ಸ್ಥಳೀಯ
MP Chauta-ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ; ತುರ್ತು ಸ್ಪಂದಿಸಲು ಕೇಂದ್ರ ಸರ್ಕಾರಕ್ಕೆ ಸಂಸದ ಕ್ಯಾ.ಚೌಟ ಮನವಿ
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ ‘ಹಳದಿ ಎಲೆ ರೋಗ’ ಮತ್ತು ‘ಎಲೆ ಚುಕ್ಕಿ ರೋಗ’ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ ‘ಹಳದಿ ಎಲೆ ರೋಗ’ ಮತ್ತು ‘ಎಲೆ ಚುಕ್ಕಿ ರೋಗ’ ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ರೋಗಗಳ ವ್ಯಾಪಕ ಹರಡುವಿಕೆಯಿಂದಾಗಿ ರೈತರು ಎದುರಿಸುತ್ತಿರುವ ಗಂಭೀರ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳನ್ನು ಕ್ಯಾ. ಬ್ರಿಜೇಶ್ ಚೌಟ ಅವರು ವಿವರವಾಗಿ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಳದಿ ಎಲೆ ರೋಗವು ಪ್ರಸ್ತುತ ಸುಮಾರು 16,000 ಹೆಕ್ಟೇರ್ ಪ್ರದೇಶವನ್ನು ಬಾಧಿಸಿದ್ದು, ಇದು ಲಕ್ಷಾಂತರ ರೈತರ ಆರ್ಥಿಕ ಪರಿಸ್ಥಿತಿಯನ್ನು ಹದಗೆಡುವಂತೆ ಮಾಡಿದೆ. ರೋಗಕ್ಕೆ ಕಾರಣವಾಗಿರುವ ‘ಫೈಟೋಪ್ಲಾಸ್ಮಾ’ ಸೋಂಕು ನಿರ್ಮೂಲನೆಗೆ ಕ್ರಮಗಳಿಲ್ಲ. ಐಸಿಎಆರ್–ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್(CPCRI) ಸಂಸ್ಥೆಯು ಅಭಿವೃದ್ಧಿಪಡಿಸಿರುವ ನಿರ್ವಹಣಾ ವಿಧಾನಗಳೇ ಬಾಧಿತ ಬೆಳೆಗಾರರ ಪಾಲಿನ ಏಕೈಕ ಆಶಾಕಿರಣವಾಗಿದೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಸಿಪಿಸಿಆರ್‌ಐ ಸಂಸ್ಥೆಯು ಗಮನಾರ್ಹ ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ಇದಕ್ಕೆ ಪೂರಕವಾಗಿ ವಿಟ್ಲದಲ್ಲಿ ಅತ್ಯಾಧುನಿಕ ರೋಗನಿರ್ಣಯ ಪ್ರಯೋಗಾಲಯ ಸ್ಥಾಪಿಸಲಾಗಿದೆ. ಹಳದಿ ಎಲೆ ರೋಗವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಗಿಡಗಳ ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಯಶಸ್ವಿ ಮರುಸೃಷ್ಟಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಹಳದಿ ರೋಗ ನಿಯಂತ್ರಣಕ್ಕೆ ಸುಧಾರಿತ ತಂತ್ರಜ್ಞಾನಗಳು, ಹೈಟೆಕ್ ನೀರಾವರಿ ವ್ಯವಸ್ಥೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ರೈತರು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಭಾರಿ ಸಾಂಸ್ಥಿಕ ಹಾಗೂ ಆರ್ಥಿಕ ನೆರವಿನ ಅಗತ್ಯವಿದೆ. ಆದ್ದರಿಂದ ಬಾಧಿತ ರೈತರಿಗೆ ನೆರವಾಗಲು ಸಮಗ್ರ ಬೆಂಬಲ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಇದರ ಜೊತೆಗೆ ದಕ್ಷಿಣ ಕನ್ನಡ ಹಾಗೂ ಒಟ್ಟಾರೆ ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ‘ಎಲೆ ಚುಕ್ಕಿ ರೋಗ’ ನಿಯಂತ್ರಣದ ಕುರಿತಂತೆ ಸಂಸದರು ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ. 2023ರಲ್ಲಿ ಸಂದರ್ಭ ಕೇಂದ್ರ ಸರ್ಕಾರವು ಐಸಿಎಆರ್-ಸಿಪಿಸಿಆರ್‌ಐ ತಜ್ಞರ ಸಮಿತಿಯ ವರದಿ ಆಧಾರಿಸಿ ವೈಜ್ಞಾನಿಕ ನಿರ್ವಹಣಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿತ್ತು. ಇದೇ ವೇಳೆ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಸಹಾಯಕ ಸಚಿವೆಯಾಗಿದ್ದ ಸಂದರ್ಭದಲ್ಲಿ 60:40ರ ಅನುಪಾತದ ಧನಸಹಾಯದ ಸೂತ್ರದಡಿ ₹225 ಕೋಟಿ ಅನುದಾನವನ್ನೂ ಮಂಜೂರು ಮಾಡಿತ್ತು. ಆದರೆ, ಈ ಅನುದಾನವನ್ನು ‘ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್’ (MIDH) ಮಾರ್ಗಸೂಚಿಗಳಿಗೆ ಲಿಂಕ್ ಮಾಡಲಾಗಿತ್ತು. ಇದರ ನಿಯಮಾವಳಿಗಳ ಪ್ರಕಾರ ಸಸ್ಯ ಸಂರಕ್ಷಣೆಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹1,500 ಮಾತ್ರ ವೆಚ್ಚ ಮಾಡಲು ಅವಕಾಶವಿತ್ತು. ಆದರೆ, ಸಿಪಿಸಿಆರ್‌ಐ ಲೆಕ್ಕಾಚಾರದ ಪ್ರಕಾರ, ವಿಶೇಷ ಶಿಲೀಂಧ್ರನಾಶಕಗಳು ಮತ್ತು ಪೋಷಕಾಂಶಗಳ ನಿರ್ವಹಣೆಯನ್ನೊಳಗೊಂಡ ಸಮಗ್ರ ನಿಯಂತ್ರಣದ ನೈಜ ವೆಚ್ಚವು ಈ ಮಿತಿಗಿಂತ ತೀರಾ ಹೆಚ್ಚಾಗಿತ್ತು. ಈ ತಾಂತ್ರಿಕ ಅಡಚಣೆಯಿಂದಾಗಿ ನಿಗದಿತ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ 2023ರ ಅನುದಾನವು ಸರ್ಕಾರಕ್ಕೆ ವಾಪಾಸ್ಸಾಗಿತ್ತು. ಹೀಗಿರುವಾಗ ಇದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.
ಈ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ, ಎಲೆ ಚುಕ್ಕಿ ರೋಗಕ್ಕೆ ಮಾತ್ರ ಅನ್ವಯವಾಗುವಂತೆ ಸಾಮಾನ್ಯ ಎಂಐಡಿಹೆಚ್ ವೆಚ್ಚದ ಮಿತಿಯಿಂದ ವಿಶೇಷ ವಿನಾಯಿತಿ ನೀಡಿ ಈ ಹಿಂದೆ ಬಿಡುಗಡೆಗೊಂಡಿದ್ದ, ಅನುದಾನವನ್ನು ಮರುಬಿಡುಗಡೆ ಮಾಡಲು ತಾವು ತುರ್ತಾಗಿ ಮಧ್ಯಪ್ರವೇಶಿಸಬೇಕು. ಸಿಪಿಸಿಆರ್‌ಐ ಶಿಫಾರಸು ಮಾಡಿದ ನಿಜವಾದ ವೆಚ್ಚಕ್ಕೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ಒದಗಿಸುವುದು ರೋಗ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಅಡಿಕೆ ವಲಯದ ಉಳಿವಿಗೆ ಅತ್ಯಂತ ಅತ್ಯಗತ್ಯವಾಗಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಅವರು ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಕೃಷಿ ಸಚಿವರಿಗೆ ಆಹ್ವಾನ
ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಅಡಿಕೆ ಕೃಷಿಯ ಪ್ರಾಮುಖ್ಯತೆಯನ್ನು ಮನಗಂಡು, ರೈತ ಸಮುದಾಯದಲ್ಲಿ ಮೂಡಿರುವ ತೀವ್ರ ಆತಂಕವನ್ನು ಪರಿಗಣಿಸಿ, ಇಲ್ಲಿರುವ ವಾಸ್ತವಿಕ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಆದಷ್ಟು ಬೇಗ ಮಂಗಳೂರಿಗೆ ಭೇಟಿ ನೀಡುವಂತೆ ಸಂಸದರು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೇಂದ್ರ ಕೃಷಿ ಸಚಿವಾಲಯ, ಐಸಿಎಆರ್, ಸಿಪಿಸಿಆರ್‌ಐ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಮನ್ವಯದೊಂದಿಗೆ ಜಂಟಿ ಕ್ರಮ ಕೈಗೊಂಡು, ವಿಜ್ಞಾನಿಗಳು ಮತ್ತು ತೊಂದರೆಗೊಳಗಾದ ರೈತರೊಂದಿಗೆ ಸಂವಾದ ನಡೆಸುವುದರಿಂದ ಈ ಸಮಸ್ಯೆಯ ಕುರಿತು ವಾಸ್ತವಿಕ ನಿಖರ ಮಾಹಿತಿ ಲಭ್ಯವಾಗಲಿವೆ; ಇದು ರೋಗ ನಿಯಂತ್ರಣ ಕಾರ್ಯ ಬಲಪಡಿಸಿ ರೈತರ ಹಿತರಕ್ಷಿಸಲು ಮತ್ತು ಅಡಿಕೆ ವಲಯವನ್ನು ರಕ್ಷಿಸಲು ಪ್ರಬಲ ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ಮೂಲಕ ಭಾರತದ ಅಡಿಕೆ ವಲಯದ ಸುಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ಕ್ಯಾ. ಚೌಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುತ್ತೂರು
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು

ಪುತ್ತೂರು: ಕೆದಿಲ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಅ.3ರಂದು ನಡೆದಿದೆ.
ಮೃತರನ್ನು ಕೆಮ್ಮಾಯಿ ನಿವಾಸಿ ದಿ. ಗುಡ್ಡಪ್ಪ ಗೌಡರವರ ಪುತ್ರ ರವಿ ಗೌಡ ಎಂದು ಗುರುತಿಸಲಾಗಿದೆ. ಇವರು ಮೆಸ್ಕಾಂ ಬಂಟ್ವಾಳ ತಾಲೂಕಿನ ಮಾಣಿ ಸೆಕ್ಷನ್ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ಎಚ್‌ಟಿ (ಹೈಟೆನ್ಶನ್) ವಿದ್ಯುತ್ ಲೈನ್‌ನ ಜಿಒಎಸ್ (ಗ್ಯಾಂಗ್ ಆಪರೇಟಿಂಗ್ ಸ್ವಿಚ್) ತೆರೆಯುವ ಸಂದರ್ಭದಲ್ಲಿ ಅರ್ಥ್ ಆಗಿ ವಿದ್ಯುತ್ ಪ್ರವಹಿಸಿ ರವಿ ಗೌಡ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಕೆದಿಲ ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗೌಡ ಅವರು, ತಮ್ಮ ಸೇವಾ ಮನೋಭಾವದಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಅಪರಾಧ
Mangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಮಂಗಳೂರು: ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.
ಕಳ್ಳರು ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನ ನಡೆದಿತ್ತು. ಮನೆಯ ಲಾಕರ್‌ನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳು ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ತಕ್ಷಣ ಗುಜರಾತ್‌ನ ವಡೋದರಾ ಪೊಲೀಸರ ಸಹಾಯ ಪಡೆದುಕೊಂಡ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿದ್ದ 24 ಗಂಟೆಗಳೊಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಕೂಡ ಬಾಕಿ ಇದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಬಿಗ್ ನ್ಯೂಸ್
Nagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರು: ಧರ್ಮಸ್ಥಳದಲ್ಲಿ ವರದಿಯಾಗಿರುವ ಅಸಹಜ ಸಾವುಗಳ ಕುರಿತು ನಡೆಯುತ್ತಿರುವ ತನಿಖೆಯಲ್ಲಿ ಹಲವು ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಲು ಪ್ರಸ್ತುತ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಸಂಪೂರ್ಣ ಅಧಿಕಾರ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಸಂವಾದವೊಂದರಲ್ಲಿ ಮಾತನಾಡಿದ ಚೌದರಿ , ಎಸ್‌ಐಟಿ ತನಿಖಾ ವರದಿಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳ ಸಂಖ್ಯೆ ಹಾಗೂ ಗ್ರಾಮ ಪಂಚಾಯತ್‌ನಲ್ಲಿ ದಾಖಲಾಗಿರುವ ಸಾವುಗಳ ವಿವರಗಳಲ್ಲಿ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಅಳವಾಗಿ ತನಿಖೆ ನಡೆಸಲು ಸರ್ಕಾರ ಅವಕಾಶ ನೀಡಬೇಕು ಎಂದು ಎಸ್‌ಐಟಿ ತಿಳಿಸಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಬಂಗ್ಲೆ ಗುಡ್ಡೆಯಲ್ಲಿ ಹಲವಾರು ಅಸ್ತಿಪಂಜರಗಳು ಪತ್ತೆಯಾಗಿರುವ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಬಂಗ್ಲೆ ಗುಡ್ಡೆ ಸ್ಮಶಾನವಲ್ಲದಿದ್ದರೂ ಅಲ್ಲಿ ಇಷ್ಟೊಂದು ಎಲುಬುಗಳು ಮತ್ತು ಅಸ್ತಿಪಂಜರಗಳು ಪತ್ತೆಯಾಗಿರುವುದು ಹೇಗೆ ಎಂಬುದರ ಕುರಿತು ಉನ್ನತ ತನಿಖೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪತ್ತೆಯಾದ ಕೆಲವು ಅಸ್ತಿಪಂಜರಗಳ ಪರೀಕ್ಷೆಯಲ್ಲಿ ಅವು ಪುರುಷರದ್ದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಒಂದು ಹುಡುಗಿಯ ಅಸ್ತಿಪಂಜರವನ್ನು ಆಸಿಡ್‌ನಿಂದ ಸುಟ್ಟಿರುವ ಸ್ಥಿತಿಯಲ್ಲಿ ಹೂತುಹಾಕಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಆದರೆ, ಆ ವ್ಯಕ್ತಿ ಆಸಿಡ್‌ನಿಂದ ಮೃತಪಟ್ಟಿಲ್ಲ ಎಂಬುದು ಡಿಎನ್‌ಎ ವರದಿಯಲ್ಲಿ ತಿಳಿದುಬಂದಿದೆ ಎಂದು ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.
ಈ ರೀತಿಯಾಗಿ ವಿವಿಧ ವರದಿಗಳ ನಡುವೆ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿಗೆ ಪೂರಕ ತನಿಖೆ ನಡೆಸಲು ಸಂಪೂರ್ಣ ಅಧಿಕಾರ ನೀಡಬೇಕು ಎಂದು ಸರ್ಕಾರಕ್ಕೆ ಪತ್ರದ ಮೂಲಕ ಶಿಫಾರಸು ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ರಚನೆಯಾಗಿರುವ ಎಸ್‌ಐಟಿ ವ್ಯಾಪ್ತಿಗೆ ಈ ಹೊಸ ಮಾಹಿತಿಗಳು ಸ್ವಯಂಚಾಲಿತವಾಗಿ ಸೇರುತ್ತವೆಯೇ ಎಂಬ ಬಗ್ಗೆ ಕಾನೂನುಬದ್ಧ ಸ್ಪಷ್ಟತೆ ಅಗತ್ಯವಿದೆ. ಆದ್ದರಿಂದ ಸರ್ಕಾರ ಸ್ಪಷ್ಟ ಆದೇಶ ಹೊರಡಿಸಿ, ಈ ಎಲ್ಲ ವಿಷಯಗಳನ್ನು ಈಗಾಗಲೇ ರಚಿಸಿರುವ ಎಸ್‌ಐಟಿಗೆ ವಹಿಸಬೇಕು. ಅಗತ್ಯವಿದ್ದರೆ ಅದರ ‘ಟರ್ಮ್ಸ್ ಆಫ್ ರೆಫರೆನ್ಸ್’ (ತನಿಖೆಯ ವ್ಯಾಪ್ತಿ) ವಿಸ್ತರಿಸಬೇಕು ಎಂದು ಮಹಿಳಾ ಆಯೋಗ ಶಿಫಾರಸು ಮಾಡಿದೆ.
ಸರ್ಕಾರದ ಪ್ರತಿಕ್ರಿಯೆಗಾಗಿ ಇನ್ನೂ 15 ದಿನ ಕಾಯಲಾಗುವುದು. ಬಳಿಕ ಎರಡು ಬಾರಿ ಸರ್ಕಾರಕ್ಕೆ ನೆನಪಿನ ಪತ್ರ ಕಳುಹಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ತಿಳಿಸಿದ್ದಾರೆ.


















