ದಕ್ಷಿಣ ಕನ್ನಡ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿ ಜಾಗ ಮರು ವಶ | ಕೊಂಬೆಟ್ಟಿನಲ್ಲಿ 16 ಸೆಂಟ್ಸ್ ಜಾಗ ಸ್ವಾಧೀನಕ್ಕೆ

ಪುತ್ತೂರು, ಜು.19: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ್ದರೂ ಒತ್ತುವರಿಯಾಗಿದ್ದ ಕೊಂಬೆಟ್ಟಿನಲ್ಲಿದ್ದ 16 ಸೆಂಟ್ಸ್ ಜಾಗವನ್ನು ಗುರುತಿಸಿ ದೇವಸ್ಥಾನದ ಸ್ವಾಧೀನಕ್ಕೆ ಪಡೆಯುವ ಕಾರ್ಯವನ್ನು ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನೇತೃತ್ವದಲ್ಲಿ ಜು.18ರಂದು ನಡೆಸಲಾಯಿತು.
ಇದೇ ವೇಳೆ ಮುಖ್ಯ ರಸ್ತೆಯಲ್ಲಿರುವ ದೇವಸ್ಥಾನದ ಹೆಸರಿನಲ್ಲೇ ಆರ್‌ಟಿಸಿಯಾಗಿರುವ ಕೋಟ್ಯಾಂತರ ರೂಪಾಯಿ ಮೌಲ್ಯದ 45 ಸೆಂಟ್ಸ್ ಜಾಗವನ್ನೂ ಅಧಿಕಾರಿಗಳೊಂದಿಗೆ ಪರಿಶೀಲಿಸಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ವಾಧೀನಗೊಂಡ ಜಾಗವನ್ನು ವೀಕ್ಷಿಸಿದರು. ಬಳಿಕ ದೇವಸ್ಥಾನದ ವತಿಯಿಂದ ಅಳವಡಿಸಲಾದ ಫಲಕವನ್ನು ಅನಾವರಣಗೊಳಿಸಿ, ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಸಂಪರ್ಕ ರಸ್ತೆ ನಿರ್ಮಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯ ಈಶ್ವರ ಬೆಡೇಕರ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಲೋಕೇಶ್ ಪಡ್ಡಾಯೂರು, ರೋಹನ್‌ರಾಜ್, ನಡುಬೈಲುಗುತ್ತು ಗೋಪಾಲ ಪೂಜಾರಿ, ದೇವಸ್ಥಾನದ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಸುಮಾರು ₹50 ಲಕ್ಷ ಮೌಲ್ಯದ ಜಾಗ ಸ್ವಾಧೀನ :ಈಶ್ವರ ಭಟ್ ಪಂಜಿಗುಡ್ಡೆ
ದೇವಸ್ಥಾನದ ಬಳಿಯ ಕೊಂಬೆಟ್ಟಿನಲ್ಲಿ ದೇವಸ್ಥಾನದ ಹೆಸರಿನಲ್ಲಿರುವ 16 ಸೆಂಟ್ಸ್ ಜಾಗದ ಕುರಿತು ಮಾಹಿತಿ ಲಭ್ಯವಾದ ಬಳಿಕ ಹಲವು ಹಂತಗಳಲ್ಲಿ ಸರ್ವೆ ಹಾಗೂ ಡಿಜಿಟಲ್ ಸರ್ವೆ ನಡೆಸಲಾಯಿತು. ಎಲ್ಲ ದಾಖಲೆಗಳಲ್ಲೂ ಜಾಗ ದೇವಸ್ಥಾನದ್ದೇ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಜಾಗವನ್ನು ದೇವಸ್ಥಾನಕ್ಕೆ ಹಸ್ತಾಂತರಿಸಿದ್ದಾರೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.
ಮುಖ್ಯ ರಸ್ತೆಯ ಪಕ್ಕದಲ್ಲಿರುವ ಸುಮಾರು 45 ಸೆಂಟ್ಸ್ ಜಾಗವೂ ದೇವಸ್ಥಾನದ ಹೆಸರಿನಲ್ಲೇ ಆರ್‌ಟಿಸಿಯಾಗಿದ್ದು, ಅದನ್ನೂ ಕಾನೂನುಬದ್ಧವಾಗಿ ಹಾಗೂ ಸೌಹಾರ್ದಯುತವಾಗಿ ದೇವಸ್ಥಾನದ ಸ್ವಾಧೀನಕ್ಕೆ ಪಡೆಯಲಾಗುವುದು ಎಂದು ಅವರು ಹೇಳಿದರು.
“ದೇವಸ್ಥಾನದ ಒತ್ತುವರಿ ಜಾಗ ಬಿಡುವ ಪ್ರಶ್ನೆಯೇ ಇಲ್ಲ” – ಶಾಸಕ ಅಶೋಕ್ ರೈ
“ಮಹಾಲಿಂಗೇಶ್ವರ ದೇವಸ್ಥಾನದ ಹೆಸರಿನಲ್ಲಿರುವ ಎಲ್ಲಾ ಆರ್‌ಟಿಸಿ ದಾಖಲೆಗಳ ಪರಿಶೀಲನೆ ವೇಳೆ ದೇವಸ್ಥಾನದ ಪಕ್ಕದಲ್ಲಿ 16 ಸೆಂಟ್ಸ್ ಜಾಗ ಇರುವುದನ್ನು ಗಮನಿಸಿದ್ದೆವು. ಕಂದಾಯ ಇಲಾಖೆ ಮೂಲಕ ಎರಡು-ಮೂರು ಬಾರಿ ಸರ್ವೆ ನಡೆಸಿದ ಬಳಿಕ ಅದು ದೇವಸ್ಥಾನದ್ದೇ ಎಂಬುದು ಖಚಿತಗೊಂಡ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆಯಲಾಗಿದೆ. ಮುಖ್ಯ ರಸ್ತೆಯಲ್ಲಿರುವ ಸುಮಾರು 45 ಸೆಂಟ್ಸ್ ಜಾಗವೂ ದೇವಸ್ಥಾನದ ಹೆಸರಿನಲ್ಲೇ ಆರ್‌ಟಿಸಿಯಾಗಿದ್ದು, ಅದರ ಪರಿಶೀಲನೆಯೂ ಪೂರ್ಣಗೊಂಡಿದೆ. ದೇವಸ್ಥಾನದ ಒತ್ತುವರಿ ಜಾಗವನ್ನು ಬಿಡುವ ಪ್ರಶ್ನೆಯೇ ಇಲ್ಲ,” ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಪುತ್ತೂರು
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು

ಪುತ್ತೂರು: ಕೆದಿಲ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಅ.3ರಂದು ನಡೆದಿದೆ.
ಮೃತರನ್ನು ಕೆಮ್ಮಾಯಿ ನಿವಾಸಿ ದಿ. ಗುಡ್ಡಪ್ಪ ಗೌಡರವರ ಪುತ್ರ ರವಿ ಗೌಡ ಎಂದು ಗುರುತಿಸಲಾಗಿದೆ. ಇವರು ಮೆಸ್ಕಾಂ ಬಂಟ್ವಾಳ ತಾಲೂಕಿನ ಮಾಣಿ ಸೆಕ್ಷನ್ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ಎಚ್‌ಟಿ (ಹೈಟೆನ್ಶನ್) ವಿದ್ಯುತ್ ಲೈನ್‌ನ ಜಿಒಎಸ್ (ಗ್ಯಾಂಗ್ ಆಪರೇಟಿಂಗ್ ಸ್ವಿಚ್) ತೆರೆಯುವ ಸಂದರ್ಭದಲ್ಲಿ ಅರ್ಥ್ ಆಗಿ ವಿದ್ಯುತ್ ಪ್ರವಹಿಸಿ ರವಿ ಗೌಡ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಕೆದಿಲ ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗೌಡ ಅವರು, ತಮ್ಮ ಸೇವಾ ಮನೋಭಾವದಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಅಪರಾಧ
Mangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಮಂಗಳೂರು: ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.
ಕಳ್ಳರು ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನ ನಡೆದಿತ್ತು. ಮನೆಯ ಲಾಕರ್‌ನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳು ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ತಕ್ಷಣ ಗುಜರಾತ್‌ನ ವಡೋದರಾ ಪೊಲೀಸರ ಸಹಾಯ ಪಡೆದುಕೊಂಡ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿದ್ದ 24 ಗಂಟೆಗಳೊಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಕೂಡ ಬಾಕಿ ಇದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಶಿಕ್ಷಣ
Narendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.
ಹೈದರಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ಕ್ಷೇತ್ರಮಟ್ಟದ ಕ್ರೀಡಾಕೂಟದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಎನ್. ಇವರು 1500ಮೀ., 3000ಮೀ ರೇಸ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಇವರು ಪುಣಚ ನಿವಾಸಿಗಳಾದ ಮೋಹನ ನಾಯ್ಕ್ ಎನ್. ಮತ್ತು ಭವ್ಯ ದಂಪತಿಗಳ ಪುತ್ರ.
ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ, ಬಳ್ಳಾರಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವದ ಸ್ಪರ್ಧೆಗಳಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಶಿತ್ ಆರ್. ಗೌಡ ಇವರು ಫಿಸಿಕ್ಸ್ ಎಕ್ಸ್ ಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ನಿವಾಸಿಗಳಾದ ರಾಜೇಶ್ ಮತ್ತು ನಳಿನಿ ದಂಪತಿಗಳ ಪುತ್ರ.


















