ರಾಜಕೀಯ
Lok Sabha Candidates-ರಾಜ್ಯದ ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿ ಮಾ.8ರಂದು ಪ್ರಕಟ ? ಯಾರ ಯಾರ ಹೆಸರು ಹೈಕಮಾಂಡ್ ಗೆ ಹೋಗಿದೆ ಗೊತ್ತೆ?
ಬೆಂಗಳೂರು: ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗೆ ಸಂಬಂಧಪಟ್ಟಂತೆ ದಿಲ್ಲಿಯಲ್ಲಿ ಬಿಜೆಪಿಯ ಹೈವೋಲ್ಟೇಜ್ ಸಭೆ ನಡೆದಿದ್ದು, ಮಾ. 8 ರಂದು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುವ ಚುನಾವಣೆ ಸಮಿತಿ ಸಭೆಯಲ್ಲಿ ರಾಜ್ಯದ 8 ರಿಂದ 10 ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಅಚ್ಚರಿಯ ಬೆಳವಣಿಗೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೆಸರು ಪ್ರಸ್ತಾವಿಸಲಾಗಿದ್ದು, ಮೊದಲ ಪಟ್ಟಿಯಲ್ಲೇ ಈ ಕುತೂಹಲ ತಣಿಯಲಿದೆ.
ದಿಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾ. ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಚುನಾವಣಾ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕರಾದ ಆರ್.ಅಶೋಕ್, ಕೋಟ ಶ್ರೀನಿವಾಸ್ ಪೂಜಾರಿ, ಉಪನಾಯಕ ಅರವಿಂದ್ ಬೆಲ್ಲದ್ ಭಾಗವಹಿಸಿದ್ದರು. ರಾಜ್ಯದ ಮೊದಲ ಪಟ್ಟಿ ಮಾ. 8ರಂದು ಪ್ರಕಟವಾಗುವ ಸಂಭವವಿದೆ.
ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಹೈಕಮಾಂಡ್ ಪ್ರತ್ಯೇಕ ಸರ್ವೆ ನಡೆಸಿದೆ. ರಾಜ್ಯ ನಾಯಕರು ಕೊಟ್ಟ ಮಾಹಿತಿಯನ್ನೂ ಪಡೆದಿದೆ. ಜತೆಗೆ ಜೆಡಿಎಸ್ ನಾಯಕರು ಕೊಟ್ಟ ಅಭಿಪ್ರಾಯಗಳನ್ನೂ ಪರಿಗಣಿಸಿದೆ. ರಾಜ್ಯದ ನಾಯಕರು ಕೊಟ್ಟ ಪಟ್ಟಿಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಜಗದೀಶ್ ಶೆಟ್ಟರ್ ಹೆಸರನ್ನು ಸೂಚಿಸಲಾಗಿದೆ.
ಜತೆಗೆ ಶೆಟ್ಟರ್ ಹೆಸರನ್ನು ಹುಬ್ಬಳ್ಳಿ-ಧಾರವಾಡ ಕ್ಷೇತ್ರಕ್ಕೂ ಪ್ರಸ್ತಾಪಿಸಲಾಗಿದೆ. ಆದರೆ ಬೆಳಗಾವಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎನ್ನಲಾಗಿದೆ. ತುಮಕೂರಿಗೆ ಸಂಬಂಧಪಟ್ಟಂತೆ ಮಾಜಿ ಸಚಿವರಾದ ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಇಬ್ಬರ ಹೆಸರು ಪ್ರಸ್ತಾಪಿಸಲಾಗಿದೆ.
ಬದಲಾವಣೆಯ ಕೂಗು ಮೊಳಗಿದ್ದ ಕರಾವಳಿಯ ಮೂರು ಕ್ಷೇತ್ರಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಹಾಲಿ ಸಂಸದರ ಹೆಸರೇ ಮುಂಚೂಣಿಯಲ್ಲಿದೆ. ಉತ್ತರ ಕನ್ನಡದಿಂದ ಅನಂತಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡದಿಂದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ ಹಾಗೂ ಉಡುಪಿಯಿಂದ ಶೋಭಾ ಕರಂದ್ಲಾಜೆ ಹೆಸರು ಚರ್ಚೆಯಲ್ಲಿದೆ.
ಬಿಜೆಪಿ ಚಿಹ್ನೆಯಿಂದ ಡಾ| ಮಂಜುನಾಥ್ ?
ಹೃದ್ರೋಗ ತಜ್ಞ ಡಾ| ಸಿ.ಎನ್.ಮಂಜುನಾಥ್ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆಯಾಗಿದೆ. ಆದರೆ ಕ್ಷೇತ್ರ ಯಾವುದು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ.ಮಂಜುನಾಥ್ ಕಣಕ್ಕೆ ಇಳಿಯುವುದು ಬೇಡ ಎಂದು ಕುಮಾರಸ್ವಾಮಿ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಎಲ್ಲ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕರು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೆಸರನ್ನೇ ಪ್ರಸ್ತಾಪಿಸಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಸಮ್ಮತಿಸಿದ್ದಾರೆ. ಹಾಗಾದರೆ ಡಾ.ಮಂಜುನಾಥ್ ಸ್ಪರ್ಧೆ ಎಲ್ಲಿಂದ ಎಂಬ ಕುತೂಹಲ ಇನ್ನೂ ಉಳಿದಿದೆ.
ಬಿಜೆಪಿ ಮೂಲಗಳ ಪ್ರಕಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಡಾ.ಮಂಜುನಾಥ್ ಅವರ ಹೆಸರನ್ನು ಜೆಡಿಎಸ್ ನಾಯಕರು ಸೂಚಿಸಿದ್ದಾರೆ. ಡಿ.ವಿ.ಸದಾನಂದ ಗೌಡರಿಗೆ ಟಿಕೆಟ್ ನಿರಾಕರಿಸಿದರೆ ಬಿಜೆಪಿ ಚಿಹ್ನೆಯಡಿ ಮಂಜುನಾಥ್ ಸ್ಪರ್ಧಿಸಲಿ ಎಂಬ ಸಲಹೆ ವ್ಯಕ್ತವಾಗಿದೆ.
28 ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಲಾಗಿದೆ. ಜೆಡಿಎಸ್‌ಗೆ ಎಷ್ಟು ಸ್ಥಾನ ನೀಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ವಿಧಾನಸಭೆಯಲ್ಲಿ ಸೋತವರಿಗೆ ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟ ವಿಚಾರ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತದೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ
ವರಿಷ್ಠರು ಸಮೀಕ್ಷೆ ನಡೆಸಿದ್ದಾರೆ. ಅತ್ಯುತ್ತಮ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗುತ್ತದೆ. ಕೆಲವು ಸಂಸದರು ವಯಸ್ಸಿನ ಕಾರಣಕ್ಕೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.
-ಕೋಟ ಶ್ರೀನಿವಾಸ್ ಪೂಜಾರಿ,-ವಿಧಾನ ಪರಿಷತ್ ವಿಪಕ್ಷ ನಾಯಕ
ಹಾವೇರಿ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಹೆಸರು. ಶೆಟ್ಟರ್ ಹೆಸರು ಹುಬ್ಬಳ್ಳಿ- ಧಾರವಾಡ ಕ್ಷೇತ್ರಕ್ಕೂ ಪ್ರಸ್ತಾವ.
ತುಮಕೂರಿಗೆ ಮಾಜಿ ಸಚಿವರಾದ ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಹೆಸರು ಚರ್ಚೆಯಲ್ಲಿ. ಉತ್ತರಕನ್ನಡದಿಂದ ಅನಂತ ಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ದಿಂದ ನಳಿನ್ ಕುಮಾರ್ ಕಟೀಲ್, ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಹೆಸರು ಪಟ್ಟಿಯಲ್ಲಿ.
ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧಿಸಲಿರುವ ಕ್ಷೇತ್ರ ಬೆಂಗಳೂರು ಉತ್ತರ?
ಕಾಂಗ್ರೆಸ್ ಮೊದಲ ಪಟ್ಟಿಗೆ 18ರಿಂದ 20 ಹೆಸರು ಅಂತಿಮ?
ಬೆಂಗಳೂರು: ರಾಜ್ಯದ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೊನೆಯ ಹಂತ ತಲುಪಿದ್ದು, ಗುರುವಾರ ದಿಲ್ಲಿಯಲ್ಲಿ ನಡೆಯುವ ಕೇಂದ್ರ ಚುನಾವಣಾ ಸಮಿತಿಯ ಸಭೆಯಲ್ಲಿ ಅಂತಿಮ ಮುದ್ರೆ ಬೀಳುವ ಸಾಧ್ಯತೆಗಳಿವೆ. ಎಲ್ಲವೂ ಸುಸೂತ್ರವಾಗಿ ನಡೆದರೆ 18ರಿಂದ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.
ಈ ಮಹತ್ವದ ಸಭೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಜತೆಯಾಗಿ ದಿಲ್ಲಿಗೆ ತೆರಳುವ ನಿರೀಕ್ಷೆ ಇತ್ತು. ರಾತ್ರಿ ದಿಲ್ಲಿ ತಲುಪಿದ ಬಳಿಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸಭೆ ನಡೆಸಿ, ಪಟ್ಟಿಗೆ ಅಂತಿಮ ಸ್ಪರ್ಶ ನೀಡುವ ಅಂದಾಜಿತ್ತು. ಆದರೆ, ಕೊನೆಯ ಹಂತದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಲ್ಲಿ ಪ್ರವಾಸದಲ್ಲಿ ಡಿಸಿಎಂ ಶಿವಕುಮಾರ್ ಅವರಿಗೆ ಜತೆಯಾಗುತ್ತಿಲ್ಲ. ಶಿವಕುಮಾರ್ ಒಬ್ಬರೇ ದಿಲ್ಲಿಗೆ ತೆರಳಿ ಸುರ್ಜೇವಾಲ ಅವರೊಟ್ಟಿಗೆ ಚರ್ಚಿಸಿ ಹೈಕಮಾಂಡ್ ಮುಂದೆ ರಾಜ್ಯದ ಆಕಾಂಕ್ಷಿಗಳ ಪಟ್ಟಿಯನ್ನು ಮಂಡಿಸುವ ಸಾಧ್ಯತೆ ಇದೆ.
ಡಿಸಿಎಂ ದಿಲ್ಲಿಯತ್ತ ತೆರಳಿದರೆ, ಸಿಎಂ ಬೀದರ್‌ಗೆ ತೆರಳಿ ವಿವಿಧ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳುವರು. ರಾತ್ರಿ 7 ಗಂಟೆಗೆ ಬೆಂಗಳೂರಿಗೆ ವಾಪಸಾಗಿ 7.30ಕ್ಕೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ ನಡೆಸುವರು. ಹೀಗಾಗಿ ಡಿಸಿಎಂ ದಿಲ್ಲಿ ಭೇಟಿ ಬಳಿಕ ಅಗತ್ಯಬಿದ್ದರೆ ಸುರ್ಜೇವಾಲ ಅವರೇ ರಾಜ್ಯಕ್ಕೆ ಮತ್ತೂಮ್ಮೆ ಆಗಮಿಸುವ ಸಂಭವವಿದ್ದು, ನಂತರವೇ ಪಟ್ಟಿ ಅಂತಿಮಗೊಂಡರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ಇತ್ಯರ್ಥ ಕ್ಷೇತ್ರಗಳು
ಬೆಂಗಳೂರು ಗ್ರಾಮಾಂತರ
ಕೋಲಾರ
ಚಿಕ್ಕಬಳ್ಳಾಪುರ
ಹಾಸನ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಬೆಳಗಾವಿ
ಬಾಗಲಕೋಟೆ
ವಿಜಯಪುರ
ಕೊಪ್ಪಳ
ಬಳ್ಳಾರಿ
ಹಾವೇರಿ
ಧಾರವಾಡ
ಉತ್ತರ ಕನ್ನಡ
ದಕ್ಷಿಣ ಕನ್ನಡ
ಮೈಸೂರು
ಬೀದರ್
ಕಲಬುರಗಿ
ರಾಯಚೂರು.
ಕಗ್ಗಂಟು ಕ್ಷೇತ್ರಗಳು
ಉಡುಪಿ-ಚಿಕ್ಕಮಗಳೂರು
ತುಮಕೂರು
ಬೆಂಗಳೂರು ದಕ್ಷಿಣ
ಬೆಂಗಳೂರು ಕೇಂದ್ರ
ಬೆಂಗಳೂರು ಉತ್ತರ
ಚಾಮರಾಜನಗರ
ಮಂಡ್ಯ
ಮೈಸೂರು
ಚಿಕ್ಕೋಡಿ.
ರಾಜಕೀಯ
BJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಪುತ್ತೂರು: ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನರಸಿಂಹ ಮಾಣಿ ಅವರು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ ಮುಖಂಡರು, ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಇರುವಂತೆ ಪ್ರೇರಣೆ ನೀಡಿದರು.

ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಕುಟುಂಬದೊಂದಿಗೆ ಸಮಾಜ ನಿಲ್ಲಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಭೇಟಿಯ ವೇಳೆ ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ರತನ್ ರೈ ಕುಂಬ್ರ, ಪುತ್ತೂರು ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಯುವಮೋರ್ಚಾದ ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ವಿಶ್ವನಾಥ ಕುಲಾಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜೇಶ್ ಉಪಸ್ಥಿತರಿದ್ದರು.
ಮಂಗಳೂರು
Lakshman Sawadi-ಸಹಕಾರಿ ಕ್ಷೇತ್ರದ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹೊಸ ಶಕ್ತಿ; ತಳಮಟ್ಟದಿಂದ ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಸಚಿವ ಲಕ್ಷ್ಮಣ ಸವದಿ ಕರೆ
ಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರು: ಸಹಕಾರಿ ಕ್ಷೇತ್ರದಲ್ಲಿ ಜಾತಿ-ಮತಗಳ ಬೇಧವಿಲ್ಲದೆ ಜನರಿಗೆ ನೇರವಾಗಿ ಸಹಾಯ ಮಾಡಬಹುದು. ಹೀಗಾಗಿ, ತಳಮಟ್ಟದಲ್ಲಿ ಸಹಕಾರಿ ಸಂಘಗಳನ್ನು ಬಲಪಡಿಸುವ ಮೂಲಕ ಮಂಗಳೂರು, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು ಕಾರ್ಯಕರ್ತರು ಮುಂದಾಗಬೇಕು,” ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಕರೆ ನೀಡಿದರು.
ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

ಗ್ರಾಮೀಣ ಮಟ್ಟದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳು ಪಕ್ಷದ ಮೂಲ ಬೇರುಗಳಿದ್ದಂತೆ. ಜಿಲ್ಲೆಯ ಯಾವ ಗ್ರಾಮಗಳಲ್ಲಿ ಇನ್ನೂ ಸಹಕಾರಿ ಸಂಘಗಳು ಸ್ಥಾಪನೆಯಾಗಿಲ್ಲವೋ ಅಂತಹ ಗ್ರಾಮಗಳನ್ನು ಗುರುತಿಸಿ ಪಟ್ಟಿ ನೀಡಿದರೆ, ತಕ್ಷಣವೇ ಅಧಿಕಾರಿಗಳ ಮೂಲಕ ನೋಂದಣಿ ಮಾಡಿಸಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (DCC) ಸದಸ್ಯತ್ವ ಕೊಡಿಸಲಾಗುವುದು ಎಂದರು.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ಪಕ್ಷವನ್ನು ಸಂಘಟಿಸಲು ನಾನು ಸಂಪೂರ್ಣ ಬದ್ಧನಾಗಿದ್ದೇನೆ ಎಂದರು.
“2008ರಲ್ಲಿ ನಾನು ಸಹಕಾರ ಸಚಿವನಾಗಿದ್ದಾಗ ಕೃಷಿ ಸಾಲದ ಬಡ್ಡಿದರವನ್ನು ಶೇ.3ಕ್ಕೆ ಇಳಿಸಿದ್ದೆ. ಆದರೆ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಅವಧಿಗೆ ಮುನ್ನ ಸಾಲ ಮರುಪಾವತಿಸುವವರಿಗೆ ಶೇ.3ರಷ್ಟು ಸಹಾಯಧನ ಘೋಷಿಸಿದ್ದರಿಂದ, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವಂತಾಯಿತು. ಈ ಸತ್ಯವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.
ಜೈನ ಅಭಿವೃದ್ಧಿ ನಿಗಮಕ್ಕೆ ಸಿಎಂ ಅನುಮೋದನೆ:
ಕಾಂಗ್ರೆಸ್ ಪಕ್ಷಕ್ಕೆ ‘ಹಸ್ತದ ಚಿಹ್ನೆ’ ಸಿಕ್ಕ ಇತಿಹಾಸವನ್ನು ಸ್ಮರಿಸಿದ ಸವದಿ, “ತುರ್ತು ಪರಿಸ್ಥಿತಿಯ ನಂತರ ಚಿಹ್ನೆಯ ವ್ಯಾಜ್ಯ ಎದುರಾದಾಗ ನಮ್ಮ ಭಾಗದ ಜೈನ ಮುನಿ ಶ್ರೀ ವಿದ್ಯಾನಂದ ಮುನಿಗಳು ಇಂದಿರಾ ಗಾಂಧಿ ಅವರಿಗೆ ಬೆಳ್ಳಿಯ ಹಸ್ತದ ಚಿಹ್ನೆ ನೀಡಿ ಆಶೀರ್ವದಿಸಿದ್ದರು. ಆ ಸಮಾಜದ ಋಣ ತೀರಿಸುವ ಉದ್ದೇಶದಿಂದ ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚಿರುವ ಜೈನ ಸಮುದಾಯದ ಬೇಡಿಕೆಯಂತೆ, ಪ್ರತ್ಯೇಕ ‘ಜೈನ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿಗಳಿಂದ ಕಡತಕ್ಕೆ ಅನುಮೋದನೆ ಪಡೆಯಲಾಗಿದೆ,” ಎಂದು ಮಾಹಿತಿ ನೀಡಿದರು.
ಸಚಿವರನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಗೌರವಿಸಿದರು.
ಮಾಜಿ ಸಚಿವ ಬಿ. ರಮಾನಾಥ್ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪರಿಸರಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೋ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ವಿಶ್ವಾಸ್ ದಾಸ್, ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ರಾಜಕೀಯ
Puttur-ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ: ಬೂಡಿಯಾರು; ಶಾಸಕರು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆಯುವುದು ಮಾತ್ರ : ಸಾಜ
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿದರು.
ಪುತ್ತೂರು: ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ ಮತ್ತು ದುಷ್ಟ ರಾಜಕೀಯವೇ ತಾಂಡವವಾಡುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀಡಲಾಗುತ್ತಿರುವ ಭರವಸೆಗಳು ಕೇವಲ ಬ್ಯಾನರ್‌ಗಳಿಗೆ ಸೀಮಿತವಾಗಿದ್ದು, ಕ್ಷೇತ್ರಕ್ಕೆ ಯಾವುದೇ ಗಮನಾರ್ಹ ಅನುದಾನ ಬರುತ್ತಿಲ್ಲ. ಶಾಸಕರು ಕಳೆದ ಮೂರೂವರೆ ವರ್ಷಗಳಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹಾಗೂ ಪಾದಯಾತ್ರೆಯ ಜಿಲ್ಲಾ ಸಹ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲ ಹಾಗೂ ನೆಟ್ಟಣಿಗೆ ಮುಡೂರು ಶಕ್ತಿ ಕೇಂದ್ರದ ವತಿಯಿಂದ ನ.18ರಂದು ಈಶ್ವರಮಂಗಲದಲ್ಲಿ ನಡೆದ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಬೆಳೆ ವಿಮೆಯ ಸೂಕ್ತ ಮೊತ್ತ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ನಿಧಿಯ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. ಕ್ಷೇತ್ರದಾದ್ಯಂತ ರಸ್ತೆ ದುರಸ್ತಿ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದಿಷ್ಟು ಅನುದಾನ ಬಂದಿದ್ದರೆ ಅದು ಕೇಂದ್ರ ಸರ್ಕಾರದಿಂದ ಮಾತ್ರವೇ ಹೊರತು ರಾಜ್ಯ ಸರ್ಕಾರದಿಂದಲ್ಲ ಎಂದು ಆರೋಪಿಸಿದರು.

ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿಯನ್ನೇ ವಿತರಿಸಲಾಗುತ್ತಿದೆ. ಆದರೆ ಬೆಳೆ ವಿಮೆಯಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ಮೊತ್ತವನ್ನು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಶಾಸಕರು ಕ್ಷೇತ್ರಕ್ಕೆ ತಂದಿರುವ ಅನುದಾನದ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅವಧಿಯಲ್ಲಿ ನೆಟ್ಟಣಿಗೆ ಮುಡೂರಿಗೆ ₹29.50 ಕೋಟಿ ಅನುದಾನ: ಸಾಜ ರಾಧಾಕೃಷ್ಣ ಆಳ್ವ
ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಅಂದಿನ ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅವರ ಮೂಲಕ ಒಟ್ಟು ₹29.50 ಕೋಟಿ ಅನುದಾನ ಒದಗಿಸಲಾಗಿತ್ತು ಎಂದು ತಿಳಿಸಿದರು.
ಈಶ್ವರಮಂಗಲ-ಸುಳ್ಯಪದವು ರಸ್ತೆ ಹಾಗೂ ಹನುಮಗಿರಿಯಿಂದ ನಿಡಳ್ಳಿ ಮುಂಡೂರು ರಸ್ತೆಯನ್ನು ಪಿಎಂಜಿಎಸ್‌ವೈ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಈಗಿನ ಶಾಸಕರು ಮೂರೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಬಂದಿರುವುದು ಶಾಸನಬದ್ಧ ಅನುದಾನ ಮಾತ್ರ ಎಂದು ಟೀಕಿಸಿದರು.
ಅನುದಾನ ಮಂಜೂರಾಗಿದೆ ಎಂದು ಬ್ಯಾನರ್ ಹಾಕಿ, ತೆಂಗಿನಕಾಯಿ ಒಡೆದು ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಆದರೆ ಕಾಮಗಾರಿಗಳು ಆರಂಭವಾಗಲು ಒಂದು ವರ್ಷವೇ ಬೇಕಾಗುತ್ತದೆ. ಶಿಲಾನ್ಯಾಸ ನಡೆದ ಹಲವು ಕಾಮಗಾರಿಗಳು ಇನ್ನೂ ಅನುಷ್ಠಾನಗೊಂಡಿಲ್ಲ. ಆದರೂ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕಳೆದ ಬಿಜೆಪಿ ಆಡಳಿತದ ಅವಧಿಯಲ್ಲಿ ನೆಟ್ಟಣಿಗೆ ಮುಡೂರು ಗ್ರಾಮಕ್ಕೆ ಬಂದಿರುವ ಅನುದಾನಗಳ ಸಂಪೂರ್ಣ ಪಟ್ಟಿ ಶಕ್ತಿ ಕೇಂದ್ರದ ಪ್ರಮುಖರ ಬಳಿ ಇದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ನೆಟ್ಟಣಿಗೆ ಮುಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ನರಸೀನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ ವಂದಿಸಿದರು.
-
ಮಂಗಳೂರು19 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಅಂತರ ರಾಜ್ಯ24 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ಅಂತರ ರಾಜ್ಯ18 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
-
ಸಿನೆಮಾ24 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ಕಾರ್ಯಕ್ರಮಗಳು19 hours agoPuttur-ಪುತ್ತೂರಿನಲ್ಲಿ ‘ಸಾಮರಸ್ಯದ ತುಡರ್’ ಕಾರ್ಯಕ್ರಮ: ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಮನೆಗೆ ದೀಪದ ಬೆಳಕು
-
ದಕ್ಷಿಣ ಕನ್ನಡ13 hours ago
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
-
ಶಿಕ್ಷಣ18 hours agoPuttur-ಪುತ್ತೂರಿನ ಸುಪ್ರಜಾ ರಾವ್ ಗೆ ರಾಜ್ಯೋತ್ಸವ ಸಾಧಕ ಪುರಸ್ಕಾರ
-
Uncategorized20 hours agoPhilomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ















