ವೈರಲ್ ನ್ಯೂಸ್
Ashok Kumar Rai | ಶಿಕ್ಷಣ ಮುಂದುವರಿಸಲಾಗದೇ ಉಡುಪಿಯಲ್ಲಿ ಸಮಾರಂಭವೊಂದರಲ್ಲಿ ಊಟದ ಬಟ್ಟಲು ಸ್ವಚ್ಚ ಮಾಡಲು ಬಂದ ಯುವಕನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡ ಪುತ್ತೂರು ಶಾಸಕ : ಶಾಸಕರ ಮನವಿಯಂತೆ ಓದು ಮುಂದುವರಿಸಲು ಒಪ್ಪಿಕೊಂಡ ಯುವಕ : ಶಿಕ್ಷಣ ಖರ್ಚು ಬರಿಸುವ ಭರವಸೆ ನೀಡಿದ ಶಾಸಕರು – ಅಶೋಕ್ ಕುಮಾರ್ ರೈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ
ಪುತ್ತೂರು: ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಎಂಜಲು ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ಜೊತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಮಾತುಕತೆ ನಡೆಸಿದ ವಿಚಾರ ಮತ್ತು ಆ ಬಾಲಕನೊಂದಿಗೆ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು ಇದೀಗ ಬಾಲಕ ಶಾಸಕರಿಗೆ ಕರೆ ಮಾಡಿ ನಾನು ಕಲಿಯುತ್ತೇನೆ , ಓದು ಮುಂದುವರೆಸುತ್ತೇನೆ ಎಂದು ತಿಳಿಸಿದ್ದು ಶಿಕ್ಷಣದ ಪೂರ್ತಿವೆಚ್ಚವನ್ನು ತಾನು ಭರಿಸುವುದಾಗಿ ಶಾಸಕರು ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕೆ ತೆರಳಿದ್ದ ಶಾಸಕರು ಅಲ್ಲಿ ಊಟ ಮಾಡಿ ಪ್ಲೇಟ್ ಇಡಲು ತೆರಳಿದಾಗ ಅಲ್ಲೋರ್ವ ಬಾಲಕ ಎಂಜಲು ಪ್ಲೇಟ್ ಸ್ವಚ್ಚ ಮಾಡುತ್ತಿದ್ದ. ಆತನನ್ನು ನೋಡಿದ ಶಾಸಕರು ಆತನ ಪರಿಚಯ ಮಾಡಿಕೊಂಡರು. ನೀನು ಕಲಿಯುವುದಕ್ಕೆ ಹೋಗುವುದಿಲ್ವ? ಕೆಲಸಕ್ಕೆ ಯಾಕೆ ಹೋಗುತ್ತಿದ್ದಿಯ? ಮನೆಯಲ್ಲಿ ಅಪ್ಪ ಅಮ್ಮ ಏನು ಮಾಡುತ್ತಾರೆ? ಮನೆಯ ಪರಿಸ್ಥಿತಿ ಹೇಗಿದೆ? ಎಂದೆಲ್ಲಾ ಆತನಲ್ಲಿ ಮಾಹಿತಿ ಪಡೆದುಕೊಂಡರು. ತನ್ನ ಮನೆಯ ವಿಚಾರವನ್ನು ಎಳೆ ಎಳೆಯಾಗಿ ಬಾಲಕ ಶಾಸಕರಲ್ಲಿ ತಿಳಿಸಿದ್ದಾನೆ.
ಬಾಲಕನ ಸಂಕಷ್ಟದ ಮಾತುಗಳನ್ನು ಕೇಳಿದ ಶಾಸಕರು ನೀನು ಕಲಿಯಬೇಕು, ಕಲಿತು ಒಂದು ಒಳ್ಳೆಯ ಉದ್ಯೋಗವನ್ನು ಪಡೆದು ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿ ಆತನ ಭುಜಕ್ಕೆ ಕೈ ಇಟ್ಟು ಫೋಟೋ ಕ್ಲಿಕ್ಕಿಸಿಕೊಂಡರು. ಬಾಲಕನೂ ಶಾಸಕರ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ.
ಫೋಟೋ ವೈರಲ್ : ಶಾಸಕರು ಬಾಲಕನ ಜೊತೆ ಪ್ಲೇಟ್ ತೊಳೆಯುವ ಜಾಗದಲ್ಲೇ ನಿಂತು ತೆಗೆದ ಫೋಟೋ ಮತ್ತು ಶಾಸಕರು ಬಾಲಕನ ಜೊತೆ ಮಾತನಾಡಿದ ವಿಚಾರ ಸಾಮಾಜಿಕ ತಾಣದಲ್ಲಿ ಭಾರೀ ವೈರಲ್ ಆಗಿದ್ದು ಮಾತ್ರವಲ್ಲದೆ ಶಾಸಕರ ಮಾನವೀಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಕರೆ ಮಾಡಿದ ಬಾಲಕ : ಮೇ. 3 ಶುಕ್ರವಾರ ಬಾಲಕ ಶಾಸಕರಿಗೆ ಕರೆ ಮಾಡಿದ್ದಾನೆ. ನಾನು ಕಲಿಯುವುದಕ್ಕೆ ಹೋಗುತ್ತೇನೆ ಎಂದು ತಿಳಿಸಿದ್ದಾನೆ. ನೀನು ಇಂಜನಿಯರಿಂಗ್ ಕಲಿಯಬೇಕು ಎಂದು ಹೇಳಿದ ಶಾಸಕರು ಅದಕ್ಕೆ ಬೇಕಾಗುವ ಎಲ್ಲಾ ಖರ್ಚು ವೆಚ್ಚಗಳನ್ನು ನಾನೇ ಭರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಬಾಲಕ ತಾನು ಬಿಕಾಂ ಪದವಿ ವ್ಯಾಸಂಗ ಮಾಡುವುದಾಗಿ ಹೇಳಿದ್ದಾನೆ. ಇಂಜನಿಯರಿಂಗ್ ಕಲಿಯಬೇಕು ಎಂದು ಶಾಸಕರು ಆಗ್ರಹಿಸಿದ್ದರೂ ಬಾಲಕನಿಗೆ ಬಿಕಾಂ ಪದವಿ ಮಾಡಲು ಇಷ್ಟವಾದ ಕಾರಣ ಅದನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ಬಾಲಕ ಶಾಸಕರಲ್ಲಿ ತಿಳಿಸಿದ್ದಾನೆ.
ಯಾರೆಂಬುದೇ ಗೊತ್ತಿಲ್ಲ…! ಶಾಸಕರು ಬಾಲಕನ ಜೊತೆ ಆಡಿದ ಮಾತು, ತೆಗೆದ ಫೋಟೋ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿದೆ, ಶಾಸಕರಿಗೆ ಬಾಲಕ ಕರೆ ಮಾಡಿದ್ದಾನೆ, ಶಾಸಕರು ನೆರವಿನ ಹಸ್ತವನ್ನು ಚಾಚಿದ್ದಾರೆ. ಆದರೆ ಈ ಬಾಲಕನ ಹೆಸರು, ಅವನ ಊರು ಯಾವುದೂ ಶಾಸಕರಿಗೆ ಗೊತ್ತಿಲ್ಲ. ಈ ಬಗ್ಗೆ ಶಾಸಕರಲ್ಲಿ ಕೇಳಿದಾಗ ಯಾರಾದರೇನು? ಎಲ್ಲಿಯವನಾದರೇನು? ಆತ ಒಬ್ಬ ತಾಯಿಗೆ ಹುಟ್ಟಿದ ಮಗು, ಅವನ ಕಷ್ಟ ಕೇಳಿ ನನ್ನ ಮನಸ್ಸಿಗೆ ನೋವಾಯಿತು. ನೋಡುವಾಗ ಸ್ಮಾರ್ಟ್ ಇದ್ದಾನೆ, ಬುದ್ದಿವಂತ ಹುಡುಗನಂತೆ ಕಾಣುತ್ತಾನೆ. ಅವನು ಕಲಿತು ಒಬ್ಬ ಉತ್ತಮ ಪ್ರಜೆಯಾಗಲಿ, ಅವನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಒಬ್ಬ ಸಂಸ್ಕಾರಯುತ ವ್ಯಕ್ತಿಯಾಗಿ ಬೆಳೆಯಲಿ.
ಯಾರಾದರೆ ನನಗೇನು ? ಅವನು ಒಳ್ಳೆಯ ವ್ಯಕ್ತಿಯಾಗಿ ಈ ಸಮಾಜದ ಸೊತ್ತಾದರೆ ಅದುವೇ ನನಗೆ ಸಂತೃಪ್ತಿ ಎಂದು ಹೇಳುತ್ತಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಬಾಲಕ ಅಕಸ್ಮಿಕವಾಗಿ ಸಿಕ್ಕಿದ. ಆತ ಮಾಡುತ್ತಿದ್ದ ಕೆಲಸದ ಬಗ್ಗೆ ಕೀಳರಿಮೆ ಇಲ್ಲ ಆದರೆ ಸಣ್ಣ ಪ್ರಾಯದಲ್ಲೇ ಈ ಕೆಲಸಕ್ಕೆ ಯಾಕೆ ಬಂದಿದ್ದಿ ಎಂದು ಆತನ ಜೊತೆ ಕೇಳಿದೆ. ಆತ ಕಷ್ಟವನ್ನು ಹಂಚಿಕೊಂಡ, ಮನಸ್ಸಿಗೆ ಬಹಳ ನೋವಾಯಿತು. ಓದು ಮುಂದುವರೆಸುವಂತೆ ಹೇಳಿದೆ, ಕಲಿಕೆಗೆ ತೊಂದರೆಯಾದರೆ ಕರೆ ಮಾಡು ಎಂದು ನಂಬರ್ ಕೊಟ್ಟೆ, ಬಾಲಕ ಕರೆ ಮಾಡಿ ಓದು ಮುಂದುವರೆಸುವುದಾಗಿ ತಿಳಿಸಿದ. ಇಂಜನಿಯರಿಂಗ್ ಮಾಡು ಎಂದು ಸೂಚಿಸಿದೆ ಆದರೆ ಅವನು ಬಿಕಾಂ ಪದವಿ ಮಾಡುವುದಾಗಿ ಹೇಳಿದ. ಆತನ ಶಿಕ್ಷಣದ ಪೂರ್ತಿ ಖರ್ಚು ವೆಚ್ಚವನ್ನು ನಾನೇ ಭರಿಸುವುದಾಗಿ ತಿಳಿಸಿದೆ – ಅಶೋಕ್ ರೈ , ಶಾಸಕರು, ಪುತ್ತೂರು
ಶಿಕ್ಷಣ
ಹವ್ಯಕ ಭಾಷಾ ಸಾಹಿತ್ಯಾಸಕ್ತರಿಗೆ ಸಿಹಿ ಸುದ್ದಿ; ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027ಕ್ಕೆ ಬರಹಗಳ ಆಹ್ವಾನ

ಪುತ್ತೂರು: ಹವ್ಯಕ ಭಾಷೆಯ ಸಾಹಿತ್ಯವನ್ನು ಬೆಳೆಸುವ ಹಾಗೂ ಹೊಸ ತಲೆಮಾರಿನ ಬರಹಗಾರರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆರಂಭಗೊಂಡಿರುವ ‘ಹವ್ಯಕ ವಿಶ್ವ’ ಡಿಜಿಟಲ್ ವೇದಿಕೆಯ ಮೊದಲ ವಾರ್ಷಿಕೋತ್ಸವದ ಅಂಗವಾಗಿ ‘ಸಂಕ್ರಾಂತಿ ಹವ್ಯಕ ಸಾಹಿತ್ಯ ಉತ್ಸವ-2027’ ಆಯೋಜಿಸಲಾಗಿದೆ. ಈ ಪ್ರಯುಕ್ತ ಹವ್ಯಕ ಭಾಷೆಯಲ್ಲಿ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾಹಿತ್ಯಾಸಕ್ತರಿಂದ ಬರಹಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕದ ಕರಾವಳಿ ಭಾಗ (ಕಾಸರಗೋಡು ಸೇರಿದಂತೆ) ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ಹವ್ಯಕ ಭಾಷೆಯ ಸಾಹಿತ್ಯಿಕ ಬೆಳವಣಿಗೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ.
ಕಥೆ, ಕವನ, ಪ್ರಬಂಧ ಹಾಗೂ ಲಘುಬರಹ ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕಥೆ ಮತ್ತು ಲಘುಬರಹ ವಿಭಾಗಗಳಲ್ಲಿ ಸ್ಪರ್ಧಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಕವನ ವಿಭಾಗಕ್ಕೆ ‘ಹಳ್ಳಿ ಮನೆಯೋ/ಬದುಕೋ, ಪೇಟೆ ಮನೆಯೋ/ಬದುಕೋ’ ಎಂಬ ವಿಷಯ ನೀಡಲಾಗಿದೆ. ಪ್ರಬಂಧ ವಿಭಾಗದಲ್ಲಿ ‘ಹವ್ಯಕ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಯುವ ಪೀಳಿಗೆಯ ಜವಾಬ್ದಾರಿ’ ಎಂಬ ವಿಷಯದ ಕುರಿತು ಬರೆಯಬೇಕಾಗಿದೆ.
ಪ್ರತಿ ವಿಭಾಗದಲ್ಲಿ ಆಯ್ಕೆಯಾಗುವ ಬರಹಗಳಿಗೆ ಪ್ರಥಮ ಬಹುಮಾನವಾಗಿ 3,000 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ಮತ್ತು ದ್ವಿತೀಯ ಬಹುಮಾನವಾಗಿ 1,500 ರೂ. ನಗದು, ಫಲಕ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ.
ಸ್ಪರ್ಧೆಗೆ ಸಲ್ಲಿಸುವ ಬರಹಗಳು ಕಡ್ಡಾಯವಾಗಿ ಹವ್ಯಕ ಭಾಷೆಯಲ್ಲಿರಬೇಕು. ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಬರಹಗಳನ್ನು ಯೂನಿಕೋಡ್ ಅಥವಾ ನುಡಿ ಫಾಂಟ್ನಲ್ಲಿ ಸಿದ್ಧಪಡಿಸಿ ವರ್ಡ್, ಪಿಡಿಎಫ್ ರೂಪದಲ್ಲಿ ಅಥವಾ ಕಾಗದದಲ್ಲಿ ಬರೆದು ಸ್ಕ್ಯಾನ್ ಮಾಡಿ ಕಳುಹಿಸಬಹುದು.
ಬರಹಗಳನ್ನು ಕಳುಹಿಸಲು 2026ರ ಡಿಸೆಂಬರ್ 1 ಕೊನೆಯ ದಿನವಾಗಿದ್ದು, ಸ್ಪರ್ಧೆಯ ಫಲಿತಾಂಶವನ್ನು 2027ರ ಜನವರಿ 14ರ ಸಂಕ್ರಾಂತಿ ದಿನ ಪ್ರಕಟಿಸಲಾಗುವುದು.
ಆಸಕ್ತರು ತಮ್ಮ ಬರಹಗಳನ್ನು editor@havyakavishwa.com ಅಥವಾ havyakavishwa@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ವಾಟ್ಸ್ಆ್ಯಪ್ ಮೂಲಕವೂ +91 6360604365 ಸಂಖ್ಯೆಗೆ ಕಳುಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ havyakavishwa.com ವೆಬ್ಸೈಟ್ ಸಂಪರ್ಕಿಸಬಹುದು ಎಂದು ಹವ್ಯಕ ವಿಶ್ವ ಬಳಗದ ಪರವಾಗಿ ಕೃಷ್ಣ ಕಿಶೋರ್ ಯೇನಂಕೂಡ್ಲು ತಿಳಿಸಿದ್ದಾರೆ.
ಸ್ಥಳೀಯ
Reels-ರೀಲ್ಸ್ಗಾಗಿ ಮಗುವಿನ ಜೀವದ ಜೊತೆ ಆಟ? ಅಲೆಗಳ ನಡುವೆ ಸಿಲುಕಿದ ಪುಟ್ಟ ಮಗು; ಸಾರ್ವಜನಿಕರೊಬ್ಬರಿಂದ ರಕ್ಷಣೆ..!
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಚಿತ್ರೀಕರಿಸುವುದರಲ್ಲಿ ದಂಪತಿಯೊಬ್ಬರು ಮಗ್ನರಾಗಿದ್ದ ವೇಳೆ ಅವರ ಪುಟ್ಟ ಮಗು ಸಮುದ್ರದ ಅಲೆಗಳ ನಡುವೆ ಸಿಲುಕಿ ಪರದಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಅಪಾಯವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಧಾವಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಚಿತ್ರೀಕರಿಸುವುದರಲ್ಲಿ ದಂಪತಿಯೊಬ್ಬರು ಮಗ್ನರಾಗಿದ್ದ ವೇಳೆ ಅವರ ಪುಟ್ಟ ಮಗು ಸಮುದ್ರದ ಅಲೆಗಳ ನಡುವೆ ಸಿಲುಕಿ ಪರದಾಡಿದ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಗುವಿನ ಅಪಾಯವನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಧಾವಿಸಿ ಅದನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ಘಟನೆ ಪೋಷಕರ ನಿರ್ಲಕ್ಷ್ಯದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ದಂಪತಿ ಮೊಬೈಲ್ ಫೋನ್ ಅಥವಾ ಸೆಲ್ಫಿ ಸ್ಟಿಕ್ ಬಳಸಿ ಕಡಲತೀರದಲ್ಲಿ ರೀಲ್ಸ್ ಚಿತ್ರೀಕರಿಸುತ್ತಿರುವುದು ಕಾಣಿಸುತ್ತದೆ. ನೀರಿನ ಸಮೀಪ ನಡೆಯುವಾಗ ಮಹಿಳೆ ಮಗುವಿನ ಕೈ ಹಿಡಿದಿರುತ್ತಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಮಗು ಜಾರಿ ಮರಳಿನ ಮೇಲೆ ಬೀಳುತ್ತದೆ. ಈ ವೇಳೆ ಸಮುದ್ರದ ಅಲೆಗಳು ಮಗುವನ್ನು ಅತ್ತಿತ್ತ ತಳ್ಳಲಾರಂಭಿಸುತ್ತವೆ.
ಮಗು ಅಪಾಯದಲ್ಲಿರುವುದನ್ನು ಗಮನಿಸಿದರೂ ದಂಪತಿ ಚಿತ್ರೀಕರಣದಲ್ಲೇ ತಲ್ಲೀನರಾಗಿರುವಂತೆ ವಿಡಿಯೊದಲ್ಲಿ ಕಾಣಿಸುತ್ತದೆ. ಮಹಿಳೆ ಕ್ಯಾಮೆರಾ ಮುಂದೆ ಪೋಸ್ ನೀಡುತ್ತಿದ್ದರೆ, ಪುರುಷ ಚಿತ್ರೀಕರಣ ಮುಂದುವರಿಸುತ್ತಾನೆ. ಈ ನಡುವೆ ಮಗು ಅಲೆಗಳ ಹೊಡೆತಕ್ಕೆ ಸಿಲುಕಿ ಪರದಾಡುತ್ತದೆ. ಕೊನೆಗೆ ಪರಿಸ್ಥಿತಿಯನ್ನು ಗಮನಿಸಿದ ಸಾರ್ವಜನಿಕರೊಬ್ಬರು ತಕ್ಷಣ ಮಧ್ಯಪ್ರವೇಶಿಸಿ ಮಗುವನ್ನು ನೀರಿನಿಂದ ಹೊರತರುತ್ತಾರೆ.
‘ರೀಲ್ಸ್ಗಾಗಿ ಮಕ್ಕಳ ಸುರಕ್ಷತೆಯನ್ನೂ ಮರೆಯುವರೇ?’
ಎಕ್ಸ್ (X) ಬಳಕೆದಾರರಾದ ಮರಿಯಮ್ ಎಂಬುವವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಾವು ಪತಿಯೊಂದಿಗೆ ಕಡಲತೀರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ದಂಪತಿ ರೀಲ್ಸ್ ಚಿತ್ರೀಕರಣದಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ತಮ್ಮ ಮಗಳು ಎದುರಿಸುತ್ತಿದ್ದ ಅಪಾಯವನ್ನೇ ಗಮನಿಸಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ್ದರಿಂದ ಮಗು ಅಪಾಯದಿಂದ ಪಾರಾಯಿತು ಎಂದೂ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಗಳಿಸುವ ಧಾವಂತದ ಬಗ್ಗೆ ಪ್ರಶ್ನಿಸಿರುವ ಮರಿಯಮ್, ರೀಲ್ಸ್ ಮಾಡುವುದು ಅಷ್ಟೊಂದು ಮುಖ್ಯವೇ? ಅದಕ್ಕಾಗಿ ಜನರು ತಮ್ಮ ಸ್ವಂತ ಮಕ್ಕಳ ಸುರಕ್ಷತೆಯನ್ನೂ ನಿರ್ಲಕ್ಷಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಘಟನೆಯ ಸತ್ಯಾಸತ್ಯತೆ ಬಗ್ಗೆ ಚರ್ಚೆ
ಮಂಗಳವಾರ ಸಂಜೆಯಿಂದ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದ್ದು, ಘಟನೆ ನಡೆದ ನಿಖರ ಸ್ಥಳ ಮತ್ತು ಸಮಯದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿಗಳ ಗುರುತನ್ನೂ ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ.
ವಿಡಿಯೊ ಕುರಿತು ಪ್ರತಿಕ್ರಿಯಿಸಿರುವ ಅನೇಕ ಬಳಕೆದಾರರು, ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಸಮುದ್ರದ ಅಲೆಗಳ ಸಮೀಪ ಮಕ್ಕಳ ಮೇಲೆ ಪೋಷಕರು ನಿರಂತರ ನಿಗಾ ಇರಿಸುವ ಅಗತ್ಯವನ್ನು ಈ ಘಟನೆ ನೆನಪಿಸಿದೆ.
ಇನ್ನೊಂದೆಡೆ, ವಿಡಿಯೊ ನಕಲಿಯಾಗಿರಬಹುದು ಅಥವಾ ವೈರಲ್ ಆಗುವ ಉದ್ದೇಶದಿಂದಲೇ ಯೋಜಿತವಾಗಿ ಚಿತ್ರೀಕರಿಸಿರಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಆದರೆ, ಈ ವಾದಗಳಿಗೆ ಯಾವುದೇ ಸ್ವತಂತ್ರ ದೃಢೀಕರಣ ಲಭ್ಯವಿಲ್ಲ. ಹೀಗಾಗಿ, ವಿಡಿಯೊದಲ್ಲಿನ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.
ವೈರಲ್ ನ್ಯೂಸ್
ಸಿಎಂ ಪುಟದಲ್ಲಿ ಮೊಳಗಿದ ಪುತ್ತೂರಿನ ಕಂಠ – ತುಳುನಾಡಿನ ಸಂಸ್ಕೃತಿ – ಭಾಷಾ ಸೊಗಡಿಗೆ ಧ್ವನಿಯಾದ ದಿವ್ಯಶ್ರೀ ರೈ ವಜ್ರದುಂಬಿ
ಪುತ್ತೂರು: ತುಳುವಿಗೆ ಕರ್ನಾಟಕದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ ದೊರೆತ ಸಂಭ್ರಮದ ನಡುವೆಯೇ, ತುಳುನಾಡಿನ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಸೊಬಗನ್ನು ಪರಿಚಯಿಸುವ ವಿಡಿಯೋವೊಂದಕ್ಕೆ ಪುತ್ತೂರಿನ ಕುಂಬ್ರದ ದಿವ್ಯಶ್ರೀ ರೈ ವಜ್ರದುಂಬಿ ಅವರು ನೀಡಿರುವ ಹಿನ್ನಲೆ ಧ್ವನಿ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.
ಸೆ.18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳುವನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಇನ್ಸ್ಟಾಗ್ರಾಂ ಪುಟದಲ್ಲಿ ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಆಚಾರ ವಿಚಾರವನ್ನು ಬಿಂಬಿಸುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಕಂಠಸಿರಿ ಹಿನ್ನಲೆ ಧ್ವನಿಯಾಗಿತ್ತು.
ವಿಡಿಯೋದಲ್ಲಿ ತುಳುನಾಡಿನ ಪ್ರಕೃತಿ ಸೌಂದರ್ಯ, ಸಾಹಿತ್ಯ , ಸಂಸ್ಕೃತಿ, ಸಂಪ್ರದಾಯ, ಬದುಕಿನ ವೈವಿಧ್ಯ ಹಾಗೂ ತುಳು ಭಾಷೆಯ ಸೊಗಡನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದ್ದು, ಅದಕ್ಕೆ ದಿವ್ಯಶ್ರೀ ಅವರ ಧ್ವನಿ ಮತ್ತಷ್ಟು ಜೀವ ತುಂಬಿದೆ. ಮಾತುಗಳನ್ನು ಕೇವಲ ಕೇಳಿಸುವುದಕ್ಕಿಂತ, ಅವುಗಳ ಭಾವವನ್ನು ಕೇಳುಗರ ಮನಸ್ಸಿಗೆ ತಲುಪಿಸುವ ರೀತಿಯ ಅವರ ಧ್ವನಿ ನಿರೂಪಣೆ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.
ಮುಖ್ಯಮಂತ್ರಿಗಳ ಅಧಿಕೃತ ಪುಟದಲ್ಲಿ ಪ್ರಸಾರವಾದ ಈ ವಿಡಿಯೋಗೆ ಅಲ್ಪಾವಧಿಯಲ್ಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಎರಡು ದಿನಗಳಲ್ಲಿ ಸುಮಾರು 5 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ತುಳುವಿನ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ಕರಾವಳಿಯ ಜನರ ನಡುವೆ ಈ ವಿಡಿಯೋ ವಿಶೇಷ ಗಮನ ಸೆಳೆದಿದ್ದು, ದಿವ್ಯಶ್ರೀ ಅವರ ಕಂಠಸಿರಿಯೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ನಿರೂಪಕಿ ಹಾಗೂ ವಾಯ್ಸ್ಓವರ್ ಆರ್ಟಿಸ್ಟ್ ಆಗಿರುವ ದಿವ್ಯಶ್ರೀ, ತಮ್ಮ ಧ್ವನಿಯ ಏರಿಳಿತ, ಉಚ್ಚಾರಣೆಯ ಸ್ಪಷ್ಟತೆ ಹಾಗೂ ಭಾವಪೂರ್ಣ ನಿರೂಪಣೆಯ ಮೂಲಕ ತುಳುನಾಡಿನ ಮಣ್ಣಿನ ಸೊಗಡನ್ನು ಧ್ವನಿಯಲ್ಲೇ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತುಳು ಭಾಷೆಯ ಬಗ್ಗೆ ಹೆಮ್ಮೆ, ಕರಾವಳಿಯ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ವಿಡಿಯೋದಲ್ಲಿನ ದೃಶ್ಯಗಳಿಗೆ ಹೊಂದಿಕೊಳ್ಳುವ ಧ್ವನಿ ನಿರೂಪಣೆ ಅವರ ವಾಯ್ಸ್ಓವರ್ನ ವಿಶೇಷತೆಯಾಗಿದೆ.
ಪ್ರಸ್ತುತ ಪುತ್ತೂರಿನ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಶ್ರೀ, ಇದಕ್ಕೂ ಮೊದಲು ಹಲವು ಸುದ್ದಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪತ್ರಿಕೋದ್ಯಮದ ಅನುಭವದ ಜತೆಗೆ ಡಾಕ್ಯುಮೆಂಟರಿ, ವಿಶೇಷ ವರದಿ ಹಾಗೂ ಜಾಹೀರಾತುಗಳಿಗೆ ಧ್ವನಿ ನೀಡಿರುವ ಅವರು ವಾಯ್ಸ್ಓವರ್ ಕ್ಷೇತ್ರದಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. “ನಿಖರ ನ್ಯೂಸ್”ನ ಹಲವಾರು ವಿಡಿಯೋಗಳಲ್ಲೂ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.
2023ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ ದಿವ್ಯಶ್ರೀ, ಅಧ್ಯಯನ ಹಾಗೂ ವೃತ್ತಿ ಎರಡೂ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅರಿಯಡ್ಕ ಗ್ರಾಮದ ತ್ಯಾಗರಾಜನಗರ ನಿವಾಸಿ ವಿಠಲ ರೈ ಹಾಗೂ ಶಾಲಿನಿ ರೈ ದಂಪತಿಯ ಪುತ್ರಿಯಾಗಿರುವ ದಿವ್ಯಶ್ರೀ ಅವರ ವೃತ್ತಿ ಬದುಕಿನ ಹೆಜ್ಜೆಗಳಿಗೆ ಸಹೋದರಿ ಮಧುಶ್ರೀ ರೈ ಅವರೂ ಪ್ರೋತ್ಸಾಹ ನೀಡುತ್ತಿದ್ದಾರೆ.
ತುಳುವಿಗೆ ಅಧಿಕೃತ ಮಾನ್ಯತೆ ದೊರೆತ ಸಂಭ್ರಮದ ಕ್ಷಣದಲ್ಲಿ, ತುಳುನಾಡಿನ ಕಥೆಯನ್ನು ತಮ್ಮ ಕಂಠದ ಮೂಲಕ ಸಾವಿರಾರು ಜನರಿಗೆ ತಲುಪಿಸಿದ ದಿವ್ಯಶ್ರೀ ರೈ ವಜ್ರದುಂಬಿ ಅವರ ಧ್ವನಿ ಈಗ ಪುತ್ತೂರಿನಿಂದ ತುಳುನಾಡಿನಾಚೆಗೂ ಕೇಳಿಸುತ್ತಿದೆ.
-
ಅಪರಾಧ11 hours agoMangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
-
ಬಿಗ್ ನ್ಯೂಸ್9 hours agoBantwal-ಬಂಟ್ವಾಳ: ತಂದೆ ಗದರಿಸಿದ್ದಕ್ಕೆ ಮನೆ ಬಿಟ್ಟ ಬ್ಯಾಂಕ್ ಉದ್ಯೋಗಿ ಯುವತಿ ನಾಪತ್ತೆ..!
-
ಸ್ಥಳೀಯ9 hours agoBank-ಚಿನ್ನದ ಬೆಲೆ ಕುಸಿತದ ಎಫೆಕ್ಟ್: ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ಗಳಿಂದ ಶಾಕ್; ಒಡವೆ ಹರಾಜಿನ ಎಚ್ಚರಿಕೆ..!
-
ಮಂಗಳೂರು9 hours agoPugasarum-ಅಡಕೆ, ವೀಳ್ಯದೆಲೆಯ ‘ಪೂಗಸಾರಂ’ನಿಂದ ಕ್ಯಾನ್ಸರ್ ಬೆಳವಣಿಗೆಗೆ ಕಡಿವಾಣ? ಮಂಗಳೂರಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಮಹತ್ವದ ಅಂಶ ಪತ್ತೆ..!
-
ಅಂತರ ರಾಜ್ಯ10 hours agoFIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್ಫ್ಲುಯೆನ್ಸರ್ ವಹಿದಾ ದೂರು – ಎಫ್ಐಆರ್ ದಾಖಲು..!
-
ಸ್ಥಳೀಯ10 hours agoSubrahmanya-ಸುಬ್ರಹ್ಮಣ್ಯ: ಮನೆಗೆ ರಾತ್ರಿ ನಕ್ಸಲರ ಭೇಟಿ ಪ್ರಕರಣ: ಮಾಜಿ ನಕ್ಸಲರಾದ ರವೀಂದ್ರ, ಸುಂದರಿ, ದಿಶಾರಿಂದ ಸ್ಥಳ ಮಹಜರು
-
ಮಂಗಳೂರು11 hours agoMangalore-ಮಂಗಳೂರು: ರಾತ್ರಿ 11:45ರಿಂದ ಬೆಳಗ್ಗೆ 5:30ರವರೆಗೆ ವ್ಯಾಪಾರ ನಿರ್ಬಂಧ; ಪೊಲೀಸ್ ಆಯುಕ್ತರಿಂದ ಹೊಸ ಆದೇಶ
-
ಅಂತರ ರಾಜ್ಯ10 hours agoWhatsApp Web: WhatsApp Web ಬಳಕೆದಾರರೇ ಎಚ್ಚರ..! ಟ್ಯಾಬ್ ಮುಚ್ಚಿದರೆ ಸಾಲದು, ಲಾಗೌಟ್ ಆಗದಿದ್ದರೆ ನಿಮ್ಮ ಖಾಸಗಿ ಚಾಟ್ ಬೇರೆಯವರ ಪಾಲು; ಕೇಂದ್ರ ಸರಕಾರದಿಂದ ಮಹತ್ವದ ಎಚ್ಚರಿಕೆ















