ಕಾರ್ಯಕ್ರಮಗಳು
Puttur-ಪುತ್ತೂರು ಕಿಲ್ಲೆ ಮೈದಾನದಲ್ಲಿ 68ನೇ ವರ್ಷದ ಶ್ರೀ ಮಹಾಗಣೇಶೋತ್ಸವ ದೇವರ ದರ್ಶನ ಬಲಿ ದೈವಗಳ ನೇಮದೊಂದಿಗೆ ಸಂಪನ್ನ – ಲಕ್ಷಾಂತರ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ – ವೈಭವದ ಶೋಭಾಯಾತ್ರೆ
PHOTO : JEETH STUDIO PUTTUR
ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ 7 ದಿನ ಪೂಜಿಸಲ್ಪಟ್ಟ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.2ರಂದು ರಾತ್ರಿ ನಡೆಯಿತು. 7 ದಿನದ ಕಾರ್ಯಕ್ರಮಗಳು ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಯಿತು.
ಪುತ್ತೂರು: ಪುತ್ತೂರು ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ 7 ದಿನ ಪೂಜಿಸಲ್ಪಟ್ಟ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.2ರಂದು ರಾತ್ರಿ ನಡೆಯಿತು. 7 ದಿನದ ಕಾರ್ಯಕ್ರಮಗಳು ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ನೇತೃತ್ವದಲ್ಲಿ ಸುಸೂತ್ರವಾಗಿ ನಡೆಯಿತು.

ಶ್ರೀ ಮಹಾಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ವಹಿಸಿದ್ದರು. ಸೆ.2ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ಮಧ್ಯಾಹ್ನ ದೇವರ ಬಲಿ ಉತ್ಸವ ನಡೆಯಿತು. ಬಳಿಕ ಯಕ್ಷ ನಂದನ ಕಲಾ ಸಂಘ, ಗೋಕುಲ ಕೊಯಿಲ ಇಲ್ಲಿನ ಮಕ್ಕಳ ಮೇಳದಿಂದ ಯಕ್ಷಗಾನ, ಮಧ್ಯಾಹ್ನ ಶರಣ್ಯ ರೈ ಮತ್ತು ಶ್ರಾವಣ್ಯ ರೈ ಅವರಿಂದ ಭರತನಾಟ್ಯ ಪ್ರದರ್ಶನ, ಬಳಿಕ ಬಾರಿಸು ಕನ್ನಡ ಡಿಂಡಿಮವದಿಂದ ಸಾಂಸ್ಕೃತಿಕ ವೈಭವ ನಡೆಯಿತು.

ಸಂಜೆ ನೆಲ್ಲಿಕಟ್ಟೆ ಮಿತ್ರ ಮಂಡಳಿಯಿಂದ ಶ್ರೀ ಗಣೇಶನ ಹಂಸರಥಕ್ಕೆ ಹೂವಿನ ಅಲಂಕಾರಕ್ಕೆ ಹೂವಿನ ಮಾಲೆಯನ್ನು ಮೆರವಣಿಗೆ ಮೂಲಕ ತಂದು ಸಮರ್ಪಣೆ ಮಾಡುವ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಉತ್ಸವ ಸರ್ವವಾದ್ಯಗಳೊಂದಿಗೆ ನಡೆದ ಬಳಿಕ ದರ್ಶನ ಬಲಿ ಉತ್ಸವ ನಡೆಯಿತು.

ಹಂಸರೂಢ ರಥದಲ್ಲಿ ವಿರಾಜಮಾನರಾಗಿರುವ ಮಹಾಗಣಪತಿಗೆ ಉತ್ಸವ ಮೂರ್ತಿಯನ್ನು ಹೊತ್ತ 6 ಬ್ರಹ್ಮವಾಹಕರು ಪ್ರದಕ್ಷಿಣೆಯೊಂದಿಗೆ ಹೆಜ್ಜೆ ಹಾಕುತ್ತಾ ದರ್ಶನ ಬಲಿ ನೆರವೇರಿಸಿದರು. ಅನಂತ ಬಳ್ಳಕುರಾಯ ಅವರು ಬ್ರಹ್ಮವಾಹಕರಾಗಿದ್ದರು. ರಾತ್ರಿ 9.10ರ ಸುಮಾರಿಗೆ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಕೋಲ ನಡೆಯಿತು. ಆ ಬಳಿಕ ಮಹಾಗಣಪತಿಯ ವೈಭವದ ಶೋಭಾಯಾತ್ರೆ ರಾತ್ರಿ ಗಂಟೆ 10.55ರ ಸುಮಾರಿಗೆ ಮೈದಾನದಿಂದ ಹೊರಟಿತು. ಶಶಾಂಕ್ ನೆಲ್ಲಿತ್ತಾಯ ಅವರು ದೈವಗಳ ಮಧ್ಯಸ್ಥರಾಗಿದ್ದರು. ಶೋಭಾಯಾತ್ರೆಗೆ ಮೊದಲು ಆಕರ್ಷಕ ಸುಡುಮದ್ದು ಪ್ರದರ್ಶನ ನಡೆಯಿತು.

ವೇದಿಕೆಯಲ್ಲಿ ಹಲವು ತಂಡಗಳ ಪ್ರದರ್ಶನ:
ಶೋಭಾಯಾತ್ರೆಯಲ್ಲಿ ಭಾಗವಹಿಸುವ ಚೆಂಡೆ, ಸರ್ವವಾದ್ಯ, ನೃತ್ಯಗಳು, ನೃತ್ಯ ಭಜನೆ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ಕುಣಿತಗಳು ಶೋಭಾಯಾತ್ರೆ ಆರಂಭದ ಮೊದಲು ನೆಲ್ಲಿಕಟ್ಟೆ ದಿ.ಸುಧಾಕರ್ ಶೆಟ್ಟಿ ವೇದಿಕೆಯಲ್ಲಿ ಪ್ರದರ್ಶನ ನೀಡಲಾಯಿತು. ತಾಲೀಮು ಮತ್ತು ನಾಸಿಕ್ ಬ್ಯಾಂಡ್ ಪ್ರದರ್ಶನ ಮೈದಾನದಲ್ಲಿ ನಡೆಯಿತು.

ಮಹಾ ಅನ್ನಸಂತರ್ಪಣೆ:
ಕಳೆದ 7 ದಿನಗಳಿಂದ ಕಿಲ್ಲೆ ಮೈದಾನದಲ್ಲಿ ನಡೆದ ಗಣೇಶೋತ್ಸವದಲ್ಲಿ ಲಕ್ಷಾಂತರ ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಶ್ರೀ ದೇವತಾ ಸಮಿತಿಯ ನೇತೃತ್ವದಲ್ಲಿ ತುಳಸಿ ಕೆಟರರ್‌ನ ಹರೀಶ್ ರಾವ್ ಅವರ ತಂಡ ನಳಪಾಕದ ಸವಿ ಉಣಬಡಿಸಿತು. ಅನ್ನಸಂತರ್ಪಣೆಯಲ್ಲಿ ಪ್ರತಿದಿನವೂ ವೈವಿಧ್ಯಮಯ ಪದಾರ್ಥ ಹಾಗೂ ಪಾಯಸವನ್ನು ಭಕ್ತರಿಗೆ ಉಣಬಡಿಸಲಾಯಿತು. ಅನ್ನಸಂತರ್ಪಣೆಗೆ ಪ್ರತ್ಯೇಕ ಸುಸಜ್ಜಿತ ವ್ಯವಸ್ಥೆಯನ್ನು ಮಾಡಿದ್ದು, ಒಟ್ಟು ವ್ಯವಸ್ಥೆ ಅಚ್ಚುಕಟ್ಟಾಗಿ ಮೂಡಿಬಂದಿತು. ಮಧ್ಯಾಹ್ನ ಆರಂಭಗೊಂಡರೆ ರಾತ್ರಿ ಎಷ್ಟು ಹೊತ್ತಾದರೂ ಬಂದ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯುತ್ತಿತ್ತು.

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ:
7 ದಿನದ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ಭಜನೆ, ಸ್ಯಾಕ್ರೋಫೋನ್ ವಾದನ, ಸಂಗೀತ ಕಛೇರಿ, ನೃತ್ಯ ವೈವಿಧ್ಯ. ಯಕ್ಷಗಾನ, ನಾಟಕ, ಗೊಂಬೆ ಕುಣಿತ ಮೊದಲಾದ ಕಾರ್ಯಕ್ರಮಗಳಿಗೆ ವೇದಿಕೆ ಸಾಕ್ಷಿಯಾಯಿತು.

ಬೃಹತ್ ಮಾಲೆ:
ನೆಲ್ಲಿಕಟ್ಟೆ ಮಿತ್ರ ವೃಂದದಿಂದ ಕಿಲ್ಲೆ ಗಣಪನಿಗೆ ಬೃಹತ್ ಮಾಲೆಯನ್ನು ಅರ್ಪಿಸಲಾಯಿತು. ಸೆ.2ರ ಸಂಜೆ ನೆಲ್ಲಿಕಟ್ಟೆಯಿಂದ ಮೆರವಣಿಗೆ ಮೂಲಕ ಕಿಲ್ಲೆ ಮೈದಾನಕ್ಕೆ ಬೃಹತ್ ಮಾಲೆಯನ್ನು ತಂದು ಮಹಾಗಣಪತಿಗೆ ಅರ್ಪಿಸಲಾಯಿತು.

ವೈಭವದ ಶೋಭಾಯಾತ್ರೆ:
ಕಿಲ್ಲೆ ಮಹಾಗಣಪತಿಯ ಶೋಭಾಯಾತ್ರೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ದೊಡ್ಡ ಭಾವಚಿತ್ರ ಹೊತ್ತ ವಾಹನ, ತಾಲೀಮು ಪ್ರದರ್ಶನ, ಗೊಂಬೆ ಕುಣಿತದ ಜೊತೆಗೆ ಚೆಂಡೆ ಸದ್ದು ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿತು. ಗಣಪತಿ ಮೂರ್ತಿಯ ಜೊತೆಗೆ ದೈವಗಳು ಸಾಗುತ್ತಿದ್ದರೆ, ಸ್ಯಾಕ್ರೋಫೋನ್ ಹಾಗೂ ತಾಸೆ ಸದ್ದು ಧಾರ್ಮಿಕ ಟಚ್ ನೀಡಿತು.

7 ದಿನದಲ್ಲಿ ಲಕ್ಷಾಂತರ ಮಂದಿಗೆ ಅನ್ನಪ್ರಸಾದ ನೀಡಲು ಬಾಣಸಿಗರಿಗೆ ಶಕ್ತಿಯಾದ ಗಣಪ
ಧಾರ್ಮಿಕ ಆಚಾರ ವಿಚಾರಗಳಿಗೆ ಸಂಬಂಧಿಸಿದಂತೆ ಪುತ್ತೂರು ಸೀಮೆಯಲ್ಲಿ ವಿಶಿಷ್ಟ ಆಚರಣೆಯಲ್ಲಿ ಅನ್ನದಾನ ಶ್ರೇಷ್ಠ. ಅದರಲ್ಲೂ ಪುತ್ತೂರು ಕಿಲ್ಲೆಮೈದಾನದಲ್ಲಿ ಶ್ರೀ ದೇವತಾಸಮಿತಿಯ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆಯುವ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವದಲ್ಲಿ ನಿತ್ಯ ಅನ್ನದಾನ ಇಲ್ಲಿ ಮಹತ್ವ ಪಡೆದಿದ್ದು, ಲಕ್ಷಾಂತರ ಮಂದಿಗೆ ಅನ್ನಪ್ರಸಾದ ನೀಡುವ ಮೂಲಕ ಅನ್ನದಾನದ ಮಹಾಪ್ರಭುವಾಗಿ ಮಹಾಗಣಪತಿ ಕಾಣಿಸಿಕೊಳ್ಳುತ್ತಾರೆ. ಈ ಅನ್ನಪ್ರಸಾದ ತಯಾರಿಕೆಯಲ್ಲಿ ತುಳಸಿ ಕ್ಯಾಟರಿಂಗ್‌ನ ಮಾಲಕ ಹರೀಶ್ ರಾವ್ ಅವರ ನೇತೃತ್ವದಲ್ಲಿ 15 ಮಂದಿಯ ಬಾಣಸಿಗರಿಂದ ನಿತ್ಯ ಸಾವಿರಾರು ಮಂದಿಗೆ ಅನ್ನಪ್ರಸಾದ ತಯಾರಿಕೆಯಲ್ಲಿ ಗಣಪತಿಯೇ ಶಕ್ತಿಯಾಗಿದೆ.

ಸೆ. 2ರ ಕೊನೆಯ ದಿನದಂದು ಸುಮಾರು 20ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಇಲ್ಲಿನ ಚೌತಿ ಆಚರಣೆಯಲ್ಲಿ ಪ್ರತಿದಿನವೂ ಮಧ್ಯಾಹ್ನದ ಮಹಾಪೂಜೆಯ ಬಳಿಕ ಪ್ರಸಾದದ ರೂಪದಲ್ಲಿ ಅನ್ನದಾನವು ಆರಂಭಿಕ ಕಾಲದಿಂದಲೂ ನಡೆದುಬಂದಿದೆ. ಸಹಸ್ರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಭಕ್ತರ ಬೇಡಿಕೆಗೆ ಕ್ಷಿಪ್ರ ಪ್ರಸಾದನಾಗಿ ಇಲ್ಲಿನ ಗಣಪ ಅಭಯ ಕರುಣಿಸುತ್ತಾನೆಯೆಂಬ ಅಚಲ ನಂಬಿಕೆಯಿಂದ ಒಳಿತನ್ನು ಕಂಡವರ ಸಂಖ್ಯೆಯೂ ವೃದ್ಧಿ ಯಾಗುತ್ತಿದೆ. ಹರೀಶ್ ರಾವ್ ಅವರ ನೇತೃತ್ವದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ಅನ್ನಪ್ರಸಾದ ತಯಾರಿಕೆ ಕಾರ್ಯ ನಡೆಯುತ್ತಿದೆ. ಇವರಲ್ಲಿ ಮೂವರು ಅಪ್ಪಕಜ್ಜಾಯ, ಪಂಚಕಜ್ಜಾಯ ತಯಾರಿಕೆ ಮಾಡುತ್ತಾರೆ. ಪ್ರತಿನಿತ್ಯ ಪಲ್ಲಪೂಜೆಯ ಮೂಲಕ ದೇವರಿಗೆ ಸಮರ್ಪಣೆಯಾದ ಬಳಿಕ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯುತ್ತದೆ. ಮಧ್ಯಾಹ್ನ ಆರಂಭಗೊಂಡ ಅನ್ನಪ್ರಸಾದ ರಾತ್ರಿಯ ತನಕವೂ ಮುಂದುವರಿಯುತ್ತದೆ.
ದಿನಕ್ಕೆ 5 ಸಾವಿರಕ್ಕೂ ಮಿಕ್ಕಿ ಮಂದಿಗೆ ಅನ್ನಪ್ರಸಾದ ಸಿದ್ದಪಡಿಸಲಾಗುತ್ತಿತ್ತು. ಭಕ್ತರು ದೇವರ ನೈವೇದ್ಯ ರೂಪದಲ್ಲಿ ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ಎಷ್ಟೇ ಹೊತ್ತಾದರೂ ಅನ್ನಪ್ರಸಾದ ಬಯಸಿ ಬಂದ ಭಕ್ತರಿಗೆ ಏನಿಲ್ಲದಿದ್ದರೂ ಅನ್ನಮತ್ತು ಪಾಯಸ ನೀಡುವ ಕಾರ್ಯ ಹಲವು ವರ್ಷಗಳಿಂದ ನಿರಂತರ ನಡೆಯುತ್ತಾ ಬಂದಿದೆ. ಎಲ್ಲೂ ಕೂಡಾ ಕಡಿಮೆ ಅಂತ ಆಗಿಲ್ಲ. ಎಷ್ಟು ಮಂದಿ ಬೇಕಾದರೂ ಬರಲಿ ಮಹಾಗಣಪತಿಯ ಆಶೀರ್ವಾದದಿಂದ ಅನ್ನಪ್ರಸಾದ ವಿತರಣೆ ನಿತ್ಯ ನಡೆಯುತ್ತಿದೆ.- ಹರೀಶ್ ರಾವ್, ಬಾಣಸಿಗರು

ವಿಗ್ರಹ ವಿಸರ್ಜನೆ
7 ದಿನಗಳ ಪರ್ಯಂತ ನಡೆದ ಶ್ರೀ ಮಹಾಗಣಪತಿಯ ಶೋಭಾಯಾತ್ರೆ ರಾತ್ರಿ ಕೋರ್ಟ್ ರಸ್ತೆಯಿಂದ ಹೊರಟು ಮುಖ್ಯ ರಸ್ತೆಯನ್ನು ಸಂಪರ್ಕಿಸಿ, ಅಲ್ಲಿಂದ ದರ್ಬೆ, ಪರ್ಲಡ್ಕ, ತಾಲೂಕು ಆಫೀಸ್ ರಸ್ತೆಯಾಗಿ ರಾಧಾಕೃಷ್ಣ ಮಂದಿರದ ಬಳಿಯಿಂದ ಬೊಳುವಾರು ಮಾರ್ಗವಾಗಿ ತೆರಳಿ ಮಂಜಲ್ಪಡು ಕೆರೆಯಲ್ಲಿ ವಿಗ್ರಹ ವಿಸರ್ಜನೆ ನಡೆಯಿತು.
ಸ್ಥಳೀಯ
Dharmasthala-ಅ. 11 ರಿಂದ 19 : ಧರ್ಮಸ್ಥಳದಲ್ಲಿ ನವರಾತ್ರಿ ವೈಭವ
ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಉಜಿರೆ: ನವರಾತ್ರಿ ಪ್ರಯುಕ್ತ ಧರ್ಮಸ್ಥಳದಲ್ಲಿ ಇದೇ 11 ರಿಂದ 19 ರ ವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಸ್ಥಾನದ ಎದುರು ಇರುವ ಪ್ರವಚನಮಂಟಪದಲ್ಲಿ ಸಂಜೆ ಆರು ಗಂಟೆಯಿಂದ ಒಂಭತ್ತು ಗಂಟೆ ವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಅ. 11: ಭಾನುವಾರ: ಕುಮಾರಿ ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಮತ್ತು ಕುಮಾರಿ ಆದ್ವಿ, ನಿಡಿಗಲ್ (ಭಕ್ತಿಸಂಗೀತ), ಅ. 12: ಸೋಮವಾರ: ಪವಿತ್ರವಿನಯ್ ಮಯ್ಯ ಅರ್ಕುಳ, ಮಂಗಳೂರು (ಸುಗಮ ಸಂಗೀತ), ಅ. 13: ಮಂಗಳವಾರ: ಕುಮಾರಿ ಮಾನ್ಸಿ, ಮೈಸೂರು (ಭಕ್ತಿಸಂಗೀತ), ಅ. 14: ಬುಧವಾರ: ಮಾಸ್ಟರ್ ಆಗಮ, ಪೆರ್ಲ, ಮಂಗಳೂರು (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 15: ಗುರುವಾರ: ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಮತ್ತು ಮಾಸ್ಟರ್ ಅಸ್ರಮೇಯ ಗುರುಪ್ರಸಾದ್, ಬೆಂಗಳೂರು (ನೃತ್ಯ, ಗಾನಲಹರಿ), ಅ. 16: ಶುಕ್ರವಾರ: ಸನತ್‌ಕುಮಾರ್, ಬೆಂಗಳೂರು (ವಯಲಿನ್ ವಾದನ), ಅ. 17: ಶನಿವಾರ: ಕುಮಾರಿ ಮಯೂರಿ ಭಟ್ ಪೊಳಲಿ, ಬಂಟ್ವಾಳ (ಕರ್ನಾಟಕ ಶಾಸ್ತ್ರೀಯ ಸಂಗೀತ), ಅ. 18: ಆದಿತ್ಯವಾರ: ಕುಮಾರಿ ಐಶ್ವರ್ಯ ಜೋಗಿ ಮತ್ತು ತಂಡ, ಕುಂದಾಪುರ (ಸುಮಧುರ ಗಾನವೈಭವ), ಅ. 19: ಸೋಮವಾರ: ಕುಮಾರಿ ಅರ್ಚಿಷಾ ರಾವ್ ಮತ್ತು ಬಳಗ, ಬೆಂಗಳೂರು (ಸಂಜೆ ಗಂಟೆ 6.30 ರಿಂದ 8.30). ಮಲ್ಲಿಕಾಮಟ್ಟಿ ಮತ್ತು ಬಳಗ, ಪೊಳಲಿ (ರಾತ್ರಿ ಗಂಟೆ 9 ರಿಂದ 11.30) ಭಕ್ತಿ ಸಂಗೀತ.
ಸ್ಥಳೀಯ
Excel-ಎಕ್ಸೆಲ್ ಗುರು ನಮನ 2026: ಸಾಮರಸ್ಯವೇ ಸಮಾಜದ ಉನ್ನತಿಗೆ ತಳಪಾಯ: ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ
ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಮಾತನಾಡಿದರು.
ಗುರುವಾಯನಕೆರೆ, ಅ.4 : “ಸಮಾಜದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಪ್ರತಿಯೊಂದು ವರ್ಗ, ಸಮುದಾಯಕ್ಕೂ ಈ ಸಮಾಜ ಆಶ್ರಯ ನೀಡಿದೆ. ಪ್ರತಿಯೊಬ್ಬರ ನಂಬಿಕೆ ಆಚರಣೆಗಳು ಬೇರೆ ಬೇರೆಯಾಗಿರುತ್ತವೆ. ಅವರವರ ನಂಬಿಕೆ ಮತ್ತು ಆಚರಣೆಗಳನ್ನು ತಿರಸ್ಕರಿಸಿದಾಗ ಸಮಾಜದಲ್ಲಿ ಘರ್ಷಣೆಗಳು ಏರ್ಪಡುತ್ತವೆ. ಪ್ರತಿಯೊಬ್ಬರನ್ನೂ ಸಾಮರಸ್ಯದಿಂದ ನೋಡುವ ಗುಣ ನಮ್ಮದಾಗಬೇಕು. ಸಾಮರಸ್ಯವೇ ಸಮಾಜದ ಉನ್ನತಿಗೆ ಅಡಿಪಾಯವಿದ್ದಂತೆ” ಎಂದು ಎಕ್ಸೆಲ್ ಗುರುವಾಯನ ಕೆರೆಯಲ್ಲಿ ನಡೆದ ಗುರು ನಮನ 2026 ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದರು.
ಸ್ವಾಮೀಜಿಯವರು ಮಾತನಾಡುತ್ತಾ ಎಕ್ಸೆಲ್ ವಿದ್ಯಾಸಂಸ್ಥೆಯು ಸುಂದರ ಪರಿಸರದಲ್ಲಿ ನಿರ್ಮಾಣಗೊಂಡಿದೆ. ಈ ವಿದ್ಯಾಸಂಸ್ಥೆಯಿಂದ ವಿದ್ಯಾರ್ಥಿಗಳ ಭವಿಷ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ಪರಸ್ಪರ ಗೌರವಿಸಿರಿ. ಈ ಸಮಾಜಕ್ಕೆ ಒಳ್ಳೆಯದನ್ನು ಬಯಸಿ. ನೀವು ಓದಿದ ವಿದ್ಯಾ ಸಂಸ್ಥೆಗೆ ಚಿರಋಣಿಯಾಗಿರಬೇಕೆಂದು, ಈ ಸಂಸ್ಥೆಯು ಸಾವಿರಾರು ಶಿಕ್ಷಕರನ್ನು ನಿರಂತರವಾಗಿ ಗೌರವಿಸುತ್ತಾ ಬಂದಿರುವುದು ನಿಜವಾಗಿಯೂ ಅತ್ಯುತ್ತಮ ಬೆಳವಣಿಗೆಯಾಗಿದೆ. ಇದು ಸುಮಂತ್ ಕುಮಾರ್ ಅವರ ಈ ನಿಸ್ವಾರ್ಥ ಸೇವೆಗೆ ಸಾಕ್ಷಿಯಾಗಿದೆ ಎಂದರು.
ಸುಬ್ರಮಣ್ಯದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ್ ನಾಯಕ್ ಇವರು ಮಾತನಾಡುತ್ತಾ ” ವಿದ್ಯಾರ್ಥಿಗಳು ಕಷ್ಟಕರ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಡಬೇಕು. ನೀವೆಲ್ಲ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮೆಲ್ಲರ ಅದೃಷ್ಟವೇ ಸರಿ. ಈ ಸಂಸ್ಥೆಯ ಅಧ್ಯಕ್ಷರಾದ ನುಮಂತ್ ಕುಮಾರ್ ಜೈನ್ ಇವರು ಉದಾರ ವ್ಯಕ್ತಿತ್ವದ ವ್ಯಕ್ತಿ. ಅವರ ಸೇವಾ ಮನೋಭಾವದಿಂದಲೇ ಈ ಶಿಕ್ಷಣ ಸಂಸ್ಥೆಯು ಎತ್ತರಕ್ಕೆ ಬೆಳೆಯುತ್ತಿದೆ. ಜಿಲ್ಲೆಯ ಯಾವುದೇ ಶೈಕ್ಷಣಿಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಂತ್ ಅವರ ಕೊಡುಗೆ ಅಪಾರವಾದದ್ದು. ಈ ಸಂಸ್ಥೆಗೆ ನನ್ನನ್ನು ಆಹ್ವಾನಿಸಿ ಸನ್ಮಾನಿಸಿದ್ದೀರಿ. ನನ್ನಲ್ಲಿ ಕೃತಾರ್ಥತೆ ಭಾವ ಮೂಡುತ್ತಿದೆ. ಎಕ್ಸೆಲ್ ವಿದ್ಯಾಸಂಸ್ಥೆಗೆ ನಾನು ಚಿರಋಣಿ” ಎಂದು ಸಂತಸ ವ್ಯಕ್ತಪಡಿಸಿದರು.
ಮೂಲ್ಕಿಯ ವಿಜಯ ಕಾಲೇಜಿನ ವಿಶ್ರಾಂತ ಪಾಚಾರ್ಯರಾದ ಡಾ .ನಾರಾಯಣ ಪೂಜಾರಿ ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರಾದ ಸಂತೋಷ್ ಕುಮಾರ್ ಕಾಪಿನಡ್ಕ ಇವರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಕೋರಿದರು.
ಎಕ್ಸೆಲ್ ವಿದ್ಯಾ ಸಂಸ್ಥೆಯ ಹಿತೈಷಿಗಳಾದ ರತ್ನರಾಜ್ ಜೈನ್ ಮತ್ತು ಪತ್ರಿಕೋದ್ಯಮಿಗಳಾದ ಸಂತೋಷ್ ಕೋಟ್ಯಾನ್ ಇವರು ಈ ಕಾರ್ಯಕ್ರಮದ ಭಾಗವಾಗಿ ಸನ್ಮಾನ ಸ್ವೀಕರಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ಅಧ್ಯಕ್ಷೀಯ ಭಾಷಣವನ್ನು ಮಾಡುತ್ತಾ “ನಮ್ಮ ಎಕ್ಸೆಲ್ ಸಂಸ್ಥೆಯ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಮಾಡುತ್ತಿದ್ದಾರೆ . ಇಲ್ಲಿ ಓದಿದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳಾಗಿ ರೂಪಗೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸುವ ಮೂಲಕ ನಮ್ಮಲ್ಲಿ ಧನ್ಯತಾಭಾವ ಮೂಡಿದೆ. ಶಿಕ್ಷಕರು ಜಗತ್ತಿನ ಪ್ರಥಮ ಪೂಜ್ಯರು . ಅಂತಹ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮ ಸೌಭಾಗ್ಯ” ಎಂದು ಹೇಳಿದರು.
ಕಾಲೇಜಿನ ಬ್ರೋಚರ್ಸ್ ಅನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಗ್ರಾಮಗಳಲ್ಲಿ ಶಿಕ್ಷಕ ವೃತ್ತಿಯನ್ನು ಮಾಡುತ್ತ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ 300 ಹೆಚ್ಚು ಶಿಕ್ಷಕರನ್ನು ಗೌರವಿಸಿದ್ದು ಅತ್ಯಂತ ವಿರಳ ಮತ್ತು ಸೃಜನಾತ್ಮಕ ಕಾರ್ಯಕ್ರಮವಾಗಿತ್ತು. ಎಲ್ಲ ಶಿಕ್ಷಕರಿಗೆ ಹಾರ , ಶಾಲು, ಪೇಟ ಮತ್ತು ಸ್ಮರಣಿಕೆ, ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಡಾ ನವೀನ್ ಕುಮಾರ್ ಮರಿಕೆ ಸ್ವಾಗತಿಸಿದರು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರಿನ ಮುಖ್ಯೋಪಾಧ್ಯಯರಾದ ಶಾಂತಿರಾಜ್ ಜೈನ್ ವಂದಿಸಿದರು.
ಉಪನ್ಯಾಸಕರಾದ ಪ್ರಸನ್ನ ಭೋಜ, ತಿಪ್ಪೇಸ್ವಾಮಿ, ಪ್ರಜ್ವಿತ್ ರೈ, ಅನನ್ಯ ಜೈನ್, ವೈಷ್ಣವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ದ್ವಿತೀಯ ಪಿಯು ವಿದ್ಯಾರ್ಥಿಗಳು ಪ್ರಾರ್ಥನೆ ಹಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಆರಂಭವನ್ನು ಒದಗಿಸಿದರು.
ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಡಾ. ಪ್ರಜ್ವಲ್, ಉಪ ಪ್ರಾಚಾರ್ಯರಾದ ರೋಹಿತ್, ಹರೀಶ್ ಕುಮಾರ್ ಗುರುವಾಯನಕೆರೆ ಟೆಕ್ನೋ ಸ್ಕೂಲಿನ ಮುಖ್ಯ ಶಿಕ್ಷಕಿ ಸುಮಿತ್ರ, ವೇಣೂರು ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಿರಾಜ್ ಜೈನ್, ವಿದ್ಯಾರ್ಥಿಗಳು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.
ಎಕ್ಸೆಲ್ ಸಿಬ್ಬಂದಿಯಿಂದ ಸಾಂಸ್ಕೃತಿಕ ವೈಭವ: ಗಿರಿಜಾ ಕಲ್ಯಾಣ ಹಾಗೂ ತಾರಕಾಸುರ ವಧೆ ಯಕ್ಷಗಾನ ಪ್ರದರ್ಶನ
ಗುರು ನಮನ ಕಾರ್ಯಕ್ರಮದ ಅಂಗವಾಗಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಎಕ್ಸೆಲ್ ಪಿಯು ಕಾಲೇಜಿನ ಸಿಬ್ಬಂದಿಯ ಜೊತೆಗೆ ಎಕ್ಸೆಲ್ ಟೆಕ್ನೋ ಸ್ಕೂಲ್ ಗುರುವಾಯನಕೆರೆ ಮತ್ತು ವೇಣೂರು ಶಾಲೆಗಳ ಸಿಬ್ಬಂದಿಯವರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರು ವಿವಿಧ ನೃತ್ಯ,ಹಾಡು, ರೂಪಕ, ಭರತನಾಟ್ಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಸರ್ವರನ್ನು ರೋಮಾಂಚನಗೊಳಿಸಿದರು. ಗಿರಿಜಾ ಕಲ್ಯಾಣ ಮತ್ತು ತಾರಕಾಸುರ ವಧೆ ಎನ್ನುವ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು.
ಸ್ಥಳೀಯ
Dharmasthala-ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ; ಶಿಬಿರಾರ್ಥಿಗಳಿಗೆ ಭಜನಾ ತರಬೇತಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅ.02, ಶುಕ್ರವಾರದಂದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಐದನೇ ದಿನದ ಅಂಗವಾಗಿ ಶಿಬಿರದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಗಾಯಕರು, ಮೈಸೂರು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಅ.02, ಶುಕ್ರವಾರದಂದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಆಯೋಜಿಸಲಾದ 28ನೇ ವರ್ಷದ ಭಜನಾ ಕಮ್ಮಟ ದ ಐದನೇ ದಿನದ ಅಂಗವಾಗಿ ಶಿಬಿರದಲ್ಲಿ ಉಪ್ಪುಂದ ರಾಜೇಶ್ ಪಡಿಯಾರ್ ಗಾಯಕರು, ಮೈಸೂರು ಇವರು ಎಲ್ಲಾ ಶಿಬಿರಾರ್ಥಿಗಳಿಗೆ ಭಜನಾ ತರಬೇತಿಯನ್ನು ನೀಡಿದರು.
ದಾಸ ಸಾಹಿತ್ಯದ ‘ಇಟ್ಹಾಂಗೆ ಇರುವೆನೋ ಹರಿಯೇ’, ಏಸು ಕಾಯಂಗಳ ಕಳೆದು’ ಹಾಗೂ ಇನ್ನಿತರ ಭಜನಾ ಕೀರ್ತನೆಗಳನ್ನು ತರಬೇತುದಾರರು ಅಭ್ಯಾಸ ಮಾಡಿಸಿದರು.
ಈ ಸಂದರ್ಭದಲ್ಲಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಜೈನ್ ಹಾಗೂ ಭಜನಾ ಕಮ್ಮಟ ಪರಿಷತ್ ನ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಉಪಸ್ಥಿತರಿದ್ದರು.
-
ಮಂಗಳೂರು9 hours agoAuto passengers-ದಕ್ಷಿಣ ಕನ್ನಡದಲ್ಲಿ ಆಟೊ ಪ್ರಯಾಣಿಕರಿಗೆ ಮತ್ತೊಂದು ದರ ಏರಿಕೆ ಶಾಕ್: ಇಲ್ಲಿದೆ ಪರಿಷ್ಕೃತ ರೇಟ್ ಕಾರ್ಡ್
-
ಅಂತರ ರಾಜ್ಯ14 hours agoಕಾಸರಗೋಡು: ಆರ್ಎಸ್ಎಸ್ ವಕ್ತಾರರ ಭಾಗವಹಿಸುವಿಕೆ ವಿರೋಧಿಸಿ ಪ್ರತಿಭಟನೆ; ಘರ್ಷಣೆಯಲ್ಲಿ ಮೂವರು ವಿದ್ಯಾರ್ಥಿಗಳಿಗೆ ಗಾಯ
-
ಮಂಗಳೂರು16 hours agoChouta-ಫಾರಂ 7 ಕೊಟ್ಟ ಮಾತ್ರಕ್ಕೆ ಮತ ಡಿಲೀಟ್ ಆಗಲ್ಲ; ಅಕ್ರಮ ಡಿಲೀಷನ್ಗೆ ದಾಖಲೆ ತೋರಿಸಿ: ಕಾಂಗ್ರೆಸ್ಗೆ ಚೌಟ ಸವಾಲು
-
ಸ್ಥಳೀಯ14 hours agoBeltangadi-ಬೆಳ್ತಂಗಡಿ: ಚಾಲಕನ ಸಮಯಪ್ರಜ್ಞೆ; ಬಸ್ನಲ್ಲಿ ಅಸ್ವಸ್ಥಗೊಂಡ ಮಹಿಳೆ ಅಪಾಯದಿಂದ ಪಾರು
-
ಅಂತರ ರಾಜ್ಯ8 hours agoBlackmail-ದೋಸೆಯಲ್ಲಿ ಸತ್ತ ಇಲಿ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ದೂರು ನೀಡಿದ್ದ ಮಹಿಳೆಯಿಂದಲೇ ₹25 ಲಕ್ಷಕ್ಕೆ ಬ್ಲ್ಯಾಕ್ಮೇಲ್..!
-
Uncategorized7 hours ago
Puttur Court retaining wall collapse : ಹತ್ತು ತಿಂಗಳ ಹಿಂದಷ್ಟೇ ಉದ್ಘಾಟನೆ; ಪುತ್ತೂರು ಹೊಸ ನ್ಯಾಯಾಲಯದ ತಡೆಗೋಡೆ ಕುಸಿತ- ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆ
-
ರಾಜಕೀಯ15 hours agoAshok Rai-ಪಕ್ಷ ಸಂಘಟನೆಗೆ ಅಶೋಕ್ ರೈ ಹೊಸ ಹೆಜ್ಜೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ಗೆ ಬೊಲೆರೋ
-
ಉದ್ಯೋಗ10 hours agoPuttur-Salesನಿಂದ Technicianವರೆಗೆ; ಪುತ್ತೂರಿನ ಶ್ರೀ ತಿರುಮಲಾ TVSನಲ್ಲಿ ಭರ್ಜರಿ Job Opening


















