ರಾಜಕೀಯ
S.M. Krishna-ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಕಂಡು ಮುಖ್ಯಮಂತ್ರಿಯವರೆಗೆ ಏರಿದ ಬೆಂಗಳೂರು ‘ಐಟಿ ಸಿಟಿ’ ನಿರ್ಮಾತೃ ಎಸ್.ಎಂ. ಕೃಷ್ಣ ನಡೆದು ಬಂದ ಹಾದಿ ಇಲ್ಲಿದೆ
ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರಾಗಿದ್ದ ಎಸ್. ಎಂ. ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.45ರ ಸುಮಾರಿಗೆ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರಾಗಿದ್ದ ಎಸ್. ಎಂ. ಕೃಷ್ಣ ಅವರು ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ಬೆಳಗಿನ ಜಾವ 2.45ರ ಸುಮಾರಿಗೆ ನಿಧನರಾದರು.
ಅವರಿಗೆ 93 ವರ್ಷ ವಯಸ್ಸಾಗಿತ್ತು. ಐಟಿ ಸಿಟಿ ನವ ಬೆಂಗಳೂರನ್ನು ಭಾರತದ ‘ಸಿಲಿಕಾನ್ ಸಿಟಿ’ ಯಾಗಿ ನಿರ್ಮಿಸಿದ ಕೀರ್ತಿ ಪತಾಕೆ ಹಾರಿಸಿದ ಎಸ್.ಎಂ.ಕೃಷ್ಣ ನಡೆದು ಬಂದ ಹಾದಿ
- * 1964 ಏ.29ರಂದು ಶಿವಮೊಗ್ಗ ಜಿಲ್ಲೆ ಕುಡುಮಲ್ಲಿಗೆಯ ಚನ್ನಪ್ಪಗೌಡ ಮತ್ತು ಕಮಲಾಕ್ಷಮ್ಮ ದಂಪತಿಯ ಪುತ್ರಿ ಪ್ರೇಮಾ ಅವರೊಂದಿಗೆ ವಿವಾಹ. ಮಾಳವಿಕಾ ಹಾಗೂ ಶಾಂಭವಿ ಇಬ್ಬರು ಹೆಣ್ಣು ಮಕ್ಕಳು
- * ಎಸ್.ಎಂ.ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) ಅವರು 1932 ಮೇ.1ರಂದು ಮಲ್ಲಯ್ಯ ಮತ್ತು ತಾಯಮ್ಮ ದಂಪತಿಯ ಮಗನಾಗಿ ಮದ್ದೂರು ತಾಲೂಕು ಸೋಮನಹಳ್ಳಿಯಲ್ಲಿ ಜನನ
- * ಸೋಮನಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ
- * ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಪ್ರೌಢ ಶಿಕ್ಷಣ
- * ಯುವರಾಜ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ
- * ಮಹಾರಾಜ ಕಾಲೇಜಿನಲ್ಲಿ ಕಾನೂನು ಪದವಿ ಶಿಕ್ಷಣ
- * ಅಮೆರಿಕಾದ ಡಲ್ಲಾಸ್ನ ಸೌಥರ್ನ್ ಮೆತಡಿಸ್ಟ್ ಹಾಗೂ ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಉನ್ನತ ವ್ಯಾಸಂಗ
- * 1962ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚುನಾವಣಾ ರಾಜಕೀಯ ಆರಂಭ, ಮೊದಲ ಚುನಾವಣೆಯಲ್ಲಿ ಗೆಲುವು
- * 1967 ರ ವಿಧಾನಸಭಾ ಚುನಾವಣೆಯಲ್ಲಿ ಸೋಲು
- * 1968ರ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು
- * 1971ರಲ್ಲಿ ಎಂಪಿಯಾಗಿ ಮರು ಆಯ್ಕೆ. ಈ ವೇಳೆ ಡಿ.ದೇವರಾಜ ಅರಸು ಕೃಷ್ಣ ಅವರನ್ನು ಎಂಎಲ್ಸಿ ಮಾಡಿಕೊಂಡು ಸಚಿವರನ್ನಾಗಿ ಮಾಡುತ್ತಾರೆ. ಇದರಿಂದಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ
- * 1980ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಆಯ್ಕೆಯಾಗುತ್ತಾರೆ. ಮೂರನೇ ಬಾರಿಗೆ ಎಂಪಿಯಾದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರಾಗುತ್ತಾರೆ
- * 1984ರ ಎಂಪಿ ಚುನಾವಣೆಯಲ್ಲಿ ಸಚಿವ ಕೆ.ವಿ.ಶಂಕರಗೌಡ ಅವರ ವಿರುದ್ಧ ಸೋಲು
- * 1989ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದು ಡಿಸಿಎಂ ಹಾಗೂ ಸ್ಪೀಕರ್ ಹುದ್ದೆ ಅಲಂಕರಿಸುತ್ತಾರೆ
- * 1994ರಲ್ಲಿ ಸೋಲು ಅನುಭವಿಸುತ್ತಾರೆ
- * 1996ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ
- * 1999ರಲ್ಲಿ ಗೆದ್ದು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕಾರ
- * 2004ರ ಚುನಾವಣೆಯಲ್ಲಿ ಬೆಂಗಳೂರು ಚಾಮರಾಜಪೇಟೆಯಿಂದ ಸ್ಪರ್ಧಿಸಿ ಗೆಲುವು
- * 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ
- * 2010ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡು ಡಾ.ಮನ್ಮೋಹನ್ ಸಿಂಗ್ ಸಂಪುಟದಲ್ಲಿ ಕೇಂದ್ರ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಣೆ
- * 2017ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆ. ಕೆಲ ತಿಂಗಳಲ್ಲಿ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ
- * 1982ರಲ್ಲಿ ವಿಶ್ವಸಂಸ್ಥೆಗೆ ತೆರಳಿದ ಭಾರತದ ನಿಯೋಗ ದಲ್ಲಿ ಸದಸ್ಯ
- * 1990ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಕಾಮನ್ವೆಲ್ತ್ ಸಂಸದೀಯ ವಿಚಾರ ಸಂಕಿರಣ ಪ್ರತಿನಿಧಿಯಾಗಿ ಆಯ್ಕೆಯಾದರು.
ರಾಜಕೀಯ
BJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಪುತ್ತೂರು: ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನರಸಿಂಹ ಮಾಣಿ ಅವರು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ ಮುಖಂಡರು, ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಇರುವಂತೆ ಪ್ರೇರಣೆ ನೀಡಿದರು.

ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಕುಟುಂಬದೊಂದಿಗೆ ಸಮಾಜ ನಿಲ್ಲಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಭೇಟಿಯ ವೇಳೆ ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ರತನ್ ರೈ ಕುಂಬ್ರ, ಪುತ್ತೂರು ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಯುವಮೋರ್ಚಾದ ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ವಿಶ್ವನಾಥ ಕುಲಾಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜೇಶ್ ಉಪಸ್ಥಿತರಿದ್ದರು.
ಮಂಗಳೂರು
Lakshman Sawadi-ಸಹಕಾರಿ ಕ್ಷೇತ್ರದ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ಗೆ ಹೊಸ ಶಕ್ತಿ; ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಸಚಿವ ಲಕ್ಷ್ಮಣ ಸವದಿ ಕರೆ
ಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಗ್ರಾಮೀಣ ಮಟ್ಟದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಕ್ಷದ ಮೂಲ ಬೇರುಗಳಿದ್ದಂತೆ. ಜಿಲ್ಲೆಯ ಯಾವ ಗ್ರಾಮಗಳಲ್ಲಿ ಇನ್ನೂ ಸಹಕಾರಿ ಸಂಘಗಳು ಸ್ಥಾಪನೆಯಾಗಿಲ್ಲವೋ ಅಂತಹ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡಿದರೆ, ತಕ್ಷಣವೇ ಅಧಿಕಾರಿಗಳ ಮೂಲಕ ನೋಂದಣಿ ಮಾಡಿಸಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (DCC) ಸದಸ್ಯತ್ವ ಕೊಡಿಸಲಾಗುವುದು ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದರು.
“2008ರಲ್ಲಿ ನಾನು ಸಹಕಾರ ಸಚಿವನಾಗಿದ್ದಾಗ ಕೃಷಿ ಸಾಲದ ಬಡ್ಡಿದರವನ್ನು ಶೇ.3ಕ್ಕೆ ಇಳಿಸಿದ್ದೆ. ಆದರೆ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅವಧಿಗೆ ಮುನ್ನ ಸಾಲ ಮರುಪಾವತಿಸುವವರಿಗೆ ಶೇ.3ರಷ್ಟು ಸಹಾಯಧನ ಘೋಷಿಸಿದ್ದರಿಂದ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವಂತಾಯಿತು. ಈ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಜೈನ ಅಭಿವೃದ್ಧಿ ನಿಗಮಕ್ಕೆ ಸಿಎಂ ಅನುಮೋದನೆ:
ಕಾಂಗ್ರೆಸ್ ಪಕ್ಷಕ್ಕೆ ‘ಹಸ್ತದ ಚಿಹ್ನೆ’ ಸಿಕ್ಕ ಇತಿಹಾಸವನ್ನು ಸ್ಮರಿಸಿದ ಸವದಿ, “ತುರ್ತು ಪರಿಸ್ಥಿತಿಯ ನಂತರ ಚಿಹ್ನೆಯ ವ್ಯಾಜ್ಯ ಎದುರಾದಾಗ ನಮ್ಮ ಭಾಗದ ಜೈನ ಮುನಿ ಶ್ರೀ ವಿದ್ಯಾನಂದ ಮುನಿಗಳು ಇಂದಿರಾ ಗಾಂಧಿ ಅವರಿಗೆ ಬೆಳ್ಳಿಯ ಹಸ್ತದ ಚಿಹ್ನೆ ನೀಡಿ ಆಶೀರ್ವದಿಸಿದ್ದರು. ಆ ಸಮಾಜದ ಋಣ ತೀರಿಸುವ ಉದ್ದೇಶದಿಂದ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿರುವ ಜೈನ ಸಮುದಾಯದ ಬೇಡಿಕೆಯಂತೆ, ಪ್ರತ್ಯೇಕ ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳಿಂದ ಕಡತಕ್ಕೆ ಅನುಮೋದನೆ ಪಡೆಯಲಾಗಿದೆ,” ಎಂದು ಮಾಹಿತಿ ನೀಡಿದರು.
ಸಚಿವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಗೌರವಿಸಿದರು.
ಮಾಜಿ ಸಚಿವ ಬಿ. ರಮಾನಾಥ್ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪರಿಸರಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೋ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ವಿಶ್ವಾಸ್ ದಾಸ್, ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.















