ಅಪರಾಧ
child trafficking racket ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ವಂತ ಮಕ್ಕಳ ಮಾರಾಟ ದಂಧೆ : ಏಳು ಮಹಿಳೆಯರು ಸೇರಿ 8 ಆರೋಪಿಗಳ ಬಂಧನ -ಇಲ್ಲಿದೆ ಕರಾಳ ವ್ಯವಹಾರದ ಸಂಪೂರ್ಣ ಸ್ಟೋರಿ
ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಬಹಿರಂಗಗೊಂಡ ಬೆನ್ನಲ್ಲೇ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ವ್ಯಾಪಿಸಿರುವ ಮಕ್ಕಳ ಮಾರಾಟ ದಂಧೆ ಬೆಳಕಿಗೆ ಬಂದಿದೆ. ಮಹಿಳೆಯರೇ ತಂಡ ರಚಿಸಿಕೊಂಡು ಮಕ್ಕಳಾಗದ ದಂಪತಿಗಳನ್ನು ಗುರುತಿಸಿ ಅವರಿಗೆ ಶಿಶುಗಳನ್ನು ಮಾರಾಟ ಮಾಡುತ್ತಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಹಿಳೆಯರು ಸೇರಿ 8 ಆರೋಪಿಗಳನ್ನು ಬಂಧಿಸಲಾಗಿದೆ. 10 ಮಕ್ಕಳನ್ನು ಮಾರಾಟ ಮಾಡಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿಷ್ಠಿತ ಆಸ್ಪತ್ರೆಗಳು ಮತ್ತು ವೈದ್ಯರು ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಈರೋಡ್ ಮೂಲದ ಕಣ್ಣನ್ ರಾಮಸ್ವಾಮಿ (51), ಹೇಮಲತಾ (27), ಶರಣ್ಯ (33), ಮುರುಗೇಶ್ವರಿ (22), ಸುಹಾಸಿನಿ (28), ಗೋಮತಿ (32), ರಾಧಾ (35) ಮತ್ತು ಬೆಂಗಳೂರಿನ ಮಹಾಲಕ್ಷ್ಮಿಪುರದ ಮಹಾಲಕ್ಷ್ಮಿ (34) ಬಂಧಿತರು. ಹಚ್ಚಿನ ವಿಚಾರಣೆಗಾಗಿ ಮೂವರನ್ನು ಕಸ್ಟಡಿಗೆ ಪಡೆಯಲಾಗಿದೆ. 20 ದಿನಗಳ ಗಂಡು ಶಿಶುವನ್ನು ರಕ್ಷಣೆ ಮಾಡಿ ವಾಣಿ ವಿಲಾಸ ಆಸ್ಪತ್ರೆಗೆ ಸೇರಿಸಲಾಗಿದೆ.
ಕರ್ನಾಟಕದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವ ವೈದ್ಯರು ಮತ್ತು ಆಸ್ಪತ್ರೆಗಳ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಂಧಿತ ಏಳು ಮಹಿಳೆಯರು ಸಣ್ಣಪುಟ್ಟ ಕೆಲಸ ಮಾಡುತ್ತಿದ್ದು, ಈ ಹಿಂದೆ ತಮಿಳುನಾಡಿನಲ್ಲಿ ಬಾಡಿಗೆ ತಾಯ್ತನ ಅಥವಾ ತಮ್ಮದೇ ಮಕ್ಕಳ ಮಾರಾಟದಲ್ಲಿ ತೊಡಗಿದ್ದರು. ಬಾಡಿಗೆ ತಾಯ್ತನ ಕಾಯ್ದೆ ತಿದ್ದುಪಡಿಯಾದ ಮೇಲೆ ಇವರು ಕದ್ದುಮುಚ್ಚಿ ದಂಧೆ ನಡೆಸುತ್ತಿದ್ದರು. ಅಕ್ರಮದಲ್ಲಿ ತೊಡಗಿದ್ದ ತಮಿಳುನಾಡಿನ 4 ಆಸ್ಪತ್ರೆಗಳ ಪೈಕಿ ಮೂರನ್ನು ಅಲ್ಲಿನ ಪೊಲೀಸರು ಮುಚ್ಚಿಸಿದ್ದರು. ಇದಾದ ನಂತರ ಮಹಿಳೆಯರು ತಮ್ಮ ಜಾಲವನ್ನು ತಮಿಳುನಾಡಿನಿಂದ ಕರ್ನಾಟಕಕ್ಕೂ ವಿಸ್ತರಿಸಿಕೊಂಡರು.
ಆಸ್ಪತ್ರೆಗಳು ಮತ್ತು ಐವಿಎಫ್ ಕೇಂದ್ರಗಳೊಂದಿಗೆ ಸಂಪರ್ಕದಲ್ಲಿದ್ದರು. ಗರ್ಭ ಫಲವತ್ತತೆ ಚಿಕಿತ್ಸೆಗೆ ಹೋಗುತ್ತಿದ್ದ ದಂಪತಿಗಳ ಮಾಹಿತಿ ಪಡೆದು ಶಿಶು ಮಾರಾಟದ ಡೀಲ್ ಕುದುರಿಸುತ್ತಿದ್ದರು. ಆನಂತರ ತಮ್ಮಲ್ಲಿಯೇ ಮಾಹಿತಿ ಪ್ರಚಾರ ಮಾಡಿಕೊಳ್ಳುತ್ತಿದ್ದರು. ನವಜಾತ ಶಿಶು ತಾಯಿಯನ್ನು ಸಂರ್ಪಸಿ ಅವರಿಗೆ ಹಣದ ಆಮಿಷವೊಡ್ಡಿ 2 ಲಕ್ಷ ರೂ. ಕೊಟ್ಟು ಖರೀದಿಸುತ್ತಿದ್ದರು. ಬಳಿಕ ಮಕ್ಕಳಾಗದ ದಂಪತಿಗೆ ಶಿಶುವನ್ನು 4 ರಿಂದ 8 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದರು. ಬಂದ ಹಣದಲ್ಲಿ ಎಲ್ಲರೂ ಹಂಚಿಕೊಳ್ಳುತ್ತಿದ್ದರು.
10 ಮಕ್ಕಳ ಮಾರಾಟ :
ಕೆಲದಿನಗಳ ಹಿಂದೆ ಶಿಶು ಮಾರಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರ್.ಆರ್. ನಗರದ ರಾಜರಾಜೇಶ್ವರಿ ದೇವಸ್ಥಾನದ ಸಮೀಪ ಕಾರಿನಲ್ಲಿ ಶಿಶು ಮಾರಾಟಕ್ಕೆ ಬಂದಿದ್ದಾಗ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರ ವಿರುದ್ಧ ತಮಿಳುನಾಡಿನ ಈರೋಡ್ ಪ್ರದೇಶದಲ್ಲೂ ಕೇಸ್ಗಳು ದಾಖಲಾಗಿರುವ ಸಾಧ್ಯತೆ ಇದೆ. ಇಲ್ಲಿಯವರೆಗೂ 10 ಮಕ್ಕಳನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಖರೀದಿದಾರರ ಹೆಸರು, ವಿಳಾಸ ಲಭ್ಯವಾಗಿಲ್ಲ. ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ದಯಾನಂದ್ ಮಾಹಿತಿ ನೀಡಿದ್ದಾರೆ. ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ಕಳ್ಳಸಾಗಾಣಿಕೆ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ.
ಶಿಶುಗಳ ಲಿಂಗ ಹಾಗೂ ಬಣ್ಣ ನೋಡಿ 1 ರಿಂದ 2 ಲಕ್ಷ ರೂ. ಕೊಡುತ್ತಿದ್ದ ಆರೋಪಿಗಳು, ಆನಂತರ ಆ ಶಿಶುವಿಗೆ ಬೆಲೆ ನಿಗದಿ ಮಾಡುತ್ತಿದ್ದರು. ಗಂಡು ಶಿಶುವಿಗೆ 8 ರಿಂದ 10 ಲಕ್ಷ ರೂ., ಹೆಣ್ಣು ಶಿಶುವಿಗೆ 5ರಿಂದ 6 ಲಕ್ಷ ರೂ. ಹಾಗೂ ಮಗು ಕಪು್ಪ ಇದ್ದರೆ 1 ಲಕ್ಷ ರೂ. ಕಡಿಮೆ, ಬೆಳ್ಳಗಿದ್ದರೆ 1 ಲಕ್ಷ ರೂ. ಹೆಚ್ಚು ನಿಗದಿ ಮಾಡಿ ಮಾರಾಟ ಮಾಡುತ್ತಿದ್ದರು.
ಮದುವೆ ಇಲ್ಲದೆ ಗರ್ಭ ಧರಿಸಿ ಮರ್ಯಾದೆಗೆ ಅಂಜಿ ಗರ್ಭಪಾತ ಮಾಡಿಸಲು ವೈದ್ಯರ ಬಳಿಗೆ ಬರುವವರ ಮಾಹಿತಿ ಪಡೆಯುತ್ತಿದ್ದರು. ಅವರನ್ನು ಸಂಪರ್ಕ ಮಾಡುತ್ತಿದ್ದ ಆರೋಪಿಗಳು ಹಣದ ಆಮಿಷವೊಡ್ಡಿ ಶಿಶು ಮಾರಾಟಕ್ಕೆ ಒಪ್ಪಿಸುತ್ತಿದ್ದರು. ಅಂತಹವರನ್ನು ಕರೆದೊಯ್ದು ಆರೈಕೆ ಮಾಡಿ ಹೆರಿಗೆಯಾದ ಮೇಲೆ ಹಣ ಕೊಟ್ಟು ಶಿಶು ಖರೀದಿಸಿ ಮಾರಾಟ ಮಾಡುತ್ತಿದ್ದರು.
ಮದುವೆಯಾಗಿ ಗರ್ಭ ಧರಿಸುವ ಹೆಣ್ಣು ಮಕ್ಕಳು, ಆರ್ಥಿಕ ಕಷ್ಟವೆಂದು ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಲು ಆಸ್ಪತ್ರೆಯನ್ನು ಸಂಪರ್ಕ ಮಾಡಿದವರ ವಿವರ ಪಡೆಯುತ್ತಿದ್ದರು. ಅವರಿಗೂ ಹಣಕಾಸಿನ ಆಮಿಷವೊಡ್ಡಿ ಮಗುವಿನ ಆರೈಕೆ ಮಾಡಿಸಿ ಹೆರಿಗೆ ಬಳಿಕ ಹಣ ಕೊಟ್ಟು ಖರೀದಿಸುತ್ತಿದ್ದರು.
ಬಂಧಿತ ಏಳು ಮಹಿಳೆಯರು ತಮ್ಮ ಸಂಪರ್ಕದಲ್ಲಿರುವ ಬಡ ಮತ್ತು ಹಣಕಾಸಿನ ಸಮಸ್ಯೆ ಇರುವ ಮಹಿಳೆಯರನ್ನು ಸಂರ್ಪಸಿ ಅವರಿಗೆ ಹಣದಾಸೆ ತೋರಿಸಿ ಬಾಡಿಗೆ ತಾಯ್ತನಕ್ಕೆ ಒಪ್ಪಿಸುತ್ತಿದ್ದರು. ಶ್ರೀಮಂತರ ಅಂಡಾಣು ಪಡೆದು ಬಾಡಿಗೆ ತಾಯ್ತನಕ್ಕೆ ವ್ಯವಸ್ಥೆ ಮಾಡಿಸುತ್ತಿದ್ದರು.
ನಕಲಿ ಜನನ ಪ್ರಮಾಣ ಪತ್ರ ವಿತರಣೆ: ಶಿಶು ಮಾರಾಟ ಬಳಿಕ ಕೆಲವೇ ದಿನಕ್ಕೆ ನಕಲಿ ಜನನ ಪ್ರಮಾಣಪತ್ರ ಮಾಡಿಸಿಕೊಡುತ್ತಿದ್ದರು. ಶಿಶು ಖರೀದಿಸಿದ ದಂಪತಿ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನಲ್ಲಿ ನಕಲಿ ವೈದ್ಯಕೀಯ ಪ್ರಮಾಣಪತ್ರ ಸೃಷ್ಟಿಸುತ್ತಿದ್ದರು. ಸ್ಥಳೀಯ ಕಂದಾಯ ಕಚೇರಿಗೆ ಸಲ್ಲಿಸಿ ಜನನ ಪ್ರಮಾಣಪತ್ರ ಕೊಡಿಸುತ್ತಿದ್ದರು. ರಕ್ಷಣೆ ಮಾಡಿರುವ 20 ದಿನದ ಗಂಡು ಶಿಶುವಿಗೆ ಬರ್ತ್ ಸರ್ಟಿಫಿಕೇಟ್ ಮಾಡಿಸಿದ್ದಾರೆ..
ಅಪರಾಧ
Mangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಮಂಗಳೂರು: ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.
ಕಳ್ಳರು ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನ ನಡೆದಿತ್ತು. ಮನೆಯ ಲಾಕರ್‌ನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳು ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ತಕ್ಷಣ ಗುಜರಾತ್‌ನ ವಡೋದರಾ ಪೊಲೀಸರ ಸಹಾಯ ಪಡೆದುಕೊಂಡ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿದ್ದ 24 ಗಂಟೆಗಳೊಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಕೂಡ ಬಾಕಿ ಇದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಅಪರಾಧ
Vittal Police raid :ಕೋಳಿ ಅಂಕಕ್ಕೆ ವಿಟ್ಲ ಪೊಲೀಸ್ ದಾಳಿ – ನಾಲ್ವರು ವಶಕ್ಕೆ

ವಿಟ್ಲ: ಪೆರುವಾಯಿ ಗ್ರಾಮದ ಸರಕಾರಿ ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ನಡೆಸುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ, ನಾಲ್ವರನ್ನು ವಶಕ್ಕೆ ಪಡೆದ ಘಟನೆ ಅಕ್ಟೋಬರ್ 2ರಂದು ನಡೆದಿದೆ.
ಪೆರುವಾಯಿ ಗ್ರಾಮದ ಸಾರ್ವಜನಿಕ ಜಾಗದಲ್ಲಿ ಜೂಜು ಕಟ್ಟಿ ಕೋಳಿ ಅಂಕ ಆಡಿಸುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಇದರನ್ವಯ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಆಡಿಸುತ್ತಿರುವುದು ಕಂಡು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾಳಿಯ ವೇಳೆ ಕೃಷಪ್ಪ (59), ಲಕ್ಷ್ಮಣ ನಾಯ್ಕ್ (38), ಶೋಬಿತ್ ರಾಜ್ (29) ಹಾಗೂ ಯುವರಾಜ್ (46) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. . ಸ್ಥಳದಲ್ಲಿದ್ದ ಕೋಳಿಗಳು, ಕೋಳಿ ಅಂಕಕ್ಕೆ ಬಳಸಲಾಗಿದ್ದ 3,050 ರೂಪಾಯಿ ನಗದು ಹಾಗೂ ಕತ್ತಿಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಇನ್ನಿತರ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಸ್ಥಳೀಯ
Kollur-ಕೊಲ್ಲೂರು: ದನವನ್ನು ಕಾರಿಗೆ ತುಂಬಿಸಿಕೊಂಡು ಪರಾರಿಯಾಗಿದ್ದ ಆರೋಪಿಯ ಬಂಧನ
ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಹಿಂಸಾತ್ಮಕವಾಗಿ ಎಳೆದುಕೊಂಡು ಬಿಳಿ ಬಣ್ಣದ ಕಾರಿನಲ್ಲಿ ತುಂಬಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆ ನಿವಾಸಿ ಮೊಹಮ್ಮದ್ ಸಿನಾನ್ (20) ಎಂದು ಗುರುತಿಸಲಾಗಿದೆ.
ಕೊಲ್ಲೂರು: ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಹಿಂಸಾತ್ಮಕವಾಗಿ ಎಳೆದುಕೊಂಡು ಬಿಳಿ ಬಣ್ಣದ ಕಾರಿನಲ್ಲಿ ತುಂಬಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ತೋಟದ ಮನೆ ನಿವಾಸಿ ಮೊಹಮ್ಮದ್ ಸಿನಾನ್ (20) ಎಂದು ಗುರುತಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.29ರಂದು ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಅಪರಿಚಿತರು ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿದ್ದ ದನವನ್ನು ಹಿಂಸಾತ್ಮಕವಾಗಿ ಎಳೆದುಕೊಂಡು ಕಾರಿನಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದರು. ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಕುರಿತು ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪತ್ತೆಹಚ್ಚಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನಿಬ್ಬರಿಗಾಗಿ ಶೋಧ
ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಮೊಹಮ್ಮದ್ ಸಿನಾನ್ ಕುಂದಾಪುರ ಉಪವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಐದು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಾರ್ಯಾಚರಣೆ
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಅವರ ಉಸ್ತುವಾರಿಯಲ್ಲಿ ಕೊಲ್ಲೂರು ಠಾಣೆ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಹೆಡ್‌ಕಾನ್‌ಸ್ಟೆಬಲ್ ನಾಗೇಂದ್ರ, ಕಾನ್‌ಸ್ಟೆಬಲ್‌ಗಳಾದ ರುದ್ರೇಶ, ನವೀನ್ ಕುಮಾರ್, ವಿಲಾಸ್ ರಾಠೋಡ ಹಾಗೂ ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


















