ದಕ್ಷಿಣ ಕನ್ನಡ
ಪುತ್ತೂರಿನಲ್ಲಿ ಮತ್ತೆ ಬಿಜೆಪಿ vs ಪುತ್ತಿಲ ಪರಿವಾರ ಮುಸುಕಿನ ಗುದ್ದಾಟ; ಬಿಜೆಪಿ ವಾಟ್ಸ್ಯಾಪ್ ಗ್ರೂಪ್ʼನಿಂದ ಅರುಣ್ ಪುತ್ತಿಲ ಹಾಗೂ ಬೆಂಬಲಿಗ ನಾಯಕರು ರಿಮೂವ್ ! ಇದರ ಹಿಂದಿದೆ ಭಾರೀ ಲೆಕ್ಕಾಚಾರ

ಬಿಜೆಪಿ ಹಾಗೂ ಪುತ್ತಿಲ ಪರಿವಾರದ ನಡುವಿನ ಮುಸುಕಿನ ಗುದ್ದಾಟದ ಮತ್ತೊಂದು ಇನ್ನಿಂಗ್ಸ್ ಮತ್ತೆ ಪುತ್ತೂರಿನಲ್ಲಿ ಆರಂಭಗೊಂಡಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗೆ ಸಿಂಹಸ್ವಪ್ನವಾಗಿದ್ದ ಅರುಣ್ ಪುತ್ತಿಲ ಹಾಗೂ ಬಿಜೆಪಿ ನಡುವಿನ ಹಳಸಿದ ಸಂಬಂಧ ಈಗ ಅಧಿಕೃತವಾಗಿ ‘ಡಿಜಿಟಲ್ ಕಡಿತ’ದ ಹಂತಕ್ಕೆ ಬಂದು ನಿಂತಿದೆ.
ಪುತ್ತೂರು ಬಿಜೆಪಿಯ ಅಧಿಕೃತ ವಾಟ್ಸ್ಯಾಪ್ ಗ್ರೂಫಿನಿಂದ ಅರುಣ್ ಪುತ್ತಿಲ ಹಾಗೂ ಅವರ ಸಿಂಪತೈಥರ್ಸ್‌ಗಳಾದ ಪ್ರಶಾಂತ್ ನೆಕ್ಕಿಲಾಡಿ, ಉಮೇಶ್ ಕೋಡಿಬೈಲ್, ಅನಿಲ್ ತೆಂಕಿಲ ಹಾಗೂ ಸಹಕಾರಿ ದುರೀಣ ಪ್ರಕಾಶ್ ಪಾಣಾಜೆಯವರನ್ನು ಕಿಕ್ ಔಟ್ ಮಾಡಲಾಗಿದೆ. ಈ ಪೈಕಿ ಮೊದಲ ಮೂವರು 6 ತಿಂಗಳ ಹಿಂದಿನವರೆಗೆ ಕ್ರಮವಾಗಿ ಪುತ್ತೂರು ಗ್ರಾಮಾಂತರ ಹಾಗೂ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಪುತ್ತೂರು ನಗರ ಮಂಡಲದ ಅಧ್ಯಕ್ಷರಾದ ಶಿವಕುಮಾರ್ ಕಲ್ಲಿಮಾರ್ ಅವರು ಈ ಪ್ರಮುಖರನ್ನು ಗ್ರೂಫಿನಿಂದ ರಿಮೂವ್ ಮಾಡಿರುವುದಾಗಿ ತಿಳಿದು ಬಂದಿದೆ
ವಿಧಾನಸಭಾ ಚುನಾವಣೆಗೆ ಇನ್ನೂ ಭರ್ತಿ 2 ವರ್ಷ ಬಾಕಿಯಿದ್ದು, ನಿಧಾನವಾಗಿ ಪಕ್ಷಗಳು ‘ಚುನಾವಣಾ ಮೋಡ್’ಗೆ ಬರುತ್ತಿವೆ. ಹೀಗಾಗಿ ಪಕ್ಷಗಳು ತಮ್ಮ ಚುನಾವಣಾ ಯಂತ್ರಕ್ಕೆ ಆಯಿಲಿಂಗ್ ಮಾಡಿ ಯುದ್ಧಕಾಲದಲ್ಲಿ ಸರ್ವ ಸನ್ನದ್ಧವಾಗಿಡಲು ಮುಂದಾಗಿವೆ.
ಕರಾವಳಿ ಜಿಲ್ಲೆ ಬಿಜೆಪಿಗೆ ಹುಲುಸಾಗಿ ಫಸಲು ಕೊಡುವ ಜಿಲ್ಲೆ. ರಾಜ್ಯದ ಉಳಿದ ಕಡೆಗಳಂತೆ ಈ ಭಾಗದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವಷ್ಟು ಪರಿಣಾಮಕಾರಿಯಲ್ಲ. ಹಾಗಿದ್ದೂ ಬಿಜೆಪಿಗೆ ದೊಡ್ಡ ತಲೆನೋವಾಗಿರುವುದು ಪುತ್ತೂರು ಕ್ಷೇತ್ರ. ಅದಕ್ಕೆ ಪ್ರಮುಖ ಕಾರಣ ಕಳೆದ ಬಾರಿ ಅರುಣ್ ಪುತ್ತಿಲ ಅಭ್ಯರ್ಥಿಯಾಗಿ ಮಾಡಿರುವ ಡ್ಯಾಮೇಜ್. ಚುನಾವಣೆಯ ಬಳಿಕವೂ ಪುತ್ತಿಲ ತನ್ನದೇ ಆದ ಸಂಘಟನೆಯನ್ನು ಕಟ್ಟಿಕೊಂಡು ಟಕ್ಕರ್ ಕೊಡುತ್ತಿರುವುದು ಕರಾವಳಿಯ ಬಿಜೆಪಿಯ ಕ್ಲಿನ್ ಸ್ವೀಪ್ (ಮಂಗಳೂರು ಕ್ಷೇತ್ರ ಹೊರತುಪಡಿಸಿ) ಕನಸ್ಸಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದೆ.
ಸಿಗದ ರಾಜ ಮಾರ್ಯಾದೆ !
ಕಳೆದ ಲೋಕಸಭಾ ಚುನಾವಣೆಯಲ್ಲಿ “ಅತ್ತೂ ಕರೆದು ಔತಣ ಕೊಡಿಸಿಕೊಂಡರು” ಎಂಬಂತೆ ಪುತ್ತಿಲ ಅಂಡ್ ಟೀಮ್ ಬಿಜೆಪಿ ಸೇರ್ಪಡೆಗೊಂಡಿತ್ತು. ಆ ಸಂದರ್ಭ ಬಿಜೆಪಿಯೇನೂ ಅವರಿಗೆ “ರತ್ನಗಂಬಳಿಯ ಸ್ವಾಗತ” ನೀಡಿರಲಿಲ್ಲ. Infact ಪುತ್ತಿಲ ಪರಿವಾರದ ಮುಖಂಡರೇ ನಿರಂತರವಾಗಿ ರಾಜ್ಯಾಧ್ಯಕ್ಷರ ಮನೆಯ ಕದ ತಟ್ಟಿ ತಮ್ಮನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಗೋಗರೆದ ಪರಿಣಾಮ ಮನಸ್ಸಿಲ್ಲದ ಮನಸ್ಸಿನಿಂದ ಅವರನ್ನು ಅಂದು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದಕ್ಕೆ ಪುರಾವೆ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ, ಅಥಾವ ಪಕ್ಷದ ಬಾವುಟ ನೀಡುವಂತಹ ಯಾವುದೇ “ರಾಜ ಮರ್ಯಾದೆ”ಯನ್ನು ರಾಜ್ಯಾಧ್ಯಕ್ಷ ವಿಜಯೇಂದ್ರ ಪುತ್ತಿಲ ಪರಿವಾರಕ್ಕೆ ಕೊಟ್ಟಿರಲಿಲ್ಲ ಎನ್ನುವುದು. ಇನ್ನೂ ಪುತ್ತೂರಿನಲ್ಲಿ ಪಕ್ಷ ಸೇರ್ಪಡೆಗೆ ಕಛೇರಿಗೆ ಬರುವ ದಿನ ಹೈಡ್ರಾಮವೇ ನಡೆದು ಕೊನೆಗೆ ಆ ಕಾರ್ಯಕ್ರಮ ಮಂಗಳೂರಿಗೆ ಶಿಫ್ಟ್ ಆಗಿತ್ತು.
ಇದಾಗಿ ವರ್ಷ ಕಳೆಯುತ್ತಿದ್ದಂತೆಯೇ ಯಾವುದೇ ಸ್ಪಷ್ಟ ಕಾರಣವನ್ನು ಸಾರ್ವಜನಿಕವಾಗಿ ತಿಳಿಸದೇ ಪುತ್ತಿಲ ಪರಿವಾರ ತನ್ನದು ಬೇರೆಯೇ ಬೆಕ್ಕಿನ ಬಿಡಾರ ಎಂದು ಪಕ್ಷದಿಂದ ದೂರ ಹೋಗಿತ್ತು. ಕಳೆದ ಡಿಸೆಂಬರ್‌ನಲ್ಲಿ ನಡೆದ ‘ಅಟಲ್ ವಿರಾಸತ್’ ಕಾರ್ಯಕ್ರಮಕ್ಕೆ ಈ ನಾಯಕರು ಗೈರಾದಾಗಲೇ ಬಿರುಕು ಸ್ಪಷ್ಟವಾಗಿತ್ತು.
‘ ಮುನಿಸುಗೊಂಡ ಪತ್ನಿ ತವರು ಮನೆಗೆ ಹೋದಂತೆ…’
ಪುತ್ತಿಲ ಮತ್ತು ಬಿಜೆಪಿ ನಡುವಿನ ಸಂಬಂಧ ಹೇಗಿದೆಯೆಂದರೆ, ಮುನಿಸಿಕೊಂಡ ಪತ್ನಿ ತವರು ಮನೆಗೆ ಹೋದರೂ ವಿಚ್ಛೇದನ ನೀಡದ ಸ್ಥಿತಿಯಂತಿದೆ. ಅತ್ತ ಅಧಿಕೃತವಾಗಿ ರಾಜೀನಾಮೆ ನೀಡದೆ, ಇತ್ತ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸದೆ ಪುತ್ತಿಲ ಪರಿವಾರವು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿತ್ತು. ಆದರೇ ಇದೀಗ “ಕಾಯುವಷ್ಟು ಕಾದಾಯ್ತು, ಇನ್ನು ಸಾಕು” ಎಂಬ ಮನಸ್ಥಿತಿಗೆ ಬಿಜೆಪಿ ಹೈಕಮಾಂಡ್ ಬಂದಂತಿದೆ.
ಚುನಾವಣೆಗೆ ಫುಲ್ ಫೇಸ್‌ನಲ್ಲಿ ತಯಾರಿ ಆಗಬೇಕಿದ್ರೆ ಈ ಸಮಸ್ಯೆಯನ್ನೊಂದು ಕಡ್ಡಿ ತುಂಡು ಮಾಡಿದಂತೆ ಮುಗಿಸಿಕೊಳ್ಳಬೇಕು ಎಂದು ಬಿಜೆಪಿ ನಿರ್ಧರಿಸಿದಂತಿದೆ. ಈ ಮೂಲಕ ಪುತ್ತೂರಿನಲ್ಲಿ ಗತ ವೈಭವಕ್ಕೆ ಹಿಂತುರುಗಲು ಬೇಕಾದ ಸಿದ್ಧತೆಗೆ ಬಿಜೆಪಿ ಮುಂದಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಇದರ ಭಾಗವಾಗಿ ಪುತ್ತೂರು ಬಿಜೆಪಿಯು ತನ್ನ ಅಧಿಕೃತ ವಾಟ್ಸ್ಯಾಪ್ ಗ್ರೂಪಿನಿಂದ ಪುತ್ತಿಲ ಪರಿವಾರದ ನಾಯಕರನ್ನು ತೆಗೆದು ಹಾಕಿದೆ
ಅಟಲ್ ವಿರಾಸತ್ ಬಳಿಕ ಉಲ್ಭಣಿಸಿದ ʼವಿರಸ ʼ
ಪ್ರಶಾಂತ್ ನೆಕ್ಕಿಲಾಡಿ, ಉಮೇಶ್ ಕೋಡಿಬೈಲ್, ಅನಿಲ್ ತೆಂಕಿಲ ರವರು 6 ತಿಂಗಳ ಹಿಂದಿನವರೆಗೆ ಕ್ರಮವಾಗಿ ಪುತ್ತೂರು ಗ್ರಾಮಾಂತರ ಹಾಗೂ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಡಿಸೆಂಬರ್‌ನಲ್ಲಿ ಪುತ್ತೂರಿನಲ್ಲಿ ನಡೆದ ‘ಅಟಲ್ ವಿರಾಸತ್’ ಕಾರ್ಯಕ್ರಮಕ್ಕೆ ಈ ಮೂವರು ಪ್ರಧಾನ ಕಾರ್ಯದರ್ಶಿಗಳು ಗೈರಾಗಿದ್ದರು. ಅಲ್ಲದೇ ತಾವು ಈ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಮಾಧ್ಯಮ ಪ್ರಕಟಣೆಯನ್ನು ನೀಡಿದ್ದರು. ಹೀಗಾಗಿ ಆ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಆ ಮೂರು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಾಗೇಶ್ ಟಿ ಎಸ್, ಸುನೀಲ್ ದಡ್ಡು ಹಾಗೂ ವಿರೂಪಾಕ್ಷ ಮಚ್ಚಿಮಲೆಯವರನ್ನು ಬಿಜೆಪಿ ನೂತನವಾಗಿ ನೇಮಿಸಿತ್ತು. ಆದರೇ ಈ ಹಿಂದೆ ನೇಮಕಗೊಂಡಿದ್ದ ಪ್ರಧಾನ ಕಾರ್ಯದರ್ಶಿಗಳನ್ನು ತೆಗೆದು ಹಾಕಿರುವುದಾಗಿಯೂ ಅಥಾವ ಬದಲಿಸಿರುವುದಾಗಿಯೂ ಎಲ್ಲಿಯೂ ಹೇಳಿಕೊಳ್ಳದೆ ಜಾಣತನ ಪ್ರದರ್ಶಿಸಿತ್ತು.
ಸೈಲೆಂಟ್ ಮೋಡ್ ನಿಂದ Action ಮೋಡ್ ಗೆ

ಆ ಬಳಿಕ ಸೈಲೆಂಟ್ ಮೋಡ್ ಗೆ ತೆರಳಿದ ಬಿಜೆಪಿ ಒಂದಷ್ಟು ಕಾದು ನೋಡುವ ತಂತ್ರಕ್ಕೆ ಇಳಿಯಿತು. ಈ ಅವಧಿಯಲ್ಲಿ ಪುತ್ತಿಲ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದವರನ್ನು ಕಾರ್ಯಕ್ರಮದಿಂದ ದೂರ ಇಡುವ ಅಥವಾ ಪಕ್ಷದ ಅಧಿಕೃತ ಮಾಹಿತಿ ನೀಡುವ Whatsapp ಗ್ರೂಪಿನಿಂದ ತೆಗೆಯುವ ಕಾರ್ಯ ಮಾಡದೇ ಜಾಗರೂಕ ಹೆಜ್ಜೆ ಇಟ್ಟಿತ್ತು. ಹಾಗಿದ್ದೂ ಕಳೆದ 6 ತಿಂಗಳಿನಿಂದ ಪುತ್ತಿಲ ಪರಿವಾರದ ಯಾವೊಬ್ಬ ನಾಯಕರೂ ಬಿಜೆಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಈಗ ಬಿಜೆಪಿ ತನ್ನ ಚುನಾವಣಾ ಯಂತ್ರಕ್ಕೆ ಆಯಿಲಿಂಗ್ ಮಾಡಲು ಹೊರಟಿದ್ದು, ತನಗೆ ‘ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ಪುತ್ತಿಲ ಪರಿವಾರವನ್ನು’ ತೆಗೆದುಹಾಕದೆ ಚುನಾವಣಾ ತಂತ್ರಗಾರಿಕೆ ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಂತಿದೆ. ಅದರ ಮೊದಲ ಹಂತವಾಗಿ ಬಿಜೆಪಿ ತಾಲೂಕು ಪದಾಧಿಕಾರಿಗಳ ಹಾಗೂ ಮುಂಚೂಣಿ ನಾಯಕರ ಅಧಿಕೃತ whatsapp ಗ್ರೂಪಿನಿಂದ ಪುತ್ತಿಲ ಪರಿವಾರದ ಮುಂಚೂಣಿ ಮುಖಂಡರನ್ನು ರಿಮೂವ್ ಮಾಡಿದೆ.
ಸೋಶಿಯಲ್ ಮೀಡಿಯಾ ಸಮರ

ಈ ಬೆಳವಣಿಗೆಯನ್ನು ಪುತ್ತಿಲ ಪರಿವಾರವು ತನಗೆ ಪೂರಕವಾಗಿ ಬಳಸಿಕೊಳ್ಳಲು ಮುಂದಾಗಿದೆ. ಅರುಣ್ ಪುತ್ತಿಲರನ್ನು ‘ದುರಂತ ನಾಯಕ’ನಂತೆ ಬಿಂಬಿಸುವ ಪ್ರಯತ್ನಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದ್ದು, “ಗ್ರೂಪ್‌ನಿಂದ ಹೊರಹಾಕಬಹುದು, ಆದರೆ ಕಾರ್ಯಕರ್ತರ ಮನಸ್ಸಿನಿಂದಲ್ಲ” ಎಂಬ ಭಾವುಕ ಪೋಸ್ಟ್‌ಗಳು ಹರಿ ಬಿಟ್ಟಿದೆ.
ಟಿಕೆಟ್ ಬಿಜೆಪಿಯದು – ಪ್ರೀತಿ ಕಾಂಗ್ರೆಸ್ ನೆಡೆಗೆ
ಈ ಪೋಸ್ಟ್‌ಗೆ ಬಿಜೆಪಿಯ ಯುವ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದು, “ಪುತ್ತಿಲ ಪರಿವಾರದ ಕೆಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಬಿಜೆಪಿ ಹಾಗೂ ಬಿಜೆಪಿ ನಾಯಕರ ಬಗ್ಗೆ ಇಲ್ಲ ಸಲ್ಲದನ್ನು ಬರೆಯುತ್ತಾರೆ. ಇದೇ ವೇಳೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಶಾಸಕರ ಬಗ್ಗೆ ಯಾವುದೇ ಟೀಕೆ ಟಿಪ್ಪಣಿಗಳನ್ನು ಮಾಡುವುದಿಲ್ಲ. ಕಾಂಗ್ರೆಸ್‌ನ ಕಡೆಗಿನ ಅವರ ವರ್ತನೆ ಶಂಕಾಸ್ಪದವಾಗಿದೆ. ಅವರು ಕೇಳುವುದು ಬಿಜೆಪಿ ಟಿಕೆಟ್, ಪ್ರೀತಿ ಕಾಂಗ್ರೆಸ್ ಕಡೆಗೆ ತೋರಿಸುವುದು ಇದು ಹೇಗೆ ಸರಿ? ಹೀಗಾಗಿ ಪಕ್ಷದ ಅಧಿಕೃತ ಮಾಹಿತಿಗಳನ್ನು ಹಂಚುವ ಗ್ರೂಪಿನಿಂದ ಅವರನ್ನು ತೆಗೆದಿರುವುದು ಒಳ್ಳೆಯ ಬೆಳವಣಿಗೆ” ಎಂದಿದ್ದಾರೆ.
ಇನ್ನೂ ಹಿರಿಯ ಬಿಜೆಪಿ ನಾಯಕರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, “Whatsapp ಗ್ರೂಪಿನಿಂದ ತೆಗೆದರು ಎಂದ ಮಾತ್ರಕ್ಕೆ ಪಕ್ಷದಿಂದ ತೆಗೆದರು ಎನ್ನುವುದು ತಪ್ಪು. whatsapp group ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ಬೇರೆ ಬೇರೆಯೇ” ಎಂದು ಸ್ಪಷ್ಟಪಡಿಸಿದ್ದಾರೆ
ಪುತ್ತೂರು
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್‌ಮ್ಯಾನ್ ಮೃತ್ಯು

ಪುತ್ತೂರು: ಕೆದಿಲ ಶಾಲೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್‌ಮ್ಯಾನ್‌ವೊಬ್ಬರು ಮೃತಪಟ್ಟ ಘಟನೆ ಅ.3ರಂದು ನಡೆದಿದೆ.
ಮೃತರನ್ನು ಕೆಮ್ಮಾಯಿ ನಿವಾಸಿ ದಿ. ಗುಡ್ಡಪ್ಪ ಗೌಡರವರ ಪುತ್ರ ರವಿ ಗೌಡ ಎಂದು ಗುರುತಿಸಲಾಗಿದೆ. ಇವರು ಮೆಸ್ಕಾಂ ಬಂಟ್ವಾಳ ತಾಲೂಕಿನ ಮಾಣಿ ಸೆಕ್ಷನ್ ನಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೂಲಗಳ ಪ್ರಕಾರ, ಎಚ್‌ಟಿ (ಹೈಟೆನ್ಶನ್) ವಿದ್ಯುತ್ ಲೈನ್‌ನ ಜಿಒಎಸ್ (ಗ್ಯಾಂಗ್ ಆಪರೇಟಿಂಗ್ ಸ್ವಿಚ್) ತೆರೆಯುವ ಸಂದರ್ಭದಲ್ಲಿ ಅರ್ಥ್ ಆಗಿ ವಿದ್ಯುತ್ ಪ್ರವಹಿಸಿ ರವಿ ಗೌಡ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ.
ಕೆದಿಲ ಪಾಟ್ರಕೋಡಿ, ಮಿತ್ತೂರು ಹಾಗೂ ಗಡಿಯಾರ ಭಾಗಗಳಲ್ಲಿ ಪವರ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಗೌಡ ಅವರು, ತಮ್ಮ ಸೇವಾ ಮನೋಭಾವದಿಂದ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ಅಕಾಲಿಕ ನಿಧನ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಅಪರಾಧ
Mangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಮಂಗಳೂರು: ನಗರದ ಬರ್ಕೆ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿ ದೆಹಲಿ ಮೂಲದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ₹18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ (34), ಸಂಜೀವ್ ಕುಮಾರ್ ಅಲಿಯಾಸ್ ಜಾನಿ (34) ಬಂಧಿತ ಆರೋಪಿಗಳು
ಸೆ.28ರಂದು ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರ ನಿವಾಸಿಗಳು ಮಧ್ಯಾಹ್ನ ಸುಮಾರು 3 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ವಾಪಸ್ ಬಂದು ನೋಡಿದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.
ಕಳ್ಳರು ಮನೆಯಲ್ಲಿದ್ದ ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಹಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೇ ವೇಳೆ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನ ನಡೆದಿತ್ತು. ಮನೆಯ ಲಾಕರ್‌ನ್ನು ಹೊಡೆದು ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳು ಯಾವುದೇ ಬೆಲೆಬಾಳುವ ವಸ್ತು ಸಿಗದ ಹಿನ್ನೆಲೆಯಲ್ಲಿ ಚೆಕ್ ಪುಸ್ತಕಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಎರಡೂ ಪ್ರಕರಣಗಳ ತನಿಖೆ ಕೈಗೊಂಡ ಪೊಲೀಸರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಆರೋಪಿಗಳು ಮನೆಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ.
ತಕ್ಷಣ ಗುಜರಾತ್‌ನ ವಡೋದರಾ ಪೊಲೀಸರ ಸಹಾಯ ಪಡೆದುಕೊಂಡ ಮಂಗಳೂರು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿದ್ದ 24 ಗಂಟೆಗಳೊಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ.
ಬಂಧಿತ ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆತನ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಕೂಡ ಬಾಕಿ ಇದ್ದು, ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಶಿಕ್ಷಣ
Narendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.
ಹೈದರಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ಕ್ಷೇತ್ರಮಟ್ಟದ ಕ್ರೀಡಾಕೂಟದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಎನ್. ಇವರು 1500ಮೀ., 3000ಮೀ ರೇಸ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಇವರು ಪುಣಚ ನಿವಾಸಿಗಳಾದ ಮೋಹನ ನಾಯ್ಕ್ ಎನ್. ಮತ್ತು ಭವ್ಯ ದಂಪತಿಗಳ ಪುತ್ರ.
ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ, ಬಳ್ಳಾರಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವದ ಸ್ಪರ್ಧೆಗಳಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಶಿತ್ ಆರ್. ಗೌಡ ಇವರು ಫಿಸಿಕ್ಸ್ ಎಕ್ಸ್ ಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ನಿವಾಸಿಗಳಾದ ರಾಜೇಶ್ ಮತ್ತು ನಳಿನಿ ದಂಪತಿಗಳ ಪುತ್ರ.


















