ಅಪರಾಧ
ಧರ್ಮಸ್ಥಳ : ರಸ್ತೆಯಲ್ಲಿ ಅಡ್ಡಲಾಗಿ ಬಿದಿದ್ದ ಮರವನ್ನು ಗಮನಿಸದೇ ಬೈಕ್ ಚಲಾಯಿಸಿ ಅಪಘಾತ – ಬೈಕ್ ಸವಾರ, ಹೊಟೇಲ್ ಮಾಲಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ : ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಗಮನಿಸದೆ ಸವಾರರೊಬ್ಬರು ಬೈಕ್ ಓಡಿಸಿದ ಪರಿಣಾಮ, ಬೈಕ್ ಮರದ ತುಂಡಿಗೆ ಢಿಕ್ಕಿ ಹೊಡೆದು ರಸ್ತೆಗೆ ಉರುಳಿ ಬಿದ್ದು, ಬೈಕ್ ಚಲಾಯಿಸುತ್ತಿದ್ದ ಹೊಟೇಲ್ ಮಾಲಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಜೂ.15 ರಂದು ಬೆಳ್ಳಂಬೆಳಿಗ್ಗೆ ಧರ್ಮಸ್ಥಳದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಮುಗುಳಿಚತ್ರ ನಿವಾಸಿ ನೇಮಿರಾಜ್ ಬುಣ್ಣು ಅವರ ಮಗ ವಸಂತ್ ಕುಮಾರ್ ಜೈನ್ (42) ಅಪಘಾತದಲ್ಲಿ ಮೃತಪಟ್ಟವರು. ಇವರು ಕೆಲ ಸಮಯದ ಹಿಂದೆಯಷ್ಟೇ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಬಳಿ ಹೊಟೇಲ್ ಆರಂಭಿಸಿದ್ದರು.
ಬೆಳ್ತಂಗಡಿ, ಉಜಿರೆ ಧರ್ಮಸ್ಥಳದಲ್ಲಿ ಕಳೆದ ಕೆಲ ದಿನಗಳಿಂದ ಗಾಳಿ ಮಳೆ ಸುರಿಯುತ್ತಿದೆ, ಈ ಗಾಳಿ ಮಳೆಗೆ ನಿನ್ನೆ ರಾತ್ರಿ ಧರ್ಮಸ್ಥಳದ ನೇತ್ರಾವತಿ ನದಿಯ ಬಳಿಯ ಅಡ್ಯಾಲ ಚಡವು ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಆದರೇ ನಸುಕಿನ ಜಾವ 5.30ರ ಸುಮಾರಿಗೆ ತನ್ನ ಹೊಟೇಲಿಗೆ ಬೈಕಿನಲ್ಲಿ ಅತುರಾತುರವಾಗಿ ತೆರಳುತ್ತಿದ್ದ ವಸಂತ್ ರಸ್ತೆಯಲ್ಲಿ ಬಿದ್ದಿದ್ದ ಮರವನ್ನು ಗಮನಿಸಿಲ್ಲ.
ಸದ್ಯ ಸೂರ್ಯೋದಯ 6 ಗಂಟೆಯ ನಂತರವಾಗುತ್ತಿರುವುದರಿಂದ ಮುಂಜಾನೆ 5:30 ರ ಸುಮಾರಿಗೆ ಬೆಳಕು ರಸ್ತೆಗೆ ಸರಿಯಾಗಿ ಹರಿದಿಲ್ಲದಿದ್ದದ್ದು ಮರದ ದಿಮ್ಮಿ ಗೋಚರಿಸದಿರಲು ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಮರವನ್ನು ಗಮನಿಸದೇ ಬೈಕ್ ಚಲಾಯಿಸಿದ ಪರಿಣಾಮ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ಚಿಮ್ಮಿ ತುಸು ದೂರ ಹೋಗಿ ಬಿದ್ದಿದೆ ಎನ್ನಲಾಗಿದೆ . ಅಪಘಾತದ ತೀವ್ರತೆಗೆ ಉರುಳಿದ ವಸಂತ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ವಸಂತ ಕುಮಾರ್ ಜೈನ್ ಅವರು ಶ್ರೀಕ್ಷೇತ್ರ ಧರ್ಮಸ್ಥಳ ಕೆಲಸ ಮಾಡುತ್ತಿದ್ದು , ಪ್ರಸ್ತುತ ಅದನ್ನು ಬಿಟ್ಟು ಕೆಲಸಮಯದ ಹಿಂದೆ ಕನ್ಯಾಡಿ ಬಳಿ ಸ್ವಂತ ಹೊಟೇಲ್ ಉದ್ಯಮಿ ಆರಂಭಿಸಿದ್ದರು. ಬೈಕ್ ಒಂದು ಅಪಾಘಾತಗೊಂಡು ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ಆ ವೇಳೆ ಆ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ಸವಾರರೊಬ್ಬರು ಪೊಲೀಸ್ ತುರ್ತು ಸಮಖ್ಯೆ 112 ಗೆ ಕರೆ ಮಾಡಿ ತಿಳಿಸಿದ್ದಾರೆ.
ಅಂತರ ರಾಜ್ಯ
Arrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.
ಅಗರ್ತಲಾ: ಬರೋಬ್ಬರಿ 14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.
ಬಾಜು ಎಂದು ಗುರುತಿಸಲಾಗಿರುವ ಆರೋಪಿಯನ್ನು ಗುರುವಾರ ಬಂಧಿಸಿ ಅಗರ್ತಲಾಗೆ ಕರೆತರಲಾಗಿದೆ. ಬಳಿಕ ಪಶ್ಚಿಮ ತ್ರಿಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಏನಿದು 14 ವರ್ಷಗಳ ಹಿಂದಿನ ಪ್ರಕರಣ?
ಅಗರ್ತಲಾದ ಭಾಟಿ ಅಭಯನಗರ ನಿವಾಸಿ ಆಶಿಶ್ ಸೋಮ್ (40) ಎಂಬ ಶಾಲಾ ಶಿಕ್ಷಕರು 2011ರ ಮೇ 28ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಮರದ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ವ್ಯವಹಾರದ ನಿಮಿತ್ತ ಕಾಂಚನ್ಪುರಕ್ಕೆ ತೆರಳಿದ ಬಳಿಕ ಮನೆಗೆ ವಾಪಸಾಗಿರಲಿಲ್ಲ.
ಶಿಕ್ಷಕರು ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರನ್ನು ಅಪಹರಿಸಿರುವುದಾಗಿ ಹೇಳಿಕೊಂಡು ಕುಟುಂಬಸ್ಥರಿಗೆ ದೂರವಾಣಿ ಕರೆಗಳು ಬಂದಿದ್ದವು. ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಿಧ ಹಂತಗಳಲ್ಲಿ ಸುಮಾರು ₹25 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಹಣ ಪಡೆದ ಬಳಿಕವೂ ಶಿಕ್ಷಕರನ್ನು ಬಿಡುಗಡೆ ಮಾಡಿರಲಿಲ್ಲ. ಹಲವು ವರ್ಷಗಳ ಕಾಲ ಅವರ ಸುಳಿವು ಕೂಡ ಪತ್ತೆಯಾಗಿರಲಿಲ್ಲ.
ಸಮಾಧಿಗಳಲ್ಲಿ ಪತ್ತೆಯಾದ ಅಸ್ಥಿಪಂಜರದಿಂದ ತನಿಖೆಗೆ ವೇಗ
ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆಯ ವೇಳೆ ಶಿಕ್ಷಕ ಆಶಿಶ್ ಸೋಮ್ ಅವರ ವ್ಯಾಪಾರ ಪಾಲುದಾರ ಎನ್ನಲಾದ ಹೊಸೈನ್ ಅಹ್ಮದ್ ಕೂಡ ಅಪಹರಣ ಪ್ರಕರಣದ ಶಂಕಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಬಂಧಿತ ಬಾಜುವನ್ನು ವಿಚಾರಣೆ ನಡೆಸಲಾಗುತ್ತಿದ್ದು, ಆತ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಇದೇ ವರ್ಷದ ಸೆಪ್ಟೆಂಬರ್ 16ರಂದು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಸೋನ್ಸಿಲ್ ಪ್ರದೇಶದ ಸ್ಮಶಾನವೊಂದರ ಮೂರು ಸಮಾಧಿಗಳಿಂದ ಅಪರಿಚಿತ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಬೆಳವಣಿಗೆ ಪ್ರಕರಣದ ತನಿಖೆಗೆ ಹೊಸ ವೇಗ ನೀಡಿದೆ.
ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ನಾಪತ್ತೆಯಾಗಿರುವ ಆಶಿಶ್ ಸೋಮ್ ಅವರದ್ದೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಡಿಎನ್ಎ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ಅದರ ಬಳಿಕ ಪ್ರಕರಣದ ಹಲವು ನಿಗೂಢ ಸಂಗತಿಗಳು ಬಯಲಾಗುವ ನಿರೀಕ್ಷೆಯಿದೆ.
ಸ್ಥಳೀಯ
Bail-ಬೆಳ್ತಂಗಡಿ: ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ರಿಲೀಫ್; ಮತ್ತಿಬ್ಬರಿಗೆ ಜಾಮೀನು
ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಕಳೆದ ಜೂನ್ 1ರಂದು ನಡೆದ ಪೆರ್ನೆ ಮೂಲದ ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಉಳಿದ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಕಳೆದ ಜೂನ್ 1ರಂದು ನಡೆದ ಪೆರ್ನೆ ಮೂಲದ ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಉಳಿದ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಪ್ರಕರಣದ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಯಶೋಧರ ಹಾಗೂ ಕಡಬ ತಾಲೂಕಿನ ಚಾರ್ವಾಕದ ಮೋಹನ್ ಅವರಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಕೆಲ ದಿನಗಳ ಹಿಂದೆಯಷ್ಟೇ ಇದೇ ಪ್ರಕರಣದ ಮತ್ತೊಬ್ಬ ಆರೋಪಿ, ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಇಬ್ರಾಹಿಂ ಅವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಪ್ರಕರಣದ ಹಿನ್ನೆಲೆ:
ಜೂನ್ 1ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಬಳಿಕ ಮೃತ ವ್ಯಕ್ತಿ ಪೆರ್ನೆ ಮೂಲದ ಯತೀಶ್ ಗೌಡ ಎಂಬುದು ಗುರುತಿಸಲ್ಪಟ್ಟಿತ್ತು. ಅವರ ಸಹೋದರ ನಿತಿನ್ ಹಾಗೂ ಸಂಬಂಧಿಕರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹದ ಗುರುತು ಪತ್ತೆಹಚ್ಚಿದ್ದರು.
ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಕೊಲೆ ಆರೋಪದಡಿ ಯಶೋಧರ, ಮೋಹನ್ ಹಾಗೂ ಇಬ್ರಾಹಿಂ ಎಂಬ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಪ್ರಕರಣದ ಮೂವರು ಆರೋಪಿಗಳಿಗೂ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಅಪರಾಧ
Mangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್ನಲ್ಲಿರುವ ಸುರೇಂದ್ರನ್ ಅವರ ಮನೆಯಲ್ಲಿ 2020ರ ನವೆಂಬರ್ 3ರಂದು ಈ ಕೊಲೆ ನಡೆದಿತ್ತು.
ಪ್ರಕರಣದ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್, ತಾನು ಕೆಲಸ ಮಾಡಿದ ಹಣವನ್ನು ಸುರೇಂದ್ರನ್ ನೀಡಿಲ್ಲವೆಂದು ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನೊಂದಿಗೆ ಹಣ ಕೇಳಲು ಅವರ ಮನೆಗೆ ತೆರಳಿದ್ದನು. ಈ ವೇಳೆ ಸಿದ್ದಪ್ಪನ ಪ್ರೇರಣೆಯಿಂದ ಸಂತೋಷ್ ಮನೆಯೊಳಗೆ ಹೋಗಿ ಸುರೇಂದ್ರನ್ ಅವರಲ್ಲಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಸಂತೋಷ್ ಪೇಪರ್ ಕತ್ತರಿಸುವ ಬ್ಲೇಡ್ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಕೊಯ್ದಿದ್ದಾನೆ. ಅಲ್ಲದೆ, ವ್ಯಾಯಾಮಕ್ಕೆ ಬಳಸುವ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2020ರಂತೆ ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಸಂತೋಷ್ ಮತ್ತು ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿ ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು, ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಖುಲಾಸೆಗೊಳಿಸಿದ್ದಾರೆ.
ಆರೋಪಿಗೆ ವಿಧಿಸಿದ ಶಿಕ್ಷೆ:
- ಐಪಿಸಿ ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ.
- ಐಪಿಸಿ ಕಲಂ 392 (ದರೋಡೆ): ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
- ಐಪಿಸಿ ಕಲಂ 201 (ಸಾಕ್ಷ್ಯ ನಾಶ): ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಶಿಕ್ಷೆ.
ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 7,000 ರೂ. ಸರಕಾರಕ್ಕೆ ಹಾಗೂ 25,000 ರೂ.ಗಳನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.















