ಬಿಗ್ ನ್ಯೂಸ್
ಆರತಿ ಎತ್ತಿ ಕರೆದು ಮಂಗಳಾರತಿ ಮಾಡಿದ್ರು..! ಬಿಜೆಪಿ ಶುದ್ದೀಕರಣಕ್ಕೆ ಜನರನ್ನು ಕ್ರೊಡಿಕರಿಸುತ್ತೇನೆ : ಪಕ್ಷದ ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ – ಯಡಿಯೂರಪ್ಪ ವಿರುದ್ಧ ಡಿವಿ ಸದಾನಂದ ಗೌಡ ಆಕ್ರೋಶ
ಬೆಂಗಳೂರು: ಕಾಂಗ್ರೆಸ್‌ನಿಂದ ನನಗೆ ಆಹ್ವಾನ ಬಂದಿರುವುದು ನಿಜ. ನಾವು ನಿಮಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಆಹ್ವಾನ ಬಂದಿತ್ತು. ಆದರೆ ನಾನು, ಕಾಂಗ್ರೆಸ್ ಸೇರಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಸ್ಪಷ್ಟಪಡಿಸಿದರು.
ಬೆಂಗಳೂರಿನ ಸಂಜಯ ನಗರ ನಿವಾಸದಲ್ಲಿ ಗುರುವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಡಿವಿ ಸದಾನಂದ ಗೌಡ, ‘ನಾನು ಪಕ್ಷ ಶುದ್ದೀಕರಣ ಮಾಡುವತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದರು. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಪಶ್ಚಾತ್ತಾಪ ಅನುಭವಿಸುತ್ತಾರೆ ಎಂದರು.
‘ರಾಜ್ಯದಲ್ಲಿ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು’
“ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು. ಅವರು ಪರಿವರ್ತನೆಯ ಹರಿಕಾರ. ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಇದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಜನರ ಪರವಾದ ಹಾಗೂ ಜನರು ಒಪ್ಪಿಕೊಳ್ಳುವ ಪಕ್ಷವಾಗಬೇಕು,” ಎಂದು ಸದಾನಂದ ಗೌಡ ತಿಳಿಸಿದರು.
ಮೋದಿ, ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಪರಿವಾರವಾದ, ಭ್ರಷ್ಟಾಚಾರವಾದ, ಜಾತಿವಾದ ಮುಕ್ತವಾದ ಪಕ್ಷ ಬಿಜೆಪಿ ಆಗಬೇಕು. ಶುದ್ದೀಕರಣದ ಅಭಿಯಾನಕ್ಕೆ ವೇಗ ಕೊಡಲು ನನ್ನಿಂದ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ನಾನು ಪಕ್ಷಕ್ಕಾಗಿ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತ. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ಪಕ್ಷದಲ್ಲಿ ಒಂದಷ್ಟು ಜನರು ಶುದ್ಧೀಕರಣ ಬಯಸುತ್ತಿದ್ದಾರೆ. ಅವರನ್ನು ಕ್ರೋಢೀಕರಿಸಲಾಗುತ್ತದೆ ಎಂದು ಡಿವಿಎಸ್ ವಿವರಿಸಿದರು.
ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ, ಮಕ್ಕಳು, ಜಾತಿ, ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು ಬಿಜೆಪಿ ಎಂದು ಅಭಿಪ್ರಾಯಪಟ್ಟರು. ಆದರೆ, ಅದು ಆಗುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಬಿಜೆಪಿ ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗುತ್ತಿದೆ. ಸರ್ವಾಧಿಕಾರ ರಾಜಕೀಯದಲ್ಲಿ ನಡೆಯುವುದಿಲ್ಲ. ಬಿಜೆಪಿ ಶುದ್ದೀಕರಣ ಆಗುವವರೆಗೆ ನಾನು ವಿರಮಿಸುದಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಶುದ್ದೀಕರಣ ಕಾರ್ಯಕ್ಕೆ ವೇಗ ಕೊಡಲಾಗುವುದು ಎಂದು ಸದಾನಂದ ಗೌಡ ಘೋಷಿಸಿದರು.
ಯಾವುದೇ ಬೆಲೆ ತೆತ್ತಾದರೂ ನಾನು ಪಕ್ಷ ಶುದ್ದೀಕರಣ ಕೆಲಸ ಮಾಡುತ್ತೇನೆ. ಆಡಳಿತ ಮಾಡುವವರು ಸತ್ಯವಂತರಾಗಬೇಕು. ಸುಳ್ಳು ಹೇಳಬಾರದು. ಬೆಂಗಳೂರು ಉತ್ತರದಲ್ಲಿ ಟಿಕೆಟ್‌ಗಾಗಿ ಒಬ್ಬನ ಹೆಸರು ಮಾತ್ರ ಇತ್ತು. 142 ಜನರು ನನ್ನ ಹೆಸರನ್ನು ಆಯ್ಕೆ ಮಾಡಿದ್ದರು. ಆದರೆ ಇದನ್ನು ಕೇಂದ್ರದಲ್ಲಿ ಮಂಡನೆ ಮಾಡಲು ಸಾಧ್ಯವಾಗದವರು ನಮ್ಮ ನಾಯಕರಲ್ಲ. ಕೆಎಸ್ ಈಶ್ವರಪ್ಪ ಈಗಾಗಲೇ ಹಲವಾರು ಸಂಗತಿಗಳನ್ನು ಹೇಳಿದ್ದಾರೆ ಎಂದರು.
‘ಶೋಭಾ ಕರಂದ್ಲಾಜೆ ಅವರಿಗೆ ಬೆಂಬಲ ಕೊಡುತ್ತೀರಾ?’ ಎಂಬ ಪ್ರಶ್ನೆಗೆ, “ಶೋಭಾ ಕರಂದ್ಲಾಜೆ ಪರವಾಗಿ ನಾನು ಈಗಾಗಲೇ ಪ್ರಚಾರ ಮಾಡಿದ್ದೇನೆ. ಅವರಿಗೆ ಬೆಂಬಲ ಕೊಡದೆ ಇರುವ ಪ್ರಶ್ನೆ ಇಲ್ಲಿ ಉದ್ಭವವೇ ಆಗಲ್ಲ,” ಎಂದರು.
ಆರತಿ ಎತ್ತಿ ಕರೆದು ಮಂಗಳಾರತಿ ಮಾಡಿದ್ರು!
ನನ್ನನ್ನು ಚೆಂದ ಆರತಿ ಎತ್ತಿ, ‘ಬನ್ನಿ, ಸ್ಪರ್ಧೆ ಮಾಡಿ’ ಎಂದು ಕರೆದರು. ಆದರೆ ಈಗ ಮಂಗಳಾರತಿ ಮಾಡಿ ಕಳಿಸಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗ ಸಂಘದ ಭೇಟಿ ವಿಚಾರವಾಗಿ ಮಾತನಾಡಿ, “ಒಕ್ಕಲಿಗ ಸಂಘದವರು ನಮ್ಮ ಸಮಾಜಕ್ಕೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ಕಡಿಮೆ ಆಗ್ತಿದೆ ಎಂದಿದ್ದಾರೆ. ದೇವೇಗೌಡರ ಮೆಟೀರಿಯಲ್‌ಗೆ ಬಿಜೆಪಿ ತನ್ನ ಸ್ಟಿಕ್ಕರ್ ಅಂಟಿಸುತ್ತಿದೆ,” ಎಂದು ಹೇಳಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.
ಮಂಗಳೂರು
Pugasarum-ಅಡಕೆ, ವೀಳ್ಯದೆಲೆಯ ‘ಪೂಗಸಾರಂ’ನಿಂದ ಕ್ಯಾನ್ಸರ್ ಬೆಳವಣಿಗೆಗೆ ಕಡಿವಾಣ? ಮಂಗಳೂರಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಮಹತ್ವದ ಅಂಶ ಪತ್ತೆ..!
ಅಡಕೆ ಮತ್ತು ವೀಳ್ಯದೆಲೆಯನ್ನು ಪ್ರಧಾನವಾಗಿ ಬಳಸಿ ತಯಾರಿಸಿದ ಸಂಯುಕ್ತ ಗಿಡಮೂಲಿಕೆ ಮಿಶ್ರಣವು ಕ್ಯಾನ್ಸರ್ ಬೆಳವಣಿಗೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ ಎಂಬ ಮಹತ್ವದ ಅಂಶವನ್ನು ದಕ್ಷಿಣ ಕನ್ನಡದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆ ಬಹಿರಂಗಪಡಿಸಿದೆ.
ಮಂಗಳೂರು: ಅಡಕೆ ಮತ್ತು ವೀಳ್ಯದೆಲೆಯನ್ನು ಪ್ರಧಾನವಾಗಿ ಬಳಸಿ ತಯಾರಿಸಿದ ಸಂಯುಕ್ತ ಗಿಡಮೂಲಿಕೆ ಮಿಶ್ರಣವು ಕ್ಯಾನ್ಸರ್ ಬೆಳವಣಿಗೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ ಎಂಬ ಮಹತ್ವದ ಅಂಶವನ್ನು ದಕ್ಷಿಣ ಕನ್ನಡದ ವಿಜ್ಞಾನಿಗಳ ತಂಡ ನಡೆಸಿದ ಸಂಶೋಧನೆ ಬಹಿರಂಗಪಡಿಸಿದೆ.
ಅಳಿಕೆಯ ಜೆಡ್ಡು ಆಯುರ್ವೇದ ಸಂಶೋಧನಾ ಕೇಂದ್ರ ಹಾಗೂ ಮಂಗಳೂರಿನ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವಿಜ್ಞಾನಿಗಳು ನಡೆಸಿದ ಈ ಅಧ್ಯಯನದಲ್ಲಿ ‘ಪೂಗಸಾರಂ’ ಎಂಬ ಪಾಲಿಹರ್ಬಲ್ ಜೆಲ್‌ನ ಕ್ಯಾನ್ಸರ್ ವಿರೋಧಿ ಗುಣಗಳನ್ನು ಪರೀಕ್ಷಿಸಲಾಗಿದೆ. ಈ ಸಂಶೋಧನೆಯ ಫಲಿತಾಂಶಗಳನ್ನು ‘ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಫಾರ್ಮಸಿ ರಿಸರ್ಚ್ ಆ್ಯಂಡ್ ಟೆಕ್ನಾಲಜಿ’ (IJPRFT) ವೈಜ್ಞಾನಿಕ ನಿಯತಕಾಲಿಕೆಯ 2026ರ ಜನವರಿ-ಜೂನ್ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ.
ಇಲಿಗಳ ಮೇಲಿನ ಪ್ರಯೋಗದಲ್ಲಿ ಸಕಾರಾತ್ಮಕ ಫಲಿತಾಂಶ
ಅಡಕೆ ಮತ್ತು ವೀಳ್ಯದೆಲೆಯೊಂದಿಗೆ ಇತರ ಏಳೆಂಟು ಔಷಧೀಯ ಸಸ್ಯಗಳ ಅಂಶಗಳನ್ನು ಸೇರಿಸಿ ಪೂಗಸಾರಂ ಎಂಬ ಜೆಲ್ ಸಿದ್ಧಪಡಿಸಲಾಗಿದೆ. ಇದರ ಪರಿಣಾಮಕಾರಿತ್ವವನ್ನು ಆರಂಭದಲ್ಲಿ ಯೆನಪೋಯ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಕ್ಯಾನ್ಸರ್ ಕೋಶಗಳ ಮೇಲೆ ಪರೀಕ್ಷಿಸಲಾಗಿತ್ತು. ಬಳಿಕ ಇಲಿಗಳ ಮೇಲೆ ಪ್ರಯೋಗ ನಡೆಸಲಾಯಿತು.
ಪ್ರಯೋಗದ ಭಾಗವಾಗಿ ಇಲಿಗಳ ಕೆಳತುಟಿಗಳಲ್ಲಿ ಡಿಎಂಬಿಎ (DMBA) ಎಂಬ ಕ್ಯಾನ್ಸರ್‌ಕಾರಕ ರಾಸಾಯನಿಕ ಬಳಸಿ ಕ್ಯಾನ್ಸರ್ ಉಂಟುಮಾಡಲಾಯಿತು. ನಂತರ ಎಂಟು ವಾರಗಳ ಕಾಲ ಪ್ರತಿದಿನವೂ ಪೂಗಸಾರಂ ಜೆಲ್ ಹಚ್ಚಿ ಅದರ ಪರಿಣಾಮವನ್ನು ಗಮನಿಸಲಾಯಿತು.
ಈ ವೇಳೆ ಇಲಿಗಳಲ್ಲಿ ಕಾಣಿಸಿಕೊಂಡ ಕ್ಯಾನ್ಸರ್ ಗಡ್ಡೆಗಳ ಗಾತ್ರ ಹಾಗೂ ಅವುಗಳ ಹರಡುವಿಕೆ ಗಣನೀಯವಾಗಿ ಕಡಿಮೆಯಾಗಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. ಕೆಲವು ಇಲಿಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಸಿಸ್ಪ್ಲಾಟಿನ್ (Cisplatin) ಔಷಧಕ್ಕಿಂತಲೂ ಪೂಗಸಾರಂ ಹೆಚ್ಚು ಪರಿಣಾಮಕಾರಿ ಫಲಿತಾಂಶ ನೀಡಿದೆ ಎಂದು ಸಂಶೋಧನಾ ತಂಡ ತಿಳಿಸಿದೆ.
ಅಡಕೆಯ ಮೌಲ್ಯವರ್ಧನೆಗೆ ಸಂಶೋಧನೆ ಬಲ
ಅಡಕೆಯಲ್ಲಿ ಆರೋಗ್ಯಕ್ಕೆ ಪೂರಕವಾದ ಅಂಶಗಳಿವೆ ಎಂಬುದನ್ನು ಹಲವು ಸಂಶೋಧನೆಗಳು ಈಗಾಗಲೇ ಪ್ರಸ್ತಾಪಿಸಿವೆ. ಆದರೆ ವಿದೇಶಗಳಲ್ಲಿ ನಡೆದ ಕೆಲವು ಅಧ್ಯಯನಗಳು ಅಡಕೆಯನ್ನು ಕ್ಯಾನ್ಸರ್‌ಕಾರಕ ಎಂದು ಗುರುತಿಸಿವೆ. ಈ ಹಿನ್ನೆಲೆಯಲ್ಲಿ ಪೂಗಸಾರಂ ಕುರಿತ ಸಂಶೋಧನೆಯು ಅಡಕೆಯ ಔಷಧೀಯ ಗುಣಗಳ ಕುರಿತು ಮತ್ತಷ್ಟು ಅಧ್ಯಯನಕ್ಕೆ ಹೊಸ ಅವಕಾಶ ಕಲ್ಪಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಸಂಶೋಧನೆಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆ ಮೂಲಕ ಅಡಕೆಯ ಕುರಿತಿರುವ ನಕಾರಾತ್ಮಕ ಅಭಿಪ್ರಾಯಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಅದರ ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು ಎಂದು ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ ಮನವಿ ಮಾಡಿದ್ದಾರೆ.
ಸಂಶೋಧನೆಯಲ್ಲಿ ಅಚ್ಚರಿಯ ಫಲಿತಾಂಶ
ಯೆನಪೋಯ ವಿಶ್ವವಿದ್ಯಾಲಯದ ಪ್ರಯೋಗಾಲಯದಲ್ಲಿ ಕ್ಯಾನ್ಸರ್ ಸೆಲ್ ಲೈನ್‌ಗಳ ಮೇಲೆ ನಡೆಸಿದ ಪ್ರಯೋಗದಲ್ಲಿ ಯಶಸ್ಸು ಕಂಡ ಬಳಿಕ ಇಲಿಗಳ ಮೇಲೆ ಪೂಗಸಾರಂ ಬಳಸಿ ಪರೀಕ್ಷೆ ನಡೆಸಲಾಯಿತು. ಈ ಪ್ರಯೋಗದಲ್ಲಿ ಅಚ್ಚರಿಯ ಫಲಿತಾಂಶ ಲಭಿಸಿದೆ. ಸಂಶೋಧನೆಯ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ವಿಜ್ಞಾನಿ ಡಾ. ಎಸ್. ಕೇಶವ ಭಟ್ ತಿಳಿಸಿದ್ದಾರೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (CPCRI) ನಡೆಸುತ್ತಿರುವ ಅಡಕೆ ಸಂಶೋಧನೆಗಳಿಗೂ ಈ ಅಧ್ಯಯನವು ಪೂರಕವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯ
Subrahmanya-ಸುಬ್ರಹ್ಮಣ್ಯ: ಮನೆಗೆ ರಾತ್ರಿ ನಕ್ಸಲರ ಭೇಟಿ ಪ್ರಕರಣ: ಮಾಜಿ ನಕ್ಸಲರಾದ ರವೀಂದ್ರ, ಸುಂದರಿ, ದಿಶಾರಿಂದ ಸ್ಥಳ ಮಹಜರು
ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಮನೆಗೆ ರಾತ್ರಿ ವೇಳೆ ಭೇಟಿ ನೀಡಿ ಊಟ ಮಾಡಿ, ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿದ್ದ ನಾಲ್ವರು ನಕ್ಸಲರ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜೈಲಿನಿಂದ ಕರೆತರಲಾದ ಮೂವರು ಮಾಜಿ ನಕ್ಸಲರಿಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಸುಬ್ರಹ್ಮಣ್ಯ, ನ.23: ಎರಡು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಮನೆಗೆ ರಾತ್ರಿ ವೇಳೆ ಭೇಟಿ ನೀಡಿ ಊಟ ಮಾಡಿ, ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿದ್ದ ನಾಲ್ವರು ನಕ್ಸಲರ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಜೈಲಿನಿಂದ ಕರೆತರಲಾದ ಮೂವರು ಮಾಜಿ ನಕ್ಸಲರಿಂದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
2024ರ ಮಾರ್ಚ್ 23ರಂದು ರಾತ್ರಿ ನಾಲ್ವರು ನಕ್ಸಲರು ಐನೆಕಿದು ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿ ಊಟ ಮಾಡಿದ್ದಲ್ಲದೆ, ದಿನಸಿ ಸಾಮಗ್ರಿಗಳನ್ನು ಪಡೆದುಕೊಂಡು ತೆರಳಿದ್ದರು. ಇದಕ್ಕೂ ಎರಡು ದಿನಗಳ ಮೊದಲು ಕಲ್ಮಕಾರು ಭಾಗದ ಕಡಮಕಲ್ ಎಸ್ಟೇಟ್‌ಗೂ ನಕ್ಸಲರು ಭೇಟಿ ನೀಡಿದ್ದರು ಎನ್ನಲಾಗಿತ್ತು.
ಈ ಘಟನೆ ಆ ಸಂದರ್ಭದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ನಕ್ಸಲ್ ನಿಗ್ರಹ ಪಡೆಗಳು ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದವು. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್‌ನಲ್ಲಿ ನಕ್ಸಲರ ಭೇಟಿಯ ಬಗ್ಗೆ ಉಲ್ಲೇಖಿಸಲಾಗಿದ್ದರೂ, ಯಾರ ಹೆಸರನ್ನೂ ದಾಖಲಿಸಿರಲಿಲ್ಲ.
ಬಳಿಕ ಕರ್ನಾಟಕ ಸರಕಾರದ ಪ್ರಸ್ತಾವನೆಯಂತೆ ಶರಣಾಗಿದ್ದ ಈ ನಕ್ಸಲರು ತ್ರಿಶೂರ್ ಜೈಲಿನಲ್ಲಿದ್ದರು. ಪ್ರಕರಣದ ತನಿಖೆ ಹಾಗೂ ನ್ಯಾಯಾಲಯದ ವಿಚಾರಣೆಯ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರು ತ್ರಿಶೂರ್‌ಗೆ ತೆರಳಿ ನ.17ರಂದು ಮಾಜಿ ನಕ್ಸಲರಾದ ರವೀಂದ್ರ, ಸುಂದರಿ ಮತ್ತು ದಿಶಾ ಅವರನ್ನು ವಶಕ್ಕೆ ಪಡೆದಿದ್ದರು.
ನಂತರ ಕರ್ನಾಟಕ ಹೈಕೋರ್ಟ್‌ಗೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆದ ಪೊಲೀಸರು, ಮೂವರನ್ನು ಐನೆಕಿದು ಗ್ರಾಮದ ತೋಟದಮಜಲು ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ನಕ್ಸಲರು ತಾವು ಭೇಟಿ ನೀಡಿದ್ದ ಮನೆ ಹಾಗೂ ದಿನಸಿ ಸಾಮಗ್ರಿಗಳನ್ನು ಪಡೆದುಕೊಂಡಿದ್ದ ಸ್ಥಳವನ್ನು ಪೊಲೀಸರಿಗೆ ತೋರಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೂವರನ್ನು ಮತ್ತೆ ಹೈಕೋರ್ಟ್‌ಗೆ ಹಾಜರುಪಡಿಸಿ, ಅಲ್ಲಿಂದ ತ್ರಿಶೂರ್ ಜೈಲಿಗೆ ಕರೆದೊಯ್ದು ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಅಂತರ ರಾಜ್ಯ
WhatsApp Web: WhatsApp Web ಬಳಕೆದಾರರೇ ಎಚ್ಚರ..! ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗದಿದ್ದರೆ ನಿಮ್ಮ ಖಾಸಗಿ ಚಾಟ್ ಬೇರೆಯವರ ಪಾಲು; ಕೇಂದ್ರ ಸರಕಾರದಿಂದ ಮಹತ್ವದ ಎಚ್ಚರಿಕೆ
ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಹೊಸದಿಲ್ಲಿ: ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ WhatsApp Web ಬಳಸುವಾಗ ಎಚ್ಚರಿಕೆ ವಹಿಸುವಂತೆ ಕೇಂದ್ರ ಸರಕಾರದ ಸೈಬರ್ ಅಪರಾಧ ನಿಗ್ರಹ ಘಟಕವಾದ ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ (I4C) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ಈ ಕುರಿತು ಹೊಸ ಸಲಹಾಸೂಚಿ ಬಿಡುಗಡೆ ಮಾಡಿರುವ ನ್ಯಾಷನಲ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್‌ನ ನ್ಯಾಷನಲ್ ಸೈಬರ್ ಕ್ರೈಂ ಥ್ರೆಟ್ ಅನಾಲಿಟಿಕ್ಸ್ ಯೂನಿಟ್, ಕಂಪ್ಯೂಟರ್‌ನಲ್ಲಿ WhatsApp Web ಲಾಗಿನ್ ಆಗಿಯೇ ಉಳಿದಿದ್ದರೆ ಅನಧಿಕೃತ ವ್ಯಕ್ತಿಗಳು ಬಳಕೆದಾರರ ಖಾಸಗಿ ಸಂದೇಶಗಳು, ಸಂಪರ್ಕ ಸಂಖ್ಯೆಗಳು ಹಾಗೂ ಗ್ರೂಪ್ ಚಾಟ್‌ಗಳನ್ನು ವೀಕ್ಷಿಸುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಅಷ್ಟೇ ಅಲ್ಲದೆ, ಬಳಕೆದಾರರ ಖಾತೆಯನ್ನು ದುರುಪಯೋಗಪಡಿಸಿಕೊಂಡು ಅವರ ಹೆಸರಿನಲ್ಲಿ ಇತರರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ವಂಚನೆ ಹಾಗೂ ವಿವಿಧ ಸೈಬರ್ ಹಗರಣಗಳನ್ನು ನಡೆಸುವ ಅಪಾಯವೂ ಇದೆ ಎಂದು ಎಚ್ಚರಿಸಿದೆ.
ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗಲೇಬೇಕು!
ಬಹುತೇಕ ಬಳಕೆದಾರರು WhatsApp Web ಬಳಸಿದ ಬಳಿಕ ಬ್ರೌಸರ್ ವಿಂಡೋ ಅಥವಾ ಟ್ಯಾಬ್ ಮುಚ್ಚುವುದರಿಂದ ಖಾತೆ ಲಾಗೌಟ್ ಆಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಕೇವಲ ಟ್ಯಾಬ್ ಮುಚ್ಚುವುದರಿಂದ ಲಾಗಿನ್ ಅವಧಿ ಅಂತ್ಯಗೊಳ್ಳುವುದಿಲ್ಲ. ಹೀಗಾಗಿ ಪ್ರತಿ ಬಾರಿ ಬಳಕೆ ಮುಗಿದ ತಕ್ಷಣ ಖಾತೆಯಿಂದ ಲಾಗೌಟ್ ಆಗುವುದು ಕಡ್ಡಾಯ ಎಂದು ಸಲಹೆ ನೀಡಿದೆ.
ಇತರರೂ ಬಳಸಬಹುದಾದ ಕಚೇರಿ ಕಂಪ್ಯೂಟರ್‌ಗಳು, ಹಂಚಿಕೆಯ ಕಂಪ್ಯೂಟರ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿನ ಸಾಧನಗಳಲ್ಲಿ WhatsApp Web ಬಳಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಇಂತಹ ಕಂಪ್ಯೂಟರ್‌ಗಳಲ್ಲಿ ಸರಕಾರಿ, ಸಾಂಸ್ಥಿಕ, ಹಣಕಾಸು, ಗೌಪ್ಯ ಅಥವಾ ಇತರ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಸೂಚಿಸಿದೆ.
ಸೈಬರ್ ಕೆಫೆಗಳು, ಹೋಟೆಲ್‌ಗಳ ವ್ಯವಹಾರ ಕೇಂದ್ರಗಳು, ಸಾರ್ವಜನಿಕ ಸ್ಥಳಗಳು ಹಾಗೂ ಬಾಡಿಗೆಗೆ ಪಡೆದ ಕಂಪ್ಯೂಟರ್‌ಗಳಂತಹ ವಿಶ್ವಾಸಾರ್ಹವಲ್ಲದ ಸಾಧನಗಳಲ್ಲಿ WhatsApp Webಗೆ ಲಾಗಿನ್ ಆಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಅನಿವಾರ್ಯವಾಗಿ ಬಳಸಬೇಕಾದರೆ ಇನ್‌ಕಾಗ್ನಿಟೊ ಅಥವಾ ಪ್ರೈವೇಟ್ ಬ್ರೌಸಿಂಗ್ ಮೋಡ್ ಬಳಸುವಂತೆ ಶಿಫಾರಸು ಮಾಡಿದೆ.
ಈ ಲಕ್ಷಣಗಳು ಕಂಡುಬಂದರೆ ಎಚ್ಚರ!
ತಮ್ಮ ಖಾತೆಯಿಂದ ತಮಗೆ ತಿಳಿಯದೆಯೇ ಸಂದೇಶಗಳು ರವಾನೆಯಾಗುವುದು, ಸಂಪರ್ಕದಲ್ಲಿರುವವರಿಂದ ಅಸಹಜ ಪ್ರತಿಕ್ರಿಯೆಗಳು ಬರುವುದು ಅಥವಾ ಖಾತೆಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಎಚ್ಚರಿಕೆ ವಹಿಸಬೇಕು. ಇವು ಖಾತೆಗೆ ಅನಧಿಕೃತ ಪ್ರವೇಶವಾಗಿರುವ ಸೂಚನೆಗಳಾಗಿರಬಹುದು ಎಂದು ತಿಳಿಸಿದೆ.
ಇದರೊಂದಿಗೆ ಡಿಜಿಟಲ್ ಸಾಧನಗಳು, ಕಂಪ್ಯೂಟರ್‌ಗಳು, ಬ್ರೌಸರ್‌ಗಳು ಹಾಗೂ ಭದ್ರತಾ ಸಾಫ್ಟ್‌ವೇರ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಬೇಕು. ಅನುಮಾನಾಸ್ಪದ ಡೌನ್‌ಲೋಡ್‌ಗಳು, ಅಪರಿಚಿತ ಫೈಲ್‌ಗಳು ಹಾಗೂ ಕ್ರ್ಯಾಕ್ ಮಾಡಿದ ಸಾಫ್ಟ್‌ವೇರ್‌ಗಳನ್ನು ಬಳಸಬಾರದು ಎಂದು ಸಲಹೆ ನೀಡಿದೆ.
ಒಟ್ಟಿನಲ್ಲಿ, WhatsApp Web ಬಳಕೆ ಮುಗಿದ ಬಳಿಕ ಕಡ್ಡಾಯವಾಗಿ ಲಾಗೌಟ್ ಆಗುವುದು, ಅಪರಿಚಿತ ಹಾಗೂ ವಿಶ್ವಾಸಾರ್ಹವಲ್ಲದ ಕಂಪ್ಯೂಟರ್‌ಗಳಲ್ಲಿ ಲಾಗಿನ್ ಆಗುವುದನ್ನು ತಪ್ಪಿಸುವುದು ಮತ್ತು ಖಾತೆಯಲ್ಲಿನ ಅಸಹಜ ಚಟುವಟಿಕೆಗಳ ಮೇಲೆ ನಿಗಾ ಇಡುವ ಮೂಲಕ ಖಾತೆ ದುರುಪಯೋಗ ಹಾಗೂ ಹಣಕಾಸು ವಂಚನೆಗಳ ಅಪಾಯವನ್ನು ಕಡಿಮೆ ಮಾಡಬಹುದು ಎಂದು I4C ತಿಳಿಸಿದೆ.
-
ಶಿಕ್ಷಣ18 hours agoVidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
-
ಮಂಗಳೂರು18 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಬಿಗ್ ನ್ಯೂಸ್20 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಕಾರ್ಯಕ್ರಮಗಳು20 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಅಪರಾಧ18 hours agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
-
ಅಪರಾಧ2 hours agoMangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
-
ಶಿಕ್ಷಣ18 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
-
ಬಿಗ್ ನ್ಯೂಸ್2 hours agoPuttur-ಪುತ್ತೂರು: ದ.ಕ. ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ; ಪೇಟೆಯಲ್ಲಿ ಆಮಂತ್ರಣ ವಿತರಣೆ















