ರಾಜಕೀಯ
Cabinet meeting-ಅಲ್ಪಸಂಖ್ಯಾತ ಸಮುದಾಯಕ್ಕೆ ವಸತಿ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಅಧಿಸೂಚನೆ – ಸಂಪುಟ ಸಭೆ; ರಾಷ್ಟ್ರ ಮಟ್ಟದಲ್ಲಿ 15% ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ಜಾರಿಗೊಳಿಸಿರುವ ಬಿಜೆಪಿ ಇಂದು ಕರ್ನಾಟಕದಲ್ಲಿ ಕೇಂದ್ರದ ನೀತಿಯನ್ನು ಟೀಕಿಸುತ್ತಿದೆ – ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ರಾಜ್ಯ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್, ಮುಸ್ಲಿಂ, ಜೈನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಚಿವ ಸಂಪುಟವು ಒಂದು ನಿರ್ಣಯವನ್ನು ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ (2019)ರ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ.
ರಾಜ್ಯ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್, ಮುಸ್ಲಿಂ, ಜೈನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಚಿವ ಸಂಪುಟವು ಒಂದು ನಿರ್ಣಯವನ್ನು ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ (2019)ರ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸ್ಥೆಗಳಲ್ಲಿ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತ ಸಮುದಾಯಗಳಿಗೆ 15% ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಸಾಧಿಸಬೇಕೆಂದು ಈ ಕಾರ್ಯಕ್ರಮ ಸ್ಪಷ್ಟವಾಗಿ ನಿರ್ದೇಶಿಸುತ್ತದೆ.
ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ನೀಡಲಾದ ಮಾರ್ಗಸೂಚಿಗಳಾಗಿದ್ದು, ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದೊಂದು ಅಸಂವಿಧಾನಿಕ ಅಥವಾ ತುಷ್ಟೀಕರಣ ನೀತಿಯಾಗಿದ್ದರೆ, ಈ ನಿಯಮವನ್ನು ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಯಾಕೆ ಎಲ್ಲ ರಾಜ್ಯಗಳಿಗೆ ತಿಳಿಸಿದೆ? ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಯಾಕೆ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ?
ನಮ್ಮ ನಿರ್ಣಯವು ವಸತಿ ಹಂಚಿಕೆಯಲ್ಲಿ ಹೆಚ್ಚುವರಿ ಮೀಸಲಾತಿಯನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತದ್ದಲ್ಲ, ಕೇವಲ ನಿರ್ದಿಷ್ಟ ಸವಾಲುಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಪಸಂಖ್ಯಾತ ಜನಸಂಖ್ಯೆಯು 10% ಗಿಂತ ಕಡಿಮೆಯಿರುವ ಹಲವು ಪಂಚಾಯತಿಗಳಲ್ಲಿ ನಿಗದಿಪಡಿಸಲಾದ 10% ಮೀಸಲಾತಿಯ ಅವಕಾಶವು ಸದ್ಬಳಕೆಯಾಗುತ್ತಿರಲಿಲ್ಲ, ಹೀಗಾಗಿ ನಿಗದಿಪಡಿಸಲಾದ ಗುರಿಯನ್ನು ತಲುಪಲು ಮತ್ತು ಲೋಪದೋಷಗಳನ್ನು ತಡೆಯಲು ಇಂತಹ ಪಂಚಾಯತಿಗಳಿಂದ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವ ಕಡೆಗೆ ಗರಿಷ್ಠ 15% ಮಿತಿಗೆ ಒಳಪಟ್ಟು ಮರುಹಂಚಿಕೆ ಮಾಡಲಾಗಿದೆ.
ಇದು ಕೇವಲ ಆಡಳಿತಾತ್ಮಕ ದೃಷ್ಟಿಯಿಂದ ಸಾಮಾನ್ಯ ವರ್ಗದಲ್ಲಿ ಮಾಡಿಕೊಂಡ ಹೊಂದಾಣಿಕೆಯಾಗಿದ್ದು, ಇದರಿಂದ ಎಸ್.ಸಿ, ಎಸ್,ಟಿ ಅಥವಾ ಒಬಿಸಿ ವರ್ಗಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದು ಕಾನೂನು ಇಲಾಖೆಯ ವಿಸ್ತೃತ ಪರಾಮರ್ಷೆಯ ನಂತರ ಕೈಗೊಂಡ ತೀರ್ಮಾನವಾಗಿದ್ದು, ಇದು ಕಾನೂನಾತ್ಮಕವಾಗಿಯೂ ಸಮರ್ಪಕವಾಗಿದೆ.
ಬಿಜೆಪಿಯವರ ಟೀಕೆಗಳು ಕೇವಲ ದುರುದ್ದೇಶದ ಹಾಗೂ ರಾಜಕೀಯ ಪ್ರೇರಿತವಾಗಿದೆ. ರಾಷ್ಟ್ರ ಮಟ್ಟದಲ್ಲಿ 15% ಮೀಸಲಾತಿಯನ್ನು ಜಾರಿಗೊಳಿಸಿರುವ ಅದೇ ಪಕ್ಷವು ಇಂದು ಕರ್ನಾಟಕದಲ್ಲಿ ತೆಗೆದುಕೊಂಡಿರುವ ಅದೇ ಕೇಂದ್ರದ ನೀತಿಯ ಮೂಲ ತತ್ವಗಳನ್ನೊಳಗೊಂಡ ನಿರ್ಣಯವನ್ನು ಟೀಕಿಸುತ್ತಿದೆ.
ರಾಜ್ಯದ ಬಿಜೆಪಿ ನಾಯಕರಿಗೆ ವಿರೋಧವಿದ್ದರೆ ಅವರದೇ ಕೇಂದ್ರ ಸರ್ಕಾರವು ಈ ಮಾರ್ಗಸೂಚಿಗಳನ್ನು ಯಾಕೆ ಮುಂದುವರೆಸಿಕೊಂಡು ಹೋಗುತ್ತಿದೆ ಎಂಬುದನ್ನು ಮೊದಲು ವಿವರಿಸಲಿ.
ಬೇರೆ ರಾಜ್ಯಗಳೂ ಅದನ್ನೇ ಪಾಲಿಸಬೇಕು ಎಂದೇಕೆ ಕೇಂದ್ರವು ಬಯಸುತ್ತಿದೆ ಎಂಬುದನ್ನು ವಿವರಿಸಲಿ.
ಈ ರೀತಿಯ ವ್ಯವಸ್ಥಿತ ಅಪಪ್ರಚಾರದ ಹಿಂದೆ ಕೋಮು ವಿವಾದವನ್ನು ಸೃಷ್ಟಿಸುವ ಹುನ್ನಾರವಲ್ಲದೆ ಬೇರೇನು ಇಲ್ಲ. ಇದು ರಾಜ್ಯದ ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವ ಪ್ರಯತ್ನದ ದಿಕ್ಕು ತಪ್ಪಿಸುವ ಕುತಂತ್ರವಾಗಿದೆ.
ನಮ್ಮ ಈ ನಿರ್ಧಾರದಿಂದ ಪ್ರಸಕ್ತ ವರ್ಷ ಒಂದರಲ್ಲೇ ಸುಮಾರು 34,000 ಅಲ್ಪಸಂಖ್ಯಾತ ಕುಟುಂಬಗಳಿಗೆ ಲಾಭವಾಗಲಿದೆ. ಆ ಪೈಕಿ ಹೆಚ್ಚಿನವರು ಭೂರಹಿತರು ಮತ್ತು ಮನೆಗಳ ತುರ್ತು ಅಗತ್ಯತೆ ಇರುವವರಾಗಿದ್ದಾರೆ. ಅಲ್ಪಸಂಖ್ಯಾತ ಅರ್ಜಿದಾರರು ಇಲ್ಲದ ಪಂಚಾಯತಿಗಳಲ್ಲಿನ ಉಪಯೋಗವಾಗದೆ ಉಳಿದ ವಸತಿ ಹಂಚಿಕೆಗಳನ್ನು ಅತಿ ಅಗತ್ಯವಿರುವೆಡೆಗೆ ಮರುಹಂಚಿಕೆ ಮಾಡುವ ಕ್ರಮವಾಗಿದೆ.
ಯಾವುದೇ ತಾಂತ್ರಿಕ ಕಾರಣಗಳಿಂದ ಯಾವೊಂದು ಮನೆಯು ನಿರ್ಮಾಣಗೊಳ್ಳದೆ ಬಾಕಿ ಉಳಿಯಬಾರದು ಎಂಬುದನ್ನು ಇದು ಖಚಿತಪಡಿಸುತ್ತದೆ. ಸಾಂವಿಧಾನಿಕ ಅವಕಾಶಗಳ ಮಿತಿಗೆ ಒಳಪಟ್ಟ ಈ ಪ್ರಯತ್ನವು ಸಮಾನತೆ, ದಕ್ಷತೆ ಮತ್ತು ಸಂಪನ್ಮೂಲದ ಸದ್ಭಳಕೆಯ ಉಪಯುಕ್ತ ಮಾದರಿಯಾಗಿದೆ.
ಕರ್ನಾಟಕದಲ್ಲಿ ಸರ್ವರನ್ನು ಒಳಗೊಂಡ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಒತ್ತುಕೊಡುತ್ತಿದೆ. ಬಿಜೆಪಿಯು ಹರಡುತ್ತಿರುವ ದ್ವೇಷಪೂರಿತ ಮತ್ತು ವಿಭಜನಕಾರಿ ರಾಜಕಾರಣವನ್ನು ನಾವು ತಿರಸ್ಕರಿಸುತ್ತೇವೆ. ನಮ್ಮ ಆಡಳಿತ ಮಾದರಿಯು ನ್ಯಾಯ, ಸಮಾನತೆ ಮತ್ತು ಸಹಾನುಭೂತಿಯ ಆಶಯಗಳನ್ನು ಹೊಂದಿದೆ. ಜಾತಿ ಅಥವಾ ಧರ್ಮದ ಭೇದವಿಲ್ಲದೆ ಪ್ರತಿಯೊಂದು ಬಡ ಕುಟುಂಬಕ್ಕೆ ತಲುಪುವಂತಹ ಯೋಜನೆಗಳನ್ನು ಜಾರಿ ಮಾಡುವುದನ್ನು ನಾವು ಮುಂದುವರಿಸುತ್ತೇವೆ.
ಬಿಜೆಪಿ ನಾಯಕರು ತಿರುಚಿದ ಮಾಹಿತಿ ಹರಡಿ ಕೋಮು ಬಣ್ಣ ಬಳಿಯುವ ಮೂಲಕ ಬಡವರ ಉದ್ಧಾರದ ಕಾರ್ಯಗಳಿಗೆ ಅಡ್ಡಿಯಾಗದೆ, ಬಡತನ ರೇಖೆಗಿಂತ ಕೆಳಗಿರುವ ಜನರನ್ನು ಮೇಲೆತ್ತುವ ನಿಟ್ಟಿನಲ್ಲಿ ತಮ್ಮ ಸಂಕುಚಿತ ರಾಜಕೀಯವನ್ನು ಬದಿಗೊತ್ತಿ ನಮ್ಮ ಬೆಂಬಲಕ್ಕೆ ನಿಲ್ಲಲಿ ಎಂದು ನಾವು ಒತ್ತಾಯಿಸುತ್ತಿದ್ದೇವೆ.
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.
ರಾಜಕೀಯ
Puttur-Big Breaking: ನಾಳೆ ಪುತ್ತೂರಿಗೆ ಬಿಜೆಪಿ ಘಟಾನುಘಟಿ ನಾಯಕರ ದಂಡು; ವಿಜಯೇಂದ್ರ, ಆರ್. ಅಶೋಕ್ ಸಹಿತ ಹಲವು ಹಿರಿಯ ನಾಯಕರ ಭೇಟಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿಯ ಹಲವು ಪ್ರಮುಖ ನಾಯಕರು ನಾಳೆ (ನ.19) ಪುತ್ತೂರಿಗೆ ಆಗಮಿಸಲಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ನಾಯಕರು ಪುತ್ತೂರಿಗೆ ಭೇಟಿ ನೀಡಲಿದ್ದು, ರಾಜಕೀಯ ವಲಯದಲ್ಲಿ ಈ ಭೇಟಿಯು ಕುತೂಹಲ ಮೂಡಿಸಿದೆ.
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ರಾಜ್ಯ ಬಿಜೆಪಿಯ ಹಲವು ಪ್ರಮುಖ ನಾಯಕರು ನಾಳೆ (ನ.19) ಪುತ್ತೂರಿಗೆ ಆಗಮಿಸಲಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಈ ನಾಯಕರು ಪುತ್ತೂರಿಗೆ ಭೇಟಿ ನೀಡಲಿದ್ದು, ರಾಜಕೀಯ ವಲಯದಲ್ಲಿ ಈ ಭೇಟಿಯು ಕುತೂಹಲ ಮೂಡಿಸಿದೆ.
ಪುತ್ತೂರಿನ ಬಂಟರ ಭವನದಲ್ಲಿ ಬಿಜೆಪಿ ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡೆಂಜಿ ಅವರ ವಿವಾಹ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಇದಲ್ಲದೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಬಿಜೆಪಿ ಶಾಸಕರು ಕೂಡ ಈ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮೂಲತಃ ಕಡಬ ತಾಲೂಕಿನ ಸವಣೂರು ಸಮೀಪದ ಕೆಡೆಂಜಿ ಬಳಿಯ ಅರಲ್ತೆಡಿ ನಿವಾಸಿಯಾಗಿರುವ ಪ್ರಶಾಂತ್ ಅವರು ಪ್ರಸ್ತುತ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾಧ್ಯಮ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಯಕರ ಈ ಭೇಟಿ ಖಾಸಗಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆಯುತ್ತಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಪುತ್ತೂರಿನ ವಿವಾಹ ಸಮಾರಂಭಕ್ಕೆ ಆಗಮಿಸಿ, ಕಾರ್ಯಕ್ರಮ ಮುಗಿದ ಬಳಿಕ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಪುತ್ತೂರು ಬಿಜೆಪಿಯ ಪುನಶ್ಚೇತನಕ್ಕೆ ಸಿಗಲಿದೆಯೇ ಹೊಸ ದಿಕ್ಸೂಚಿ?
ಇನ್ನೊಂದೆಡೆ, ಕಳೆದ ಮೂರು ವರ್ಷಗಳಿಂದ ಆಂತರಿಕ ಭಿನ್ನಾಭಿಪ್ರಾಯ ಹಾಗೂ ರಾಜಕೀಯ ಸಂಘರ್ಷಗಳಿಂದಾಗಿ ಸಂಘಟನಾತ್ಮಕವಾಗಿ ಸವಾಲುಗಳನ್ನು ಎದುರಿಸುತ್ತಿರುವ ಪುತ್ತೂರು ಬಿಜೆಪಿಗೆ ಈ ನಾಯಕರ ಭೇಟಿ ಹೊಸ ಚೈತನ್ಯ ನೀಡುವ ಸಾಧ್ಯತೆ ಇದೆಯೆಂಬ ಕಾರಣಕ್ಕೆ ನಾಳಿನ ಭೇಟಿಗೆ ವಿಶೇಷ ಮಹತ್ವ ಲಭಿಸಿದೆ. ಸ್ಥಳೀಯ ಮಟ್ಟದಲ್ಲಿ ಮುಖಂಡರ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ನಾಯಕರು ಮಧ್ಯಪ್ರವೇಶಿಸಬಹುದೇ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ನಾಯಕರು ಖಾಸಗಿ ಕಾರ್ಯಕ್ರಮಕ್ಕೆ ಮಾತ್ರ ಆಗಮಿಸುತ್ತಿದ್ದರೂ, ಪುತ್ತೂರು ಬಿಜೆಪಿಯ ಇಂದಿನ ಸ್ಥಿತಿಗತಿ ಮತ್ತು ಸಂಘಟನೆಯ ಭವಿಷ್ಯದ ಕುರಿತು ಯಾವುದೇ ಅನೌಪಚಾರಿಕ ಚರ್ಚೆ ನಡೆಯಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ, ರಾಜ್ಯ ಬಿಜೆಪಿಯ ಘಟಾನುಘಟಿ ನಾಯಕರ ಈ ಭೇಟಿಯು ಕೇವಲ ವಿವಾಹ ಸಮಾರಂಭಕ್ಕೆ ಸೀಮಿತವಾಗುತ್ತದೆಯೇ ಅಥವಾ ಅಥವಾ ಪುತ್ತೂರಿನ ಸ್ಥಳೀಯ ರಾಜಕೀಯಕ್ಕೆ ಯಾವುದಾದರೂ ಹೊಸ ಸಂದೇಶ ನೀಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.
ಅಂತರ ರಾಜ್ಯ
Election Commission-ಯುಪಿಯಲ್ಲಿ 1.27 ಕೋಟಿ ಹಿಂದೂ ಮತದಾರರು ನಾಪತ್ತೆ? ಆದಿತ್ಯನಾಥ್ ಆರೋಪಕ್ಕೆ ಚುನಾವಣಾ ಆಯೋಗದ ಸ್ಪಷ್ಟನೆ
ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ, ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಮತದಾರರ ಪಟ್ಟಿಯಿಂದ ಹಿಂದೂ ಮತದಾರರ ಹೆಸರುಗಳು ನಾಪತ್ತೆಯಾಗಿವೆ ಎಂಬ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ನವದೀಪ್ ರಿನ್ವಾ, ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ಯಾವುದೇ ದಾಖಲೆಗಳನ್ನು ನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಬಳಿಕ ಪಟ್ಟಿಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ರಾಜ್ಯದ ಪಂಚಾಯತ್ ಚುನಾವಣೆಯ ಮತದಾರರ ಪಟ್ಟಿಯಲ್ಲಿದ್ದ ಸುಮಾರು 1.27 ಕೋಟಿ ಹಿಂದೂ ಮತದಾರರ ಹೆಸರುಗಳು ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ಕಾಣೆಯಾಗಿವೆ ಎಂದು ಅವರು ಆರೋಪಿಸಿದ್ದರು. ಈ ವ್ಯತ್ಯಾಸಗಳ ಕುರಿತು ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ ಎಂದೂ ತಿಳಿಸಿದ್ದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ, ಚುನಾವಣಾ ಇಲಾಖೆಯು ಮತದಾರರ ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಹೀಗಾಗಿ ಧರ್ಮ ಅಥವಾ ಜಾತಿಯ ಆಧಾರದ ಮೇಲೆ ಅಧಿಕೃತ ವಿಶ್ಲೇಷಣೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರ ದತ್ತಾಂಶದಲ್ಲಿ ಹೆಸರು, ತಂದೆ ಅಥವಾ ಸಂಗಾತಿಯ ಹೆಸರು, ವಯಸ್ಸು, ಮನೆ ಸಂಖ್ಯೆ ಹಾಗೂ ಲಿಂಗದಂತಹ ವಿವರಗಳು ಮಾತ್ರ ದಾಖಲಾಗಿರುತ್ತವೆ. ಧರ್ಮ ಮತ್ತು ಜಾತಿಗೆ ಸಂಬಂಧಿಸಿದ ಮಾಹಿತಿಗಳನ್ನು ಚುನಾವಣಾ ಆಯೋಗದ ಡೇಟಾಬೇಸ್ನಲ್ಲಿ ಸಂಗ್ರಹಿಸಲಾಗುವುದಿಲ್ಲ ಎಂದು ಅವರು ವಿವರಿಸಿದರು.
ಮತದಾರರ ಪಟ್ಟಿಗಳು ಸಾರ್ವಜನಿಕ ದಾಖಲೆಗಳಾಗಿರುವುದರಿಂದ ಮಾಧ್ಯಮ ಸಂಸ್ಥೆಗಳು ಹಾಗೂ ಸ್ವತಂತ್ರ ವಿಶ್ಲೇಷಕರು ಮತದಾರರ ಹೆಸರುಗಳು ಮತ್ತು ಲಭ್ಯವಿರುವ ಇತರ ಮಾಹಿತಿಗಳ ಆಧಾರದಲ್ಲಿ ತಮ್ಮದೇ ಆದ ವಿಶ್ಲೇಷಣೆ ನಡೆಸಬಹುದು. ಆದರೆ ಅಂತಹ ವಿಶ್ಲೇಷಣೆಗಳನ್ನು ಚುನಾವಣಾ ಇಲಾಖೆಯ ಅಧಿಕೃತ ದತ್ತಾಂಶ ಅಥವಾ ಸಂಶೋಧನೆ ಎಂದು ಪರಿಗಣಿಸಬಾರದು ಎಂದು ರಿನ್ವಾ ಸ್ಪಷ್ಟಪಡಿಸಿದರು.
ಯುಪಿಯಲ್ಲಿ 13.58 ಕೋಟಿ ಮತದಾರರು
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ಮಂಗಳವಾರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಒಟ್ಟು 13.58 ಕೋಟಿ ಮತದಾರರಿದ್ದು, ಅವರಲ್ಲಿ 6.20 ಕೋಟಿ ಮಹಿಳಾ ಮತದಾರರು ಸೇರಿದ್ದಾರೆ ಎಂದು ನವದೀಪ್ ರಿನ್ವಾ ಮಾಹಿತಿ ನೀಡಿದರು.
ಏಪ್ರಿಲ್ನಲ್ಲಿ ಘೋಷಿಸಲಾಗಿದ್ದ ಎಸ್ಐಆರ್ ಪ್ರಕ್ರಿಯೆಯ ನಂತರ ನಡೆದ ವಿಶೇಷ ಸಾರಾಂಶ ಪರಿಷ್ಕರಣೆ (ಎಸ್ಎಸ್ಆರ್) ಅವಧಿಯಲ್ಲಿ 18 ಲಕ್ಷಕ್ಕೂ ಅಧಿಕ ಮತದಾರರ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಪ್ರದೇಶದ ಅಂತಿಮ ಮತದಾರರ ಪಟ್ಟಿಯನ್ನು 2027ರ ಜನವರಿ 4ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳು ಮತ್ತು ಪರಿಷ್ಕರಣೆ ಪ್ರಕ್ರಿಯೆ ಇದೀಗ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
-
ಬಿಗ್ ನ್ಯೂಸ್8 hours agoPuttur-ಪುತ್ತೂರು: ದರ್ಬೆಯಲ್ಲಿ ಭೀಕರ ಕಾರು ಅಪಘಾತ: ಓರ್ವ ಮೃತ್ಯು, ಮತ್ತೊಬ್ಬರಿಗೆ ಗಂಭೀರ ಗಾಯ
-
Uncategorized7 hours agoPuttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
-
ಬಿಗ್ ನ್ಯೂಸ್8 hours agoTransfer-ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಬದಲಾವಣೆ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಪಶ್ಚಿಮ ವಲಯ ಐಜಿಪಿಯಾಗಿ ಶಶಿಕುಮಾರ್
-
ಮಂಗಳೂರು8 hours agoFarmers-ಕೋಳಿ ಫಾರಂಗಳಿಂದ ಹೆಚ್ಚುತ್ತಿರುವ ನೊಣಗಳು : ಕಂಪನಿಗಳ ವಿರುದ್ಧ ಹೋರಾಟಕ್ಕೆ ರೈತರು ಸಜ್ಜು
-
ರಾಜಕೀಯ6 hours agoPuttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
-
ಶಿಕ್ಷಣ24 hours agoNarendra-ನರೇಂದ್ರ ಪ.ಪೂ. ಕಾಲೇಜಿನಲ್ಲಿ ಕರ್ನಾಟಕದ ಏಕೀಕರಣ ಕುರಿತಾಗಿ ವಿದ್ಯಾರ್ಥಿಗಳಿಂದ ವಿಚಾರಗೋಷ್ಠಿ
-
ಅಂತರ ರಾಜ್ಯ5 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಬಿಗ್ ನ್ಯೂಸ್6 hours agoPuttur-ಪುತ್ತೂರು: ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘಕ್ಕೆ ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ















