ಶಿಕ್ಷಣ
Ambika-ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತಮಹೋತ್ಸವ ಸಮಾರೋಪ ಹಾಗೂ ಗುರುವಂದನಾ ಕಾರ್ಯಕ್ರಮ; ಹಿಂದೂ ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು: ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚವನ ನೀಡಿದರು.
ಪುತ್ತೂರು: ಎಲ್ಲ ಮತಗಳಲ್ಲೂ ಒಳ್ಳೆಯವರಿದ್ದಾರೆಂಬುದು ಸತ್ಯ. ಆದರೆ ಒಳ್ಳೆಯವರನ್ನು ಮುಂದೆ ತೋರಿಸಿ, ಇರುವವರೆಲ್ಲರೂ ಒಳ್ಳೆಯವರೆಂಬ ಭಾವ ಮೂಡಿಸಿ, ಹಿಂದಿನಿಂದ ತಮ್ಮ ಕೆಟ್ಟ ಕೆಲಸಗಳನ್ನು ಮಾಡಿಕೊಳ್ಳುವ ಮಂದಿ ಹಲವರಿದ್ದಾರೆ. ಅಂತಹವರ ಬಗೆಗೆ ಎಲ್ಲರೂ ಜಾಗರೂಕರಾಗಿರಬೇಕು. ಅಂತಹವರಿಂದ ನಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಮೂಲಕ ಹಿಂದೂ ಧರ್ಮವನ್ನು ಉಳಿಸಿಕೊಳ್ಳಬೇಕಿದೆ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗುರುವಾರ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಆಶೀರ್ವಚವನ ನೀಡಿದರು.

ಸಿಂಹದ ಸಾಮರ್ಥ್ಯವನ್ನು ಆನೆಯಲ್ಲಿ ಕೇಳಬೇಕೇ ವಿನಃ ಇಲಿಯಲ್ಲಿ ಕೇಳಬಾರದು. ವಸಂತ ಋತುವಿನ ಶ್ರೇಷ್ಟತೆಯನ್ನು ಕೋಗಿಲೆಯ ಕಂಠದಲ್ಲಿ ಕೇಳಬೇಕು, ಕಾಗೆಯ ಬಾಯಿಯಿಂದಲ್ಲ. ಹಾಗೆಯೇ ಸನಾತನ ಧರ್ಮದ ಉತ್ಕೃಷ್ಟತೆಯನ್ನು ಧರ್ಮದ ತಿರುಳನ್ನರಿತ ಪ್ರಾಜ್ಞರಿಂದ ಅರಿತುಕೊಳ್ಳಬೇಕೇ ವಿನಃ ಅರೆಬರೆ ತಿಳಿದವರಿಂದಲ್ಲ. ನಮ್ಮ ಧರ್ಮ ನಮಗೆ ಅತ್ಯುತ್ತಮ ಸಂಸ್ಕಾರವನ್ನು ಒದಗಿಸಿಕೊಡುತ್ತಿದೆ. ಧಾಮಿಕ ಸಂಸ್ಕಾರವನ್ನು ಮಕ್ಕಳಿಗೆ ಕೊಟ್ಟಾಗ ಅವರು ಸದಾ ಒಳ್ಳೆಯ ಹಾದಿಯಲ್ಲಿರುತ್ತಾರೆ ಮತ್ತು ಎತ್ತರಕ್ಕೆ ಬೆಳೆಯುತ್ತಾರೆ. ಸಂಸ್ಕಾರಹೀನನನ್ನು ಪ್ರಪಂಚ ಒಪ್ಪುವುದಿಲ್ಲ ಎಂದು ಆಶಿರ್ವಚಿಸಿದರು.

ನಾಸ್ತಿಕರು ಹಾಗೂ ನಾಸ್ತಿಕರೆಂದು ಹೆಸರಿಟ್ಟುಕೊಂಡವರೆಂಬ ಎರಡು ಪ್ರಭೇದಗಳಿವೆ. ನಿಜವಾದ ನಾಸ್ತಿಕರಿಗೆ ನಮ್ಮ ಧರ್ಮದಲ್ಲೇ ಸ್ಥಾನವಿದೆ. ನೈಜ ನಾಸ್ತಿಕರು ಎಲ್ಲಾ ಮತ – ಧರ್ಮಗಳ ನ್ಯೂನತೆಗಳನ್ನೂ ಎತ್ತಿ ತೋರಿಸುತ್ತಾ ಬಂದರೆ, ನಾಸ್ತಿಕರೆಂದು ಹೆಸರಿಟ್ಟುಕೊಂಡವರು ಹಿಂದೂ ಧರ್ಮದ ಬಗೆಗೆ ಮಾತ್ರ ಟೀಕಿಸುವುದಕ್ಕೆ ತೊಡಗುತ್ತಾರೆ. ಅವರಿಗೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಅನ್ಯಾಯಗಳು ಕಾಣುತ್ತವೆ, ಬೇರೆ ಧರ್ಮದ ಯಾವುದೇ ಹುಳುಕುಗಳು ಅವರಿಗೆ ಕಾಣಿಸುವುದಿಲ್ಲ. ಇಂತಹವರ ಬಗೆಗೆ ಗಮನ ಇಡಬೇಕು ಎಂದರು.

ದೇಶ – ಧರ್ಮಗಳೆರಡೂ ಸದಾ ಉತ್ತಮ ಸ್ಥಿತಿಯಲ್ಲಿರುವಂತೆ ನಾವು ನೋಡಿಕೊಳ್ಳಬೇಕು. ಹಿಮದೂ ಸಮಾಜ ಸದಾ ಜಾಗೃತ ಸ್ಥಿತಿಯಲ್ಲಿರಬೇಕು. ಹಿಂದೂ ಧರ್ಮದ ಬಗೆಗೆ ಸುಳ್ಳುಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ಆ ಸುಳ್ಳುಗಳು ಸುಳ್ಳು ಎಂದು ಹಿಂದೂಗಳಿಗೇ ಅರಿವಾಗುತ್ತಿಲ್ಲ. ಇಲ್ಲಿಯವರೆಗೆ ನಮ್ಮ ಧರ್ಮಕ್ಕಾದ ಹಾನಿಯೇ ಸಾಕು. ಇನ್ನು ಮುಂದೆಯೂ ಅದು ಮುಂದುವರೆಯದಂತೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸೂಚಿಸಿದರು.
ನಮ್ಮ ನೇತಾರನನ್ನು ಆಯ್ಕೆ ಮಾಡುವಾಗ ಆತನನಿಗೆ ಧರ್ಮಶ್ರದ್ಧೆ ಇದೆಯಾ ಎಂಬುದನ್ನು ಗಮನಿಸಬೇಕು. ಕೇವಲ ಇಂತಹವರ ತಮ್ಮ, ಅಂತಹವರ ಮಗ ಎಂಬ ಕಾರಣಕ್ಕೆ ಆಯ್ಕೆ ಮಾಡಬಾರದು. ಧರ್ಮಕ್ಕೆ ಕೊಡುಗೆ ಕೊಡಲಾಗದಿದ್ದರೂ ಹಾನಿ ಮಾಡದವನನ್ನು ಆಯ್ಕೆ ಮಾಡಿದಾಗ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರಲ್ಲದೆ ದುರ್ವಿನಿಯೋಗವಾಗದ ಏಕೈಕ ಸಂಗತಿಯೆಂದರೆ ಸಂಸ್ಕಾರ ಎಂದು ನುಡಿದರು.

ಶಂಖನಾದ ಹಾಗೂ ವೇದಘೋಷವನ್ನು ನಡೆಸಿಕೊಡಲಾಯಿತು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಗುರುವಂದನಾ ಸಮಿತಿ ಅಧ್ಯಕ್ಷ ಚಿದಾನಂದ ಬೈಲಾಡಿ ಸ್ವಾಗತಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಪ್ರಸ್ತಾವನೆಗೈದರು. ವಿದ್ವಾನ್ ಉಮಾಕಾಂತ ಭಟ್ಟ ಕೆರೆಕೈ ಅಭಿವಂದನಾ ನುಡಿಗಳನ್ನಾಡಿದರು. ತಾಲೂಕು ಧರ್ಮ ಶಿಕ್ಷಣ – ಧರ್ಮಾಭ್ಯುದಯದ ವಿದ್ಯಾರ್ಥಿಗಳಿಂದ ಸಮರ್ಪಣಮ್ ಕಾರ್ಯಕ್ರಮ ನಡೆಯಿತು.
ಬಪ್ಪಳಿಗೆ ಅಂಬಿಕಾ ಆವರಣದಲ್ಲಿ ರೂಪಿಸಲಾದ ಭಾರತಮಾತೆಯ ಉಬ್ಬುಶಿಲ್ಪವನ್ನು ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವ ಸ್ಮರಣ ಸಂಚಿಕೆ ಹಾಗೂ ಶೃಂಗೇರಿಯ ಬಗೆಗೆ ಮಾಹಿತಿಯುಳ್ಳ ಶೃಂಗೇರಿಯ ಹಿರಿಮೆ ಕೃತಿಯನ್ನು ಜಗದ್ಗುರುಗಳು ಅನಾವರಣಗೊಳಿಸಿದರು. ಅಂಬಿಕಾ ನಡೆದು ಬಂದ ಹಾದಿಯ ಬಗೆಗಿನ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಅಂಬಿಕಾ ವತಿಯಿಂದ ರೂಪಿಸಲಾದ ನಾವಿಕ – ಹಿಂದೂ ಸಂಪರ್ಕ ಸಾರಿಗೆ ಎಂಬ ಮೊಬೈಲ್ ಆಪ್ ಅನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.
ಗುರುವಂದನಾ ಸಮಿತಿ ಹಾಗೂ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಭಿವಂದನಾ ಪತ್ರ, ಸ್ಮರಣಿಕೆಗಳನ್ನು ಜಗದ್ಗುರುಗಳಿಗೆ ಸಮರ್ಪಿಸಲಾಯಿತು. ಸುಬ್ರಮಣ್ಯ ನಟ್ಟೋಜ ಹಾಗೂ ಕುಟುಂಬಸ್ಥರು ಶಾರದಾಮಾತೆಯ ಪುತ್ಥಳಿಯನ್ನು ಗುರುಚರಣಗಳಿಗೆ ಅರ್ಪಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಬಾಲಕರಷ್ಣ ಬೋರ್ಕರ್, ಡಾ.ಎಂ.ಎಸ್.ಶೆಣೈ, ಇನ್ನಿತರ ಸದಸ್ಯರು, ಗುರುವಂದನಾ ಸಮಿತಿಯ ಗೌರವಾಧ್ಯಕ್ಷ ಮೊಗೆರೋಡಿ ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ, ಖಜಾಂಜಿ ಕಾವು ಹೇಮನಾಥ ಶೆಟ್ಟಿ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಸಂಚಾಲಕ ಡಾ.ಸುರೇಶ್ ಪುತ್ತೂರಾಯ, ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ, ಸಂಘಟನಾ ಕಾರ್ಯದರ್ಶಿ ದಿನೇಶ್ ಜೈನ್, ಸಂಯೋಜಕ ಮಾಧವ ಸ್ವಾಮಿ, ಜತೆ ಕಾರ್ಯದರ್ಶಿಗಳಾದ ಸುರೇಶ್ ಕೆಮ್ಮಿಂಜೆ ಹಾಗೂ ನವೀನ್ ಕುಲಾಲ್, ಸಹಸಂಚಾಲಕ ಗಿರಿಶಂಕರ ಸುಲಾಯ, ಗೌರವ ಸಲಹೆಗಾರ ಎನ್.ಕೆ.ಜಗನ್ನಿವಾಸ ರಾವ್, ಪದಾಧಿಕಾರಿಗಳು, ಸದಸ್ಯರು ಮತ್ತು ಧರ್ಮಾಭ್ಯುದಯದ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಇತರ ಪದಾಧಿಕಾರಿಗಳು, ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ ಹಾಗೂ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಶಂಕರ ಜಯಂತಿ ಪ್ರಯುಕ್ತ ಪುತ್ತೂರು ಹಾಗೂ ಸುತ್ತಮುತ್ತಲಿನ ಆರು ತಾಲೂಕುಗಳ ವಿದ್ಯಾರ್ಥಿಗಳಿಗಾಗಿ ಶೃಂಗೇರಿ ಪೀಠದಿಂದ ಇತ್ತೀಚೆಗೆ ಆಯೋಜಿಸಲಾದ ಶಂಕರ ವಿಜಯ ಸ್ಪರ್ಧೆಗಳಲ್ಲಿ ಗೆಲುವು ಪಡೆದವರಿಗೆ ಹಾಗೂ ಅತ್ಯುತ್ತಮ ಪ್ರದರ್ಶನ ತೋರಿದವರಿಗೆ ಶ್ರೀಗಳು ಬಹುಮಾನ ವಿತರಿಸಿದರು. ಹಿರಿಯರ ಭಾಷಣ ಸ್ಪರ್ಧೆ ವಿಜೇತರಾದ ಸಿಂಚನಾ ಕಲ್ಲೂರಾಯ ಹಾಗೂ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಅಭಿನವರಾಜ್ ಎನ್. ಭಾಷಣವನ್ನು ಶ್ರೀಗಳ ಮುಂದೆ ಪ್ರಸ್ತುತಪಡಿಸಿದರು. ಅಂಬಿಕಾ ವತಿಯಿಂದ ಆಯೋಜಿಸಲಾಗಿದ್ದ ಶ್ಲೋಕಭಾರತೀ ಸ್ಪರ್ಧೆಯ ವಿಜೇತರಿಗೆ ಬಾಲಭಾರತಿ ಪ್ರಶಸ್ತಿ ವಿತರಿಸಲಾಯಿತು. ಉಪನ್ಯಾಸಕ ಆದರ್ಶ ಗೋಖಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶೃಂಗೇರಿ ಮಠದ ಶಾಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ವಿದ್ವಾನ್ ತೇಜಶಂಕರ ಸೋಮಯಾಜಿ ಅಭಿವಂದನಾ ಪತ್ರ ವಾಚಿಸಿದರು.
ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಎಲ್ಲರಿಗೂ ಪ್ರಸಾದ ಭೋಜನವನ್ನು ಕಲ್ಪಿಸಿಕೊಡಲಾಗಿತ್ತು.
ತೊಟ್ಟಿಲಕಯದಲ್ಲಿ ಚಂಡಿಕಾಹೋಮ: ಇದಕ್ಕೂ ಪೂರ್ವದಲ್ಲಿ ಗುರುವಾರ ಬೆಳಗ್ಗೆ ಎಂಟು ಗಂಟೆಯ ಸುಮಾರಿಗೆ ಬಲ್ನಾಡು ಶ್ರೀ ಉಳ್ಳಾಲ್ತಿಯ ಮೂಲಸ್ಥಾನವಾದ ತೊಟ್ಟಿಲಕಯದ ಶ್ರೀ ಉಳ್ಳಾಲ್ತಿ ಅಮ್ಮನವರ ಸ್ಥಾನದಲ್ಲಿ ಚಂಡಿಕಾಹೋಮ ಸಂಪನ್ನಗೊಂಡಿತು. ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಪೂರ್ಣಾಹುತಿಯನ್ನು ನಡೆಸಿಕೊಟ್ಟರು.
ಶಿಕ್ಷಣ
Ambika-ಅಂಬಿಕಾ ವಿದ್ಯಾಲಯದಲ್ಲಿ ಆರ್ಟ್ ಆಫ್ ಲಿವಿಂಗ್‌ನ ಸಹಜ ಸಮಾಧಿ ಧ್ಯಾನ ಶಿಬಿರ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ “ಸಹಜ ಸಮಾಧಿ ಧ್ಯಾನ ಯೋಗ” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆರ್ಟ್ ಆಫ್ ಲಿವಿಂಗ್ ಪುತ್ತೂರು ಘಟಕದ ವತಿಯಿಂದ “ಸಹಜ ಸಮಾಧಿ ಧ್ಯಾನ ಯೋಗ” ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಅಷ್ಟಾಂಗ ಯೋಗದ ಪ್ರಕಾರ ಧ್ಯಾನದ ಅತ್ಯಂತ ಆಳವಾದ ಸ್ಥಿತಿಯಾದ ಸಮಾಧಿ ಸ್ಥಿತಿಯನ್ನು ಅನಾಯಾಸವಾಗಿ ಸರಳವಾಗಿ ನಿತ್ಯವೂ ಅನುಭವಿಸಲು ಸಹಕಾರಿಯಾದ ಈ ಯೋಗ ಶಿಬಿರವನ್ನು ಆರ್ಟ್ ಆಫ್ ಲಿವಿಂಗ್‌ನ ಅಂತರಾಷ್ಟ್ರೀಯ ಶಿಕ್ಷಕ ಯಾದವ ಜೀ ನಡೆಸಿಕೊಟ್ಟರು. ಶಿಬಿರದಲ್ಲಿ ೮೮ ಮಂದಿ ಭಾಗವಹಿಸಿ ಧ್ಯಾನ ಮಾಡುವ ಕ್ರಮವನ್ನು ಕಲಿತುಕೊಂಡರು.
ಸಹಾಯಕ ಶಿಕ್ಷಕರಾಗಿ ಮಂಗಳೂರಿನ ರಜನಿ ರೈ ಸಹಕರಿಸಿದರು. ಸಹಜ ಸಮಾಧಿ ಧ್ಯಾನವನ್ನು ಕಲಿಸುವುದಕ್ಕಾಗಿ ತರಬೇತಿಯನ್ನು ಪಡೆಯುತ್ತಿರುವ ಶರಾವತಿ ರವಿ ನಾರಾಯಣ, ಆರ್ಟ್ ಆಫ್ ಲಿವಿಂಗ್ ಪುತ್ತೂರಿನ ಮುಖ್ಯಸ್ಥರಾದ ಕುಮಾರ ಸುಬ್ರಹ್ಮಣ್ಯ ಭಟ್, ಸತ್ಯವತಿ ಕೆ ಎಸ್, ಸುಧಾ ಹೆಬ್ಬಾರ್, ಭಾರತಿ ಜಯರಾಮ್ ಹಾಗೂ ಸಂಸ್ಥೆಯ ಎಲ್ಲಾ ಸ್ವಯಂಸೇವಕರು ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿದರು.
ಸಮಾರೋಪ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಭಾಗವಹಿಸಿ, ಪ್ರೇರಣೆ ನೀಡಿದರು.
ಶಿಕ್ಷಣ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ ಒಂದು ವಾರದ ಕನ್ನಡ ಕಾರ್ಯಕ್ರಮಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿಕ ಹಾಗೂ ಅಂಕಣಕಾರ ಮಹೇಶ್ ಪುಚ್ಚಪ್ಪಾಡಿ ಮಾತಾಡಿದರು.
ಪುತ್ತೂರು: ಇಂದಿನ ಕಾಲಘಟ್ಟದಲ್ಲಿ ಇಂಗ್ಲಿಷ್ ಭಾಷೆಯ ಅನಿವಾರ್ಯತೆ ಹೆಚ್ಚಾಗುತ್ತಿದೆ. ಇಂಗ್ಲಿಷ್ ಕೌಶಲ ಎಷ್ಟಿದ್ದರೂ ಕಡಿಮೆಯೇ ಎನ್ನುವ ಸ್ಪರ್ಧಾತ್ಮಕ ಜಗತ್ತು ನಮ್ಮ ಮುಂದಿರುವ ಇಂತಹ ಸಂದರ್ಭದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಯೊಂದರಲ್ಲಿ ಕನ್ನಡ ಸಂಘ ಇರುವುದು ಆಶಾದಾಯಕ. ಇದು ಕೇವಲ ಭಾಷಾ ಚಟುವಟಿಕೆಗಳಿಗೆ ಸೀಮಿತವಾಗದೆ ಹೊಸ ಸಾಧ್ಯತೆಗಳ ವೇದಿಕೆಯಾಗಲಿ ಎಂದು ಕೃಷಿಕ ಹಾಗೂ ಅಂಕಣಕಾರ ಮಹೇಶ್ ಪುಚ್ಚಪ್ಪಾಡಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಲಹರಿ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೊಜನಾ ಘಟಕ ಹಾಗೂ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಡೆಸಲಾದ ಒಂದು ವಾರದ ಕನ್ನಡ ಕಾರ್ಯಕ್ರಮಗಳ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತಾಡಿದರು.

ಕನ್ನಡ ನಮ್ಮ ಬೇರು, ತಂತ್ರಜ್ಞಾನ ನಮ್ಮ ರೆಕ್ಕೆ, ಜಗತ್ತಿನ ಯಾವುದೇ ತಂತ್ರಜ್ಞಾನವನ್ನು ಕಲಿಯಬಹುದು. ಆದರೆ ನಮ್ಮ ಬೇರುಗಳನ್ನು ಮರೆಯಬಾರದು. ಜಾಗತಿಕವಾಗಿ ಬೆಳೆಯಲು ಇಂಗ್ಲಿಷ್ ಬೇಕಾದರೆ ನಮ್ಮ ನೆಲದೊಂದಿಗೆ ಬೆಸೆಯಲು ಕನ್ನಡ ಬೇಕು ಎಂದರು. ಕೈಯಲ್ಲಿ ಮೊಬೈಲಿದೆ, ತಲೆಯಲ್ಲಿ ತಂತ್ರಜ್ಞಾನವಿದೆ, ಮುಂದೆ ವಿಶಾಲ ಜಗತ್ತಿದೆ ಈ ಮೂರರ ನಡುವೆ ಕನ್ನಡವನ್ನು ಕಳೆದುಕೊಳ್ಳಬೇಡಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ ಪ್ರತಿಯೊಬ್ಬನಿಗೂ ಮಾತೃ ಭಾಷೆಯ ಮೇಲೆ ಅಪಾರ ಅಭಿಮಾನವಿರಬೇಕು. ನಾವು ಎಲ್ಲಿ ಹೋದರು, ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ನಮ್ಮತನವನ್ನು ಎಂದಿಗೂ ಕಳೆದುಕೊಳ್ಳಬಾರದು ಎಂದರು. ದೇಶ-ಭಾಷೆ, ನಾಡು-ನುಡಿ, ನೆಲ-ಜಲದ ವಿಷಯದಲ್ಲಿ ಎಲ್ಲರೂ ಒಂದಾಗಿ ಅದರ ಸಾರ್ವಭೌಮತೆಯನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.
ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ನಡೆಸಲಾದ ವಾಗ್-ವೈಖರಿ, ಸಮ್‌ವಾದ, ಜಸ್ಟ್ಮಾತು, ಮೇಧಮಂಥನ, ಪಿಕ್ಸೆಲ್‌ಪುಟ, ಭಾವಕುಂಚ ಮತ್ತು ಅನ್ವೇಷಣಾ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಲಹರಿ ಕನ್ನಡ ಸಂಘದ ಸಂಯೋಜಕ ಪ್ರೊ.ನವೀನ್.ಸಿ ಮತ್ತು ವಿದ್ಯಾರ್ಥಿ ಸಂಯೋಜಕ ಆದಿತ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಗೀತೆಗಳ ಗಾಯನದಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರೊ.ನವೀನ್.ಸಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಆದಿತ್ಯ ವಂದಿಸಿದರು. ಅನಿತಾ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಣ
Sahyadri-ಸಹ್ಯಾದ್ರಿಯಲ್ಲಿ ವಿಟಿಯು ಕನ್ಸೋರ್ಟಿಯಂ ಇ-ಸಂಪನ್ಮೂಲಗಳ ಪ್ರಾದೇಶಿಕ ತರಬೇತಿ ಕಾರ್ಯಕ್ರಮ
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (SCEM),ಮಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಸಹಯೋಗದೊಂದಿಗೆ, ನವೆಂಬರ್ 20 ರಂದು ಕಾಲೇಜಿನ ನೆಲ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ VTU ಕನ್ಸೋರ್ಟಿಯಂ ಇ-ಸಂಪನ್ಮೂಲ ತರಬೇತಿ ಕಾರ್ಯಕ್ರಮ 2026–27 ಅನ್ನು ಆಯೋಜಿಸಲಾಯಿತು.
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (SCEM),ಮಂಗಳೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ಸಹಯೋಗದೊಂದಿಗೆ, ನವೆಂಬರ್ 20 ರಂದು ಕಾಲೇಜಿನ ನೆಲ ಮಹಡಿಯ ಸೆಮಿನಾರ್ ಹಾಲ್‌ನಲ್ಲಿ VTU ಕನ್ಸೋರ್ಟಿಯಂ ಇ-ಸಂಪನ್ಮೂಲ ತರಬೇತಿ ಕಾರ್ಯಕ್ರಮ 2026–27 ಅನ್ನು ಆಯೋಜಿಸಲಾಯಿತು.

ವಿಟಿಯು ಕನ್ಸೋರ್ಟಿಯಂ ಮೂಲಕ ಲಭ್ಯವಿರುವ ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲು ಮತ್ತು ಜಾಗೃತಿಯನ್ನು ಹೆಚ್ಚಿಸಲು ಕರ್ನಾಟಕದಾದ್ಯಂತ ಎಂಜಿನಿಯರಿಂಗ್ ಸಂಸ್ಥೆಗಳ ಗ್ರಂಥಪಾಲಕರು, ಅಧ್ಯಾಪಕರು ಮತ್ತು ಶೈಕ್ಷಣಿಕ ವೃತ್ತಿಪರರನ್ನು ಪ್ರಾದೇಶಿಕ ಮಟ್ಟದ ಕಾರ್ಯಕ್ರಮವು ಒಟ್ಟುಗೂಡಿಸಿತು.
ಉದ್ಘಾಟನಾ ಸಮಾರಂಭವು ಪ್ರಥಮ ವರ್ಷದ ವಿದ್ಯಾರ್ಥಿನಿಯರಾದ ಕುಮಾರಿ ಪೂರ್ವಿ ಶೆಟ್ಟಿ ಪಿ. ಜಿ. ಮತ್ತು ಕುಮಾರಿ ಗೌತಮಿ ಆರ್. ಅವರು ನಡೆಸಿಕೊಟ್ಟ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣ ಮಾಡಿದರು.
ನಂತರ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್‌ಸಿಇಎಂ (SCEM) ನ ಸಹಾಯಕ ಗ್ರಂಥಪಾಲಕರಾದ ಡಾ. ಶ್ವೇತಾ ಕುಮಾರಿ ಕೆ. ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಮಂಗಳೂರಿನ ವಿಟಿಯು (VTU) ವಿಸ್ತರಣಾ ಕೇಂದ್ರದ ವಿಶೇಷ ಅಧಿಕಾರಿ ಡಾ. ದಾಮೋದರ ನಾರಲ್ ಅವರು ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಎಸ್‌ಸಿಇಎಂನ ಸಹ ಪ್ರಾಧ್ಯಾಪಕರಾದ ಡಾ. ಚಂದನಾ ಬಿ. ಆರ್. ಅವರು ಮುಖ್ಯ ಅತಿಥಿಗಳಾದ ಎನ್‌ಐಟಿಕೆ (NITK) ಸುರತ್ಕಲ್‌ನ ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಅಂಗಡಿ ಅವರನ್ನು ಪರಿಚಯಿಸಿದರು; ಬಳಿಕ ಡಾ. ಮಲ್ಲಿಕಾರ್ಜುನ ಅಂಗಡಿ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು. ಎಸ್‌ಸಿಇಎಂನ ಆಡಳಿತಾಧಿಕಾರಿ ಹಾಗೂ ಟ್ರಸ್ಟಿ ಶ್ರೀ ಕೃಷ್ಣ ಹೆಗಡೆ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗ್ರಂಥಪಾಲಕರು ಹಾಗೂ ಕಾರ್ಯಕ್ರಮ ಸಂಯೋಜಕರಾದ ಡಾ. ಭಾರತಿ ಕೆ. ಅವರು ವಂದನಾರ್ಪಣೆ ಸಲ್ಲಿಸಿದರು. ತಾಂತ್ರಿಕ ಅವಧಿಗಳಲ್ಲಿ IEEE, PAT ಟೆಕ್ನಾಲಜಿ, GATEtutor, ProQuest, Elsevier ScienceDirect, Taylor & Francis, Emerald Publishing, Cambridge University Press, Pearson, DrillBit ಮತ್ತು Quiklrn ಸೇರಿದಂತೆ ಪ್ರಮುಖ ಶೈಕ್ಷಣಿಕ ಪ್ರಕಾಶಕರು ಮತ್ತು ಡಿಜಿಟಲ್ ಸಂಪನ್ಮೂಲ ಪೂರೈಕೆದಾರರ ಪ್ರತಿನಿಧಿಗಳಿಂದ ಪ್ರಸ್ತುತಿಗಳು ಮತ್ತು ಪ್ರದರ್ಶನಗಳು ನಡೆದವು. ಅವಧಿಗಳಲ್ಲಿ ಎಲ್ಸೆವಿಯರ್ ಅವರ ಸ್ಕೋಪಸ್ ಡೇಟಾಬೇಸ್ ಕುರಿತು ಪ್ರಸ್ತುತಿ ಮತ್ತು MAP ಸಿಸ್ಟಮ್ಸ್ ಅವರ MAP My Access System ನ ಅವಲೋಕನವೂ ಸೇರಿತ್ತು.

ಸಂಪನ್ಮೂಲ ವ್ಯಕ್ತಿಗಳು ವಿದ್ವತ್ಪೂರ್ಣ ಜರ್ನಲ್‌ಗಳು, ಇ-ಪುಸ್ತಕಗಳು, ಸಂಶೋಧನಾ ಡೇಟಾಬೇಸ್‌ಗಳು, ಪರೀಕ್ಷಾ ತಯಾರಿ ಸಂಪನ್ಮೂಲಗಳು, ಕೃತಿಚೌರ್ಯ ಪತ್ತೆ ಪರಿಕರಗಳು ಮತ್ತು ಡಿಜಿಟಲ್ ಕಲಿಕಾ ವೇದಿಕೆಗಳನ್ನು ಪ್ರವೇಶಿಸುವ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಒದಗಿಸಿದರು. ಬೋಧನೆ, ಕಲಿಕೆ ಮತ್ತು ಸಂಶೋಧನೆಯಲ್ಲಿ ಈ ಸಂಪನ್ಮೂಲಗಳ ವೈಶಿಷ್ಟ್ಯಗಳು, ಹುಡುಕಾಟ ಸೌಲಭ್ಯಗಳು ಮತ್ತು ಪ್ರಾಯೋಗಿಕ ಅನ್ವಯಿಕೆಗಳನ್ನು ಅರ್ಥಮಾಡಿಕೊಳ್ಳಲು ಭಾಗವಹಿಸುವವರಿಗೆ ಸಂವಾದಾತ್ಮಕ ಅವಧಿಗಳು ಸಹಾಯ ಮಾಡಿದವು.
ಈ ಕಾರ್ಯಕ್ರಮದಲ್ಲಿ ವಿವಿಧ ಎಂಜಿನಿಯರಿಂಗ್ ಸಂಸ್ಥೆಗಳನ್ನು ಪ್ರತಿನಿಧಿಸುವ ಗ್ರಂಥಪಾಲಕರು ಮತ್ತು ಅಧ್ಯಾಪಕರು ಉತ್ಸಾಹದಿಂದ ಭಾಗವಹಿಸಿದ್ದರು. ಇದು ಜ್ಞಾನ ಹಂಚಿಕೆ, ವೃತ್ತಿಪರ ಸಂವಹನ ಮತ್ತು ಡಿಜಿಟಲ್ ಸಂಪನ್ಮೂಲಗಳೊಂದಿಗೆ ಶೈಕ್ಷಣಿಕ ಸಮುದಾಯದ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸಲು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸಿತು.
ಈ ವಿಟಿಯು ಒಕ್ಕೂಟದ ಪ್ರಾದೇಶಿಕ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ, ಸಹ್ಯಾದ್ರಿ ಕಾಲೇಜು ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು, ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಶೈಕ್ಷಣಿಕ ಇ-ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯ ಮೂಲಕ
ಗುಣಮಟ್ಟದ ಉನ್ನತ ಶಿಕ್ಷಣವನ್ನು ಬೆಂಬಲಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.
ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಕಾಲೇಜಿನ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಡಾ. ಭಾರತಿ ಕೆ. ಸಂಯೋಜಿಸಿದರು.
-
ಸ್ಥಳೀಯ17 hours agoWedding-ಕ್ಯಾಸೆಟ್ಗಳ ಅಬ್ಬರವಿಲ್ಲ, ಡ್ಯಾನ್ಸ್ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಶಿಕ್ಷಣ10 hours agoVidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
-
ಬಿಗ್ ನ್ಯೂಸ್16 hours agoRailway-ರೈಲ್ವೆ ಗುಂಪು ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಬರ್ತ್ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
-
ಬಿಗ್ ನ್ಯೂಸ್12 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಮಂಗಳೂರು10 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಕಾರ್ಯಕ್ರಮಗಳು11 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಅಪರಾಧ10 hours agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
-
ಶಿಕ್ಷಣ18 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ















