ಶಿಕ್ಷಣ
Independence Day-ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಸ್ವಾತಂತ್ರ್ಯೋತ್ಸವ; ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಕ್ರಾಂತಿಕಾರಿಗಳಿಂದ : ಶ್ರೀಕಾಂತ ಶೆಟ್ಟಿ ಕಾರ್ಕಳ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಎಂಬತ್ತನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಮಾತನಾಡಿದರು.
ಪುತ್ತೂರು : ನಮ್ಮ ದೇಶದ ಕ್ರಾಂತಿಕಾರಿಗಳ ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಅಡಗಿಸಿಟ್ಟು ಅಹಿಂಸೆಯಿಂದಲೇ ಸ್ವಾತಂತ್ರ್ಯ ದೊರಕಿತು ಎಂಬ ಭಾವನೆಯನ್ನು ದೇಶದಾದ್ಯಂತ ತುಂಬುವ ಪ್ರಯತ್ನಗಳಾಗಿವೆ. ಹಾಗಾಗಿಯೇ ಈ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿ ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಿದ ನಿಜ ಹೋರಾಟಗಾರರ ಬಗೆಗೆ ನಮಗೆ ಏನೇನೂ ತಿಳಿದಿಲ್ಲ ಎಂದು ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶನಿವಾರ ಆಯೋಜಿಸಲಾದ ಎಂಬತ್ತನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಹಿಂಸೆಯಿಂದ ಶತ್ರುಗಳನ್ನು ಒದ್ದೋಡಿಸಬಹುದು ಎಂದಾದರೆ ತ್ರೇತಾಯುಗದಲ್ಲಿ ಶ್ರೀರಾಮನೂ ರಾವಣನ ವಿರುದ್ಧ ಶಸ್ತ್ರ ಎತ್ತಬೇಕಿರಲಿಲ್ಲ. ಕಪಿ ಸೈನ್ಯಕ್ಕೆಲ್ಲಾ ಚರಕಗಳನ್ನು ನೀಡಿ ರಾವಣನನ್ನು ಬಗ್ಗುಬಡಿಯಬಹುದಿತ್ತು. ಅದು ಅಸಾಧ್ಯವಾದ ಕಾರಣದಿಂದಲೇ ಶ್ರೀರಾಮ ಬಿಲ್ಲನ್ನೆತ್ತಿದ. ಹಾಗಾಗಿ ತಮ್ಮ ಭವಿಷ್ಯವನ್ನು ಲೆಕ್ಕಿಸದೆ ದೇಶಕ್ಕಾಗಿ ಸಮರ್ಪಿಸಿಕೊಂಡವರನ್ನು ನೆನೆಯುವ ಕಾರ್ಯಗಳಾಗಬೇಕಿದೆ. ಕ್ರಾಂತಿಕಾರಿಗಳಿಂದಾಗಿ ನಮಗೆ ಸ್ವಾತಂತ್ರ್ಯ ದಕ್ಕಿದೆ ಎಂದರು.
ಬಲಿದಾನ ಮಾಡಿದವರ ನೆನಪಿಗಾಗಿ, ತ್ಯಾಗ ಮಾಡಿದವರ ನೆನಪಿಗಾಗಿ ಸ್ವಾತಂತ್ರ್ಯ ಆಚರಣೆಯನ್ನು ನಡೆಸಬೇಕು ಎಂದರಲ್ಲದೆ ದೇಶದ ಭವಿಷ್ಯವಾದ ಝೆನ್ ಜಿ ಗಳು ಜಂತರ್ ಮಂತರ್ ನಲ್ಲಿ ದೇಶದ್ರೋಹಿ ಘೋಷಣೆ ಕೂಗುವ ಮಟ್ಟಕ್ಕೆ ಬಂದಿರುವುದು ಆತಂಕಕಾರಿಯಾದರೆ ಅದೇ ಝೆನ್ ಜಿಗಳಲ್ಲಿ ಬಹುದೊಡ್ಡ ಸಂಖ್ಯೆ ದೇಶಪ್ರೇಮಿಗಳಾಗಿಯೂ ಇದ್ದಾರೆ ಎಂಬುದು ಸಮಾಧಾನತರುವ ವಿಚಾರ ಎಂದು ನುಡಿದರು.
ಜಗತ್ತಿನ ಉಳಿದೆಲ್ಲಾ ದೇಶಗಳು ಕೇವಲ ನಕ್ಷೆಗಳಾದರೆ ನಮ್ಮ ದೇಶ ಭಾವನೆಗಳನ್ನೊಳಗೊಂಡ ಭಾರತ ಮಾತೆಯಾಗಿ ಕಾಣಿಸಿದೆ. ನಮ್ಮ ಮಾತೆಯನ್ನು ಭಕ್ತಿಯಿಂದ ಆರಾದಧಿಸುವ ವಂದೇ ಮಾತರಂ ಗೀತೆ ಕೆಂಪುಕೋಟೆಯಲ್ಲಿ ಮೊಳಗಲು ನಾವು ಸ್ವಾತಂತ್ರ್ಯ ಬಂದ ನಂತರವೂ ಎಂಬತ್ತು ವರ್ಷ ಕಾಯಬೇಕಾಯಿತು. ವಂದೇ ಮಾತರಂ ಮೊಳಗುವ ಹೊತ್ತಿಗೆ ನಾವೆಲ್ಲಾ ಇರುವುದು ನಮ್ಮ ಪುಣ್ಯ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಿಂಹಸದೃಶರಾಗಿ ತೊಡಗಿಸಿಕೊಂಡು ಬ್ರಿಟಿಷರ ವಿರುದ್ಧ ಸಮರ ಸಾರಿದ್ದರು. ಆ ಮಾದರಿಯನ್ನು ನಮ್ಮ ಮಕ್ಕಳಿಗೆ ನನಪಿಸಿಕೊಡುವ ಕಾರ್ಯ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಝೀ ಕನ್ನಡ ವಾಹಿನಿಯ ಲಿಟ್ಲ್ ಚಾಂಪಿಯನ್ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಮನ್ನಣೆ ಗಳಿಸಿದ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿ ಸನ್ಮಯ್ ಹಾಗೂ ಹೆತ್ತವರನ್ನು ಸನ್ಮಾನಿಸಲಾಯಿತು. ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಸದಸ್ಯರಾದ, ವಿಶ್ರಾಂತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸುರೇಶ್ ಶೆಟ್ಟಿ ಕೆ., ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸ್ವಾತಿ ಜೆ. ರೈ, ಅಂಬಿಕಾ ಸಂಸ್ಥೆಗಳ ಪ್ರಾಚಾರ್ಯರು, ಬೋಧಕ – ಬೋಧಕೇತರ ವೃಂದದವರು , ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಳಾದ ಸನ್ಮಯ್ ಪ್ರಾರ್ಥಿಸಿ, ಶ್ರೇಯಾ ಎಂ.ಎಸ್. ಸ್ವಾಗತಿಸಿದರು. ವಿದ್ಯಾರ್ಥಿನಿ ಲಾವಣ್ಯ ಎಸ್.ಬಿ.ಅತಿಥಿ ಪರಿಚಯ ನಡೆಸಿದರೆ ವಿದ್ಯಾರ್ಥಿ ತನುಷ್ ವಂದಿಸಿದರು. ಉಪನ್ಯಾಸಕಿಯರಾದ ಚೈತ್ರಾ ಹಾಗೂ ಜಯಂತಿ ಹೊನ್ನಮ್ಮ ಮತ್ತು ಶಿಕ್ಷಕಿಯರಾದ ವಿದ್ಯಾ ಸರಸ್ವತಿ ಹಾಗೂ ಅನುಪಮ ಸ್ವಾತಂತ್ರ್ಯೋತ್ಸವ ಸ್ಪರ್ಧೆಗಳಲ್ಲಿ ವಿಜೇತರಾದವರ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿಯರಾದ ಅಙ್ಯಾ ವಿ.ಕೆ., ಸಿಂಚನಾ ಎ ನಿರೂಪಿಸಿದರು. ವಿದ್ಯಾರ್ಥಿನಿ ಶ್ರೀಧರ್ಯ ಸನ್ಮಾನಿತರನ್ನು ಪರಿಚಯಿಸಿದರು.
ಧ್ವಜಾರೋಹಣ ಹಾಗೂ ಮೆರವಣಿಗೆ : ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಬೆಳಗ್ಗೆ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆ ಕ್ಯಾಂಪಸ್ ಗಳಲ್ಲಿ ಧ್ವಜಾರೋಹಣ ನಡೆಸಲಾಯಿತು. ತದನಂತರ ಎರಡೂ ಕ್ಯಾಂಪಸ್ ಗಳಿಂದ ಕಿಲ್ಲೆ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಿ, ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿಯ ಮಂಗಲ್ ಪಾಂಡೆ ಚೌಕದಲ್ಲಿ ನಡೆದ ಸರಕಾರಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜು : 35 ವರ್ಷಗಳ ಬಳಿಕ ಮತ್ತೆ ಒಂದಾದ 1991ರ ಬಿ.ಎಸ್ಸಿ. ಬ್ಯಾಚ್; ನೆನಪು, ನಂಟು ಮತ್ತು ಗುರು-ಗೌರವದ ಭಾವಪೂರ್ಣ ಸಂಗಮ
ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ಯೌವನದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕಾಗಿ ರವಿವಾರ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಸೇರಿ, ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.

ಪುತ್ತೂರು, ಅ.4: ಕಾಲ ಐದು ದಶಕಗಳತ್ತ ಸಾಗಿದರೂ, ಕಾಲೇಜಿನ ಆವರಣದಲ್ಲಿ ಕಳೆದ ಯೌವನದ ದಿನಗಳ ನೆನಪುಗಳು ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅಂತಹ ಸುವರ್ಣ ನೆನಪುಗಳನ್ನು ಮತ್ತೊಮ್ಮೆ ಜೀವಂತಗೊಳಿಸಿದ ಅಪೂರ್ವ ಕ್ಷಣಕ್ಕೆ ಸಂತ ಫಿಲೋಮಿನಾ ಕಾಲೇಜು ಸಾಕ್ಷಿಯಾಯಿತು. 1991ರ ಬಿ.ಎಸ್ಸಿ. ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು 35 ವರ್ಷಗಳ ಬಳಿಕ ತಮ್ಮ ಎರಡನೇ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮಕ್ಕಾಗಿ ರವಿವಾರ ಪಿಜಿ ಸೆಮಿನಾರ್ ಹಾಲ್‌ನಲ್ಲಿ ಸೇರಿ, ಹಳೆಯ ಸ್ನೇಹ, ಗೌರವ ಮತ್ತು ಆತ್ಮೀಯತೆಯನ್ನು ಮರುಕಳಿಸಿದರು.
ಅತ್ಯಂತ ಸುಂದರ ಹಾಗೂ ಮನೋಜ್ಞವಾಗಿ ನಡೆದ ಈ ಪುನರ್ಮಿಲನ ಕಾರ್ಯಕ್ರಮದಲ್ಲಿ 1991ರ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾ, ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೃತ್ತಿ ಹಾಗೂ ಸಾಮಾಜಿಕ ಬದುಕಿನಲ್ಲಿ ವಿವಿಧ ಉನ್ನತ ಸ್ಥಾನಗಳನ್ನು ಅಲಂಕರಿಸಿರುವ ಅವರು, ಕಾಲೇಜಿನ ಆವರಣದಲ್ಲಿ ಮತ್ತೆ ವಿದ್ಯಾರ್ಥಿಗಳಂತೆಯೇ ಬೆರೆತು, ತಮ್ಮ ಸುವರ್ಣ ದಿನಗಳನ್ನು ನೆನಪಿಸಿಕೊಂಡರು.

ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ. ಆಂಟನಿ ಪ್ರಕಾಶ್ ಮೊಂತೆರೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡಿ, “ಕಾಲೇಜು ಬದುಕಿತ್ತು; ಬದುಕುತ್ತಿದೆ; ಮುಂದೆಯೂ ಬದುಕಲಿದೆ. ಆದರೆ ಅದಕ್ಕಿಂತ ಮುಖ್ಯವಾದುದು ಪ್ರೀತಿ, ಗೌರವ ಮತ್ತು ಸದ್ಭಾವನೆ. ನಿಮ್ಮಂತಹ ಹಿರಿಯ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸದ್ಭಾವನೆಯಿಂದಲೇ ಕಾಲೇಜು ನಿರಂತರವಾಗಿ ಬೆಳೆಯುತ್ತಿದೆ,” ಎಂದು ಹೇಳಿ, ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅತ್ಯಂತ ಶಿಸ್ತಿನಿಂದ ಹಾಗೂ ಸಮಯಪಾಲನೆಯೊಂದಿಗೆ ಸಂಘಟಿಸಿರುವುದನ್ನು ಶ್ಲಾಘಿಸಿದ ಅವರು, ಅವರ ಶಿಸ್ತು ಮತ್ತು ಸಮಯ ನಿರ್ವಹಣೆಯ ಸೂಕ್ಷ್ಮತೆಯು ಯಾರಿಗಾದರೂ ಮಾದರಿಯಾಗಬಲ್ಲದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಅಭಿವೃದ್ಧಿಗೆ ₹2 ಲಕ್ಷ ಕೊಡುಗೆ- ನೆನಪಿನಿಂದ ನಂಟಿಗೆ, ನಂಟಿನಿಂದ ಕೊಡುಗೆಗೆ
ಪುನರ್ಮಿಲನವು ಕೇವಲ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮವಾಗಿ ಉಳಿಯದೆ, ತಾವು ಕಲಿತ ಸಂಸ್ಥೆಯ ಮೇಲಿನ ಋಣ ತೀರಿಸುವ ಸಾರ್ಥಕ ಸಂದರ್ಭವಾಗಿಯೂ ಪರಿಣಮಿಸಿತು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 1991ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಒಟ್ಟಾಗಿ ₹2 ಲಕ್ಷವನ್ನು ಕಾಲೇಜಿನ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯಾಗಿ ನೀಡಿದರು.ತಾವು ವಿದ್ಯಾಭ್ಯಾಸ ಪಡೆದ ಸಂಸ್ಥೆಯ ಅಭಿವೃದ್ಧಿಗೆ ದಶಕಗಳ ಬಳಿಕವೂ ಕೈಜೋಡಿಸಿದ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆ ಕಾಲೇಜಿನ ಮೇಲಿನ ಅವರ ಪ್ರೀತಿ, ಕೃತಜ್ಞತೆ ಹಾಗೂ ಸದ್ಭಾವನೆಯ ಪ್ರತೀಕವಾಗಿ ಮೂಡಿಬಂತು.
ವೃತ್ತಿ ಸಾಧನೆಗೆ ಗೌರವ
ಹಿರಿಯ ವಿದ್ಯಾರ್ಥಿಗಳ ವೃತ್ತಿಪರ ಸಾಧನೆಗಳನ್ನೂ ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ಡಾ. ಗಿರೀಶ್ ಭಟ್ ಅಜಕ್ಕಳ ಹಾಗೂ ಶ್ರೀ ನವೀನ್ ಕುಮಾರ್ ಅವರನ್ನು ಅವರ ವೃತ್ತಿಪರ ಸಾಧನೆಗಳಿಗಾಗಿ ಗೌರವಿಸಲಾಯಿತು. ವೃತ್ತಿಜೀವನದಲ್ಲಿನ ಸಾಧನೆಗಳು ಹಾಗೂ ಪ್ರಗತಿಯನ್ನು ಗುರುತಿಸಿ ವಿವಿಧ ಗೌರವಗಳನ್ನು ನೀಡಿ ಅಭಿನಂದಿಸಲಾಯಿತು. ರೈಲ್ವೆ ಉದ್ಯೋಗದಲ್ಲಿನ ಪದೋನ್ನತಿಯೂ ಸೇರಿದಂತೆ ವೃತ್ತಿಪರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳ ಯಶಸ್ಸನ್ನು ಕಾರ್ಯಕ್ರಮದಲ್ಲಿ ಮೆಚ್ಚುಗೆಯಿಂದ ಸ್ಮರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಾಣಿ ಹಾಗೂ ಡಾ. ಚಂದ್ರಶೇಖರ್ ಕೆ ಜಿ ಪ್ರಾರ್ಥನೆ ನೆರವೇರಿಸಿದರು. ಡಾ. ಕೃಷ್ಣಪ್ರಭಾ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ್ ಸ್ವಾಗತಿಸಿದರು. ಶಿವನಾಥ ರೈ ಮೆಗಿನಗುತ್ತು ಪ್ರಾಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಆಶಯವನ್ನು ವಿವರಿಸಿದರು.
ಡಾ. ಗಿರೀಶ್ ಭಟ್ ಅಜಕ್ಕಳ ವಂದಿಸಿದರು.
ನೆನಪುಗಳೊಂದಿಗೆ ಮತ್ತೆ ವಿದ್ಯಾರ್ಥಿಗಳಾದ ಹಿರಿಯ ವಿದ್ಯಾರ್ಥಿಗಳು
ಇತ್ತೀಚಿನ ವರ್ಷಗಳಲ್ಲಿ ಕಾಲೇಜಿನ ವಿವಿಧ ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳನ್ನು ಒಗ್ಗೂಡಿಸಿಕೊಂಡು ಕಾಲೇಜಿಗೆ ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ. ಇಂತಹ ಪುನರ್ಮಿಲನಗಳು ಕೇವಲ ಭೇಟಿಗೆ ಸೀಮಿತವಾಗದೆ, ಹಳೆಯ ಸುವರ್ಣ ನೆನಪುಗಳನ್ನು ಮರುಕಳಿಸುವ, ಸ್ನೇಹದ ನಂಟನ್ನು ಗಟ್ಟಿಗೊಳಿಸುವ ಹಾಗೂ ತಾವು ಬೆಳೆದ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಪುನಃ ಜೋಡಿಸುವ ವೇದಿಕೆಗಳಾಗಿವೆ.
ವೃತ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಕಾಲೇಜಿನ ಆವರಣಕ್ಕೆ ಕಾಲಿಟ್ಟ ಕ್ಷಣ ಅವರು ತಮ್ಮ ಹುದ್ದೆ, ಸ್ಥಾನಮಾನಗಳನ್ನು ಮರೆತು ಮತ್ತೆ ತಮ್ಮ ಕಾಲೇಜು ದಿನಗಳ ವಿದ್ಯಾರ್ಥಿಗಳಾಗಿ, ಸ್ನೇಹಿತರಾಗಿ, ಸಹಪಾಠಿಗಳಾಗಿ ಬೆರೆತದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು.
ಒಂದು ಋಣಸ್ಮರಣೆ; ಗುರುಗಳಿಗೆ ಭಾವಪೂರ್ಣ ಗುರುವಂದನೆ
ಪ್ರೊ. ಅಣ್ಣಾಜಿರಾವ್ | ಪ್ರೊ. ಹರಿನಾರಾಯಣ ಮಾಡಾವು | ಪ್ರೊ. ವಿಷ್ಣು ಭಟ್ | ಡಾ. ಎ.ಪಿ. ರಾಧಾಕೃಷ್ಣ | ಡಾ. ಕೃಷ್ಣಕುಮಾರ್ | ಪ್ರೊ. ಗಣೇಶ್ ಭಟ್ | ಪ್ರೊ. ಬಾಲಕೃಷ್ಣ | ಪ್ರೊ. ವಸಂತಿ | ಪ್ರೊ. ಇಟಾ ಡಿಸೋಜಾ
1991ರ ಬಿ.ಎಸ್ಸಿ. ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳು ತಮ್ಮ ಬದುಕಿಗೆ ಜ್ಞಾನ ಮತ್ತು ದಿಕ್ಕು ನೀಡಿದ ಈ ಗುರುಗಳನ್ನು ಏಲಕ್ಕಿ ಹಾರ, ಸರಸ್ವತಿ ವಿಗ್ರಹ, ಶಾಲು ಹಾಗೂ ಹಣ್ಣುಗಳನ್ನು ನೀಡಿ ಗುರುವಂದನೆಯೊಂದಿಗೆ ಸನ್ಮಾನಿಸಿದರು.
ಗುರುವಂದನೆ ಸ್ವೀಕರಿಸಲು ಅನಾರೋಗ್ಯ ಮತ್ತು ವಯೋಸಹಜ ಕಾರಣಗಳಿಗೆ ಸಮಾರಂಭಕ್ಕೆ ಬರಲಾಗದ ಪ್ರೊ. ಲಕ್ಷ್ಮಿನಾರಾಯಣ ಕಡಂಬಳಿತ್ತಾಯ, ಪ್ರೊ.ಕೇಶವ ಭಟ್,ಪ್ರೊ.ಕಾನ್ಸೆಪ್ಟ ಲೋಬೋ, ಪ್ರೊಸಿರಿಲ್ ಮಥಿಯಾಸ್ ಅವರ ನಿವಾಸಗಳಿಗೇ ಹುಡುಕಿಕೊಂಡು ಹೋದ ಹಿರಿಯ ವಿದ್ಯಾರ್ಥಿಗಳು ಅಲ್ಲಿಯೇ ಗುರುವಂದನೆ ಸಲ್ಲಿಸಿ ಕೃತಾರ್ಥರಾದದ್ದು ವಿಶೇಷವಾಗಿತ್ತು.
ಇದು ಕೇವಲ ಸನ್ಮಾನವಾಗಿರದೆ, ತಮ್ಮ ಬದುಕಿಗೆ ಜ್ಞಾನ, ಶಿಸ್ತು, ಮೌಲ್ಯ ಮತ್ತು ದಿಕ್ಕು ನೀಡಿದ ಗುರುಗಳೆಡೆಗೆ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದ ಕೃತಜ್ಞತೆಯ ಸಂಕೇತವಾಗಿತ್ತು. ಕಾಲೇಜು ದಿನಗಳಲ್ಲಿ ಶಿಕ್ಷಕರಿಂದ ಪಡೆದ ಮಾರ್ಗದರ್ಶನವನ್ನು ಹಲವು ದಶಕಗಳ ಬಳಿಕವೂ ಸ್ಮರಿಸಿ ಗೌರವ ಸಲ್ಲಿಸಿದ ಕ್ಷಣವು ಕಾರ್ಯಕ್ರಮಕ್ಕೆ ವಿಶೇಷ ಭಾವನಾತ್ಮಕ ಸ್ಪರ್ಶ ನೀಡಿತು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಡಾ ಕೃಷ್ಣಪ್ರಭಾ, ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾಣಿ, ಶಿವನಾಥ ರೈ ಮೆಗಿನಗುತ್ತು, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಹಾಗೂ ವಾಲೇರಿಯನ್ ಡಿಸೋಜಾ ಪ್ರಮುಖ ಪಾತ್ರ ವಹಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಪೊನ್ನಪ್ಪ ಅಡ್ಲ್ಯಾಬ್ಸ್, ಕಾಲೇಜಿನ ಪಿಆರ್‌ಒ ಡಾ. ಭಾರತಿ ಎಸ್. ರೈ, ಉಪಕುಲಸಚಿವ (ಶೈಕ್ಷಣಿಕ) ವಿಪಿನ್ ನಾಯಕ್, ಎನ್‌ಸಿಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್, ಉಪಕುಲಸಚಿವ (ಮೌಲ್ಯಮಾಪನ) ಅಭಿಷೇಕ್ ಸುವರ್ಣ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಗಳಿಂದ ಚಾರಣ ಹಾಗೂ ಸ್ವಚ್ಛತಾ ಅಭಿಯಾನ
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಅಕ್ಟೋಬರ್ 3ರಂದು ಪರ್ಲಡ್ಕ ಮಾರ್ಗವಾಗಿ ಬಿರುಮಲೆ ಬೆಟ್ಟಕ್ಕೆ ಒಂದು ದಿನದ ಚಾರಣ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.
ಪುತ್ತೂರು, ಅ.3: ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಇದರ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ಅಕ್ಟೋಬರ್ 3ರಂದು ಪರ್ಲಡ್ಕ ಮಾರ್ಗವಾಗಿ ಬಿರುಮಲೆ ಬೆಟ್ಟಕ್ಕೆ ಒಂದು ದಿನದ ಚಾರಣ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.
ಸಾಹಸ ಚಟುವಟಿಕೆಯೊಂದಿಗೆ ಪರಿಸರ ಜಾಗೃತಿ ಮತ್ತು ಸಮಾಜ ಸೇವೆಯನ್ನು ಸಂಯೋಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ರೋವರ್ಸ್ ಮತ್ತು ರೇಂಜರ್ಸ್ಗಳು ಚಾರಣದ ಮಾರ್ಗದುದ್ದಕ್ಕೂ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. ಪ್ರವಾಸಿಗರು ಹಾಗೂ ಸಾರ್ವಜನಿಕರು ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು, ಆಹಾರದ ಪ್ಯಾಕೆಟ್‌ಗಳು ಮತ್ತು ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿದರು. ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಅಲ್ಲದೆ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹಾಗೂ ನೈಸರ್ಗಿಕ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.
ಶಿಕ್ಷಣ
Vivekananda-ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ಸರಕಾರಿ ಪದವಿಪೂರ್ವ ಕಾಲೇಜು ಕಬಕ ಇವರ ಸಹಯೋಗದಲ್ಲಿ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಬಾಲಕರ ತಂಡದಲ್ಲಿ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾದ ಕಿಶನ್ ಕೆ ವೈ, ತ್ರಿಶಿಕ್ ಕೆ. ಗೌಡ , ಯಶ್ವಿತ್ ಗೌಡ, ಪವನ್ ಕುಮಾರ್, ಮೋಕ್ಷಿತ್ ಕೆ.ಜೆ, ಅನ್ವಿತ್ ಎಸ್ .ಪಿ, ನಿದೀಶ್ ಶೆಟ್ಟಿ, ಮನ್ವಂತ್ ದ್ವಿತೀಯ ಪಿಯುಸಿ ಪ್ರಣಮ್ ಪಿ ಶೆಟ್ಟಿ ,ಚಿಂತನ್ ಕೆ, ಕೆ ಆರ್ ದಿಶಾಂತ್ ಹಾಗೂ ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿನ್ಯಾ ರೈ, ಸೃಷ್ಟಿ ಎಸ್. ಆರ್. ರೈ, ವೀಕ್ಷಾ ಬಿ. ಆರ್, ಧರಣಿ ಕೆ. ಟಿ, ಶ್ರಾವ್ಯ, ಕೆ. ಸುಶಾನಿ, ಸಿ. ಎಸ್. ಚಿನ್ಮಯ್ ಗೌಡ, ಪಾವನಿ ಕೆ. ವಸಿಷ್ಠ, ಸಾನ್ವಿ ಎಸ್, ತನ್ವಿ ದ್ವಿತೀಯ ಪಿಯುಸಿ ಧನ್ವಿ ಎ. ಆರ್ ಭಾಗವಹಿಸಿರುತ್ತಾರೆ.
ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ .ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
-
Uncategorized23 hours ago
ಪುತ್ತೂರು : ಪರವಾನಿಗೆ ರಹಿತವಾಗಿ ಹಿಂಸಾತ್ಮಕವಾಗಿ 11 ಗೋವುಗಳ ಸಾಗಾಟ; ಶಿವಪ್ರಸಾದ್ ಬಂಧನ
-
Uncategorized22 hours ago
ಪುತ್ತೂರು : ವಿಚಾರಣೆ ವೇಳೆ ನ್ಯಾಯಾಲಯದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಗೆ 2 ವರ್ಷ ಜೈಲು
-
Uncategorized10 hours ago
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ
-
ಸಿನೆಮಾ11 hours agoPrema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
-
ದಕ್ಷಿಣ ಕನ್ನಡ4 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
ದಕ್ಷಿಣ ಕನ್ನಡ12 hours ago
ವಿಟ್ಲ :ಬ್ಯಾಂಕ್ ಉದ್ಯೋಗದ ಆಸೆ ತೋರಿಸಿ ಹಣ ವಂಚನೆ: 15 ವರ್ಷಗಳ ಬಳಿಕ ವಾರೆಂಟ್ ಆರೋಪಿ ಬಂಧನ
-
ಅಪರಾಧ11 hours agoMangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
-
ಬಿಗ್ ನ್ಯೂಸ್10 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು


















