ರಾಜಕೀಯ
Ashok Rai-ಬೊಳುವಾರು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾಗದ ವಿಚಾರ- ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಕುಕ್ಕೆಶ್ರೀ ಹಾಗೂ ಮಹಾಲಿಂಗೇಶ್ವರ ದೇವಳದ ಆಡಳಿತ ಸಮಿತಿ ಜಂಟಿ ಸಭೆ
ಪುತ್ತೂರು ನಗರದ ಬೊಳುವಾರಿನಿಂದ ಉಪ್ಪಿನಂಗಡಿ ತೆರಳುವ ರಸ್ತೆಯ ಪಕ್ಕದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಸಾಕಷ್ಟು ಅತಿಕ್ರಮಣಗೊಂಡಿದ್ದು, ಇದನ್ನು ತೆರವುಗೊಳಿಸಿ ಕುಕ್ಕೆ ದೇಗುಲದ ವತಿಯಿಂದಲೇ ಈ ಜಾಗವನ್ನು ಸಮಗ್ರ ಅಭಿವೃದ್ಧಿಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಪುತ್ತೂರು: ಪುತ್ತೂರು ನಗರದ ಬೊಳುವಾರಿನಿಂದ ಉಪ್ಪಿನಂಗಡಿ ತೆರಳುವ ರಸ್ತೆಯ ಪಕ್ಕದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಸಾಕಷ್ಟು ಅತಿಕ್ರಮಣಗೊಂಡಿದ್ದು, ಇದನ್ನು ತೆರವುಗೊಳಿಸಿ ಕುಕ್ಕೆ ದೇಗುಲದ ವತಿಯಿಂದಲೇ ಈ ಜಾಗವನ್ನು ಸಮಗ್ರ ಅಭಿವೃದ್ಧಿಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪುತ್ತೂರು ಶಾಸಕರ ಕಚೇರಿಯಲ್ಲಿ ಸೋಮವಾರ ಸಂಜೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಜಂಟಿ ಸಭೆ ನಡೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ದೇವಸ್ಥಾನದ ಜಾಗ ದೇವಸ್ಥಾನಕ್ಕೆ ಸಿಗಬೇಕು. ಅದು ಯಾವುದೇ ರೀತಿಯಲ್ಲಿ ಅತಿಕ್ರಮಣಕ್ಕೆ ತುತ್ತಾಗಬಾರದು ಎಂಬ ನೆಲೆಯಲ್ಲಿ ಈಗಾಗಲೇ ಶಾಸಕ ಅಶೋಕ್ ರೈ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗ ಅತಿಕ್ರಮಣ ತೆರವಿಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದರ ಮುಂದುವರಿದ ಭಾಗವಾಗಿ ಕುಕ್ಕೆ ಕ್ಷೇತ್ರದ ಸಮಿತಿಯ ಸಭೆಯನ್ನು ಪುತ್ತೂರಿನಲ್ಲಿ ನಡೆಸಿದರು.

ಕುಕ್ಕೆ ದೇವಳಕ್ಕೆ ಸೇರಿದ 1.57 ಎಕರೆ ಜಮೀನು ಪುತ್ತೂರಿನ ಬೊಳುವಾರಿನಲ್ಲಿ ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಇದರಲ್ಲಿ ಸುಮಾರು 60 ಸೆಂಟ್ಸ್ನಷ್ಟು ಜಾಗ ಖಾಸಗಿಯವರಿಂದ ಅತಿಕ್ರಮಣಕ್ಕೆ ತುತ್ತಾಗಿದೆ ಎಂಬ ಅಂಶವನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸರಕಾರದ ಸುತ್ತೋಲೆ ಪ್ರಕಾರ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳ ಜಾಗ ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಜಮೀನು ಅತಿಕ್ರಮಣ ಮಾಡಿಕೊಂಡಿರುವ ಕುಟುಂಬಗಳನ್ನು ತೆರವು ಮಾಡಬೇಕಾಗಿದೆ. ಮಾನವೀಯ ನೆಲೆಯಲ್ಲಿ ಈ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು. ತೆರವು ಸಂಬಂಧ ಸಮಗ್ರ ಸಾಧ್ಯತಾ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ತೆರವು ಪೂರ್ಣಗೊಂಡ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದಲೇ ಈ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕರು ಎರಡೂ ದೇವಳಗಳ ವ್ಯವಸ್ಥಾಪನಾ ಸಮಿತಿಗೆ ಅನೇಕ ಸಲಹೆ, ಸೂಚನೆ ನೀಡಿದರು. ಸರಕಾರದ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯದ ವಿಚಾರದಲ್ಲಿ ತಾನು ಸಮನ್ವಯ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಕುಕ್ಕೆ ದೇವಳದ ಜಮೀನಿಗೆ ಸಂಬಂಧಿಸಿ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಸಭೆ ನಡೆದಿದ್ದು, ಪುತ್ತೂರು ಮತ್ತು ಸುಬ್ರಹ್ಮಣ್ಯ ದೇವಳಗಳ ಅಧ್ಯಕ್ಷರು ಜಂಟಿಯಾಗಿ ಬೊಳುವಾರು ಅತಿಕ್ರಮಿತ ಜಾಗ ಪರಿಶೀಲಿಸಿ, ಅಲ್ಲಿರುವ ಅತಿಕ್ರಮಣದಾರರ ಜತೆ ಸಮಾಲೋಚನೆ ನಡೆಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸದಸ್ಯರಾದ ಡಾ.ರಘು, ಅಶೋಕ್ ನೆಕ್ರಾಜೆ, ಅಜಿತ್ ಪೂಜಾರಿ ಪಾಲೇರಿ, ಲೀಲಾ ಮನಮೋಹನ್, ಪ್ರವೀಣ್ ರೈö, ಸೌಮ್ಯ ಭರತ್, ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪುತ್ತೂರು ದೇವಾಲಯದ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೇಡೇಕರ್, ನಳಿನಿ ಶೆಟ್ಟಿ, ದಿನೇಶ್ ಕುಲಾಲ್ ಪಿ.ವಿ.,ಮಹಾಬಲ ರೈ, ಸುಬಾಸ್ ರೈ, ಕೃಷ್ಣವೇಣಿ ,ಕುಕ್ಕೆ ಕ್ಷೇತ್ರದ ಮಾಸ್ಟರ್ ಪ್ಲಾನ್ ಸಮತಿಯ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ. ಮತ್ತಿತರರು ಉಪಸ್ಥಿತರಿದ್ದರು.
ಕುಕ್ಕೆ ದೇವಳಕ್ಕೆ ಸೇರಿದ ೧.೫೭ ಎಕರೆ ಜಾಗ ಪುತ್ತೂರಿನಲ್ಲಿದೆ. ಇಲ್ಲಿ ಕುಕ್ಕೆ ಕ್ಷೇತ್ರದ ವತಿಯಿಂದಲೇ ವಾಣಿಜ್ಯ ಸಂಕೀರ್ಣ, ಸಭಾಂಗಣ ಮತ್ತಿತರ ವ್ಯವಸ್ಥೆಗಳನ್ನು ನಿರ್ಮಿಸಿದಲ್ಲಿ ದೇವಳದ ಆದಾಯಕ್ಕೆ ಉತ್ತಮ ಮೂಲವಾಗುತ್ತದೆ. ಪುತ್ತೂರಿನ ಅಭಿವೃದ್ಧಿಗೂ ಪೂರಕವಾಗಲಿದೆ. ಪುತ್ತೂರು ದೇವಸ್ಥಾನಕ್ಕೂ ಭವಿಷ್ಯದಲ್ಲಿ ಇದರಿಂದ ಪ್ರಯೋಜನವಿದೆ.
-ಅಶೋಕ್ ಕುಮಾರ್ ರೈö, ಶಾಸಕರು, ಪುತ್ತೂರು
ಬೊಳುವಾರಿನಲ್ಲಿರುವ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾಗವನ್ನು ದೇವಸ್ಥಾನಕ್ಕೆ ವಶಕ್ಕೆ ಪಡೆಯಲಾಗುವುದು. ದೇವರ ಜಾಗ ದೇವರಿಗೇ ಸೇರಬೇಕಾಗುತ್ತದೆ. ಇದರಲ್ಲಿ ಯಾರೆಲ್ಲಾ ಅತಿಕ್ರಮಣ ಮಾಡಿ ಮನೆ ನಿರ್ಮಣ ಅಥವಾ ಇನ್ನಿತರ ಕಟ್ಟಡ ನಿರ್ಮಾಣ ಮಾಡಿದ್ದರೆ ಅದನ್ನು ತೆರವು ಮಾಡಲಾಗುತ್ತದೆ. ಮಾನವೀಯ ನೆಲೆಯಲ್ಲಿ ಮನೆ ಕಟ್ಟಿಕೊಂಡವರಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಮಾಲೋಚನೆಗಳನ್ನು ನಡೆಸಲಾಗಿದೆ. ಶಾಸಕ ಅಶೋಕ್ ರೈ ಮಾರ್ಗದರ್ಶನದಂತೆ ನಾವು ಮುಂದಿನ ಹೆಜ್ಜೆ ಇಡಲಿದ್ದೇವೆ. ಪ್ರಾರಂಭದಲ್ಲಿ ಈ ಜಾಗ ಕುಕ್ಕೆಶ್ರೀ ದೇವಸ್ಥಾನದ ಹೆಸರಿಗೇ ಮಾಡಲಾಗುತ್ತದೆ ಆ ಬಳಿಕ ಮುಂದೆ ಏನು ಎಂಬುದರ ಬಗ್ಗೆ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ
ಹರೀಶ್ ಇಂಜಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ
ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜಾಗದ ಬಗ್ಗೆ ನಾವು ಎರಡೂ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸಮಿತಿಯವರು ಜಂಟಿಯಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ. ಶಾಸಕ ಅಶೋಕ್ ರೈ ಅವರ ನಿರ್ದೇಶನದಂತೆ ನಾವು ಮುಂದಿನ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.
ಈಶ್ವರಭಟ್ ಪಂಜಿಗುಡ್ಡೆ ಅಧ್ಯಕ್ಷರು
ರಾಜಕೀಯ
BJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಪುತ್ತೂರು: ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನರಸಿಂಹ ಮಾಣಿ ಅವರು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ ಮುಖಂಡರು, ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಇರುವಂತೆ ಪ್ರೇರಣೆ ನೀಡಿದರು.

ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಕುಟುಂಬದೊಂದಿಗೆ ಸಮಾಜ ನಿಲ್ಲಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಭೇಟಿಯ ವೇಳೆ ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ರತನ್ ರೈ ಕುಂಬ್ರ, ಪುತ್ತೂರು ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಯುವಮೋರ್ಚಾದ ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ವಿಶ್ವನಾಥ ಕುಲಾಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜೇಶ್ ಉಪಸ್ಥಿತರಿದ್ದರು.
ಮಂಗಳೂರು
Lakshman Sawadi-ಸಹಕಾರಿ ಕ್ಷೇತ್ರದ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ಗೆ ಹೊಸ ಶಕ್ತಿ; ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಸಚಿವ ಲಕ್ಷ್ಮಣ ಸವದಿ ಕರೆ
ಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಗ್ರಾಮೀಣ ಮಟ್ಟದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಕ್ಷದ ಮೂಲ ಬೇರುಗಳಿದ್ದಂತೆ. ಜಿಲ್ಲೆಯ ಯಾವ ಗ್ರಾಮಗಳಲ್ಲಿ ಇನ್ನೂ ಸಹಕಾರಿ ಸಂಘಗಳು ಸ್ಥಾಪನೆಯಾಗಿಲ್ಲವೋ ಅಂತಹ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡಿದರೆ, ತಕ್ಷಣವೇ ಅಧಿಕಾರಿಗಳ ಮೂಲಕ ನೋಂದಣಿ ಮಾಡಿಸಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (DCC) ಸದಸ್ಯತ್ವ ಕೊಡಿಸಲಾಗುವುದು ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದರು.
“2008ರಲ್ಲಿ ನಾನು ಸಹಕಾರ ಸಚಿವನಾಗಿದ್ದಾಗ ಕೃಷಿ ಸಾಲದ ಬಡ್ಡಿದರವನ್ನು ಶೇ.3ಕ್ಕೆ ಇಳಿಸಿದ್ದೆ. ಆದರೆ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅವಧಿಗೆ ಮುನ್ನ ಸಾಲ ಮರುಪಾವತಿಸುವವರಿಗೆ ಶೇ.3ರಷ್ಟು ಸಹಾಯಧನ ಘೋಷಿಸಿದ್ದರಿಂದ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವಂತಾಯಿತು. ಈ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಜೈನ ಅಭಿವೃದ್ಧಿ ನಿಗಮಕ್ಕೆ ಸಿಎಂ ಅನುಮೋದನೆ:
ಕಾಂಗ್ರೆಸ್ ಪಕ್ಷಕ್ಕೆ ‘ಹಸ್ತದ ಚಿಹ್ನೆ’ ಸಿಕ್ಕ ಇತಿಹಾಸವನ್ನು ಸ್ಮರಿಸಿದ ಸವದಿ, “ತುರ್ತು ಪರಿಸ್ಥಿತಿಯ ನಂತರ ಚಿಹ್ನೆಯ ವ್ಯಾಜ್ಯ ಎದುರಾದಾಗ ನಮ್ಮ ಭಾಗದ ಜೈನ ಮುನಿ ಶ್ರೀ ವಿದ್ಯಾನಂದ ಮುನಿಗಳು ಇಂದಿರಾ ಗಾಂಧಿ ಅವರಿಗೆ ಬೆಳ್ಳಿಯ ಹಸ್ತದ ಚಿಹ್ನೆ ನೀಡಿ ಆಶೀರ್ವದಿಸಿದ್ದರು. ಆ ಸಮಾಜದ ಋಣ ತೀರಿಸುವ ಉದ್ದೇಶದಿಂದ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿರುವ ಜೈನ ಸಮುದಾಯದ ಬೇಡಿಕೆಯಂತೆ, ಪ್ರತ್ಯೇಕ ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳಿಂದ ಕಡತಕ್ಕೆ ಅನುಮೋದನೆ ಪಡೆಯಲಾಗಿದೆ,” ಎಂದು ಮಾಹಿತಿ ನೀಡಿದರು.
ಸಚಿವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಗೌರವಿಸಿದರು.
ಮಾಜಿ ಸಚಿವ ಬಿ. ರಮಾನಾಥ್ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪರಿಸರಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೋ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ವಿಶ್ವಾಸ್ ದಾಸ್, ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.
-
ದಕ್ಷಿಣ ಕನ್ನಡ20 hours ago
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
-
ಮಂಗಳೂರು21 hours ago
Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ















