್ತರ ಮುಂದೆ ಬಂದು ಎಲ್ಲ ಸತ್ಯಾಂಶಗಳನ್ನು ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಅಲ್ಲದೆ, ಭಕ್ತರು ಹಾಗೂ ಊರಿನವರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಸಹನೆಯಿಂದ ಸಹಕರಿಸಬೇಕು ಎಂದು ಕೈಮುಗಿದು ಮನವಿ ಮಾಡಿದ್ದಾರೆ.
-
ನಿಧನ ವಾರ್ತೆ9 hours ago
ಪುತ್ತೂರಿನ ಖ್ಯಾತ ಉದ್ಯಮಿ ಸಂತೋಷ್ ಕುಮಾರ್ ಎ. ನಿಧನ
-
ನಿಧನ ವಾರ್ತೆ14 hours agoSuicide-ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ಮಹಿಳೆ ಪ್ರಿಯಕರನೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ..!
-
ಅಪರಾಧ17 hours ago
ಪುತ್ತೂರು : ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು
-
ರಾಜಕೀಯ15 hours agoAishwarya Hegde-ಸಿಎಂ ಮುಂದೆಯೇ ಸರ್ಕಾರಿ ಶಾಲೆಗಳ ಅವ್ಯವಸ್ಥೆ ಬಿಚ್ಚಿಟ್ಟ ಪುತ್ರಿ ಐಶ್ವರ್ಯಾ ಹೆಗ್ಡೆ..!
-
ಸ್ಥಳೀಯ14 hours agoAddahole-ಅಡ್ಡಹೊಳೆಯಲ್ಲಿ ಕಾರಿನ ಮೇಲೆ ಮಗುಚಿಬಿದ್ದ ಕಂಟೈನರ್ ಲಾರಿ: ದಂಪತಿ, ಮಕ್ಕಳು ಪವಾಡಸದೃಶ ಪಾರು..!
-
ಉಡುಪಿ14 hours agoAnil Kumar-ಬಾಳೆಕುದ್ರು ಶ್ರೀಗಳು ಪರಾರಿಯಾಗಿಲ್ಲ, ವಿಗ್ರಹಗಳೂ ಕಳವಾಗಿಲ್ಲ: ಆಡಳಿತಾಧಿಕಾರಿ ಅನಿಲ್ ಕುಮಾರ್ ಸ್ಪಷ್ಟನೆ
-
ಅಂತರ ರಾಜ್ಯ14 hours agoArrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್‌ಟೇಕರ್ ಅರೆಸ್ಟ್..!
-
ಅಂತರ ರಾಜ್ಯ15 hours agoSabarimala-ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ‘ಶಬರಿ ಪೋರ್ಟಲ್’ ಮತ್ತು ವಾಟ್ಸಾಪ್ ಚಾಟ್‌ಬಾಟ್ ಡಿಜಿಟಲ್ ವೇದಿಕೆ..! ಒಂದೇ ಸೂರಿನಡಿ ಸಮಗ್ರ ಮಾಹಿತಿ ಮತ್ತು ಸೇವೆಗಳು
















