ಉಡುಪಿ
High Court-ಅಮಾಯಕ ರಿಕ್ಷಾ ಚಾಲಕನನ್ನು ನಂಬಿಸಿ ಕೆಂಪುಕಲ್ಲು ಕಳವು ಕೇಸ್ ದಾಖಲಿಸಿದ ಗಂಗೊಳ್ಳಿ ಪೊಲೀಸರು..! ಶೀನ ಪೂಜಾರಿ ಆರೋಪ ಮುಕ್ತ ಮಾಡಿದ ಹೈಕೋರ್ಟ್- ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ – ಡಾ. ರವೀಂದ್ರನಾಥ್ ಶ್ಯಾನುಭಾಗ್
ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಆರೋಪದಡಿ ಅಮಾಯಕ ರಿಕ್ಷಾ ಚಾಲಕನನ್ನು ಆರೋಪಿಯನ್ನಾಗಿ ಮಾಡಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ. ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಉಡುಪಿ, ಸೆ. 8: ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಆರೋಪದಡಿ ಅಮಾಯಕ ರಿಕ್ಷಾ ಚಾಲಕನನ್ನು ಆರೋಪಿಯನ್ನಾಗಿ ಮಾಡಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ ಎಂದು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ. ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದ ಅವರು, ಕುಂದಾಪುರ ತಾಲೂಕಿನ ಆಲೂರು ಗ್ರಾಮದ 55 ವರ್ಷದ ಶೀನ ಪೂಜಾರಿ ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದು, ಯಾವುದೇ ತಪ್ಪು ಮಾಡದಿದ್ದರೂ ಪ್ರಕರಣದಲ್ಲಿ ಎರಡನೇ ಆರೋಪಿಯನ್ನಾಗಿ ಮಾಡಲಾಗಿತ್ತು ಎಂದು ಆರೋಪಿಸಿದರು.
ಶೀನ ಪೂಜಾರಿ ಅವರ ಪತ್ನಿ ಎಂಡೋಸಲ್ಫಾನ್ ಪೀಡಿತರಾಗಿದ್ದು, ಇಬ್ಬರು ಪುತ್ರರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ನಿರ್ವಹಿಸಲು ಅವರು ರಿಕ್ಷಾ ಚಲಾಯಿಸಿ ಜೀವನ ಸಾಗಿಸುತ್ತಿದ್ದಾರೆ ಎಂದು ಶ್ಯಾನುಭಾಗ್ ತಿಳಿಸಿದರು.
ಪರಿಚಯದ ವ್ಯಕ್ತಿಯೊಂದಿಗೆ ಠಾಣೆಗೆ ತೆರಳಿದ್ದೇ ಮುಳುವಾಯಿತೇ?
2025ರ ಆಗಸ್ಟ್ 24ರಂದು ಪರಿಚಯದ ಉದಯ ಶೆಟ್ಟಿ ಎಂಬವರು ಗಂಗೊಳ್ಳಿಗೆ ತೆರಳಲು ಶೀನ ಪೂಜಾರಿ ಅವರ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದರು. ಉದಯ ಶೆಟ್ಟಿ ಅವರನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಕರೆದೊಯ್ದ ಶೀನ ಪೂಜಾರಿ, ರಿಕ್ಷಾವನ್ನು ಠಾಣೆಯ ಹೊರಗೆ ನಿಲ್ಲಿಸಿ ಅವರಿಗಾಗಿ ಕಾಯುತ್ತಿದ್ದರು.
ಸುಮಾರು ಅರ್ಧಗಂಟೆಯ ಬಳಿಕ ಪೊಲೀಸ್ ಸಿಬ್ಬಂದಿಯೊಬ್ಬರು ಶೀನ ಪೂಜಾರಿ ಅವರನ್ನು ಠಾಣೆಯೊಳಗೆ ಕರೆಸಿಕೊಂಡಿದ್ದರು. ಅಲ್ಲಿ ಉದಯ ಶೆಟ್ಟಿ ಅವರ ಪರಿಚಯವಿದೆಯೇ ಎಂದು ಪೊಲೀಸರು ಪ್ರಶ್ನಿಸಿದ್ದು, ಹೌದು ಎಂದು ತಿಳಿಸಿದ ಬಳಿಕ ದಾಖಲೆಯೊಂದಕ್ಕೆ ಸಹಿ ಮಾಡುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಓದಲು ಮತ್ತು ಬರೆಯಲು ಬಾರದ ಕಾರಣ ಸಹಿ ಮಾಡುವ ಅಗತ್ಯವೇನು ಎಂದು ಶೀನ ಪೂಜಾರಿ ಪ್ರಶ್ನಿಸಿದಾಗ, ಅದು ಕೇವಲ ಔಪಚಾರಿಕ ಪ್ರಕ್ರಿಯೆ, ಯಾವುದೇ ತೊಂದರೆಯಾಗುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದರು ಎನ್ನಲಾಗಿದೆ. ಇದನ್ನು ನಂಬಿ ಅವರು ದಾಖಲೆಗೆ ಸಹಿ ಮಾಡಿದ್ದು, ಬಳಿಕ ಆಧಾರ್ ಕಾರ್ಡ್ ಪ್ರತಿಯನ್ನೂ ನೀಡಿದ್ದರು ಎಂದು ಶ್ಯಾನುಭಾಗ್ ತಿಳಿಸಿದ್ದಾರೆ.
ಎರಡು ತಿಂಗಳ ಬಳಿಕ ಬಂದ ಸಮನ್ಸ್
ಇದಾದ ಸುಮಾರು ಎರಡು ತಿಂಗಳ ಬಳಿಕ ಶೀನ ಪೂಜಾರಿ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ಬಂದಿತ್ತು. ಅದನ್ನು ಪರಿಚಯಸ್ಥರ ಮೂಲಕ ಓದಿಸಿದಾಗ, ಸರ್ಕಾರಿ ಜಮೀನಿನಲ್ಲಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಉದಯ ಶೆಟ್ಟಿ ಅವರನ್ನು ಮೊದಲ ಆರೋಪಿಯಾಗಿ ಹಾಗೂ ಶೀನ ಪೂಜಾರಿ ಅವರನ್ನು ಎರಡನೇ ಆರೋಪಿಯಾಗಿ ದಾಖಲಿಸಿರುವುದು ತಿಳಿದುಬಂದಿತ್ತು.
ತಾನು ಯಾವುದೇ ಕಲ್ಲುಕೋರೆ ನಡೆಸಿಲ್ಲ ಅಥವಾ ಕಲ್ಲು ಕಳವು ಮಾಡಿಲ್ಲ ಎಂದು ತಿಳಿದಿದ್ದ ಶೀನ ಪೂಜಾರಿ, ಪ್ರಕರಣದಿಂದಾಗಿ ಆತಂಕಕ್ಕೊಳಗಾಗಿದ್ದರು. ಬಳಿಕ ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ಪ್ರಶ್ನಿಸಿದಾಗ, ಸಣ್ಣ ಪ್ರಕರಣವಾಗಿದ್ದು ನ್ಯಾಯಾಲಯ ವಿಧಿಸುವ ದಂಡ ಪಾವತಿಸಿ ಮುಗಿಸಿಕೊಳ್ಳುವಂತೆ ಸಲಹೆ ನೀಡಲಾಗಿತ್ತು ಎಂದು ಶ್ಯಾನುಭಾಗ್ ಆರೋಪಿಸಿದ್ದಾರೆ.
ಆದರೆ ತಾನು ಮಾಡದ ತಪ್ಪನ್ನು ಒಪ್ಪಿಕೊಂಡು ಕಳ್ಳತನದ ಆರೋಪ ಹೊರುವುದಕ್ಕೆ ಶೀನ ಪೂಜಾರಿ ನಿರಾಕರಿಸಿದ್ದರು. ಪ್ರಕರಣದಿಂದ ಹೊರಬರುವ ಮಾರ್ಗ ಕಾಣದೆ ಆತಂಕಕ್ಕೊಳಗಾದ ಅವರು ಕೊನೆಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ನೆರವು ಪಡೆದಿದ್ದರು.
ಹೈಕೋರ್ಟ್‌ನಲ್ಲಿ ಕಾನೂನು ಹೋರಾಟ
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಅಧಿಕೃತ ಪ್ರತಿಗಳನ್ನು ಪಡೆದುಕೊಂಡ ಬಳಿಕ ಪ್ರತಿಷ್ಠಾನವು ಶೀನ ಪೂಜಾರಿ ಪರವಾಗಿ ಕಾನೂನು ಹೋರಾಟಕ್ಕೆ ಮುಂದಾಯಿತು. ಪ್ರತಿಷ್ಠಾನದ ಪರ ವಕೀಲ ಎನ್. ವಿವೇಕಾನಂದ ಅವರ ಮೂಲಕ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದಿಂದ ಶೀನ ಪೂಜಾರಿ ಅವರನ್ನು ಮುಕ್ತಗೊಳಿಸುವಂತೆ ಮನವಿ ಮಾಡಲಾಯಿತು.
ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆ ನಡೆದ ಸಂದರ್ಭದಲ್ಲಿ, ಶೀನ ಪೂಜಾರಿ ವಿರುದ್ಧದ ಆರೋಪಗಳಿಗೆ ಆಧಾರವೇನು ಎಂಬುದನ್ನು ತಿಳಿಸುವಂತೆ ಗಂಗೊಳ್ಳಿ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. ಪೊಲೀಸರಿಗೆ ಹಲವು ಬಾರಿ ಅವಕಾಶ ನೀಡಿದರೂ ಯಾವುದೇ ಸಮರ್ಪಕ ಉತ್ತರ ನೀಡಲಾಗಿಲ್ಲ ಎಂದು ಶ್ಯಾನುಭಾಗ್ ತಿಳಿಸಿದ್ದಾರೆ.
ಕೊನೆಗೆ ಆಗಸ್ಟ್ 6ರಂದು ಆದೇಶ ನೀಡಿದ ಹೈಕೋರ್ಟ್, ಶೀನ ಪೂಜಾರಿ ಅವರನ್ನು ಕುಂದಾಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ದೋಷಾರೋಪಣೆಯಿಂದ ಹೊರಗಿಡುವಂತೆ ಸೂಚಿಸಿದೆ. ಇದರಿಂದ ಅವರ ವಿರುದ್ಧದ ಆರೋಪದಿಂದ ಅವರು ಮುಕ್ತರಾಗಿದ್ದಾರೆ ಎಂದು ಶ್ಯಾನುಭಾಗ್ ವಿವರಿಸಿದರು.
ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಿದ್ಧ
ಶೀನ ಪೂಜಾರಿ ವಿರುದ್ಧದ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ಹೈಕೋರ್ಟ್ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ, ಶೀನ ಪೂಜಾರಿ ಮತ್ತು ಅವರ ಕುಟುಂಬ ಸಮ್ಮತಿಸಿದರೆ ಗಂಗೊಳ್ಳಿ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಪ್ರತಿಷ್ಠಾನ ಸಿದ್ಧವಿದೆ ಎಂದು ಡಾ. ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಪ್ರಕರಣದ ಕಾನೂನು ವೆಚ್ಚವನ್ನು ಪ್ರತಿಷ್ಠಾನವೇ ಭರಿಸಿ, ಪೊಲೀಸರ ವಿರುದ್ಧ ಸೂಕ್ತ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
ಉಡುಪಿ
Manipal-ಮಣಿಪಾಲ: ಕೆಎಂಸಿ ಆಸ್ಪತೆಯ 4ನೇ ಮಹಡಿಯಿಂದ ಬಿದ್ದ ವ್ಯಕ್ತಿಗೆ ಗಂಭೀರ ಗಾಯ
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ. ಗಾಯಗೊಂಡವರನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ರಾಜೇಶ್ ಆರ್. ಶೆಟ್ಟಿ ಎಂದು ಗುರುತಿಸಲಾಗಿದೆ.
ಉಡುಪಿ, ಸೆ.30: ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಗಾಯಗೊಂಡವರನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ರಾಜೇಶ್ ಆರ್. ಶೆಟ್ಟಿ ಎಂದು ಗುರುತಿಸಲಾಗಿದೆ.
ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಕೆಲವು ದಿನಗಳ ಹಿಂದೆ ರಾಜೇಶ್ ವಿಷ ಸೇವಿಸಿದ್ದರು ಎನ್ನಲಾಗಿದ್ದು, ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಡಿಸ್‌ಚಾರ್ಜ್‌ಗೆ ಸಿದ್ಧತೆ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಬುಧವಾರ ಆಸ್ಪತ್ರೆ ಸಿಬ್ಬಂದಿಯೊಂದಿಗೆ ವಾಕಿಂಗ್‌ಗೆ ತೆರಳುವುದಾಗಿ ಹೇಳಿ ಕೊಠಡಿಯಿಂದ ರಾಜೇಶ್ ಹೊರಬಂದಿದ್ದರು. ಬಳಿಕ ಕಿಟಕಿಯ ಬಳಿ ತೆರಳಿ ಗ್ರಿಲ್ ಮೂಲಕ ಕೆಳಗೆ ಇಳಿಯಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಜಾಲರಿಯನ್ನು ಹರಿದು ಕೆಳಗೆ ಇಳಿಯುತ್ತಿದ್ದಾಗ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ
Clarification-ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿ ಹತ್ಯೆ? ಪೊಲೀಸರಿಂದ ಮಹತ್ವದ ಸ್ಪಷ್ಟನೆ
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮ ಸೇರಿದಂತೆ ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಉಡುಪಿ ಜಿಲ್ಲಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಉಡುಪಿ: ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಹತ್ಯೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮ ಸೇರಿದಂತೆ ಕೆಲವು ಸ್ಥಳೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಉಡುಪಿ ಜಿಲ್ಲಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಉಡುಪಿ ಮೂಲದ ವ್ಯಕ್ತಿಯೊಬ್ಬರು ಯುಎಇಯ ಶಾರ್ಜಾದಲ್ಲಿ ಹತ್ಯೆಯಾಗಿದ್ದಾರೆ ಎಂಬ ವರದಿಗಳು ಪ್ರಸಾರವಾಗುತ್ತಿವೆ. ಆದರೆ, ಈ ಕುರಿತು ಶಾರ್ಜಾ ಪೊಲೀಸ್ ಇಲಾಖೆ ಅಥವಾ ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿ/ಕಾನ್ಸುಲೇಟ್‌ನಿಂದ ಉಡುಪಿ ಜಿಲ್ಲಾ ಪೊಲೀಸರಿಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಅಥವಾ ದೃಢೀಕರಣ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಲಭ್ಯವಾದಲ್ಲಿ, ಅದನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಸದ್ಯ ಸಾಮಾಜಿಕ ಮಾಧ್ಯಮ ಹಾಗೂ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಶಾರ್ಜಾ ಹತ್ಯೆ ಕುರಿತ ಸುದ್ದಿಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ
Murder-ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಕೊಲೆ; ಕಾರಿನಲ್ಲಿ ತುಂಡು ತುಂಡಾದ ಮೃತದೇಹ ಪತ್ತೆ; ಪತ್ನಿ, ಅಪ್ರಾಪ್ತ ಮಗ ನಾಪತ್ತೆ
ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಅಪ್ರಾಪ್ತ ಮಗ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಉಡುಪಿ, ಸೆ.22: ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರು ಕೊಲೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಅಪ್ರಾಪ್ತ ಮಗ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತರನ್ನು ಉಡುಪಿ ಮೂಲದ ಪ್ರಕಾಶ್ ಕುಂದರ್ ಎಂದು ಗುರುತಿಸಲಾಗಿದೆ. ಅವರು ಶಾರ್ಜಾದಲ್ಲಿ ಪತ್ನಿ ಟೀನಾ ಹಾಗೂ ಅಪ್ರಾಪ್ತ ಮಗನೊಂದಿಗೆ ವಾಸಿಸುತ್ತಿದ್ದರು. ಪ್ರಕಾಶ್ ಅವರ ಸಾವಿನ ಬಳಿಕ ಪತ್ನಿ ಹಾಗೂ ಮಗನ ಸಂಪರ್ಕವೂ ಲಭ್ಯವಾಗದಿರುವುದು ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ.
ವರದಿಗಳ ಪ್ರಕಾರ, ಜುಲೈ 20ರ ಸುಮಾರಿಗೆ ಪ್ರಕಾಶ್ ತಮ್ಮ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಅವರು, ಆ ದಿನ ಟೆಕ್ಸ್ಟ್ ಮೆಸೇಜ್ ಕಳುಹಿಸಿದ್ದರು. ಸಹೋದರರು ದೂರವಾಣಿ ಮೂಲಕ ಮಾತನಾಡುವಂತೆ ಒತ್ತಾಯಿಸಿದಾಗ ಸಂಭಾಷಣೆ ಕಡಿತಗೊಂಡಿತ್ತು ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಸಂಬಂಧಿಕರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿ ತಿಳಿಸಿತ್ತು. ಆದರೆ ಪ್ರಕಾಶ್ ತಮ್ಮ ಸ್ವಗ್ರಾಮಕ್ಕೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರಿಗೆ ಅನುಮಾನ ಮೂಡಿದ್ದು, ಶಾರ್ಜಾ ಅಧಿಕಾರಿಗಳನ್ನು ಸಂಪರ್ಕಿಸಿ ನಾಪತ್ತೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಶಾರ್ಜಾ ಪೊಲೀಸರು ತನಿಖೆ ಆರಂಭಿಸಿದ್ದು, ಹುಡುಕಾಟದ ವೇಳೆ ಪ್ರಕಾಶ್ ಅವರದ್ದೇ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅವರನ್ನು ಕೊಲೆ ಮಾಡಲಾಗಿದ್ದು, ಮೃತದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿತ್ತು ಎನ್ನಲಾಗಿದೆ.
ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಮಗ ಪ್ರಸ್ತುತ ಪತ್ತೆಯಾಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಗಮನ ಅವರತ್ತವೂ ಹರಿದಿದೆ. ಕೊಲೆ ಪ್ರಕರಣದಲ್ಲಿ ಟೀನಾ ಅವರ ಪಾತ್ರವಿದೆಯೇ ಅಥವಾ ಬೇರೆ ಕಾರಣಗಳಿಂದ ಅವರು ಮಗನೊಂದಿಗೆ ಶಾರ್ಜಾದಿಂದ ತೆರಳಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಶಾರ್ಜಾದಿಂದ ತೆರಳಿ ಭಾರತಕ್ಕೆ ಬಂದಿರುವ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಪ್ರಕಾಶ್ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಟೀನಾ ಶಿಕ್ಷಕಿಯಾಗಿ ಉದ್ಯೋಗದಲ್ಲಿದ್ದರು. ದಂಪತಿಗೆ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದು, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರನಿದ್ದಾನೆ.
ದಂಪತಿಗಳ ನಡುವೆ ಯಾವುದೇ ಗಂಭೀರ ವೈಮನಸ್ಸು ಅಥವಾ ವಿವಾದವಿದ್ದ ಬಗ್ಗೆ ತಿಳಿದಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪ್ರಕಾಶ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದು ತೆರಳಿದ್ದರು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರ್ಜಾ ಪೊಲೀಸರು ತನಿಖೆ ಮುಂದುವರಿಸಿದ್ದು, ಪ್ರಕಾಶ್ ಅವರ ಪತ್ನಿ ಹಾಗೂ ಮಗನ ಇರುವಿಕೆ ಸೇರಿದಂತೆ ಕೊಲೆಯ ಹಿಂದಿನ ನಿಖರ ಕಾರಣಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ. ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪ್ರಕಾಶ್ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬಸ್ಥರು ಕಾಯುತ್ತಿದ್ದಾರೆ.


















