ಆರೋಗ್ಯ
Dengue Fever Symptoms ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುವ ಮಾರಣಾಂತಿಕ ಖಾಯಿಲೆ ಡೆಂಗ್ಯೂ ಜ್ವರ – ಲಕ್ಷಣ, ವಹಿಸಬೇಕಾದ ಮುನ್ನೆಚ್ಚರಿಕೆಯ ಅಗತ್ಯ ಮಾಹಿತಿ ಇಲ್ಲಿದೆ
Dengue Fever Symptoms: ಮುಂಗಾರು ಪ್ರವೇಶವಾಗಿದ್ದೂ ಆಗಾಗ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಮಳೆ ನಿಂತ ಕೂಡಲೇ ಮೋಡ ಸರಿದು ಬಿಸಿಲು ಬೀಳುತ್ತಿದ್ದು , ಮಳೆ – ಬಿಸಿಲಿನ ಈ ಕಣ್ಣಾ ಮುಚ್ಚಾಲೆಯಾಟ ಡೆಂಗ್ಯೂ ಜ್ವರಕ್ಕೆ ಪ್ರಶಸ್ತ ಕಾಲ. ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಅತ್ಯಂತ ಮಾರಕವಾಗಿರುವ ಇನ್ನೊಂದು ಕಾಯಿಲೆ ಎಂದರೆ ಅದು ಡೆಂಗ್ಯೂ ಜ್ವರ.
ಡೆಂಗ್ಯೂ ಜ್ವರ ಕೂಡ ಮಲೇರಿಯಾದಂತೆ ಸೊಳ್ಳೆಗಳಿಂದ ಹರಡುವ ಜ್ವರ. ಡೆಂಗ್ಯೂ ಜ್ವರ ಉಂಟು ಮಾಡುವ ಸೊಳ್ಳೆಗಳು ಪ್ರಪಂಚದ ಉಷ್ಣವಲಯ ಮತ್ತು ಉಪ ಉಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಹಾಗಾಂತ ಡೆಂಗ್ಯೂ ಸಾಂಕ್ರಾಮಿಕ ಸೋಂಕಲ್ಲ, ಆದರೆ ಸೋಂಕಿತ ಈಡಿಸ್ ಈಜಿಪ್ಟಿ ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಒಬ್ಬ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯನ್ನು ಒಂದು ಸೊಳ್ಳೆ ಕಚ್ಚಿದಾಗ, ಆ ಮನುಷ್ಯನಲ್ಲಿರುವ ವೈರಸ್ ಸೊಳ್ಳೆಯ ದೇಹದೊಳಗೆ ಸೇರಿ ಅದೇ ಸೊಳ್ಳೆ ಇನ್ನೊಬ್ಬ ಮನುಷ್ಯನನ್ನು ಕಚ್ಚಿದಾಗ, ಆ ವ್ಯಕ್ತಿಯ ರಕ್ತದ ಹರಿವಿನಲ್ಲಿ ಡೆಂಗ್ಯೂ ವೈರಸ್ ತನ್ನ ಸಂತತಿ ಹೆಚ್ಚಿಸಿಕೊಳ್ಳುತ್ತದೆ.
ಆರಂಭಿಕ ಲಕ್ಷಣಗಳು
ಆರಂಭಿಕ ಹಂತದಲ್ಲಿ ಪದೇ ಪದೇ ಜ್ವರ ಬರುವುದು, ದೇಹದಲ್ಲಿ ದದ್ದು ಉಂಟಾಗುವುದು ಮತ್ತು ನಿಶಕ್ತಿ ಈ ಲಕ್ಷಣಗಳನ್ನು ಹೊಂದಿರುತ್ತದೆ. ದೀರ್ಘಕಾಲದ ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ಪಡೆಯುವುದು ಉತ್ತಮ. ಸೌಮ್ಯವಾದ ಅಥವಾ ತೀವ್ರವಾದ ಡೆಂಗಿ ಲಕ್ಷಣಗಳಿದ್ದರೂ ತಕ್ಷಣಕ್ಕೆ ವೈದ್ಯರನ್ನು ಸಂಪರ್ಕಿಸುವುದು ಬಹಳ ಅವಶ್ಯ.
ನಿರಂತರ ಅಧಿಕ ಜ್ವರ
104 ಡಿಗ್ರಿ ಪ್ಯಾರನ್ಹೀಟ್ಗೂ ಅಧಿಕ ನಿರಂತರ ಜ್ವರವು ಡೆಂಗಿಯ ಪ್ರಮುಖ ಲಕ್ಷಣವಾಗಿದೆ. ಇದನ್ನು ಏಳು ದಿನ ಜ್ವರ ಎಂದೂ ಕರೆಯಲಾಗುತ್ತದೆ. ಇದು ಚರ್ಮದ ಮೂಗೇಟು ಮತ್ತು ಮಲ, ಮೂತ್ರದಲ್ಲಿ ರಕ್ತ ಸೋರುವುದಕ್ಕೂ ಕಾರಣವಾಗಬಹುದು.
ನಿಲ್ಲದ ತಲೆನೋವು
ಅತಿಯಾದ ನಿಲ್ಲದ ತಲೆನೋವು ಕೂಡ ಡೆಂಗಿ ಜ್ವರ ಲಕ್ಷಣ ಇರಬಹುದು. ತಲೆನೋವು ಮಾತ್ರೆ, ಔಷಧಿಗಳು ನಿವಾರಿಸಲಾಗದಷ್ಟು ನೋವು ಕಂಡರೆ ನಿರ್ಲಕ್ಷ್ಯ ಮಾಡಬೇಡಿ.
ಅತಿಯಾದ ದೇಹದ ನೋವು
ಡೆಂಗಿ ಜ್ವರ ಬಂದಾಗ ಅತಿಯಾದ ದೇಹದ ದೈಹಿಕ ಬೇನೆ ಇರುತ್ತದೆ. ಮೂಳೆಗಳಲ್ಲಿ ಅತಿಯಾದ ನೋವು ಇರುವ ಕಾರಣದಿಂದ ಇದನ್ನು ಮೂಳೆ ಮುರಿತದ ಜ್ವರ ಎಂದೂ ಕರೆಯಲಾಗುತ್ತದೆ. ವೈರಲ್ ಸೋಂಕು ಸ್ನಾಯುಗಳಿಗೆ ಹರಡಿದ ನಂತರ ಅತಿಯಾದ, ಅಸಹನೀಯ ನೋವು ಕಾಣಿಸಬಹುದು. ಕೈಕಾಲುಗಳು, ಬಾಯಿ, ಬೆನ್ನು ಮುಂತಾದ ಸ್ನಾಯುಗಳ ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಮರುಕಳಿಸುವ ದೇಹದ ನೋವುಗಳನ್ನು ನಿರ್ಲಕ್ಷಿಸಬೇಡಿ ದದ್ದುಗಳು
ದದ್ದು
ಡೆಂಗಿ ಜ್ವರದಿಂದ ಮೈ ಮೇಲೆ ದದ್ದುಗಳು ಉಂಟಾಗಬಹುದು. ವೈರಲ್ ಸೋಂಕು ಕೆಂಪು, ತಿಳಿ ಕೆಂಪು ಬಣ್ಣದ ದದ್ದುಗಳನ್ನು ಉಂಟು ಮಾಡಬಹುದು. ಇದು ಚರ್ಮದ ಮೂಗೇಟುಗಳಿಗೂ ಕಾರಣವಾಗಬಹುದು. ಈ ದದ್ದುಗಳು ದಡಾರವನ್ನು ಹೋಲುತ್ತವೆ. ಡೆಂಗೆ ಸೋಂಕಿನಿಂದ ಹರಡುವ ದದ್ದುಗಳು ಒಡೆಯುವುದರಿಂದ ಇನ್ನಷು ಪ್ರತಿಕೂಲ ಸ್ಥಿತಿ ಉಂಟಾಗಬಹುದು. ಇವು ಅಲರ್ಜಿಗಿಂತ ಭಿನ್ನವಾಗಿರುತ್ತವೆ.
ಕಣ್ಣಿನ ನೋವು
ಡೆಂಗಿ ಜ್ವರವಿದ್ದಾಗ ಕಣ್ಣುಗಳ ಹಿಂಭಾಗದಲ್ಲಿ ನೋವು ಕಾಣಿಸಬಹುದು. ನಿರಂತರ ತಲೆನೋವಿನ ಜೊತೆಗೆ ಕಣ್ಣು ನೋವು ಇರುತ್ತದೆ. ಇದು ಕಣ್ಣಿನ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಸಬ್ಕಾಂಜಂಕ್ಟಿವಲ್ ಹೆಮರೇಜ್ನಿಂದ ಕಣ್ಣುಗಳ ಬಣ್ಣ ಕೆಂಪಾಗಬಹುದು.
ದೀರ್ಘಕಾಲದ ಸುಸ್ತು
ಮೂಳೆ ಮೂರಿತದ ಜ್ವರ ಎಂದು ಕರೆಯುವ ಡೆಂಗಿ ಜ್ವರ ದೀರ್ಘಕಾಲದ ಆಯಾಸವನ್ನು ಉಂಟು ಮಾಡಬಹುದು. ಡೆಂಗಿ ವೈರಸ್ ಉರಿಯೂತ ಮತ್ತು ದೈಹಿಕ ನೋವುಗಳಿಗೆ ಕಾರಣವಾಗಬಹುದು. ತೀವ್ರವಾದ ದೈಹಿಕ ನೋವುಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡದಿರಿ.
ಕಿಬ್ಬೊಟ್ಟೆ ನೋವು
ಡೆಂಗಿ ಜ್ವರ ಬಂದಾಗ ತೀವ್ರವಾದ ಕಿಬ್ಬೊಟ್ಟೆಯ ನೋವು ಕಾಣಿಸಬಹುದು. ಹೊಟ್ಟೆಯ ಉಬ್ಬರ ಹಾಗೂ ವಿಪರೀತ ನೋವಿಗೂ ಇದು ಕಾರಣವಾಗಬಹುದು.ಡೆಂಗಿ ಸೋಂಕು ಪಿತ್ತಕೋಶ ಮತ್ತು ಯಕೃತ್ತಿನಂತಹ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರಬಹುದು.
ವಾಂತಿ, ವಾಕರಿಕೆ
ಅತಿಯಾದ ವಾಂತಿ ಅಥವಾ ವಾಕರಿಕೆ ಲಕ್ಷಣಗಳು ಡೆಂಗಿ ಜ್ವರದ ಸಂಕೇತಗಳಾಗಿರಬಹುದು. ಡೆಂಗಿ ಸೋಂಕು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಇದು ರಕ್ತವಾಂತಿಗೆ ಕಾರಣವಾಗಬಹುದು. ಇದು ಅತಿಸಾರ, ಹೊಟ್ಟೆ ನೋವಿಗೂ ಕಾರಣವಾಗಬಹುದು.
ಆಂತರಿಕ ರಕ್ತಸ್ರಾವ
ಆಂತರಿಕ ರಕ್ತಸ್ರಾವವು ಡೆಂಗಿ ಜ್ವರದ ಪ್ರಮುಖ ಲಕ್ಷಣವಾಗಿದೆ. ಡೆಂಗಿ ಜ್ವರವು ಅತಿಯಾದರೆ ಥ್ರಂಬೋಸೈಟೋಪೆನಿಯಾ (ಪ್ಲೇಟ್ಲೆಟ್ ಕೋಶಗಳ ನಾಶ)ಕ್ಕೂ ಕಾರಣವಾಗಬಹುದು. ಇದು ಕರುಳಿನ ಪ್ರದೇಶದ ತೀವ್ರರಕ್ತಸ್ರಾವಕ್ಕೆ ಕಾರಣವಾಗಬಹುದು. ಅಲ್ಲದೆ ಮಲ, ಮೂತ್ರದೊಂದಿಗೆ ರಕ್ತ ವಿಸರ್ಜನೆಯಾಗಬಹುದು. ಡೆಂಗಿ ವೈರಸ್ ರಕ್ತದ ಪ್ಲೇಟ್ಲೆಟ್ಗಳ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು. ಇದು ದೇಹದಲ್ಲಿ ಕೆಂಪುರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆಯೂ ಇದೆ.
ತಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಬಲವಾಗಿರುವವರು ಕೇವಲ ಒಂದು ಅಥವಾ ಎರಡು ವಾರಗಳಲ್ಲಿ ಈ ಸಮಸ್ಯೆಯಿಂದ ಪಾರಾಗುತ್ತಾರೆ. ಆದರೆ ಕೆಲವರಿಗೆ ಈ ಮೇಲ್ಕಂಡ ರೋಗ ಲಕ್ಷಣಗಳು ವಿಪರೀತವಾಗಿ ಅವರ ಜೀವಕ್ಕೆ ಮಾರಕವಾಗಿ ಪರಿಣಮಿಸುತ್ತವೆ.
ಹೆಚ್ಚಾಗಿ ಇಂತಹ ರೋಗಿಗಳಲ್ಲಿ ರಕ್ತ ನಾಳಗಳು ಒಡೆದುಕೊಂಡಂತಾಗಿ ರಕ್ತಸ್ರಾವವಾಗುತ್ತದೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಅದಾಗಲೇ ಕ್ಷೀಣಿಸಿರುತ್ತದೆ. ಇದನ್ನು ವೈದ್ಯರು ” ಹೆಮರ್ರ್ಹಗಿಕ್ ಫೀವರ್ ” ಅಥವಾ ” ಡೆಂಗ್ಯೂ ಶಾಕ್ ಸಿಂಡ್ರೋಮ್ ” ಎಂದು ಕರೆಯುತ್ತಾರೆ
ಡೆಂಗ್ಯೂ ಜ್ವರ ವಿಪರೀತವಾದಾಗ ಮನುಷ್ಯನ ಜೀವಕ್ಕೆ ಆಪತ್ತು ಎಂದು ಹೇಳಲಾಗುತ್ತದೆ. ಇಂತಹ ಸಂದರ್ಭದಲ್ಲಿ ಎದುರಾಗುವ ಕೆಲವು ರೋಗ ಲಕ್ಷಣಗಳು ಹೀಗಿವೆ,
• ವಿಪರೀತ ಹೊಟ್ಟೆ ನೋವು
• ಬಿಟ್ಟೂ ಬಿಡದಂತೆ ಕಾಡುವ ವಾಕರಿಕೆ ಮತ್ತು ವಾಂತಿಯ ಸಮಸ್ಯೆ
• ಹಲ್ಲಿನ ವಸಡುಗಳು ಮತ್ತು ಮೂಗಿನಲ್ಲಿ ರಕ್ತಸ್ರಾವ
• ಮಲ, ಮೂತ್ರ ಅಥವಾ ವಾಂತಿಯಲ್ಲಿ ರಕ್ತ ಕಂಡುಬರುವುದು
• ದೇಹದ ಚರ್ಮದ ಪದರದ ಕೆಳ ಭಾಗದಲ್ಲಿ ರಕ್ತಸ್ರಾ
• ಉಸಿರಾಟದ ತೊಂದರ
• ಶೀತ ಮತ್ತು ಚಳಿಯಿಂದ ನಡುಗುವುದ
• ಹೆಚ್ಚಿನ ಆಯಾಸ
• ಮೈ ಕೈ ನೋವಿನಿಂದ ದೇಹದ ಕಿರಿಕಿರಿ
ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕೆ
ಡೆಂಗಿ ಜ್ವರ ಬಾರದಂತೆ ತಡೆಯಲು ವ್ಯಾಕ್ಸಿನ್ ಪಡೆಯಬಹುದು. ವ್ಯಾಕ್ಸಿನ್ಗಿಂತ ಪ್ರಮುಖವಾಗಿ ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಮನೆಯ ಸುತ್ತಮುತ್ತ ಸೊಳ್ಳೆಗಳು ಸುಳಿಯದಂತೆ ನೋಡಿಕೊಳ್ಳಬೇಕು.
* ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ.
* ಹೊರಗಿನಿಂದ ಸೊಳ್ಳೆಗಳು ಮನೆಯ ಒಳಗೆ ಬಾರದಂತೆ ಎಚ್ಚರ ವಹಿಸಿ. ಕಿಟಿಕಿ, ಬಾಗಿಲುಗಳನ್ನು ಮುಚ್ಚಿಡಿ.
* ಸೊಳ್ಳೆಗಳು ಕಡಿಯದಂತೆ ನೋಡಿಕೊಳ್ಳಲು ಮೈ ತುಂಬಾ ಬಟ್ಟೆ ಧರಿಸಿ.
* ಸೊಳ್ಳೆ ನಿವಾರಕಗಳನ್ನು ಬಳಸಿ.
* ಸೊಳ್ಳೆಗಳು ಮನೆಯ ಸುತ್ತ ಮೊಟ್ಟೆ ಇಡದಂತೆ ನೋಡಿಕೊಳ್ಳಿ. ವಾರಕೊಮ್ಮೆ ಮನೆಯ ಸುತ್ತಲಿನ ಜಾಗವನ್ನು ಸ್ವಚ್ಛ ಪಡಿಸಿ.
• ಶುದ್ಧ ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಉತ್ತಮ
• ನೀರು ಶೇಖರಣಾ ತೊಟ್ಟಿ, ಟ್ಯಾಂಕ್ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಿಡಿ
• ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಡಿ
• ಮನೆಯ ಸುತ್ತಲು ಹಾಗೂ ತಾರಸಿಯ ಮೇಲೆ ನೀರು ನಿಲ್ಲದಂತೆ ಎಚ್ಚರವಹಿಸಿ
• ತೆಂಗಿನ ಚಿಪ್ಪು, ಟಯರ್ ನಂತಹ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ.
• ತೊಟ್ಟಿ, ಬಿಂದಿಗೆ, ಡ್ರಮ್ಗಳಲ್ಲಿ 2-3 ದಿನಕ್ಕೊಮ್ಮೆ ನೀರು ಬದಲಿಸಿ ಸ್ವಚ್ಛಗೊಳಿಸಿ.
• ಸೀನುವಾಗ, ಕೆಮ್ಮುವಾಗ ಕರವಸ್ತ್ರಗಳನ್ನು ಅಡ್ಡಲಾಗಿ ಇಟ್ಟುಕೊಳ್ಳಿ.
• ಸೊಳ್ಳೆಗಳನ್ನು ತಡೆಯಲು ಕಿಟಕಿ ಬಾಗಿಲುಗಳಿಗೆ ಮೆಶ್ ಹಾಕಿ ಅಥವಾ ಸೊಳ್ಳೆ ನಾಶಕ ಔಷಧಗಳನ್ನು ಬಳಸಿ.
• ಹಳ್ಳಿಗಳಲ್ಲಾದರೆ ಸೊಳ್ಳೆಗಳನ್ನು ನಿಯಂತ್ರಿಸಲು ಬೇವಿನ ಸೊಪ್ಪಿನ ಹೊಗೆ ಹಾಕುವುದು ಒಳಿತು.
ಆರೋಗ್ಯ
Bantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ
ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬಂಟ್ವಾಳ: ಕಳೆದ ಎಂಟು ತಿಂಗಳಿನಿಂದ ಎರಡೂ ಸೊಂಟಗಳ ತೀವ್ರ ನೋವಿನಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿಯೊಬ್ಬರಿಗೆ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಸಂಪೂರ್ಣ ಉಚಿತವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬಂಟ್ವಾಳ ತಾಲೂಕಿನ ನಿವಾಸಿಯಾಗಿರುವ ಈ ವ್ಯಕ್ತಿಗೆ ‘ಬೈಲ್ಯಾಟರಲ್ ಹಿಪ್ ಅವಾಸ್ಕುಲರ್ ನೆಕ್ರೋಸಿಸ್’ (Bilateral Hip Avascular Necrosis) ಎಂಬ ಕಾಯಿಲೆ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿತ್ತು. ಇದರಿಂದ ಎರಡೂ ಸೊಂಟದ ಮೂಳೆಗಳು ಹಾನಿಗೊಳಗಾಗಿದ್ದು, ಬಲಭಾಗಕ್ಕಿಂತ ಎಡಭಾಗದ ಮೂಳೆಯ ಸ್ಥಿತಿ ಗಂಭೀರವಾಗಿತ್ತು.
ಈ ಹಿಂದೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳು ಹಾಗೂ ಮೂಳೆ ತಜ್ಞರನ್ನು ಸಂಪರ್ಕಿಸಿದ್ದ ರೋಗಿಗೆ ಶಸ್ತ್ರಚಿಕಿತ್ಸೆಯೊಂದೇ ಶಾಶ್ವತ ಪರಿಹಾರ ಎಂದು ವೈದ್ಯರು ಸಲಹೆ ನೀಡಿದ್ದರು. ಬಳಿಕ ಸ್ಥಳೀಯರ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.
ರೋಗಿಯ ಆರ್ಥಿಕ ಹಾಗೂ ಆರೋಗ್ಯದ ಸಂಕಷ್ಟವನ್ನು ಅರಿತ ಆಸ್ಪತ್ರೆಯ ವೈದ್ಯಕೀಯ ತಂಡವು ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು. ನವೆಂಬರ್ 4ರಂದು ಯೋಜನೆಯಡಿ ಅನುಮೋದನೆಗಾಗಿ ಅರ್ಜಿ ಸಲ್ಲಿಸಲಾಗಿದ್ದು, ನವೆಂಬರ್ 11ರಂದು ಅನುಮತಿ ದೊರೆತಿತ್ತು. ಬಳಿಕ ನವೆಂಬರ್ 17ರಂದು ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರ ಮಾರ್ಗದರ್ಶನದಲ್ಲಿ ಮಾರ್ಗದರ್ಶಕ ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಶೆಟ್ಟಿ ಹಾಗೂ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಚೇತನ್‌ರಾಜ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿತು.
ಅರವಳಿಕೆ ತಜ್ಞರಾದ ಡಾ. ವಿದ್ಯಾಸಾಗರ್ ಹಾಗೂ ಡಾ. ತುಷಾರ್ ಕೆ., ಶಸ್ತ್ರಚಿಕಿತ್ಸಾ ವಿಭಾಗದ ಶುಶ್ರೂಷಾಧಿಕಾರಿಗಳಾದ ವಾಣಿ, ಪುಷ್ಪಾ, ಕೀರ್ತಿಶಾಲಿನಿ, ತಂತ್ರಜ್ಞರಾದ ಧನ್ಯಾ ಮತ್ತು ಶಶಿಕಲಾ ಹಾಗೂ ಡಿ-ದರ್ಜೆ ನೌಕರರಾದ ಸವಿತಾ, ಜಲಜಾ ಮತ್ತು ಚಂದ್ರಾವತಿ ಅವರು ಶಸ್ತ್ರಚಿಕಿತ್ಸೆಗೆ ಸಹಕರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲೇ ಯಾವುದೇ ವೆಚ್ಚವಿಲ್ಲದೆ ಗುಣಮಟ್ಟದ ಚಿಕಿತ್ಸೆ ದೊರೆತಿರುವುದಕ್ಕೆ ರೋಗಿಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು ವೈದ್ಯಕೀಯ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ದಿನೇಶ್ ಕಾಮತ್ ತಿಳಿಸಿದ್ದಾರೆ.
ಆರೋಗ್ಯ
Puttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆ ಚಾರಿಟೇಬಲ್ ಟ್ರಸ್ಟ್ ಹಾಗೂ ಇನ್ನರ್ ವೀಲ್ ಕ್ಲಬ್ ಪುತ್ತೂರು ಇವರ ಸಹಯೋಗದಲ್ಲಿ ಇಂದು (ನ.19) ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2.30ರವರೆಗೆ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರವು ನಡೆಯಿತು. ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಬೆನ್ನು ನೋವು, ಮೊಣಕಾಲು ನೋವು, ಸೊಂಟ ನೋವು ಹಾಗೂ ಸ್ನಾಯು ನೋವು ಮುಂತಾದ ಸಮಸ್ಯೆಗಳು ಮೂಳೆ ಸವೆತ ಅಥವಾ ಮುಂದಿನ ದಿನಗಳಲ್ಲಿ ಮೂಳೆ ಮುರಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಇಂತಹ ಲಕ್ಷಣಗಳನ್ನು ನಿರ್ಲಕ್ಷಿಸದೆ ಆರಂಭದಲ್ಲೇ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ BMD ಶಿಬಿರವನ್ನು ಆಯೋಜಿಸಲಾಗಿತ್ತು. ಆರೋಗ್ಯ ಸೇವಾ ವಿಭಾಗದ ಇಂಡ್‌ಕೆಮಿ ಹೆಲ್ತ್ ಸ್ಪೆಷಾಲಿಟಿ ಪ್ರೈವೇಟ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶಿಬಿರ ನಡೆಯಿತು.
ಶಿಬಿರದಲ್ಲಿ ಮೂಳೆ ತಜ್ಞರಾದ ಡಾ. ಭಾಸ್ಕರ್ ಎಸ್. (D’Ortho), ಆಡಳಿತ ನಿರ್ದೇಶಕರು, ಪುತ್ತೂರು ಸಿಟಿ ಆಸ್ಪತ್ರೆ ಇವರು ತಪಾಸಣೆ ಹಾಗೂ ಸಲಹೆ ನೀಡಿದರು.
ಇನ್ನರ್ ವೀಲ್ ಕ್ಲಬ್ ನ ನಿರ್ದೇಶಕಿ ಮಂಜುಳ ಭಾಸ್ಕರ್, ಅಧ್ಯಕ್ಷೆ ಮನೋರಮಾ ಸೂರ್ಯ, ಖಜಾಂಜಿ ಕವಿತಾ ಕೊಳತ್ತಾಯ, ಕಾರ್ಯದರ್ಶಿ ಶ್ರುತಿ ಎಸ್. ಬಂಗೇರ ಶಿಬಿರದಲ್ಲಿ ಉಪಸ್ಥಿತರಿದ್ದರು.
ಆರೋಗ್ಯ
‘Ritu Taare’ scheme-35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯಕ್ಕೆ ‘ಋತು ತಾರೆ’ ಯೋಜನೆ; ದ.ಕ.ದಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ..! ನಟಿ ರಮ್ಯಾ ರಾಯಭಾರಿ
35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರು: 35 ವರ್ಷ ಮೇಲ್ಪಟ್ಟ ಮಹಿಳೆಯರ ಆರೋಗ್ಯ ಮತ್ತು ಆರೈಕೆಗೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ರಾಜ್ಯ ಸರಕಾರ ‘ಋತು ತಾರೆ’ ಎಂಬ ಮಧ್ಯವಯಸ್ಕ ಮಹಿಳೆಯರ ಆರೋಗ್ಯ ಮತ್ತು ಮೆನೋಪಾಸ್ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಕಾಲ ಪ್ರಾಯೋಗಿಕವಾಗಿ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ. ಈ ಹಂತದ ಅನುಭವದ ಆಧಾರದಲ್ಲಿ ಬಳಿಕ ರಾಜ್ಯದಾದ್ಯಂತ ವಿಸ್ತರಿಸಲು ಸರಕಾರ ಉದ್ದೇಶಿಸಿದೆ.
ಮಹಿಳೆಯರ ಆರೋಗ್ಯವು ಕೇವಲ ತಾಯ್ತನಕ್ಕೆ ಸೀಮಿತವಾಗಿಲ್ಲ. ಮೆನೋಪಾಸ್ ಹಂತದಲ್ಲಿ ನಿದ್ರಾಹೀನತೆ, ದೇಹದಲ್ಲಿ ಏಕಾಏಕಿ ಬಿಸಿಯ ಅನುಭವ, ಕೀಲು ನೋವು, ಮೂಳೆಗಳ ದುರ್ಬಲತೆ, ಆತಂಕ ಹಾಗೂ ಮಾನಸಿಕ ಏರುಪೇರು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವುಗಳನ್ನು ವಯಸ್ಸಿನ ಸಹಜ ಬದಲಾವಣೆ ಎಂದು ನಿರ್ಲಕ್ಷಿಸದೆ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸರಕಾರ ತಿಳಿಸಿದೆ.
‘ಋತು ತಾರೆ’ ಯೋಜನೆಯಡಿ ಮಹಿಳೆಯರಿಗಾಗಿ ಪ್ರತ್ಯೇಕ ಕ್ಲಿನಿಕ್‌ಗಳನ್ನು ತೆರೆಯಲಾಗುತ್ತದೆ. ಇಲ್ಲಿ ಸಮಗ್ರ ಆರೋಗ್ಯ ತಪಾಸಣೆ, ಮಾನಸಿಕ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಒದಗಿಸುವುದರ ಜೊತೆಗೆ, ಆರೋಗ್ಯದ ವಿವರಗಳನ್ನು ದಾಖಲಿಸಲು ‘ಮಿಡ್-ಲೈಫ್ ಹೆಲ್ತ್ ಕಾರ್ಡ್’ ವಿತರಿಸಲಾಗುತ್ತದೆ.
ಈ ಕಾರ್ಯಕ್ರಮದ ರಾಯಭಾರಿಯಾಗಿ ಚಿತ್ರನಟಿ ರಮ್ಯಾ ಕಾರ್ಯನಿರ್ವಹಿಸಲಿದ್ದಾರೆ. ಮೆನೋಪಾಸ್ ಹಾಗೂ ಮಧ್ಯವಯಸ್ಕ ಮಹಿಳೆಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ, ಕಾರ್ಯಕ್ರಮದ ಸಂದೇಶವನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸಲು ಅವರು ಸಹಕರಿಸಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತಿಂಗಳ ಪ್ರಾಯೋಗಿಕ ಅನುಷ್ಠಾನ ಪೂರ್ಣಗೊಂಡ ಬಳಿಕ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಮಹಿಳೆಯರ ಬದುಕಿನ ಪ್ರತಿಯೊಂದು ಹಂತದಲ್ಲೂ ಉತ್ತಮ ಆರೋಗ್ಯ ಸೇವೆ, ಸೂಕ್ತ ಆರೈಕೆ ಮತ್ತು ಘನತೆಯ ಬದುಕು ದೊರೆಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸರಕಾರ ತಿಳಿಸಿದೆ.















