ಸುಳ್ಯ
Praveen Nettar-ಪ್ರವೀಣ್ ನೆಟ್ಟಾರ್ ಹತ್ಯೆಯಾಗಿ 2 ವರ್ಷ – 7 ಪ್ರಮುಖ ಆರೋಪಿಗಳ ಬಂಧನ ಇನ್ನೂ ಬಾಕಿ
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜು. 26ರಂದು ನಡೆದಿದ್ದ ಬಿಜೆಪಿ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು (30) ಕೊಲೆಯಾಗಿ ಇಂದಿಗೆ (ಜು. 26) ಎರಡು ವರ್ಷವಾಯಿತು. ಪ್ರಕರಣದಲ್ಲಿ 26 ಮಂದಿಯ ವಿರುದ್ಧ ದೋಷಾರೋಪ ಸಲ್ಲಿಕೆಯಾಗಿದ್ದು, 19 ಮಂದಿಯ ಬಂಧನ ವಾಗಿದೆ.
ಉಳಿದ 7 ಮಂದಿ ಆರೋಪಿಗಳಿಗಾಗಿ ಎನ್ಐಎ ಹುಡುಕಾಟ ನಡೆಸುತ್ತಲೇ ಇದೆ. ಪ್ರಕರಣ ತಾರ್ಕಿಕ ಅಂತ್ಯ ಇನ್ನೂ ಕಂಡಿಲ್ಲ.
ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ನಡೆಸಿಕೊಂಡು ಬಂದಿದ್ದ ಪ್ರವೀಣ್, 2022ರ ಜು. 26ರ ರಾತ್ರಿ ಸುಮಾರು 8.30ರ ವೇಳೆಗೆ ಅಂಗಡಿ ಬಾಗಿಲು ಹಾಕಿ ಬೈಕ್ನಲ್ಲಿ ಕುಳಿತು ಮನೆಗೆ ಹೊರಡಲು ಸಿದ್ಧರಾಗಿದ್ದರು. ಈ ಸಂದರ್ಭ ಕಾದು ಕುಳಿತಿದ್ದ ದುಷ್ಕರ್ಮಿಗಳು ಪ್ರವೀಣ್ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದರು. ಈ ಪ್ರಕರಣದ ತೀವ್ರ ಸ್ವರೂಪ ಪಡೆದಿದ್ದು, ಅಂದು ಜಿಲ್ಲೆಯ ಪ್ರಮುಖ ಜನಪ್ರತಿನಿಧಿಗಳು ಜನರ ಆಕ್ರೋಶಕ್ಕೆ ತುತ್ತಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಬೆಳ್ಳಾರೆಯ ಶಫೀಕ್, ಸವಣೂರಿನ ಝಾಕೀರ್ನನ್ನು ಕೇರಳದಲ್ಲಿ ವಶಕ್ಕೆ ಪಡೆಯಲಾಗಿತ್ತು. ಬಳಿಕ ಪ್ರಮುಖ ಆರೋಪಿಗಳಾದ ಶಿಹಾಬುದ್ದೀನ್ ಸುಳ್ಯ, ಬಶೀರ್ ಎಲಿಲೆ, ರಿಯಾಸ್ ಅಂಕತ್ತಡ್ಕ ಮೊದಲಾದವರನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿತ್ತು. ಕಳೆದ ಒಂದು ವರ್ಷದಿಂದ ಮೂವರು ಆರೋಪಿಗಳ ಬಂಧನವಾಗಿದ್ದು, ತುಫೈಲ್ ಮಡಿಕೇರಿಯನ್ನು ಬೆಂಗಳೂರಿನಲ್ಲಿ, ಮುಸ್ತಫಾ ಪೈಚಾರ್ನನ್ನು ಸಕಲೇಶಪುರದಲ್ಲಿ, ರಿಯಾಝ್ ಯೂಸುಫ್ ಹಾರಳ್ಳಿ ಎಂಬಾತನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಬಂಧಿಸಿದೆ.
ಪತ್ನಿಗೆ ಗುತ್ತಿಗೆ ಆಧಾರದಲ್ಲಿ ಕೆಲಸ
ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಅವರಿಗೆ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಅವರು ತಮ್ಮ ಮುಖ್ಯಮಂತ್ರಿ ಹುದ್ದೆ ಇರುವವರೆಗೆ ಅಥವಾ ಮುಂದಿನ ಆದೇಶದವರೆಗೆ ಎಂದು ಸರಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರಲ್ಲಿ ಕೆಲಸ ನೀಡಲು ಆದೇಶಿಸಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೂತನ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಬಂದ ಹೊಸ ಸರಕಾರದಲ್ಲಿ ಈ ಹಿಂದಿನ ಆದೇಶದಂತೆ ಕೆಲಸ ಹೋಗಿತ್ತು. ಬಳಿಕ ಮತ್ತೆ ಈಗಿನ ಸರಕಾರದ ಮುಖ್ಯಮಂತ್ರಿ ಅವರು ಸರಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಮುಂದಿನ ಐದು ವರ್ಷಗಳವರೆಗೆ ಅಥವಾ ಸರಕಾರ ಬದಲಾಗುವವರೆಗೆ ಎಂದು ಉಲ್ಲೇಖಿಸಿ ಕೆಲಸ ನೀಡಿದ್ದರು. ಅದರಂತೆ ನೂತನಾ ಅವರು ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಯಾರೆಲ್ಲಾ ತಲೆಮರೆಸಿಕೊಂಡಿದ್ದಾರೆ ?
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದರೂ, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಉಮ್ಮರ್ ಫಾರೂಕು ಕಲ್ಲುಮುಟ್ಲು, ಅಬೂಬಕ್ಕರ್ ಸಿದ್ದಿಕ್, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಶರೀಫ್ ಕೊಡಾಜೆ ಬಂಟ್ವಾಳ, ಅಬ್ದುಲ್ ನಾಸೀರ್ ಕೊಡಗು, ಅಬ್ದುಲ್ ರೆಹಮಾನ್ ಕೊಡಗು, ನೌಷಾದ್ ಬೆಳ್ತಂಗಡಿ ಮೊದಲಾದವರು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದಾರೆ ಎಂದು ತನಿಖಾ ಮೂಲಗಳು ಮಾಹಿತಿ ನೀಡಿವೆ.
ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಳ್ಯ
Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ
ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.
ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.
ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.
ಸುಳ್ಯ
Areca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ಸುಳ್ಯ, ನ.12: ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ನ.11 ಮತ್ತು ನ.12ರ ಮಾರುಕಟ್ಟೆ ದರಗಳನ್ನು ಹೋಲಿಸಿದಾಗ ಹೊಸ ಅಡಿಕೆಯ ಗರಿಷ್ಠ ಧಾರಣೆ ₹350ರಿಂದ ₹360ಕ್ಕೆ ಏರಿಕೆಯಾಗಿದೆ. ಆದರೆ ಕನಿಷ್ಠ ಧಾರಣೆ ₹280ರಲ್ಲೇ ಸ್ಥಿರವಾಗಿದೆ. ಕನಿಷ್ಠ ದರದಲ್ಲಿ ಬದಲಾವಣೆಯಾಗದಿದ್ದರೂ ಗರಿಷ್ಠ ದರದಲ್ಲಿ ಕಂಡುಬಂದಿರುವ ಏರಿಕೆ ಮಾರುಕಟ್ಟೆಯಲ್ಲಿ ಚೇತರಿಕೆಯ ಮುನ್ಸೂಚನೆ ನೀಡಿದೆ.
ಡಬಲ್ ಚೋಲ್ ಅಡಿಕೆಗೂ ಬೆಲೆ ಏರಿಕೆ
ಡಬಲ್ ಚೋಲ್ ಅಡಿಕೆಯ ಮಾರುಕಟ್ಟೆಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಹಿಂದಿನ ದಿನ ₹525ರಷ್ಟಿದ್ದ ಕನಿಷ್ಠ ಧಾರಣೆ ₹530ಕ್ಕೆ ಏರಿಕೆಯಾಗಿದ್ದರೆ, ಗರಿಷ್ಠ ಧಾರಣೆ ₹550ರಿಂದ ₹560ಕ್ಕೆ ತಲುಪಿದೆ. ಈ ಮೂಲಕ ಕನಿಷ್ಠ ದರದಲ್ಲಿ ₹5 ಹಾಗೂ ಗರಿಷ್ಠ ದರದಲ್ಲಿ ₹10ರಷ್ಟು ಹೆಚ್ಚಳ ದಾಖಲಾಗಿದೆ.
ಸಿಂಗಲ್ ಚೋಲ್ ಸೇರಿದಂತೆ ಇತರ ಅಡಿಕೆ ದರ ಸ್ಥಿರ
ಹೊಸ ಅಡಿಕೆ ಮತ್ತು ಡಬಲ್ ಚೋಲ್ ಹೊರತುಪಡಿಸಿ ಮಾರುಕಟ್ಟೆಯ ಇತರ ಪ್ರಮುಖ ಅಡಿಕೆ ವರ್ಗಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಂಗಲ್ ಚೋಲ್ ಅಡಿಕೆ ಕೆ.ಜಿ.ಗೆ ಕನಿಷ್ಠ ₹450 ಹಾಗೂ ಗರಿಷ್ಠ ₹480ರ ದರದಲ್ಲಿ ವಹಿವಾಟು ನಡೆಸಿದೆ.
ಬೆಳೆಗಾರರ ಕಣ್ಣು ಮುಂದಿನ ಮಾರುಕಟ್ಟೆ ದರದತ್ತ
ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ಕಂಡುಬರುತ್ತಿರುವ ಏರಿಳಿತಗಳು ಬೆಳೆಗಾರರಲ್ಲಿ ಗೊಂದಲ ಮೂಡಿಸಿದ್ದವು. ಅದರಲ್ಲೂ ಉತ್ಪಾದನಾ ವೆಚ್ಚ, ಕೂಲಿ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಾರುಕಟ್ಟೆ ದರದ ನಿರೀಕ್ಷೆ ಬೆಳೆಗಾರರಲ್ಲಿದೆ.
ಇದೀಗ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯಲ್ಲಿ ದಾಖಲಾಗಿರುವ ಏರಿಕೆ ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಆದರೆ ಈ ಏರಿಕೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆಯೇ ಅಥವಾ ಮತ್ತೆ ಧಾರಣೆ ಸ್ಥಿರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ಅಡಿಕೆ ಬೆಳೆಗಾರರ ಚಿತ್ತ ಮುಂದಿನ ಮಾರುಕಟ್ಟೆ ವಹಿವಾಟಿನತ್ತ ನೆಟ್ಟಿದೆ.















