ರಾಜ್ಯ
Amul Nandini | ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ – ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಮಾಡುತ್ತಾರೆ : ‘ಅಮುಲ್-ನಂದಿನಿ’ ವಿಲೀನಕ್ಕೆ ಸಿದ್ದರಾಮಯ್ಯ ಆಕ್ರೋಶ
ನಮ್ಮ ಬ್ಯಾಂಕುಗಳನ್ನು ಕಿತ್ತುಕೊಂಡು ನಮ್ಮ ಆರ್ಥಿಕತೆಯನ್ನು ನಾಶಮಾಡಲೆತ್ನಿಸಿದ ಬಿಜೆಪಿಯವರು ಈಗ ನಮ್ಮ ಹಾಲಿನ ಮೂಲಕ್ಕೆ ಕೈ ಹಾಕುತ್ತಿದ್ದಾರೆ (Amul Nandini) ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ. ಈ ದುಷ್ಟ ಭಸ್ಮಾಸುರನ ಕೈಗೆ ಈಗಲೆ ಬರೆ ಹಾಕದಿದ್ದರೆ ನಮ್ಮ 25 ಲಕ್ಷ ರೈತ ಕುಟುಂಬಗಳನ್ನು ಬೀದಿಪಾಲು ಬಿಜೆಪಿಯವರು ಮಾಡಿಬಿಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಹಾಲು ಮಹಾ ಮಂಡಳ ಕೆಎಂಎಫ್ ಗುಜರಾತ್ ನ ಅಮುಲ್ ಜೊತೆಗೂಡಬೇಕೆಂಬ ಬಯಕೆಯನ್ನು ಅಮಿತ್ ಶಾ ವ್ಯಕ್ತಪಡಿಸಿದ್ದಾರೆ.
ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು 20000 ಕೋಟಿ ರೂಪಾಯಿಗಳ ವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಈ ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ದೀಪ ಬೆಳಗುವುದೆ ಹಾಲಿನಿಂದ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೆ ಬರಬೇಕು. ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ.
ಅವರ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆ ಎಲ್ಲವೂ ಸರ್ವನಾಶವಾಗುತ್ತದೆ. ಇವರಿಗಾಗಿಯೆ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ಮೋದಿ ಮುಂತಾದವರೆಲ್ಲ ಥರ ಥರದ ಸುಳ್ಳುಗಳ, ಮುಳ್ಳಿನ ಟೋಪಿಯನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತೊಡಿಸಲು ತರುತ್ತಿದ್ದಾರೆ.
ನಮಗೆ ಆಕ್ಸಿಜನ್ನು ಕೊಡದೆ ಕೊರೋನಾ ಸಮಯದಲ್ಲಿ ಜನರನ್ನು ಕೊಂದ ಪಾಪವನ್ನು ಮೋದಿ ಸರ್ಕಾರವೆ ಹೊರಬೇಕು. ಕೊರೋನಾ ನೆಪದಲ್ಲಿ ವ್ಯಾಪಕ ಭ್ರಷ್ಟಾಚಾರ ಮಾಡಿ ಹೆಣದ ಮೇಲೂ ಕಮಿಷನ್ ಲೂಟಿ ಮಾಡಿದ ಪಾಪವನ್ನು ಬಿಜೆಪಿ ಹೊರಲೇಬೇಕು.
ನಮ್ಮನ್ನು ದೋಚಲು ಬಿಜೆಪಿಯವರು ಸಿದ್ಧಪಡಿಸಿಕೊಂಡಿರುವ ವಿಷದ ಟೋಪಿಯಲ್ಲಿ ಹಿಂದೂ-ಮುಸ್ಲಿಂ ದ್ವೇಷ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಎಂಬ ಕಡ್ಡಾಯವಾದ ಮೂರು ಮುಳ್ಳುಗಳು ಇರುತ್ತವೆ. ಜನರು ಎಚ್ಚರ ವಹಿಸಬೇಕು. ಈ ಮಾತುಗಳನ್ನೆ ಮಂತ್ರದಂತೆ ಹೇಳಿ ಅಧಿಕಾರಕ್ಕೆ ಬಂದು ದೇಶದ ಜನರ ರಕ್ತವನ್ನು ಪ್ರತಿ ಹನಿಯನ್ನೂ ಹೀರುತ್ತಿದ್ದಾರೆ.
ಬಿಜೆಪಿಯವರ ರಾಷ್ಟ್ರ ಪ್ರೇಮವೆಂದರೆ ಅದು ಅಂಬಾನಿ, ಅದಾನಿಗಳಂಥ ಬಂಡವಾಳಿಗರಿಗೆ ಇಡೀ ದೇಶವನ್ನು ಲೂಟಿ ಹೊಡೆಯಲು ಲೈಸೆನ್ಸ್ ಕೊಡುವುದು ಎಂದರ್ಥ ಹಾಗೂ ರಾಷ್ಟ್ರಪ್ರೇಮವೆಂದರೆ ಮನುವಾದಿ ಸಿದ್ಧಾಂತವನ್ನು ಜಾರಿಗೆ ತಂದು ಬುದ್ಧ, ಬಸವಣ್ಣ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಕುವೆಂಪು ಮುಂತಾದ ಮಹನೀಯರ ವಿಚಾರಗಳನ್ನು ಮೂಟೆ ಕಟ್ಟಿ ಮೂಲೆಗೆ ಎಸೆದು ಭಾರತವನ್ನು ಮತ್ತೆ ಕೆಲವರೆ ನಿಯಂತ್ರಿಸಬೇಕು ಎಂಬುದಾಗಿದೆ.
ನಾವೀಗ ಕೂಡಲೆ ಬಿಜೆಪಿಯ ವಿದೂಷಕ ಸುಳ್ಳರನ್ನು ಕರ್ನಾಟಕದಿಂದ ತೊಲಗಿಸಿ ನಾಡನ್ನು ಉಳಿಸಿಕೊಳ್ಳಬೇಕಾಗಿದೆ. ನಿಮ್ಮ ಸುಳ್ಳಿಗೆ ನಾವು ಬಲಿಯಾಗುವುದಿಲ್ಲ ಎಂದು ಕೂಗಿ ಹೇಳಬೇಕಾಗಿದೆ. ನಮ್ಮ ರೈತರ ಏಳಿಗೆಯಾಗಬೇಕಾಗಿದೆ. ಅದಕ್ಕಾಗಿ ಅವರ ಹಾಲಿಗೆ ಬೆಲೆ ಬೇಕು. ಬೆಳೆದ ತರಕಾರಿ, ಹಣ್ಣು, ಹತ್ತಿ, ಕಬ್ಬು, ಭತ್ತ, ರಾಗಿ ಸೇರಿದಂತೆ ಎಲ್ಲ ಬೆಳೆಗಳಿಗೆ, ಉತ್ಪನ್ನಗಳಿಗೆ ಉತ್ತಮ ಬೆಲೆ ಬೇಕು.
ಅವರು ಬೆಳೆದಿದ್ದನ್ನು ಕೊಂಡುಕೊಳ್ಳುವ ವ್ಯವಸ್ಥೆ ಬೇಕು. ಕೊಳ್ಳುವ ಗ್ರಾಹಕರ ಜೇಬಿನಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕು. ನಗರಗಳ ಜನರಿಗೂ ವಸ್ತುಗಳು ದುಬಾರಿಯಾಗದ ರೀತಿಯಲ್ಲಿ ವಸ್ತುಗಳು ಸಿಗಬೇಕು.
ಬಿಜೆಪಿ ಸರ್ಕಾರವು ಲಂಚವಿಲ್ಲದೆ ಯಾವ ಅಧಿಕಾರಿಗೂ ಹುದ್ದೆ ಕೊಡುತ್ತಿಲ್ಲ. ತಾಲ್ಲೂಕಾಫೀಸು, ಪೊಲೀಸ್ ಸ್ಟೇಷನ್ನು ಸೇರಿದಂತೆ ಯಾವ ಕಛೇರಿಗೆ ಹೋದರೂ ಬಡ ಬಗ್ಗರ, ರೈತರ ಕೆಲಸಗಳು ಆಗುತ್ತಿಲ್ಲ. ರೈತರು ಇದರಿಂದ ಬೇಸತ್ತು ಹೋಗಿದ್ದಾರೆ.
ಸರ್ಕಾರದ ಯಾವುದೇ ಕಾಮಗಾರಿಗಳಲ್ಲಿ ಕನಿಷ್ಠ 40 ಪರ್ಸೆಂಟ್ ಲಂಚ ನಡೆಯುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿ ಹೇಮಾವತಿ ನಾಲೆಗೆ ಸಂಬಂಧಿಸಿದ ನೂರಾರು ಕೋಟಿ ಕಾಮಗಾರಿಯ ಅನೇಕ ಬಾಬತ್ತುಗಳಲ್ಲಿ ಒಂದು ರೂಪಾಯಿಯ ಕೆಲಸವೂ ನಡೆದಿಲ್ಲ. ಆದರೆ ಬಿಲ್ಲು ಮಾಡಿ ನುಂಗಿ ಹಾಕಲಾಗಿದೆ. ಇದರಲ್ಲಿ ಶೇ.80-100 ಪರ್ಸೆಂಟ್ ಕಮಿಷನ್ ನಡೆದಿದೆ. ನಿನ್ನೆ ಕೂಡ ತುಮಕೂರಿನ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಕೃಷ್ಣಾ ಮೇಲ್ದಂಡೆ ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ. ರಸ್ತೆ, ಸೇತುವೆ, ಶಿಕ್ಷಣ ಎಲ್ಲದರಲ್ಲೂ ನುಂಗಿ ನೀರು ಕುಡಿಯಲಾಗುತ್ತಿದೆ. ಇಷ್ಟಿದ್ದರೂ ಯಾವ ಲಜ್ಜೆ ನಾಚಿಕೆ, ಮರ್ಯಾದೆ ಇಲ್ಲದೆ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಮಾತಾನಾಡುತ್ತಾರೆ. ಇದಕ್ಕಿಂತ ವಿದೂಷಕತನ ಬೇರೆ ಯಾವುದಿದೆ?
ಇದರ ಜೊತೆಗೆ ಬಿಜೆಪಿಯವರು ಭಯೋತ್ಪಾದನೆಯ ಬಗ್ಗೆ ಮಾತನಾಡುತ್ತಾರೆ. ಭಯೋತ್ಪಾದನೆಯ ಪಿತೃಗಳೇ ಬಿಜೆಪಿಯವರು. ನಾವು ಗಾಂಧೀಜಿಯನ್ನು ಕಳೆದುಕೊಂಡೆವು. ಬಸವಣ್ಣನವರನ್ನು ಕಳೆದುಕೊಂಡೆವು. ಕಲ್ಬುರ್ಗಿಯವರನ್ನು, ಗೌರಿ ಲಂಕೇಶರನ್ನು ಕಳೆದುಕೊಂಡೆವು. ನಮ್ಮದೇ ಪಕ್ಷದ ಇಂದಿರಾಗಾಂಧಿ, ರಾಜೀವ್ ಗಾಂಧಿಯವರನ್ನು ಕಳೆದುಕೊಂಡೆವು. ಆದರೆ ಬಿಜೆಪಿಯವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೂರಿಸಿಕೊಂಡು ಕಂದಹಾರ್ಗೆ ಬಿಟ್ಟು ಬಂದರು. ತಾಲಿಬಾನ್ ಗೆ ಗೋಧಿ, ಔಷಧ, ಧಾನ್ಯಗಳು, ಹಣಕಾಸಿನ ನೆರವು ಇವನ್ನೆಲ್ಲ ಮಾಡುತ್ತಿದ್ದಾರೆ. ತಾಲಿಬಾನಿಗಳು ಹೆಣ್ಣು ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗಬಾರದೆಂದು ಕಾನೂನು ತಂದಿದ್ದಾರೆ. ಆರೆಸ್ಸಿಸ್ಸಿನ ಮೋಹನ ಭಾಗವತರು ಸಹ ಹೆಣ್ಣು ಮಕ್ಕಳು ಮನೆ ಕೆಲಸ ಮಾತ್ರ ಮಾಡಬೇಕು, ಹೊರಗಡೆ ಹೋಗಬಾರದು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್ಐ ಮೇಲಿನ ಕೇಸುಗಳನ್ನು ವಾಪಸ್ಸು ತೆಗೆದುಕೊಂಡರು ಎಂದು ಸುಳ್ಳು ಹೇಳುತ್ತಿದ್ದಾರೆ.
ನಾನು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. ಸರ್ಕಾರವೆ ನೀಡಿರುವ ಉತ್ತರದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೆ ಒಂದು ದಾಖಲೆಯನ್ನೂ ನೀಡಿಲ್ಲ. ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ ಕೇಳಿದ್ದೇನೆ.
ಕಳೆದ 6 ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ನಿರ್ಲಜ್ಜ ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ.
ಇದೇ ಬಿಜೆಪಿಯೆ ಎಸ್ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ.
ಚುನಾವಣೆ ಹತ್ತಿರ ಬರುತ್ತಿದೆ. ಅಂಬಾನಿ, ಅದಾನಿಗಳ ರಾಯಭಾರಿಗಳು ಇನ್ನು ಮುಂದೆ ಕರ್ನಾಟಕಕ್ಕೆ ಬರುತ್ತಾರೆ. ಜನರಿಗೆ ಮುಳ್ಳಿನ ಟೋಪಿ ತೊಡಿಸಿ ಚಿನ್ನದ ಕಿರೀಟವೆನ್ನುತ್ತಾರೆ. ಜನರು ಜಾಗ್ರತೆ ವಹಿಸದಿದ್ದರೆ ನಾಡು ಶಾಶ್ವತವಾಗಿ ಕುಸಿದು ಹೋಗಲಿದೆ.
ಕರ್ನಾಟಕದ ಯುವಕರು, ಬುದ್ಧಿವಂತರು ಎಲ್ಲರೂ ಇದನ್ನು ಅರ್ಥ ಮಾಡಿಕೊಂಡು ಕರ್ನಾಟಕವನ್ನು ಈ ಪೀಡೆಗಳಿಂದ ಮುಕ್ತಗೊಳಿಸಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಪ್ರತಿಜ್ಞೆ ಮಾಡಬೇಕು.
ಮತ್ತೊಮ್ಮೆ ಹೇಳುತ್ತೇನೆ. ಸ್ವಾಭಿಮಾನ, ಸ್ವಾತಂತ್ರ್ಯ ಅಭಿವೃದ್ಧಿ ನಮ್ಮ ಗುರಿಯಾಗಬೇಕೊ ಅಥವಾ ಮನುವಾದಕ್ಕೆ, ಗುಜರಾತಿನ ಕಾರ್ಪೊರೇಟ್ ಬಂಡವಾಳರಿಗೆ ಗುಲಾಮರಾಗುವುದು ನಮ್ಮ ಆಯ್ಕೆಯೊ ಎಂದು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಕೀಯ
BIG Political FACEOFF : ಪೂಂಜಾ ರಣವೀಳ್ಯ ಸ್ವೀಕರಿಸಿದ ಅಶೋಕ್ ರೈ: ಡೆವಲಪ್ಮೆಂಟ್ ಚರ್ಚೆಗೆ ಪುತ್ತೂರಿನಲ್ಲಿ ಮುಹೂರ್ತ ಫಿಕ್ಸ್! ; ಪೂಂಜಾ ಪಾಲಿಗೆ ಈಗ ಪ್ರತಿಷ್ಠೆಯ ಪ್ರಶ್ನೆ; ಸವಾಲು ಸ್ವೀಕರಿಸದೆ ವಿಧಿಯಿಲ್ಲವೇ?

ಪುತ್ತೂರು, ನ.15: ಅಡಿಕೆ ಹಾಗೂ ಕಾಳುಮೆಣಸು ಬೆಳೆ ವಿಮೆ ವಿಚಾರವಾಗಿ ಆರಂಭವಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಡುವಿನ ವಾಕ್ಸಮರ ಇದೀಗ ಅಭಿವೃದ್ಧಿಯ ಅಂಕಿಅಂಶಗಳ ಬಹಿರಂಗ ಸಮರಕ್ಕೆ ತಿರುಗಿದೆ. ಪರಸ್ಪರ ರಾಜಕೀಯ ಟೀಕೆ, ಸವಾಲು ಮತ್ತು ಪ್ರತಿ ಸವಾಲುಗಳ ಮೂಲಕ ಕಾವೇರಿದ್ದ ಇಬ್ಬರು ಶಾಸಕರ ನಡುವಿನ ಮಾತಿನ ಸಮರಕ್ಕೆ ಇದೀಗ ಪುತ್ತೂರಿನಲ್ಲಿ ವೇದಿಕೆ ಸಿದ್ಧವಾಗಿದೆ. ಅಶೋಕ್ ರೈ ಅವರು ಹರೀಶ್ ಪೂಂಜಾ ಅವರಿಗೆ ನೇರ ಆಹ್ವಾನ ನೀಡಿದ್ದು, ಸೋಮವಾರ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ಅಭಿವೃದ್ಧಿ ಹಾಗೂ ಅನುದಾನದ ಲೆಕ್ಕಪತ್ರ ಮಂಡಿಸಲು ಸಿದ್ಧ ಎಂದು ಘೋಷಿಸಿದ್ದಾರೆ. ಈಗ ಎಲ್ಲರ ಕಣ್ಣು ಹರೀಶ್ ಪೂಂಜಾ ಅವರ ಮುಂದಿನ ನಡೆ ಮೇಲೆ ನೆಟ್ಟಿದೆ.
ಬೆಳೆ ವಿಮೆ ವಿಚಾರದಿಂದ ಶುರುವಾದ ವಾಕ್ಸಮರ!
ಅಡಿಕೆ ಹಾಗೂ ಕಾಳುಮೆಣಸು ಬೆಳೆ ವಿಮೆ ಪರಿಹಾರದ ಮೊತ್ತ ರೈತರ ಖಾತೆಗೆ ಕಡಿಮೆ ಜಮೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ತಿಂಗಳು ಮಂಗಳೂರಿನಲ್ಲಿ ಸಹಕಾರಿ ಸಂಘಗಳ ಸದಸ್ಯರ ಬೃಹತ್ ಸಮಾವೇಶ ಆಯೋಜಿಸಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ರೈತರಿಗೆ ಅನ್ಯಾಯವಾಗಲು ರಾಜ್ಯ ಸರ್ಕಾರ ಟರ್ಮ್ ಶೀಟ್ ಬದಲಾಯಿಸಿರುವುದೇ ಕಾರಣ ಎಂದು ಆರೋಪಿಸಿದ್ದರು.
ಜಿಲ್ಲೆಯ ರೈತರಿಗೆ ಅನ್ಯಾಯವಾಗುತ್ತಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿದ್ದಾರೆ ಎಂದು ಟೀಕಿಸಿದ್ದ ಅವರು, ಸದಾ ಶರ್ಟ್ ನಲ್ಲಿ ಮೇಲಿನಿಂದ ಕೆಳಗಿನವರೆಗೆ ಮೈಕ್ ಸಿಕ್ಕಿಸಿಕೊಂಡು ನಾನು ಹುಟ್ಟಿಸಿದ ಮಗುವಿಗೆ ನಾನೇ ಅಪ್ಪ ಎಂದು ಹೇಳುವ ಪುತ್ತೂರು ಶಾಸಕ ಅಶೋಕ್ ರೈ ಅವರು ಈ ವಿಚಾರದಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ಬಹಿರಂಗವಾಗಿ ಪ್ರಶ್ನಿಸಿದ್ದರು.
ರೈ ತಿರುಗೇಟು !
ಇದಕ್ಕೆ ಅಶೋಕ ಜನಮನ ಕಾರ್ಯಕ್ರಮದ ಚಪ್ಪರ ಮುಹೂರ್ತದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಅಶೋಕ್ ರೈ, ಹರೀಶ್ ಪೂಂಜಾ ಅವರ ಟೀಕೆಗೆ ವ್ಯಂಗ್ಯಭರಿತ ತಿರುಗೇಟು ನೀಡಿದ್ದರು.
“ಹೌದು, ನಾನು ಹುಟ್ಟಿಸಿದ್ದಕ್ಕೆ ನಾನೇ ಅಪ್ಪ. ಬೇರೆಯವರು ಹುಟ್ಟಿಸುವುದಕ್ಕೆ ನಾನು ಅಪ್ಪ ಎಂದು ಹೇಳಿಕೊಳ್ಳುವುದು ಅವರು” ಎಂದು ಹೇಳುವ ಮೂಲಕ ಮಾತಿನ ಸಮರಕ್ಕೆ ಹೊಸ ತಿರುವು ನೀಡಿದ್ದರು. ಇದೇ ವೇಳೆ ಮೊದಲು ಉಪ್ಪಿನಂಗಡಿ–ಗುರುವಾಯನಕೆರೆ ನಡುವಿನ ರಸ್ತೆಯನ್ನು ದುರಸ್ತಿ ಮಾಡಲಿ ಎಂದು ಸವಾಲು ಹಾಕಿದ್ದರು.
ಉಪ್ಪಿನಂಗಡಿಯಲ್ಲಿ ಪೂಂಜಾ ಹಾಕಿದ ಅಭಿವೃದ್ಧಿಯ ಸವಾಲು!
ಇದರ ಮುಂದುವರಿದ ಭಾಗವಾಗಿ ಉಪ್ಪಿನಂಗಡಿಯಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹರೀಶ್ ಪೂಂಜಾ, ಅಶೋಕ್ ರೈ ವಿರುದ್ಧ ಮತ್ತಷ್ಟು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದರು.
“ಅಶೋಕ್ ರೈಗೆ ಕತ್ತೆಯ ಪ್ರಾಯ ಆಗಿರಬಹುದು. ಆದರೆ ನನ್ನಷ್ಟು ಅನುಭವ ನಿಮ್ಮಲ್ಲಿ ಇಲ್ಲ ಸ್ವಾಮಿ. ನೀವು ಏನು ಮಾಡುತ್ತಿದ್ದೀರಿ ಎಂದು ನಮಗೆ ಗೊತ್ತು.. ಬಿಜೆಪಿ ಸರ್ಕಾರ ಇದ್ದಾಗ ಬೆಂಗಳೂರಿನ ಮೂರನೇ ಮಹಡಿಯಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ನೀವು ನಮಗೆ ಹೇಳಲು ಬರಬೇಡಿ. ಪುತ್ತೂರು ಅಥವಾ ನಿಮ್ಮ ಕಚೇರಿಯಲ್ಲಿ ನನಗೆ ಆಹ್ವಾನ ನೀಡಿ. ಚರ್ಚೆಗೆ ಬರಲು ಸಿದ್ಧನಿದ್ದೇನೆ” ಎಂದು ಸವಾಲು ಹಾಕಿದ್ದರು.
ತಮ್ಮ ಆಡಳಿತಾವಧಿಯಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ ತಂದಿರುವ ಅನುದಾನಗಳ ದಾಖಲೆಗಳನ್ನು ಮುಂದಿಡಲು ಸಿದ್ಧವಿದ್ದು, ಅಶೋಕ್ ರೈ ಕೂಡ ತಮ್ಮ ಮೂರೂವರೆ ವರ್ಷದ ಆಡಳಿತದಲ್ಲಿ ತಂದಿರುವ ಅನುದಾನದ ವಿವರಗಳನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದರು.

ಪೂಂಜಾ ಸವಾಲಿಗೆ ಅಶೋಕ್ ರೈ ಪ್ರತಿ ಸವಾಲು!
ಹರೀಶ್ ಪೂಂಜಾ ಅವರ ಸವಾಲಿಗೆ ಇದೀಗ ಅಶೋಕ್ ರೈ ನೇರವಾಗಿಯೇ ಉತ್ತರ ನೀಡಿದ್ದಾರೆ. ಪುತ್ತೂರು ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನದ ವಿವರಗಳನ್ನು ಇಬ್ಬರೂ ಶಾಸಕರು ಮಾಧ್ಯಮಗಳ ಮುಂದೆ ಜಂಟಿಯಾಗಿ ಮಂಡಿಸೋಣ ಎಂದು ಆಹ್ವಾನಿಸಿದ್ದಾರೆ.
ಶನಿವಾರ ಸಂಜೆ ಸಂಪ್ಯದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ‘ಗ್ರಾಮ ಮಟ್ಟದ ಜನಾಂದೋಲನ ಸಭೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಹರೀಶ್ ಪೂಂಜಾ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಈ ಆಹ್ವಾನ ನೀಡುತ್ತಿದ್ದೇನೆ ಎಂದರು.
“ನಾನು ಸೋಮವಾರ (ನ.16) ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ನನ್ನ ಕ್ಷೇತ್ರದ ಸಾಧನೆ ಮತ್ತು ಅನುದಾನದ ಸಂಪೂರ್ಣ ವಿವರಗಳೊಂದಿಗೆ ಸಿದ್ಧನಿರುತ್ತೇನೆ. ಹರೀಶ್ ಪೂಂಜಾ ಅವರೂ ತಮ್ಮ ಕ್ಷೇತ್ರದ ಅಭಿವೃದ್ಧಿ ಹಾಗೂ ಅನುದಾನದ ದಾಖಲೆಗಳನ್ನು ತೆಗೆದುಕೊಂಡು ಬರಲಿ. ಇಬ್ಬರೂ ನಮ್ಮ ಸಾಧನೆಗಳನ್ನು ಮಾಧ್ಯಮಗಳ ಮುಂದೆ ಇಡೋಣ. ನಮ್ಮ ನಡುವೆ ಯಾವುದೇ ವಾಗ್ವಾದ ಬೇಡ. ಮಾಧ್ಯಮದವರು ಮತ್ತು ಜನರೇ ಸತ್ಯಾಸತ್ಯತೆಯನ್ನು ನಿರ್ಧರಿಸಲಿ. ಬಳಿಕ ಒಟ್ಟಿಗೆ ಕಾಫಿ ಕುಡಿದು ತೆರಳೋಣ” ಎಂದು ಅಶೋಕ್ ರೈ ಆಹ್ವಾನ ನೀಡಿದ್ದಾರೆ.
‘ಪೂಂಜಾ ಹೊಡೆದು ಓಡುವವರು’ ಎಂದ ಅಮಳ ರಾಮಚಂದ್ರ!
ಇನ್ನೂ ಶನಿವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ರಾಜ್ಯ ವಕ್ತಾರ ಅಮಳ ರಾಮಚಂದ್ರ, ಹರೀಶ್ ಪೂಂಜಾ ಅವರು ಕೇವಲ ಬಾಯಲ್ಲಿ ಸವಾಲು ಹಾಕುತ್ತಾರೆ. ಪುತ್ತೂರಿಗೆ ಬಂದು ಚರ್ಚೆ ಎದುರಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪೂಂಜಾ ಪಾಲಿಗೆ ಈಗ ಪ್ರತಿಷ್ಠೆಯ ಪ್ರಶ್ನೆ; ಸವಾಲು ಸ್ವೀಕರಿಸದೆ ವಿಧಿಯಿಲ್ಲವೇ?
ಹರೀಶ್ ಪೂಂಜಾ ಅವರೇ ಬಹಿರಂಗವಾಗಿ ಚರ್ಚೆಗೆ ಬರುವಂತೆ ಅಶೋಕ್ ರೈ ಅವರಿಗೆ ಸವಾಲು ಹಾಕಿದ್ದರು. ಇದೀಗ ಅದೇ ಸವಾಲನ್ನು ಅಶೋಕ್ ರೈ ಸ್ವೀಕರಿಸಿದ್ದು ಮಾತ್ರವಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ ದಿನಾಂಕ, ಸಮಯ ಹಾಗೂ ಸ್ಥಳವನ್ನೂ ನಿಗದಿಪಡಿಸಿ ಬಹಿರಂಗ ಆಹ್ವಾನ ನೀಡಿದ್ದಾರೆ. ಹೀಗಾಗಿ ರಾಜಕೀಯ ಅಖಾಡದಲ್ಲಿ ಸವಾಲು ಹಾಕಿದ್ದ ಹರೀಶ್ ಪೂಂಜಾ ಅವರೇ ಈಗ ಅದನ್ನು ಎದುರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ರಾಜಕೀಯದಲ್ಲಿ ಎದುರಾಳಿಗೆ ಸವಾಲು ಹಾಕುವುದು ಒಂದು ವಿಚಾರವಾದರೆ, ಎದುರಾಳಿ ಆ ಸವಾಲನ್ನು ಸ್ವೀಕರಿಸಿದಾಗ ಅದನ್ನು ಎದುರಿಸುವುದು ಮತ್ತೊಂದು ವಿಚಾರ. ಅದರಲ್ಲೂ ತಮ್ಮ ಕ್ಷೇತ್ರದ ಅಭಿವೃದ್ಧಿ, ಅನುದಾನ ಹಾಗೂ ಕಾಮಗಾರಿಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಸಿದ್ಧ ಎಂದು ಹೇಳಿದ್ದ ಪೂಂಜಾ ಅವರಿಗೆ ಇದೀಗ ಹಿಂದೆ ಸರಿಯುವುದು ಸುಲಭದ ನಿರ್ಧಾರವಾಗಲಾರದು. ಪುತ್ತೂರಿಗೆ ಬಂದು ಚರ್ಚೆ ಎದುರಿಸಿದರೆ ತಮ್ಮ ಕ್ಷೇತ್ರದ ಸಾಧನೆಗಳನ್ನು ಸಮರ್ಥಿಸಿಕೊಳ್ಳಬೇಕಾಗುತ್ತದೆ. ಬಾರದಿದ್ದರೆ, ತಾವೇ ಹಾಕಿದ ಸವಾಲಿನಿಂದ ಹಿಂದೆ ಸರಿದರು ಎಂಬ ಟೀಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಅಶೋಕ್ ರೈ ಅವರು ಕೇವಲ ಬಾಯಿಮಾತಿನ ಆಹ್ವಾನ ನೀಡಿಲ್ಲ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಪುತ್ತೂರು ಶಾಸಕರ ಕಚೇರಿಯಲ್ಲಿ ದಾಖಲೆಗಳೊಂದಿಗೆ ಸಿದ್ಧನಿರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇಬ್ಬರ ನಡುವೆ ವಾಗ್ವಾದ ಬೇಡ, ಮಾಧ್ಯಮಗಳು ಮತ್ತು ಜನರೇ ಅಭಿವೃದ್ಧಿಯ ಲೆಕ್ಕಾಚಾರವನ್ನು ನಿರ್ಧರಿಸಲಿ ಎಂಬ ಪ್ರಸ್ತಾಪವನ್ನೂ ಮುಂದಿಟ್ಟಿದ್ದಾರೆ. ಇದು ಪೂಂಜಾ ಅವರಿಗೆ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಮುಕ್ತ ಅವಕಾಶ ನೀಡಿದಂತಾಗಿದೆ.
ಇನ್ನೊಂದೆಡೆ, ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಅವರ ‘ಹೊಡೆದು ಓಡುವವರು’ ಎಂಬ ಟೀಕೆಯೂ ರಾಜಕೀಯ ಒತ್ತಡವನ್ನು ಹೆಚ್ಚಿಸಿದೆ. ಈ ಟೀಕೆಗೆ ಉತ್ತರ ನೀಡಬೇಕಾದರೂ ಪೂಂಜಾ ಅವರು ಪುತ್ತೂರಿನ ವೇದಿಕೆಗೆ ಆಗಮಿಸಿ ತಮ್ಮ ದಾಖಲೆಗಳನ್ನು ಮುಂದಿಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಒಂದು ವೇಳೆ ಪೂಂಜಾ ಅವರು ಪುತ್ತೂರಿಗೆ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಂಡರೆ, ಅದು ಅವರ ಪಾಲಿಗೆ ತಮ್ಮ ರಾಜಕೀಯ ಸಾಮರ್ಥ್ಯ ಮತ್ತು ಕ್ಷೇತ್ರದ ಅಭಿವೃದ್ಧಿಯನ್ನು ಸಮರ್ಥಿಸಿಕೊಳ್ಳುವ ಅವಕಾಶವಾಗಲಿದೆ. ಆದರೆ ಆಹ್ವಾನವನ್ನು ನಿರ್ಲಕ್ಷಿಸಿದರೆ, ವಿರೋಧಿಗಳಿಗೆ ರಾಜಕೀಯ ಅಸ್ತ್ರವೊಂದನ್ನು ತಾವೇ ಒದಗಿಸಿದಂತಾಗಬಹುದು. ವಿಶೇಷವಾಗಿ, ಜಿಲ್ಲೆಯ ರಾಜಕೀಯದಲ್ಲಿ ತಮ್ಮ ಸವಾಲಿನ ಮಾತುಗಳಿಗೆ ಎಷ್ಟು ಗಂಭೀರತೆ ಇದೆ ಎಂಬ ಪ್ರಶ್ನೆಯೂ ಎದುರಾಗಬಹುದು.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಇದು ಕೇವಲ ಅಶೋಕ್ ರೈ ಮತ್ತು ಹರೀಶ್ ಪೂಂಜಾ ನಡುವಿನ ವೈಯಕ್ತಿಕ ಪ್ರತಿಷ್ಠೆಯ ಸಮರವಲ್ಲ. ಪುತ್ತೂರು ಮತ್ತು ಬೆಳ್ತಂಗಡಿ ಕ್ಷೇತ್ರಗಳಿಗೆ ಕಳೆದ ಹಲವು ವರ್ಷಗಳಲ್ಲಿ ಬಂದಿರುವ ಅನುದಾನ, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಗ್ರಾಮೀಣ ರಸ್ತೆಗಳು, ವೆಂಟೆಡ್ ಡ್ಯಾಂಗಳು, ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಮೂಲಸೌಕರ್ಯ ಯೋಜನೆಗಳ ವಾಸ್ತವಿಕ ಚಿತ್ರಣವನ್ನು ಜನರ ಮುಂದಿಡುವ ಅವಕಾಶವೂ ಹೌದು.
ಹೀಗಾಗಿ ಹರೀಶ್ ಪೂಂಜಾ ಅವರಿಗೆ ಈಗ ರಾಜಕೀಯವಾಗಿ ಆಯ್ಕೆ ಸುಲಭವಿಲ್ಲ. ತಾವೇ ಹಾಕಿದ ಸವಾಲಿಗೆ ತಾವೇ ಉತ್ತರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪುತ್ತೂರಿಗೆ ಬಂದು ದಾಖಲೆಗಳೊಂದಿಗೆ ಮಾತನಾಡುತ್ತಾರೆಯೇ? ಅಥವಾ ಸವಾಲು ಹಾಕಿದ ವೇಗದಲ್ಲೇ ಚರ್ಚೆಯ ವೇದಿಕೆಯಿಂದ ದೂರ ಉಳಿಯುತ್ತಾರೆಯೇ? ಎಂಬುದು ಕುತೂಹಲದ ಸಂಗತಿ.
ಒಟ್ಟಿನಲ್ಲಿ, ಅಶೋಕ್ ರೈ ಹಾಕಿರುವ ಪ್ರತಿ ಸವಾಲು ಈಗ ಹರೀಶ್ ಪೂಂಜಾ ಅವರ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಸವಾಲು ಹಾಕಿದವರು ಪೂಂಜಾ; ಸವಾಲನ್ನು ಸ್ವೀಕರಿಸಿ ವೇದಿಕೆ ಸಿದ್ಧಪಡಿಸಿದವರು ಅಶೋಕ್ ರೈ. ಈಗ ಚೆಂಡು ಪೂಂಜಾ ಅವರ ಅಂಗಳದಲ್ಲಿದೆ. ಪುತ್ತೂರಿನ ವೇದಿಕೆಗೆ ಬಂದು ಅಭಿವೃದ್ಧಿಯ ಲೆಕ್ಕ ಕೊಡುತ್ತಾರಾ? ಅಥವಾ ರಾಜಕೀಯ ಟೀಕೆಗಳಿಗೆ ಅವಕಾಶ ಮಾಡಿಕೊಡುತ್ತಾರಾ? ಸೋಮವಾರದ ಬೆಳವಣಿಗೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯದಲ್ಲಿ ಮಹತ್ವದ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ.
ಅಪರಾಧ
Arrested-ಬಡ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಬೃಹತ್ ಜಾಲ ಪತ್ತೆ: 11 ಮಂದಿ ಅರೆಸ್ಟ್; ಅಕ್ಕಪಡೆಯ ಮಹಿಳಾ ಪೊಲೀಸರ ಸಾಹಸಕ್ಕೆ ಮೆಚ್ಚುಗೆ
ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಬೃಹತ್ ಸಂಘಟಿತ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ಸುಮಾರು ಆರು ತಿಂಗಳಿಂದ ಡಿಜಿಟಲ್ ಮಾಧ್ಯಮಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ ಈ ಜಾಲದ ವಿರುದ್ಧ ಪೊಲೀಸರು ಸುದೀರ್ಘ ತನಿಖೆ ನಡೆಸಿ 11 ಆರೋಪಿಗಳನ್ನು ಬಂಧಿಸಿದ್ದಾರೆ.
ಬಳ್ಳಾರಿ, ನ.12: ಬಡ ಕುಟುಂಬಗಳ ಹೆಣ್ಣುಮಕ್ಕಳಿಗೆ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದ ಬೃಹತ್ ಸಂಘಟಿತ ಜಾಲವೊಂದನ್ನು ಬಳ್ಳಾರಿ ಪೊಲೀಸರು ಭೇದಿಸಿದ್ದಾರೆ. ಸುಮಾರು ಆರು ತಿಂಗಳಿಂದ ಡಿಜಿಟಲ್ ಮಾಧ್ಯಮಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ ಈ ಜಾಲದ ವಿರುದ್ಧ ಪೊಲೀಸರು ಸುದೀರ್ಘ ತನಿಖೆ ನಡೆಸಿ 11 ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ವಿಶೇಷ ಗಮನ ಸೆಳೆದಿರುವುದು ಬಳ್ಳಾರಿಯ ‘ಅಕ್ಕ ಪಡೆ’ಯ ಮಹಿಳಾ ಪೊಲೀಸ್ ಸಿಬ್ಬಂದಿಯ ಸಾಹಸ. ಮಹಿಳಾ ಸಿಬ್ಬಂದಿಯೇ ಖುದ್ದಾಗಿ ಕಾರ್ಯಾಚರಣೆಗೆ ಇಳಿದು, ಆರೋಪಿಗಳ ಜಾಲದೊಳಗೆ ಪ್ರವೇಶಿಸಿ ಮಾಹಿತಿ ಸಂಗ್ರಹಿಸಿ ಬಂಧನಕ್ಕೆ ನೆರವಾಗಿದ್ದಾರೆ.
ಬಡ ಕುಟುಂಬಗಳ ಹೆಣ್ಣುಮಕ್ಕಳನ್ನೇ ಗುರಿಯಾಗಿಸಿಕೊಂಡಿದ್ದ ಆರೋಪಿಗಳು, ಹಣದ ಆಮಿಷವೊಡ್ಡಿ ಅವರನ್ನು ವೇಶ್ಯಾವಾಟಿಕೆ ಜಾಲಕ್ಕೆ ಸೆಳೆಯುತ್ತಿದ್ದರು. ಬಳ್ಳಾರಿ ಮಾತ್ರವಲ್ಲದೆ ಆಂಧ್ರಪ್ರದೇಶದ ಅನಂತಪುರ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಹಲವು ಪ್ರದೇಶಗಳಿಗೂ ಈ ಜಾಲದ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸುಮಾರು 45 ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿದ ಅಕ್ಕಪಡೆ ಬೃಹತ್ ಜಾಲವನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಸಂಬಂಧ ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೋಟೋಗಳ ಮೂಲಕ ಹೆಣ್ಣುಮಕ್ಕಳ ಆಯ್ಕೆ!
ಆರೋಪಿಗಳು ಹೆಣ್ಣುಮಕ್ಕಳನ್ನು ಆಯ್ಕೆ ಮಾಡಲು ವ್ಯವಸ್ಥಿತ ವಿಧಾನ ಅನುಸರಿಸುತ್ತಿದ್ದರು. ನಿರ್ದಿಷ್ಟ ವಯಸ್ಸು, ಎತ್ತರ ಸೇರಿದಂತೆ ಕೆಲವು ಮಾನದಂಡಗಳನ್ನು ವಿಧಿಸಿ, ಜನ್ಮದಿನಾಂಕದೊಂದಿಗೆ ಮುಂಗೈ ಮತ್ತು ಮುಂಗಾಲು ಕಾಣುವಂತೆ ಫೋಟೋಗಳನ್ನು ಕಳುಹಿಸುವಂತೆ ಸೂಚಿಸುತ್ತಿದ್ದರು. ಹೀಗೆ ಮೂರು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿತ್ತು.
ಆಯ್ಕೆಯಾದ ಯುವತಿಯರನ್ನು ‘ಲಕ್ಷ್ಮಿ ಪೂಜೆ’ ಹೆಸರಿನಲ್ಲಿ ಕರೆಸಿಕೊಂಡು, ಹಣದ ಆಮಿಷವೊಡ್ಡಿ ಜಾಲಕ್ಕೆ ಸೆಳೆಯಲಾಗುತ್ತಿತ್ತು ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ಯುವತಿ, ಮಧ್ಯವರ್ತಿ ಹಾಗೂ ಜಾಲದ ಮುಖ್ಯಸ್ಥನಿಗೆ ಹಣ ನೀಡಲಾಗುತ್ತದೆ ಎಂದು ನಂಬಿಸಲಾಗುತ್ತಿತ್ತು. ಕೊನೆಗೆ ಬೆತ್ತಲೆ ಫೋಟೋಗಳನ್ನು ಕೂಡ ಕಳುಹಿಸುವಂತೆ ಒತ್ತಾಯಿಸಲಾಗುತ್ತಿತ್ತು. ಈ ಜಾಲದಲ್ಲಿ ಅಪ್ರಾಪ್ತ ವಯಸ್ಕ ಹೆಣ್ಣುಮಕ್ಕಳ ಫೋಟೋಗಳು ಕೂಡ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಕೋಡ್ ವರ್ಡ್ ಮೂಲಕ ರಹಸ್ಯ ವ್ಯವಹಾರ
ತಮ್ಮ ಅಕ್ರಮ ಚಟುವಟಿಕೆಗಳನ್ನು ಗುಟ್ಟಾಗಿ ನಡೆಸಲು ಆರೋಪಿಗಳು ಕೋಡ್ ವರ್ಡ್ಗಳನ್ನು ಬಳಸುತ್ತಿದ್ದರು. ಜಾಲವನ್ನು ‘ಮೀಡಿಯಾ’, ಹೆಣ್ಣುಮಕ್ಕಳನ್ನು ‘ಪೇಪರ್’ ಹಾಗೂ ಜಾಲದ ಮುಖ್ಯಸ್ಥನನ್ನು ‘ಡಿಆರ್’ ಎಂದು ಕರೆಯುತ್ತಿದ್ದರು. ಈ ಸಂಕೇತ ಪದಗಳ ಮೂಲಕವೇ ಪರಸ್ಪರ ಸಂವಹನ ನಡೆಸಿ ಕಾರ್ಯಾಚರಣೆಯ ರಹಸ್ಯ ಕಾಪಾಡುತ್ತಿದ್ದರು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಳ್ಳಾರಿ ಜಿಲ್ಲೆಯಿಂದ ಮೂವರು ಯುವತಿಯರನ್ನು ಈ ಜಾಲದ ಮೂಲಕ ಕಳುಹಿಸಿರುವ ಸುಳಿವು ಲಭ್ಯವಾಗಿದೆ. ಒಟ್ಟು 16 ಜನರ ಪೈಕಿ 11 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಬಳ್ಳಾರಿಯ 10 ಮಂದಿ ಹಾಗೂ ಅನಂತಪುರ ಮತ್ತು ಪುಣೆಯ ತಲಾ ಒಬ್ಬರು ಸೇರಿದ್ದಾರೆ ಎಂದು ವರದಿಯಾಗಿದೆ.
ಬಡ ಮಹಿಳೆಯರ ವೇಷದಲ್ಲಿ ಅಕ್ಕಪಡೆ ಕಾರ್ಯಾಚರಣೆ
ನಗರದ ಕೆಲವು ಕೊಳೆಗೇರಿ ಪ್ರದೇಶಗಳಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಕ್ಕಪಡೆಯ ಸಿಬ್ಬಂದಿ, ಜಾಲದ ಮಹಿಳಾ ಮಧ್ಯವರ್ತಿಗಳ ಸಂಪರ್ಕ ಸಾಧಿಸಿದ್ದಾರೆ. ಬಳಿಕ ಬಡ ಮಹಿಳೆಯರಂತೆ ಹಳೆಯ ಬಟ್ಟೆಗಳನ್ನು ಧರಿಸಿ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಸದಸ್ಯರಂತೆ ನಟಿಸಿ ಜಾಲದ ಸಂಪರ್ಕಕ್ಕೆ ಬಂದಿದ್ದಾರೆ.
ಹಿಂದೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದ ತಮ್ಮ ಕುಟುಂಬಗಳು ಈಗ ಸಂಕಷ್ಟದಲ್ಲಿವೆ ಎಂದು ಹೇಳಿ ಆರೋಪಿಗಳ ವಿಶ್ವಾಸ ಗಳಿಸಿದ್ದಾರೆ. ಜಾಲದ ಮೂರು-ನಾಲ್ಕು ಹಂತಗಳನ್ನು ದಾಟಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕ ಹೆಚ್ಚುವರಿ ಪೊಲೀಸ್ ತಂಡದ ನೆರವಿನಿಂದ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ಕಪಡೆಯ ಲಲಿತಮ್ಮ, ಅನಿತಾ, ಶಾಹೀದಾ ಹಾಗೂ ರುಖಿಯಾ ಬಾನು ಅವರು ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ರಾಜ್ಯ
Farmer-₹25 ಲಕ್ಷ ಲಂಚ ಪಡೆದ ತಹಶೀಲ್ದಾರ್ ವರ್ಗಾವಣೆ: ಕಚೇರಿ ಆವರಣದಲ್ಲಿ ಮರವೇರಿ ಪ್ರತಿಭಟನೆ ನಡೆಸಿದ ರೈತ
ಜಮೀನಿನ ಖಾತೆ ಬದಲಾವಣೆ ಮಾಡಿ ಪಹಣಿ ಪತ್ರ ನೀಡುವುದಾಗಿ ಹೇಳಿ ₹25 ಲಕ್ಷ ಲಂಚ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ 12 ರೈತ ಕುಟುಂಬಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ಜಮೀನಿನ ಖಾತೆ ಬದಲಾವಣೆ ಮಾಡಿ ಪಹಣಿ ಪತ್ರ ನೀಡುವುದಾಗಿ ಹೇಳಿ ₹25 ಲಕ್ಷ ಲಂಚ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ 12 ರೈತ ಕುಟುಂಬಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ರಾಮೇನಕೊಪ್ಪ ಗ್ರಾಮದ ಸರ್ವೆ ನಂ. 17ರಲ್ಲಿರುವ ಜಮೀನಿನಲ್ಲಿ 1960ರಿಂದಲೂ 12 ಕುಟುಂಬಗಳು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ತಾವೇ ಮೂಲ ಮಂಜೂರಾತಿದಾರರಾಗಿದ್ದರೂ ಜಮೀನಿನ ಖಾತೆ ಬದಲಾವಣೆ ಮಾಡಿ ತಮ್ಮ ಹೆಸರಿಗೆ ಪಹಣಿ ಮಾಡಿಕೊಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು.
ಇತ್ತೀಚೆಗೆ ವರ್ಗಾವಣೆಯಾಗಿರುವ ತಹಶೀಲ್ದಾರ್ ರಾಜೀವ್ ಅವರು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ನೀಡಬೇಕೆಂದು ಹೇಳಿ ತಮ್ಮಿಂದ ₹25 ಲಕ್ಷ ಲಂಚ ಪಡೆದಿದ್ದಾರೆ. ಆದರೆ, ಹಣ ಪಡೆದರೂ ಕೆಲಸ ಮಾಡಿಕೊಡದೆ ವಂಚಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ವೇಳೆ ಆಕ್ರೋಶಗೊಂಡ ರೈತ ನಾಗರಾಜ್ ಎಂಬವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಆಲದ ಮರವೇರಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ಕೆಳಗಿಳಿಸಲು ಪ್ರಯತ್ನಿಸಿದರು. ಬಳಿಕ ಹಿರಿಯ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಪ್ರತಿಭಟನೆ ಅಂತ್ಯಗೊಂಡಿತು.
ತಹಶೀಲ್ದಾರ್ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಸಮಗ್ರ ತನಿಖೆ ನಡೆಸಬೇಕು. ಆರೋಪಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದರು. ಈ ಸಂಬಂಧ ಲೋಕಾಯುಕ್ತ ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುವುದಾಗಿಯೂ ತಿಳಿಸಿದರು.
ಸಚಿವರ ಕಚೇರಿಯಿಂದ ಕರೆ ಮಾಡಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಲಾಗಿನ್ ಬಂದ್ ಮಾಡಿ ನೋಟಿಸ್ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆ. ಲಂಚದ ಹಾವಳಿಯಿಂದ ರೈತರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದೇವೆ ಎಂದು ಮರ ಏರಿ ಪ್ರತಿಭಟಿಸಿದ ರೈತ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅಂಜುಮ್, ತುಂಗಮ್ಮ, ಮೀನಾಕ್ಷಮ್ಮ, ರತ್ನಮ್ಮ, ಚಂದ್ರಶೇಖರ, ಬಸವರಾಜ ಸೇರಿದಂತೆ ನೊಂದ ಕುಟುಂಬಗಳ ಸದಸ್ಯರು ಪಾಲ್ಗೊಂಡಿದ್ದರು.
-
ಶಿಕ್ಷಣ11 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಅಪರಾಧ4 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ಚಿನ್ನ-ಬೆಳ್ಳಿ ದರ9 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಸ್ಥಳೀಯ10 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಸಿನೆಮಾ9 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಅಪರಾಧ10 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಅಪರಾಧ10 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ರಾಜಕೀಯ4 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ















