ಬಿಗ್ ನ್ಯೂಸ್
ಮಂಗಳೂರು : ಚಾಲಕನಿಲ್ಲದ ವೇಳೆ 1 ಕಿ. ಮೀ ದೂರ ಹಿಮ್ಮುಖವಾಗಿ ಚಲಿಸಿದ ರಸ್ತೆ ಬದಿ ನಿಲ್ಲಿಸಿದ ಕಂಟೈನರ್ ಲಾರಿ …! ಟೋಲ್ ಗೇಟ್”ಗೆ ಹಾನಿ – ಸೆಕ್ಯುರಿಟಿ ಗಾರ್ಡ್ ಹಾಗು ದಂಪತಿ ಪವಾಡ ಸದೃಶ ಪಾರು
ಮಂಗಳೂರು : ಎ 20 : ನಿಲ್ಲಿಸಿದ ಕಂಟೈನರ್ ಲಾರಿಯೊಂದು ಒಂದು ಕಿ.ಮೀಗೂ ಅಧಿಕ ದೂರ ಹಿಮ್ಮುಖ ಚಲಿಸಿ ಈ ವೇಳೆ ಟೋಲ್ ಗೇಟ್ ಗೆ ಗುದ್ದಿ ಹಾನಿಗೊಳಿಸಿದ ಹಾಗೂ ಲಾರಿ ಡಿಕ್ಕಿ ಹೊಡೆಯುವುದರಿಂದ ಸೆಕ್ಯುರಿಟಿ ಗಾರ್ಡ್ ಹಾಗು ದಂಪತಿ ಪವಾಡ ಸದೃಶವಾಗಿ ಪಾರಾದ ಘಟನೆ ಎ 19 ರಂದು ರಾತ್ರಿ ಉಳ್ಳಾಲದ ತಲಪಾಡಿ ಟೋಲ್ಗೇಟ್ ನಲ್ಲಿ ನಡೆದಿದೆ
ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್ ಸಾಗಣೆ ಮಾಡುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿ ಅಪಘಾತಕ್ಕೆ ಕಾರಣವಾದ ಕಂಟೈನರ್ ಲಾರಿ. ಚಾಲಕ ಜೈವೀರ್ ಸಿಂಗ್ ತಲಪಾಡಿ ಟೋಲ್ ದಾಟಿ ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ಹೆದ್ದಾರಿ ಬಳಿ ನಿಲ್ಲಿಸಿದ್ದರು
ಅವರು ಹೊಟೇಲ್ ನಲ್ಲಿ ಚಹಾ ಕುಡಿಯುತ್ತಿದ್ದಂತೆ ಲಾರಿ ತನ್ನಿಂದ ತಾನೇ ಹಿಮ್ಮುಖವಾಗಿ ಚಲಿಸಲು ಆರಂಭಿಸಿದೆ. ಈ ವೇಳೆ ಅದು ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದಿದೆ. ಹಿಂಬದಿ ಚಲಿಸಿ ಟೋಲ್ಗೇಟ್ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್, ತಡೆಗಲ್ಲಿಗೆ ಗುದ್ದಿ ನಿಂತಿದೆ.
ಈ ನಡುವೆ ಟೋಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್ ನಾರ್ಲಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ಘಟನೆಯಿಂದ ಸುಮಾರು ₹1 ಲಕ್ಷದಷ್ಟು ನಷ್ಟ ಉಂಟಾಗಿದೆ.

ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ರಂಜಾನ್ ಮಾಸವಾಗಿದ್ದ ಹಿನ್ನೆಲೆಯಲ್ಲಿ ಕೇರಳ ಕಡೆಯಿಂದ ಬರುವ ಹಾಗೂ ಹೋಗುವ ವಾಹನಗಳು ಅಷ್ಟಾಗಿ ಟೋಲ್ನಲ್ಲಿ ಇರಲಿಲ್ಲ. ಅಲ್ಲದೇ ಜನಸಂಚಾರವೂ ವಿರಳವಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ ಎಂದು ಟೋಲ್ ಪಿ.ಆರ್.ಒ ಭಾಸ್ಕರ್ ತಲಪಾಡಿ ಪ್ರತಿಕ್ರಿಯಿಸಿದ್ದಾರೆ.
ಅಂತರ ರಾಜ್ಯ
Former CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ನವದೆಹಲಿ: ಉನ್ನತ ಸರ್ಕಾರಿ ಹುದ್ದೆ, ಕೈತುಂಬಾ ಸಂಬಳ, ಕಾರು, ಬಂಗಲೆಯಂತಹ ಐಷಾರಾಮಿ ಸೌಲಭ್ಯಗಳಿದ್ದರೂ ನೆಮ್ಮದಿ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ತನಿಖಾ ದಳದ (ಸಿಬಿಐ) ಮಾಜಿ ಇನ್ಸ್ಪೆಕ್ಟರ್ ಒಬ್ಬರು ತಮ್ಮ ಪ್ರತಿಷ್ಠಿತ ಹುದ್ದೆಗೆ ರಾಜೀನಾಮೆ ನೀಡಿ ಸನ್ಯಾಸ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಅರಣ್ಯದ ಗುಹೆಗಳಲ್ಲಿ ಸರಳ ಜೀವನ ನಡೆಸುತ್ತಿರುವ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಆಧುನಿಕ ಜಗತ್ತಿನ ಸಕಲ ಸೌಕರ್ಯಗಳಿಂದ ದೂರವಾಗಿ ಗುಹೆಗಳಲ್ಲಿ ವಾಸಿಸುತ್ತಿರುವ ಮಾಜಿ ಅಧಿಕಾರಿಯು, ತಮ್ಮ ಆಧ್ಯಾತ್ಮಿಕ ಪಯಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅರಣ್ಯದ ವಾತಾವರಣದಲ್ಲಿ ಬದುಕಲು ಆರಂಭಿಸಿದ ಬಳಿಕ ಜೀವನದ ನೈಜ ಅರ್ಥ ಹಾಗೂ ನೆಮ್ಮದಿಯ ಮಹತ್ವ ಅರಿವಾಯಿತು ಎಂದು ಅವರು ಹೇಳಿದ್ದಾರೆ.
ಸಿಬಿಐ ಇನ್ಸ್ಪೆಕ್ಟರ್ ಹುದ್ದೆ ದೊರೆತ ಆರಂಭದಲ್ಲಿ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಭಾವಿಸಿದ್ದ ಅವರು, ಕಾಲಕ್ರಮೇಣ ಆ ವ್ಯವಸ್ಥೆಯೊಳಗೆ ಮಾನಸಿಕ ಒತ್ತಡ ಅನುಭವಿಸಲಾರಂಭಿಸಿದರು. ಕಾನೂನು ಪಾಲನೆಯ ಹೆಸರಿನಲ್ಲಿ ಜನರೊಂದಿಗೆ ಕಠಿಣವಾಗಿ ಹಾಗೂ ಒರಟಾಗಿ ವರ್ತಿಸಬೇಕಾದ ಪರಿಸ್ಥಿತಿ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಹಣ, ಮನೆ, ಕಾರು ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಮನಸ್ಸಿಗೆ ಬೇಕಾದ ನೆಮ್ಮದಿ ಮತ್ತು ಸ್ವಾತಂತ್ರ್ಯ ಸಿಗುತ್ತಿಲ್ಲ ಎಂಬ ಅರಿವಾದ ಬಳಿಕ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು.
ನಂತರ ಹಲವು ರಾಜ್ಯಗಳಲ್ಲಿ ಸಂಚರಿಸಿದ ಅವರು, ಕೊನೆಗೆ ಮಧ್ಯಪ್ರದೇಶದ ಓಂಕಾರೇಶ್ವರದ ಸಮೀಪ ನರ್ಮದಾ ನದಿ ತೀರಕ್ಕೆ ತಲುಪಿದರು. ಅಲ್ಲಿ ಸರಳ ಜೀವನ ಆರಂಭಿಸಿ, ಚಪ್ಪಲಿ ಇಲ್ಲದೆ, ಮಲಗಲು ಚಾಪೆಯನ್ನೂ ಬಳಸದೆ, ದೊರೆಯುವ ಆಹಾರವನ್ನು ಸೇವಿಸುತ್ತಾ ಧ್ಯಾನ ಮತ್ತು ದೇವಿಯ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.
ಬಳಿಕ ಬೆಟ್ಟದ ಮೇಲಿರುವ ದೇವಸ್ಥಾನವೊಂದರಲ್ಲಿ ಸಾಧುಗಳೊಂದಿಗೆ ಕೆಲವು ವರ್ಷಗಳನ್ನು ಕಳೆದರು. ಈ ಸಂದರ್ಭದಲ್ಲಿ ಗ್ರಾಮದ ಮಕ್ಕಳಿಗೆ ಪ್ರಕೃತಿಯೊಂದಿಗೆ ಬೆರೆಯುವ ಪಾಠವನ್ನೂ ಕಲಿಸಿದರು. ಸದ್ಯ ದಟ್ಟ ಅರಣ್ಯದ ಗುಹೆಗಳಲ್ಲಿ ವಾಸಿಸುತ್ತಿರುವ ಅವರು, ಒಲೆಯ ಮೇಲೆ ಅಡುಗೆ ಮಾಡಿಕೊಂಡು ಧ್ಯಾನದಲ್ಲಿ ಕಾಲ ಕಳೆಯುತ್ತಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಅವರ ಅಭಿಪ್ರಾಯವೇನು?
ಸಮಾಜದಲ್ಲಿನ ಭ್ರಷ್ಟಾಚಾರದ ಕುರಿತು ಮಾತನಾಡಿರುವ ಮಾಜಿ ಅಧಿಕಾರಿ, ಭ್ರಷ್ಟಾಚಾರದ ಬೀಜ ಮನೆಯಲ್ಲಿಯೇ ಬಿತ್ತನೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ನೆರೆಹೊರೆಯವರ ಶ್ರೀಮಂತಿಕೆಯೊಂದಿಗೆ ಹೋಲಿಕೆ ಮಾಡುವುದು ಮಕ್ಕಳಲ್ಲಿ ಹಣ ಮತ್ತು ಐಷಾರಾಮಿ ಜೀವನದ ಮೇಲಿನ ಅತಿಯಾದ ಆಸೆ ಬೆಳೆಸುತ್ತದೆ. ಇಂತಹ ಮನೋಭಾವದಲ್ಲಿ ಬೆಳೆಯುವ ಮಕ್ಕಳು ಮುಂದೆ ಜಿಲ್ಲಾಧಿಕಾರಿ, ವೈದ್ಯ ಅಥವಾ ಎಂಜಿನಿಯರ್ನಂತಹ ಉನ್ನತ ಸ್ಥಾನಕ್ಕೇರಿದರೂ ಸಮಾಜವನ್ನು ಶೋಷಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಮಕ್ಕಳನ್ನು ಐಎಎಸ್, ಐಪಿಎಸ್ ಅಧಿಕಾರಿಗಳನ್ನಾಗಿ ಅಥವಾ ಸನ್ಯಾಸಿಗಳನ್ನಾಗಿ ರೂಪಿಸುವುದಕ್ಕಿಂತ ಮೊದಲು ಅವರನ್ನು ಉತ್ತಮ ಮನುಷ್ಯರನ್ನಾಗಿ ಬೆಳೆಸುವುದು ಪೋಷಕರ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ.
ಕೇವಲ ಬಟ್ಟೆ ಅಥವಾ ವೇಷ ಬದಲಾಯಿಸಿಕೊಳ್ಳುವುದರಿಂದ ಸನ್ಯಾಸಿಯಾಗಲು ಸಾಧ್ಯವಿಲ್ಲ. ತಾನು ಮಾಡುವ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಹೊಂದಿರುವುದೇ ನಿಜವಾದ ಪವಿತ್ರತೆ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.
ಬಿಗ್ ನ್ಯೂಸ್
Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.
ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.
ಬಿಗ್ ನ್ಯೂಸ್
Girish Mattannavar-ಧರ್ಮಸ್ಥಳ ಪ್ರಕರಣ: ಗಿರೀಶ್ ಮಟ್ಟಣ್ಣನವರ್ಗೆ ಹೈಕೋರ್ಟ್ನಲ್ಲಿ ಹಿನ್ನಡೆ; ಎಫ್ಐಆರ್ ರದ್ದುಪಡಿಸಲು ನಿರಾಕರಣೆ
ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಸಾಕ್ಷ್ಯ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್ಐಆರ್ ಹಾಗೂ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು: ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ಹೂಳಲಾಗಿದೆ ಎಂದು ಸುಳ್ಳು ಸಾಕ್ಷ್ಯ ಸೃಷ್ಟಿಸಿ, ತಪ್ಪು ಮಾಹಿತಿ ಹರಡಿದ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಿಸಲಾಗಿರುವ ಎಫ್ಐಆರ್ ಹಾಗೂ ವಿಶೇಷ ತನಿಖಾ ತಂಡದ (SIT) ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ಗಿರೀಶ್ ಮಟ್ಟಣ್ಣನವರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಈ ಮೂಲಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್, ಎಸ್ಐಟಿ ನೀಡಿರುವ ನೋಟಿಸ್ ಹಾಗೂ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.
ಏನಿದು ಪ್ರಕರಣ?
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಮುಸುಕುಧಾರಿ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಸತ್ಯಾಸತ್ಯತೆ ಪರಿಶೀಲಿಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ, ತನಿಖೆಯ ವೇಳೆ ದೂರುದಾರ ಚಿನ್ನಯ್ಯನ ಹೇಳಿಕೆಗಳಲ್ಲಿ ಗೊಂದಲಗಳು ಕಂಡುಬಂದ ಹಿನ್ನೆಲೆಯಲ್ಲಿ, ಸುಳ್ಳು ಸಾಕ್ಷ್ಯ ಸೃಷ್ಟಿ ಮತ್ತು ನಕಲಿ ದಾಖಲೆ ತಯಾರಿಕೆಯ ಸಂಘಟಿತ ಪಿತೂರಿಯ ಆರೋಪದಡಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ, ಜಯಂತ್ ಟಿ., ವಿಠಲ ಗೌಡ ಮತ್ತು ಸುಜಾತಾ ಭಟ್ ಸೇರಿದಂತೆ ಆರು ಜನರ ವಿರುದ್ಧ ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮಟ್ಟಣ್ಣನವರ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ವೇಳೆ, ಗಿರೀಶ್ ಮಟ್ಟಣ್ಣನವರ್ ಪರ ಹಿರಿಯ ವಕೀಲ ಎಸ್. ಬಾಲನ್ ಅವರು, ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಯೇ ದೂರು ನೀಡಬೇಕಿತ್ತು; ಆದರೆ ಸರ್ಕಾರಿ ನೌಕರನಲ್ಲದ ಮುಸುಕುಧಾರಿ ಚಿನ್ನಯ್ಯ ದೂರು ನೀಡಿದ್ದಾರೆ ಎಂದು ವಾದಿಸಿ, ಅಸಂಜ್ಞೆಯ ಅಪರಾಧಕ್ಕೆ ಪೊಲೀಸರು ನೇರ ಎಫ್ಐಆರ್ ದಾಖಲಿಸಿರುವುದು ಕಾನೂನುಬಾಹಿರವಾಗಿದ್ದು, ದೂರುದಾರರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗುವಂತೆ ತಿಳಿಸಬೇಕಿತ್ತು ಎಂದರು. ಜೊತೆಗೆ, ವಿಚಾರಣೆಯ ನೆಪದಲ್ಲಿ ಅರ್ಜಿದಾರರಿಗೆ ಬೆಳಗಿನಿಂದ ರಾತ್ರಿಯವರೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ, ಎಸ್ಐಟಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿದರು.
ಮತ್ತೊಂದೆಡೆ, ಎಸ್ಐಟಿ ಪರವಾಗಿ ರಾಜ್ಯ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್ ಅವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಪೂರ್ವಾನುಮತಿ ಪಡೆದೇ ಕಾನೂನುಬದ್ಧವಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ, ತನಿಖೆಯ ಹಂತದಲ್ಲಿ ತಾಂತ್ರಿಕ ನಿರ್ಬಂಧಗಳು ಅನ್ವಯವಾಗುವುದಿಲ್ಲ; ಅವು ಆರೋಪಪಟ್ಟಿ ಸಲ್ಲಿಕೆಯಾದ ನಂತರ ಅನ್ವಯವಾಗುತ್ತವೆ. ಹಿಂದೆ ತನಿಖೆ ಸರಿಯಾಗಿ ನಡೆಯಲಿ ಎಂದು ಕೋರಿದ್ದ ಅರ್ಜಿದಾರರು, ಈಗ ತನಿಖೆ ತಮ್ಮ ಕಡೆ ತಿರುಗುತ್ತಿದ್ದಂತೆ ಎಫ್ಐಆರ್ ರದ್ದತಿಗೆ ಕೋರುತ್ತಿದ್ದಾರೆ ಎಂದು ವಾದಿಸಿದರು.
ಹೈಕೋರ್ಟ್ ಹೇಳಿದ್ದೇನು?
ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಧೀಶರು, “ಒಂದೆಡೆ ಪ್ರಕರಣದ ಸಮಗ್ರ ತನಿಖೆಯಾಗಬೇಕೆಂದು ನೀವೇ ಒತ್ತಾಯಿಸುತ್ತೀರಿ, ಮತ್ತೊಂದೆಡೆ ತನಿಖೆ ನಡೆಯುತ್ತಿರುವಾಗಲೇ ಎಫ್ಐಆರ್ ರದ್ದುಗೊಳಿಸುವಂತೆ ಕೋರುತ್ತಿದ್ದೀರಿ” ಎಂದು ಪ್ರಶ್ನಿಸಿದರು. ಜೊತೆಗೆ, ಮೂಲ ಎಫ್ಐಆರ್ ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಾಗಿದ್ದು, ತನಿಖೆಯಲ್ಲಿ ದೊರೆತ ಸಾಕ್ಷ್ಯದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ಅನುಮತಿಯೊಂದಿಗೆ ಅರ್ಜಿದಾರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ತನಿಖೆ ಇನ್ನೂ ಪ್ರಗತಿಯಲ್ಲಿರುವಾಗ ಎಫ್ಐಆರ್ ರದ್ದು ಕೋರುವುದು ಅಕಾಲಿಕ ಎಂದು ಪೀಠ ಸ್ಪಷ್ಟಪಡಿಸಿತು. ಇದೆ ವೇಳೆ, ನ್ಯಾಯಾಧೀಶರ ಕರ್ತವ್ಯವು ತಾವರೆ ಎಲೆಯ ಮೇಲಿನ ನೀರಿನಂತಿರಬೇಕು; ನೈತಿಕ ವಿಚಾರಗಳಿಂದ ಪ್ರಭಾವಿತವಾಗದೆ ಕೇವಲ ಕಾನೂನುಬದ್ಧ ದಾಖಲೆಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಶ್ರೀಶಾನಂದ ಅಭಿಪ್ರಾಯಪಟ್ಟರು.
-
ಅಪರಾಧ22 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ರಾಜಕೀಯ22 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಬಿಗ್ ನ್ಯೂಸ್21 hours agoHigh Court-Social Media ಅಕೌಂಟ್ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವ Free Licence ಇಲ್ಲ : ಬೆಳ್ತಂಗಡಿಯ ಮೋಹನ್ ಬೋಳಂಗಡಿ – ಶುಭಾ ರೈ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಎಚ್ಚರಿಕೆ
-
ನಿಧನ ವಾರ್ತೆ20 hours agoSavitri Devi-ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ನಿಧನ
-
ದಕ್ಷಿಣ ಕನ್ನಡ19 hours ago
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ
-
ಅಪರಾಧ20 hours agoMangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
-
ಮಂಗಳೂರು20 hours agoSavanuru Cooperative Society-ʻಅತ್ಯುತ್ತಮ ವಿವಿಧೋದ್ದೇಶ ಸಹಕಾರ ಸಂಘʼಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡ ‘ಆದರ್ಶ ವಿವಿಧೋದ್ದೇಶ ಸಹಕಾರ ಸಂಘ’; ಸವಣೂರು ಸೀತಾರಾಮ ರೈ ಅವರಿಗೆ ಜಿ.ಟಿ. ದೇವೇಗೌಡರಿಂದ ಪ್ರಶಸ್ತಿ ಪ್ರಧಾನ
-
ಬಿಗ್ ನ್ಯೂಸ್20 hours agoGirish Mattannavar-ಧರ್ಮಸ್ಥಳ ಪ್ರಕರಣ: ಗಿರೀಶ್ ಮಟ್ಟಣ್ಣನವರ್ಗೆ ಹೈಕೋರ್ಟ್ನಲ್ಲಿ ಹಿನ್ನಡೆ; ಎಫ್ಐಆರ್ ರದ್ದುಪಡಿಸಲು ನಿರಾಕರಣೆ















