ರಾಜಕೀಯ
CM Siddaramaiah-70 ವರ್ಷಗಳ ನಂತರ ರಾಜ್ಯ ಪೊಲೀಸರ ಕ್ಯಾಪ್ ಬದಲಾವಣೆ; ಮಂಗಳೂರನ್ನು ಕಂಟ್ರೋಲ್ ತಂದದ್ದು ನಮ್ಮದೇ ಅಧಿಕಾರಿ, ಸಿಬ್ಬಂದಿಗಳು – ಅವರೇನೂ ಬೇರೆ ಗೃಹದಿಂದ ಬಂದವರಲ್ಲ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಬೆಂಗಳೂರು ಅ 28: ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕಾರ್ಯಯೋಜನೆ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ದ ನಿಲುವು ತಳೆಯಬೇಕು ಎಂದರು.
ಮಂಗಳೂರು ಹತೋಟಿಗೆ ಬಂದಿದ್ದು ನಮ್ಮ ಅಧಿಕಾರಿಗಳಿಂದಲೇ: ಸಿಎಂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ ನಮ್ಮದೇ ಅಧಿಕಾರಿಗಳು ಮತ್ತು ಸಿಬ್ಬಂದಿ. ಇವರೇನು ಬೇರೆ ಗ್ರಹದಿಂದ ಬಂದವರಲ್ಲ. ನಿಮ್ಮವರೇ, ನಮ್ಮವರೇ ಆಗಿದ್ದಾರೆ. ಆದ್ದರಿಂದ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ಸಾಧಿಸಿ ತೋರಿಸಿ ಎಂದು ಕರೆ ನೀಡಿದರು.
ಇದೇ ರೀತಿ ಇಡೀ ರಾಜ್ಯದಲ್ಲಿ ಮಾದಕ ವಸ್ತು ಹಾವಳಿ ತಪ್ಪಿಸಲು ನಿಮ್ಮಿಂದ ಸಾಧ್ಯವಿದೆ. ನೀವು ಸಾಧ್ಯ ಮಾಡಿದರೆ ಕರ್ನಾಟಕ ಪೊಲೀಸ್ ಘನತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ ಎಂದರು.
ಕೆಲವು ಪೊಲೀಸರು ರಿಯಲ್ ಎಸ್ಟೇಟ್ ಮಾಡುವವರ ಜೊತೆ, ಡ್ರಗ್ ಜಾಲದ ಜೊತೆ ಶಾಮೀಲಾಗಿರ್ತಾರೆ. ರೌಡಿಗಳನ್ನು ಮೊಳಕೆಯಲ್ಲೆ ಚಿವುಟಿ ಹಾಕುವುದು ನಿಮ್ಮಿಂದ ಸಾಧ್ಯವಿದೆ. ಪೊಲೀಸರ ಬಗ್ಗೆ ಅಪರಾಧ ಜಗತ್ತಿಗೆ ಭಯ ಕಡಿಮೆಯಾಗಿದೆ. ಯಾಕೆ ಹೀಗಾಯ್ತು ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡರೆ ಉತ್ತರ ನಿಮಗೇ ಗೊತ್ತಿರುತ್ತದೆ ಎಂದು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಆತ್ಮಸಾಕ್ಷಿಯನ್ನು ಕೆದಕಿದರು.
ಡ್ರಗ್ ಮಾರುವವರು, ತರುವವರು, ಎಲ್ಲಿಂದ ಡ್ರಗ್ಸ್ ಬರುತ್ತದೆ, ಈ ಜಾಲದ ಏಜೆಂಟರು ಯಾರ್ಯಾರು ಎನ್ನುವುದೂ ನಿಮಗೇ ಗೊತ್ತಿರುತ್ತದೆ. ಆದಷ್ಟು ಬೇಗ ರಾಜ್ಯ, “ಡ್ರಗ್ ಮುಕ್ತ ಕರ್ನಾಟಕ” ಆಗಲಿ, ಮಾಡಿ ತೋರಿಸಿ ಎಂದು ಕರೆ ನೀಡಿದರು.
ಇಂದು ನಾನೇ ಬಿಡುಗಡೆ ಮಾಡಿದ ಪೀಕ್ ಕ್ಯಾಪ್ ಮಾದರಿಯನ್ನೂ ಆಯ್ಕೆ ಮಾಡಿದ್ದು ನಾನೇ. 1956 ರಿಂದ ಸುಮಾರು 70 ವರ್ಷಗಳಿಂದ ಇದ್ದ ಒಂದೇ ಮಾದರಿಯ ಕ್ಯಾಪ್ ಅನ್ನು ಇಂದು ಬದಲಾಯಿಸಿದ್ದೇವೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿ ಕ್ಯಾಪ್ ಒದಗಿಸಲಾಗಿದ್ದು ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿ ಎಂದು ಕರೆ ನೀಡಿದರು.
ಕೇವಲ ಕ್ಯಾಪ್ ಬದಲಾಗುವುದಲ್ಲ. ನಿಮ್ಮ ಕಾರ್ಯಕ್ಷಮತೆಯೂ ಬದಲಾಗಲಿ ಎಂದು ಕರೆ ನೀಡಿದರು.
ಪೊಲೀಸ್ ಇಲಾಖೆಯ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತದೆ. ಇಂಡಿಯಾ ಜಸ್ಟೀಸ್ ವರದಿಯಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ವರದಿ ರಾಜ್ಯದ ಘನತೆ ಹೆಚ್ಚಿಸಿದೆ ಎಂದು ಸಿ.ಎಂ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಥಳೀಯ
Mysuru-ಮೈಸೂರು ಕಂಬಳಕ್ಕೆ ಆಗಮಿಸಲಿರುವ ಕೋಣಗಳಿಗೆ ಕುಶಾಲನಗರದಲ್ಲಿ ವಿಶ್ರಾಂತಿಗೆ ವ್ಯವಸ್ಥೆ – ಶಾಸಕರಾದ ಅಶೋಕ್ ರೈ ಮಂಥರ್ ಗೌಡ ನೇತೃತ್ವದಲ್ಲಿ ಸಭೆ
ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.
ಕುಶಾಲನಗರ: ಮೈಸೂರಿನಲ್ಲಿ ನಡೆಯಲಿರುವ ಕಂಬಳಕ್ಕೆ ಆಗಮಿಸುವ ಕೋಣಗಳಿಗೆ ಕುಶಾಲನಗರದಲ್ಲಿ ಸೂಕ್ತ ವಿಶ್ರಾಂತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿಟ್ಟಿನಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯು ಮೈಸೂರು ಕಂಬಳದ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಡಿಕೇರಿ ಶಾಸಕ ಮಂಥರ್ ಗೌಡ ಅವರ ನೇತೃತ್ವದಲ್ಲಿ ನಡೆಯಿತು.
ಕಂಬಳ ಕೋಣಗಳಿಗೆ ಪ್ರಯಾಣದ ಬಳಿಕ ವಿಶ್ರಾಂತಿ, ಆರೈಕೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯ ಕಂಬಳ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹಾಗೂ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.
ರಾಜಕೀಯ
U.T. Khader-₹86ರ ಔಷಧಕ್ಕೆ ₹4,528; ಆಸ್ಪತ್ರೆಗಳಲ್ಲಿ ದುಬಾರಿ ದರಕ್ಕೆ ಔಷಧಗಳ ಮಾರಾಟ – ಆಸ್ಪತ್ರೆಗಳಲ್ಲಿ ಲ್ಯಾಂಡಿಂಗ್ ಮತ್ತು ಮಾರಾಟ ದರ ಪಟ್ಟಿ ಪ್ರಕಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು : ಯು.ಟಿ ಖಾದರ್
ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೆಂಗಳೂರು: ಆಸ್ಪತ್ರೆಗಳಲ್ಲಿ ಮಾರಾಟವಾಗುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ರಿಟಿಕಲ್ ಔಷಧಗಳ ಲ್ಯಾಂಡಿಂಗ್ ದರ ಮತ್ತು ಮಾರಾಟ ದರದ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಬರೊಬ್ಬರಿ ಶೇ.5000 ರಷ್ಟು ದುಬಾರಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಕಿ-ಅಂಶಗಳನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಬಿಚ್ಚಿಟ್ಟಿದ್ದಾರೆ
ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳು ವಿವಿಧ ಆಸ್ಪತ್ರೆಗಳಲ್ಲಿ ನಡೆಸಿದ ಪರಿಶೀಲನೆ ವೇಳೆ ಔಷಧಗಳನ್ನು ಲ್ಯಾಂಡಿಂಗ್ ದರಕ್ಕಿಂತ ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ಆಸ್ಪತ್ರೆ, ಫಾರ್ಮಾಸಿಗಳು ಔಷಧಗಳ ಲ್ಯಾಂಡಿಂಗ್ ದರ ಹಾಗೂ ಮಾರಾಟ ದರವನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಬಹಿರಂಗ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು. ದರ ನಿಯಂತ್ರಿಸಲು ರಾಜ್ಯಕ್ಕೆ ಅಧಿಕಾರ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಅಜಗಜಾಂತರ ವ್ಯತ್ಯಾಸ (ರೂಗಳಲ್ಲಿ)
ಔಷಧ- ಲ್ಯಾಂಡಿಂಗ್ ದರ – ಎಂಆರ್‌ಪಿ
ಗುಫೋಲ್-86- 4,528
ಗುಫಿಸೈಕ್ಲೈನ್-50 ಇಂಜೆಕ್ಷನ್ – 160-7,110
ಟೆರ್ಲಿಟಿಸ್-118-4,416
ಟ್ಯಾಕ್ಸೋಕೇರ್-120 ಎಂಜಿ-1,000-21,617
ಕ್ಯಾನ್‌ಮ್ಯಾಬ್ 440 ಎಂಜಿ-6,600-57,457
ಬೆವಾಟಸ್ 400 ಎಂಜಿ-5,850-62,690
ಸೈಟ್ಯಾಕ್ಸ್ 100 (ಕ್ಯಾನ್ಸರ್ ಔಷಧ)-342-3,836
ನೆಬ್ಯುಲೈಸರ್ ಮಾಸ್ಕ್-44.50-950
ಐವಿಸೆಟ್-14.75-295
ಪಾಲಿಸೇಫಿಟಿ ಪಿಆರ್‌ಒ ಕ್ಯಾನುಲಾ-33.21-548
ಅಂತರ ರಾಜ್ಯ
Shivraj Singh Chauhan-ಕರ್ನಾಟಕ ಸೇರಿ 5 ರಾಜ್ಯಗಳು ಬರಪೀಡಿತವೆಂದು ಘೋಷಣೆ : ಅ.3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ – ಶಿವರಾಜ್ ಸಿಂಗ್ ಚೌಹಾಣ್
ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.
ಹೊಸದಿಲ್ಲಿ: ಕೇಂದ್ರ ಸರಕಾರವು ಈವರೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ಬರಪೀಡಿತವೆಂದು ಘೋಷಣೆ ಮಾಡಿದೆ ಹಾಗೂ ದೇಶದ ವಿವಿಧೆಡೆ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ 6.11 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿಭೂಮಿ ಹಾನಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ನಡೆದ ‘ರಬಿ (ಹಿಂಗಾರು ಬೆಳೆ) 2026-27’ ರಾಷ್ಟ್ರೀಯ ಕೃಷಿ ಸಮ್ಮೇಳನದ ವೇಳೆ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಕೆಲವು ಭಾಗಗಳು ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡವು ಅಕ್ಟೋಬರ್ 3ರಂದು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಚೌಹಾಣ್ ತಿಳಿಸಿದರು.
ದೇಶದ ಇತರ ಭಾಗಗಳಲ್ಲಿನ ಬರ ಪರಿಸ್ಥಿತಿಯನ್ನೂ ಶೀಘ್ರದಲ್ಲೇ ಪರಿಶೀಲಿಸಲಾಗುವುದು. ಬರಪೀಡಿತ ಪ್ರದೇಶಗಳಿಗೆ ತಾವು ವೈಯಕ್ತಿಕವಾಗಿ ಭೇಟಿ ನೀಡುವುದರ ಜೊತೆಗೆ, ಆಯಾ ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಚಿವರು ಹೇಳಿದರು.
ರೈತರಿಗೆ ನೆರವಿನ ಭರವಸೆ
ಬರ ಪರಿಸ್ಥಿತಿಯ ನಡುವೆಯೂ ಕೃಷಿ ಚಟುವಟಿಕೆ ಮುಂದುವರಿಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ ಎಂದು ಚೌಹಾಣ್ ಭರವಸೆ ನೀಡಿದರು. ಕೃಷಿಭೂಮಿ ಪಾಳು ಬೀಳದಂತೆ ನೋಡಿಕೊಳ್ಳುವುದು ಸರ್ಕಾರದ ತಕ್ಷಣದ ಉದ್ದೇಶವಾಗಿದೆ ಎಂದರು.
ನೀರಿನ ಲಭ್ಯತೆ ಹಾಗೂ ಮಣ್ಣಿನ ತೇವಾಂಶಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದ್ದು, ಕಡಿಮೆ ನೀರು ಅಗತ್ಯವಿರುವ ಬೆಳೆಗಳು ಹಾಗೂ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ತಳಿಗಳಿಗೆ ಆದ್ಯತೆ ನೀಡುವಂತೆ ಸಲಹೆ ನೀಡಲಾಗಿದೆ.
ಶೇ.12.3ರಷ್ಟು ಮಳೆ ಕೊರತೆ
ಎಲ್‌ನೀನೊ ಪರಿಣಾಮ ಸೇರಿದಂತೆ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಮುಂಗಾರು ಋತುವಿನ ಅಂತ್ಯದ ವೇಳೆಗೆ ದೇಶದಲ್ಲಿ ಸಾಮಾನ್ಯಕ್ಕಿಂತ ಸುಮಾರು ಶೇ.12.3ರಷ್ಟು ಮಳೆ ಕಡಿಮೆಯಾಗಿದೆ ಎಂದು ಸಚಿವರು ತಿಳಿಸಿದರು.
ಮಳೆ ಕೊರತೆಯ ಪರಿಣಾಮ 2026-27ರ ಖಾರಿಫ್ ಬೆಳೆಗಳ ಒಟ್ಟು ಬಿತ್ತನೆ ಪ್ರದೇಶದಲ್ಲಿ ಸುಮಾರು ಶೇ.1ರಷ್ಟು ಇಳಿಕೆ ಕಂಡುಬಂದಿದೆ. ಭತ್ತದ ಬಿತ್ತನೆ ಪ್ರದೇಶದಲ್ಲಿ 16.32 ಲಕ್ಷ ಹೆಕ್ಟೇರ್‌ಗಳಷ್ಟು ಇಳಿಕೆಯಾಗಿದ್ದು, ಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆಗಳ ವಿಸ್ತೀರ್ಣದಲ್ಲೂ ಕುಸಿತವಾಗಿದೆ.
ಇದಕ್ಕೆ ವಿರುದ್ಧವಾಗಿ ಉದ್ದು, ಬಾಜ್ರಾ, ಜೋಳ, ಎಳ್ಳು, ಸೂರ್ಯಕಾಂತಿ, ಹೆಸರು ಮತ್ತು ತೊಗರಿ ಸೇರಿದಂತೆ ಕೆಲವು ದ್ವಿದಳ ಧಾನ್ಯಗಳು ಹಾಗೂ ಸಿರಿಧಾನ್ಯಗಳ ಬಿತ್ತನೆ ಪ್ರದೇಶದಲ್ಲಿ ಏರಿಕೆ ಕಂಡುಬಂದಿದೆ.
ಕೇಂದ್ರ ಸರ್ಕಾರವು ರಬಿ ಹಂಗಾಮಿಗೆ ಅಗತ್ಯವಿರುವ ರಸಗೊಬ್ಬರ ಮತ್ತು ಬೀಜಗಳ ಲಭ್ಯತೆ ಖಚಿತಪಡಿಸಿಕೊಳ್ಳಲು ಕ್ರಮ ಕೈಗೊಂಡಿದ್ದು, ಬರಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಯೋಜನೆ ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.


















