ಅಂತರ ರಾಜ್ಯ
Arrested-ನಿವೃತ್ತ ಐಎಎಸ್ ಅಧಿಕಾರಿ ಕೊಲೆ ಪ್ರಕರಣ: ಒಂದು ತಿಂಗಳ ಬಳಿಕ ರೈಲಿನಲ್ಲಿ ಪರಾರಿಯಾಗಿದ್ದ ಕೇರ್‌ಟೇಕರ್ ಅರೆಸ್ಟ್..!
ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಅಗ್ರವಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದು ರೈಲಿನಲ್ಲಿ ಪರಾರಿಯಾಗಿದ್ದ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿಯನ್ನು ಮಧ್ಯಪ್ರದೇಶ ಪೊಲೀಸರು ಒಂದು ತಿಂಗಳ ಬಳಿಕ ಬಂಧಿಸಿದ್ದಾರೆ.
ಭೋಪಾಲ್: ನಿವೃತ್ತ ಐಎಎಸ್ ಅಧಿಕಾರಿ ರಾಕೇಶ್ ಅಗ್ರವಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದು ರೈಲಿನಲ್ಲಿ ಪರಾರಿಯಾಗಿದ್ದ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿಯನ್ನು ಮಧ್ಯಪ್ರದೇಶ ಪೊಲೀಸರು ಒಂದು ತಿಂಗಳ ಬಳಿಕ ಬಂಧಿಸಿದ್ದಾರೆ. 27 ವರ್ಷದ ಆರೋಪಿಯನ್ನು ಸೆರೆಹಿಡಿಯಲು ಪೊಲೀಸರು ಬರೋಬ್ಬರಿ 9 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ, 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ.
ಮಧ್ಯಪ್ರದೇಶ ಕೇಡರ್‌ನ 1982ರ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ 70 ವರ್ಷದ ರಾಕೇಶ್ ಅಗ್ರವಾಲ್ ಅವರು ಸೆಪ್ಟೆಂಬರ್ 30ರಂದು ಭೋಪಾಲ್‌ನ ಸೂರಜ್ ನಗರದ ತಮ್ಮ ನಿವಾಸದಲ್ಲಿ ಕೊಲೆಯಾಗಿದ್ದರು. ದುಷ್ಕರ್ಮಿ ಹರಿತವಾದ ಆಯುಧದಿಂದ ಕತ್ತು ಸೀಳಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.
ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಮನೆಯ ಕೇರ್‌ಟೇಕರ್ ವರುಣ್ ವಾಲ್ಮೀಕಿ ಪರಾರಿಯಾಗಿದ್ದ. ರಾತ್ರಿ 2.30ರ ಸುಮಾರಿಗೆ ಮನೆಯಿಂದ ಹೊರಟಿದ್ದ ಆತ, ಬೆಳಗಿನ ಜಾವ 4.12ಕ್ಕೆ ಭೋಪಾಲ್ ರೈಲು ನಿಲ್ದಾಣದಿಂದ ಕೇರಳ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ. ಈ ದೃಶ್ಯ ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ರಾದಲ್ಲಿ ಸಿಕ್ಕ ಸುಳಿವು, ಪೊಲೀಸರ ಕಾರ್ಯಾಚರಣೆ
ರೈಲಿನಲ್ಲಿ ಪರಾರಿಯಾಗಿದ್ದ ವಾಲ್ಮೀಕಿ ಗ್ವಾಲಿಯರ್, ಆಗ್ರಾ, ಮಥುರಾ ಹಾಗೂ ವೃಂದಾವನ ಸೇರಿದಂತೆ ಹಲವು ಪ್ರದೇಶಗಳಲ್ಲಿ ಓಡಾಡಿದ್ದ. ಈತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಪೊಲೀಸರಿಗೆ ಕೊನೆಗೆ ಆಗ್ರಾದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಆಗ್ರಾ-ಮಥುರಾ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಆದರೆ, ಮಂಗಳವಾರ ಬೆಳಗ್ಗೆ ಮುಘಾಲಿಯಾ ಛಾಪ್ ಬಳಿ ಆರೋಪಿಯನ್ನು ಭೋಪಾಲ್‌ಗೆ ಕರೆತರುತ್ತಿದ್ದ ವೇಳೆ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪೊಲೀಸ್ ಅಧಿಕಾರಿಯೊಬ್ಬರ ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆಯೇ ದಾಳಿ ನಡೆಸಲು ಮುಂದಾಗಿದ್ದಾನೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈದಿದ್ದಕ್ಕೆ ಕೊಲೆ ಮಾಡಿದ್ದೆ ಎಂದ ಆರೋಪಿ!
ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ಸಂಪೂರ್ಣವಾಗಿ ತಿಳಿದುಬಂದಿಲ್ಲ ಎಂದು ಭೋಪಾಲ್ ಪೊಲೀಸ್ ಕಮಿಷನರ್ ಸಂಜಯ್ ಕುಮಾರ್ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿ ತನ್ನನ್ನು ಬೈದು, ಕೆಟ್ಟದಾಗಿ ನಡೆಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
9 ರಾಜ್ಯಗಳಲ್ಲಿ ಪೊಲೀಸರ ಶೋಧ
ಆರೋಪಿಯನ್ನು ಪತ್ತೆಹಚ್ಚಲು ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಚಂಡೀಗಢ, ಪಂಜಾಬ್, ದೆಹಲಿ, ಉತ್ತರಾಖಂಡ ಹಾಗೂ ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ 2,500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯ ಸಂಬಂಧಿಕರು ಹಾಗೂ ಪರಿಚಯಸ್ಥರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದರು.
ಆರೋಪಿಗೆ ಪೊಲೀಸರ ಸುಳಿವು ಸಿಗದಂತೆ ತನಿಖಾಧಿಕಾರಿಗಳು ವೇಷ ಬದಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು. ಕೆಲವರು ಬೀದಿ ವ್ಯಾಪಾರಿಗಳಂತೆ, ಇನ್ನು ಕೆಲವರು ಕೂಲಿ ಕಾರ್ಮಿಕರು ಹಾಗೂ ಇತರ ಕೆಲಸಗಾರರಂತೆ ನಟಿಸಿ ಆತನ ಚಲನವಲನಗಳ ಮೇಲೆ ನಿಗಾ ಇರಿಸಿದ್ದರು. ರೈಲು ನಿಲ್ದಾಣ, ಬಸ್ ನಿಲ್ದಾಣ, ದೇವಾಲಯಗಳು ಹಾಗೂ ಆಶ್ರಯ ತಾಣಗಳಲ್ಲೂ ಹುಡುಕಾಟ ನಡೆಸಿದ್ದರು.
ಹಿಂದಿನ ಕೆಲಸದ ಸ್ಥಳಗಳಲ್ಲೂ ಗಂಭೀರ ಆರೋಪ
ವರುಣ್ ವಾಲ್ಮೀಕಿ ಈ ಹಿಂದೆ ಜೈಪುರ, ಗ್ವಾಲಿಯರ್ ಹಾಗೂ ನೈನಿತಾಲ್‌ನಲ್ಲಿರುವ ಮನೆ ಆರೈಕೆ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದ. ಈತ ಕೆಲಸ ಮಾಡುತ್ತಿದ್ದ ಕೆಲವು ಕಡೆಗಳಲ್ಲಿ ಆತನ ನಡವಳಿಕೆ ಬಗ್ಗೆ ದೂರುಗಳು ಕೇಳಿಬಂದಿದ್ದವು. ವೃದ್ಧ ರೋಗಿಯೊಬ್ಬರನ್ನು ಹಾನಿಗೊಳಿಸಲು ಯತ್ನಿಸಿದ್ದ ಆರೋಪವೂ ಆತನ ಮೇಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನೈನಿತಾಲ್‌ನಲ್ಲಿ 2025ರ ಡಿಸೆಂಬರ್‌ನಿಂದ 2026ರ ಫೆಬ್ರವರಿವರೆಗೆ 92 ವರ್ಷದ ನಿವೃತ್ತ ವ್ಯಕ್ತಿಯೊಬ್ಬರ ಆರೈಕೆದಾರನಾಗಿ ಕೆಲಸ ಮಾಡಿದ್ದ. ಈ ಅವಧಿಯಲ್ಲಿ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.
ಒಮ್ಮೆ ವೃದ್ಧ ವ್ಯಕ್ತಿಯ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ನೆರೆಹೊರೆಯವರು ಮಧ್ಯಪ್ರವೇಶಿಸಿ ಆತನನ್ನು ತಡೆದಿದ್ದರು. ಘಟನೆಯ ಬಳಿಕ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.
ಇನ್ನು 2026ರ ಆಗಸ್ಟ್‌ನಲ್ಲಿ ಗ್ವಾಲಿಯರ್‌ನ ಹೋಮ್ ನರ್ಸಿಂಗ್ ಏಜೆನ್ಸಿಗೆ ಸೇರಿದ ಮೊಬೈಲ್ ಫೋನ್ ಕಳ್ಳತನ ಮಾಡಿದ ಆರೋಪವೂ ಆತನ ಮೇಲಿದೆ. ಆದರೆ, ಈ ಸಂಬಂಧ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ಜೈಪುರದಲ್ಲೂ 2026ರ ಜೂನ್‌ನಲ್ಲಿ ಆರೈಕೆದಾರನಾಗಿ ಕೆಲಸಕ್ಕೆ ಸೇರಿದ್ದ ವಾಲ್ಮೀಕಿಯನ್ನು ನಡವಳಿಕೆ ಕುರಿತ ದೂರುಗಳ ಹಿನ್ನೆಲೆಯಲ್ಲಿ ಕೆಲಸದಿಂದ ತೆಗೆದುಹಾಕಲಾಗಿತ್ತು.
ಮನೆಯ ಕೆಲಸಗಾರನಿಂದ ಕೊಲೆ ಪ್ರಕರಣ ಬೆಳಕಿಗೆ
ಸೆಪ್ಟೆಂಬರ್ 30ರಂದು ಭೋಪಾಲ್‌ನ ಸೂರಜ್ ನಗರದ ಪಾನ್ ಘಾಟ್ ಮ್ಯಾರೇಜ್ ಗಾರ್ಡನ್ ಸಮೀಪದ ನಿವಾಸದಲ್ಲಿ ರಾಕೇಶ್ ಅಗ್ರವಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆಯ ಮೇಲೆ ಗಂಭೀರ ಗಾಯಗಳಿದ್ದವು. ಮನೆಯ ಕೆಲಸಗಾರ ಅಮರ್ ಸಿಂಗ್ ಪಾಲಿವಾಲ್ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತರ ರಾಜ್ಯ
Mohammed Shami: ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ
ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
ಹೊಸದಿಲ್ಲಿ: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯದಿರುವ ಶಮಿ, ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ಕ್ರಿಕೆಟ್ ಪಯಣಕ್ಕೆ ತೆರೆ ಎಳೆದಿದ್ದಾರೆ.
‘ನಾನು ಬಿಳಿ ಜೆರ್ಸಿಗೆ ವಿದಾಯ ಹೇಳುತ್ತಿದ್ದೇನೆ. ಆದರೆ ಅದರೊಂದಿಗೆ ಬೆಸೆದುಕೊಂಡಿರುವ ನೆನಪುಗಳಿಗೆ ಎಂದಿಗೂ ವಿದಾಯ ಹೇಳುವುದಿಲ್ಲ’ ಎಂದು ಶಮಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಭಾರತದ ಟೆಸ್ಟ್ ಜೆರ್ಸಿಯನ್ನು ಮೊದಲ ಬಾರಿಗೆ ಧರಿಸಿದ ಕ್ಷಣವನ್ನು ನೆನಪಿಸಿಕೊಂಡಿರುವ ಅವರು, ‘ಮೊದಲ ಬಾರಿಗೆ ಭಾರತದ ಟೆಸ್ಟ್ ಜೆರ್ಸಿ ಧರಿಸಿದಾಗ ನನ್ನಲ್ಲಿದ್ದದ್ದು ಒಂದೇ ಕನಸು. ನನ್ನ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದಾಗಿತ್ತು. ಅಂದಿನಿಂದ ಪ್ರತಿಯೊಂದು ವಿಕೆಟ್, ಪ್ರತಿಯೊಂದು ಹೋರಾಟ, ಪ್ರತಿಯೊಂದು ಗಾಯ ಹಾಗೂ ಪ್ರತಿಯೊಂದು ಪುನರಾಗಮನವೂ ನನಗೆ ಹೊಸ ಪಾಠ ಕಲಿಸಿದೆ’ ಎಂದು ಬರೆದುಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ ನನ್ನ ಜೀವನದ ವಿಶೇಷ ಭಾಗವಾಗಿತ್ತು
‘ನನ್ನ ಪಾಲಿಗೆ ಟೆಸ್ಟ್ ಕ್ರಿಕೆಟ್ ಕೇವಲ ಒಂದು ಮಾದರಿಯಾಗಿರಲಿಲ್ಲ. ಅದು ನನ್ನ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು. ಇಂದು ಭಾರವಾದ ಹೃದಯ ಹಾಗೂ ಅಸಂಖ್ಯಾತ ಸುಂದರ ನೆನಪುಗಳೊಂದಿಗೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ’ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ತಮ್ಮ ಕ್ರಿಕೆಟ್ ಪಯಣದಲ್ಲಿ ಬೆಂಬಲವಾಗಿ ನಿಂತ ಸಹ ಆಟಗಾರರು, ತರಬೇತುದಾರರು ಹಾಗೂ ಕುಟುಂಬ ಸದಸ್ಯರಿಗೆ ಶಮಿ ಹೃದಯಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ಒಳ್ಳೆಯ ಹಾಗೂ ಕಷ್ಟದ ಸಮಯಗಳಲ್ಲೂ ತಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಭಾರತೀಯ ಅಭಿಮಾನಿಗಳಿಗೂ ಕೃತಜ್ಞತೆ ತಿಳಿಸಿದ್ದಾರೆ.
ತಮ್ಮ ಪ್ರತಿಭೆಯನ್ನು ಗುರುತಿಸಿ, ಬೆಳೆಯಲು ಅವಕಾಶ ನೀಡಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಸಂಸ್ಥೆಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಈ ಸಂಸ್ಥೆಗಳು ನೀಡಿದ ಬೆಂಬಲ ಹಾಗೂ ವಿಶ್ವಾಸ ಸದಾ ತಮ್ಮ ಪಾಲಿಗೆ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.
ಅಂತರ ರಾಜ್ಯ
Sabarimala-ಶಬರಿಮಲೆ ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ‘ಶಬರಿ ಪೋರ್ಟಲ್’ ಮತ್ತು ವಾಟ್ಸಾಪ್ ಚಾಟ್‌ಬಾಟ್ ಡಿಜಿಟಲ್ ವೇದಿಕೆ..! ಒಂದೇ ಸೂರಿನಡಿ ಸಮಗ್ರ ಮಾಹಿತಿ ಮತ್ತು ಸೇವೆಗಳು
ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೇರಳದ ಜಿಲ್ಲಾಡಳಿತವು ಹೊಸ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದೆ. ಯಾತ್ರೆಗೆ ಸಂಬಂಧಿಸಿದ ಸಮಗ್ರ ಮಾಹಿತಿ, ವಿವಿಧ ಸೇವೆಗಳು ಹಾಗೂ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಡಿಜಿಟಲ್ ವೇದಿಕೆಯಾದ ‘ಶಬರಿ ಪೋರ್ಟಲ್’ ಮತ್ತು ವಾಟ್ಸಾಪ್ ಆಧಾರಿತ ‘ಶಬರಿ ಚಾಟ್‌ಬಾಟ್’ ಸಿದ್ಧಪಡಿಸಲಾಗಿದೆ.
ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕೇರಳದ ಜಿಲ್ಲಾಡಳಿತವು ಹೊಸ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದೆ. ಯಾತ್ರೆಗೆ ಸಂಬಂಧಿಸಿದ ಸಮಗ್ರ ಮಾಹಿತಿ, ವಿವಿಧ ಸೇವೆಗಳು ಹಾಗೂ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಡಿಜಿಟಲ್ ವೇದಿಕೆಯಾದ ‘ಶಬರಿ ಪೋರ್ಟಲ್’ ಮತ್ತು ವಾಟ್ಸಾಪ್ ಆಧಾರಿತ ‘ಶಬರಿ ಚಾಟ್‌ಬಾಟ್’ ಸಿದ್ಧಪಡಿಸಲಾಗಿದೆ.
ಅಯ್ಯಪ್ಪ ಭಕ್ತರು www.sabariportaldcpta.in ವೆಬ್‌ಸೈಟ್ ಮೂಲಕ ಈ ಸೇವೆಗಳನ್ನು ಪಡೆದುಕೊಳ್ಳಬಹುದು.
ಪತ್ತನಂತಿಟ್ಟ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಪತ್ತನಂತಿಟ್ಟ ಜಿಲ್ಲಾಧಿಕಾರಿ ಕಚೇರಿಯ ಜೂನಿಯರ್ ಸೂಪರಿಂಟೆಂಡೆಂಟ್ ಅಜಿತ್ ಶ್ರೀನಿವಾಸ್ ಹಾಗೂ ಲ್ಯಾಂಡ್ ರೆವೆನ್ಯೂ ಕಮಿಷನರೇಟ್‌ನ ರೆವೆನ್ಯೂ ಇನ್‌ಸ್ಪೆಕ್ಟರ್ ಬಿ. ಯಗೇಶ್ ಅವರು ಜಂಟಿಯಾಗಿ ಈ ತಾಂತ್ರಿಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ.
ಶಬರಿ ಪೋರ್ಟಲ್‌ನಲ್ಲಿರುವ ಪ್ರಮುಖ ಸೌಲಭ್ಯಗಳೇನು?
- ಪೂಜಾ ಸಮಯ ಮತ್ತು ಆನ್‌ಲೈನ್ ಕ್ಯೂ ಮಾಹಿತಿ: ಸನ್ನಿಧಾನದ ದೈನಂದಿನ ಪೂಜಾ ಸಮಯ, ದರ್ಶನದ ವೇಳಾಪಟ್ಟಿ ಹಾಗೂ ಆನ್‌ಲೈನ್ ಸರತಿ ಸಾಲಿನ ಬುಕ್ಕಿಂಗ್‌ಗೆ ಸಂಬಂಧಿಸಿದ ನೇರ ಲಿಂಕ್‌ಗಳನ್ನು ಪೋರ್ಟಲ್‌ನಲ್ಲಿ ಒದಗಿಸಲಾಗಿದೆ.
- ಶಬರಿ ಮ್ಯಾಪ್: ಪಂಪಾ, ನಿಲಕ್ಕಲ್ ಹಾಗೂ ಸನ್ನಿಧಾನದಲ್ಲಿರುವ ಕುಡಿಯುವ ನೀರಿನ ಕೇಂದ್ರಗಳು, ಶೌಚಾಲಯಗಳು, ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು, ಪೊಲೀಸ್ ಸೇವೆಗಳು ಮತ್ತು ಪಾರ್ಕಿಂಗ್ ಸ್ಥಳಗಳನ್ನು ಗೂಗಲ್ ಮ್ಯಾಪ್ ಮೂಲಕ ಸುಲಭವಾಗಿ ಪತ್ತೆಹಚ್ಚಬಹುದು.
- ಸಾರಿಗೆ ವ್ಯವಸ್ಥೆಯ ಮಾಹಿತಿ: ಚೆಂಗನ್ನೂರು, ತಿರುವಲ್ಲಾ ಹಾಗೂ ಕೊಟ್ಟಾಯಂ ರೈಲು ನಿಲ್ದಾಣಗಳ ರೈಲು ವೇಳಾಪಟ್ಟಿ, ಪಂಪಾದಿಂದ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ನಿಲಕ್ಕಲ್-ಪಂಪಾ ನಡುವಿನ ಚೈನ್ ಸರ್ವೀಸ್ ಬಸ್‌ಗಳ ತತ್ಸಮಯದ ಮಾಹಿತಿ ಲಭ್ಯವಾಗಲಿದೆ.
- ಚೆಕ್ ಮೈ ಬಿಲ್: ಶಬರಿಮಲೆಯಲ್ಲಿ ಮಾರಾಟವಾಗುವ ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಅಧಿಕೃತ ಬೆಲೆಯನ್ನು ವಿವಿಧ ಭಾಷೆಗಳಲ್ಲಿ ಪರಿಶೀಲಿಸಬಹುದು. ಅಂಗಡಿಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡಿದರೆ ಬಿಲ್ ಸಹಿತ ಪೋರ್ಟಲ್ ಮೂಲಕವೇ ದೂರು ಸಲ್ಲಿಸಲು ಅವಕಾಶವಿದೆ.
- ಕಾಣೆಯಾದವರ ಮತ್ತು ವಸ್ತುಗಳ ಪತ್ತೆ: ಯಾತ್ರೆಯ ಸಂದರ್ಭದಲ್ಲಿ ಜನಸಂದಣಿಯಲ್ಲಿ ಕಾಣೆಯಾದ ಮಕ್ಕಳು, ಗುಂಪಿನಿಂದ ದೂರವಾದವರು ಹಾಗೂ ಮೊಬೈಲ್ ಫೋನ್ ಸೇರಿದಂತೆ ಕಳೆದುಹೋದ ವಸ್ತುಗಳ ವಿವರಗಳನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ತಕ್ಷಣ ರವಾನಿಸಬಹುದು. ದೂರಿನ ತನಿಖೆಯ ಪ್ರಗತಿಯನ್ನೂ ವಾಟ್ಸಾಪ್ ಮೂಲಕ ಪರಿಶೀಲಿಸುವ ಸೌಲಭ್ಯವಿದೆ.
- 24 ಗಂಟೆಯೂ ವಾಟ್ಸಾಪ್ ಚಾಟ್‌ಬಾಟ್ ಸೇವೆ: ಭಕ್ತರು ತಮ್ಮ ಮೊಬೈಲ್‌ನಿಂದ ಚಾಟ್‌ಬಾಟ್‌ಗೆ ‘Hai’ ಎಂದು ಸಂದೇಶ ಕಳುಹಿಸುವ ಮೂಲಕ ಯಾತ್ರೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರ ಪಡೆಯಬಹುದು.
ಸುಗಮ ಯಾತ್ರೆಗೆ ಡಿಜಿಟಲ್ ನೆರವು
ಮಂಡಲ-ಮಕರಜ್ಯೋತಿ ತೀರ್ಥಯಾತ್ರೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ. ಈ ವೇಳೆ ಭಕ್ತರಿಗೆ ಅಗತ್ಯ ಮಾಹಿತಿ ಒಂದೇ ವೇದಿಕೆಯಲ್ಲಿ ಲಭ್ಯವಾಗುವುದರಿಂದ ಗೊಂದಲ ಕಡಿಮೆಯಾಗಲಿದ್ದು, ಸುರಕ್ಷಿತ ಹಾಗೂ ಸುಗಮ ಯಾತ್ರೆಗೆ ನೆರವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
24×7 ವಾಟ್ಸಾಪ್ ಚಾಟ್‌ಬಾಟ್: ಯಾತ್ರಿಕರು ತಮ್ಮ ಮೊಬೈಲ್ ಮೂಲಕ ಚಾಟ್‌ಬಾಟ್‌ಗೆ ‘Hai’ ಎಂದು ಸಂದೇಶ ಕಳುಹಿಸುವ ಮೂಲಕ ಯಾತ್ರೆಗೆ ಸಂಬಂಧಿಸಿದ ಯಾವುದೇ ಸಂದೇಹಗಳಿಗೆ ಸರಳವಾಗಿ ಮತ್ತು ಕ್ಷಿಪ್ರವಾಗಿ ಉತ್ತರಗಳನ್ನು ಪಡೆದುಕೊಳ್ಳಬಹುದು.
ಮಂಡಲ-ಮಕರಜ್ಯೋತಿ ತೀರ್ಥಯಾತ್ರೆ ಅವಧಿಯಲ್ಲಿ ದೇಶದ ವಿವಿಧೆಡೆಯಿಂದ ಬರುವ ಕೋಟ್ಯಂತರ ಭಕ್ತರಿಗೆ ಯಾವುದೇ ಗೊಂದಲವಿಲ್ಲದೆ, ಸುರಕ್ಷಿತ ಹಾಗೂ ಸುಗಮ ದರ್ಶನ ಭಾಗ್ಯ ಕಲ್ಪಿಸುವಲ್ಲಿ ಈ ಡಿಜಿಟಲ್ ಹೆಜ್ಜೆ ಅತ್ಯಂತ ಸಹಕಾರಿಯಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಅಂತರ ರಾಜ್ಯ
Supreme Court-ಪೊಲೀಸ್ ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಆರೋಪಿಯನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ ಸಮಯದಿಂದಲ್ಲ, ಬದಲಾಗಿ ಮೊದಲ ಬಾರಿಗೆ ಪೊಲೀಸ್ ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಂಧನದ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸಲು ಪೊಲೀಸರಿಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ನವದೆಹಲಿ: ಆರೋಪಿಯನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ ಸಮಯದಿಂದಲ್ಲ, ಬದಲಾಗಿ ಮೊದಲ ಬಾರಿಗೆ ಪೊಲೀಸ್ ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬಂಧನದ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ದುರ್ಬಲಗೊಳಿಸಲು ಪೊಲೀಸರಿಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಸಂವಿಧಾನದ 22(2)ನೇ ವಿಧಿಯನ್ನು ವ್ಯಾಖ್ಯಾನಿಸುವ ಸಂದರ್ಭದಲ್ಲಿ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಂಧನಕ್ಕೂ ಮುನ್ನದ ಪೊಲೀಸ್ ವಶವೂ ಲೆಕ್ಕಕ್ಕೆ!
ಯಾವುದೇ ವ್ಯಕ್ತಿಯನ್ನು ಪೊಲೀಸರು ಮೊದಲು ವಶಕ್ಕೆ ಪಡೆದು, ನಂತರ ಅಧಿಕೃತವಾಗಿ ಬಂಧನ ದಾಖಲಿಸುವ ಮೂಲಕ 24 ಗಂಟೆಗಳ ಗಡುವನ್ನು ಮುಂದೂಡಲು ಸಾಧ್ಯವಿಲ್ಲ. ‘ಬಂಧನ’ ಮತ್ತು ‘ವಶಕ್ಕೆ ಪಡೆಯುವುದು’ ಎಂಬುದರ ನಡುವೆ ಕೃತಕ ವ್ಯತ್ಯಾಸ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಅಧಿಕೃತವಾಗಿ ಬಂಧನ ದಾಖಲಿಸಿದ ಸಮಯದಿಂದ ಮಾತ್ರ 24 ಗಂಟೆಗಳ ಅವಧಿ ಆರಂಭವಾಗುತ್ತದೆ ಎಂಬ ವಾದವು ಸಂವಿಧಾನದ 22(2)ನೇ ವಿಧಿ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 56ರ ಆಶಯಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದ ಬಳಿಕ ವಿಚಾರಣೆ, ತನಿಖೆ, ಶೋಧ ಕಾರ್ಯ ಅಥವಾ ವಸ್ತುಗಳ ವಶಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕಳೆಯುವ ಸಮಯವನ್ನೂ 24 ಗಂಟೆಗಳ ಲೆಕ್ಕಾಚಾರದಲ್ಲಿ ಪರಿಗಣಿಸಬೇಕು. ಬಂಧನದ ಸ್ಥಳದಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕರೆದೊಯ್ಯಲು ಅಗತ್ಯವಿರುವ ಸಮಂಜಸವಾದ ಪ್ರಯಾಣದ ಸಮಯವನ್ನು ಮಾತ್ರ ಈ ಅವಧಿಯಿಂದ ಹೊರತುಪಡಿಸಬಹುದು ಎಂದು ಸ್ಪಷ್ಟಪಡಿಸಿದೆ.
24 ಗಂಟೆ ಮೀರಿದರೆ ಬಿಡುಗಡೆಗೆ ಸೂಚನೆ
ಸಂವಿಧಾನದ ಪ್ರಕಾರ, ಪೊಲೀಸ್ ವಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಪ್ರಯಾಣದ ಸಮಯ ಹೊರತುಪಡಿಸಿ 24 ಗಂಟೆಗಳ ಒಳಗೆ ಸಮೀಪದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
ನಿಗದಿತ ಅವಧಿ ಮೀರಿದರೂ ನ್ಯಾಯಾಲಯದ ಮುಂದೆ ಹಾಜರುಪಡಿಸದಿದ್ದರೆ ಅಂತಹ ವ್ಯಕ್ತಿಯನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಲ್ಲದೆ, 24 ಗಂಟೆಗಳ ಮಿತಿಯೊಳಗಿದ್ದರೂ ವ್ಯಕ್ತಿಯನ್ನು ಅನಗತ್ಯವಾಗಿ ಹೆಚ್ಚು ಸಮಯ ಪೊಲೀಸ್ ವಶದಲ್ಲಿಡಬಾರದು. ಬಂಧನದ ಅವಧಿ ಸಮಂಜಸವಾಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಮ್ಯಾಜಿಸ್ಟ್ರೇಟ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ
ಬಂಧಿತ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಮ್ಯಾಜಿಸ್ಟ್ರೇಟ್‌ಗಳು ಬಂಧನದ ನಿಜವಾದ ದಿನಾಂಕ ಮತ್ತು ಸಮಯವನ್ನು ಕಡ್ಡಾಯವಾಗಿ ದಾಖಲಿಸಬೇಕು. ಅಲ್ಲದೆ, ಸಂವಿಧಾನದ ನಿಯಮಗಳನ್ನು ಪೊಲೀಸರು ಪಾಲಿಸಿದ್ದಾರೆಯೇ ಎಂಬುದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ವ್ಯಕ್ತಿಯನ್ನು ಎಷ್ಟು ಸಮಯ ಪೊಲೀಸ್ ವಶದಲ್ಲಿಡಲಾಗಿತ್ತು ಮತ್ತು ಆ ಅವಧಿ ಪ್ರಕರಣದ ಸಂದರ್ಭಕ್ಕೆ ಅನುಗುಣವಾಗಿ ಸಮಂಜಸವಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ಬಂಧನದ ಅವಧಿ ಅನಗತ್ಯವಾಗಿ ಹೆಚ್ಚಾಗಿದೆ ಎಂದು ಕಂಡುಬಂದರೆ ಪೊಲೀಸ್ ಕಸ್ಟಡಿ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ನಿರಾಕರಿಸುವ ಅಧಿಕಾರ ಮ್ಯಾಜಿಸ್ಟ್ರೇಟ್‌ಗಳಿಗೆ ಇದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಹೈಕೋರ್ಟ್‌ಗಳ ಭಿನ್ನ ಅಭಿಪ್ರಾಯಕ್ಕೆ ತೆರೆ
ಈ ಹಿಂದೆ ಒಡಿಶಾ ಹೈಕೋರ್ಟ್‌ನ ಆರ್ಯಮನ್ ಪಟ್ನಾಯಕ್ ಪ್ರಕರಣ, ಮದ್ರಾಸ್ ಹೈಕೋರ್ಟ್‌ನ ಕಣ್ಣನ್ ಪ್ರಕರಣ ಹಾಗೂ ಕೇರಳ ಹೈಕೋರ್ಟ್‌ನ ಅರುಣ್ ಕೆ. ಥಾಮಸ್ ಪ್ರಕರಣಗಳಲ್ಲಿ ವ್ಯಕ್ತಪಡಿಸಲಾಗಿದ್ದ ಭಿನ್ನ ಅಭಿಪ್ರಾಯಗಳನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ.
ಅಧಿಕೃತ ಬಂಧನ ದಾಖಲಿಸುವುದಕ್ಕೂ ಮುನ್ನ ವ್ಯಕ್ತಿಯನ್ನು ಪೊಲೀಸ್ ವಶದಲ್ಲಿಟ್ಟಿದ್ದ ಅವಧಿಯನ್ನು 24 ಗಂಟೆಗಳ ಲೆಕ್ಕಾಚಾರದಿಂದ ಹೊರಗಿಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಈ ತೀರ್ಪು ಬಂಧಿತರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ, ಪೊಲೀಸ್ ಬಂಧನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಅಧಿಕಾರಿಗಳ ಹೊಣೆಗಾರಿಕೆ ದೃಷ್ಟಿಯಿಂದ ಮಹತ್ವದ್ದಾಗಿದೆ.
















