ಪುತ್ತೂರು
DV Sadananda Gowda: ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈಗೆ ಮಾತೃ ವಿಯೋಗ : ಹಿಂದೆ ಆಸರೆ ನೀಡಿ, ಕೈ ತುತ್ತು ತಿನ್ನಿಸಿದ ಗೆಳೆಯನ ತಾಯಿಯ ಅಂತಿಮ ದರ್ಶನ ಪಡೆಯಲು ಡಿವಿ ಸದಾನಂದ ಗೌಡ ಪುತ್ತೂರಿಗೆ ದೌಡು
ಪುತ್ತೂರು: ಪುಡಾ ನಿಕಟಪೂರ್ವ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರ ತಾಯಿ ಕೆಮ್ಮಾಯಿ ನಿವಾಸಿ ರಾಧಾ ವಾಸುದೇವ ಶೆಣೈ (91ವ) ಅವರು ಡಿ.16ರಂದು ನಿಧನರಾದರು. ಮೃತರು ಪುತ್ರರಾದ ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಭಾಮಿ ಪ್ರಕಾಶ್ ಶೆಣೈ ಮತ್ತು ಪುತ್ರಿಯರಾದ ಶೈಲಾ ನಾಯಕ್, ಶೋಭಾ ನಾಯಕ್, ಭಾರತಿ ನಾಯಕ್ ಅವರನ್ನು ಅಗಲಿದ್ದಾರೆ.
ಮೃತರಿಗೆ ಅಂತಿಮ ನಮನ ಸಲ್ಲಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಢಿವಿ ಸದಾನಂದ ಗೌಡರವರು ಬೆಂಗಳೂರಿನಿಂದ ಆಗಮಿಸಲಿದ್ದಾರೆ . ಮೂಲತ: ಸುಳ್ಯದ ಮಂಡೆಕೋಲಿನವರಾದ ಡಿವಿ ಸದಾನಂದ ಗೌಡರವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬಂದದ್ದು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ.
ಪುತ್ತೂರನ್ನು ರಾಜಕೀಯ ಕಾರ್ಯಕ್ಷೇತ್ರವಾಗಿ ಆಯ್ದುಕೊಂಡಾಗ ಡಿವಿ ಸದಾನಂದ ಗೌಡರವರು ರಾಧಾ ವಾಸುದೇವ ಶೆಣೈ ಅವರ ಪುತ್ರ ಭಾಮಿ ಅಶೋಕ್ ಶೆಣೈ ಅವರ ಮನೆಯಲ್ಲೇ ತಂಗಿದ್ದರು. ಆ ದಿನಗಳಲ್ಲಿ ಅವರ ಊಟ ಉಪಚಾರವೆಲ್ಲ ಈ ಮನೆಯಲ್ಲೆ ನಡೆಯುತಿತ್ತು. ಕೆಲವೊಮ್ಮೆ ರಾಧಾ ಶೆಣೈಯವರು ತನಗೆ ಕೈ ತುತ್ತು ಕೂಡ ತಿನ್ನಿಸಿದ್ದರು ಎಂದು ಡಿ ವಿ ಸದಾನಂದ ಗೌಡರವರು ಹಿಂದೊಮ್ಮೆ ಹೇಳಿಕೊಂಡಿದ್ದರು.

ಡಿ.ವಿ.ಸದಾನಂದ ಗೌಡರವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಪುತ್ತೂರಿಗೆ ಭೇಟಿ ನೀಡಿದ್ದ ಸಂದರ್ಭ ಅಶೋಕ್ ಶೆಣೈ ಅವರ ಸಹೋದರರ ಮನೆಗೆ ತೆರಳಿ ಅಲ್ಲಿ ರಾಧಾ ಶೆಣೈ ಅವರ ಆಶೀರ್ವಾದ ಪಡೆದಿದ್ದರು. ಮಾತ್ರವಲ್ಲದೇ, ತಮಗಿಷ್ಟವಾದ ಪತ್ರೋಡೆಯನ್ನು ರಾಧಾ ಶೆಣೈ ಅವರಿಂದ ಮಾಡಿಸಿ ಅವರ ಕೈ ತುತ್ತು ಸವಿದಿದ್ದರು.
ಇಂದು ರಾಧಾ ಶೆಣೈಯವರು ನಿಧನ ಹೊಂದಿd ಮಾಹಿತಿ ದೊರಕುತ್ತಲೇ ಡಿ ವಿ ಪುತ್ತೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಕಾರ್ಯಕ್ರಮಗಳು
Puttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
ನಿರ್ಮಾಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ದ್ವಾರಕಾ ಸಂಸ್ಥೆಯು ಪುತ್ತೂರಿನ ದರ್ಬೆಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದೇ ಸೂರಿನಡಿ ವಿವಿಧ ಸಂಸ್ಥೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪರಿಕಲ್ಪನೆಯೊಂದಿಗೆ ಈ ವಾಣಿಜ್ಯ ಸೌಧ ರೂಪುಗೊಂಡಿದೆ.
ಪುತ್ತೂರು: ನಿರ್ಮಾಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ದ್ವಾರಕಾ ಸಂಸ್ಥೆಯು ಪುತ್ತೂರಿನ ದರ್ಬೆಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದೇ ಸೂರಿನಡಿ ವಿವಿಧ ಸಂಸ್ಥೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪರಿಕಲ್ಪನೆಯೊಂದಿಗೆ ಈ ವಾಣಿಜ್ಯ ಸೌಧ ರೂಪುಗೊಂಡಿದೆ ಎಂದು ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿರ್ಮಾಣ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಅಧಿಕ ಪಯಣ ನಡೆಸಿರುವ ಸಂಸ್ಥೆಯು ಆರಂಭದಲ್ಲಿ ಪಡೀಲು ಬಾಳಪ್ಪ ಕಾಂಪ್ಲೆಕ್ಸ್, ಬೊಳುವಾರು, ಕಬಕ ಹಾಗೂ ಸರ್ಕಾರಿ ನೌಕರರ ಕಟ್ಟಡದಲ್ಲಿ ಕಚೇರಿ ಹೊಂದಿ ಕಾರ್ಯಾಚರಿಸುತ್ತಿತ್ತು. ಇದೀಗ ಸ್ವಂತ ಕಟ್ಟಡದಲ್ಲಿ ಸಂಸ್ಥೆಯ ಕಚೇರಿ ಆರಂಭವಾಗುತ್ತಿರುವುದು ಸಂತಸದ ವಿಚಾರ. ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ
ನೂತನ ವಾಣಿಜ್ಯ ಸೌಧದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶಿಕ್ಷಣ ಕರ್ಮಯೋಗಿ ಪದ್ಮಶ್ರೀ ಡಾ. ಹರೇಕಳ ಹಾಜಬ್ಬ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ ಕುಮಾರ್, ಹಿರಿಯ ಉದ್ಯಮಿ ಮಂಜುನಾಥ್ ನಾಯಕ್, ಐಶ್ವರ್ಯ ಕನ್ಸ್ಟ್ರಕ್ಷನ್ನ ರಘುರಾಮ ಭಟ್ ಉಪ್ಪಂಗಳ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೋ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಗುರುಪ್ರಸಾದ್ ಎ.ಬಿ. ಹಾಗೂ ಹೋಟೆಲ್ ಅಶ್ವಿನಿ ಮಾಲಕ ಕರುಣಾಕರ ರೈ ದೇರ್ಲ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಗೋಪಾಲಕೃಷ್ಣ ಭಟ್ ವಿವರಿಸಿದರು.
‘ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್’ ಪ್ರಮುಖ ಆಕರ್ಷಣೆ
ನಾಲ್ಕು ಅಂತಸ್ತಿನ ಈ ವಾಣಿಜ್ಯ ಸೌಧದ ನೆಲಹಂತ ಹಾಗೂ ಮೊದಲ ಮಹಡಿಯಲ್ಲಿ ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್ ಕಾರ್ಯಾಚರಿಸಲಿದೆ. ಇಲ್ಲಿ ದ್ವಾರಕಾ ಹಾಲಿನ ಉತ್ಪನ್ನಗಳು, ತರಕಾರಿ, ದಿನಸಿ ಸಾಮಗ್ರಿಗಳು, ಹಣ್ಣು, ಚಾಟ್ಸ್, ಜ್ಯೂಸ್, ಕೂಲ್ಝೋನ್, ಬೇಕರಿ ತಿನಿಸುಗಳು, ಸ್ಟೇಶನರಿ ಸೇರಿದಂತೆ ಗ್ರಾಹಕರ ನಿತ್ಯ ಬಳಕೆಯ ನೂರಾರು ವಸ್ತುಗಳು ಮಿತದರದಲ್ಲಿ ಲಭ್ಯವಾಗಲಿವೆ.
ಎರಡನೇ ಮಹಡಿಯಲ್ಲಿ ಹಾರ್ಡ್ವೇರ್, ಸ್ಯಾನಿಟರಿ, ಟೈಲ್ಸ್, ಪೇಂಟ್ಸ್, ಯುನಿಸೆಕ್ಸ್ ಸಲೂನ್, ಡೆಂಟಲ್ ಕ್ಲಿನಿಕ್, ಸಾಫ್ಟ್ವೇರ್ ಸಂಸ್ಥೆ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಹಾಗೂ ಟೆಕ್ಸ್ಟೈಲ್ಸ್ ಮಳಿಗೆಗಳು ಕಾರ್ಯನಿರ್ವಹಿಸಲಿವೆ.
ಮೂರನೇ ಮಹಡಿಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಪ್ರಧಾನ ಕಚೇರಿ ಇರಲಿದ್ದು, ನಾಲ್ಕನೇ ಮಹಡಿಯಲ್ಲಿ ಸುಮಾರು 200 ಮಂದಿ ಆಸೀನರಾಗಬಹುದಾದ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ.
ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡ
ಗ್ರಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಡದ ಬೇಸ್ಮೆಂಟ್ನಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 20 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆ ಸೇರಿದಂತೆ ವಿವಿಧ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.
ಕ್ರೈಂ
Murder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್
ಸಹೋದರನ ಮಗಳೇ ಚಿಕ್ಕಪ್ಪನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಚೆನ್ನಯ್ಯ ಪೂಜಾರಿ (52) ಮೃತಪಟ್ಟಿದ್ದಾರೆ. ಅವರ ಸಹೋದರ ಕೋಟಿ ಪೂಜಾರಿಯವರ ಪುತ್ರಿ ಕೃತ್ತಿಕಾ (26) ಕೊಲೆ ಆರೋಪಿತೆಯಾಗಿದ್ದಾರೆ.
ಪುತ್ತೂರು: ಸಹೋದರನ ಮಗಳೇ ಚಿಕ್ಕಪ್ಪನನ್ನು ಹರಿತವಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ ನಡೆದಿದೆ.
ಕನ್ಯಾನ ಗ್ರಾಮದ ಶಿರಂಕಲ್ಲು ನಂದರಬೆಟ್ಟು ಎಂಬಲ್ಲಿ ನ.24ರ ರಾತ್ರಿ ನಡೆದ ಘಟನೆಯಲ್ಲಿ ಚೆನ್ನಯ್ಯ ಪೂಜಾರಿ (52) ಮೃತಪಟ್ಟಿದ್ದಾರೆ. ಅವರ ಸಹೋದರ ಕೋಟಿ ಪೂಜಾರಿಯವರ ಪುತ್ರಿ ಕೃತ್ತಿಕಾ (26) ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ವಿವರ
ಶಿರಂಕಲ್ಲು ನಂದರಬೆಟ್ಟು ದಾಸರಕೋಡಿ ಎಂಬಲ್ಲಿ ಕೋಟಿ ಪೂಜಾರಿ ಹಾಗೂ ಚೆನ್ನಯ್ಯ ಪೂಜಾರಿ ಎಂಬ ಅವಳಿ ಸಹೋದರರು ವಾಸವಾಗಿದ್ದರು. ಕೋಟಿ ಪೂಜಾರಿಯವರ ವಿವಾಹಿತ ಪುತ್ರಿ ಕೃತ್ತಿಕಾ ಇತ್ತೀಚೆಗೆ ತವರು ಮನೆಗೆ ಬಂದಿದ್ದರು.
ನ.24ರಂದು ರಾತ್ರಿ ಸುಮಾರು 7 ಗಂಟೆಯ ವೇಳೆಗೆ ಚೆನ್ನಯ್ಯ ಪೂಜಾರಿ ಅವರು ಕೃತ್ತಿಕಾ ವಾಸವಿದ್ದ ಮನೆಯ ಬಳಿ ಗಲಾಟೆ ನಡೆಸಿದ್ದು, ಈ ವೇಳೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಮಾತಿನ ಚಕಮಕಿ ತೀವ್ರಗೊಂಡಾಗ ಆಕ್ರೋಶಗೊಂಡ ಕೃತ್ತಿಕಾ ಮನೆಯಲ್ಲಿದ್ದ ಹರಿತವಾದ ಕತ್ತಿಯಿಂದ ತನ್ನ ಚಿಕ್ಕಪ್ಪ ಚೆನ್ನಯ್ಯ ಪೂಜಾರಿ ಅವರ ಎದೆಗೆ ಬಲವಾಗಿ ಚುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಕತ್ತಿಯೇಟಿನಿಂದ ಎದೆಗೆ ಗಂಭೀರ ಗಾಯಗೊಂಡ ಚೆನ್ನಯ್ಯ ಪೂಜಾರಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಅವರನ್ನು ಸ್ಥಳೀಯರು ತಕ್ಷಣ ವಿಟ್ಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಆದರೆ, ಪುತ್ತೂರಿಗೆ ಕರೆತರುತ್ತಿದ್ದ ವೇಳೆ ತೀವ್ರ ರಕ್ತಸ್ರಾವದಿಂದ ಚೆನ್ನಯ್ಯ ಪೂಜಾರಿ ಅವರು ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ, ಉಪನಿರೀಕ್ಷಕರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕೃತ್ತಿಕಾಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಣ
Vivekananda-ಪುತ್ತೂರು: ನಾಳೆ ವಿವೇಕಾನಂದ ಸೆಂಟ್ರಲ್ ಸ್ಕೂಲ್ನ 7ನೇ ವಾರ್ಷಿಕೋತ್ಸವ
ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಮೌಲ್ಯಗಳಿಗೆ ಆದ್ಯತೆ ನೀಡುತ್ತಾ ಬಂದಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಸೆಂಟ್ರಲ್ ಸ್ಕೂಲ್, ತನ್ನ 7ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ.
ಪುತ್ತೂರು: ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಮೌಲ್ಯಗಳಿಗೆ ಆದ್ಯತೆ ನೀಡುತ್ತಾ ಬಂದಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ವಿವೇಕಾನಂದ ಸೆಂಟ್ರಲ್ ಸ್ಕೂಲ್, ತನ್ನ 7ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ.

2026-27ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವ ಸಮಾರಂಭವು ನ.26ರಂದು ಗುರುವಾರ ಮಧ್ಯಾಹ್ನ 2.30ರಿಂದ ಶಾಲಾ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಪುಟಾಣಿಗಳ ಮುಗ್ಧ ನೃತ್ಯ ಪ್ರದರ್ಶನದಿಂದ ಹಿಡಿದು ಹಿರಿಯ ವಿದ್ಯಾರ್ಥಿಗಳ ಅರ್ಥಪೂರ್ಣ ಸಾಂಸ್ಕೃತಿಕ ಪ್ರಸ್ತುತಿಗಳವರೆಗೆ ಕಾರ್ಯಕ್ರಮದಲ್ಲಿ ವಿವಿಧ ಮನರಂಜನಾ ಚಟುವಟಿಕೆಗಳು ನಡೆಯಲಿದ್ದು, ಶಾಲಾ ಆವರಣದಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ತೆಂಕಿಲದ ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ ಶಾನುಭೋಗ್ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ್ ಶಾಸ್ತಿ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಿದ್ದಾರೆ.

ಗೌರವ ಅತಿಥಿಯಾಗಿ FirstByteFast ಸಂಸ್ಥೆಯ ಸಹ-ಸಂಸ್ಥಾಪಕ ಹಾಗೂ ಸಿಇಒ ಸ್ವಸ್ತಿಕ್ ಪದ್ಮ ಉಪಸ್ಥಿತರಿದ್ದು, ತಮ್ಮ ಅನುಭವ ಹಾಗೂ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಕನಸು ಮತ್ತು ಹುಮ್ಮಸ್ಸು ತುಂಬಲಿದ್ದಾರೆ.
ದಿನವಿಡೀ ಸಾಂಸ್ಕೃತಿಕ ವೈಭವ
ಕಾರ್ಯಕ್ರಮವು ಮಧ್ಯಾಹ್ನ 2.30ಕ್ಕೆ ಧಾರ್ಮಿಕ ಶಿಕ್ಷಣದ ಪ್ರದರ್ಶನದೊಂದಿಗೆ ಆರಂಭವಾಗಲಿದೆ. ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಭಕ್ತಿ, ಶಿಸ್ತು ಮತ್ತು ಸಂಸ್ಕಾರ ಬೆಳೆಸುವ ಉದ್ದೇಶದಿಂದ ಶಾಲೆಯಲ್ಲಿ ನೀಡಲಾಗುತ್ತಿರುವ ಧಾರ್ಮಿಕ ಶಿಕ್ಷಣದ ಪರಿಚಯ ಈ ಪ್ರದರ್ಶನದ ಮೂಲಕ ದೊರೆಯಲಿದೆ.
ಮಧ್ಯಾಹ್ನ 3ರಿಂದ 4ರವರೆಗೆ ಪೂರ್ವ ಪ್ರಾಥಮಿಕದಿಂದ 2ನೇ ತರಗತಿವರೆಗಿನ ಪುಟಾಣಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮುದ್ದಾದ ವೇಷಭೂಷಣ, ಮುಗ್ಧ ಅಭಿನಯ ಹಾಗೂ ಲಯಬದ್ಧ ನೃತ್ಯಗಳ ಮೂಲಕ ಪುಟಾಣಿಗಳು ಸಭಿಕರನ್ನು ರಂಜಿಸಲಿದ್ದಾರೆ.

ಸಂಜೆ 4ರಿಂದ 5.30ರವರೆಗೆ ಸಭಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಬಳಿಕ ಸಂಜೆ 5.30ರಿಂದ 3ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ನೃತ್ಯ, ನಾಟಕ, ಸಂಗೀತ ಹಾಗೂ ರೂಪಕಗಳ ಮೂಲಕ ಹಿರಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಶಾಲಾ ಸಂಚಾಲಕ ರವಿನಾರಾಯಣ ಎಂ. ತಿಳಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈಗಾಗಲೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದಾರೆ. ವಾರ್ಷಿಕೋತ್ಸವವು ಕೇವಲ ಸಂಭ್ರಮದ ಕಾರ್ಯಕ್ರಮವಲ್ಲ; ಮಕ್ಕಳ ವರ್ಷವಿಡೀ ನಡೆದ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಸಹಕಾರದ ಪ್ರತಿಫಲವಾಗಿದೆ. ಪ್ರತಿಯೊಂದು ಮಗುವಿನಲ್ಲಿರುವ ಪ್ರತಿಭೆಯನ್ನು ವೇದಿಕೆಯ ಮೇಲೆ ಅನಾವರಣಗೊಳಿಸುವ ಪ್ರಯತ್ನವೇ ಈ ವಾರ್ಷಿಕೋತ್ಸವದ ವಿಶೇಷವಾಗಿದೆ.
-
Uncategorized15 hours ago
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್
-
ಸ್ಥಳೀಯ24 hours agoBank-ಚಿನ್ನದ ಬೆಲೆ ಕುಸಿತದ ಎಫೆಕ್ಟ್: ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ಗಳಿಂದ ಶಾಕ್; ಒಡವೆ ಹರಾಜಿನ ಎಚ್ಚರಿಕೆ..!
-
ಬಿಗ್ ನ್ಯೂಸ್24 hours agoBantwal-ಬಂಟ್ವಾಳ: ತಂದೆ ಗದರಿಸಿದ್ದಕ್ಕೆ ಮನೆ ಬಿಟ್ಟ ಬ್ಯಾಂಕ್ ಉದ್ಯೋಗಿ ಯುವತಿ ನಾಪತ್ತೆ..!
-
ನಿಧನ ವಾರ್ತೆ20 hours agoBabu Gowda-ಧರ್ಮಸ್ಥಳ: ದಿ. ಸೌಜನ್ಯ ಅಜ್ಜ ಪಾಂಗಳ ನಿವಾಸಿ ಬಾಬು ಗೌಡ ನಿಧನ
-
ಅಂತರ ರಾಜ್ಯ20 hours agoPunjab election-6 ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ–ಅಕಾಲಿದಳ; 2027ರ ಪಂಜಾಬ್ ಚುನಾವಣೆಗೆ ಮೈತ್ರಿ ಘೋಷಣೆ
-
ರಾಜಕೀಯ20 hours agoRural election-ಗ್ರಾಮೀಣ ಚುನಾವಣೆ ಅಖಾಡ ಸಜ್ಜು: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ; ಜನವರಿಯಲ್ಲಿ ಮತದಾನ ಸಾಧ್ಯತೆ..!
-
ಅಂತರ ರಾಜ್ಯ20 hours agoSreejit Ravi-ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು
-
ಕ್ರೈಂ2 hours agoMurder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್















