ದಕ್ಷಿಣ ಕನ್ನಡ
Hanumagiri : ಹನುಮಗಿರಿಯಲ್ಲಿ ರೂಪುಗೊಂಡಿದೆ ದೇಶದ ಅಸ್ಮಿತೆಯನ್ನು ಸಾದರಪಡಿಸುವ ಅಮರಗಿರಿ – ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಅತ್ಯಪೂರ್ವ ತಾಣ – ನೋಡಲು ಕಣ್ಣುಗಳೆರಡು ಸಾಲದು – Exclusive Photo Video
Amaragiri ಹನುಮಗಿರಿ : ಫೆ 3 : ಇದು ರಾಷ್ಟ್ರೀಯತೆ, ಸಂಸ್ಕೃತಿ , ಸಂಸ್ಕಾರ, ಧಾರ್ಮಿಕತೆಯನ್ನು ಅನಾವರಣಗೊಳಿಸುವ ಅಮೋಘ ಲೋಕ, ಇದನ್ನು ಬಣ್ಣಿಸಲು ಪದಗಳು ಸಾಲದು, ನೋಡಲು ಕಣ್ಣುಗಳು ಸಾಲದು. ದೇಶ ಭಕ್ತಿಯನ್ನು ಜಾಗೃತಗೊಳಿಸುವ, ರಾಷ್ಟ್ರೀಯತೆಯನ್ನು ಉದ್ದೀಪನಗೊಳಿಸುವ ಅತ್ಯಾಪೂರ್ವ ತಾಣವಾಗಿ ರೂಪುಗೊಂಡಿದೆ ಹನುಮಗಿರಿಯಲ್ಲಿರುವ ಅಮರಗಿರಿ. ದೇಶದ ಅಭ್ಯುದಯದಲ್ಲಿ ಮಹತ್ತರ ಪಾತ್ರವನ್ನು ನಿತ್ಯ ನಿರಂತರವಾಗಿ ನಿರ್ವಹಿಸುವ ರೈತ ಹಾಗೂ ಯೋಧ ದೇಶದೆರಡು ಕಣ್ಣುಗಳು. ಅವರಿಗೆ ಏಕಕಾಲದಲ್ಲಿ ಒಂದೇ ಸ್ಥಳದಲ್ಲಿ ಗೌರವ ಆದರ ಸಿಗುವ ಸ್ಥಳ ಇದಾಗಿದೆ.
2 ಎಕ್ರೆಯ ವಿಶಾಲ ಜಾಗದಲ್ಲಿ ಭಾರತಮಾತೆ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ, ಭರತ ಭೂಮಿಗೆ ದಿಕ್ಕು ದೆಶೆ ತೋರಿಸಿದ ಸಂತರು, ರಾಷ್ಟ್ರ ನಾಯಕರು, ಮಹನೀಯರು ಯೋಧರು ಹಾಗೂ ಅನ್ನದಾತರನ್ನು ನೆನಪಿಸುವ ವಿಶಿಷ್ಟ ಕಾರ್ಯ ಇಲ್ಲಿ ಮಾಡಲಾಗಿದೆ. ಇಲ್ಲಿ ಒಂದು ಸುತ್ತು ತಿರುಗಾಡಿ ಹೊರ ಬಂದಾಗ ದೇಶ ಕಟ್ಟುವ ಕೆಲಸ ಮಾಡಿದ ಹಾಗೂ ಮಾಡುತ್ತಿರುವ ಮಹನೀಯರ ಬಗ್ಗೆ ಪ್ರೀತಿ ಅಭಿಮಾನ ಮೂಡದಿರದು.
ಪುತ್ತೂರಿನಿಂದ 25 ಕಿಮೀ ದೂರದಲ್ಲಿರುವ ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯನ ಕ್ಷೇತ್ರ. ಸುಂದರ ಉದ್ಯಾವನದ ಮಧ್ಯೆ ಕಂಗೋಳಿಸುವ ಆಂಜನೇಯನ ಮಂದಿರದ ಮುಂಭಾಗ ರಾಮಯಣದ ಕಥನಕವನ್ನು ಚಿತ್ರಗಳಲ್ಲಿ ವಿವರಿಸುವ ಆಕರ್ಷಕ ರಾಮಾಯಾಣ ಥೀಮ್ ಪಾರ್ಕ್ ಇಲ್ಲಿದೆ. ಗಿರಿಯ ತುದಿಯಲ್ಲಿ ಕೋದಂಡರಾಮನ ಭವ್ಯ ವಿಗ್ರಹವಿದೆ. ರಾಮಗಿರಿಯ ದರ್ಶನದ ಬಳಿಕ ಸಿಗುವುದೇ ನೂತನವಾಗಿ ರೂಪುಗೊಂಡಿರುವ ’ಅಮರಗಿರಿ’.

ಅಮರಗಿರಿಯಲ್ಲಿ ಏನಿದೆ ?
ಅಮರ ಗಿರಿಯ ವೀಕ್ಷಣೆ ಸಮಗ್ರ ಭಾರತ ದರ್ಶನದ ಮುದ ನೀಡಲಿದೆ. ಆರಂಭದಲ್ಲಿ ವಿಶಾಲ ಪ್ರಾಂಗಣ . ಅದರ ಎಡಬದಿಯ ಮೂಲೆಯಲ್ಲಿ ಎತ್ತರದಲ್ಲಿ ಸ್ಥಾಪಿಸಲಾಗಿರುವ ಶಿಲಾಫಲಕದಲ್ಲಿ ಸದಾ ಜಾಗೃತ ಸ್ಥಿತಿಯಲ್ಲಿದ್ದು ಕಾವಲು ಕಾಯುತ್ತಿರುವ ಶಸ್ತ್ರಧಾರಿ ಸೈನಿಕ ನ ಪ್ರತಿಮೆ . ಅದರ ಕೆಳಗಡೆ ಗೋಡೆಯಲ್ಲಿ ಮೂಡಿರುವ ಕೇರಳ ಶೈಲಿಯ ವರ್ಲಿ ಚಿತ್ತಾರಗಳಲ್ಲಿ ದೇಶದ ಸಾರ್ವಭೌಮತೆಯನ್ನು ಕಾಯುತ್ತಿರುವ ದೇಶದ ಪ್ರತಿಷ್ಟೆಯ ಸಂಕೇತವಾಗಿರುವ ಮೂರು ಸೈನ್ಯಗಳ ಸಾಹಸ, ಸಾಮಾರ್ಥ್ಯ, ಶಸ್ತ್ರ ಸಂಪತ್ತನ್ನು ಸಾದರಪಡಿಸಲಾಗಿದೆ. ಇದು ನೋಡುಗನ ಕಣ್ಣಿನಲ್ಲಿ ಸೈನ್ಯದ ಬಗ್ಗೆ ಹೆಮ್ಮೆ ಮೂಡುವಂತೆ ಮಾಡುತ್ತದೆ. ಇದರ ಜತೆಗೆ ಬದುಕಿಗೆ ಜೀವನ ಧರ್ಮ ಬೋಧಿಸಿದ ’ಗೀತೋಪದೇಶ’ದ ಸಂದೇಶಗಳು ಮನ ಮುಟ್ಟುವಂತೆ ಚಿತ್ರಿತವಾಗಿದೆ.

ಆ ಬಳಿಕ ಸಿಗುವ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ವೀಕ್ಷಿಸಿ ಕೆಳಗಿಳಿದರೆ ಬಂಕಿಮ ಚಂದ್ರರಿಂದ ರಚಿಸಲ್ಪಟ್ಟ ಸ್ವಾತಂತ್ರ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಸದಾ ಉರಿಯುವಂತೆ ನೋಡಿಕೊಂಡ ’ವಂದೇ ಮಾತರಂ’ನ ಸಾಲುಗಳು ಕಣ್ತುಂಬಿಸಿಕೊಳ್ಳಬಹುದು . ಇಳಿಯುತ ಸಾಗುತ್ತಿದ್ದಂತೆ ಅಶೋಕ ಸ್ಥಂಭ, ಸ್ಥೂಪ, ರಾಷ್ಟ್ರ ಲಾಂಛನ, ಮುಷ್ಟಿ ಬಿಗಿ ಹಿಡಿದ ಹಸ್ತದ ದರ್ಶನವಾಗುತ್ತದೆ . ಗಿರಿಯನ್ನು ಇಳಿಯುತ್ತಾ ಬರುತ್ತಿದ್ದಂತೆ ಭವ್ಯ ಭಾರತದ ರಕ್ಷಣಾ ವ್ಯವಸ್ಥೆಯೂ ನಿಮ್ಮ ಮನ: ಪಟಲದಲ್ಲಿ ಮೂಡುತ್ತದೆ. ಆಗ ಎದುರುಗಡೆ ಕಾಣುವುಧೇ ಅಷ್ಟಭುಜಾಕೃತಿಯ ಸುಂದರ ಆಲಯ.

ಅಷ್ಟಭುಜಾಕೃತಿಯ ಆಲಯದಲ್ಲಿ ಏನಿದೆ ?
ಶ್ವೇತವರ್ಣದ ಅಮೃತಳೆಯ ’ಭಾರತ ಮಾತೆ’ಯ ಆರಡಿ ಎತ್ತರದ ಅಮೃತಶಿಲೆಯ ವಿಗಹ, ಹಿಂದೆ ಅಖಂಡ ಭಾರತದ ಚಿತ್ತಾರದಲ್ಲಿ ಆಂಜನೇಯ ಮತ್ತು ಪಾರ್ವತೀ ಪರಮೇಶ್ವರರ ನೆಲೆ, ಭಾರತಮಾತೆಯ ಎಡ, ಬಲಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ (ಜೈ ಜವಾನ್, ಜೈ ಕಿಸಾನ್) ಪ್ರತಿಮೆಗಳು, ’ದೇಶಕ್ಕೆ ಅನ್ನ ನೀಡುವ ರೈತ ಮತ್ತು ಗಡಿಗಳಲ್ಲಿ ಕಾವಲು ಕಾಯುವ ಯೋಧʼ ಇವರೀರ್ವರು ದೇಶದ ಉಸಿರೆಂಬ ಸಂಕೇತವಾಗಿ ಇದನ್ನು ಸ್ಥಾಪಿಸಲಾಗಿದೆ.

ಭಾರತಾಂಬೆಯ ಎದುರಿಗೆ ’ಅಮರ ಜವಾನ್’ ಸ್ಮಾರಕ ಶಿಲೆ, ನೇಪಥ್ಯದಲ್ಲಿ ಸೂರ್ಯೋದಯದ ಕಲ್ಪನೆಯ ರಚನೆಗಳು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ. ಮೇಲ್ಬಾಗದಲ್ಲಿ ಭಾರತವನ್ನು ಕಟ್ಟಿದ ವೀರ ಸೇನಾನಿಗಳ ಕೆತ್ತನೆ ಶಿಲ್ಪಗಳು, ಇತಿಹಾಸವನ್ನು ಕಣ್ಣೆದುರು ನಿಲ್ಲಿಸುತ್ತವೆ. ಭವ್ಯ ಭಾರತವನ್ನು ನಿರೂಪಿಸಿದ ಇವರೆಲ್ಲರ ಇತಿಹಾಸಗಳ ಮರು ಓದು ಈ ಕಲಾಕೃತಿಗಳಲ್ಲಿ ಸಾಕ್ಷಾತ್ಕರಗೊಂಡಿದೆ. ಏಕಕಾಲದಲ್ಲಿ ಸರಿ ಸುಮಾರು ನೂರು ಮಂದಿ ಆಸೀನರಾಗಿ ಈ ಕಲಾ ಮೆರಗನ್ನು ವೀಕ್ಷಿಸಬಹುದಾದಷ್ಟು ವಿಶಾಲ ಸ್ಥಳವನ್ನು ಅಷ್ಟಭುಜಾಕೃತಿಯ ಆಲಯ ಹೊಂದಿದೆ.

ದೇವತಾರಾಧನೆ. ರಾಷ್ಟ್ರಾರಾಧನೆ. ಕಲಾರಾಧನೆ, ನಿಸರ್ಗಾರಾಧನೆಗಳ ಮೂಲಕ ಭವ್ಯ ಭಾರತವನ್ನು ಪ್ರಸ್ತುತ ಪಡಿಸುವ ಪ್ರಯತ್ನ ಅಮರಗಿರಿಯ ಮೂಲಕ ಹನುಮಗಿರಿಯಲ್ಲಿ ಆಗಿದೆ. ʼಬದುಕು ಸಮಾಜಕ್ಕಾಗಿ, ಪ್ರಾಣ ದೇಶಕ್ಕಾಗಿʼ ಎನ್ನುವ ಸಂದೇಶಗಳು ಪ್ರವಾಸಿಗನ ಮನದೊಳಗೆ ಇಳಿಯುವಂತೆ ಮಾಡುವಲ್ಲಿ ಅಮರಗಿರಿ ಅಕ್ಷರಶ: ಸಫಲವಾಗಿದೆ. ಇದರ ಒಳಹೊಕ್ಕು ಹೊರ ಬರುವಾಗ ’ದೇಶಪೂಜನ’ದ ಅನುಭಾವವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

ಫೆ 11 ರಂದು ಲೋಕಾರ್ಪಣೆ
ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಷಾ ಅವರು ಫೆಬ್ರವರಿ ೧೧ ರಂದು ಮಧ್ಯಾಹ್ನ ಅಮರಗಿರಿಗೆ ಆಗಮಿಸಲಿದ್ದು ಅಷ್ಟಭುಜಾಕೃತಿಯ ಆಲಯದೊಳಗೆ ಇರುವ ಭಾರತಾಂಬೆಗೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಇದಕ್ಕಾಗಿ ಇಲ್ಲಿ ಅಂತಿಮ ಹಂತದ ಕಾರ್ಯಗಳು ಭರದಿಂದ ಸಾಗುತ್ತಿದೆ. ಗೃಹ ಸಚಿವರ ಸುರಕ್ಷತಾ ತಂಡ ಮುಂದಿನ ವಾರದ ಆರಂಭದಿಂದಲೇ ಇಲ್ಲಿ ಮೊಕ್ಕಾಂ ಹೂಡಲಿದೆ.

ಹನುಮಗಿರಿಯ ಬಗ್ಗೆ
ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿರುವ ಅಪರೂಪದ ದೇಗುಲ ‘ಹನುಮಗಿರಿ’. ಇದು ಸದಾ ಪ್ರವಾಸಿಗರಿಂದ ತುಂಬಿ ತುಳುಕುವ ಸುಂದರ ಪ್ರವಾಸಿ ತಾಣ ಹಾಗೂ ಯಾತ್ರಾ ಸ್ಥಳ. ಆರಂಭದಲ್ಲಿ ಸಿಗುವ ರಾಮಾಯಾಣ ಥೀಮ್ ಪಾರ್ಕ್ ದಾಟಿ ಪಂಚಮುಖಿ ಅಂಜನೇಯನ ದರ್ಶನ ಪಡೆದು ಮುಂದೆ ಸಾಗುವ ಭಕ್ತರ ವಿಶ್ರಾಂತಿಗಾಗಿ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲು ನರಸಿಂಹ ಮಂಟಪವಿದೆ. ಅದನ್ನು ದಾಟಿ ಮುಂದಕ್ಕೆ ಹೋದರೆ ಸಂಜೀವಿನಿ ದಿವ್ಯೌಷಧ ಸಸ್ಯಗಳ ವನ ಹಾಗೂ ಹನುಮಾನ್ ಮಾನಸೋದ್ಯಾನವಿದೆ. ಶಿಲೆಗಳಲ್ಲಿ ಕೆತ್ತಲಾಗಿರುವ ತೇತ್ರಾಯುಗದ ಕಥಾನಕಗಳು ಗಿರಿಯ ಉದ್ದಕ್ಕೂ ಕಾಣ ಸಿಗುತ್ತದೆ,
ರಾಮಯಣದ ಯುದ್ದದಲ್ಲಿ ಮೂರ್ಚೆ ತಪ್ಪಿದ ಲಕ್ಷ್ಮಣನನ್ನು ಬದುಕಿಸಿದ ಪ್ರತಿತಿಯುಳ್ಳ ಸಂಜೀವಿನಿಯಂತಹ ಜೀವ ರಕ್ಷಕ ಗಿಡಮೂಲಿಕೆಗಳನ್ನು, ಔಷಧೀಯ ಸಸ್ಯಗಳನ್ನು ಪೋಷಿಸಿ ಪರಿಚಯಿಸುವ ಮತ್ತು ರಕ್ಷಿಸುವ ಉದ್ದೇಶದಿಂದ ಶ್ರೀ ಕ್ಷೇತ್ರದಲ್ಲಿ ಸಂಜೀವಿನಿ ಮಾನಸೋದ್ಯಾನ ನಿರ್ಮಿಸಲಾಗಿದೆ. ಇಲ್ಲಿ 300 ೦ಕ್ಕೂ ಹೆಚ್ಚು ಬಗೆಯ ಗಿಡಗಳು ಕಾಣ ಸಿಗುತ್ತದೆ. ಗೋವುಗಳ ಸಂರಕ್ಷಣೆಗಾಗಿ ಗೋಶಾಲೆ, ಅತಿಥಿ ಗೃಹ, ಮಕ್ಕಳ ಅನಾಥಶ್ರಮ, ಧ್ಯಾನಮಂದಿರ, ಸಭಾಭವನವಿದೆ. ಗಿರಿಯ ಶಿಖರಕ್ಕೆ ತಲುಪಿದರೆ 22 ಅಡಿ ಎತ್ತರದ ಶ್ರೀ ಕೊದಂಡರಾಮನ ಭವ್ಯ ಮೂರ್ತಿ ಕಾಣ ಸಿಗುತ್ತದೆ.
ಅಮರಗಿರಿಯ ದೃಶ್ಯ ವೈಭವ – ವಿಡಿಯೋ ನೋಡಿ





ಶಿಕ್ಷಣ
Ambika-ಅಂಬಿಕಾ ವಿದ್ಯಾಲಯದ ಸಿಬಿಎಸ್‌ಇ ಸಂಸ್ಥೆಯಲ್ಲಿ ಯೋಧ ಗೌರವ ಕಾರ್ಯಕ್ರಮ; ಸೈನಿಕರ ಪ್ರಾಣರಕ್ಷಣೆಗೆ ಆಧುನಿಕ ತಂತ್ರಜ್ಞಾನಗಳಿವೆ – ಸುಂದರ ಪೂಜಾರಿ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಅವರು ಮಾತನಾಡಿದರು.
ಪುತ್ತೂರು: ಈಗಿನ ದಿನಮಾನಗಳಲ್ಲಿ ಸೈನ್ಯದ ಎಲ್ಲಾ ವಿಭಾಗಗಳಲ್ಲೂ ಸೈನಿಕರ ಪ್ರಾಣಕ್ಕೆ ಅಪಾಯವಾಗದಂತೆ ತಡೆಯಲು ತಂತ್ರಜ್ಞಾನ ಸಹಾಯಕವಾಗಿದೆ. ಸೈನಿಕರ ಪ್ರಾಣಕ್ಕೆ ತೊಂದರೆಯಾಗಬಾರದೆನ್ನುವ ಕಾರಣದಿಂದ ಕರ್ತವ್ಯದ ಸಮಯದಲ್ಲಿ ಸೈನಿಕರು ಎಲ್ಲಿದ್ದರೂ ಮಿಲಿಟರಿ ವ್ಯವಸ್ಥೆಗೆ ಸೂಚನೆ ಸಿಗುವ ತಂತ್ರಜ್ಞಾನವಿದೆ ಎಂದು ದೇಶದ ಗಡಿ ಭದ್ರತಾ ಪಡೆಯಲ್ಲಿ ಸತತವಾಗಿ 34 ವರ್ಷಗಳ ಸೇವೆಯನ್ನು ಸಲ್ಲಿಸಿ ಜುಲೈ 31ರಂದು ನಿವೃತ್ತಿ ಹೊಂದಿ ಮರಳಿ ಊರಿಗೆ ಆಗಮಿಸಿದ ಸುಂದರ ಪೂಜಾರಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ದೇಶಸೇವೆ ಮಾಡಲು ಸೈನ್ಯಕ್ಕೆ ಸೇರುವುದು ಒಂದು ಉತ್ತಮ ಸಾಧ್ಯತೆ. ಹಾಗೆಂದು ಸೈನ್ಯಕ್ಕೆ ಸೈನಿಕರಾಗಿಯೇ ಸೇರಬೇಕೆಂದಿಲ್ಲ. ವೈದ್ಯರಾಗಿಯೂ, ಅಭಿಯಂತರರಾಗಿಯೂ, ತಂತ್ರಜ್ಞರಾಗಿಯೂ ಕೂಡ ಸೇವೆಯನ್ನು ಸಲ್ಲಿಸಲು ಅವಕಾಶಗಳಿವೆ ಎಂದರಲ್ಲದೆ ತಮ್ಮ ದೀರ್ಘಕಾಲದ ಅನುಭವದ ಸಾರವನ್ನು ವಿದ್ಯಾಥಿಗಳೊಂದಿಗೆ ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಸೈನಿಕರು ಕೇವಲ ಯುದ್ಧದ ಸಂದರ್ಭದಲ್ಲಿ ಮಾತ್ರವಲ್ಲದೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗುತ್ತಾರೆ. ತಮ್ಮ ಕುಟುಂಬವನ್ನು ಬಿಟ್ಟು ಸಮಾಜದ ವಿವಿಧ ಕುಟುಂಬಗಳ ರಕ್ಷಣೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಳ್ಳುತ್ತಾರೆ. ಹಾಗಾಗಿ ನಾವು ಎಲ್ಲೇ ಹೋಗಲಿ, ಎಷ್ಟೇ ದೂರ ಪ್ರಯಾಣಿಸಲಿ ನಮ್ಮ ಹೆಮ್ಮೆಯ ಸೈನಿಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಆದ್ದರಿಂದ ಅಂಬಿಕಾ ವಿದ್ಯಾಸಂಸ್ಥೆಯು ಕೇವಲ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಿಲ್ಲ. ನಮ್ಮ ದೇಶದ ಸೈನಿಕರನ್ನೂ ಒಡಗೂಡಿ ಅಂಬಿಕಾ ಪರಿವಾರವೆನಿಸಿಕೊಂಡಿದೆ ಎಂದು ನುಡಿದರು.
ಸುಂದರ ಪೂಜಾರಿ ದಂಪತಿಯನ್ನು ಅಂಬಿಕಾ ಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.
ಶಿಕ್ಷಣ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಎಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮೀ ಸಂದೀಪ್ ಮಾತಾಡಿದರು.

ಪುತ್ತೂರು: ಲೈಂಗಿಕ ಕಿರುಕುಳ ಎನ್ನುವುದು ಕೇವಲ ದೈಹಿಕ ಸ್ಪರ್ಶಕ್ಕೆ ಸೀಮಿತವಾಗಿಲ್ಲ ಬದಲಾಗಿ ಆಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಮಾತುಗಳನ್ನಾಡುವುದು ಅಥವಾ ಅಂತಹ ಯಾವುದೇ ರೀತಿಯ ವರ್ತನೆಗಳೂ ಕೂಡಾ ಇದರಲ್ಲಿ ಸೇರಿವೆ ಎಂದು ಪುತ್ತೂರಿನ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೃದ್ಧಾಪ್ಯ ರೋಗ ಮತ್ತು ಮಧುಮೇಹ ತಜ್ಞರಾದ ಡಾ. ಅನನ್ಯಲಕ್ಷ್ಮೀ ಸಂದೀಪ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ಆಂತರಿಕ ದೂರು ಸಮಿತಿ, ಡಾಟಾ ಸೈನ್ಸ್ ಎಂಜಿನಿಯರಿಂಗ್ ವಿಭಾಗ, ಡಾಟಾ ಸೈನ್ಸ್ ವಿದ್ಯಾರ್ಥಿ ಸಂಘ, ಪೇರೆಂಟ್ ರಿಲೇಶನ್ ಸೆಲ್ ಮತ್ತು ಗ್ರೀವೆನ್ಸ್ ರೆಡ್ರೆಸ್ಸಲ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಪರದೆಯಿಂದ ಆತ್ಮದ ಕಡೆಗೆ: ಜೆನ್-ಜೀ ನಡವಳಿಕೆಗಳು, ಮಿತಿಗಳು ಮತ್ತು ಅದರಾಚೆಗಿನ ಆಯಾಮಗಳು ಈ ವಿಷಯದ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತಾಡಿದರು.
ಇಂದಿನ ಪೀಳಿಗೆ, ಅವರ ಪೋಷಕರು, ಶಿಕ್ಷಕರ ನಡುವಿನ ವ್ಯತ್ಯಾಸ ಮತ್ತು ಜವಾಬ್ಧಾರಿಗಳ ಬಗ್ಗೆ ವಾಸ್ತವಿಕ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು ಯುವಜನತೆ ಪಾಲಿಸಬೇಕಾದ ಮತ್ತು ಪಾಲಿಸಬಾರದ ವಿಷಯಗಳ ಬಗ್ಗೆ ತಿಳಿಸಿದರು. ಒಬ್ಬರ ಸಾಮರ್ಥ್ಯವನ್ನು, ದೇಹದ ಆಕಾರವನ್ನು ಟೀಕಿಸುವುದು ಕೂಡಾ ಅಪರಾಧ. ಅಂತಹ ಸಂದರ್ಭದಲ್ಲಿ ಅದನ್ನು ಎದುರಿಸುವ, ಪ್ರತಿಕ್ರಿಯಿಸುವ ಬಗೆ ಮತ್ತು ದೂರು ಸಲ್ಲಿಸಬೇಕಾದ ಪ್ರಾಧಿಕಾರಗಳ ಬಗ್ಗೆ ತಿಳಿಸಿದರು. ನೀವು ಕೋಪಗೊಂಡಿದ್ದರೆ, ಅತಿಯಾದ ಉತ್ಸಾಹದಲ್ಲಿದ್ದರೆ ಅಥವಾ ಒತ್ತಡದಲ್ಲಿದ್ದರೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು 10 ನಿಮಿಷಗಳ ಕಾಲ ಮುಂದೂಡಿ. ಸಾಧ್ಯವಾದರೆ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮೊದಲು ಒಂದು ರಾತ್ರಿ ಚೆನ್ನಾಗಿ ಯೋಚಿಸಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ರಕ್ಷ.ಎಸ್.ಆರ್ ಮಾತನಾಡಿ ಮೊದಲು ಆಲಿಸಿ ನಂತರ ಮಾತನಾಡಿ, ಕೆಲವೊಮ್ಮೆ ಅಲ್ಲಿ ಉಪಸ್ಥಿತರಿದ್ದು ಮೌನವಾಗಿ ಆಲಿಸುವುದರಿಂದ ಜೀವನದಲ್ಲಿ ಹೆಚ್ಚಿನ ಪ್ರಯೋಜನಗಳಾಗುತ್ತದೆ ಎಂದರು. ಒಬ್ಬ ಉತ್ತಮ ಇಂಜಿನಿಯರ್ ಆಗುವ ಜತೆಯಲ್ಲಿ ದೇಶದ ಪ್ರಜ್ಞಾವಂತ ಪ್ರಜೆಯಾಗಿ ಎಂದು ನುಡಿದರು.
ಕಾಲೇಜು ಆಂತರಿಕ ದೂರು ಸಮಿತಿಯ ಅಧ್ಯಕ್ಷೆ ಡಾ.ಜೋತಿಮಣಿ.ಕೆ, ಡಾಟಾಸೈನ್ಸ್ ವಿಭಾಗ ಮುಖ್ಯಸ್ಥೆ ಪ್ರೊ.ರೂಪಾ.ಜಿ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನ ಎನ್ ಸಿ ಸಿ ವಿದ್ಯಾರ್ಥಿಗಳು ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ಗೆ ಆಯ್ಕೆ
ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ಬಿಸಿಎ ವಿದ್ಯಾರ್ಥಿನಿ ಸಿಕ್ಯೂಎಂಎಸ್ ಬಿ.ಆಶಾಕಿರಣ್ ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಸಿಪಿಎಲ್ ಎಸ್.ಎಂ ದರ್ಶನ್ ಇವರು ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ಬಿಸಿಎ ವಿದ್ಯಾರ್ಥಿನಿ ಸಿಕ್ಯೂಎಂಎಸ್ ಬಿ.ಆಶಾಕಿರಣ್ ಮತ್ತು ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಸಿಪಿಎಲ್ ಎಸ್.ಎಂ ದರ್ಶನ್ ಇವರು ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.
ಗುಜರಾತ್‌ನಲ್ಲಿ ಸ್ಪೆಷಲ್ ನ್ಯಾಷನಲ್ ಇಂಟಿಗ್ರೇಷನ್ ಕ್ಯಾಂಪ್ ನಡೆಯುತ್ತಿದ್ದು, ಈ ಕ್ಯಾಂಪ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನವೆಂಬರ್ ೧ರಂದು ನಡೆಯುವ ಸರ್ದಾರ್ ವಲ್ಲಭಬಾಯ್ ಪಟೇಲ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಗಣ್ಯ ವ್ಯಕ್ತಿಯಾಗಿ ಆಗಮಿಸಲಿದ್ದಾರೆ.
ಇವರಿಗೆ ಎನ್.ಸಿ.ಸಿ ಘಟಕದ ಮುಖ್ಯಸ್ಥ ಲೆ. ಭಾಮಿ ಅತುಲ್ ಶೆಣೈ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್.ಸಿ.ಸಿ ಘಟಕ, ಐಕ್ಯೂಎಸಿ ಘಟಕ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿ ವೃಂದ ಶುಭಾಶಯಗಳನ್ನು ಕೋರುತ್ತಾರೆ.
-
ಮಂಗಳೂರು9 hours agoAuto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್
-
ಅಂತರ ರಾಜ್ಯ14 hours agoಕಾಸರಗೋಡು: ಆರ್ಎಸ್ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
-
ಮಂಗಳೂರು16 hours agoChouta-ಫಾರಂ 7 ಕೊಟ್ಟ ಮಾತ್ರಕ್ಕೆ ಮತ ಡಿಲೀಟ್ ಆಗಲ್ಲ; ಅಕ್ರಮ ಡಿಲೀಷನ್ಗೆ ದಾಖಲೆ ತೋರಿಸಿ: ಕಾಂಗ್ರೆಸ್ಗೆ ಚೌಟ ಸವಾಲು
-
ಸ್ಥಳೀಯ14 hours agoBeltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು
-
Uncategorized7 hours ago
Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ
-
ಅಂತರ ರಾಜ್ಯ8 hours agoBlackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್ಮೇಲ್..!
-
ಉದ್ಯೋಗ10 hours agoPuttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening
-
ರಾಜಕೀಯ15 hours agoAshok Rai-ಪಕ್ಷ ಸಂಘಟನೆಗೆ ಅಶೋಕ್ ರೈ ಹೊಸ ಹೆಜ್ಜೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ ಬೊಲೆರೋ


















