ರಾಜಕೀಯ
CM Siddaramaiah ಹೈಕೋರ್ಟ್ ತೀರ್ಪು ಬಳಿಕ ರಾಜೀನಾಮೆ ನೀಡುತ್ತಾರಾ ಸಿದ್ದರಾಮಯ್ಯ? ಸಿಎಂ ಮುಂದಿರುವ ಆಯ್ಕೆ ಏನು?

ಮುಡಾ ಹಗರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠ ವಜಾ ಮಾಡಿದೆ. ಈ ತೀರ್ಪು ಸಿಎಂ ಸಿದ್ದರಾಮಯ್ಯನವರ ಅಕಳಂಕಿತ ರಾಜಕೀಯ ಜೀವನಕ್ಕೆ ಅತಿ ದೊಡ್ಡ ಹಿನ್ನಡೆ ಎಂದು ಹೇಳಲಾಗುತ್ತಿದೆ.
ಈ ತೀರ್ಪಿನ ಬಳಿಕ ಒಂದು ವೇಳೆ ಅವರ ಮೇಲೆ FIR ದಾಖಲಾದರೇ ಆಗ ಅವರು ರಾಜೀನಾಮೆ ನೀಡುವುದು ಅನಿವಾರ್ಯವಾಗಬಹುದು ಎಂದು ಹೇಳಲಾಗುತ್ತಿದೆ. ರಾಜಕೀಯದಲ್ಲಿ ನೈತಿಕತೆಯನ್ನು ಉಳಿಸಿಕೊಂಡಿರುವ ಕೆಲವೇ ಕೆಲವು ರಾಜಕಾರಣಿಗಳಲ್ಲಿ ಸಿದ್ದರಾಮಯ್ಯನವರು ಒಬ್ಬರು. ಹೀಗಾಗಿ ಅವರ ವಿರುದ್ದ FIR ದಾಖಲಾದರೇ ಮುಖ್ಯಮಂತ್ರಿಯಾಗಿದ್ದುಕೊಂಡೆ ತನಿಖೆಯನ್ನು ಎದುರಿಸಲು ಕಾನೂನಿನ ತೊಡಕು ಇಲ್ಲದಿದ್ದರೂ , ನೈತಿಕವಾಗಿ ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಬಹುದು. ಹೀಗಾಗಿ ವಿಭಾಗೀಯ ಪೀಠದಲ್ಲಿ ಇಂದಿನ ತೀರ್ಪಿಗೆ ತಡೆಯಾಜ್ಞೆ ಸಿಗದಿದ್ದಲ್ಲಿ ಸಿದ್ದರಾಮಯ್ಯನವರು ಸಿ ಎಂ ಹುದ್ದೆಗೆ ರಾಜೀನಾಮೆ ನೀಡುವ ಸಂದರ್ಭ ಜಾಸ್ತಿ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಮತ.
ಮುಡಾ ನಿವೇಶನ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಟಿ.ಜೆ. ಅಬ್ರಾಹಂ, ರಾಜ್ಯಪಾಲರಿಗೆ ದೂರು ನೀಡಿದ್ದರು. ಇದೇ ದೂರು ಸಿಎಂ ಸಿದ್ದರಾಮಯ್ಯನವರಿಗೆ ಸಂಕಷ್ಟ ತಂದಿತ್ತು. ಟಿ.ಜೆ. ಅಬ್ರಾಹಂ ನೀಡಿದ ದೂರಿನ ಮೇರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿಮ್ಮ ವಿರುದ್ಧ ಯಾಕೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬಾರದು ಎಂದು ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್ ನೀಡಿದ್ದರು. ಸಿದ್ದರಾಮಯ್ಯಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸಚಿವ ಸಂಪುಟ ನಿರ್ಣಯ ಅಂಗೀಕರಿಸಿತ್ತು. ಆದರೆ ರಾಜ್ಯಪಾಲರು ಸಚಿವ ಸಂಪುಟದ ನಿರ್ಣಯ ಧಿಕ್ಕರಿಸಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದರು.
ರಾಜ್ಯಪಾಲರ ಈ ನಿರ್ಧಾರವನ್ನು ಪ್ರಶ್ನಿಸಿ ಸಿದ್ದರಾಮಯ್ಯನವರು ಹೈಕೋರ್ಟ್ ಎಕ ಸದಸ್ಯ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು . ಈ ಕುರಿತ ವಾದ ವಿವಾದವನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿತ್ತು
ತೀರ್ಪಿನಲ್ಲಿ ಏನಿದೆ ?
ಸಿಎಂ ವಿರುದ್ಧ ಖಾಸಗಿ ದೂರುದಾರರೇ ಅನುಮತಿ ಕೋರಬಹುದು. ಸಂವಿಧಾನದ ವಿಧಿ ‘17 ಎ’ ಅಡಿ ಅನುಮತಿ ಕೋರಿದ್ದು ಸರಿಯಾಗಿದೆ. ಸಚಿವ ಸಂಪುಟದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸಿದ್ದು ಸರಿಯಾಗಿದೆ. ರಾಜ್ಯಪಾಲರು ವಿವೇಚನೆ ಬಳಸಿದ್ದಾರೆ. ‘17 ಎ’ ಅಡಿಯ ಆದೇಶ ಸಮರ್ಪಕವಾಗಿದೆ ಎಂದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ವಜಾಗೊಳಿಸಿದರು.ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಸಿಎಂ ಕುಟುಂಬಸ್ಥರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ರಾಜ್ಯಪಾಲರ ಕ್ರಮ ಸೂಕ್ತವಾಗಿದೆ. ಸಿಎಂ ಎತ್ತಿದ್ದ ಎಲ್ಲಾ ಕಾನೂನಿನ ಪ್ರಶ್ನೆಗಳನ್ನು ತಿರಸ್ಕರಿಸಲಾಗಿದೆ ಎಂದಿದೆ.
ತಡೆ ಕೋರಿ ಸಿಎಂ ಪರ ವಕೀಲರಿಂದ ಮನವಿ
ತೀರ್ಪು ಪ್ರಕಟವಾದ ಬಳಿಕ ಸಿಎಂ ಸಿದ್ದರಾಮಯ್ಯ ಪರ ವಕೀಲ ಮನು ಸಂಘ್ವಿ ಅವರು ಸಿಎಂ ವಿರುದ್ಧ ಯಾವುದೇ ಕ್ರಮ ಜರುಗಿಸದಂತೆ 2 ವಾರ ಕಾಲಾವಕಾಶ ನೀಡಿ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳು, “ನನ್ನ ಆದೇಶಕ್ಕೆ ನಾನೇ ತಡೆಯಾಜ್ಞೆ ನೀಡಲು ಬರುವುದಿಲ್ಲ. ವಿಭಾಗೀಯ ಪೀಠದ ಮೊರೆ ಹೋಗಬಹುದು ” ಎಂದು ಸಲಹೆ ನೀಡಿದರು.
ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ್ಯಾಯಪೀಠ ತೀರ್ಪು ಪ್ರಕಟ ಬಗ್ಗೆ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸಾರಿಗೆ ಇಲಾಖೆಯಿಂದ ನಡೆಯುತ್ತಿರುವ ನಮ್ಮ ರಸ್ತೆಗಳು ನಮ್ಮ ಜವಾಬ್ದಾರಿ ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ” ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ, ಈ ಸಂದರ್ಭದಲ್ಲಿ ಮಾತನಾಡಲ್ಲ ” ಎಂದರು
ಸಿಎಂ ಮುಂದಿರುವ ಆಯ್ಕೆ ಏನು?
• ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ವಿಭಾಗೀಯ ಪೀಠದ ಮೊರೆ ಹೋಗಬಹುದು
• ಆ ಬಳಿಕ ಅಲ್ಲಿನ ತೀರ್ಪು ಕೂಡ ಸಿಎಂ ವಿರುದ್ಧ ಬಂದರೆ ಸುಪ್ರೀಂ ಕೋರ್ಟ್ಗೂ ತೆರಳಬಹುದು.
• ಹೈಕೋರ್ಟ್ ತೀರ್ಪು ಹಿನ್ನೆಲೆ ನೈತಿಕತೆಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅಥವಾ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೇ ತನಿಖೆ ಎದುರಿಸುವುದು
• .ಹೈಕಮಾಂಡ್ ಸಿಎಂ ಸ್ಥಾನದಿಂದ ಇಳಿಯಬೇಕು ಅಂತ ಒತ್ತಡ ಹಾಕಿದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ತಾವು ಹೇಳಿದವರನ್ನ ಸಿಎಂ ಮಾಡಬಹುದು
• ತನಿಖೆ ಮುಗಿದ ಬಳಿಕ ಮತ್ತೆ ಸಿಎಂ ಸ್ಥಾನ ಏರುವುದು
ರಾಜಕೀಯ
BJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಪುತ್ತೂರು: ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನರಸಿಂಹ ಮಾಣಿ ಅವರು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ ಮುಖಂಡರು, ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಇರುವಂತೆ ಪ್ರೇರಣೆ ನೀಡಿದರು.

ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಕುಟುಂಬದೊಂದಿಗೆ ಸಮಾಜ ನಿಲ್ಲಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಭೇಟಿಯ ವೇಳೆ ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ರತನ್ ರೈ ಕುಂಬ್ರ, ಪುತ್ತೂರು ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಯುವಮೋರ್ಚಾದ ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ವಿಶ್ವನಾಥ ಕುಲಾಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜೇಶ್ ಉಪಸ್ಥಿತರಿದ್ದರು.
ಮಂಗಳೂರು
Lakshman Sawadi-ಸಹಕಾರಿ ಕ್ಷೇತ್ರದ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ಗೆ ಹೊಸ ಶಕ್ತಿ; ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಸಚಿವ ಲಕ್ಷ್ಮಣ ಸವದಿ ಕರೆ
ಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಗ್ರಾಮೀಣ ಮಟ್ಟದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಕ್ಷದ ಮೂಲ ಬೇರುಗಳಿದ್ದಂತೆ. ಜಿಲ್ಲೆಯ ಯಾವ ಗ್ರಾಮಗಳಲ್ಲಿ ಇನ್ನೂ ಸಹಕಾರಿ ಸಂಘಗಳು ಸ್ಥಾಪನೆಯಾಗಿಲ್ಲವೋ ಅಂತಹ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡಿದರೆ, ತಕ್ಷಣವೇ ಅಧಿಕಾರಿಗಳ ಮೂಲಕ ನೋಂದಣಿ ಮಾಡಿಸಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (DCC) ಸದಸ್ಯತ್ವ ಕೊಡಿಸಲಾಗುವುದು ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದರು.
“2008ರಲ್ಲಿ ನಾನು ಸಹಕಾರ ಸಚಿವನಾಗಿದ್ದಾಗ ಕೃಷಿ ಸಾಲದ ಬಡ್ಡಿದರವನ್ನು ಶೇ.3ಕ್ಕೆ ಇಳಿಸಿದ್ದೆ. ಆದರೆ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅವಧಿಗೆ ಮುನ್ನ ಸಾಲ ಮರುಪಾವತಿಸುವವರಿಗೆ ಶೇ.3ರಷ್ಟು ಸಹಾಯಧನ ಘೋಷಿಸಿದ್ದರಿಂದ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವಂತಾಯಿತು. ಈ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಜೈನ ಅಭಿವೃದ್ಧಿ ನಿಗಮಕ್ಕೆ ಸಿಎಂ ಅನುಮೋದನೆ:
ಕಾಂಗ್ರೆಸ್ ಪಕ್ಷಕ್ಕೆ ‘ಹಸ್ತದ ಚಿಹ್ನೆ’ ಸಿಕ್ಕ ಇತಿಹಾಸವನ್ನು ಸ್ಮರಿಸಿದ ಸವದಿ, “ತುರ್ತು ಪರಿಸ್ಥಿತಿಯ ನಂತರ ಚಿಹ್ನೆಯ ವ್ಯಾಜ್ಯ ಎದುರಾದಾಗ ನಮ್ಮ ಭಾಗದ ಜೈನ ಮುನಿ ಶ್ರೀ ವಿದ್ಯಾನಂದ ಮುನಿಗಳು ಇಂದಿರಾ ಗಾಂಧಿ ಅವರಿಗೆ ಬೆಳ್ಳಿಯ ಹಸ್ತದ ಚಿಹ್ನೆ ನೀಡಿ ಆಶೀರ್ವದಿಸಿದ್ದರು. ಆ ಸಮಾಜದ ಋಣ ತೀರಿಸುವ ಉದ್ದೇಶದಿಂದ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿರುವ ಜೈನ ಸಮುದಾಯದ ಬೇಡಿಕೆಯಂತೆ, ಪ್ರತ್ಯೇಕ ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳಿಂದ ಕಡತಕ್ಕೆ ಅನುಮೋದನೆ ಪಡೆಯಲಾಗಿದೆ,” ಎಂದು ಮಾಹಿತಿ ನೀಡಿದರು.
ಸಚಿವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಗೌರವಿಸಿದರು.
ಮಾಜಿ ಸಚಿವ ಬಿ. ರಮಾನಾಥ್ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪರಿಸರಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೋ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ವಿಶ್ವಾಸ್ ದಾಸ್, ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.















