ಸ್ಥಳೀಯ
Kollur-ಕೊಲ್ಲೂರು: ಭಕ್ತೆಯ ಬ್ಯಾಗ್‌ನಿಂದ 80 ಸಾವಿರ ರೂ. ದೋಚಿದ್ದ ಮೂವರು ಮಹಿಳಾ ಕಳ್ಳಿಯರು ಅರೆಸ್ಟ್
ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ರೂಪಾಯಿ ನಗದು ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಮೂಲದ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ಕೊಲ್ಲೂರು: ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ 80 ಸಾವಿರ ರೂಪಾಯಿ ನಗದು ಕಳವು ಮಾಡಿದ್ದ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಯೊಳಗೆ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಮೂಲದ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ.
ಘಟನೆಯ ವಿವರ:
ಜುಲೈ 5ರಂದು ಬೆಳಿಗ್ಗೆ 8:20ರ ಸುಮಾರಿಗೆ ದೇವಸ್ಥಾನಕ್ಕೆ ಬಂದಿದ್ದ ನಿಮಿಶಾ ಹಾಗೂ ಅವರ ಪತಿ ಪ್ರಜೋಶ್ ಅವರು ದೇವಿಯ ದರ್ಶನ ಮುಗಿಸಿ ದೇವಸ್ಥಾನದ ಹೊರಾಂಗಣಕ್ಕೆ ಬಂದಿದ್ದರು. ಈ ವೇಳೆ ನಿಮಿಶಾ ಅವರ ಕಂದು ಬಣ್ಣದ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ 80 ಸಾವಿರ ರೂ. ನಗದು ಹಣವಿದ್ದ ಪರ್ಸ್ ನಾಪತ್ತೆಯಾಗಿತ್ತು. ದೇವಸ್ಥಾನದ ಆವರಣದಲ್ಲಿ ಎಷ್ಟೇ ಹುಡುಕಾಡಿದರೂ ಸಿಗದಿದ್ದಾಗ, ಅವರು ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರ್ಯಾಚರಣೆ ಮತ್ತು ಬಂಧನ:
ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಆಕಸ್ಮಿಕವಾಗಿ ಸೆರೆಹಿಡಿದಿದ್ದ ಫೋಟೋಗಳು ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ನೇತ್ರಾವತಿ (33), ಶಾರದಾ (50) ಮತ್ತು ದುರ್ಗಮ್ಮ (44) ಎಂದು ಗುರುತಿಸಲಾಗಿದೆ. ಈ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಳೇ ಕಳ್ಳಿಯರ ಹಿನ್ನೆಲೆ:
ಬಂಧಿತ ಮಹಿಳೆಯರು ಈ ಹಿಂದೆ ರಾಜ್ಯದ ವಿವಿಧ ಭಾಗಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ದುರ್ಗಮ್ಮ ವಿರುದ್ಧ ಮೈಸೂರಿನ ಲಷ್ಕರ್ ಮತ್ತು ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳಿವೆ.
ಶಾರದಾ ಮೇಲೆ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಎರಡು ಮತ್ತು ಮೈಸೂರಿನ ಅಶೋಕಪುರಂ ಠಾಣೆಯಲ್ಲಿ ಒಂದು ಸೇರಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ.
ಪ್ರಕರಣ ದಾಖಲಾದ ಕೇವಲ ಒಂದು ದಿನದಲ್ಲಿ ಆರೋಪಿಗಳನ್ನು ಹಿಡಿದ ಕೊಲ್ಲೂರು ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಪುತ್ತೂರು
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು

ಪುತ್ತೂರು: ಕೆದಿಲ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಅ.3ರಂದು ನಡೆದಿದೆ.
ಮೃತರನ್ನು ಕೆಮ್ಮಾಯಿ ನಿವಾಸಿ ದಿ. ಗುಡ್ಡಪ್ಪ ಗೌಡರವರ ಪುತ್ರ ರವಿ ಗೌಡ ಎಂದು ಗುರುತಿಸಲಾಗಿದೆ. ಇವರು ಮೆಸ್ಕಾಂ ಬಂಟ್ವಾಳ ತಾಲೂಕಿನ ಮಾಣಿ ಸೆಕ್ಷನ್ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ಎಚ್‌ಟಿ (ಹೈಟೆನ್ಶನ್) ವಿದ್ಯುತ್ ಲೈನ್‌ನ ಜಿಒಎಸ್ (ಗ್ಯಾಂಗ್ ಆಪರೇಟಿಂಗ್ ಸ್ವಿಚ್) ತೆರೆಯುವ ಸಂದರ್ಭದಲ್ಲಿ ಅರ್ಥ್ ಆಗಿ ವಿದ್ಯುತ್ ಪ್ರವಹಿಸಿ ರವಿ ಗೌಡ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಕೆದಿಲ ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗೌಡ ಅವರು, ತಮ್ಮ ಸೇವಾ ಮನೋಭಾವದಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಅಪರಾಧ
Mangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಮಂಗಳೂರು: ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.
ಕಳ್ಳರು ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನ ನಡೆದಿತ್ತು. ಮನೆಯ ಲಾಕರ್‌ನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳು ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ತಕ್ಷಣ ಗುಜರಾತ್‌ನ ವಡೋದರಾ ಪೊಲೀಸರ ಸಹಾಯ ಪಡೆದುಕೊಂಡ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿದ್ದ 24 ಗಂಟೆಗಳೊಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಕೂಡ ಬಾಕಿ ಇದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಬಿಗ್ ನ್ಯೂಸ್
Nagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು: ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಚೌದರಿ , ಎಸ್‌ಐಟಿ ತನಿಖಾ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ದಾಖಲಾಗಿರುವ ಸಾವುಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಳವಾಗಿ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಎಸ್‌ಐಟಿ ತಿಳಿಸಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಅಸ್ತಿಪಂಜರಗಳು ಪತ್ತೆಯಾಗಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗ್ಲೆ ಗುಡ್ಡೆ ಸ್ಮಶಾನವಲ್ಲದಿದ್ದರೂ ಅಲ್ಲಿ ಇಷ್ಟೊಂದು ಎಲುಬುಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿರುವುದು ಹೇಗೆ ಎಂಬುದರ ಕುರಿತು ಉನ್ನತ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ಕೆಲವು ಅಸ್ತಿಪಂಜರಗಳ ಪರೀಕ್ಷೆಯಲ್ಲಿ ಅವು ಪುರುಷರದ್ದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಒಂದು ಹುಡುಗಿಯ ಅಸ್ತಿಪಂಜರವನ್ನು ಆಸಿಡ್‌ನಿಂದ ಸುಟ್ಟಿರುವ ಸ್ಥಿತಿಯಲ್ಲಿ ಹೂತುಹಾಕಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ, ಆ ವ್ಯಕ್ತಿ ಆಸಿಡ್‌ನಿಂದ ಮೃತಪಟ್ಟಿಲ್ಲ ಎಂಬುದು ಡಿಎನ್‌ಎ ವರದಿಯಲ್ಲಿ ತಿಳಿದುಬಂದಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಈ ರೀತಿಯಾಗಿ ವಿವಿಧ ವರದಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪೂರಕ ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಈ ಹೊಸ ಮಾಹಿತಿಗಳು ಸ್ವಯಂಚಾಲಿತವಾಗಿ ಸೇರುತ್ತವೆಯೇ ಎಂಬ ಬಗ್ಗೆ ಕಾನೂನುಬದ್ಧ ಸ್ಪಷ್ಟತೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಈ ಎಲ್ಲ ವಿಷಯಗಳನ್ನು ಈಗಾಗಲೇ ರಚಿಸಿರುವ ಎಸ್‌ಐಟಿಗೆ ವಹಿಸಬೇಕು. ಅಗತ್ಯವಿದ್ದರೆ ಅದರ ‘ಟರ್ಮ್ಸ್ ಆಫ್ ರೆಫರೆನ್ಸ್’ (ತನಿಖೆಯ ವ್ಯಾಪ್ತಿ) ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಸರ್ಕಾರದ ಪ್ರತಿಕ್ರಿಯೆಗಾಗಿ ಇನ್ನೂ 15 ದಿನ ಕಾಯಲಾಗುವುದು. ಬಳಿಕ ಎರಡು ಬಾರಿ ಸರ್ಕಾರಕ್ಕೆ ನೆನಪಿನ ಪತ್ರ ಕಳುಹಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.


















