ಬಿಗ್ ನ್ಯೂಸ್
China-ಚೀನಾ: ಸ್ವಯಂಚಾಲಿತ ಪ್ರಯಾಣಿಕ ಡ್ರೋನ್ “ಹಾರುವ ಟ್ಯಾಕ್ಸಿ”ಗೆ ಅನುಮೋದನೆ
ಚೀನಾ ತನ್ನ ಮೊಟ್ಟಮೊದಲ ಸ್ವಯಂಚಾಲಿತ ಪ್ರಯಾಣಿಕ ಡ್ರೋನ್, ಪೈಲೆಟ್ ರಹಿತ “ಹಾರುವ ಟ್ಯಾಕ್ಸಿ” ಗಳಿಗೆ ಅನುಮೋದನೆ ನೀಡಿದೆ. “ಚೀನಾ ನಾಗರಿಕ ವಿಮಾನಯಾನ ಆಡಳಿತ (CAAC) ಈ ಮೊದಲ ಸ್ವಯಂಚಾಲಿತ ಹಾರುವ ಟ್ಯಾಕ್ಸಿಗಳಿಗೆ ಅನುಮತಿ ನೀಡಿದೆ..” ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಬೀಜಿಂಗ್: ಚೀನಾ ತನ್ನ ಮೊಟ್ಟಮೊದಲ ಸ್ವಯಂಚಾಲಿತ ಪ್ರಯಾಣಿಕ ಡ್ರೋನ್, ಪೈಲೆಟ್ ರಹಿತ “ಹಾರುವ ಟ್ಯಾಕ್ಸಿ” ಗಳಿಗೆ ಅನುಮೋದನೆ ನೀಡಿದೆ. “ಚೀನಾ ನಾಗರಿಕ ವಿಮಾನಯಾನ ಆಡಳಿತ (CAAC) ಈ ಮೊದಲ ಸ್ವಯಂಚಾಲಿತ ಹಾರುವ ಟ್ಯಾಕ್ಸಿಗಳಿಗೆ ಅನುಮತಿ ನೀಡಿದೆ..” ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಸಿಎಎಸಿಯ ಈ ಅನುಮತಿಯಿಂದ ಚೀನಾದ “ಇಹಾಂಗ್ ಹೋಲ್ಡಿಂಗ್ಸ್” ಮತ್ತು “ಹೆಫಿ ಹೇ ಏರ್ಲೈನ್ಸ್” ಕಂಪನಿಗಳು, ಚೀನಾದ ಪ್ರಮುಖ ನಗರಗಳ ಪ್ರವಾಸಿ ತಾಣಗಳಿಗೆ ಪ್ರಯಾಣಿಕರನ್ನು ಕೊಂಡೊಯ್ಯಲು ಸ್ವಯಂಚಾಲಿತ ಹಾರುವ ಟ್ಯಾಕ್ಸಿಗಳನ್ನು ಬಳಸಬಹುದಾಗಿದೆ.
ಎರಡು ಚೀನೀ ಕಂಪನಿಗಳು ಸಿಎಎಸಿಯಿಂದ ಸ್ವಯಂಚಾಲಿತ ಪ್ರಯಾಣಿಕ ಡ್ರೋನ್ಗಳ ವಾಣಿಜ್ಯ ಕಾರ್ಯಾಚರಣೆಗೆ ಪ್ರಮಾಣಪತ್ರ ಪಡೆದಿವೆ. ಸಿಟಿಕ್ ಸೆಕ್ಯುರಿಟೀಸ್ ವರದಿಯ ಪ್ರಕಾರ, ಈ ಕಂಪನಿಗಳು ತಮ್ಮ ವಿನ್ಯಾಸ, ಉತ್ಪಾದನೆ ಮತ್ತು ಸುರಕ್ಷತಾ ಪ್ರಮಾಣಪತ್ರಗಳನ್ನು ಅಧಿಕೃತವಾಗಿ ಪಡೆದುಕೊಂಡಿವೆ. ಇದು ಕೊನೆಯ ಹಂತದ ಅನುಮೋದನೆಯಾಗಿದ್ದು, ಪ್ರವಾಸೋದ್ಯಮದ ಬೆಳವಣಿಗೆಯನ್ನು ಮತ್ತಷ್ಟು ಚುರುಕುಗೊಳಿಸುವ ವಿಶ್ವಾಸವಿದೆ.
ಕೇವಲ ಪ್ರಯಾಣಿಕ ಹಾರುವ ಟ್ಯಾಕ್ಸಿ ಮಾತ್ರವಲ್ಲದೇ ಡೆಲಿವರಿ ಡ್ರೋನ್ಗಳು, ಬ್ಲಿಂಪ್ಗಳು ಮತ್ತು ಹಾರುವ ಕಾರುಗಳಂತಹ ಹೊಸ ಆವಿಷ್ಕಾರಗಳಿಗೂ ಚೀನಾದಲ್ಲಿ ಭಾರೀ ಬೆಂಬಲ ದೊರೆಯುತ್ತಿದೆ. ಚೀನೀ ಸರ್ಕಾರವು ಈ ಕ್ಷೇತ್ರವನ್ನು ಆರ್ಥಿಕ ಬೆಳವಣಿಗೆಗೆ ಮುಖ್ಯವೆಂದು ಪರಿಗಣಿಸುತ್ತದೆ. ಜೊತೆಗೆ ಬಯೋ ಉತ್ಪಾದನೆ, ಕ್ವಾಂಟಮ್ ಕಂಪ್ಯೂಟಿಂಗ್, AI (ಕೃತಕ ಬುದ್ಧಿಮತ್ತೆ) ಮತ್ತು 6G ನೆಟ್ವರ್ಕ್ಗಳಂತಹ ತಂತ್ರಜ್ಞಾನಗಳಿಗೂ ಬೆಂಬಲ ನೀಡುತ್ತಿದೆ.
ಇಹಾಂಗ್ EH216-S ಚೀನಾದ ಮೊದಲ ಹಾರುವ ಟ್ಯಾಕ್ಸಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದು ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನವಾಗಿದ್ದು. ಪೈಲೆಟರ್ರಹಿತ ಎರಡು ಆಸನಗಳ ವಾಹನವಾಗಿದೆ. ಇದು 16 ಪ್ರೊಪೆಲ್ಲರ್ಗಳು ಮತ್ತು ಕಾರ್ಬನ್ ಫೈಬರ್ನಿಂದ ಮಾಡಲ್ಪಟ್ಟಿದೆ. ಇದು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತದೆ ಮತ್ತು ಗರಿಷ್ಠ 10,000 ಅಡಿ (3,000 ಮೀಟರ್) ಎತ್ತರಕ್ಕೆ ತಲುಪುವ ಸಾಮರ್ಥ್ಯವನ್ನು ಹೊಂದಿದೆ.
EH216-S ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೈಲಟ್ ಅಗತ್ಯವಿಲ್ಲ. ಇಹಾಂಗ್ ಕಂಪನಿಯು ಇದನ್ನು ಏರ್ ಟ್ಯಾಕ್ಸಿ ಸೇವೆಗಳು, ವೈಮಾನಿಕ ಪ್ರವಾಸೋದ್ಯಮ, ವಿಮಾನ ನಿಲ್ದಾಣದ ಸಾಗಣೆ ಮತ್ತು ದ್ವೀಪಗಳ ನಡುವಿನ ಸಾರಿಗೆಗಾಗಿ ಬಳಸಲು ಯೋಜಿಸಿದೆ. ಹುರುನ್ ರಿಸರ್ಚ್ ಗ್ರೂಪ್ ಪ್ರಕಾರ, “ಚೀನಾದ ಫ್ಲೈಯಿಂಗ್ ಟೂರಿಸಂ 2025ರ ಅಂತ್ಯದ ವೇಳೆಗೆ 1.5 ಟ್ರಿಲಿಯನ್ ಯುವಾನ್ ಮೌಲ್ಯವನ್ನು ಹೊಂದಿರಬಹುದು. ಅದೇ ರೀತಿ 2035ರ ವೇಳೆಗೆ ಇದು 2.5 ಟ್ರಿಲಿಯನ್ ಯುವಾನ್ಗೆ ವಿಸ್ತರಿಸಬಹುದು..” ಎಂದು ಅಂದಾಜಿಸಲಾಗಿದೆ.
ಚೀನಾ ಈ ರೀತಿಯ ಆರ್ಥಿಕತೆಗೆ ಉತ್ತೇಜನ ನೀಡುತ್ತಿದ್ದು, ಹೊಸ ಉದ್ಯೋಗಾವಕಾಶಗಳ ಸೃಷ್ಠಿ ಆರ್ಥಿಕ ಬೆಳವಣಿಗೆಗೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳುತ್ತಿದೆ. ಸದ್ಯ ಕೇವಲ ಎರಡು ಕಂಪನಿಗಳಿಗೆ ಮಾತ್ರ ಹಾರುವ ಟ್ಯಾಕ್ಸಿಗಳನ್ನು ಬಳಸುವ ಅನುಮತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಗಳು ಸಾಮಾನ್ಯವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.
ಮಂಗಳೂರು
Mangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಏನಿದು ಪ್ರಕರಣ?
ನ.19ರ ಗುರುವಾರ ಸಂಜೆ ಕಾಲೇಜು ಆವರಣದಿಂದ ಕರೆದೊಯ್ಯಲ್ಪಟ್ಟ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.
ಯುವತಿ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಕಾಲೇಜು ಆವರಣಕ್ಕೆ ಆಗಮಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳಂನ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಂಗಳೂರಿಗೆ ಕರೆತಂದಿದ್ದಾರೆ.
ಮನೆಯವರ ಜೊತೆ ಹೋಗಲು ನಿರಾಕರಣೆ
ಪೊಲೀಸರು ರಕ್ಷಿಸಿದ ಬಳಿಕ ಯುವತಿಯ ಹೇಳಿಕೆ ದಾಖಲಿಸಿದ್ದು, ತನ್ನ ಪೋಷಕರು ಅಥವಾ ಮನೆಯವರ ಜೊತೆ ಹೋಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಯುವತಿ ವಯಸ್ಕಳಾಗಿರುವುದರಿಂದ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆಯ ಬಳಿಕ ಯುವತಿಯ ಇಚ್ಛೆಯ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್ಎಸ್ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಅಂತರ ರಾಜ್ಯ
Former CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ನವದೆಹಲಿ: ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಧುನಿಕ ಜಗತ್ತಿನ ಸಕಲ ಸೌಕರ್ಯಗಳಿಂದ ದೂರವಾಗಿ ಗುಹೆಗಳಲ್ಲಿ ವಾಸಿಸುತ್ತಿರುವ ಮಾಜಿ ಅಧಿಕಾರಿಯು, ತಮ್ಮ ಆಧ್ಯಾತ್ಮಿಕ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರಣ್ಯದ ವಾತಾವರಣದಲ್ಲಿ ಬದುಕಲು ಆರಂಭಿಸಿದ ಬಳಿಕ ಜೀವನದ ನೈಜ ಅರ್ಥ ಹಾಗೂ ನೆಮ್ಮದಿಯ ಮಹತ್ವ ಅರಿವಾಯಿತು ಎಂದು ಅವರು ಹೇಳಿದ್ದಾರೆ.
ಸಿಬಿಐ ಇನ್ಸ್ಪೆಕ್ಟರ್ ಹುದ್ದೆ ದೊರೆತ ಆರಂಭದಲ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಭಾವಿಸಿದ್ದ ಅವರು, ಕಾಲಕ್ರಮೇಣ ಆ ವ್ಯವಸ್ಥೆಯೊಳಗೆ ಮಾನಸಿಕ ಒತ್ತಡ ಅನುಭವಿಸಲಾರಂಭಿಸಿದರು. ಕಾನೂನು ಪಾಲನೆಯ ಹೆಸರಿನಲ್ಲಿ ಜನರೊಂದಿಗೆ ಕಠಿಣವಾಗಿ ಹಾಗೂ ಒರಟಾಗಿ ವರ್ತಿಸಬೇಕಾದ ಪರಿಸ್ಥಿತಿ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಹಣ, ಮನೆ, ಕಾರು ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತು ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬ ಅರಿವಾದ ಬಳಿಕ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು.
ನಂತರ ಹಲವು ರಾಜ್ಯಗಳಲ್ಲಿ ಸಂಚರಿಸಿದ ಅವರು, ಕೊನೆಗೆ ಮಧ್ಯಪ್ರದೇಶದ ಓಂಕಾರೇಶ್ವರದ ಸಮೀಪ ನರ್ಮದಾ ನದಿ ತೀರಕ್ಕೆ ತಲುಪಿದರು. ಅಲ್ಲಿ ಸರಳ ಜೀವನ ಆರಂಭಿಸಿ, ಚಪ್ಪಲಿ ಇಲ್ಲದೆ, ಮಲಗಲು ಚಾಪೆಯನ್ನೂ ಬಳಸದೆ, ದೊರೆಯುವ ಆಹಾರವನ್ನು ಸೇವಿಸುತ್ತಾ ಧ್ಯಾನ ಮತ್ತು ದೇವಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.
ಬಳಿಕ ಬೆಟ್ಟದ ಮೇಲಿರುವ ದೇವಸ್ಥಾನವೊಂದರಲ್ಲಿ ಸಾಧುಗಳೊಂದಿಗೆ ಕೆಲವು ವರ್ಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಗ್ರಾಮದ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಪಾಠವನ್ನೂ ಕಲಿಸಿದರು. ಸದ್ಯ ದಟ್ಟ ಅರಣ್ಯದ ಗುಹೆಗಳಲ್ಲಿ ವಾಸಿಸುತ್ತಿರುವ ಅವರು, ಒಲೆಯ ಮೇಲೆ ಅಡುಗೆ ಮಾಡಿಕೊಂಡು ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಅವರ ಅಭಿಪ್ರಾಯವೇನು?
ಸಮಾಜದಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿರುವ ಮಾಜಿ ಅಧಿಕಾರಿ, ಭ್ರಷ್ಟಾಚಾರದ ಬೀಜ ಮನೆಯಲ್ಲಿಯೇ ಬಿತ್ತನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ನೆರೆಹೊರೆಯವರ ಶ್ರೀಮಂತಿಕೆಯೊಂದಿಗೆ ಹೋಲಿಕೆ ಮಾಡುವುದು ಮಕ್ಕಳಲ್ಲಿ ಹಣ ಮತ್ತು ಐಷಾರಾಮಿ ಜೀವನದ ಮೇಲಿನ ಅತಿಯಾದ ಆಸೆ ಬೆಳೆಸುತ್ತದೆ. ಇಂತಹ ಮನೋಭಾವದಲ್ಲಿ ಬೆಳೆಯುವ ಮಕ್ಕಳು ಮುಂದೆ ಜಿಲ್ಲಾಧಿಕಾರಿ, ವೈದ್ಯ ಅಥವಾ ಎಂಜಿನಿಯರ್ನಂತಹ ಉನ್ನತ ಸ್ಥಾನಕ್ಕೇರಿದರೂ ಸಮಾಜವನ್ನು ಶೋಷಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಅಥವಾ ಸನ್ಯಾಸಿಗಳನ್ನಾಗಿ ರೂಪಿಸುವುದಕ್ಕಿಂತ ಮೊದಲು ಅವರನ್ನು ಉತ್ತಮ ಮನುಷ್ಯರನ್ನಾಗಿ ಬೆಳೆಸುವುದು ಪೋಷಕರ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಕೇವಲ ಬಟ್ಟೆ ಅಥವಾ ವೇಷ ಬದಲಾಯಿಸಿಕೊಳ್ಳುವುದರಿಂದ ಸನ್ಯಾಸಿಯಾಗಲು ಸಾಧ್ಯವಿಲ್ಲ. ತಾನು ಮಾಡುವ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಹೊಂದಿರುವುದೇ ನಿಜವಾದ ಪವಿತ್ರತೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.
ಬಿಗ್ ನ್ಯೂಸ್
Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.
ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.















