ಸುಳ್ಯ
Sullia-ಸುಳ್ಯ: ಸೈಬರ್ ವಂಚನೆ; ಹಣ ದುಪ್ಪಟ್ಟು ಆಮಿಷಕ್ಕೆ ಮನೆಯ ಚಿನ್ನವೇ ಕದ್ದ ಮಹಿಳೆ
ದುಪ್ಪಟ್ಟು ಹಣ ಗಳಿಸುವ ಸುಲಭದಾಸೆಗೆ ಬಲಿಯಾದ ಗೃಹಿಣಿಯೊಬ್ಬರು, ಸೈಬರ್ ವಂಚಕರ ಮಾತಿಗೆ ಮರುಳಾಗಿ ಸ್ವಂತ ಮನೆಯವರ ಚಿನ್ನಾಭರಣಗಳನ್ನೇ ಕದ್ದು, ಅಡವಿಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡು ಇದೀಗ ಸಂಸಾರದಿಂದ ಹೊರಬಿದ್ದು ತವರಿನಲ್ಲಿ ಆಶ್ರಯ ಪಡೆದಿರುವ ಆಘಾತಕಾರಿ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ಸುಳ್ಯ: ದುಪ್ಪಟ್ಟು ಹಣ ಗಳಿಸುವ ಸುಲಭದಾಸೆಗೆ ಬಲಿಯಾದ ಗೃಹಿಣಿಯೊಬ್ಬರು, ಸೈಬರ್ ವಂಚಕರ ಮಾತಿಗೆ ಮರುಳಾಗಿ ಸ್ವಂತ ಮನೆಯವರ ಚಿನ್ನಾಭರಣಗಳನ್ನೇ ಕದ್ದು, ಅಡವಿಟ್ಟು ಲಕ್ಷಾಂತರ ರೂಪಾಯಿ ಕಳೆದುಕೊಂಡು ಇದೀಗ ಸಂಸಾರದಿಂದ ಹೊರಬಿದ್ದು ತವರಿನಲ್ಲಿ ಆಶ್ರಯ ಪಡೆದಿರುವ ಆಘಾತಕಾರಿ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ನಡೆದಿದೆ.
ವಂಚನೆಯ ಆರಂಭ
ಈ ವರ್ಷದ ಮಾರ್ಚ್ 19 ರಂದು, 30 ವರ್ಷದ ಗೃಹಿಣಿಯ ಮೊಬೈಲ್ಗೆ ಬಂದ ಒಂದು ಟೆಲಿಗ್ರಾಂ ಸಂದೇಶವೇ ಈ ಎಲ್ಲಾ ಅನಾಹುತಗಳಿಗೆ ಮೂಲವಾಯಿತು. ‘ಏರ್ ಫಝ್’ ಎಂಬ ನಕಲಿ ಕಂಪೆನಿಯು ಕಳುಹಿಸಿದ್ದ ಲಿಂಕ್ ತೆರೆದಾಗ, ಮಹಿಳೆ ವಂಚಕರ ಜಾಲಕ್ಕೆ ಮೊದಲ ಹೆಜ್ಜೆ ಇಟ್ಟಿದ್ದರು. ಹಣ ಠೇವಣಿ ಮಾಡಿದರೆ ಭಾರೀ ಕಮಿಷನ್ ನೀಡುವುದಾಗಿ ವಂಚಕರು ನಂಬಿಸಿದ್ದರು.
ಇದನ್ನು ನಂಬಿದ ಮಹಿಳೆ, ಪ್ರಾಯೋಗಿಕವಾಗಿ 11,500 ರೂ. ಠೇವಣಿ ಮಾಡಿದರು. ಕೆಲವೇ ಗಂಟೆಗಳಲ್ಲಿ ಅವರ ಖಾತೆಗೆ 21,109 ರೂ. ಜಮೆಯಾದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಆರಂಭಿಕ ಯಶಸ್ಸೇ ಅವರನ್ನು ದೊಡ್ಡ ನಷ್ಟದ ಕೂಪಕ್ಕೆ ತಳ್ಳಿತು.
ಸಂಸಾರದಲ್ಲೇ ಕಳ್ಳತನದ ಸರಣಿ!
ಹೆಚ್ಚಿನ ಕಮಿಷನ್ ಆಸೆಗೆ ಬಿದ್ದ ಮಹಿಳೆ, ಹಂತಹಂತವಾಗಿ ಲಕ್ಷಾಂತರ ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸತೊಡಗಿದರು. ಕೈಯಲ್ಲಿದ್ದ ಹಣ ಖಾಲಿಯಾದಾಗ, ಅವರ ಕಣ್ಣು ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಬಿತ್ತು. ಮನೆಯವರಿಗೆ ತಿಳಿಯದಂತೆ ಒಂದೊಂದೇ ಆಭರಣಗಳು ಮಾಯವಾಗತೊಡಗಿದವು. ಗಂಡನ ಚಿನ್ನ, ಗಂಡನ ತಂಗಿ (ಅತ್ತಿಗೆ) ಮತ್ತು ಭಾವನ ಆಭರಣಗಳು, ಕೊನೆಗೆ ತನ್ನ ಸ್ವಂತ ಒಡವೆಗಳನ್ನೂ ತೆಗೆದು ಅಡವಿಟ್ಟು ಹಣ ಪಡೆದರು. ಅಷ್ಟಕ್ಕೇ ನಿಲ್ಲಿಸದೆ, ಅತ್ತೆಯ ಬ್ಯಾಂಕ್ ಖಾತೆಯಿಂದ 69,000 ರೂ. ಹಣವನ್ನು ಕೂಡ ತೆಗೆದಿದ್ದರು.
ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವುದು ಕುಟುಂಬದವರಲ್ಲಿ ಆತಂಕ ಸೃಷ್ಟಿಸಿತು. ಕಳ್ಳತನವಾಗಿರಬಹುದೆಂದು ಭಾವಿಸಿದ ಕುಟುಂಬ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಿತು. ವಿಪರ್ಯಾಸವೆಂದರೆ, ಕಳ್ಳತನದ ದೂರು ನೀಡಲು ತೆರಳಿದ ಕುಟುಂಬದೊಂದಿಗೆ ಈ ಮಹಿಳೆಯೂ ಜೊತೆಗೂಡಿ, ಏನೂ ಅರಿಯದವರಂತೆ ನಟಿಸಿದ್ದರು.
ತನಿಖೆಯಲ್ಲಿ ಬಯಲಾದ ಕಳ್ಳಾಟ
ಪೊಲೀಸರು ತನಿಖೆ ಆರಂಭಿಸಿದಾಗ, ಮನೆಯವರ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು. ಇದೇ ವೇಳೆ, ಮಹಿಳೆಯ ತವರು ಮನೆಯಲ್ಲಿ ಅವರ ತಂಗಿಯ 8 ಪವನ್ ಚಿನ್ನಾಭರಣಗಳೂ ಕಣ್ಮರೆಯಾಗಿದ್ದು ಪ್ರಕರಣಕ್ಕೆ ಹೊಸ ತಿರುವು ನೀಡಿತು. ಅನುಮಾನಗೊಂಡು ಮಹಿಳೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಡೀ ಸತ್ಯ ಬಯಲಾಯಿತು.
ಹಣ ದುಪ್ಪಟ್ಟು ಮಾಡುವ ಆಸೆಗೆ ಬಿದ್ದು, ತಾನೇ ಎಲ್ಲಾ ಚಿನ್ನಾಭರಣಗಳನ್ನು ಕದ್ದು ಅಡವಿಟ್ಟು, ಒಟ್ಟು 11,21,863 ರೂಪಾಯಿಗಳನ್ನು ವಂಚಕರಿಗೆ ಕಟ್ಟಿರುವುದಾಗಿ ಮಹಿಳೆ ಕಣ್ಣೀರಿಡುತ್ತಾ ಒಪ್ಪಿಕೊಂಡರು. ವಂಚಕರು ಸುಮಾರು 2 ಲಕ್ಷ ರೂ. ಕಮಿಷನ್ ಕೊಟ್ಟಿದ್ದರೂ, ಅದನ್ನು ಕೂಡ ಮರುಠೇವಣಿ ಮಾಡಿ ಕಳೆದುಕೊಂಡಿರುವುದಾಗಿ ತಿಳಿಸಿದರು.
ಒಡೆದ ಸಂಸಾರ, ಕಣ್ಣೀರಲ್ಲಿ ಕೈತೊಳೆಯುತ್ತಿರುವ ಮಹಿಳೆ
ಈ ಘಟನೆಯಿಂದ ಮಹಿಳೆಯ ಸಂಸಾರದಲ್ಲಿ ಬಿರುಗಾಳಿಯೇ ಎದ್ದಿದೆ. ನಂಬಿಕೆ ದ್ರೋಹದಿಂದ ಕುಪಿತಗೊಂಡ ಪತಿ, “ಅಡವಿಟ್ಟ ಚಿನ್ನ ಮತ್ತು ಹಣವನ್ನು ಮರಳಿಸದ ಹೊರತು ಮನೆಗೆ ಕಾಲಿಡಬೇಡ” ಎಂದು ತಾಕೀತು ಮಾಡಿದ್ದಾರೆ. ಪರಿಣಾಮ, ಮಹಿಳೆ ಇದೀಗ ತನ್ನ ತವರು ಮನೆ ಸೇರಿದ್ದಾರೆ.
ತನ್ನ ತಪ್ಪಿನ ಅರಿವಾಗಿರುವ ಮಹಿಳೆ, ಇದೀಗ ಚಿನ್ನ ಬಿಡಿಸಲು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ, ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿ ದುಡಿದು ಹಣ ಮರಳಿಸುವ ಪ್ರಯತ್ನದಲ್ಲಿದ್ದಾರೆ. ಎರಡು ತಿಂಗಳ ಹಿಂದೆಯೇ ಮಂಗಳೂರಿನ ಸೆನ್ (CEN) ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಬಗ್ಗೆ ದೂರು ದಾಖಲಿಸಿದ್ದಾರೆ.
ಈ ಘಟನೆಯು ಆನ್ಲೈನ್ ವಂಚನೆಗಳ ಕ್ರೂರ ಮುಖವನ್ನು ತೆರೆದಿಟ್ಟಿದ್ದು, ಸುಲಭವಾಗಿ ಹಣ ಗಳಿಸುವ ಆಮಿಷಗಳು ಎಂತಹ ಅನಾಹುತಕ್ಕೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಕನ್ನಡಿಯಾಗಿದೆ.
ಸುಳ್ಯ
Sullia-ಸುಳ್ಯ: ಜಾನುವಾರು ಕಳ್ಳತನಕ್ಕೆ ಯತ್ನ: ಇಬ್ಬರು ಪೊಲೀಸ್ ವಶಕ್ಕೆ
ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಸುಳ್ಯ: ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಇಬ್ಬರನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದ ಘಟನೆ ನ.18ರ ಮುಂಜಾನೆ ಸುಳ್ಯ ಕಸಬಾ ಗ್ರಾಮದ ಗಾಂಧಿನಗರ ಶಾಲಾ ಮೈದಾನದ ಬಳಿ ನಡೆದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ಉದಯ ರವಿ ಅವರಿಗೆ ಮಾಹಿತಿ ಲಭಿಸಿತ್ತು. ತಕ್ಷಣ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಶಾಲಾ ಮೈದಾನದಲ್ಲಿದ್ದ ಕಂಬವೊಂದಕ್ಕೆ ಎರಡು ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಾಕಿರುವುದು ಕಂಡುಬಂದಿದೆ.
ಸ್ಥಳದಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಸುಳ್ಯ ಆಲೆಟ್ಟಿ ನಿವಾಸಿಗಳಾದ ಹಾಶಿರ್ (28) ಮತ್ತು ಸಂಶುದ್ದೀನ್ (25) ಎಂದು ತಿಳಿದುಬಂದಿದೆ.
ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸವನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ ಬಳಸಲು ಸ್ಥಳಕ್ಕೆ ತಂದಿದ್ದ ದ್ವಿಚಕ್ರ ವಾಹನ ಹಾಗೂ ಎರಡು ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 161/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಜೊತೆಗೆ 62 ಹಾಗೂ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಯ ಕಲಂ 7 ಮತ್ತು 15ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸುಳ್ಯ
Black pepper-ಕಾಳುಮೆಣಸು ದರದಲ್ಲಿ ಭರ್ಜರಿ ಏರಿಕೆ: ₹750ರ ಗಡಿ ತಲುಪಿದ ಕಪ್ಪು ಚಿನ್ನ
ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡಿದ್ದು, ನಿರಂತರವಾಗಿ ಏರಿಕೆಯಾಗುತ್ತಾ ಇದೀಗ ನ.16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಸುಳ್ಯ: ಕೃಷಿಕರ ಪಾಲಿನ ‘ಕಪ್ಪು ಚಿನ್ನ’ ಎಂದೇ ಕರೆಯಲ್ಪಡುವ ಕಾಳುಮೆಣಸಿನ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರತಿ ಕೆ.ಜಿ.ಗೆ ₹750ರ ಗಡಿಯನ್ನು ತಲುಪಿದೆ. ನಿರಂತರ ದರ ಏರಿಕೆಯಿಂದ ಕಾಳುಮೆಣಸು ಬೆಳೆಗಾರರಲ್ಲಿ ಸಂತಸ ಮೂಡಿದೆ.
ಕ್ಯಾಂಪ್ಕೋ ಮಂಗಳೂರು (ಸುಳ್ಯ ಶಾಖೆ) ದರ ಮಾಹಿತಿಯ ಪ್ರಕಾರ, ಕಳೆದ ಅಕ್ಟೋಬರ್ 19ರ ವೇಳೆಗೆ ಕಾಳುಮೆಣಸಿನ ಧಾರಣೆ ₹700ರ ಗಡಿ ದಾಟಿತ್ತು. ಅಕ್ಟೋಬರ್ 29ರ ವೇಳೆಗೆ ₹730ಕ್ಕೆ ಏರಿಕೆಯಾಗಿತ್ತು. ಬಳಿಕ ಕೊಂಚ ಇಳಿಕೆ ಕಂಡು ನವೆಂಬರ್ ತಿಂಗಳ ಆರಂಭದಲ್ಲಿ ₹710ಕ್ಕೆ ತಲುಪಿತ್ತು.
ಆದರೆ, ನವೆಂಬರ್ ಮೊದಲ ವಾರಾಂತ್ಯದಿಂದ ಮತ್ತೆ ಚೇತರಿಕೆ ಕಂಡ ಧಾರಣೆ ನಿರಂತರವಾಗಿ ಏರಿಕೆಯಾಗುತ್ತಾ ಸಾಗಿದೆ. ಇದೀಗ ನವೆಂಬರ್ 16ರ ವೇಳೆಗೆ ಪ್ರತಿ ಕೆ.ಜಿ. ಕಾಳುಮೆಣಸಿನ ಬೆಲೆ ₹750ರ ಗಡಿಯನ್ನು ತಲುಪಿರುವುದು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಇತ್ತೀಚಿನ ದಿನಗಳಲ್ಲಿ ಕೊಳೆರೋಗ, ಹಳದಿ ಎಲೆಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಬಾಧೆಗಳಿಂದ ಇಳುವರಿ ಕುಂಠಿತಗೊಳ್ಳುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಾಳುಮೆಣಸಿನ ಧಾರಣೆಯಲ್ಲಿನ ಏರಿಕೆ ಕೃಷಿಕರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಆಸರೆಯಾಗುವ ನಿರೀಕ್ಷೆಯಿದೆ.
ಸುಳ್ಯ
Areca nut-ಅಡಿಕೆ ರೇಟ್ ಜಂಪ್ : ಹೊಸ ಅಡಿಕೆಗೆ ₹360; ಒಂದೇ ದಿನದಲ್ಲಿ ₹10 ಏರಿಕೆ! ಡಬಲ್ ಚೋಲ್ ಧಾರಣೆಯಲ್ಲೂ ಹೆಚ್ಚಳ
ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ಸುಳ್ಯ, ನ.12: ಕಳೆದ ಕೆಲ ತಿಂಗಳುಗಳಿಂದ ಏರಿಕೆ ಕಾಣದೆ ನಿಸ್ತೇಜವಾಗಿದ್ದ ಅಡಿಕೆ ಮಾರುಕಟ್ಟೆಯಿಂದೆ ಕೊಂಚ ಸಮಾಧಾನಕರ ಸುದ್ದಿ ಲಭಿಸಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ಧಾರಣೆಯಲ್ಲಿ ಏರಿಕೆ ದಾಖಲಾಗಿದ್ದು, ಹೊಸ ಅಡಿಕೆಯ ಗರಿಷ್ಠ ಬೆಲೆ ಒಂದೇ ದಿನದಲ್ಲಿ ಕೆ.ಜಿ.ಗೆ ₹10 ಹೆಚ್ಚಳವಾಗಿ ₹360ಕ್ಕೆ ತಲುಪಿದೆ. ಡಬಲ್ ಚೋಲ್ ಅಡಿಕೆಯ ಧಾರಣೆಯೂ ₹560ರ ಗಡಿಗೆ ಏರಿಕೆಯಾಗಿದೆ.
ನ.11 ಮತ್ತು ನ.12ರ ಮಾರುಕಟ್ಟೆ ದರಗಳನ್ನು ಹೋಲಿಸಿದಾಗ ಹೊಸ ಅಡಿಕೆಯ ಗರಿಷ್ಠ ಧಾರಣೆ ₹350ರಿಂದ ₹360ಕ್ಕೆ ಏರಿಕೆಯಾಗಿದೆ. ಆದರೆ ಕನಿಷ್ಠ ಧಾರಣೆ ₹280ರಲ್ಲೇ ಸ್ಥಿರವಾಗಿದೆ. ಕನಿಷ್ಠ ದರದಲ್ಲಿ ಬದಲಾವಣೆಯಾಗದಿದ್ದರೂ ಗರಿಷ್ಠ ದರದಲ್ಲಿ ಕಂಡುಬಂದಿರುವ ಏರಿಕೆ ಮಾರುಕಟ್ಟೆಯಲ್ಲಿ ಚೇತರಿಕೆಯ ಮುನ್ಸೂಚನೆ ನೀಡಿದೆ.
ಡಬಲ್ ಚೋಲ್ ಅಡಿಕೆಗೂ ಬೆಲೆ ಏರಿಕೆ
ಡಬಲ್ ಚೋಲ್ ಅಡಿಕೆಯ ಮಾರುಕಟ್ಟೆಯಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ. ಹಿಂದಿನ ದಿನ ₹525ರಷ್ಟಿದ್ದ ಕನಿಷ್ಠ ಧಾರಣೆ ₹530ಕ್ಕೆ ಏರಿಕೆಯಾಗಿದ್ದರೆ, ಗರಿಷ್ಠ ಧಾರಣೆ ₹550ರಿಂದ ₹560ಕ್ಕೆ ತಲುಪಿದೆ. ಈ ಮೂಲಕ ಕನಿಷ್ಠ ದರದಲ್ಲಿ ₹5 ಹಾಗೂ ಗರಿಷ್ಠ ದರದಲ್ಲಿ ₹10ರಷ್ಟು ಹೆಚ್ಚಳ ದಾಖಲಾಗಿದೆ.
ಸಿಂಗಲ್ ಚೋಲ್ ಸೇರಿದಂತೆ ಇತರ ಅಡಿಕೆ ದರ ಸ್ಥಿರ
ಹೊಸ ಅಡಿಕೆ ಮತ್ತು ಡಬಲ್ ಚೋಲ್ ಹೊರತುಪಡಿಸಿ ಮಾರುಕಟ್ಟೆಯ ಇತರ ಪ್ರಮುಖ ಅಡಿಕೆ ವರ್ಗಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಿಂಗಲ್ ಚೋಲ್ ಅಡಿಕೆ ಕೆ.ಜಿ.ಗೆ ಕನಿಷ್ಠ ₹450 ಹಾಗೂ ಗರಿಷ್ಠ ₹480ರ ದರದಲ್ಲಿ ವಹಿವಾಟು ನಡೆಸಿದೆ.
ಬೆಳೆಗಾರರ ಕಣ್ಣು ಮುಂದಿನ ಮಾರುಕಟ್ಟೆ ದರದತ್ತ
ಇತ್ತೀಚಿನ ದಿನಗಳಲ್ಲಿ ಅಡಿಕೆ ಧಾರಣೆಯಲ್ಲಿ ಕಂಡುಬರುತ್ತಿರುವ ಏರಿಳಿತಗಳು ಬೆಳೆಗಾರರಲ್ಲಿ ಗೊಂದಲ ಮೂಡಿಸಿದ್ದವು. ಅದರಲ್ಲೂ ಉತ್ಪಾದನಾ ವೆಚ್ಚ, ಕೂಲಿ ವೆಚ್ಚ ಹಾಗೂ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಮಾರುಕಟ್ಟೆ ದರದ ನಿರೀಕ್ಷೆ ಬೆಳೆಗಾರರಲ್ಲಿದೆ.
ಇದೀಗ ಹೊಸ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯಲ್ಲಿ ದಾಖಲಾಗಿರುವ ಏರಿಕೆ ಮಾರುಕಟ್ಟೆಗೆ ಹೊಸ ಚೈತನ್ಯ ನೀಡಿದೆ. ಆದರೆ ಈ ಏರಿಕೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆಯೇ ಅಥವಾ ಮತ್ತೆ ಧಾರಣೆ ಸ್ಥಿರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯದ ಮಟ್ಟಿಗೆ ಅಡಿಕೆ ಬೆಳೆಗಾರರ ಚಿತ್ತ ಮುಂದಿನ ಮಾರುಕಟ್ಟೆ ವಹಿವಾಟಿನತ್ತ ನೆಟ್ಟಿದೆ.
-
ಬಿಗ್ ನ್ಯೂಸ್23 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಶಿಕ್ಷಣ8 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಚಿನ್ನ-ಬೆಳ್ಳಿ ದರ7 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಸ್ಥಳೀಯ7 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಸಿನೆಮಾ6 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಅಪರಾಧ7 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಅಪರಾಧ7 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಆರೋಗ್ಯ6 hours agoBantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ















