ಅಂತರ ರಾಜ್ಯ
Murder-15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಅವಶೇಷ ಪತಿಯ ಮನೆ ಬಳಿ ಪತ್ತೆ– ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ಮೀರುವಂತಿದೆ ಈ ಕಥೆ – ಅಷ್ಟಕ್ಕೂ ಪೊಲೀಸರಿಗೆ ಶವ ಸಿಕ್ಕಿದ್ದು ಹೇಗೆ ?
ವಿವಾಹಿತೆಯೊಬ್ಬಳು ಯುವಕನೊಬ್ಬನೊಂದಿಗೆ ಪರಾರಿಯಾಗಿದ್ದಾಳೆ ಎಂದು 15 ವರ್ಷಗಳ ಹಿಂದೆ ದಾಖಲಾಗಿದ್ದ ನಾಪತ್ತೆ ಪ್ರಕರಣವೊಂದು ಮಹತ್ವದ ತಿರುವು ಪಡೆದಿದ್ದು, ಎರಡು ದಿನದ ಹಿಂದೆ ಆಕೆಯ ಮೃತದೇಹದ ಅವಶೇಷಗಳನ್ನು ಮಹಿಳೆಯ ಪತಿಯ ಮನೆಯ ಬಳಿಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ರೈಮ್ ಥ್ರಿಲ್ಲರ್ ಸಿನಿಮಾಗಿಂತ ಕಡಿಮೆಯಿಲ್ಲದ ಈ ಪ್ರಕರಣವು ಕೇರಳದ ಅಲಪ್ಪುಳ ಎಂಬಲ್ಲಿಂದ ವರದಿಯಾಗಿದೆ
ಕೇರಳದ ಅಲಪ್ಪುಳ ಜಿಲ್ಲೆಯ ಮನ್ನಾರ್ ಸಮೀಪದ ಎರಮತ್ತೂರಿನಲ್ಲಿರುವ ಪತಿಯ ಮನೆಯ ತ್ಯಾಜ್ಯ ನೀರಿನ ತೊಟ್ಟಿಯಲ್ಲಿ ಮಹಿಳೆಯ ಮೃತದೇಹದ ಅವಶೇಷಗಳು ಪತ್ತೆಯಾಗಿದೆ. ಕಲಾ ಕೊಲೆಯಾದ ಮಹಿಳೆಯಾಗಿದ್ದು ಅವಶೇಷಗಳು ಆಕೆಯ ಪತಿ ಅನಿಲ್ ಮನೆಯ ತ್ಯಾಜ್ಯ ತೊಟ್ಟಿಯಲ್ಲಿ ಪತ್ತೆಯಾಗಿದೆ. ಈತ ಕೊಲೆ ಪ್ರಕರಣದ ಕಿಂಗ್ ಪಿನ್.

ಅನಾಮಧೇಯ ವ್ಯಕ್ತಿಯೊಬ್ಬ ಪೊಲೀಸರಿಗೆ ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ಪೊಲೀಸರು 15 ವರ್ಷಗಳ ಹಿಂದೆ ಕಾಲ ಗರ್ಭದಲ್ಲಿ ಹೂತು ಹೋಗಿದ್ದ ಕೊಲೆ ಕೇಸ್ ಅನ್ನು ಬಯಲಿಗೆಳೆದಿದ್ದಾರೆ . ಕಲಾ ಮತ್ತು ಅನಿಲ್ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದು, ಮನೆಯವರ ವಿರೋಧವನ್ನು ಲೆಕ್ಕಿಸದೆ ಪ್ರೀತಿಸಿ ಮದುವೆಯಾಗಿದ್ದರು. ಕೆಲ ಸಮಯದ ಬಳಿಕ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಆಕೆ ಇನ್ನೊಬ್ಬ ಯುವಕನೊಂದಿಗೆ ಅನುರಕ್ತಳಾಗಿದ್ದಾಳೆ ಎಂದು ತಿಳಿದ ಅನಿಲ್ ಸ್ನೇಹಿತರ ಸಹಾಯದಿಂದ ಕಲಾಳನ್ನು ಕೊಂದು, ಶವವನ್ನು ಮನೆಯ ತ್ಯಾಜ್ಯದ ಗುಂಡಿಯಲ್ಲಿ ಮುಚ್ಚಿದ್ದ ಎನ್ನಲಾಗಿದೆ.
15 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ದೇಹದ ಭಾಗಗಳನ್ನು ಮನ್ನಾರ್ ಸಮೀಪದ ಎರಮತ್ತೂರಿನಲ್ಲಿರುವ ಪತಿಯ ಮನೆಯ ಸೆಪ್ಟಿಕ್ ಟ್ಯಾಂಕ್ನಿಂದ ಮಂಗಳವಾರ ಪೊಲೀಸರು ಹೊರತೆಗೆದಿದ್ದಾರೆ. ಕಲಾಳನ್ನು ಪತಿ ಅನಿಲ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಐವರು ಸಹಚರರನ್ನು ವಶಕ್ಕೆ ಪಡೆಯಲಾಗಿದೆ. ಹತ್ಯೆಯ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
“ಅಂಬಲಪ್ಪುಳ ಪೊಲೀಸರಿಗೆ ಒಂದೆರಡು ತಿಂಗಳ ಹಿಂದೆ ಅನಾಮಧೇಯ ಪತ್ರ ಬಂದಿದ್ದು ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಕಲಾಳನ್ನು ಆಕೆಯ ಪತಿ ಮತ್ತು ಸಂಬಂಧಿಕರು ಕತ್ತು ಹಿಸುಕಿ ಕೊಲೆ ಮಾಡಿ, ಅವರ ಮನೆಯ ಸೆಪ್ಟಿಕ್ ಟ್ಯಾಂಕ್ನಲ್ಲಿ ಹೂಳಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ರಹಸ್ಯ ತನಿಖೆಯನ್ನು ಪ್ರಾರಂಭಿಸಿದ್ದು, ಈ ವೇಳೆ ಕೆಲವು ಮಹತ್ವದ ಸುಳಿವುಗಳು ಲಭಿಸಿದವು. ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥೆ ಚೈತ್ರ ಥೆರೆಸಾ ಜಾನ್ ಹೇಳಿದ್ದಾರೆ. “ನಂತರ, ನಾವು ಐವರನ್ನು ವಶಕ್ಕೆ ತೆಗೆದುಕೊಂಡೆವು ಮತ್ತು ಅವರು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. . ಕಲಾ ಅವರ ದೇಹವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಎಸೆದಿರುವುದಾಗಿ ಪತ್ರದಲ್ಲಿ ಹೇಳಿರುವುದನ್ನು ಅವರು ಖಚಿತಪಡಿಸಿದ್ದಾರೆ, ”ಎಂದು ಅವರು ಹೇಳಿದರು.
ಸೆಪ್ಟಿಕ್ ಟ್ಯಾಂಕ್ ನಿಂದ ಹೊರತೆಗೆಯಲಾದ ದೇಹದ ಭಾಗಗಳನ್ನು ಈಗ ವಿಧಿವಿಜ್ಞಾನ ಪರೀಕ್ಷೆ ಮತ್ತು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗುವುದು. ಬಳಿಕವಷ್ಟೇ ಅದು ಕಲಾ ಅವರ ಮೃತ ದೇಹ ಎಂದು ಖಚಿತಪಡಿಸಿಕೊಳ್ಳಬಹುದು ಎಂದು ಚೈತ್ರ ಹೇಳಿದರು.
ಸಣ್ಣ-ಪುಟ್ಟ ಕಟ್ಟಡ ಕಾಮಗಾರಿಯ ಗುತ್ತಿಗೆ ಮಾಡುತ್ತಿದ್ದ ಅನಿಲ್ ಬೇರೆ ಜಾತಿಗೆ ಸೇರಿದ ಕಲಾ ಅವರನ್ನು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಅನಿಲ್ ಸಂಬಂಧಿಕರ ಮನೆಯಲ್ಲಿ ತಂಗಿದ್ದರು. ಒಂದು ವರ್ಷದ ನಂತರ, ಕಲಾ ಗಂಡು ಮಗನಿಗೆ ಜನ್ಮ ನೀಡಿದಳು. ಬಳಿಕ ಅನಿಲ್ ತನ್ನ ಕೆಲಸದ ನಿಮಿತ್ತ ಅಂಗೋಲಾಕ್ಕೆ ತೆರಳಿದ್ದ.
ಕಲಾ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿಗಳ ಪೈಕಿ ಓರ್ವ ಅನಿಲ್ ಸಂಬಂಧಿ . ಆತ ಅನಿಲ್ ಸಹೋದರಿಯ ಗಂಡ. ಈತ ವಿದೇಶದಲ್ಲಿದ್ದ ಅನಿಲ್ ಗೆ ಕಲಾ ಇಲ್ಲಿ ಬೇರೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವನ್ನು ತಿಳಿಸಿದ್ದಾನೆ. ಈ ಹಿನ್ನಲೆಯಲ್ಲಿ ಕಲಾ ಮತ್ತು ಅನಿಲ್ ಮಧ್ದಯೆ ಜಗಳವಾಗಿದೆ. ಈ ಹಂತದಲ್ಲಿ ಕಲಾ ಮತ್ತೆ ತವರು ಮನೆಗೆ ಹೋಗಲು ನಿರ್ಧರಿಸಿದ್ದು, ಆಗ ಮಗನನ್ನು ತನ್ನೊಟ್ಟಿಗೆ ಬಿಡುವಂತೆ ಒತ್ತಾಯಿಸಿದ್ದಾನೆ. ಆದರೇ ಕಲಾ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.
ಆಗ ಮತ್ತೆ ಸಂಬಂಧ ಸರಿ ಮಾಡಿಕೊಂಡ ಅನಿಲ್ ಪ್ರವಾಸಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ಆಕೆಯನ್ನು ಕುಟ್ಟನಾಡ್ಗೆ ಕರೆದೊಯ್ದು ಕಾರಿನೊಳಗಡೆ ತನ್ನ ಸಹಚರರ ಸಹಾಯದಿಂದ ಆಕೆಯ ಕತ್ತು ಹಿಸುಕಿದ್ದಾನೆ ಎಂದು ಡಿಪಿಸಿ ತಿಳಿಸಿದ್ದಾರೆ. ಬಳಿಕ ಕಲಾ ತನ್ನ ಮಗನನ್ನು ತೊರೆದು ತನ್ನ ಪ್ರಿಯಕರನೊಂದಿಗೆ ಓಡಿಹೋದಳು ಎಂಬ ಕಥೆಯನ್ನು ಕಟ್ಟಿ ಅನಿಲ್ ಸ್ಥಳೀಯರನ್ನು ನಂಬಿಸಿದ್ದರು. ಹಾಗೂ ಅದೇ ರೀತಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. . ಕಲಾ ಅವರ ಸಂಬಂಧಿಕರು ಸೇರಿದಂತೆ ಎಲ್ಲರೂ ಕಥೆಯನ್ನು ನಂಬಿದ್ದರು. ಆದರೆ, ಆಕೆಯ ಸಹೋದರ ನಾಪತ್ತೆ ದೂರು ದಾಖಲಿಸಿದ್ದು, ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದರು.
ಅನಿಲ್ ಮತ್ತೆ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಅವರು ಹಳೆಯ ಮನೆಯನ್ನು ಪುನರ್ನಿರ್ಮಿಸಿದ್ದು, ಆದರೇ ಆಗಲೂ ಹಳೆಯ ಸೆಪ್ಟಿಕ್ ಟ್ಯಾಂಕ್ ಅನ್ನು ನಾಶಪಡಿಸಲಿಲ್ಲ. ಕೆಲ ತಿಂಗಳ ಹಿಂದೆ ಅನಿಲ್ ಕೆಲಸದ ನಿಮಿತ್ತ ಇಸ್ರೇಲ್ಗೆ ಹೋಗಿದ್ದರು.
ಈ ನಡುವೆ ಅನಾಮಧೇಯ ಪತ್ರವೊಂದು ಪೊಲೀಸರ ಕೈ ಸೇರಿದ ಬಳಿಕ , ಪೊಲೀಸರು ಹಳೇ ಫೈಲ್ ಅನ್ನು ಮತ್ತೆ ತೆರೆದು ತನಿಖೆ ನಡೆಸಿದ್ದು, ಅನಿಲ್ ಅವರ ಕೆಲವು ಸಂಬಂಧಿಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆಯ ಸಂದರ್ಭ ಸಿಕ್ಕ ಸುಳಿವುಗಳ ಆಧಾರದಲ್ಲಿ, ಸೋಮನ್, ಅನಿಲ್, ಸುರೇಶ್, ಪ್ರಮೋದ್, ಸಂತೋಷ್ ಮತ್ತು ಜಿನು ರಾಜನ್ ಎಂಬವರನ್ನು ವಶಕ್ಕೆ ಪೊಲೀಸರು ವಿಚಾರಣೆ ನಡೆಸಿದಾಗ, ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ ಇಸ್ರೇಲ್ ನಲ್ಲಿರುವ ಪ್ರಕರಣದ ಎ1 ಆರೋಪಿ ಅನಿಲ್ನನ್ನು ಭಾರತಕ್ಕೆ ಕರೆತರಲು ಕೇರಳ ಪೊಲೀಸರು ಮುಂದಾಗಿದ್ದಾರೆ.
ಅಂತರ ರಾಜ್ಯ
Toll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.
ನವದೆಹಲಿ: ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ನೋಂದಣಿ ಸಂಖ್ಯೆಯ ಆಧಾರದ ಮೇಲೆ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ ಪರಿಚಯಿಸಲು ಮುಂದಾಗಿದೆ.
ಈ ವ್ಯವಸ್ಥೆಯ ಪ್ರಕಾರ, ಟೋಲ್ ಪ್ಲಾಜಾ ದಾಟುವ ವಾಹನದ ವಿಮೆ ಚಾಲ್ತಿಯಲ್ಲಿದೆಯೇ ಎಂಬುದನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ವಿಮೆಯ ಅವಧಿ ಮುಗಿದಿದ್ದರೆ, ವಾಹನದ ಮಾಲೀಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ತಕ್ಷಣವೇ SMS ಮೂಲಕ ಎಚ್ಚರಿಕೆ ಸಂದೇಶ ಕಳುಹಿಸಲಾಗುತ್ತದೆ. ವಿಮೆ ಇಲ್ಲದೆ ವಾಹನ ಚಲಾಯಿಸುವವರಿಗೆ ನಿಯಮಾನುಸಾರ 10,000 ರೂ.ವರೆಗೆ ದಂಡ ವಿಧಿಸುವ ಅವಕಾಶವೂ ಇದೆ.
ಟೋಲ್ ಪ್ಲಾಜಾದಲ್ಲಿ ವಿಮೆ ಪರಿಶೀಲನೆ ಹೇಗೆ?
ಹೊಸ ವ್ಯವಸ್ಥೆಯು ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ನಿರ್ವಹಿಸುವ ‘ವಾಹನ್’ (VAHAN) ಡೇಟಾಬೇಸ್ನಲ್ಲಿರುವ ವಾಹನಗಳ ನೋಂದಣಿ ಹಾಗೂ ವಿಮೆಯ ಮಾಹಿತಿಯನ್ನು ಆಧರಿಸಿ ಕಾರ್ಯನಿರ್ವಹಿಸಲಿದೆ.
ವಾಹನ ಟೋಲ್ ಪ್ಲಾಜಾ ದಾಟುವಾಗ ಅದರ ನೋಂದಣಿ ಸಂಖ್ಯೆಯನ್ನು ಗುರುತಿಸಿ, ಡೇಟಾಬೇಸ್ನಲ್ಲಿರುವ ವಿಮೆಯ ವಿವರಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಈ ಮೂಲಕ ವಿಮೆ ಚಾಲ್ತಿಯಲ್ಲಿದೆಯೇ ಅಥವಾ ಅವಧಿ ಮುಗಿದಿದೆಯೇ ಎಂಬುದನ್ನು ತಂತ್ರಜ್ಞಾನದ ಸಹಾಯದಿಂದ ಪರಿಶೀಲಿಸಲಾಗುತ್ತದೆ.
ವಿಮೆಯ ಅವಧಿ ಮುಗಿದಿದ್ದರೆ ಕೆಲವೇ ನಿಮಿಷಗಳಲ್ಲಿ ವಾಹನ ಮಾಲೀಕರ ಮೊಬೈಲ್ಗೆ SMS ರವಾನೆಯಾಗಲಿದೆ.
SMSನಲ್ಲಿ ಯಾವ ಮಾಹಿತಿ ಇರಲಿದೆ?
ವಾಹನದ ವಿಮೆ ಅವಧಿ ಮುಗಿದಿದ್ದರೆ ಮಾಲೀಕರಿಗೆ ಕಳುಹಿಸುವ ಸಂದೇಶದಲ್ಲಿ ಈ ಕೆಳಗಿನ ವಿವರಗಳಿರಲಿವೆ:
- ವಾಹನದ ನೋಂದಣಿ ಸಂಖ್ಯೆ.
- ಟೋಲ್ ಪ್ಲಾಜಾ ದಾಟಿದ ದಿನಾಂಕ ಮತ್ತು ಸಮಯ.
- ವಾಹನದ ವಿಮೆ ಅವಧಿ ಮುಗಿದ ದಿನಾಂಕ.
- ವಿಮೆಯನ್ನು ನವೀಕರಿಸಿಕೊಳ್ಳುವಂತೆ ಸೂಚನೆ.
ಈ ಮೂಲಕ ವಾಹನ ಮಾಲೀಕರು ವಿಮೆಯನ್ನು ತಕ್ಷಣ ನವೀಕರಿಸಿಕೊಳ್ಳಲು ಎಚ್ಚರಿಕೆ ನೀಡುವ ಉದ್ದೇಶ ಹೊಂದಲಾಗಿದೆ. - ವಿಮೆ ಇಲ್ಲದೆ ವಾಹನ ಚಲಾಯಿಸಿದರೆ ಎಷ್ಟು ದಂಡ?
- ಮೋಟಾರು ವಾಹನ ಕಾಯ್ದೆಯ ಪ್ರಕಾರ ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಕ್ಕೂ ಮಾನ್ಯವಾದ ಥರ್ಡ್ ಪಾರ್ಟಿ ವಿಮೆ ಹೊಂದಿರುವುದು ಕಡ್ಡಾಯವಾಗಿದೆ. ಅಪಘಾತ ಸಂಭವಿಸಿದಾಗ ಮತ್ತೊಬ್ಬ ವ್ಯಕ್ತಿಗೆ ಗಾಯ, ಸಾವು ಅಥವಾ ಆಸ್ತಿಗೆ ಹಾನಿಯಾದರೆ ಪರಿಹಾರ ನೀಡಲು ಈ ವಿಮೆ ನೆರವಾಗುತ್ತದೆ.
ಮಾನ್ಯ ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನು ಉಲ್ಲಂಘನೆಯಾಗಿದ್ದು, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 196ರ ಅಡಿಯಲ್ಲಿ ಮೊದಲ ಬಾರಿಗೆ ತಪ್ಪು ಎಸಗಿದರೆ 2,000 ರೂ. ಹಾಗೂ ಮರುಕಳಿಸಿದರೆ 4,000 ರೂ. ದಂಡ ಅಥವಾ ಕಾಯ್ದೆಯಲ್ಲಿ ನಿಗದಿಪಡಿಸಿರುವ ಇತರ ಶಿಕ್ಷೆ ವಿಧಿಸಬಹುದು.
ಸದ್ಯ ಒಂದು ಟೋಲ್ ಪ್ಲಾಜಾದಲ್ಲಿ ಮಾತ್ರ ಪ್ರಾಯೋಗಿಕ ಪರೀಕ್ಷೆ
ಪ್ರಸ್ತುತ ದೆಹಲಿಯ ಅರ್ಬನ್ ಎಕ್ಸ್ಟೆನ್ಷನ್ ರಸ್ತೆ-2 (UER-II)ಯ ಮುಂಡ್ಯಾ ಟೋಲ್ ಪ್ಲಾಜಾದಲ್ಲಿ ಈ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಪ್ರಯೋಗ ಯಶಸ್ವಿಯಾದರೆ ದೇಶದ ಇತರ ಟೋಲ್ ಪ್ಲಾಜಾಗಳಿಗೂ ವಿಸ್ತರಿಸುವ ಕುರಿತು NHAI ಚಿಂತನೆ ನಡೆಸಿದೆ.
ಆದರೆ ದೇಶಾದ್ಯಂತ ಈ ವ್ಯವಸ್ಥೆ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಪ್ರಾಧಿಕಾರ ಇನ್ನೂ ಅಧಿಕೃತ ದಿನಾಂಕ ಪ್ರಕಟಿಸಿಲ್ಲ. ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ವಾಹನ ಸವಾರರೇ ಎಚ್ಚರ: ನಿಮ್ಮ ವಾಹನದ ವಿಮೆಯ ಅವಧಿಯನ್ನು ಆಗಾಗ್ಗೆ ಪರಿಶೀಲಿಸಿ. ಅವಧಿ ಮುಗಿಯುವ ಮೊದಲೇ ವಿಮೆಯನ್ನು ನವೀಕರಿಸಿಕೊಳ್ಳಿ. ವಿಮೆ ಇಲ್ಲದೆ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದ್ದು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ದೊಡ್ಡ ಆರ್ಥಿಕ ಹೊರೆ ಎದುರಿಸಬೇಕಾಗಬಹುದು.
ಅಂತರ ರಾಜ್ಯ
Election Commission-ಯುಪಿಯಲ್ಲಿ 1.27 ಕೋಟಿ ಹಿಂದೂ ಮತದಾರರು ನಾಪತ್ತೆ? ಆದಿತ್ಯನಾಥ್ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ
ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ, ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ, ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಳಿಕ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ರಾಜ್ಯದ ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿದ್ದ ಸುಮಾರು 1.27 ಕೋಟಿ ಹಿಂದೂ ಮತದಾರರ ಹೆಸರುಗಳು ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿವೆ ಎಂದು ಅವರು ಆರೋಪಿಸಿದ್ದರು. ಈ ವ್ಯತ್ಯಾಸಗಳ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದೂ ತಿಳಿಸಿದ್ದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ, ಚುನಾವಣಾ ಇಲಾಖೆಯು ಮತದಾರರ ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಅಧಿಕೃತ ವಿಶ್ಲೇಷಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರ ದತ್ತಾಂಶದಲ್ಲಿ ಹೆಸರು, ತಂದೆ ಅಥವಾ ಸಂಗಾತಿಯ ಹೆಸರು, ವಯಸ್ಸು, ಮನೆ ಸಂಖ್ಯೆ ಹಾಗೂ ಲಿಂಗದಂತಹ ವಿವರಗಳು ಮಾತ್ರ ದಾಖಲಾಗಿರುತ್ತವೆ. ಧರ್ಮ ಮತ್ತು ಜಾತಿಗೆ ಸಂಬಂಧಿಸಿದ ಮಾಹಿತಿಗಳನ್ನು ಚುನಾವಣಾ ಆಯೋಗದ ಡೇಟಾಬೇಸ್ನಲ್ಲಿ ಸಂಗ್ರಹಿಸಲಾಗುವುದಿಲ್ಲ ಎಂದು ಅವರು ವಿವರಿಸಿದರು.
ಮತದಾರರ ಪಟ್ಟಿಗಳು ಸಾರ್ವಜನಿಕ ದಾಖಲೆಗಳಾಗಿರುವುದರಿಂದ ಮಾಧ್ಯಮ ಸಂಸ್ಥೆಗಳು ಹಾಗೂ ಸ್ವತಂತ್ರ ವಿಶ್ಲೇಷಕರು ಮತದಾರರ ಹೆಸರುಗಳು ಮತ್ತು ಲಭ್ಯವಿರುವ ಇತರ ಮಾಹಿತಿಗಳ ಆಧಾರದಲ್ಲಿ ತಮ್ಮದೇ ಆದ ವಿಶ್ಲೇಷಣೆ ನಡೆಸಬಹುದು. ಆದರೆ ಅಂತಹ ವಿಶ್ಲೇಷಣೆಗಳನ್ನು ಚುನಾವಣಾ ಇಲಾಖೆಯ ಅಧಿಕೃತ ದತ್ತಾಂಶ ಅಥವಾ ಸಂಶೋಧನೆ ಎಂದು ಪರಿಗಣಿಸಬಾರದು ಎಂದು ರಿನ್ವಾ ಸ್ಪಷ್ಟಪಡಿಸಿದರು.
ಯುಪಿಯಲ್ಲಿ 13.58 ಕೋಟಿ ಮತದಾರರು
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 13.58 ಕೋಟಿ ಮತದಾರರಿದ್ದು, ಅವರಲ್ಲಿ 6.20 ಕೋಟಿ ಮಹಿಳಾ ಮತದಾರರು ಸೇರಿದ್ದಾರೆ ಎಂದು ನವದೀಪ್ ರಿನ್ವಾ ಮಾಹಿತಿ ನೀಡಿದರು.
ಏಪ್ರಿಲ್ನಲ್ಲಿ ಘೋಷಿಸಲಾಗಿದ್ದ ಎಸ್ಐಆರ್ ಪ್ರಕ್ರಿಯೆಯ ನಂತರ ನಡೆದ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್ಎಸ್ಆರ್) ಅವಧಿಯಲ್ಲಿ 18 ಲಕ್ಷಕ್ಕೂ ಅಧಿಕ ಮತದಾರರ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದ ಅಂತಿಮ ಮತದಾರರ ಪಟ್ಟಿಯನ್ನು 2027ರ ಜನವರಿ 4ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳು ಮತ್ತು ಪರಿಷ್ಕರಣೆ ಪ್ರಕ್ರಿಯೆ ಇದೀಗ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಅಂತರ ರಾಜ್ಯ
Chinmaya Krishna Das-ಚಟ್ಟೋಗ್ರಾಮ್ನಿಂದ ಢಾಕಾ ಜೈಲಿಗೆ ಸ್ಥಳಾಂತರ: ಹಿಂದೂ ಸನ್ಯಾಸಿ ಚಿನ್ಮಯ ಕೃಷ್ಣ ದಾಸ್ ಆರೋಗ್ಯದ ಬಗ್ಗೆ ವಕೀಲರ ಕಳವಳ
ಬಾಂಗ್ಲಾದೇಶದ ಹಿಂದೂ ಸನ್ಯಾಸಿ ಹಾಗೂ ಸನಾತನ ಜಾಗರಣ ಜೋಟ್ ಸಂಘಟನೆಯ ವಕ್ತಾರ ಚಿನ್ಮಯ ಕೃಷ್ಣ ದಾಸ್ ಅವರನ್ನು ಚಟ್ಟೋಗ್ರಾಮ್ ಕೇಂದ್ರ ಕಾರಾಗೃಹದಿಂದ ಢಾಕಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅವರ ಆರೋಗ್ಯ ಮತ್ತು ಆಹಾರ ವ್ಯವಸ್ಥೆಯ ಕುರಿತು ವಕೀಲರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ಢಾಕಾ: ಬಾಂಗ್ಲಾದೇಶದ ಹಿಂದೂ ಸನ್ಯಾಸಿ ಹಾಗೂ ಸನಾತನ ಜಾಗರಣ ಜೋಟ್ ಸಂಘಟನೆಯ ವಕ್ತಾರ ಚಿನ್ಮಯ ಕೃಷ್ಣ ದಾಸ್ ಅವರನ್ನು ಚಟ್ಟೋಗ್ರಾಮ್ ಕೇಂದ್ರ ಕಾರಾಗೃಹದಿಂದ ಢಾಕಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಅವರ ಆರೋಗ್ಯ ಮತ್ತು ಆಹಾರ ವ್ಯವಸ್ಥೆಯ ಕುರಿತು ವಕೀಲರು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.
ಕಟ್ಟುನಿಟ್ಟಿನ ಸಸ್ಯಾಹಾರಿಯಾಗಿರುವ ಚಿನ್ಮಯ ಕೃಷ್ಣ ದಾಸ್ ಅವರು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡು ಸೇವಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆದರೆ, ಢಾಕಾ ಕೇಂದ್ರ ಕಾರಾಗೃಹದಲ್ಲಿ ಈ ಸೌಲಭ್ಯ ಲಭ್ಯವಿಲ್ಲದಿರುವುದು ಅವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅವರ ಪರ ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಚಿನ್ಮಯ ಕೃಷ್ಣ ದಾಸ್ ಅವರು ಬ್ರಹ್ಮಚಾರಿ ಹಾಗೂ ವೈಷ್ಣವ ಪರಂಪರೆಯನ್ನು ಅನುಸರಿಸುವ ಸನ್ಯಾಸಿಯಾಗಿದ್ದು, ಕಟ್ಟುನಿಟ್ಟಿನ ಸಸ್ಯಾಹಾರ ಪದ್ಧತಿಯನ್ನು ಪಾಲಿಸುತ್ತಾರೆ. ಚಟ್ಟೋಗ್ರಾಮ್ ಕೇಂದ್ರ ಕಾರಾಗೃಹದಲ್ಲಿದ್ದಾಗ ರಂಗನಾಥನ್ ಬ್ರಹ್ಮಚಾರಿ ಎಂಬ ಮತ್ತೊಬ್ಬ ಆರೋಪಿಯು ಅವರಿಗೆ ಅಡುಗೆ ಮಾಡಲು ನೆರವಾಗುತ್ತಿದ್ದರು. ಇದರಿಂದ ಸುಮಾರು ಎರಡು ವರ್ಷಗಳ ಬಂಧನದ ಅವಧಿಯಲ್ಲೂ ತಮ್ಮ ಆಹಾರ ಪದ್ಧತಿಯನ್ನು ಮುಂದುವರಿಸಲು ಸಾಧ್ಯವಾಗಿತ್ತು ಎಂದು ವಕೀಲರು ವಿವರಿಸಿದ್ದಾರೆ.
ಇದಲ್ಲದೆ, ಚಿನ್ಮಯ ಕೃಷ್ಣ ದಾಸ್ ಅವರು ಗಂಭೀರ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದು, ಯಾವುದೇ ಆಹಾರವನ್ನು ಸೇವಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ ಎಂದು ವಕೀಲರು ಹೇಳಿದ್ದಾರೆ.
ಢಾಕಾ ಕೇಂದ್ರ ಕಾರಾಗೃಹದಲ್ಲಿ ಸ್ವತಃ ಅಡುಗೆ ಮಾಡಿಕೊಳ್ಳುವ ವ್ಯವಸ್ಥೆ ಇಲ್ಲದ ಕಾರಣ ಸದ್ಯ ಅವರು ಹಣ್ಣುಗಳನ್ನು ಮಾತ್ರ ಸೇವಿಸುತ್ತಿದ್ದಾರೆ. “ಅವರಿಗೆ ಅಗತ್ಯವಾದ ಆಹಾರ ಸಿಗುತ್ತಿಲ್ಲ. ಅವರ ಜೀವಕ್ಕೆ ಅಪಾಯ ಎದುರಾಗಬಹುದು ಎಂಬ ಆತಂಕ ನನಗಿದೆ” ಎಂದು ಅಪೂರ್ವ ಕುಮಾರ್ ಭಟ್ಟಾಚಾರ್ಯ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಸೋಮವಾರ ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಚಿನ್ಮಯ ಕೃಷ್ಣ ದಾಸ್ ಅವರನ್ನು ಚಟ್ಟೋಗ್ರಾಮ್ನಿಂದ ಢಾಕಾಗೆ ಕರೆತರಲಾಗಿದೆ. ಅವರನ್ನು ಕರೆದೊಯ್ಯುತ್ತಿದ್ದ ವಾಹನ ಬೆಳಗ್ಗೆ ಸುಮಾರು 10 ಗಂಟೆಗೆ ಢಾಕಾ ಕೇಂದ್ರ ಕಾರಾಗೃಹ ತಲುಪಿತ್ತು.
ಚಟ್ಟೋಗ್ರಾಮ್ ನ್ಯಾಯಾಲಯದ ಗಲಭೆ ಪ್ರಕರಣದ ಹಿನ್ನೆಲೆ
ಸನಾತನ ಜಾಗರಣ ಜೋಟ್ ಸಂಘಟನೆಯ ವಕ್ತಾರರಾಗಿರುವ ಚಿನ್ಮಯ ಕೃಷ್ಣ ದಾಸ್ ಅವರನ್ನು 2024ರ ನವೆಂಬರ್ 25ರಂದು ಢಾಕಾದಲ್ಲಿ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
2024ರ ಅಕ್ಟೋಬರ್ 31ರಂದು ಈ ಪ್ರಕರಣ ದಾಖಲಾಗಿತ್ತು. ಚಟ್ಟೋಗ್ರಾಮ್ನ ಚಂದ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹ್ರಾ ವಾರ್ಡ್ನ ಆಗಿನ ಬಿಎನ್ಪಿ ಪ್ರಧಾನ ಕಾರ್ಯದರ್ಶಿ ಫಿರೋಜ್ ಖಾನ್ ದೂರು ದಾಖಲಿಸಿದ್ದರು. ರಾಷ್ಟ್ರೀಯ ಧ್ವಜಕ್ಕೆ ಅಗೌರವ ತೋರಿದ ಆರೋಪದಡಿ ಚಿನ್ಮಯ ಕೃಷ್ಣ ದಾಸ್ ಸೇರಿದಂತೆ ಒಟ್ಟು 19 ಮಂದಿಯನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿತ್ತು. ಬಳಿಕ ಫಿರೋಜ್ ಖಾನ್ ಅವರನ್ನು ಬಿಎನ್ಪಿ ಪಕ್ಷದ ಹುದ್ದೆಯಿಂದ ಬಿಡುಗಡೆಗೊಳಿಸಿತ್ತು.
2024ರ ನವೆಂಬರ್ 26ರಂದು ಚಿನ್ಮಯ ಕೃಷ್ಣ ದಾಸ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಚಟ್ಟೋಗ್ರಾಮ್ ನ್ಯಾಯಾಲಯದ ಆವರಣದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ವಕೀಲ ಸೈಫುಲ್ ಇಸ್ಲಾಂ ಅವರ ಮೇಲೆ ಹಲ್ಲೆ ನಡೆಸಿ, ಹರಿತವಾದ ಆಯುಧಗಳಿಂದ ಹತ್ಯೆ ಮಾಡಲಾಗಿತ್ತು.
ಈ ಸಂಬಂಧ ಮೃತ ವಕೀಲರ ತಂದೆ ಜಮಾಲ್ ಉದ್ದೀನ್ ಅವರು 31 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ಇದರ ಜೊತೆಗೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ವಕೀಲರು ಹಾಗೂ ನ್ಯಾಯಾಲಯಕ್ಕೆ ಬಂದವರ ಮೇಲೆ ಹಲ್ಲೆ ಮತ್ತು ಸ್ಫೋಟಕ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ ಇನ್ನೂ ಐದು ಪ್ರಕರಣಗಳು ದಾಖಲಾಗಿದ್ದವು.
2025ರ ಜುಲೈ 1ರಂದು ತನಿಖಾಧಿಕಾರಿಗಳು ಚಟ್ಟೋಗ್ರಾಮ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಚಿನ್ಮಯ ದಾಸ್ ಸೇರಿದಂತೆ 38 ಮಂದಿಯ ಹೆಸರುಗಳನ್ನು ಉಲ್ಲೇಖಿಸಿದ್ದರು. ಆರೋಪಪಟ್ಟಿಯ ಅಂಶಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದೂರುದಾರರು ನ್ಯಾಯಾಲಯಕ್ಕೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
2025ರ ಆಗಸ್ಟ್ 25ರಂದು ನ್ಯಾಯಾಲಯವು ಸುಕಾಂತ ದತ್ತ ಸೇರಿದಂತೆ ಒಟ್ಟು 39 ಆರೋಪಿಗಳ ವಿರುದ್ಧದ ಆರೋಪಪಟ್ಟಿಯನ್ನು ಅಂಗೀಕರಿಸಿತು. ಸದ್ಯ ಪ್ರಕರಣದ ವಿಚಾರಣೆಯು ಚಟ್ಟೋಗ್ರಾಮ್ ವಿಭಾಗೀಯ ತ್ವರಿತ ವಿಚಾರಣಾ ನ್ಯಾಯಮಂಡಳಿಯಲ್ಲಿ ನಡೆಯುತ್ತಿದ್ದು, ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.
ಚಿನ್ಮಯ ಕೃಷ್ಣ ದಾಸ್ ಅವರ ಜೈಲು ಸ್ಥಳಾಂತರದ ಬೆನ್ನಲ್ಲೇ ಅವರ ಆಹಾರ ಪದ್ಧತಿ, ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಢಾಕಾ ಕೇಂದ್ರ ಕಾರಾಗೃಹದಲ್ಲಿ ಅವರಿಗೆ ಅಗತ್ಯವಾದ ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.
-
ಬಿಗ್ ನ್ಯೂಸ್23 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
ಬಿಗ್ ನ್ಯೂಸ್16 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ21 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಮಂಗಳೂರು24 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
Uncategorized23 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್24 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ರಾಜಕೀಯ22 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಬಿಗ್ ನ್ಯೂಸ್22 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















