ದಕ್ಷಿಣ ಕನ್ನಡ
Arecanut | ಅಡಿಕೆಗೆ ಎಲೆಚುಕ್ಕಿ ರೋಗದ ಜೊತೆ ‘ಅರಗ ರೋಗ’ ಬಡಿದಿದೆ : ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಗೃಹ ಸಚಿವರೇ ಕೃಷಿಕರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ : ನಾವು ತಿನ್ನುವ ಅನ್ನದ ಅಗುಳಿನಲ್ಲೂ ಅಡಿಕೆಯ ಋಣವಿದೆ : ಹೋರಾಟ ಅನಿವಾರ್ಯವಾದರೆ ಮಂಚೂಣಿಯಲ್ಲಿರಲು ನಾನು ಸಿದ್ದ: ಅರಗ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅಶೋಕ್ ಕುಮಾರ್ ರೈ
ಅಡಿಕೆ ಬೆಳೆಗೆ (Arecanut) ಎಲೆಚುಕ್ಕಿ ರೋಗ, ಹಳದಿ ರೋಗ ಅದರ ಜೊತೆಗೆ ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಹೋರಾಟದ ಮಾರ್ಗವೇ ಅನಿವಾರ್ಯವಾದರೆ ಮುಂಚೂಣಿಯಲ್ಲಿರಲು ನಾನು ಸಿದ್ಧ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಆಪ್ತ, ಪುತ್ತೂರು ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ತನ್ನ ಫೇಸ್ಬುಕಲ್ಲಿ ಪೋಸ್ಟ್ ಹಾಕಿದ್ದಾರೆ.
ಅಡಿಕೆ ಬರೀ ಜಗಿದು ಉಗುಳಲಿಕ್ಕೆ ಇರುವಂಥದ್ದು… ಅದರಿಂದ ಹೊಟ್ಟೆ ತುಂಬುವುದಿಲ್ಲ ಅಂತ ಅಡ್ಡ ಮಾತಾಡುವವರಿದ್ದಾರೆ… ಆದರೆ ಇವತ್ತು ನಾನು ತಿನ್ನುವ ಪ್ರತಿಯೊಂದು ಅನ್ನದ ಅಗುಳಿನಲ್ಲೂ ಅಡಿಕೆಯ ಋಣ ಇದೆ. ಇವತ್ತು ನಾನು ಉದ್ಯಮಿಯಾಗಿ ಬೆಳೆಯಲಿಕ್ಕೂ ಅಡಿಕೆ ಎಂಬ ಬೆಳೆಯಿಂದ ಬಂದ ಆರ್ಥಿಕ ಶಕ್ತಿಯೇ ಮೂಲಾಧಾರವಾಗಿದೆ. ಈ ಹೊತ್ತಿಗೆ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಕೊಡಿದ್ದರೂ ನಾನು ಇವತ್ತಿಗೂ ಮೂಲತಃ ಕೃಷಿಕನೇ… ಅದರಲ್ಲೂ ಹೆಚ್ಚಾಗಿ ಅಡಿಕೆ ಕೃಷಿಕನೇ.
ಇವತ್ತು ಅಡಿಕೆ ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಆತನ ತೋಟಗಳಿಗೆ ಎಲೆಚುಕ್ಕಿ ರೋಗ, ಹಳದಿ ರೋಗದಂಥಾ ಮಹಾಮಾರಿ ಬಂದೆರಗಿದೆ. ನೋಡನೋಡುತ್ತಲೇ ಕಣ್ಣೆದುರಿಗೆ ಹಚ್ಚ ಹಸಿರಾಗಿ ನಳನಳಿಸುತ್ತಿದ್ದ ಅಡಿಕೆ ಮರದ ಗರಿಗಳಲ್ಲಿ ಕಪ್ಪು ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳತೊಡಗಿತು… ಕೊಂಚ ಸಮಯದಲ್ಲಿ ಇಡೀ ಗರಿಯೇ ಒಣಗಿ ಕೊನೆಗೆ ಮರವೇ ಸಾಯುವ ಪರಿಸ್ಥಿತಿ. ಎಲೆ ಚುಕ್ಕಿ ರೋಗವೆಂಬ ಈ ಮಾರಕ ರೋಗದಿಂದಾಗಿ ಇದೆ ಅಡಿಕೆ ಕೃಷಿಯೇ ವಿನಾಶದತ್ತ ಮುಖಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುಪಾಲು ವಾಣಿಜ್ಯ ವ್ಯವಹಾರ ಅಡಿಕೆ ಕೃಷಿಯ ಮೇಲೆಯೇ ಅವಲಂಬಿತವಾಗಿದೆ. ಹಾಗಾಗಿ ಈ ರೋಗ ವ್ಯಾಪಕವಾಗಿ ಹರಡುವ ಮೊದಲು ಅದಕ್ಕೆ ಪರಿಹಾರೋಪಾಯಗಳು ಆಗಲೇ ಬೇಕಾಗಿದೆ. ಸ್ವತಃ ಅಡಿಕೆ ಕೃಷಿಕನಾಗಿರುವ ನನಗೆ ಇದನ್ನೆಲ್ಲಾ ಮೂಕ ಪ್ರೇಕ್ಷಕನಾಗಿದ್ದುಕೊಂಡು ಸಹಿಸಲಿಕ್ಕೂ ಆಗುವುದಿಲ್ಲ.
ಅಡಿಕೆ ಕೃಷಿಕರ ಪಾಲಿಗೆ ಈ ವರ್ಷ ಪ್ರಕೃತಿಯೂ ಮುನಿಸಿಕೊಂಡಿದೆ. ಯಾರ ಲೆಕ್ಕಾಚಾರಕ್ಕೂ ಸಿಗದಂಥಾ ಅನಿಶ್ಚಿತ ಮಳೆ, ಅತಿವೃಷ್ಟಿ ಯಿಂದಾಗಿ ಮೊದಲೇ ಕೊಳೆ ರೋಗ, ಹಳದಿ ರೋಗಗಳಿಂದ ಜರ್ಜರಿತನಾಗಿದ್ದ ಅಡಿಕೆ ಕೃಷಿಕ ಈಗ ಈ ಎಲೆ ಚುಕ್ಕಿ ರೋಗದಿಂದ ಕಂಗಾಲಾಗಿದ್ದಾನೆ. ಆದರೆ ಆತನ ಸಹಾಯಕ್ಕೆ ಬರಬೇಕಿದ್ದವರು ಬರುತ್ತಿಲ್ಲ. ಸರಕಾರಗಳು, ಅದರ ಮಂತ್ರಿಗಳು ಆಡಿದ ಮಾತುಗಳ ಮೇಲೆ, ನೀಡಿದ ಭರವಸೆಗಳ ಮೇಲೆ, ಮಾಡುತ್ತಿರುವ ಕೆಲಸಗಳ ಮೇಲೆ ಅಡಿಕೆ ಕೃಷಿಕನಿಗೆ ನಂಬಿಕೆ ಹುಟ್ಟುತ್ತಿಲ್ಲ… ಅಡಿಕೆ ಮರಗಳಿಗೆ ಬಂದಿರುವ ರೋಗಕ್ಕಿಂತಲೂ ದೊಡ್ಡ ರೋಗ ನಮ್ಮನ್ನಾಳುವ ಮಂದಿಗಿದೆ ಎಂಬುದು ಆತನಿಗೆ ಮೊದಲೇ ಗೊತ್ತಿದೆ.
ಹಾಗಾಗಿ ಈ ಸರಕಾರಗಳು ನಿದ್ದೆಯಿಂದ ಎಚ್ಚೆತ್ತು, ಮಲಗಿದ್ದಲ್ಲಿಂದ ಎದ್ದು, ಅಡಿಕೆ ಕೃಷಿಗೆ ಬಂದಿರುವ ಎಲೆಚುಕ್ಕಿ ರೋಗದ ಬಗ್ಗೆ ಪರಿಶೀಲಿಸಿ, ಸರ್ವೇ ನಡೆಸಿ, ವರದಿ ತರಿಸಿಕೊಂಡು, ಟಾಸ್ಕ್ ಫೋರ್ಸ್ ರಚಿಸಿ, ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಿ, ಸಂಶೋಧನೆಗೆ ಅತ್ಯುನ್ನತ ಮಟ್ಟದ ವಿಜ್ಞಾನಿಗಳ ತಂಡವನ್ನು ಕಳುಹಿಸಿ, ವರದಿ ತರಿಸಿ, ಎಲೆಚುಕ್ಕಿ ರೋಗವನ್ನು ತಡೆಗಟ್ಟಲಿಕ್ಕಾಗಿ ಸಂಶೋಧನೆ ನಡೆಸಲು ತ್ವರಿತವಾಗಿ ಮಾಡಲು ಹತ್ತಿಪ್ಪತ್ತು ಕೋಟಿ ರೂಪಾಯಿಗಳಷ್ಟು ಹಣ ಬಿಡುಗಡೆ ಮಾಡುತ್ತೇವೆಂದು ಘೋಷಿಸಿ, ಬಳಿಕ ಅದಕ್ಕೆ ಸಂಬಂಧಪಟ್ಟ ದಾಖಲೆಗಳಿಗೆ ಉನ್ನತ ಅಧಿಕಾರಿಗಳ ಸಹಿಯಾಗಿ, ಕೊನೆಗೆ ಹಣ ಬಿಡುಗಡೆಯಾಗಿ, ಎಲೆಚುಕ್ಕಿ ರೋಗ ತಡೆಗಟ್ಟಲು ಶಿಲೀಂಧ್ರ ನಾಶಕ ಔಷಧಿಯನ್ನು ಕೃಷಿಕರಿಗೆ ಉಚಿತವಾಗಿ ಹಂಚುವ ಹೊಸ ಯೋಜನೆಗೆ ಅನುಮೋದನೆ ನೀಡಿ, ಅದಕ್ಕಾಗಿ ಔಷಧ ಖರೀದಿಗಾಗಿ ತಕ್ಷಣಕ್ಕೆ ಹತ್ತಿಪ್ಪತ್ತು ಕೋಟಿ ರೂಪಾಯಿಗಳ ಅನುದಾನ ಘೋಷಣೆ ಮಾಡಿ, ಆ ಬಳಿಕ ಅನುದಾನ ಬಿಡುಗಡೆಯಾಗಿ, ಆ ಬಳಿಕ ಔಷಧ ಖರೀದಿ ಪ್ರಕ್ರಿಯೆ ಶುರುಮಾಡಿ, ಬಳಿಕ ಆ ಔಷಧ ಸರಕಾರಕ್ಕೆ ಬಂದು, ಆ ಬಳಿಕ ಕೃಷಿ ಇಲಾಖೆಯ ಮೂಲಕ ನಮ್ಮ ಅಡಿಕೆ ಕೃಷಿಕರಿಗೆ ಉಚಿತವಾಗಿ ತಲುಪಿ, ಆ ನಂತರ ಕೃಷಿಕರು ಈ ಔಷಧವನ್ನು ತಮ್ಮ ಅಡಿಕೆಮರಗಳಿಗೆ ಎರಡು ಬಾರಿ ಸ್ಪ್ರೇ ಮಾಡಿ, ಮೂರನೆಯ ಬಾರಿ ಸ್ಪ್ರೇ ಮಾಡಲು ಔಷಧದ ಪೂರೈಕೆಯಿಲ್ಲದೆ ಒದ್ದಾಡಿ ತಮ್ಮ ತಮ್ಮ ಅಡಿಕೆ ಮರಗಳನ್ನು ರಕ್ಷಿಸಿಕೊಳ್ಳುವಷ್ಟರಲ್ಲಿ ತಮ್ಮ ಜೀವನಕ್ಕೆ ಏಕಮಾತ್ರ ಆಧಾರವಾಗಿರುವ ಅಡಿಕೆ ತೋಟವೇ ನಾಶವಾಗಿಬಿಡುತ್ತದೋ ಎಂಬ ಆತಂಕ ಮನೆಮಾಡಿದೆ…!
ವಿಪರೀತ ಮಳೆ, ಅದರಿಂದಾಗಿ ಉಂಟಾದ ವಿಪರೀತ ತೇವಾಂಶದಿಂದಾಗಿಯೇ ಈ ಎಲೆ ಚುಕ್ಕಿ ರೋಗವೆಂಬ ಈ ಶಿಲೀಂಧ್ರ ಸೋಂಕು ವ್ಯಾಪಕವಾಗಿ ಹರಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅಡಿಕೆ ಕೃಷಿಗೆ ಹೆಚ್ಚಾಗಿ ಬಾಧಿಸುವುದು ಈ ಶಿಲೀಂಧ್ರ ಸೋಂಕುಗಳೇ. ಆದರೆ ಈ ಬಾರಿ ವ್ಯಾಪಕವಾಗಿ ಹರಡತೊಡಗಿರುವ ಈ ಎಲೆಚುಕ್ಕಿ ರೋಗಕ್ಕೆ ಕಾರಣವಾಗಿರುವುದು phyllosticta arecae ಮತ್ತು Colletotrichum Gloeosporioides ಎಂಬ ಎರಡು ರೀತಿಯ ಫಂಗಸ್ ಅಥವಾ ಶಿಲೀಂದ್ರಗಳಿಂದ ಬರುವಂಥಹ ರೋಗ. ಇದಕ್ಕೆ ಆಂಟಿ ಫಂಗಲ್ ಅಥವಾ ಶಿಲೀಂಧ್ರನಾಶಕಗಳೇ ಬೇಕು. ಅಡಿಕೆ ಬೆಳೆಯಲ್ಲಿ ಈ ಎರಡು ಶಿಲೀಂಧ್ರಗಳ ಸೋಂಕು ಪತ್ತೆಯಾಗಿ ಆಗಲೇ ಐವತ್ತು ಅರವತ್ತು ವರ್ಷಗಳೇ ಆಯಿತು… ಅಡಿಕೆ ಕೃಷಿಕರು ಇದಕ್ಕೆ ಶಿಲೀಂಧ್ರನಾಶಕಗಳಾಗಿ carbendaziim ಮತ್ತು mancozeb ಇವುಗಳನ್ನು ಬಳಸುತ್ತಿದ್ದರು.
ಆದರೆ ಇತ್ತೀಚೆಗೆ ಈ ಔಷಧಗಳಿಗೆ ಎಲೆ ಚುಕ್ಕಿ ರೋಗ ಬಗ್ಗುತ್ತಿಲ್ಲ… ಅಷ್ಟೇ ಅಲ್ಲದೆ ಈ ಎರಡು ಶಿಲೀಂಧ್ರ ನಾಶಕಗಳಿಂದ ಅಡ್ಡಪರಿಣಾಮಗಳಿವೆಯೆಂದು ಸಾಬೀತಾಗಿರುವುದರಿಂದ ಪಾಶ್ಚಾತ್ಯ ದೇಶಗಳಲ್ಲಿ ಇವುಗಳ ಬಳಕೆಯನ್ನು ನಿಧಾನವಾಗಿ ನಿಷೇಧಿಸುತ್ತಿದ್ದಾರೆ. ಆದರೆ phyllosticta arecae ಮತ್ತು Colletotrichum Gloeosporioides ಎಂಬ ಈ ಎರಡು ಶಿಲೀಂಧ್ರಗಳ ಸೋಂಕು ಬೇರೆ ಬೆಳೆಗಳಿಗೂ ಬಾಧಿಸುತ್ತದೆ. ಹಾಗಾಗಿ ಬಹಳ ಹಿಂದೆಯೇ ಈ ಶಿಲೀಂಧ್ರಗಳಿಗೆ ಪರಿಣಾಮಕಾರಿಯಾದ Triazole ಸಮೂಹದಿಂದ ಆಯ್ದುಕೊಂಡ ನೂತನ ಫಂಗಿಸೈಡ್ ಗಳ ಬಗ್ಗೆ ಸಂಶೋಧನೆ ನಡೆದಿದೆ ಮತ್ತು ಈಗ ಇವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ ಕೂಡಾ. Hexaconazole ಅಥವಾ Propiconazole ಮುಂತಾದ ಫಂಗಿಸೈಡ್ ಗಳು ಅಡಿಕೆಯ ಎಲೆಚುಕ್ಕಿ ರೋಗಕ್ಕೂ ಪರಿಣಾಮಕಾರಿ ಎಂಬ ಸಂಶೋಧನೆ ಕೂಡಾ ಈಗಾಗಲೇ ನಡೆದಿದೆ. ಈಗ ಸರಕಾರ ಅಡಿಕೆ ಕೃಷಿಕರಿಗೆ ಉಚಿತವಾಗಿ ಪೂರೈಕೆ ಮಾಡುತ್ತೇವೆ ಅಂತ ಹೇಳಲಾಗುತ್ತಿರುವ ಫಂಗಿಸೈಡ್ ಗಳು ಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯಿಲ್ಲ. ಈ ಬಾರಿ ಹರಡುತ್ತಿರುವ ಶಿಲೀಂಧ್ರ ಸೋಂಕಿಗೆ ಬಹಳ ಪ್ರಬಲವಾದ ಶಿಲೀಂಧ್ರಗಳ ಪ್ರಬೇಧ ಕಾರಣವಿರಬಹುದು.. ಅದಕ್ಕಾಗಿ ಹಳೆಯ ಶಿಲೀಂಧ್ರ ನಾಶಕಗಳಿಂದ ಆಧುನಿಕ ಶಿಲೀಂಧ್ರ ನಾಶಕಗಳನ್ನೇ ಪೂರೈಕೆ ಮಾಡಬೇಕು ಎಂಬುದು ಕೃಷಿಕರ ಒತ್ತಾಯ.
ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಕೂಡಾ ಅಡಿಕೆ ಕೃಷಿಕರ ಹಿತರಕ್ಷಣೆಗಾಗಿ ಸಾಕಷ್ಟು ಕ್ರಮಕೈಗೊಳ್ಳುತ್ತಿದ್ದೇವೆ ಅಂತ ತೋರ್ಪಡಿಕೆ ಮಾಡುತ್ತಿದೆಯಾ ಎಂಬ ಸಂಶಯ ಈ ಭಾಗದ ಅಡಿಕೆ ಕೃಷಿಕರಿಗಿದೆ. ಸ್ವಯಂ ಅಡಿಕೆ ಕೃಷಿಕರೇ ಆಗಿರುವ ಮಲೆನಾಡಿನ ಆರಗ ಜ್ಞಾನೇಂದ್ರ ಟಾಸ್ಕ್ ಫೋರ್ಸ್ ನ ಅಧ್ಯಕ್ಷರಾಗಿದ್ದಾರೆ… ಆದರೆ ವಿಧಾನಸೌಧದ ಸದನದೊಳಗೆಯೇ “ಅಡಿಕೆ ಕೃಷಿಗೆ ಭವಿಷ್ಯವೇ ಇಲ್ಲ… ಇನ್ನು ಹತ್ತು ವರ್ಷದೊಳಗೆ ಅಡಿಕೆ ಮರಗಳನ್ನು ಕತ್ತರಿಸಿ ಹಾಕಿ ಬೇರೆ ಕೃಷಿ ಮಾಡುವ ಪರಿಸ್ಥಿತಿ ಬರಲಿದೆ ..” ಅಂತ ಹೇಳಿ ಮೊದಲೇ ಕಂಗಾಲಾಗಿದ್ದ ಅಡಿಕೆ ಕೃಷಿಕರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ನಿನ್ನೆಯಿಂದ ಅಡಿಕೆಗೆ ಎಲೆ ಚುಕ್ಕಿ ರೋಗದ ಜೊತೆಗೆಯೇ ‘ಆರಗ ರೋಗ’ ಕೂಡಾ ಬಡಿದಿದೆ..!
ಎಲೆ ಚುಕ್ಕಿ ರೋಗದ ಅಪಾಯವನ್ನು ತಡೆಗಟ್ಟಲು ಕರ್ನಾಟಕದಿಂದ ಯಡಿಯೂರಪ್ಪನವರ ನೇತೃತ್ವದಲ್ಲಿ ಒಂದು ತಂಡ ಹೋಗಿ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಬಂದಿದೆ.. ಆದರೆ ಯಡಿಯೂರಪ್ಪನವರ ತಂಡದಲ್ಲಿ ಅಡಿಕೆ ಕೃಷಿಯ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಲು ನಮ್ಮ ಜಿಲ್ಲೆಯ ಒಬ್ಬೇ ಒಬ್ಬ ಜನಪ್ರತಿಧಿ ಕೂಡಾ ಇರಲಿಲ್ಲ..! ಬಹುಶಃ ಕೇಂದ್ರ ಕೃಷಿಯ ರಾಜ್ಯ ಸಚಿವರು ಸ್ವತಹಾ ಅಡಿಕೆ ಕೃಷಿಕರೂ ಆಗಿರುವ ದಕ್ಷಿಣ ಕನ್ನಡದ ಮೂಲದವರೇ ಎಂಬುದು ಕಾರಣವಿರಬಹುದಾ..? ಜಿಲ್ಲೆ, ರಾಜ್ಯ, ಕೇಂದ್ರ ಎಲ್ಲ ಕಡೆಯೂ ನಮ್ಮ ಅಡಿಕೆ ಕೃಷಿಕರೇ ಇದ್ದರೂ ನಮ್ಮವರಿಗೆ ನಮ್ಮವರಿಂದ ಏನಾದರೂ ಪ್ರಯೋಜನವಾದೀತೇ..? ಬಹುಶಃ ನಮ್ಮ ಪಕ್ಕದ ತಾಲೂಕಿನವರಿಗೆ ಇದ್ಯಾವುದರಿಂದಲೂ ನಮಗೆ ಪ್ರಯೋಜನವಿಲ್ಲವೆಂಬುದು ಗೊತ್ತಾಗಿಯೇ ಅವರು ಕೇಂದ್ರಕ್ಕೆ ನಮ್ಮ ಕಷ್ಟಗಳ ಸಮಾಚಾರ ಮುಟ್ಟಿಸಿ ಪರಿಹಾರ ಪಡೆಯಲು ರಾಜರ್ಷಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಾಯ ಪಡೆಯಲು ಹೊರಟದ್ದು ..!
ಆದರೆ ನಿಜಕ್ಕೂ ಹೇಳಿ… ಈ ರೀತಿ ನಿಯೋಗ ಹೋಗಿ ಮನವಿ ಕೊಡುವುದರಿಂದ ಏನಾದರೂ ಪ್ರಯೋಜನವಾಗಬಹುದೇ..? ಹಾಗಂತ ನಿಮಗನ್ನಿಸುತ್ತಿದೆಯೇ..? ಎಲೆಚುಕ್ಕಿ ರೋಗದ ಸಮಸ್ಯೆ ಕಾಡತೊಡಗಿ ಈಗಾಗಲೇ ಮೂರು ನಾಲ್ಕು ತಿಂಗಳು ಕಳೆಯಿತು. ಇಷ್ಟರಲ್ಲಿ ಎಲ್ಲ ಕೃಷಿಕರೂ ಕೂಡಾ ಎರಡೆರಡು ಸಲವಾದರೂ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ ಕನಿಷ್ಠಪಕ್ಷ ಈ ರೋಗವನ್ನು ಹತೋಟಿಗೆ ತರಲಿಕ್ಕಾದರೂ ಶ್ರಮಿಸಬಹುದಿತ್ತೋ ಏನೋ… ಅದೇ ಸಮಯಕ್ಕೆ ಅಡಿಕೆ ಧಾರಣೆಯೂ ಬಿದ್ದು ಹೋಗಿ ಕೆಲ ಸಮಯವಾಯಿತು… ಭೂತಾನಿನ ಗಡಿಯೊಳಗಿನಿಂದ ಹಸೀ ಅಡಿಕೆ ಭೂತದಂತೆ ಎದ್ದು ನಿಂತು ಕುಣಿಯಲು ಶುರುಮಾಡಿರುವುದರ ಜೊತೆಗೆ ಬೇರೆ ಬೇರೆ ದೇಶಗಳಿಂದ ನಮ್ಮ ಗಡಿಯೊಳಗೆ ಅಡಿಕೆಯನ್ನು ಕಳ್ಳಸಾಗಾಣಿಕೆ ಮಾಡಲು ಶುರುಮಾಡಿರುವುದರಿಂದಲೇ ನಮ್ಮಲ್ಲಿನ ಅಡಿಕೆಯ ಬೆಲೆ ಇಳಿಯಿತು ಅಂತ ತಿಳಿಯುವುದಕ್ಕೆ “ಬಲಿಮೆ’ ಇಡಬೇಕಾಗಿಲ್ಲ…
ಇದೆಲ್ಲವೂ ನಮ್ಮ ಜಿಲ್ಲೆ, ರಾಜ್ಯ, ಕೇಂದ್ರ ಎಲ್ಲ ಕಡೆಯೂ ಇರುವ ನಮ್ಮ ಪ್ರತಿನಿಧಿಗಳಂತಾಡುವ ಅಡಿಕೆ ಕೃಷಿಕರಿಗೆ ಗೊತ್ತಿದ್ದರೂ… ನಮ್ಮವರಿಗೆ ನಮ್ಮವರಿಂದ ಏನೂ ಪ್ರಯೋಜನವಾಗಲಿಲ್ಲ… ! ಈಗಲೂ ಪ್ರಯೋಜನವಾಗುವ ಲಕ್ಷಣಗಳಿಲ್ಲ..! ನಮ್ಮ ಹಿತ ರಕ್ಷಣೆಗೆ ನಾವೇ ಹೊಣೆ… ಯಾರನ್ನೋ ನಂಬಿ ಕೂರುವ ಬದಲಿಗೆ ಹೋರಾಟದ ಹಾದಿಯೇ ಲೇಸು… ಒಂದು ವೇಳೆ ದಕ್ಷಿಣ ಕನ್ನಡದ ಅಡಿಕೆ ಕೃಷಿಕರೆಲ್ಲಾ ಒಗ್ಗಟ್ಟಾಗಿ ಹೋರಾಟಕ್ಕೆ ತೊಡಗುವುದು ಅಂತಾದರೆ… ಈ ಅಶೋಕ್ ರೈ ಸದಾ ಮುಂದೆ… ಅಷ್ಟೇ ಅಲ್ಲ ಮುಂಚೂಣಿಯಲ್ಲೇ ನಿಂತು ಎಲ್ಲಾ ಜವಾಬ್ದಾರಿಯನ್ನೂ ತೆಗೆದುಕೊಳ್ಳಲು ಸಿದ್ಧ…! ಅಡಿಕೆ ಬೆಳೆಗಾರರ ನೋವಿಗೆ ಸ್ಪಂದಿಸಲು ನಾನು ಬದ್ಧ… ಎಂದು ಪೋಸ್ಟ್ ಹಾಕಿದ್ದಾರೆ .
ಶಿಕ್ಷಣ
Vivekananda-ಸದ್ದಿಲ್ಲದೆ ಸಾಹಿತ್ಯ ಸೇವೆಗೈಯ್ಯುತ್ತಿದೆ ಪುಸ್ತಕ ಅವಲೋಕನ ಬಳಗ
ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.
ಈ ಬಾರಿಯ ಕನ್ನಡ ರಾಜ್ಯೋತ್ಸವವು ಅನೇಕ ಓದುಗ ಮತ್ತು ಬರೆಹಗಾರರಿಗೆ
ವಿಶೇಷವಾದುದು. ಪುಸ್ತಕ ಅವಲೋಕನ – ಓದುಬರಹದ ಸುತ್ತಮುತ್ತ ಎಂಬ
ಹೆಸರಿನ ಫೇಸ್ ಬುಕ್ ಬಳಗವೊಂದು ನವೆಂಬರ್ ಇಡೀ ತಿಂಗಳು ಪ್ರತಿದಿನವೂ ಒಬ್ಬೊಬ್ಬ
ಲೇಖಕರ ಕುರಿತು ಪುಸ್ತಕ ಪರಿಚಯ ಅಭಿಯಾನವನ್ನು ನಡೆಸುತ್ತಿದೆ.
ಗುಂಪಿನ ನಿರ್ವಾಹಕರಾದ ವೀಣಾ ನಾಯಕ್ ಮತ್ತು ವಸಂತ ಗಣೇಶ್ ಅವರ ಕನ್ನಡಪರ ಮನಸ್ಸಿನ ಬಹಳ ದೊಡ್ಡ ಯೋಜನೆಯಿದು. ಮೂವತ್ತು ದಿನಕ್ಕೆ ಮೂವತ್ತು ಸಾಹಿತಿಗಳ ಪಟ್ಟಿಯನ್ನು ಮೊದಲೇ
ನೀಡಲಾಗಿದ್ದು ನವೋದಯ ಪೂರ್ವ, ನವೋದಯದಿಂದ ತೊಡಗಿ ಇತ್ತೀಚಿನವರೆಗಿನ ಪ್ರಮುಖ ಸಾಹಿತಿಗಳು, ಎಲೆಮರೆಯ ಕಾಯಿಯಂತಿದ್ದ ಸಾಧಕ ಸಾಹಿತಿಗಳ ಮತ್ತು ಪ್ರಮುಖ ಅನುವಾದ ಸಾಹಿತಿಗಳ ಪರಿಚಯ ಮತ್ತು ಅವರ ಕೃತಿಗಳನ್ನು ಅವಲೋಕಿಸುವ ಅಭಿಯಾನವಿದು.
ಪಂಜೆ ಮಂಗೇಶರಾವ್, ರಾಶಿ, ವಂಶಿ, ವ್ಯಾಸರಾವ್ ನಿಂಜೂರ್, ಕೆರೂರು ವಾಸುದೇವಾಚಾರ್ಯ, ಶ್ರೀರಂಗ, ಗಳಗನಾಥ, ಆಲೂರ ವೆಂಕಟರಾವ್, ಕಮಲಾ ಹಂಪನ, ಕುವೆಂಪು, ಮೊಗಳ್ಳಿ ಗಣೇಶ್, ಸುಬ್ರಾಯ ಚೊಕ್ಕಾಡಿ, ವೀರ ಕೇಸರಿ ಸೀತಾರಾಮಶಾಸ್ತ್ರಿ, ಗೌರೀಶ್ ಕಾಯ್ಕಿಣಿ, ಎಸ್.ವಿ.ಪಿ., ವಿವೇಕ ಶಾನಭಾಗ, ಡಾ. ಸಿ.ಆರ್. ಚಂದ್ರಶೇಖರ್, ಡಿ.ವಿ.ಜಿ, ಸಂತೋಷ ಕುಮಾರ ಮೆಹೆಂದಳೆ ಹೀಗೆ ಸಾಹಿತ್ಯದ
ಬೇರೆಬೇರೆ ಕಾಲಘಟ್ಟದ ಮೂವತ್ತು ಜನ ಅಪೂರ್ವ ಸಾಹಿತಿ, ಕವಿಗಳ ಪರಿಚಯ
ನಡೆಯುತ್ತಿದೆ. ದಿನಂಪ್ರತಿ ಈ ಬಳಗದ ಸುಮಾರು 40 – 45 ರಷ್ಟು ಸದಸ್ಯರು
ಆಯಾ ಕವಿಗಳ, ಕೃತಿಗಳ ಕುರಿತು ಪರಿಚಯಾತ್ಮಕ ಲೇಖನಗಳನ್ನು ಬರೆಯುತ್ತಿರುವುದು ಗಮನಾರ್ಹವಾದುದು.
2021 ರಲ್ಲಿ ರಚನೆಯಾದ ಈ ಫೇಸ್ ಬುಕ್ ಬಳಗವು ಯಶಸ್ವಿಯಾಗಿ ಆರು ವರ್ಷಗಳನ್ನು ಪೂರೈಸುತ್ತಿದ್ದು ನಾಡಿನ ಅನೇಕ ಗಣ್ಯಾತಿಗಣ್ಯರನ್ನು, ಹಿರಿಯ ಸಾಹಿತಿಗಳನ್ನು ಸೇರಿದಂತೆ 21,600 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಒಳಗೊಂಡು ಸಕ್ರಿಯವಾಗಿ ಸಾಹಿತ್ಯ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬರುತ್ತಿದೆ. ಉಮಾಶಂಕರ್ ಟಿ.ಆರ್. ಅವರು ಸಂಸ್ಥಾಪಕರಾಗಿ, ನಿರ್ವಾಹಕರಾಗಿ (ಅಡ್ಮಿನ್)
ಆರಂಭಗೊಳಿಸಿದ ಈ ಪುಸ್ತಕ ಬಳಗವು ಪ್ರಸ್ತುತ ಉಮಾಶಂಕರ್ ಟಿ. ಆರ್. (ಸಂಸ್ಥಾಪಕರು ಮತ್ತು ಮುಖ್ಯ ನಿರ್ವಾಹಕರು), ದೇವಿಶ್ರೀ ಪ್ರಸಾದ್, ವೀಣಾ ನಾಯಕ್, ವಸಂತ ಗಣೇಶ್, ಶಶಿ ಶಂಕರ್, ಪವಿತ್ರ ಹೆತ್ತೂರು ಈ ಆರು ಜನ ನಿರ್ವಾಹಕರನ್ನು ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ.
ಪುಸ್ತಕದ ಕುರಿತಾಗಿಯೇ ಚರ್ಚೆಗಳು ನಡೆಯುವ, ಪುಸ್ತಕದ ಓದು ಮತ್ತು ಬರೆಹಕ್ಕಷ್ಟೇ ಇರುವಂತಹ ಈ ಬಳಗದಲ್ಲಿ ಕನ್ನಡದ ವಿವಿಧ ಕೃತಿಗಳ ಕುರಿತು ರಸಪ್ರಶ್ನೆ, ಪದಬಂಧ ಇತ್ಯಾದಿ ಸ್ಪರ್ಧೆಗಳು ಕೂಡ ನಡೆಯುತ್ತವೆ. ವಿವಿಧ ವಸ್ತುಗಳನ್ನು ನೀಡಿ ಬರೆಯಿಸುವ ಲೇಖನ ಅಭಿಯಾನಗಳು ಕೂಡ ಸಾಕಷ್ಟು
ನಡೆಯುತ್ತವೆ. ಸದಸ್ಯರು ತಾವು ಓದಿದ ಪುಸ್ತಕದ ಪರಿಚಯವನ್ನು ಮಾಡುವ, ವಿಮರ್ಶಾತ್ಮಕ ಲೇಖನಗಳನ್ನು ಪೋಸ್ಟ್ ಮಾಡುವ ಮೂಲಕ ಸ್ವಾರಸ್ಯಕರ ಚರ್ಚೆಯನ್ನು ನಡೆಸುತ್ತಿದ್ದಾರೆ. ಡಾ. ನಾ. ಮೊಗಸಾಲೆ, ಚಿತ್ರಲೇಖಾ ಶಶೀಂದ್ರನ್, ಲಕ್ಷ್ಮಣ ಕೌಂಟೆ, ವಿಠಲ ಶೆಣೈ, ರಮೇಶ್ ಶೆಟ್ಟಿಗಾರ, ಮನೋಹರ ಪೈ, ಪಾರ್ವತಿ ಐತಾಳ, ಉಷಾ ನರಸಿಂಹನ್ ಮೊದಲಾದ ಲೇಖಕರು ಸ್ವತಃ ಈ ಚರ್ಚೆಯಲ್ಲಿ
ಭಾಗವಹಿಸುತ್ತಿರುವುದು ಸಾಹಿತ್ಯದ ವಿಚಾರ ವಿನಿಮಯಕ್ಕೆ ಪೂರಕವಾಗಿದೆ. ಗುಂಪಿನ
ಸದಸ್ಯರ ನಡುವೆ ಪುಸ್ತಕಗಳ ವಿನಿಮಯವೂ ನಡೆಯುತ್ತದೆ. ಒಬ್ಬರು ಪರಿಚಯಿಸಿದ ಪುಸ್ತಕವು ಕುತೂಹಲ ಮೂಡಿಸಿ ಅನೇಕರು ಆ ಪುಸ್ತಕವನ್ನು
ಖರೀದಿಸಲು ಪ್ರೇರಣೆ ನೀಡಿದೆ. ಇದರಿಂದ ಲೇಖಕರ ವೈಯಕ್ತಿಕ ಪರಿಚಯವೂ
ಆದದ್ದಿದೆ. ತನ್ಮೂಲಕ ಲೇಖಕರಿಗೂ ಪ್ರೇರಣೆ ದೊರಕಿದಂತಾಗಿದೆ.
ಲೇಖನಗಳನ್ನು ಬರೆದವರಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಪ್ರತಿ ತಿಂಗಳು ಅತ್ಯುತ್ತಮ ಲೇಖನ ಬರೆದವರಿಗೆ ಪುಸ್ತಕಗಳನ್ನೇ ಬಹುಮಾನವಾಗಿ ನೀಡುವ ವಿಶಿಷ್ಟ ಯೋಜನೆ ಇಲ್ಲಿದೆ. ಈ ಬಳಗದ ಸದಸ್ಯರಲ್ಲೇ ಕೆಲವರು ಪ್ರಾಯೋಜಕತ್ವವನ್ನು ವಹಿಸಿಕೊಂಡು ಪ್ರತಿ ವರ್ಷವೂ ನಿಗದಿತ ಮೊತ್ತವನ್ನು ಈ
ಬಳಗಕ್ಕೆ ಪುಸ್ತಕ ಬಹುಮಾನ ನೀಡಲೆಂದು ನೀಡುವವರಿದ್ದಾರೆ. ಸ್ವತಃ ಲೇಖಕರೂ ತಮ್ಮ ಪುಸ್ತಕಗಳನ್ನು ಪ್ರಾಯೋಜಿಸುವ ಅವಕಾಶ ಇಲ್ಲಿದ್ದು ಅನೇಕರು ತಮ್ಮ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ನೀಡಿರುತ್ತಾರೆ. ಅಲ್ಲದೆ, ಅನೇಕ ವಿಶೇಷ ಅಭಿಯಾನಗಳಲ್ಲಿ ನಗದು ಬಹುಮಾನವನ್ನೂ ನೀಡಿ
ಪ್ರೊತ್ಸಾಹಿಸಲಾಗುತ್ತಿದೆ. ಬಹುಮಾನದ ಮೊತ್ತವನ್ನು ವಿಜೇತರಿಗೆ ನೀಡುವ ಜವಾಬ್ದಾರಿಯನ್ನು, ಬಹುಮಾನದ ಪುಸ್ತಕಗಳನ್ನು ವಿಳಾಸ ಬರೆದು ಅಚ್ಚುಕಟ್ಟಾಗಿ ಅಂಚೆ ಮುಖೇನ (ಅಂಚೆ ವೆಚ್ಚವನ್ನು ಸೇರಿಸಿ) ಬರೆಹಗಾರರಿಗೆ ತಲುಪಿಸುವ ಏರ್ಪಾಡನ್ನು ಬಳಗದ ಹಿರಿಯ ನಿರ್ವಾಹಕಿ ವೀಣಾ ನಾಯಕ್ ಅವರು ಮಾಡಿಕೊಂಡು ಬರುತ್ತಿದ್ದಾರೆ.
ಬರೆಹಗಾರರ ಆಸಕ್ತಿ ಮತ್ತು ಅಭಿರುಚಿಯನ್ನು ಗುರುತಿಸಿ ಅಂತಹ ಪುಸ್ತಕವನ್ನೆ ಬಹುಮಾನ ರೂಪದಲ್ಲಿ ಕಳುಹಿಸುವುದು ಅವರ ವೈಶಿಷ್ಟ್ಯವಾಗಿದೆ. ಹಾಗೆ ನೀಡುವ ಪುಸ್ತಕದ ಒಳಪುಟದಲ್ಲಿ ಅಭಿಯಾನದ
ಹೆಸರು ಮತ್ತು ಪ್ರಾಯೋಜಕರ ಮಾಹಿತಿ ಇದ್ದು ಅದೊಂದು ದಾಖಲೆಯಾಗಿ ಸದಾ
ನೆನಪಿನಲ್ಲಿ ಉಳಿಯುವಂತಿದೆ. ಪ್ರತಿಯೊಬ್ಬರು ನೀಡಿದ ಹಣಕ್ಕೆ ಲೆಕ್ಕಾಚಾರ
ಇಡುತ್ತಾರಾದರೂ ಯಾವುದೇ ರೀತಿಯ ಹಣಕಾಸಿನ ಲೆಕ್ಕಾಚಾರದ ಚರ್ಚೆ ಇಲ್ಲಿ
ನಡೆಯುವುದಿಲ್ಲ. ಕಡಿಮೆಯಾದ ಮೊತ್ತವನ್ನು ಅಡ್ಮಿನ್ ಅವರೇ ಭರಿಸುವುದೂ ಇದೆ.
ಲೇಖನಗಳನ್ನು ಬರೆದವರೆಲ್ಲರಿಗೂ ಪುಸ್ತಕ ಬಹುಮಾನ ನೀಡುವ ಪತ್ರವನ್ನು ಕೂಡ ನೀಡಲಾಗುತ್ತಿದೆ. ಅಭಿನಂದನಾ ಪತ್ರವು ಅಭಿಯಾನದ ಹೆಸರು, ಪ್ರಾಯೋಜಕರ ಮತ್ತು ಬಹುಮಾನ ವಿಜೇತರ ಭಾವಚಿತ್ರವನ್ನು ಒಳಗೊಂಡ ದಾಖಲೆಯಾಗಿ ರೂಪುಗೊಂಡು ಒಳ್ಳೆಯ ನೆನಪಾಗಿ, ಸಂಭ್ರಮವನ್ನು
ಹೆಚ್ಚಿಸುವಂತಿದೆ.
ಕನ್ನಡ ಪುಸ್ತಕಗಳ ಓದು ಮತ್ತು ಬರೆವಣಿಗೆಗೆ ಪ್ರೇರಣೆ ಮತ್ತು ಪ್ರೋತ್ಸಾಹ ಕೊಡುವುದು ಈ ಅಭಿಯಾನಗಳ ಉದ್ದೇಶವಾಗಿದ್ದು ಅನೇಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬರೆವಣಿಗೆಯ ಕೌಶಲವನ್ನು ಪಡೆಯುತ್ತಿರುವುದು ಈ ಬಳಗದ ಸಾಧನೆಯಾಗಿದೆ. ಗುಂಪಿನ ಸದಸ್ಯರೇ
ಪರಸ್ಪರ ಸಹಕಾರವನ್ನು ನೀಡುವ ಮೂಲಕ ಮುನ್ನಡೆಯುತ್ತಿರುವ ಈ ಫೇಸ್
ಬುಕ್ ಬಳಗವು ಸಾಮಾಜಿಕ ಜಾಲತಾಣವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು
ಎಂಬುದಕ್ಕೆ ಸಾಕ್ಷಿಯಾಗಿದೆ.
ಫೇಸ್ ಬುಕ್ ಎಂಬುದು ಇಲ್ಲಿ ಬುಕ್ ಫೇಸ್ ಆಗಿದೆ. ಬಹಳಷ್ಟು ಜನ ಮಹಿಳೆಯರು ಓದಿ
ಬರೆಯುತ್ತಿದ್ದಾರೆ. ಯುವ ತಲೆಮಾರಿಗೆ ಪುಸ್ತಕ ಓದುವ ಹವ್ಯಾಸವನ್ನು ದಾಟಿಸುವ, ಓದಿದ್ದನ್ನು ಬರೆಯುವ ಕೌಶಲ ಬೆಳೆಸುವ ನಿಟ್ಟಿನಲ್ಲಿ ಈ ಪುಸ್ತಕ ಅವಲೋಕನ ಬಳಗವು ಕೊಡುಗೆಯನ್ನು ನೀಡುತ್ತಿದೆ. ಯಾವುದೇ ಹೊಗಳಿಕೆ, ಪ್ರತಿಫಲದ ನಿರೀಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಕನ್ನಡದ ಸೇವೆಯನ್ನು
ಮಾಡುತ್ತಿರುವ ಪುಸ್ತಕ ಅವಲೋಕನ ಬಳಗದ ಎಲ್ಲ ನಿರ್ವಾಹಕರಿಗೆ ಅಭಿನಂದನೆಗಳು. ಸಹಕರಿಸುತ್ತಿರುವ ಸದಸ್ಯರಿಗೆ ಶುಭಾಶಯಗಳು. ಈ ಬಳಗ ಇನ್ನಷ್ಟು ಚೈತನ್ಯಪೂರ್ಣವಾಗಿ, ಲವಲವಿಕೆಯಿಂದ ಮುಂದುವರಿಯಲಿ.
ಡಾ. ಗೀತಾ ಕುಮಾರಿ ಟಿ.
ಕನ್ನಡ ಸಹಾಯಕ ಪ್ರಾಧ್ಯಾಪಕಿ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ),
ಪುತ್ತೂರು
ಬಿಗ್ ನ್ಯೂಸ್
Shashikumar Bhat-ಶಶಿಕುಮಾರ್ ಭಟ್ ಪಡಾರು ಅವರಿಗೆ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿ
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕಾಳುಮೆಣಸು, ಅಡಿಕೆ ಹಾಗೂ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಗೋವಾ ರಾಜ್ಯ
ತೋಟಗಾರಿಕೆ ನಿಗಮ ಹಾಗೂ ಕನ್ನಡ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ಗೋವಾ – ಕರ್ನಾಟಕ ಸಂಸ್ಥೆ ಕೊಡಮಾಡುವ ಗಡಿನಾಡ ಕನ್ನಡಿಗ ಕೃಷಿ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪುತ್ತೂರು ಕೇಂದ್ರಿತವಾಗಿ ಹಲವು ಕೃಷಿ ಸಂಬಂಧಿ ಸಮಾವೇಶಗಳನ್ನೂ ಆಯೋಜಿಸುತ್ತಿರುವ ಶಶಿಕುಮಾರ್ ಭಟ್ಪ ಡಾರು ಅವರು ಕೃಷಿ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ, ತರಬೇತಿ, ಸಲಹೆ – ಮಾರ್ಗದರ್ಶನಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಕೊಡಮಾಡಕಲಾಗುತ್ತಿದೆ. ಪ್ರಶಸ್ತಿ ಪ್ರದಾನ
ಸಮಾರಂಭ ನವೆಂಬರ್ 22ರಂದು ವಾಸ್ಕೋ ಗೋವಾದ ಬೈನಾದಲ್ಲಿನ ರವೀಂದ್ರ ಭವನದಲ್ಲಿ ನಡೆಯಲಿದೆ.
ಶಶಿಕುಮಾರ್ ಭಟ್ ಪಡಾರು ಅವರ ಸಾಧನೆಯ ಹಾದಿ:
ಕರಾವಳಿಯ ಜೀವನಾಡಿಯಾದ ಅಡಿಕೆ ಕೃಷಿ ಇಂದು ಹಳದಿ ಎಲೆ ರೋಗ, ಮಾರುಕಟ್ಟೆ ಅಸ್ಥಿರತೆ, ಹವಾಮಾನ ವೈಪರೀತ್ಯ, ಕೂಲಿ ಸಮಸ್ಯೆ ಮೊದಲಾದ ನಾನಾ ಸಂಕಷ್ಟಗಳಿಂದ ನಲುಗಿ ಹೋಗುತ್ತಿರುವ ಈ ಆಧುನಿಕ ದಿನಮಾನಗಳಲ್ಲಿ, ಕೃಷಿಕರಿಗೆ ಹೊಸ ದಾರಿ, ಹೊಸ ಸಾಧ್ಯತೆಯ ಬೆಳಕನ್ನು ತೋರಿಸಿದ ದೀಪಸ್ತಂಭ ಶಶಿಕುಮಾರ ಭಟ್ ಪಡಾರು.
ಕಾಳುಮೆಣಸಿನ ಕ್ರಾಂತಿಯ ಹರಿಕಾರ:
ಅಡಿಕೆಯೊಂದಿಗೆ ಕಾಳುಮೆಣಸು ಬೆಳೆದರೆ ರೈತನ ಆದಾಯ ದ್ವಿಗುಣವಾಗುತ್ತದೆ ಎಂಬ ಸತ್ಯವನ್ನು ಮನಗಂಡು, ಅದನ್ನು ಕೇವಲ ತಮ್ಮ ತೋಟಕ್ಕೆ ಸೀಮಿತಗೊಳಿಸದೆ ಸಾವಿರಾರು ರೈತರಿಗೆ
ಮನದಟ್ಟು ಮಾಡಿದವರು. ಕಾಳುಮೆಣಸು ಕೃಷಿಯ ಬಗ್ಗೆ ಮಾಹಿತಿ ವಿನಿಮಯಕ್ಕಾಗಿ ವಾಟ್ಸಾಪ್ ತಂಡಗಳನ್ನು ರಚಿಸಿ, ಸಾವಿರಾರು ಮಂದಿಯನ್ನು ಒಗ್ಗೂಡಿಸಿ, ಪ್ರತಿನಿತ್ಯ ತಳಿ ಆಯ್ಕೆ, ನಾಟಿ ವಿಧಾನ,
ರೋಗ ನಿರ್ವಹಣೆ, ಇಳುವರಿ ಹೆಚ್ಚಳದ ಬಗ್ಗೆ ಚರ್ಚಿಸಿ, ಅವರಲ್ಲಿ ಕಾಳುಮೆಣಸಿನ ಬಗೆಗೆ ಆಸಕ್ತಿ ಹಚ್ಚಿಸಿದ ಅಪರೂಪದ ಸಂಘಟಕರು. ಇಂದು ಕರಾವಳಿಯ ಸಾವಿರಾರು ಯುವ ರೈತರು ಅವರ ವಾಟ್ಸಾಪ್ ತಂಡಗಳಿಂದಲೇ ಕೃಷಿಗೆ ಮರಳಿದ್ದಾರೆ.
ಮನೆ ಬಾಗಿಲಿಗೆ ಕೃಷಿ ಸೇವೆ – ಕೇವಲ ಮಾರಾಟವಲ್ಲ ಬದ್ಧತೆ:
ಕೇವಲ ಪ್ರೇರಣೆ ನೀಡುವುದಕ್ಕೆ ಸೀಮಿತವಾಗದೆ, ಆಸಕ್ತ ಕೃಷಿಕರ ಮನೆ ಬಾಗಿಲಿಗೇ ಗುಣಮಟ್ಟದ, ರೋಗ ನಿರೋಧಕ ಶಕ್ತಿಯುಳ್ಳ ಕಾಳುಮೆಣಸಿನ ಗಿಡಗಳನ್ನು ತಲುಪಿಸುವುದು, ನಂತರ ತಜ್ಞರ ಮೂಲಕ ಬೆಳೆಸುವ ವೈಜ್ಞಾನಿಕ ವಿಧಾನವನ್ನು ತಿಳಿಸಿಕೊಡುವುದು ಮತ್ತು ಫಸಲು ಬರುವವರೆಗೂ ದೀರ್ಘಕಾಲಿಕ ಮಾರ್ಗದರ್ಶನ ನೀಡುವುದರ ಮೂಲಕ ಹೊಸಬರೂ ಧೈರ್ಯದಿಂದ ಕೃಷಿಗಿಳಿಯುವಂತೆ ಮಾಡಿದ್ದಾರೆ. ರೈತರು ಗಿಡಗಳಿಗೆ ಉಂಟಾದ ತೊಂದರೆಗೆ ಸಂಬಂಧಿಸಿದಂತೆ ಫೋಟೋ ಕಳುಹಿಸಿದರೆ ತಕ್ಷಣ ಪರಿಹಾರ ಸೂಚಿಸುವ ಅವರ ಕಾಳಜಿ ಅನನ್ಯ.
ದಾಖಲೆಯ ಸಾಧನೆ – ಮೂವತ್ತು ಲಕ್ಷದತ್ತ ಪಯಣ:
ಕಳೆದ ಬೆರಳೆಣಿಕೆಯ ವರ್ಷಗಳಲ್ಲಿ ಸರಿಸುಮಾರು ಇದುವರೆಗೆ ಮೂವತ್ತು ಲಕ್ಷಕ್ಕಿಂತಲೂ ಅಧಿಕ ಕಾಳುಮೆಣಸಿನ ಗಿಡಗಳನ್ನು ಕೃಷಿಕರ ತೋಟಗಳಿಗೆ ತಲುಪಿಸುವ ಮೂಲಕ ಕರಾವಳಿ
ಜಿಲ್ಲೆಗಳಲ್ಲಿ ಕಾಳುಮೆಣಸಿನ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಇದು ಕೇವಲ ಸಂಖ್ಯೆಯಲ್ಲ, ಕರಾವಳಿಯ ಕೃಷಿ ಭೂಪಟವನ್ನೇ ಬದಲಾಯಿಸಿದ ಸಾಧನೆ.
ಅಡಿಕೆಯೊಂದಿಗೆ ಸಮಗ್ರ ಸಹಬೆಳೆಗಳ ಕನಸು:
ಕಾಳುಮೆಣಸಿಗೆ ಮಾತ್ರ ಸೀಮಿತವಾಗದೆ, ಇವರು ಅಡಿಕೆಯ ಸಹಬೆಳೆಗಳಾಗಿ ಕಾಫಿ, ಏಲಕ್ಕಿ ಬೆಳೆಯುವುದಕ್ಕೂ ರೈತರನ್ನು ದೊಡ್ಡ ಮಟ್ಟದಲ್ಲಿ ಪ್ರೋತ್ಸಾಹಿಸುತ್ತಿದ್ದಾರೆ. ಅಡಿಕೆ ತೋಟದಲ್ಲಿ ಖಾಲಿ
ಇರುವ ಜಾಗದಲ್ಲಿ ಕಾಫಿ ಮತ್ತು ಏಲಕ್ಕಿ ಬೆಳೆದು ಹೆಚ್ಚುವರಿ ಆದಾಯ ಗಳಿಸುವ ವೈಜ್ಞಾನಿಕ ಮಾದರಿಯನ್ನು ಪರಿಚಯಿಸಿದ್ದಾರೆ. ಅದಕ್ಕಾಗಿ ಗುಣಮಟ್ಟದ ಕಾಫಿ ಮತ್ತು ಏಲಕ್ಕಿ ಗಿಡಗಳನ್ನೂ ರೈತರಿಗೆ
ಒದಗಿಸುತ್ತಿದ್ದಾರೆ.
ಸಮಗ್ರ ತೋಟಗಾರಿಕಾ ಸೇವೆ:
ಇದೀಗ ಸಮಾನ ಮನಸ್ಕ ಸ್ನೇಹಿತರನ್ನು ಕೂಡಿಕೊಂಡು, ಗುಣಮಟ್ಟದ ಕಾಫಿ, ಅಡಿಕೆ, ತೆಂಗು, ಅತ್ಯಧಿಕ ಇಳುವರಿಯ ಲಿಂಬೆ, ಏಪಲ್, ಏಲಕ್ಕಿ ಮುಂತಾದ ತೋಟಗಾರಿಕಾ ಬೆಳೆಗಳ ಗಿಡಗಳನ್ನು
ಒದಗಿಸುವ ಮಹತ್ಕಾರ್ಯದಲ್ಲೂ ನಿರತರಾಗಿದ್ದಾರೆ. ರೈತನಿಗೆ ಬೇಕಾದ ಎಲ್ಲಾ ಗಿಡಗಳು – ಮಾಹಿತಿಗಳನ್ನು ಒಂದೇ ಸೂರಿನಡಿ, ಒಂದೇ ವಿಶ್ವಾಸಾರ್ಹ ಮೂಲದಲ್ಲಿ ಸಿಗುವಂತಹ ವ್ಯವಸ್ಥೆಯನ್ನು
ಕಟ್ಟಿದ್ದಾರೆ.
ಶಿಕ್ಷಣ
Ambika-ನ.21 : ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಭಗವದ್ಗೀತಾ ಪ್ರವಚನ
ಹಿರಿಯ ಚಿಂತಕ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ನವೆಂಬರ್ 21ರಂದು ಭಗವದ್ಗೀತಾ ಪ್ರವಚನ ನಡೆಯಲಿದೆ.
ಪುತ್ತೂರು: ಹಿರಿಯ ಚಿಂತಕ ವಿದ್ವಾನ್ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ನವೆಂಬರ್ 21ರಂದು ಭಗವದ್ಗೀತಾ ಪ್ರವಚನ ನಡೆಯಲಿದೆ.
ಪ್ರವಚನ ಸಂಜೆ 4ರಿಂದ 5ರವರೆಗೆ ನಡೆಯಲಿದೆ. ಈ ಕಾರ್ಯಕ್ರಮ ನವೆಂಬರ್ 7ರಂದು ಆರಂಭಗೊಂಡಿದ್ದು, ಪ್ರತಿ ಮೊದಲನೆಯ ಹಾಗೂ ಮೂರನೇ ಶನಿವಾರಗಳಂದು ನಡೆಯುತ್ತಿವೆ.
-
ಬಿಗ್ ನ್ಯೂಸ್18 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಅಂತರ ರಾಜ್ಯ24 hours agoToll Plaza-ವಾಹನ ಸವಾರರೇ ಗಮನಿಸಿ; ಇನ್ಮುಂದೆ ಟೋಲ್ನಲ್ಲೇ ವಾಹನ ವಿಮೆ ಪರಿಶೀಲನೆ: ಅವಧಿ ಮುಗಿದಿದ್ದರೆ ಮೊಬೈಲ್ಗೆ SMS, 10 ಸಾವಿರ ರೂ.ವರೆಗೆ ದಂಡ..!
-
ಆರೋಗ್ಯ20 hours agoPuttur-ಪುತ್ತೂರು: ಸಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಖನಿಜ ಸಾಂದ್ರತೆ (BMD) ಚಿಕಿತ್ಸಾ ಶಿಬಿರ
-
ಶಿಕ್ಷಣ3 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಬಿಗ್ ನ್ಯೂಸ್24 hours agoPuttur-ಎಸ್ಡಿಪಿಐ ನಿರಂತರ ಪ್ರಯತ್ನ: ಪುತ್ತೂರಿನ ಅಲ್ಪಸಂಖ್ಯಾತರ ಸೇವಾ ಕೇಂದ್ರ ಪುನರಾರಂಭ
-
ಅಪರಾಧ2 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಸ್ಥಳೀಯ2 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
Uncategorized4 hours ago
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ















