ಪುತ್ತೂರು
ಶ್ರೀಭಗವತೀ ಸಹಕಾರ ಬ್ಯಾಂಕ್‌ನ 8ನೆಯ ಶಾಖೆ ಶುಭಾರಂಭ : ಸಹಕಾರ ಬ್ಯಾಂಕ್ ಒಂದರ ಚುನಾವಣೆಯಲ್ಲಿ ಸೋತ ಕಾರಣ ಈ ಬ್ಯಾಂಕ್ ತಲೆಯೆತ್ತಿದೆ – ಆರ್.ಬಿ.ಐ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ ಇಲ್ಲಿಯ ಠೇವಣಿಗೆ ಆರ್.ಬಿ.ಐ ಗ್ಯಾರಂಟಿ : ಆರ್.ಬಿ.ಐ ಯಿಂದ ಫೈನಾನ್ಸಿಯಲ್ ಸೌಂಡ್ ಬ್ಯಾಂಕ್ ಬಿರುದು
ಪುತ್ತೂರು:ಬ್ಯಾಂಕಿಂಗ್ ಕ್ಷೇತ್ರದಲ್ಲಿ 48 ವರ್ಷಗಳ ಇತಿಹಾಸವಿರುವ, ಮಂಗಳೂರಿನ ಮೊರ್ಗನ್ಸ್ ಗೇಟ್ ಜಪ್ಪುನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ 8ನೇ ಶಾಖೆಯು ಮಾ.28 ರಂದು ಇಲ್ಲಿನ ಮುಖ್ಯರಸ್ತೆಯ ಏಳ್ಮುಡಿ ಮಹಾದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನ್ಯಾಯವಾದಿ ಪಿ.ಕೆ ಸತೀಶನ್ ಮಾತನಾಡಿ, ಸಹಕಾರ ಸಂಘಗಳಿಗೂ ಸಹಕಾರ ಬ್ಯಾಂಕ್‌ಗಳಿಗೂ ವ್ಯತ್ಯಾಸಗಳಿವೆ. ನಗರ ಸಹಕಾರಿ ಬ್ಯಾಂಕ್‌ಗಳು ಆರ್‌ಬಿಐಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರಿಗೆ ಬ್ಯಾಂಕ್‌ನಿಂದ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ. ಬಹಳಷ್ಟು ಸಹಕಾರಿ ಸಂಘಗಳು, ಬ್ಯಾಂಕ್‌ಗಳು ದ.ಕ ಜಿಲ್ಲೆಯಲ್ಲಿ ಪ್ರಾರಂಭವಾದ ಇತಿಹಾಸವಿದೆ. ಆರ್ಥಿಕ ನೀತಿಯಿಂದ ಕೆಲವೊಂದು ಬ್ಯಾಂಕ್‌ಗಳ ಹೆಸರು ಬದಲಾಗಿದೆ. ವಾಣಿಜ್ಯ ಬ್ಯಾಂಕ್‌ಗಳು ಅಧಿಕವಾಗಿದೆ. ಆದರೂ ಸಹಕಾರ ಬ್ಯಾಂಕ್‌ಗಳನು ಅಸ್ಥಿತ್ವದಲ್ಲಿದ್ದು ಜನರು ಅದನ್ನು ಪ್ರೋತ್ಸಾಹಿಸಬೇಕು ಎಂದರು.
ಉಳ್ಳಾಲ ಚಿರುಂಭ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಮಾತನಾಡಿ, ದ.ಕ ಹಾಗೂ ಉಡುಪಿಗಳಲ್ಲಿ ಬಹುತೇಕ ಬ್ಯಾಂಕ್‌ಗಳು ಹುಟ್ಟಿಕೊಂಡಿದ್ದು ಅವಿಭಜಿತ ಜಿಲ್ಲೆಗಳು ಬ್ಯಾಂಕಿಂಗ್ ಕ್ಷೇತ್ರದ ತವರೂರಾಗಿದೆ. ಅವಿಭಜಿತ ಜಿಲ್ಲೆಯ ಮಹಿಳೆಯರಲ್ಲಿ ಉಳಿತಾಯದ ಮನೋಭಾವನೆ ಅಧಿಕವಾಗಿದೆ. ಇದೇ ಪರಿಕಲ್ಪಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಪ್ರಾರಂಭಿಸಿಲಾಗಿದೆ. ಯಾವುದೇ ಸಹಕಾರಿ ಸಂಘ, ಬ್ಯಾಂಕ್‌ಗಳಲ್ಲಿ ಆಡಳಿತ ಮಂಡಲಿ ಹಾಗೂ ಸಿಬಂದಿಗಳು ಜತೆಯಾಗಿ ಮುನ್ನಡೆದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಭಗವತಿ ಸಹಕಾರಿ ಬ್ಯಾಂಕ್‌ನ ಶಾಖೆಯು ನಗರದ ಹೃದಯ ಭಾಗದಲ್ಲಿ ಪ್ರಾರಂಭಗೊಂಡಿದ್ದು ಎಲ್ಲರೂ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಲಾಕರ್ ಉದ್ಘಾಟಿಸಿದ ನೋಟರಿ ನ್ಯಾಯವಾದಿ ಫಝಲ್ ರಹೀಮ್ ಮಾತನಾಡಿ, ಕಳೆದ 48 ವರ್ಷಗಳಲ್ಲಿ ಭಗವತಿ ಸಹಕಾರಿ ಬ್ಯಾಂಕ್ ಸಮಾಜದಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ಇದರಿಂದಾಗಿ ಉತ್ತಮ ಬ್ಯಾಂಕ್ ಆಗಿ ಬೆಳೆದು ಬಂದಿದೆ. ಪುತ್ತೂರಿನಲ್ಲಿ ಬ್ಯಾಂಕ್‌ನ 8ನೇ ಶಾಖೆಯು ಪ್ರಾರಂಭಗೊಂಡಿದ್ದು ಪುತ್ತೂರಿನ ಬೆಳವಣಿಗೆಯಲ್ಲಿ ಬ್ಯಾಂಕ್ ಹೊಸ ಮೈಲುಗಲ್ಲು ಆಗಿ ಮೂಡಿಬರಲಿ ಎಂದರು.
ಪುತ್ತೂರು ತಿಯಾ ಸಮಾಜದ ಅಧ್ಯಕ್ಷ ಗೋಪಾಲ ಮಾತನಾಡಿ, ಪುತ್ತೂರಿನಲ್ಲಿರುವ ತಿಯಾ ಸಮಾಜದಿಂದ ಸಹಕಾರಿ ಸಂಘ ಪ್ರಾರಂಭಿಸುವ ಅಪೇಕ್ಷೆಯಿತ್ತು. ಆದರೆ ಅದು ಕೈಗೂಡಲಿಲ್ಲ. ಈಗ ನಮ್ಮದೇ ಸಮಾಜ ಬಾಂಧವರಿಂದ ಬ್ಯಾಂಕ್‌ನ ಶಾಖೆ ಪ್ರಾರಂಭಗೊಂಡಿದ್ದು ಹೆಮ್ಮೆ ತಂದಿದೆ. ಈ ಬ್ಯಾಂಕ್‌ನ ಶಾಖೆಗಳು ಪ್ರಾರಂಭವಾಗಲಿ. ಸಮಾಜ ಬಾಂಧವರು ಇದೇ ಸಹಕಾರಿ ಬ್ಯಾಂಕ್‌ನ ಮೂಲಕ ವ್ಯವಹರಿಸಿ ಸಹಕರಿಸುವಂತೆ ಅವರು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಅಧ್ಯಕ್ಷ ಬಿ.ಯಂ.ಮಾಧವ ಮಾತನಾಡಿ, ಕಳೆದ 48 ವರ್ಷಗಳ ಇತಿಹಾಸವಿರುವ ಸಹಕಾರ ಬ್ಯಾಂಕ್‌ನ 8ನೇ ಶಾಖೆಯ ಮೂಲಕ ಪುತ್ತೂರಿಗೆ ಕಾಲಿಟ್ಟಿದ್ದೇವೆ. ಇಲ್ಲಿ ಎಲ್ಲಾ ಅನುಕೂಲಕರ ವಾತಾವರಣ ದೊರೆತಿದೆ. ನಮ್ಮ ಬ್ಯಾಂಕ್ ಆರ್‌ಬಿಐಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜನರು ಬ್ಯಾಂಕ್‌ನಲ್ಲಿ ಧೈರ್ಯದಿಂದ ವ್ಯವಹರಿಸಬಹುದು. ಠೇವಣಿಗಳಿಗೆ ಆರ್‌ಬಿಐಯ ಗ್ಯಾರಂಟಿಯಿದೆ. ಶಾಖೆಯಲ್ಲಿ ಅನುಭವೀ ಸಿಬಂದಿಗಳಿದ್ದು ಗ್ರಾಹಕರಿಗೆ ಉತ್ತಮ ಸೇವೆ ದೊರೆಯಲಿದೆ.
ಹಿರಿಯ ನಾಗರೀಕರ ಅನುಕೂಲಕ್ಕಾಗಿ ಮನೆ ಭಾಗಿಲಿಗೆ ಬಂದು ಸೇವೆ ನೀಡಲಿದ್ದಾರೆ. ಮುಂದಿನ 2 ವರ್ಷದಲ್ಲಿ ಸುವರ್ಣ ಸಂಭ್ರಮವನ್ನು ಆಚರಿಸಲಿದ್ದು ಈ ಸಮಯದಲ್ಲಿ 10ಶಾಖೆಯನ್ನು ತೆರೆಯಲಾಗುವುದು. ಅಲ್ಲದೆ ಠೇವಣಿಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು.
ಬ್ಯಾಂಕ್‌ನ ನಿಕಟಪೂರ್ವ ಅಧ್ಯಕ್ಷ ನಾರಾಯಣ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ,ತೀಯ ಸಮಾಜದ ಗಣ್ಯ ವ್ಯಕ್ತಿಯಾದ ಜಗನ್ನಾಥರು ಗೋಕರ್ಣನಾಥೇಶ್ವರ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಚುನಾವಣೆಗೆ ನಿಂತು ಅಲ್ಪ ಮತಗಳ ಅಂತರದಿಂದ ಸೋಲು ಕಂಡರು. ಆ ನಂತರ 1977ರಲ್ಲಿ ಭಗವತೀ ಶ್ರೇಯೋಭಿವೃದ್ಧಿ ಸಂಸ್ಥೆ ಪ್ರಾರಂಭಿಸಿದರು. 1977 ರಲ್ಲಿ ಶ್ರೀ ಭಗವತೀ ಶ್ರೇಯೋಭಿವೃದ್ದಿ ಸಹಕಾರ ಸಂಘವಾಗಿ ನೋಂದಣಿಯಾಗಿದ್ದ ಸಂಘವು 1984ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾವಣೆಗೊಂಡು ಶ್ರೀಭಗವತಿ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ. ನಂತರ ಬ್ಯಾಂಕಿನ ಶಾಖೆಗಳು ವಿಸ್ತರಣೆಗೊಂಡು 2000ದಲ್ಲಿ ವಿಟ್ಲದಲ್ಲಿ 7ನೇ ಶಾಖೆ ಆರಂಭಿಸಿತ್ತು. 2022-23ರಲ್ಲಿ ಆರ್‌ಬಿಐನಿಂದ ಫೈನಾನ್ಸಿಯಲ್ ಸೌಂಡ್ ಬ್ಯಾಂಕ್ ಅನುಮತಿ ಪಡೆದುಕೊಂಡು ನಂತರ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ಇದೀಗ ಪುತ್ತೂರನಲ್ಲಿ 8ನೇ ಶಾಖೆಯನ್ನು ಆರಂಭಿಸಿದೆ. ನಮ್ಮ ಬ್ಯಾಂಕ್ ಆರ್‌ಬಿಐಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಬ್ಯಾಂಕ್‌ನಲ್ಲಿ ೨೧,೭೬೬ ಸದಸ್ಯರಿಂದ ೪.೭೭ ಕೋಟಿ ಪಾಲು ಬಂಡವಾಳ ಹೊಂದಿದೆ. ಆರ್‌ಬಿಐನಿಂದ ಫೈನಾನ್ಸಿಯಲ್ ಸೌಂಡ್ ಬ್ಯಾಂಕ್ ಅನುಮತಿ ದೊರತೆರೆ ಪ್ರತಿವರ್ಷ ಒಂದೊಂದು ಶಾಖೆ ತೆರೆಯಲಾಗುವುದು ಎಂದರು.
ನೂತನ ಶಾಖೆಯನ್ನು ಸಮಾಜದ ಹಿರಿಯರಾದ ಜಯರಾಮ ಉಕ್ಕುಡ ಉದ್ಘಾಟಿಸಿದರು. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಕಂಪ್ಯೂಟರ್ ವಿಭಾಗವನ್ನು ಉದ್ಘಾಟಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ದೇವದಾಸ ಕೊಲ್ಯ, ನಿರ್ದೇಶಕರಾದ ನಾರಾಯಣ ಕೆ., ಆನಂದ ಬಿ., ವಿಶ್ವನಾಥ, ಕಿರಣ್, ರಾಜೇಶ್ ಯು, ರಾಜೇಶ್ ಭಂಡಾರಿ, ಆಶಾ ಚಂದ್ರ ಮೋಹನ್, ಶರ್ಮಿಲಾ, ಸರೀಲ್ ಅರುಣ್ ಬಂಗೇರ, ಪದ್ಮನಾಭ ಬಿ. ಕುದ್ರೋಳಿ ಭಗವತಿ ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲಪಾಡಿ, ಹಾಗೂ ಮಹಾದೇವಿ ಸಂಕೀರ್ಣದ ಮ್ಹಾಲಕ ರಾಜೇಶ್ ಯು.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಠೇವಣಿ ಪತ್ರ ವಿತರಣೆ:
ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ಠೇವಣಿಯಿರಿಸಿದ ಗಣೇಶ್ ಕುಂಟಲ್ಪಾಡಿ, ನಾರಾಯಣ ಕೆ., ವಿಶ್ವನಾಥ, ಸರೀಲ್ ಅರುಣ್ ಬಂಗೇರ, ಸತೀಶ್, ಚೈತನ್ಯ, ಉಷಾ ಪ್ರಭಾಕರ್, ಪದ್ಮನಾಭ ಬಿ., ಕಟ್ಟಡ ಮ್ಹಾಲಕ ರಾಜೇಶ್ ಯು.ಪಿಯವರಿಗೆ ಕಾರ್ಯಕ್ರಮದಲ್ಲಿ ಠೇವಣಿ ಪತ್ರ ವಿತರಿಸಲಾಯಿತು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ರಾಜೇಶ್ ಸ್ವಾಗತಿಸಿದರು. ಪುತ್ತೂರು ಶಾಖಾ ವ್ಯವಸ್ಥಾಪಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಜೆಪ್ಪು ಶಾಖಾ ವ್ಯವಸ್ಥಾಪಕ ರಾಘವ ಉಚ್ಚಿಲ್, ಹಿರಿಯ ಸಹಾಯಕಿ ಶಕುಂತಲಾ ರಾಜ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಆಶಾ ಚಂದ್ರಮೋಹನ್ ವಂದಿಸಿದರು.
ನಗರಸಭಾ ಸದಸ್ಯೆ ವಿದ್ಯಾ ಆರ್ ಗೌರಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಮೂರ್ತೆದಾರರ ಮಹಾ ಮಂಡಲದ ನಿರ್ದೇಶಕ ವಿಜಯ ಕುಮಾರ್ ಸೊರಕೆ, ರಾಘವೇಂದ್ರ ಪೈಂಟ್ಸ್ ಮ್ಹಾಲಕ ಸತ್ಯಶಂಕರ್ ಭಟ್, ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸನ್, ರಾಜೇಶ್ ಕರವೀರ್, ಪುತ್ತೂರು ತಿಯಾ ಸಮಾಜದ ಉಪಾಧ್ಯಕ್ಷ ಜೆ.ಪಿ ಸಂತೋಷ್ ಮುರ, ಸಂಧ್ಯಾ ರಾಜೇಶ್, ಸರಿತಾ ಬಿ.ಎಮ್, ಮೋಹಿತ್ ಉಕ್ಕುಡ, ಕುದ್ರೋಳಿ ಭಗವತಿ ಕ್ಷೇತ್ರದ ಮಹಿಳಾ ಘಟಕದ ಉಷಾ ಪ್ರಭಾಕರ್ ಯೆಯ್ಯಾಡಿ, ಯಶೋಧ, ಬ್ಯಾಂಕನ್ ಮೌಲ್ಯ ಮಾಪಕ ಆದರ್ಶ ಸಹಿತ ಹಲವು ಮಂದಿ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಶಿಕ್ಷಣ
Science Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.
ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವ ಉದ್ದೇಶದಿಂದ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಯಶಸ್ವಿ ಪಯಣ:
“ಉತ್ತಮ ಜೀವನಕ್ಕಾಗಿ ವಿಜ್ಞಾನ” ಎಂಬ ಆಶಯದೊಂದಿಗೆ ಆರಂಭಗೊಂಡ ಈ ಅಭಿಯಾನದ ಮೊದಲ ಹಂತದಲ್ಲಿ ಜಿಲ್ಲೆಯ 41 ಗ್ರಾಮೀಣ ಶಾಲೆಗಳಲ್ಲಿ ಶಾಲಾ ಮಟ್ಟದ ವಿಜ್ಞಾನ ಮೇಳಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 1,189 ವಿದ್ಯಾರ್ಥಿಗಳು ಭಾಗವಹಿಸಿ ಸುಮಾರು 650 ವಿನೂತನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದರು. ಶಾಲಾ ಮಟ್ಟದಲ್ಲಿ ವಿಜೇತರಾದ ತಂಡಗಳು ಜಿಲ್ಲಾ ಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಜಿಲ್ಲಾ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ 66 ಹಾಗೂ ಪ್ರೌಢಶಾಲಾ ವಿಭಾಗದ 57 ತಂಡಗಳು ಸೇರಿದಂತೆ ಒಟ್ಟು 123 ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಬಂಟರ ಭವನದಲ್ಲಿ ಸಂಪನ್ಮೂಲ ವ್ಯಕ್ತಿ ಅನಿರುದ್ಧ್ ವಾಗ್ಳೆ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾದಾಯಕ ಅವಧಿ ನಡೆಸಿಕೊಟ್ಟರು. ಮಾರ್ಗದರ್ಶಿ ಶಿಕ್ಷಕರಿಗಾಗಿ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಿರಂತರ ಪರಿಶ್ರಮವಿದ್ದಾಗ ಮಾತ್ರ ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತವೆ. ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ಶ್ರೀ ಪ್ರವೀಣ್ ಕ್ಯಾಸ್ಟಲಿನೋ, “ವಿದ್ಯಾರ್ಥಿಗಳಲ್ಲಿರುವ ಕುತೂಹಲವೇ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಶ್ನಿಸುವ ಹಾಗೂ ಪ್ರಯೋಗ ಮಾಡುವ ಮನೋಭಾವ ಬೆಳೆಸಿಕೊಂಡಾಗ ಗ್ರಾಮೀಣ ಪ್ರತಿಭೆಗಳು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೋಡ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ಆಪರೇಷನ್ಸ್ ಲೀಡ್ ಜೋಬಿನ್ ಜೋಸೆಫ್ ಹಾಗೂ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಶ್ರೀಶ ಬೈಪದವು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ಸ್ವಾಗತಿಸಿದರು. ರಾಜೇಶ್ವರಿ ಎನ್. ನಿರೂಪಿಸಿ, ನೇತ್ರಾ ಡಿ. ರಾವ್ ವಂದಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಕಾಲೇಜಿನ ಎಲ್ಲಾ ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ನವೆಂಬರ್ 16ರಿಂದ 20ರವರೆಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪುತ್ತೂರು, ನ. 22: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಕಾಲೇಜಿನ ಎಲ್ಲಾ ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ನವೆಂಬರ್ 16ರಿಂದ 20ರವರೆಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ತರಬೇತಿ ಕಾರ್ಯಕ್ರಮವು ಕಾಲೇಜಿನ ನಿರಂತರ ಉದ್ಯೋಗ ಸಿದ್ಧತಾ (Placement Readiness) ಉಪಕ್ರಮದ ಭಾಗವಾಗಿದ್ದು, ವಿದ್ಯಾರ್ಥಿಗಳನ್ನು ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳಿಗೆ ಸಮರ್ಥವಾಗಿ ಸಿದ್ಧಗೊಳಿಸುವ ಉದ್ದೇಶವನ್ನು ಹೊಂದಿದೆ. ಉದ್ಯಮಗಳ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಡಿಜಿಟಲ್ಕೌ ಶಲ್ಯ, ಉದ್ಯೋಗಾರ್ಹ ಸಾಮರ್ಥ್ಯ, ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ರೂಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಮತ್ತು ಉದ್ಯೋಗಾರ್ಹತಾ ಕೌಶಲ್ಯಗಳು (Employability Skills – Lifelong Profession) ಎಂಬ ಪ್ರಮುಖ ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ತರಬೇತುದಾರರಾದ ದೀಪಕ್ ಬಡಿಗೇರ್ ಮತ್ತು ಆಯೆಶತ್ ಹಫೀಝಾ ಅವರು ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಸಂವಾದಾತ್ಮಕ ಅಧಿವೇಶನಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕೃತಕ ಬುದ್ಧಿಮತ್ತೆಯ ಮೂಲ ಪರಿಕಲ್ಪನೆಗಳು, ಉದಯೋನ್ಮುಖ ತಂತ್ರಜ್ಞಾನಗಳ ಬಳಕೆ, ಸಂವಹನ ಕೌಶಲ್ಯ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ ಹಾಗೂ ವೃತ್ತಿಪರ ಜೀವನಕ್ಕೆ ಅಗತ್ಯವಾದ ಸಾಮರ್ಥ್ಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ IBM SkillsBuild ಡಿಜಿಟಲ್ ಕಲಿಕಾ ವೇದಿಕೆಯ ಪರಿಚಯ
ಮಾಡಿಕೊಡಲಾಯಿತು. ನಿಗದಿತ ಕಲಿಕಾ ಅವಶ್ಯಕತೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ IBM SkillsBuild ವತಿಯಿಂದ ಪ್ರಮಾಣಪತ್ರಗಳನ್ನು ನೀಡಲಾಯಿತು. ಈ ಪ್ರಮಾಣಪತ್ರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯೊಂದಿಗೆ ಹೆಚ್ಚುವರಿ ವೃತ್ತಿಪರ ಕೌಶಲ್ಯಗಳನ್ನು ಗುರುತಿಸಲು ಸಹಕಾರಿಯಾಗಲಿವೆ.
ಶೈಕ್ಷಣಿಕ ಜ್ಞಾನ ಮತ್ತು ಉದ್ಯಮ ಕ್ಷೇತ್ರದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸನ್ನದ್ಧರನ್ನಾಗಿಸುವ ನಿಟ್ಟಿನಲ್ಲಿ ಈ ಐದು ದಿನಗಳ ತರಬೇತಿ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.
ಉದ್ಯೋಗಮುಖಿ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯಕ್ಕೆ ಮುನ್ನುಡಿ!
ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಮಾತ್ರವಲ್ಲದೆ, ಡಿಜಿಟಲ್ ಜ್ಞಾನ, ಕೃತಕ ಬುದ್ಧಿಮತ್ತೆಯ ಅರಿವು, ಸಂವಹನ ಕೌಶಲ್ಯ ಮತ್ತು ವೃತ್ತಿಪರ ಸಾಮರ್ಥ್ಯಗಳೂ ಅತ್ಯಂತ ಅವಶ್ಯಕವಾಗಿವೆ.
ಸ್ವಾಯತ್ತ ಶಿಕ್ಷಣ ವ್ಯವಸ್ಥೆಯಡಿ ನವೀನ ಕಲಿಕಾ ವಿಧಾನಗಳು, ಕೌಶಲ್ಯಾಧಾರಿತ ತರಬೇತಿ, ಉದ್ಯೋಗ ನಿಯೋಜನೆಗೆ ಪೂರಕ ಕಾರ್ಯಕ್ರಮಗಳು ಹಾಗೂ ಉದ್ಯಮ ಸಂಪರ್ಕದ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕಾಲೇಜು ಬದ್ಧವಾಗಿದೆ.
ನಿಮ್ಮ ಉನ್ನತ ಶಿಕ್ಷಣದ ಕನಸುಗಳಿಗೆ ಸಂತ ಫಿಲೋಮಿನಾ ಕಾಲೇಜು ಸೂಕ್ತ ವೇದಿಕೆ. ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂದೇ ನಮ್ಮ ಕಾಲೇಜನ್ನು ಆಯ್ಕೆಮಾಡಿ. ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು – ನಿಮ್ಮ ಉಜ್ವಲ ಭವಿಷ್ಯದತ್ತ ಮೊದಲ ಹೆಜ್ಜೆ!
– ರೆವ್. ಡಾ. ಆಂಟನಿ ಪ್ರಕಾಶ್ ಮೊಂತೆರೋ
ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು
ಮಂಗಳೂರು
Bantwal rape case verdict ಮಂಗಳೂರು: ಮಹಿಳೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು, ₹54 ಸಾವಿರ ದಂಡ

ಬಂಟ್ವಾಳ: ಮಹಿಳೆಗೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿ , ಜೀವ ಬೆದರಿಕೆ ಹಾಕಿದ ಅಪರಾಧಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54 ಸಾವಿರ ದಂಡ ವಿಧಿಸಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
Bantwal rape case verdict: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2021ರಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತ ಮಹಿಳೆಯ ಮನೆಯ ನೆರೆಮನೆಯ ನಿವಾಸಿಯಾಗಿದ್ದ ಅನಿಲ್ ಎಂಬಾತ ಮಹಿಳೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಲ್ಲದೆ, ಜೀವ ಬೆದರಿಕೆಯನ್ನೂ ಹಾಕಿದ್ದ ಎಂದು ಆರೋಪಿಸಲಾಗಿತ್ತು. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 92/2021ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376, 448, 323, 504 ಹಾಗೂ 506ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಅಂದಿನ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಅವರು ಆರೋಪಿಯನ್ನು ಪತ್ತೆಹಚ್ಚಿದ್ದರು. ಬಳಿಕ ಪ್ರಕರಣದ ತನಿಖಾಧಿಕಾರಿಗಳಾಗಿದ್ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿತನ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ರಾಜೇಶ ಮಾರುತಿ ಕಾಮಟೆ ಅವರು ಆರೋಪಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ ₹54,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಮೋತಿಲಾಲ ಚೌಧರಿ ಅವರು ಸರ್ಕಾರದ ಪರವಾಗಿ ಸಮರ್ಥವಾಗಿ ವಾದ ಮಂಡಿಸಿದ್ದರು.
-
ಸ್ಥಳೀಯ1 hour agoWedding-ಕ್ಯಾಸೆಟ್ಗಳ ಅಬ್ಬರವಿಲ್ಲ, ಡ್ಯಾನ್ಸ್ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಶಿಕ್ಷಣ2 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
-
ಶಿಕ್ಷಣ2 hours agoScience Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್‌ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
-
ಬಿಗ್ ನ್ಯೂಸ್33 minutes agoRailway-ರೈಲ್ವೆ ಗುಂಪು ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಬರ್ತ್ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!















