ಶಿಕ್ಷಣ
Ambika-ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದಲ್ಲಿ ಓಣಂ ಆಚರಣೆ; ಸಾಂಸ್ಕೃತಿಕ ವಿಚಾರಧಾರೆಗಳ ಪಸರಿಸುವಿಕೆಗೆ ಹಬ್ಬ ಅಗತ್ಯ : ಗಿರೀಶ ಭಟ್ ಕುವೆತ್ತಂಡ
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಗಿರೀಶ ಭಟ್ ಕುವೆತ್ತಂಡ ಭಾಗವಹಿಸಿ ಮಾತನಾಡಿದರು.
ಪುತ್ತೂರು: ಕೇರಳ ರಾಜ್ಯವು ತನ್ನ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ಓಣಂನಂತಹ ಹಬ್ಬಗಳ ಆಚರಣೆ ಪ್ರಮುಖ ಪಾತ್ರ ವಹಿಸಿವೆ. ಪ್ರಹ್ಲಾದನ ಮೊಮ್ಮಗನಾದ ಮಹಾಬಲಿಯನ್ನು ನೆನಪಿಸಿಕೊಳ್ಳುವ ಓಣಂ ಹಬ್ಬ ಒಂದು ವಿಶಿಷ್ಟ ಆಚರಣೆ. ನಮ್ಮ ಸಾಂಸ್ಕೃತಿಕ ವಿಚಾರಧಾರೆಗಳು ತಲೆಮಾರಿನಿಂದ ತಲೆಮಾರಿಗೆ ಹರಿದುಹೋಗುವುದಕ್ಕಾಗಿ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ಸವಣೂರಿನ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಯ ಕನ್ನಡ ಪ್ರಾಧ್ಯಾಪಕ ಗಿರೀಶ ಭಟ್ ಕುವೆತ್ತಂಡ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಲಾದ ಓಣಂ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಷ್ಣುವಿನ ದಶಾವತಾರಗಳಲ್ಲಿ ವಾಮನಾವತಾರ ವಿಶೇಷವಾದದ್ದು. ಮಹಾಬಲಿ ದುಷ್ಟನಲ್ಲ. ಆದರೆ ಇಂದ್ರಪದವಿಗೆ ಸಂಚಕಾರ ತಂದೊಡ್ಡಬಹುದಾದ ಕಾರಣದಿಂದ ಆತನನ್ನು ಮಹಾವಿಷ್ಣು ಪಾತಾಳಕ್ಕೆ ತಳ್ಳಬೇಕಾಗಿ ಬಂತು. ಆದರೂ ವಿಷ್ಣು ಆತನನ್ನು ಸಂಹರಿಸಿಲ್ಲ ಎಂಬುದು ಗಮನೀಯ. ಹಾಗೆ ಪಾತಾಳಕ್ಕೆ ತಳ್ಳಲ್ಪಟ್ಟ ಮಹಾಬಲಿ ಮರಳಿ ಭೂಮಿಗೆ ಬರುವ ದಿನವನ್ನು ಓಣಂ ಹಬ್ಬವೆಂದು ಆಚರಿಸಲಾಗುತ್ತದೆ ಎಂದು ಹಬ್ಬದ ಪೌರಾಣಿಕ ಮಹತ್ವದ ಬಗೆಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ ಮಾತನಾಡಿ ಹಬ್ಬಗಳು ನಮ್ಮ ಸಂಭ್ರಮಕ್ಕೆ ಕಾರಣವಾಗುತ್ತವೆ. ಎಲ್ಲರೂ ಒಂದೆಡೆ ಕಲೆತು ನಮ್ಮ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಇದು ಸಹಕಾರಿ ಎನಿಸುತ್ತದೆ. ನಾವು ನಮ್ಮ ಪರಂಪರೆಯಿAದ ಬಂದ ಹಬ್ಬಗಳನ್ನು ಆಚರಿಸಿದಾಗ ಮಾತ್ರ ಮುಂದಿನ ತಲೆಮಾರಿಗೆ ಈ ಹಬ್ಬಗಳ ಮಹತ್ವ ಅರ್ಥವಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಹಿಂದೂ ಪರಂಪರೆ ಉಳಿದಿರುವುದೇ ಧಾರ್ಮಿಕತೆಯ ತಳಹದಿಯಲ್ಲಿ. ಈ ದೇಶದ ಮೇಲೆ ಎಷ್ಟೇ ಆಕ್ರಮಣಗಳಾದರೂ ಹಿಂದೂ ಜೀವನ ಪದ್ಧತಿ, ಸಂಸ್ಕೃತಿ – ಸಂಸ್ಕಾರಗಳು ಉಳಿದಿದ್ದರೆ ಅದಕ್ಕೆ ನಮ್ಮ ಆಚರಣೆಗಳು, ಭಾವನೆಗಳು ಕಾರಣ. ಓಣಂ ಮೂಲತಃ ಕೇರಳದ ಹಬ್ಬವಾದರೂ ಕರ್ಣಾಟಕದಲ್ಲಿಯೂ ಆಚರಿಸಲ್ಪಡುತ್ತಿರುವುದರ ಹಿಂದೆ ಧಾರ್ಮಿಕ ಸಾಮರಸ್ಯ, ಭಾಷಾ ಸಾಮರಸ್ಯಗಳನ್ನು ಗುರುತಿಸಬಹುದು ಎಂದು ನುಡಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನ್ವಿತ್, ಕಾರ್ಯದರ್ಶಿ ಸುಜನಾ ಉಪಸ್ಥಿತರಿದ್ದರು. ಇತ್ತೀಚೆಗೆ ಆಚರಿಸಲಾದ ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಈ ಹಿಂದೆ ಅಂಬಿಕಾ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ಗಿರೀಶ್ ಭಟ್ ಕುವೆತ್ತಂಡ ಅವರನ್ನು ವಿದ್ಯಾರ್ಥಿಗಳ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿಯರಾದ ಅಪರ್ಣಾ ಪ್ರಾರ್ಥಿಸಿ, ಶ್ರೀದೇವಿ ಸ್ವಾಗತಿಸಿದರು. ವಿದ್ಯಾರ್ಥಿನಿ ಮಾನ್ಯ ವಂದಿಸಿದರು. ವಿದ್ಯಾರ್ಥಿನಿ ಆಕ್ಷಿತಾ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಣ
Puttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ
ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಪುತ್ತೂರು: ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಕಲ್ಕೂರ ಪ್ರತಿಷ್ಠಾನ(ರಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ನ 20 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ಶಾರದಾ ವಿದ್ಯಾಲಯ ಸಭಾಭವನದಲ್ಲಿ ನಡೆದ ರಾಜ್ಯೋತ್ಸವ ಸಂದೇಶ – ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪುತ್ತೂರಿನ ಸುಪ್ರಜಾ ರಾವ್ ಗೆ
ರಾಜ್ಯೋತ್ಸವ ಸಾಧಕ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಇವರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ನ ಪ್ರಾಧ್ಯಾಪಕರಾದ ಡಾ.ಪ್ರಶಾಂತ್ ರಾವ್ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಸುಮನಾ ರಾವ್ ದಂಪತಿಗಳ ಪುತ್ರಿಯಾಗಿದ್ದು, ಪ್ರಸಕ್ತ ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.
ಶಿಕ್ಷಣ
Ambika-ಅಂಬಿಕಾ ಸಿಬಿಎಸ್ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ
ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ವತಿಯಿಂದ ‘ಜ್ಞಾನ ಚಂದನ’ ಹಾಗೂ ‘ಜ್ಞಾನ ನಂದನ’ ಪುಸ್ತಕಗಳ ಆಧಾರಿತವಾಗಿ ನಡೆದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ವತಿಯಿಂದ ‘ಜ್ಞಾನ ಚಂದನ’ ಹಾಗೂ ‘ಜ್ಞಾನ ನಂದನ’ ಪುಸ್ತಕಗಳ ಆಧಾರಿತವಾಗಿ ನಡೆದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ನರಿಮೊಗರು ನಿವಾಸಿ ಎಮ್ ಅರ್ಜುನ್ ಕಾಮತ್ ಮತ್ತು ನೀತಾ ಕಾಮತ್ ಎನ್ ದಂಪತಿಯ ಪುತ್ರ 5ನೇ ತರಗತಿಯ ಎಮ್ ಅನ್ಶ್ ಕಾಮತ್ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ಕೆಮ್ಮಾಯಿ ನಿವಾಸಿ ಪ್ರಸನ್ನ ಹೆಚ್ ಎಸ್ ಮತ್ತು ಗೀತಾ ಡಿ ದಂಪತಿಯ ಪುತ್ರಿ 5ನೇ ತರಗತಿಯ ಅಕ್ಷರ ಹೆಚ್ ಪಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಇವರಿಬ್ಬರೂ ಮುಂದೆ ಪುಂಜಾಲಕಟ್ಟೆಯಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಭಾಷಣ ಹಾಗೂ ಶ್ಲೋಕ ಕಂಠಪಾಠ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾರೆ.
ಶಿಕ್ಷಣ
Philomena-ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆ
ನ.20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆದ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಸಮಾಜ ಸೇವಕರು ಮತ್ತು ಉದ್ಯಮಿಗಳಾದ ಮೈಕಲ್ ಡಿ’ ಸೋಜಾ ಮಾತನಾಡಿದರು.
ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು
ನೀಡಿದ್ದು, ದೇಶದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯಲ್ಲಿ ತನ್ನದೇ ಕೊಡುಗೆಯನ್ನು ನೀಡಿದೆ ಎಂದು ಸಮಾಜ ಸೇವಕರು ಮತ್ತು ಉದ್ಯಮಿಗಳಾದ ಮೈಕಲ್ ಡಿ’ ಸೋಜಾ ಹೇಳಿದರು.

ಅವರು ನವೆಂಬರ್ 20 ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆದ ನೂತನ ಹೆಚ್ಚುವರಿ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತ,
ರೆ. ಫಾ. ಪತ್ರವೋ ಇವರ ದೂರದರ್ಶಿ ಚಿಂತನೆಯ ಫಲವಾಗಿ ಈ ಕಾಲೇಜು ಜನ್ಮತಾಳಿದ್ದು, ಇಂದು ಮತ್ತಷ್ಟು ಮೂಲ ಸೌಕರ್ಯಗಳ ವಿಸ್ತರಣೆಯೊಂದಿಗೆ ಸಂಸ್ಥೆಯು ಇನ್ನಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಲು ಅಣಿಯಾಗಿದೆ. ಸುಸಜ್ಜಿತ ಮೂಲ ಸೌಕರ್ಯಗಳ ವಿಸ್ತರಣೆಗೆ ಕಾರಣೀಕರ್ತರಾದ ಎಲ್ಲರನ್ನೂ ಅಭಿನಂದಿಸಿ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್(CBE) ನ ಕಾರ್ಯದರ್ಶಿಗಳಾದ ರೆ. ಡಾ. ಪ್ರವೀಣ್ ಲಿಯೋ ಲಸ್ರದೋ ಮಾತನಾಡಿ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಕಳೆದ ಹಲವಾರು ದಶಕಗಳಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡಿದೆ. ಇಂದು ಬದಲಾದ ಪರಿಸ್ಥಿತಿಯಲ್ಲಿ ಮೂಲ ಸೌಕರ್ಯಗಳ ವಿಸ್ತರಣೆಯನ್ನು ಮನಗಂಡು ದಾನಿಗಳ ಸಹಾಯದಿಂದ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಉತ್ತಮ ಸೌಕರ್ಯಗಳನ್ನು ನಿರ್ಮಿಸಿದ್ದೇವೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ಯಾಥೋಲಿಕ್ ಬೋರ್ಡ್ ಆಫ್ ಎಜುಕೇಷನ್(CBE) ನ ಉಪಾಧ್ಯಕ್ಷರಾದ ಮೊನ್ಸಿಂಜೋರ್ ಮ್ಯಾಕ್ಸಿಮ್ ಎಲ್ ನೋರೋನ್ಹ ಮಾತನಾಡಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬೆಳವಣಿಗೆಗಳು ತುಂಬಾ ಸಂತೋಷವನ್ನು ನೀಡುತ್ತಿದ್ದು, ಇಂದು ವಿದ್ಯಾರ್ಥಿಗಳಿಗೆ ನೀಡಿದ ಹೆಚ್ಚುವರಿ ಸೌಲಭ್ಯಗಳು ಸಂಸ್ಥೆಯ ಬೆಳವಣಿಗೆಗೆ ಹಿಡಿದ ಕನ್ನಡಿಯಾಗಿದೆ. ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲೂ ಕಾಲೇಜು ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡಲಿ ಎಂದು ಆಶಿಸಿದರು.
ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ. ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ದಾನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಯ ಮೇಲ್ವಿಚಾರಣೆಯನ್ನು ನಿರ್ವಹಿಸಿದ ಓಸ್ವಾಡ್ಡ್ ಲೂಯಿಸ್ ಹಾಗೂ ಜೋಸೆಫ್ ಸೆರವೋರನ್ನು ಸನ್ಮಾನಿಸಲಾಯಿತು.
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಷನ್ ಲಾಸ್ರಾದೋ, ಕಾಲೇಜಿನ ರಕ್ಷಕ – ಶಿಕ್ಷಕ ಸಂಘದ ಉಪಾಧ್ಯಕ್ಷ ಅ್ಯಂಟೋನಿ ಒಲಿವೆರಾ, ಪ ಪೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಶ್ರೀ ಪ್ರಕಾಶ್ ಬಿ, ಸಂತ ಫಿಲೋಮಿನಾ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರಾದ ರೆ. ಫಾ. ಮ್ಯಾಕ್ಸಿಮ್ ಡಿ’ ಸೋಜಾ, ಮಾಯಿದೆ ದೇವುಸ್ ಚರ್ಚ್ ನ ಸಹಾಯಕ ಪ್ಯಾರಿಸ್ ಧರ್ಮ ಗುರುಗಳಾದ ರೆ.ಫಾ ಮಾರ್ವಿನ್ ಪ್ರವೀಣ್ ಲೋಬೋ ಹಾಗೂ ಚ್ಯಾರಿಟಿ ಟೀಮ್ ನ ಸದಸ್ಯರಾದ ಸ್ಟೀಫನ್ ಪಿಂಟೋ, ಓಸ್ವಾಲ್ಡ್ ರೋಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ದಾನಿಗಳು, ಗಣ್ಯರು, ಬೋಧಕ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಈ ನೂತನ ಕಟ್ಟಡದಲ್ಲಿ ವಿಸ್ತೃತ ಸಭಾಂಗಣ, ವಿಜ್ಞಾನ ಪ್ರಯೋಗಾಲಯಗಳು, ಉಪನ್ಯಾಸಕರ ಕೊಠಡಿಗಳು, ತರಗತಿ ಕೋಣೆಗಳು ಹಾಗೂ ಸುಸಜ್ಜಿತ ಶೌಚಾಲಯಗಳು ವಿಧ್ಯಾರ್ಥಿಗಳ ಉಪಯೋಗಕ್ಕೆ ಲಭ್ಯವಿದೆ.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿ, ಉಪನ್ಯಾಸಕರಾದ ಸುಮಾ ಡಿ ವಂದಿಸಿ, ಡಾ. ಆಶಾ ಸಾವಿತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.















