ದಕ್ಷಿಣ ಕನ್ನಡ
ಒಂದಾಗ್ತಾರ ಪುತ್ತಿಲ ಪರಿವಾರ – ಬಿಜೆಪಿ ? ಅರುಣ್ ಪುತ್ತಿಲರಿಗೆ ನಳಿನ್ ಕುಮಾರ್ ಕೊಟ್ರು ಆಫರ್..! ಮುಂದೇನಾಯಿತು ?
ಮೂವತ್ತು ವರ್ಷಗಳಿಂದ ಪುತ್ತೂರಿನ ರಾಜಕೀಯ ಪಟಲದಲ್ಲಿ ಅನಭಿಷಕ್ತ ದೊರೆಯಂತೆ ಕಂಗೋಳಿಸುತ್ತಿದ್ದ ಬಿಜೆಪಿಗೆ ಕಳೆದ ವಿಧಾನ ಸಭಾ ಚುನಾವಣೆಯ ಬಳಿಕ ಮರ್ಮಾಘಾತವಾಗಿದೆ. ಬಿಜೆಪಿಯ ಸೈಧ್ದಾಂತಿಕ ನಿಲುವನ್ನೆ ಹೊಂದಿರುವ ಮತ್ತೊಂದು ರಾಜಕೀಯ ಶಕ್ತಿಯಾಗಿ ಪುತ್ತಿಲ ಪರಿವಾರ ಸಂಘಪರಿವಾರದ ಪ್ರಯೋಗ ಶಾಲೆಯಲ್ಲಿ ಉಗಮಿಸಿರುವುದು ಬಿಜೆಪಿಗೆ ದೊಡ್ಡ ತೊಡಕಾಗಿ ಪರಿಣಮಿಸುತ್ತಿದೆ. ಕೇವಲ ಬಿಜೆಪಿಗೆ ಮಾತ್ರವಲ್ಲದೇ ಸಂಘ ಪರಿವಾರಕ್ಕೂ ಈ ಬೆಳವಣಿಗೆ ಸಮಸ್ಯೆಯನ್ನುಂಟು ಮಾಡುತ್ತಿದೆ.
1967ರ ಬಳಿಕ ಜನಸಂಘ ಯಾ ಬಿಜೆಪಿ ಪುತ್ತೂರಿನಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಉದಾಹರಣೆಯಿಲ್ಲ. 1994ರ ಬಳಿ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ , ಸಹಕಾರಿ ಸಂಘಗಳಲ್ಲಿ ಪಕ್ಷವು ತನ್ನ ಅಧಿಪತ್ಯ ಸಾಧಿಸಿತ್ತು. ರಾಷ್ಟ್ರ ರಾಜಕಾರಣದಲ್ಲಿ ಮೋದಿ ಕಾಣಿಸಿಕೊಂಡ ಬಳಿಕ ಬಿಜೆಪಿ ಇಲ್ಲಿ ಮಾಡಿದ್ದು ಜೈತ್ರಯಾತ್ರೆಯೇ . ಪ್ರಮುಖ ಎದುರಾಳಿ ಕಾಂಗ್ರೆಸ್ ಇಲ್ಲಿ ಸೋಲಲೇಂದೆ ಅಭ್ಯರ್ಥಿ ಹಾಕುತ್ತದೆ ಎಂಬ ಮಾತುಗಳು ಹರಿದಾಡುವಲ್ಲಿಯವರೆಗೆ ಬಿಜೆಪಿ ತನ್ನ ಹಿಡಿತವನ್ನು ಇಲ್ಲಿ ಹೊಂದಿತ್ತು. ಆದರೇ ಕಳೆದ ವಿದಾನ ಸಭೆ ಚುನಾವಣೆಯಲ್ಲಿ ಹಾಗೂ ಆ ಬಳಿಕ ನಡೆದ ಎರಡು ಗ್ರಾ. ಪಂ ಚುನಾವಣೆಯಲ್ಲಿ ಮೂರನೆ ಸ್ಥಾನಕ್ಕೆ ಕುಸಿಯುವ ಮೂಲಕ ತೀವ್ರ ಮುಖಭಂಗ ಅನುಭವಿಸಿತ್ತು.
ಹಿಂದುತ್ವದ ಅಜೆಂಡಾದ ಮೂಲಕ ಸಂಘ ಪರಿವಾರ ಇಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಿತ್ತು. ಪುತ್ತಿಲ ಪರಿವಾರವು ಅದೇ ಅಜೆಂಡಾದ ಮೂಲಕ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಂಘ ಪರಿವಾರದ ಒಂದು ಗುಂಪು ಪುತ್ತಿಲರತ್ತ ಹೋಗಿದೆ. ಇದು ಸಂಘ ಪರಿವಾರದ ಶಕ್ತಿಯನ್ನು ಕುಗ್ಗಿಸಿದೆ. ಜತೆಗೆ ಈ ಎರಡು ಗುಂಪುಗಳ ನಡುವಿನ ಕಾರ್ಯಕರ್ತರ ನಡುವೆ ಕಚ್ಚಾಟಕ್ಕೂ ಕಾರಣವಾಗಿದೆ. ಅಲ್ಲದೇ ಪುತ್ತಿಲ ಪರಿವಾರ ಈ ಪ್ರಯೋಗವನ್ನು ಜಿಲ್ಲೆಗೂ ವಿಸ್ತರಿಸಲು ಹಾಗೂ ಲೋಕಸಭೆ ಚುನಾವಣೆಗೂ ಸ್ಪರ್ಧಿಸಲು ಚಿಂತನೆ ನಡೆಸಿರುವುದು ಬಿಜೆಪಿಗೆ ಅ ಮೂಲಕ ಸಂಘ ಪರಿವಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.
ಹೀಗಾಗಿ ಇದನ್ನು ಸೌಹಾರ್ದಯುತವಾಗಿ ಮುಗಿಸಬೇಕು ಎಂಬ ಉದ್ದೇಶದಿಂದ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭ ಹಾಗೂ ಆ ಬಳಿಕ ಹಲವರಿಂದ ಪ್ರಯತ್ನಗಳು ನಡೆದವು. ಆದರೇ ಎರಡು ತಂಡಗಳು ತಮ್ಮ ತಮ್ಮ ಬೇಡಿಕೆಗಳಿಗೆ ಬಿಗಿಪಟ್ಟು ಹಿಡಿದ ಕಾರಣ ಇಲ್ಲಿಯವರೆಗೆ ಸಂಧಾನ ಸೂತ್ರ ಯಶಸ್ವಿಯಾಗಿಲ್ಲ. ನಗರ ಸಭೆ ಉಪ ಚುನಾವಣೆ ಸಂದರ್ಭ ಮತ್ತೊಂದು ಬಾರಿ ಸಂಧಾನ ಚಟುವಟಿಕೆಗಳು ಗರಿಗೆದರಿದ್ದು ಸ್ವತ: ಸಂಸದ ನಳಿನ್ ಕುಮಾರ್ ಕಟೀಲು ಅವರೇ ಮುತುವರ್ಜಿ ವಹಿಸಿದ್ದರು ಎಂದು ಮೂಲಗಳು ಖಚಿತಪಡಿಸಿವೆ.

ಸಹಕಾರಿ ಸಂಘದ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿ
ಪುತ್ತೂರು ನಗರ ಸಭೆಯ ತೆರವಾದ ಎರಡು ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಮತ್ತೊಮ್ಮೆ ಮಾತುಕತೆಯ ಪ್ರಕ್ರಿಯೆಗಳು ಆರಂಭಗೊಂಡವು ಎಂಬ ಮಾತುಗಳು ಇತ್ತಂಡಗಳ ಮೂಲಗಳಿಂದ ತಿಳಿದು ಬಂದಿದೆ. ಅದಕ್ಕೂ ಮೊದಲು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕೆಲ ಸಹಕಾರಿ ಸಂಸ್ಥೆಗಳ ಚುನಾವಣೆ ಸಂದರ್ಭ ಅನಧಿಕೃತ ʼಒಪ್ಪಂದದ ಮೇರೆಗೆʼ ಸೀಟುಗಳನ್ನು ಹಂಚಿಕೊಂಡು ಈ ಎರಡು ತಂಡಗಳು ಹೊಂದಾಣಿಕೆಯಿಂದ ಸ್ಪರ್ಧಿಸಿದ್ದವು ಹಾಗೂ ಬಹುತೇಕ ಕಡೆ ಗೆಲುವು ಲಭಿಸಿತ್ತು. ಇಲ್ಲಿ ಚುನಾವಣೆ ಪಾರ್ಟಿ ಸಿಂಬಲ್ ನಲ್ಲಿ ನಡೆಯದ ಕಾರಣ ಮಾತುಕತೆ ಸೌಹಾರ್ದಯುತವಾಗಿ ಮುಗಿದಿತ್ತು.
ಇದೆ ಸೂತ್ರವನ್ನು ನಗರ ಸಭೆ ಚುನಾವಣೆ ಸಂದರ್ಭ ಮುಂದುವರಿಸುವ ಇರಾದೆ ಬಿಜೆಪಿ ಹೊಂದಿತ್ತು. ಆದರೇ ನಗರ ಸಭೆ ಚುನಾವಣೆ ಪಾರ್ಟಿ ಸಿಂಬಲ್ ನಲ್ಲಿ ನಡೆಯುವ ಕಾರಣ ಪುತ್ತಿಲ ಪರಿವಾರ ಇದನ್ನು ವಿರೋಧಿಸಿತ್ತು. ಅರುಣ್ ಪುತ್ತಿಲ ಹಾಗೂ ಬೆಂಬಲಿಗರನ್ನು ಸೂಕ್ತ ಸ್ಥಾನಮಾನ ನೀಡಿ ಪಕ್ಷದೊಳಗೆ ಸೇರಿಸದ ಹೊರತು ಯಾವುದೇ ಮಾತುಕತೆ ಸಾಧ್ಯವಿಲ್ಲ ಎನ್ನುವುದು ಪುತ್ತಿಲ ಪರಿವಾರದ ಡಿಮ್ಯಾಂಡ್.
ನಗರ ಸಭೆ ಉಪ ಚುನಾವಣೆಗೆ ಪುತ್ತಿಲ ಪರಿವಾರ ಅಭ್ಯರ್ಥಿ ಹಾಕಬಾರದು ಅಥಾವ ಎರಡು ಪಕ್ಷಗಳು ಒಪ್ಪುವ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಡಿ ಕಣಕ್ಕಿಳಿಸುವುದು ಅಥಾವ ತಲಾ ಒಂದೊಂದು ಸ್ಥಾನವನ್ನು ಪರಸ್ಪರ ಹಂಚಿಕೊಂಡು ಬಿಜೆಪಿಗ ಚಿಹ್ನೆಯಡಿ ಸ್ಪರ್ಧಿಸುವುದು ಹಾಗೂ ಮುಂದಿನ ದಿನಗಳಲ್ಲಿ ಅರುಣ್ ಪುತ್ತಿಲರಿಗೆ ಬಿಜೆಪಿಯಲ್ಲಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸ್ಥಾನ ನೀಡುವ ಆಫರ್ ಅನ್ನು ಬಿಜೆಪಿ ನೀಡಿತ್ತು ಪುತ್ತೂರಿನ ವೈದ್ಯ ಹಾಗೂ ಪುತ್ತಿಲ ಪರಿವಾರ ಮತ್ತು ಬಿಜೆಪಿ ಹಿತೈಷಿ ಸಂಧಾನ ಮಾತುಕತೆಯ ಸಮನ್ವಯಕಾರರಾದ ಸುರೇಶ್ ಪುತ್ತೂರಾಯರ ಬಳಿ ನೀಡಿದ್ದರು ಎಂದು ಹೇಳಲಾಗಿದೆ. ಬಿಜೆಪಿ ಕಡೆಯಿಂದ ಮಾತುಕತೆ ಮುನ್ನಡೆಸುವ ಜವಬ್ದಾರಿಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ಬಾಲ್ಯೋಟ್ಟು ವಹಿಸಿದ್ದರು ಎಂದು ಮೂಲಗಳು ಖಚಿತ ಪಡಿಸಿವೆ.

ಪುತ್ತಿಲ ಪರಿವಾರದ ನಿಲುವು ಏನು ?
ಕಳೆದೊಂದು ದಶಕದಿಂದ ಬಿಜೆಪಿ ಪುತ್ತಿಲರಿಗೆ ಅನ್ಯಾಯವನ್ನೆ ಮಾಡುತ್ತಿದೆ . ಪ್ರತಿ ಚುನಾವಣೆಯ ಸಂದರ್ಭ ಹುದ್ದೆ ಕೊಡುವ ಆಫರನ್ನು ನೀಡಲಾಗುತ್ತದೆ. ಬಳಿಕ ವಂಚಿಸಲಾಗುತ್ತಿದೆ. 2013ರ ವಿಧಾನ ಸಭೆ ಚುನಾವಣೆಯ ಸಂದರ್ಭ, 2014ರ ಲೋಕ ಸಭಾ ಚುನಾವಣೆಯ ಸಂದರ್ಭ ಹುದ್ದೆಯ ಆಫರ್ ನೀಡಿ ಬಳಿಕ ನೀಡಿರಲಿಲ್ಲ. 2018ರಲ್ಲಿ ವಜ್ರದೇಹಿ ಮಠದ ರಾಜಶೇಖರ ಸ್ವಾಮೀಜಿ, ಜಿಲ್ಲೆಯ ಆರ್ ಎಸ್ ಎಸ್ ಪ್ರಮುಖರಾದ ನಾ ಸೀತಾರಾಮ ಹಾಗೂ ಬಿಜೆಪಿ ಮುಖಂಡ ಗಣೇಶ್ ಕಾರ್ಣಿಕ್ ಹುದ್ದೆಯ ನೀಡುವ ಭರವಸೆ ನೀಡಿದ್ದು ಅದು ಭರವಸೆಯಾಗಿಯೇ ಉಳಿಯಿತು ಎನ್ನುತ್ತಾರೆ ಪುತ್ತಿಲ ಪರಿವಾರದವರು.
2018ರ ಅಸೆಂಬ್ಲಿ ಚುನಾವಣೆ ಸಂದರ್ಭ ಸಂಜೀವ ಮಠಂದೂರು ನಾಮಪತ್ರ ಸಲ್ಲಿಕೆಯ ವೇಳೆ ಪುತ್ತಿಲರಿಗೆ ಜಿಲ್ಲಾ ಉಪಾಧ್ಯಕ್ಷ ಪೋಸ್ಟ್ ಕೊಟ್ಟಿರುವ ಲೆಟರ್ ಹೆಡ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಅದು ನಕಲಿ ಎಂದು ಬಿಜೆಪಿ ಹೇಳಿಕೊಂಡಿತ್ತು. 2019ರ ಚುನಾವಣೆ ಸಂದರ್ಭವು ಜಿಲ್ಲಾ ಉಪಾಧ್ಯಕ್ಷ ಪೋಸ್ಟ್ ನೀಡುವುದಾಗಿ ನಳಿನ್ ಕುಮಾರ್ ಕಟೀಲು ಭರವಸೆ ನೀಡಿ ಚುನಾವಣೆ ಗೆದ್ದ ಬಳಿಕ ಮರೆತಿದ್ದರು. ಮೊನ್ನೆಯ ಆಸೆಂಬ್ಲಿ ಎಲೆಕ್ಷನ್ ಬಳಿಕವು ಹಲವು ಬಾರಿ ಮಾತುಕತೆ ನಡೆದಾಗಲೂ ಪೋಸ್ಟ್ ಕೊಡುವ ಭರವಸೆಯಷ್ಟೆ ಸಿಗುತ್ತಿದೆ. ಕಾರ್ಯರೂಪಕ್ಕೆ ಬರುತ್ತಿಲ್ಲ. ಹೀಗಾಗಿ ಈ ಆಫರ್ ನ್ನು ಪುತ್ತಿಲ ಪರಿವಾರ ಒಪ್ಪಿಕೊಂಡಿಲ್ಲ ಪರಿವಾರದ ಪ್ರಮುಖರೊಬ್ಬರು ತಿಳಿಸಿದ್ದಾರೆ. ಹೀಗಾಗಿ ನಮಗೆ ನಗರ ಸಭೆ ಚುನಾವಣೆ ಅನಿವಾರ್ಯವಾಯಿತು ಎನ್ನುವುದು ಅವರ ಅಭಿಮತ.
ಪುತ್ತಿಲರಿಗೆ ಹಂಗಾಮಿ ಅಧ್ಯಕ್ಷ ಪಟ್ಟ?
ಪುತ್ತಿಲ ಪರಿವಾರ ಹಾಗೂ ಬಿಜೆಪಿ ನಡುವಿನ ತಿಕ್ಕಾಟವನ್ನು ಹೇಗಾದರೂ ಕೊನೆಗಾಣಿಸಬೇಕು ಎಂಬ ಶತ ಪ್ರಯತ್ನದಲ್ಲಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಕೊನೆಯ ಪ್ರಯತ್ನವೆಂಬಂತೆ ಡಿ 16ರಂದು ಪುತ್ತೂರಿನ ಅಜ್ಞಾತ ಸ್ಥಳವೊಂದರಲ್ಲಿ ಪುತ್ತೂರು ಬಿಜೆಪಿ ಹಾಗೂ ಪುತ್ತಿಲ ಪರಿವಾರದ ಪ್ರಮುಖರ ಮಾತುಕತೆ ನಡೆಸಲು ನಿರ್ಧರಿಸಿದ್ದರು. ಅದರಲ್ಲಿ ಪುತ್ತಿಲರನ್ನು ಬಿಜೆಪಿಯ ಪುತ್ತೂರು ಗ್ರಾಮಾಂತರ ಮಂಡಲದ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡುವ ಆಫರ್ ನೀಡಿದ್ದರು. ಆದರೇ ಇದಕ್ಕೆ ಪುತ್ತಿಲ ಪರಿವಾರ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದು ಬಂದಿದೆ.
ಆಫರ್ ಬಂದಿರುವುದು ನಿಜ. ಆದರೇ ಪುತ್ತಿಲ ಹಾಗೂ ಅವರ ಬಳಗವನ್ನು ಬಿಜೆಪಿಯೊಳಗೆ ಬರಮಾಡಿಕೊಳ್ಳುವ ನಿಜವಾದ ಉದ್ದೇಶ ನಳಿನ್ ಅವರಿಗೆ ಇದ್ದದ್ದೆ ಹೌದಾಗಿದ್ದರೇ, ಅವರು ಅದ್ಯಕ್ಷರಾಗಿದ್ದಾಗಲೇ ಮಾಡುತ್ತಿದ್ದರು. ಈಗ ಅವರ ಬಳಿ ಹಂಗಾಮಿ ಅಧ್ಯಕ್ಷ ಮಾಡುವ ಅಧಿಕಾರವಿಲ್ಲ. ಜಿಲ್ಲಾದ್ಯಕ್ಷರ ಮೂಲಕ ಅದನ್ನು ಮಾಡಿಸಿದ್ರು, ಅದು ತಾತ್ಕಲಿಕ. ಹಾಗಾಗಿ ಇದು ಮತ್ತೊಂದು ಭರವಸೆ ಹಾಗೂ ವಂಚಿಸುವ ಪ್ರಯತ್ನ ಎಂದು ಪುತ್ತಿಲ ಪರಿವಾರದ ಮುಖಂಡರೊಬ್ಬರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪುತ್ತಿಲರಿಗೆ ಪೂರ್ಣ ಪ್ರಮಾಣದ ಅಧ್ಯಕ್ಷತೆಯನ್ನು 3 ವರ್ಷ ಕಾಲಕ್ಕೆ ಪಕ್ಷದ ನಿಯಮದಂತೆ ಘೋಷಿಸಬೇಕು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 60 :40 ಅನುಪಾತದಡಿಯಲ್ಲಿ ಪುತ್ತಿಲ ಪರಿವಾರ ಹಾಗೂ ಬಿಜೆಪಿಯ ಪದಾಧಿಕಾರಿಗಳ ನೇಮಕವಾಗಬೇಕು ಎನ್ನುವ ಬೇಡಿಕೆಯನ್ನು ಪುತ್ತಿಲ ಪರಿವಾರದವರು ಇಟ್ಟಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.
ಉಚ್ಚಾಟನೆಗೆ ಸಿದ್ದತೆ …!
ಈ ಬಳಿಕ ನಳಿನ್ ಕುಮಾರ್ ಕಟೀಲು ನೇತ್ರತ್ವದಲ್ಲಿ ನಡೆಯಬೇಕಿದ್ದ ಉದ್ದೇಶಿತ ಸಂಧಾನ ಮಾತುಕತೆ ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೇ ಈ ಮಾತುಕತೆ ಮುರಿದು ಬಿದ್ದ ಬಳಿಕ ಬಿಜೆಪಿಯ ಪ್ರಮುಖರೊಬ್ಬರು ಪ್ರತಿಕ್ರಿಯಿಸಿದ್ದು, ” ಇದು ಕೊನೆಯ ಸಂಧಾನ … ಇನ್ನು ಯಾವುದೇ ಸಂಧಾನ ಮಾತುಕತೆಯಿಲ್ಲ . ಇನ್ನು ಏನಿದ್ದರು ಕ್ರಿಯೆಗೆ ಪ್ರತಿಕ್ರಿಯೆ… ನಗರ ಸಭೆ ಚುನಾವಣೆಯ ಬಳಿಕ ಪುತ್ತಿಲ ಪರಿವಾರದ ಜತೆ ಬಿಜೆಪಿ ಮುಖಂಡರು ಅಥಾವ ಕಾರ್ಯಕರ್ತರು ಗುರುತಿಕೊಂಡರೆ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಅಧಾರದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ತಿಳಿಸಿದರು.
ಶಿಕ್ಷಣ
Science Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.
ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವ ಉದ್ದೇಶದಿಂದ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಯಶಸ್ವಿ ಪಯಣ:
“ಉತ್ತಮ ಜೀವನಕ್ಕಾಗಿ ವಿಜ್ಞಾನ” ಎಂಬ ಆಶಯದೊಂದಿಗೆ ಆರಂಭಗೊಂಡ ಈ ಅಭಿಯಾನದ ಮೊದಲ ಹಂತದಲ್ಲಿ ಜಿಲ್ಲೆಯ 41 ಗ್ರಾಮೀಣ ಶಾಲೆಗಳಲ್ಲಿ ಶಾಲಾ ಮಟ್ಟದ ವಿಜ್ಞಾನ ಮೇಳಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 1,189 ವಿದ್ಯಾರ್ಥಿಗಳು ಭಾಗವಹಿಸಿ ಸುಮಾರು 650 ವಿನೂತನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದರು. ಶಾಲಾ ಮಟ್ಟದಲ್ಲಿ ವಿಜೇತರಾದ ತಂಡಗಳು ಜಿಲ್ಲಾ ಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಜಿಲ್ಲಾ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ 66 ಹಾಗೂ ಪ್ರೌಢಶಾಲಾ ವಿಭಾಗದ 57 ತಂಡಗಳು ಸೇರಿದಂತೆ ಒಟ್ಟು 123 ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಬಂಟರ ಭವನದಲ್ಲಿ ಸಂಪನ್ಮೂಲ ವ್ಯಕ್ತಿ ಅನಿರುದ್ಧ್ ವಾಗ್ಳೆ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾದಾಯಕ ಅವಧಿ ನಡೆಸಿಕೊಟ್ಟರು. ಮಾರ್ಗದರ್ಶಿ ಶಿಕ್ಷಕರಿಗಾಗಿ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಿರಂತರ ಪರಿಶ್ರಮವಿದ್ದಾಗ ಮಾತ್ರ ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತವೆ. ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್ನ ಸಹ-ಸಂಸ್ಥಾಪಕ ಶ್ರೀ ಪ್ರವೀಣ್ ಕ್ಯಾಸ್ಟಲಿನೋ, “ವಿದ್ಯಾರ್ಥಿಗಳಲ್ಲಿರುವ ಕುತೂಹಲವೇ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಶ್ನಿಸುವ ಹಾಗೂ ಪ್ರಯೋಗ ಮಾಡುವ ಮನೋಭಾವ ಬೆಳೆಸಿಕೊಂಡಾಗ ಗ್ರಾಮೀಣ ಪ್ರತಿಭೆಗಳು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್ನ ಆಪರೇಷನ್ಸ್ ಲೀಡ್ ಜೋಬಿನ್ ಜೋಸೆಫ್ ಹಾಗೂ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಡಾ. ಶ್ರೀಶ ಬೈಪದವು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ಸ್ವಾಗತಿಸಿದರು. ರಾಜೇಶ್ವರಿ ಎನ್. ನಿರೂಪಿಸಿ, ನೇತ್ರಾ ಡಿ. ರಾವ್ ವಂದಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಕಾಲೇಜಿನ ಎಲ್ಲಾ ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ನವೆಂಬರ್ 16ರಿಂದ 20ರವರೆಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪುತ್ತೂರು, ನ. 22: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಕಾಲೇಜಿನ ಎಲ್ಲಾ ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ನವೆಂಬರ್ 16ರಿಂದ 20ರವರೆಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ತರಬೇತಿ ಕಾರ್ಯಕ್ರಮವು ಕಾಲೇಜಿನ ನಿರಂತರ ಉದ್ಯೋಗ ಸಿದ್ಧತಾ (Placement Readiness) ಉಪಕ್ರಮದ ಭಾಗವಾಗಿದ್ದು, ವಿದ್ಯಾರ್ಥಿಗಳನ್ನು ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳಿಗೆ ಸಮರ್ಥವಾಗಿ ಸಿದ್ಧಗೊಳಿಸುವ ಉದ್ದೇಶವನ್ನು ಹೊಂದಿದೆ. ಉದ್ಯಮಗಳ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಡಿಜಿಟಲ್ಕೌ ಶಲ್ಯ, ಉದ್ಯೋಗಾರ್ಹ ಸಾಮರ್ಥ್ಯ, ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ರೂಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಮತ್ತು ಉದ್ಯೋಗಾರ್ಹತಾ ಕೌಶಲ್ಯಗಳು (Employability Skills – Lifelong Profession) ಎಂಬ ಪ್ರಮುಖ ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ತರಬೇತುದಾರರಾದ ದೀಪಕ್ ಬಡಿಗೇರ್ ಮತ್ತು ಆಯೆಶತ್ ಹಫೀಝಾ ಅವರು ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಸಂವಾದಾತ್ಮಕ ಅಧಿವೇಶನಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕೃತಕ ಬುದ್ಧಿಮತ್ತೆಯ ಮೂಲ ಪರಿಕಲ್ಪನೆಗಳು, ಉದಯೋನ್ಮುಖ ತಂತ್ರಜ್ಞಾನಗಳ ಬಳಕೆ, ಸಂವಹನ ಕೌಶಲ್ಯ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ ಹಾಗೂ ವೃತ್ತಿಪರ ಜೀವನಕ್ಕೆ ಅಗತ್ಯವಾದ ಸಾಮರ್ಥ್ಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ IBM SkillsBuild ಡಿಜಿಟಲ್ ಕಲಿಕಾ ವೇದಿಕೆಯ ಪರಿಚಯ
ಮಾಡಿಕೊಡಲಾಯಿತು. ನಿಗದಿತ ಕಲಿಕಾ ಅವಶ್ಯಕತೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ IBM SkillsBuild ವತಿಯಿಂದ ಪ್ರಮಾಣಪತ್ರಗಳನ್ನು ನೀಡಲಾಯಿತು. ಈ ಪ್ರಮಾಣಪತ್ರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯೊಂದಿಗೆ ಹೆಚ್ಚುವರಿ ವೃತ್ತಿಪರ ಕೌಶಲ್ಯಗಳನ್ನು ಗುರುತಿಸಲು ಸಹಕಾರಿಯಾಗಲಿವೆ.
ಶೈಕ್ಷಣಿಕ ಜ್ಞಾನ ಮತ್ತು ಉದ್ಯಮ ಕ್ಷೇತ್ರದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸನ್ನದ್ಧರನ್ನಾಗಿಸುವ ನಿಟ್ಟಿನಲ್ಲಿ ಈ ಐದು ದಿನಗಳ ತರಬೇತಿ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.
ಉದ್ಯೋಗಮುಖಿ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯಕ್ಕೆ ಮುನ್ನುಡಿ!
ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಮಾತ್ರವಲ್ಲದೆ, ಡಿಜಿಟಲ್ ಜ್ಞಾನ, ಕೃತಕ ಬುದ್ಧಿಮತ್ತೆಯ ಅರಿವು, ಸಂವಹನ ಕೌಶಲ್ಯ ಮತ್ತು ವೃತ್ತಿಪರ ಸಾಮರ್ಥ್ಯಗಳೂ ಅತ್ಯಂತ ಅವಶ್ಯಕವಾಗಿವೆ.
ಸ್ವಾಯತ್ತ ಶಿಕ್ಷಣ ವ್ಯವಸ್ಥೆಯಡಿ ನವೀನ ಕಲಿಕಾ ವಿಧಾನಗಳು, ಕೌಶಲ್ಯಾಧಾರಿತ ತರಬೇತಿ, ಉದ್ಯೋಗ ನಿಯೋಜನೆಗೆ ಪೂರಕ ಕಾರ್ಯಕ್ರಮಗಳು ಹಾಗೂ ಉದ್ಯಮ ಸಂಪರ್ಕದ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕಾಲೇಜು ಬದ್ಧವಾಗಿದೆ.
ನಿಮ್ಮ ಉನ್ನತ ಶಿಕ್ಷಣದ ಕನಸುಗಳಿಗೆ ಸಂತ ಫಿಲೋಮಿನಾ ಕಾಲೇಜು ಸೂಕ್ತ ವೇದಿಕೆ. ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂದೇ ನಮ್ಮ ಕಾಲೇಜನ್ನು ಆಯ್ಕೆಮಾಡಿ. ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು – ನಿಮ್ಮ ಉಜ್ವಲ ಭವಿಷ್ಯದತ್ತ ಮೊದಲ ಹೆಜ್ಜೆ!
– ರೆವ್. ಡಾ. ಆಂಟನಿ ಪ್ರಕಾಶ್ ಮೊಂತೆರೋ
ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು
ದಕ್ಷಿಣ ಕನ್ನಡ
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

ಪುತ್ತೂರು: ಪುತ್ತೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸುವ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, 2027-28ನೇ ಶೈಕ್ಷಣಿಕ ಸಾಲಿನಲ್ಲಿ ಮೊದಲ ಹಂತವಾಗಿ 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಿಟ್ಟಿನಲ್ಲಿ ಕಾಲೇಜಿನ ಮೂಲಸೌಕರ್ಯ, ಬೋಧನಾ ವ್ಯವಸ್ಥೆ, ಆಸ್ಪತ್ರೆಯ ಸೌಲಭ್ಯಗಳು ಹಾಗೂ ಅಗತ್ಯ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ತಪಾಸಣಾ ಸಮಿತಿ ಶನಿವಾರ ಪುತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿತು. ಪುತ್ತೂರಿನಲ್ಲಿರುವ ಹಳೇಯ ಕೋರ್ಟ್ ಕಟ್ಟಡ ಹಾಗೂ ಪುತ್ತೂರು ಸರಕಾರಿ ಆಸ್ಫತ್ರೆಗೆ ತಂಡವು ತೆರಳಿ ಪರಿಶೀಲಿಸಿತ್ತು
ಶಾಸಕ ಅಶೋಕ್ ಕುಮಾರ್ ರೈ ಅವರ ನಿರಂತರ ಪ್ರಯತ್ನ ಮತ್ತು ಕಾಲೇಜು ಸ್ಥಾಪನೆಯ ನಿಟ್ಟಿನಲ್ಲಿನ ಚಟುವಟಿಕೆಗಳ ನಡುವೆ ನಡೆದಿರುವ ಈ ಪರಿಶೀಲನೆ, ಪುತ್ತೂರು ಮೆಡಿಕಲ್ ಕಾಲೇಜಿನ ಆರಂಭದ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹಂತವೆಂದು ಪರಿಗಣಿಸಲಾಗಿದೆ. ನಿಯೋಗವು ಹಳೇಯ ಕೋರ್ಟ್ ಕಟ್ಟಡಕ್ಕೆ ಭೇಟಿ ನೀಡಿದ ವೇಳೆ ಶಾಸಕ ಅಶೋಕ್ ರೈಯವರು ಅಲ್ಲಿಗೆ ಆಗಮಿಸಿ ನಿಯೋಗಕ್ಕೆ ಅಗತ್ಯ ಮಾಹಿತಿ ನೀಡಿದರು.
ಮೂರು ಮಂದಿ ತಜ್ಞರಿಂದ ಸಮಗ್ರ ಪರಿಶೀಲನೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಆದೇಶದಂತೆ ಆಗಮಿಸಿದ ಮೂರು ಮಂದಿ ತಜ್ಞರ ತಂಡ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿತು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಸುರೇಶ್ ಎಸ್. ಕನಕಣ್ಣವರ್ ತಂಡದ ಅಧ್ಯಕ್ಷರಾಗಿದ್ದು, ಶಿವಮೊಗ್ಗದ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಿಥುನ್ ಕೆ.ಎಂ. ಹಾಗೂ ಶಿವಮೊಗ್ಗದ ಎಸ್.ಐ.ಎಂ.ಎಸ್.ನ ಡಾ. ರಮೇಶ್ ಬಾಬು ಸದಸ್ಯರಾಗಿದ್ದರು.
ಕಾಲೇಜಿನ ಬೋಧನಾ ವಿಭಾಗಗಳಿಗೆ ಅಗತ್ಯವಿರುವ ಕೊಠಡಿಗಳು, ಪ್ರಯೋಗಾಲಯಗಳು, ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ, ವೈದ್ಯಕೀಯ ಉಪಕರಣಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ವಸತಿ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ಶಿಕ್ಷಣ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ತಂಡ ಪರಿಶೀಲಿಸಿತು.
ನವೆಂಬರ್ 21ರೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಸಮಗ್ರ ವರದಿಯನ್ನು 24 ಗಂಟೆಗಳ ಒಳಗೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಸಲ್ಲಿಸುವಂತೆ ಕುಲಪತಿಗಳು ಸೂಚನೆ ನೀಡಿದ್ದಾರೆ.

6 ಮೃತದೇಹಗಳ ವ್ಯವಸ್ಥೆ; ಮಾನವ ಅಂಗಾಂಗಗಳ ಆಗಮನ
ಮೆಡಿಕಲ್ ಕಾಲೇಜಿನ ಆರಂಭಿಕ ಸಿದ್ಧತೆಗಳ ಭಾಗವಾಗಿ ಅಗತ್ಯ ವೈದ್ಯಕೀಯ ಪರಿಕರಗಳು ಮತ್ತು ಉಪಕರಣಗಳನ್ನು ಪುತ್ತೂರಿಗೆ ತರಿಸಲಾಗುತ್ತಿದೆ. ಶಿವಮೊಗ್ಗ, ಹಾಸನ ಹಾಗೂ ಮಡಿಕೇರಿ ವೈದ್ಯಕೀಯ ಕಾಲೇಜುಗಳಿಂದ ಒಟ್ಟು ಆರು ಮೃತದೇಹಗಳನ್ನು ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರದ ಅಧ್ಯಯನಕ್ಕೆ ಅಗತ್ಯವಿರುವ ಮಾನವ ದೇಹದ ವಿವಿಧ ಅಂಗಾಂಗಗಳೂ ಪುತ್ತೂರಿಗೆ ಆಗಮಿಸಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಡುವ ವ್ಯವಸ್ಥೆ ಮಾಡಲಾಗುತ್ತಿದೆ.
ವಿವಿಧ ವಿಭಾಗಗಳಿಗೆ ಕೊಠಡಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಸನ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ. ಈಗಾಗಲೇ ಆಗಮಿಸಿರುವ ವೈದ್ಯಕೀಯ ಉಪಕರಣಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಷ್ಟು ಉಪಕರಣಗಳು ಹಂತ ಹಂತವಾಗಿ ಬರಲಿವೆ.
92 ವೈದ್ಯರು, 175 ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ
ಮೆಡಿಕಲ್ ಕಾಲೇಜಿನ ಜೊತೆಗೆ ಆಸ್ಪತ್ರೆಯ ಸಾಮರ್ಥ್ಯವನ್ನೂ ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆಗೆ 92 ವೈದ್ಯರು, 175 ಸಿಬ್ಬಂದಿ ಹಾಗೂ 80 ನರ್ಸಿಂಗ್ ಸಿಬ್ಬಂದಿ ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ನೇಮಕಾತಿಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.
ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಸೇಡಿಯಾಪು ನಿವೇಶನದಲ್ಲಿ ಕಟ್ಟಡಗಳು ಸಿದ್ಧಗೊಂಡ ಬಳಿಕ ಕಾಲೇಜಿನ ವಿವಿಧ ಚಟುವಟಿಕೆಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಯೋಜನೆಯಿದೆ.
ಇದರಿಂದ ಪುತ್ತೂರು ಮಾತ್ರವಲ್ಲದೆ ವಿಟ್ಲ, ಕಡಬ, ಬೆಳ್ತಂಗಡಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣದ ಅವಕಾಶಗಳು ಲಭ್ಯವಾಗುವ ನಿರೀಕ್ಷೆಯಿದೆ.
ಎಲ್ಲವೂ ಸರಾಗವಾಗಿ ನಡೆದರೆ ಸೆಪ್ಟೆಂಬರ್ 2027ರಲ್ಲಿ ದಾಖಲಾತಿ
ಪರಿಶೀಲನೆ ಬಳಿಕ ಮಾತನಾಡಿದ ತಪಾಸಣಾ ತಂಡದ ಅಧ್ಯಕ್ಷ ಡಾ. ಸುರೇಶ್ ಎಸ್. ಕನಕಣ್ಣವರ್, “ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕೆಂಬ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸಾಕಷ್ಟು ಪ್ರಯತ್ನ ಮತ್ತು ಹೋರಾಟ ನಡೆಸಿದ್ದಾರೆ. ಅದರ ಫಲವಾಗಿ ಇಂದು ತಪಾಸಣಾ ಪ್ರಕ್ರಿಯೆ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ಬೋಧನಾ ವ್ಯವಸ್ಥೆ, ಆಸ್ಪತ್ರೆಯ ಸೌಕರ್ಯ, ವಿದ್ಯಾರ್ಥಿಗಳ ವಸತಿ, ಬೋಧಕರ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುತ್ತದೆ.
ಎಲ್ಲವೂ ಸರಾಗವಾಗಿ ನಡೆದರೆ 2027ರ ಸೆಪ್ಟೆಂಬರ್ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಸೋಮವಾರ ಸಿಂಡಿಕೇಟ್ ಸಭೆ ನಿಗದಿಯಾಗಿದ್ದು, ಅನುಮೋದನೆಗೆ ಸಂಬಂಧಿಸಿದಂತೆ ಆಂತರಿಕ ಸಮಿತಿಯೂ ಇದೆ. ಪ್ರಸ್ತುತ 75 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಥಳಾವಕಾಶವಿದೆ” ಎಂದು ತಿಳಿಸಿದರು.
ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ. ಲೋಹಿತ್ ಕುಮಾರ್ ಮಾತನಾಡಿ, “ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಕ್ಟೋಬರ್ 8ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದೀಗ ತಜ್ಞರ ತಂಡ ಮೂಲಸೌಕರ್ಯಗಳ ಪರಿಶೀಲನೆ ನಡೆಸುತ್ತಿದೆ. ತಂಡದ ವರದಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಮುಂದೆ ಮಂಡನೆಯಾಗಲಿದೆ.
ಸಿಂಡಿಕೇಟ್ನಿಂದ ಸಮ್ಮತಿ ಪತ್ರ ದೊರೆತ ಬಳಿಕ ಕೇಂದ್ರ ಸರ್ಕಾರಕ್ಕೆ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ನವೆಂಬರ್ 30ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ನಂತರ ಫಾರ್ಮ್ ಬಿ ಪ್ರಕಾರ ಸಿಬ್ಬಂದಿ ಹಾಗೂ ಕ್ಲಿನಿಕಲ್ ಮೆಟೀರಿಯಲ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂತ ಹಂತವಾಗಿ ಭರ್ತಿ ಮಾಡಬೇಕಿದೆ. ಸುಮಾರು 63 ದಾಖಲೆಗಳನ್ನು ಡಿಸೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ. ಜನವರಿ ಮೊದಲ ವಾರದಿಂದ ಕೇಂದ್ರ ಸರ್ಕಾರದ ಪರಿಶೀಲನಾ ತಂಡ ಆಗಮಿಸುವ ನಿರೀಕ್ಷೆಯಿದೆ” ಎಂದು ವಿವರಿಸಿದರು.
ಪುತ್ತೂರಿನ ವೈದ್ಯಕೀಯ ಶಿಕ್ಷಣದ ಕನಸಿಗೆ ಹೊಸ ವೇಗ
ಪುತ್ತೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೊಸ ಅವಕಾಶ ಸಿಗಲಿದೆ. ಅದೇ ರೀತಿ ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಸ್ಥಳೀಯವಾಗಿಯೇ ಲಭ್ಯವಾಗುವ ನಿರೀಕ್ಷೆಯಿದೆ.
ಸದ್ಯ ವಿಶ್ವವಿದ್ಯಾಲಯದ ತಪಾಸಣೆ ಪೂರ್ಣಗೊಂಡು ವರದಿ ಸಲ್ಲಿಕೆ, ಸಿಂಡಿಕೇಟ್ ಅನುಮೋದನೆ, ಕೇಂದ್ರ ಸರ್ಕಾರದ ಅನುಮತಿ ಹಾಗೂ ಅಂತಿಮ ಪರಿಶೀಲನೆಗಳ ಹಂತಗಳು ಬಾಕಿಯಿವೆ. ಈ ಎಲ್ಲ ಪ್ರಕ್ರಿಯೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ 2027ರ ಶೈಕ್ಷಣಿಕ ವರ್ಷದಲ್ಲಿ ಪುತ್ತೂರು ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್ ಆರಂಭವಾಗುವ ನಿರೀಕ್ಷೆ ಗರಿಗೆದರಲಿದೆ.
ಶಾಸಕ ಅಶೋಕ್ ಕುಮಾರ್ ರೈ, ವಿಶೇಷ ಅಧಿಕಾರಿ ಡಾ. ಲೋಹಿತ್ ಕುಮಾರ್, ಡಾ. ಶಶಾಂಕ್, ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದು ರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರದೀಪ್, ರಂಜಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-
ಸ್ಥಳೀಯ2 hours agoWedding-ಕ್ಯಾಸೆಟ್ಗಳ ಅಬ್ಬರವಿಲ್ಲ, ಡ್ಯಾನ್ಸ್ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಬಿಗ್ ನ್ಯೂಸ್1 hour agoRailway-ರೈಲ್ವೆ ಗುಂಪು ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಬರ್ತ್ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
-
ಶಿಕ್ಷಣ3 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
-
ಶಿಕ್ಷಣ3 hours agoScience Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ















